ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿರಿಯ ಆಲದ ಮರ..

ರಾಜೇಶ್ ಹೆಬ್ಬಾರ್

ಮರಳಿ ಎದೆ ತೊಳಲುತಿದೆ
ಮರಳಿ ಎದೆ ಬಳಲುತಿದೆ
ನೆಲದ ಮಣ್ಣಿಗೆ ಬೇರು ಬಿಟ್ಟು
ನಾಡು ನೆಲಕೆ ನೆರಳನೀಡುವ
ಹಿರಿಯ ಆಲದ ಮರವೊಂದು
ಧರೆಯ ಒಡಲಿಗೆ ಸೇರಿತೆಂದು

ರೆಂಬೆ ಕೊಂಬೆ ತುಂಬ
ಗೂಡು ಕಟ್ಟಿ ಮರಿಯ ಮಾಡಿ
ಹಿರಿಯ ಮರವ ತಬ್ಬಿ‌ ಆಸರೆ ಪಡೆದ
ಎಳೆಯ ಹರೆಯ ಮಕ್ಕಳೆಲ್ಲ
ಪುಟ ಪುಟನೆ ನೆಲಕುದುರಿ ಬಿದ್ದು
ಅನಾಥರಾದರೆಂದು

ಹಿರಿಯಾಲದ ಮರದ ನೆರಳ
ಸೊಂಪಿನಲ್ಲಿ
ಹಾಯಾಗಿ ಚಿಗುರೊಡೆದ
ಪಿಳ್ಳೆ, ಕುಳ್ಳ ಬಿಳಲುಗಳೆಲ್ಲ
ಮತ್ತೆ ಮೇಲೆದ್ದು
ನೆಲದ ಮಣ್ಣಿನ ಸಾರ ಹೀರಿ
ನಭಕ್ಕೆ ಕೈ ಚಾಚಿ
ಖಾಲಿಯೆಲ್ಲ
ತುಂಬುವ ದಿನ ಇಷ್ಟು ಬೇಗಲೆ
ಬಂದಿತೆಂದು

ಮರಳಿ ಮನ ತೊಳಲುತಿದೆ
ಮರಳಿ ಮನ ಬಳಲುತಿದೆ
ಕತ್ತೆತ್ತಿದರೆ ಆಗಸದ ಖಾಲಿ
ಬಿಳಿ ಮೋಡ, ಕಡುನೀಲಿ
ಹೂಂಕರಿಸುವ ಬೇಟಗಾರರ
ಬಾಣ ಬಿರುಸಿಗೆ ಬಚ್ಚಿಟ್ಟುಕೊಳ್ಳಲು
ಇದ್ದೊಂದ ಹಿರಿಯ ಆಲದ ಮರವು
ಮರಳಿ ಮಣ್ಣಿಗೆ ಸೇರಿತಿಂದು

ಮರಮುಟ್ಟು ವ್ಯಾಪಾರಿ ಜನ ಬಂದು
ಗುಳಿಬಿದ್ದ ಜಾಗಕ್ಕೆ
ಮಣ್ಣು ಮುಚ್ಚಿ
ನೆನಕೆ ಕಲ್ಲೊಂದು‌ ನೆಟ್ಟು
ಅನಾಥವಾದ ಮಕ್ಕಳು ಮರಿ ಚಿಳ್ಳೆ
ಪಿಳ್ಳೆಗಳ ಸೇರಿ ಆಲದ ಸಂತಾನವನ್ನೇ
ಸವರಿ ಬಿಡುವ ದಿನ ಇಷ್ಟು ಬೇಗ
ಬಂದಿತೆಂದು
ಮರಳಿ ಎದೆ ತೊಳಲುತಿದೆ
ಮರಳಿ ಎದೆ ಬಳಲುತಿದೆ

‍ಲೇಖಕರು Admin

26 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading