ಚೀ ಜ ರಾಜೀವ
ಭಾರತಕ್ಕೆ ಸ್ವರ್ಣ ಪದಕ ತಂದ
ಹಿಮಾದಾಸ್ ಯಾವ ಕೋಮಿನ
ಹೆಣ್ಣು ಮಗಳು ? ಬಡವಳೆ ?
ಯಾವ ಒಕ್ಕಲು ಯಾವ ಜಾತಿ?
ದೇಶವಾಸಿಗಳ ಕುಲ ಕುತೂಹಲಕೆ
ಬೆಚ್ಚಿಬಿದ್ದಿದೆ ಜಾಗತಿಕ ಜಗತ್ತು
ಗೂಗಲ್ ಸರ್ಚ್ ಹುಡುಕಾಟದ
ಪ್ರವರ ಪ್ರಕಟವಾದ ಬಳಿಕ
ತಲೆತಗ್ಗಿಸಿದ್ದಾರೆ ಭಾರತೀಯರು
ನನಗನಿಸಿತು
ಅಯ್ಯೋ, ನಾವು ಅನಾಗರಿಕರು
ಎಂಥಾ ದರಿದ್ರ ಜನ
ಎಂದವ ಶಂಕರ ಜೋಷಿ !
ಜಾತಿಯಿಂದ ಮುಕ್ತಿ ಇಲ್ಲವೇ
ಎಂದು ಪ್ರಶ್ನಿಸಿದ್ದು ಬಸವ ಆರಾಧ್ಯ
ದೇಶ ಬಿಡುವಂತಾಗಿದೆ ಎಂದು
ಬೇಸರಿಸಿದ್ದು ಭೈರವಗೌಡ
ನಾಟ್ ಎ ಸೆಕ್ಯೂಲರ್ ಕಂಟ್ರಿ
ಸೋತ ಸೊಲ್ಲೆತ್ತಿದ್ದು ಡಕಣಾಚಾರಿ
ಎಲ್ಲ ಭಾರತೀಯರಲ್ಲೂ
ಒಂದೊಂದು ಕುಲದ ಅಂಗಿ

ಯಾಕೆ ಹೀಗೆ ನನ್ನ ಜನ
ನನ್ನವ್ವನ ಪ್ರಶ್ನಿಸಿದೆ
ಆಕೆ ನಕ್ಕಳು, ಮಾತಿಗೆಳೆದಳು
ಜಾತಿ ಅಂಗಿ ತೊಟ್ಟಿದ್ದು ಅವರಲ್ಲ
ಅದು ಅವರಪ್ಪಂದಿರ ಉಡುಗೆ
ಅರಿವಿಲ್ಲದೆ ತೊಡಿಸಿದ ತೊಡುಗೆ
ನಿನ್ನ ಜನ ಅರಿವುವಂತರು
ಮಕ್ಕಳಿಗೆ ಜಾತಿಯ ಅಂಗಿ
ತೊಡಿಸಿರಲಾರರು
ನನಗನಿಸಿತು
ನಿಜ, ನಾವು ನಾಗರಿಕರು !






0 Comments