ಹಿಡಿಸೂಡಿ ಪುರಾಣವೂ…

     ಮಹೇಶ್ವರಿ.ಯು

ತೆಂಗಿನಗರಿಯಿಂದ ಹಿಡಿಸೂಡಿ ಕಡ್ಡಿಗಳನ್ನು ಮಾಡುವುದು ಒಂದು ಪರಬ್ರಹ್ಮವಿದ್ಯೆಯಲ್ಲ – ಅದರ ಕುರಿತು ಬರೆಯುವುದಕ್ಕೆ ಎಂದು ನಿಮ್ಮಲ್ಲಿ ಕೆಲವರು ಹೇಳಬಹುದು. ಆದರೆ ನನಗೆ ಮಾತ್ರ ಈಗ ಇದರ ಕುರಿತು ಬರೆಯಬೇಕೆನಿಸಿದೆ. ಅದು ಹೀಗಾಯಿತು.

ಈ ವರ್ಷದ ಗಾಳಿಮಳೆಗೆ ಉದುರಿದ ಹಸಿಮಡಲೊಂದು ಮಳೆಗೆ ನೆನೆಯುತ್ತಾ ಬಿದ್ದಿತ್ತು. ಅದರ ಹಸಿಹಸಿಯಾದ ಗರಿಗಳನ್ನು ನೋಡಿ ನನ್ನ ಸಣ್ಣಕ್ಕ ಅದರ ಗರಿಗಳನ್ನು ತೆಗೆದು ಹಿಡಿಸೂಡಿಯನ್ನಾದರೂ ಮಾಡಬಹುದಿತ್ತು. ಈ ಮಳೆಯೊಂದು ಬಿಡಬೇಕೇ?ಎಂದು ಮಳೆಯನ್ನು ಬಯ್ಯುತ್ತಿದ್ದಳು.

ಸರಿ. ಮಳೆ ಬಿಡಲಿ. ಮಡಲಿನಿಂದ ಗರಿಗಳನ್ನು ತೆಗೆದುಕೊಡುವ ಎಂದು ತಮ್ಮ ಸಮಾಧಾನವನ್ನು ಹೇಳಿದ್ದೂ ಆಯಿತು. ಹಾಗೆ ಮಳೆ ಅಡಗಿ ಬಿಸಿಲು ಹಣಿಕಿದ್ದೂ ಆಯಿತು. ಆದರೆ ಅಷ್ಟರಲ್ಲಿ ನನ್ನ ಸಣ್ಣಕ್ಕ ಬಿದ್ದು ಕೈಮುರಿದುಕೊಂಡಿದ್ದಳು.

ಚಿತ್ರಕೃಪೆ: ಗೂಗಲ್

ನಾಲ್ಕು ತಿಂಗಳ ಹಿಂದೆಷ್ಟೇ ಒಂದು ಅಪಘಾತದಲ್ಲಿ ಕಾಲುಮುರಿದು ಸರ್ಜರಿಯಾಗಿ ಹಾಗೆ ನಡೆಯತೊಡಗಿದವಳು ಅವಳು. ಈಗ ಬಲದ ಕೈಗೆ ಬ್ಯಾಂಡೇಜು ಬಿಗಿಸಿಕೊಂಡು ಬೇನೆ ತಿನ್ನುತ್ತ ನಲುವತ್ತು ದಿವಸವಾಗುವುದನ್ನು ಎಣಿಸಿಕೊಂಡು ಕೂತಿದ್ದಾಳೆ. ಸರಿ. ಅವಳ ಪ್ರೀತ್ಯರ್ಥವಾಗಿ  ನನಗೆ ತೆಂಗಿನಗರಿಯಿಂದ ಹಿಡಿಸೂಡಿಮಾಡುವ ಕಾರ್ಯಕ್ಕೆ ಇಳಿಯುವ ಮನಸ್ಸಾಯಿತು. ಹಾಗೆ ಹೇಳಿದ್ದೆ ತಮ್ಮ ತೆಂಗಿನಗರಿಗಳನ್ನು ಮಡಲಿನಿಂದ ಕಿತ್ತು ತಂದುಹಾಕಿದ್ದೂ ಆಯಿತು.

ಅಂಗಳದಲ್ಲಿ ಮಣೆಯ ಮೇಲೆ ತೆಂಗಿನಗರಿಗಳ ರಾಶಿಯ ಮುಂದೆ ಕುಳಿತು ಒಂದೊಂದೇ ಕಡ್ಡಿಯನ್ನು ಗೀಸಲುತೊಡಗಿದೆ. ಮೊದಲು ಚೂರಿಯಿಂದ ನಾಜೂಕಾಗಿ ‘ಒಲಿ’ಯನ್ನು ಬೇರ್ಪಡಿಸಿ ರಾಶಿ ಹಾಕಿದೆ. ಹಾಗೆ ಬೇರ್ಫಡಿಸುವಾಗ ಗರಿಯ ತುದಿಯಲ್ಲೋ, ಮಧ್ಯದಲ್ಲೋ ತುಂಡಾಗದಂತೆ ಎಚ್ಚರ ವಹಿಸಬೇಕಾದ್ದು ಎಷ್ಟು ಅಗತ್ಯ ಎಂದು ಮನದಟ್ಟಾಯಿತು.

ಆಹಾ! ಅದಕ್ಕೆ ಎಷ್ಟು ಹೊತ್ತು ಹಿಡಿಯಿತು! .ಬಳಿಕ ಒಂದೊಂದೇ ಕಡ್ಡಿಯನ್ನು ತೆಗೆದು ಗೀಸಿ ಒಪ್ಪಮಾಡುವ ಕೆಲಸ. ಅದು ಇನ್ನೂ ಹೆಚ್ಚಿನ ಏಕಾಗ್ರತೆಯನ್ನು ಬೇಡುವಂಥದ್ದು. ನಾಜೂಕಿನದ್ದು. ಹೆಚ್ಚುಕಡಿಮೆಯಾದರೆ ಅಲ್ಲೇ ಹಜಾರದಲ್ಲಿ ಕುಳಿತು ಟಿವಿಯ ಉದಯಮೂವೀಸ್ ಚಾನೆಲ್‌ನಲ್ಲಿ ರಾಜಕುಮಾರ್ ಸಿನೆಮಾ ನೋಡುವದರೊಂದಿಗೆ ಹಿಡಿಸೂಡಿಮಾಡುವ ಕಾರ್ಯದಲ್ಲಿ ದೀಕ್ಷಾಬದ್ಧಳಾಗಿ ಕುಳಿತ ನನ್ನ ಪ್ರಗತಿಯನ್ನು ಆಗಾಗ್ಗೆ ವಿಚಾರಿಸುತ್ತ ಇದ್ದ ಸಣ್ಣಕ್ಕನಿಂದ ‘ ಈ ಪಿಎಚ್.ಡಿಗೆ ಯಕಶ್ಚಿತ್ ಒಂದು ಹಿಡಿಸೂಡಿ ಮಾಡಲು ಬರುವುದಿಲ್ಲವೇ’ ಎಂದು ಹಂಗಣೆಯನ್ನು ಕೇಳಬೇಕಾದೀತು ಎಂಬ ಮುನ್ನೆಚ್ಚರಿಕೆ ನನಗಿತ್ತು.

ಅಂತೂ ಇಂತೂ ಹೊತ್ತು ಮಧ್ಯಾಹ್ನವಾಗುವಾಗ ಹೆಚ್ಚೇನೂ ಭಂಗವಿಲ್ಲದೆ ಒಂದು ಹಿಡಿಸೂಡಿಗೆ ಸಾಲುವಷ್ಟು ಕಡ್ಡಿಗಳು ತಯಾರಾದವು. ಕಣ್ಣಿಂದಲೇ  ಅದನ್ನುನೋಡಿ ಪರಿಶೀಲಿಸಿದ ಸಣ್ಣಕ್ಕ ಜಸ್ಟ್ ಫಸ್ಟ್÷ಕ್ಲಾಸ್ ಅಂಕಗಳನ್ನೂ ದಯಪಾಲಿಸಿದಳು. ಇನ್ನು ಈ ಕಡ್ಡಿಗಳನ್ನು ಬಿಸಿಲಿಗೆ ಒಣಗಿಸಿ ಎಲ್ಲಕಡ್ಡಿಗಳನ್ನೂ ಸರಿಯಾದ ಅಳತೆಗೆ ತಂದು ಅದರ ಸೊಂಟಕ್ಕೆ ಒಂದು ಉಡಿದಾರವನ್ನು ಬಿಗಿದರೆ –(ಅದೂ ಒಣಗಿಸಿದ ಬಾಳೆಯ ನಾರಿನಿಂದ ಅಥವಾ ಸೆಣಬಿನ ಬಳ್ಳಿಯಿಂದ) ಹಿಡಿಸೂಡಿ ಸಿದ್ಧವಾದಂತೆ.

ಸಣ್ಣಕ್ಕನ ಕಾಲು,ಕೈ ಸರಿಯಿರುವಾಗ ಅವಳೇ ಬಾಳೆದಿಂಡಿನಿಂದ ನಾರನ್ನು ತೆಗೆದು ಬಿಸಿಲಿಗೆ ಚೆನ್ನಾಗಿ ಒಣಗಿಸಿ ಬಳ್ಳಿಯನ್ನು ಸಿದ್ಧಮಾಡಿ ಇಟ್ಟದ್ದು ಹೇಗೂ ಇದೆ. ಈ ಬಾಳೆನಾರಿನ ಉಪಯೋಗದ ಬಗ್ಗೆ ಕೇಳಿದರೆ ಸಣ್ಣಕ್ಕ ಹೇಳುತ್ತಾಳೆ- ಮೊದಮೊದಲು ಅಂದರೆ ಬಣ್ಣಬಣ್ಣದ ರಿಬ್ಬನು ಇನ್ನೂ ಕಾಲಿಡುವ ಮೊದಲು ಹುಡುಗಿಯರ ಜಡೆ ಹೆಣೆಯಲು ಈ ಬಾಳೆನಾರನ್ನು ಉಪಯೋಗಿಸುತ್ತಿದ್ದರಂತೆ. ಅಬ್ಬಲಿಗೆ, ಮಲ್ಲಿಗೆ, ಗೋರಟಿಗೆ,ಚಿಕ್ಕಗಸೆ- ಮೊದಲಾದ ಹೂವುಗಳ ಮಾಲೆಮಾಡಿ ದೇವರ ಮುಡಿಗೇರಿಸಲೂ ತನ್ನ ಮುಡಿಗೇರಿಸಲೂ ಈ ಬಾಳೆನಾರಿನ ಅಗತ್ಯವಂತೂ ಅವಳಿಗೆ ಇದ್ದೆ ಇದೆ.

ಚಿತ್ರಕೃಪೆ: ಗೂಗಲ್

ಸೇವಂತಿಗೆ, ಮಂದಾರ, ಲಂಬಾಸುವಿನಂತಹ ಹೂವುಗಳನ್ನು ಕೂಡ ಕಾಲಿನ ಹೆಬ್ಬೆರಳಿಗೆ ಬಳ್ಳಿಯನ್ನು ಬಿಗಿದು ಮತ್ತೊಂದು ಕೈಬಳ್ಳಿಯ ಸಹಾಯದೊಂದಿಗೆ ಒಂದು ಚಪ್ಪಟೆಮಾಲೆಯನ್ನು ಕಟ್ಟಿ ಮುಡಿದಲ್ಲದೆ ಅವಳಿಗೆ ತೃಪ್ತಿ ಇರಲಾರದು. ಈಗ ನೋಡಿದರೆ ಅಬ್ಬಲಿಗೆ ಗೋರಟಿಗೆಗಳನ್ನು ಮುಡಿವವರೇ ಇಲ್ಲ. ಅವಳು ಕಟ್ಟಿದ ಚಪ್ಪಟೆಮಾಲೆ ಹೊಸಕಾಲದ ಹೊಸಬರಿಗೆ ಹಿಡಿಸಲಾರದು. ಆದರೆ ಅವಳು ಮಾತ್ರ ‘ಯಾರು ಮುಡಿಯದಿದ್ದರು ನನಗಿಲ್ಲ ಚಿಂತೆ’ ಎಂದು ಮೊನ್ನೆ ಮೊನ್ನೆಯವರೆಗೂ ಮುಡಿದೇ ಮುಡಿಯುತ್ತಿದ್ದಳು.

ಎಲ್ಲಿಂದ ಎಲ್ಲಿಗೆ ಬಂತು! ಹಿಡಿಸೂಡಿಯ ಕತೆ ಹೇಳುತ್ತ ಬಾಳೆನಾರಿನ ಪುರಾಣಕ್ಕೆ ತಲಪಿತಲ್ಲ. ಮತ್ತೆ ತೆಂಗು, ಕಂಗು, ಬಾಳೆ, ಮಾವು, ಮಲ್ಲಿಗೆ ಎಲ್ಲ ನಮ್ಮ ತೋಟದ ಬಂಧುಗಳಲ್ಲವೇ? ಈಗೇನೋ ಎಡವಟ್ಟಾಗಿ ‘ಅದು ಬೇರೆ ಇದು ಬೇರೆ’ ಎಂಬಂತಾಗಿ ನಾವೇ ಬೇರೆಯಾಗಿಬಿಟ್ಟಿದ್ದೇವೆ. ಅದಿರಲಿ ಕೈಯಿಂದ ಮಾಡುವ ಹಾಗೂ ಅಂತಹ ಏಕಾಗ್ರತೆಯನ್ನು ಬೇಡುವ ಕರಕುಶಲಕಸುಬುಗಳು ಅನೇಕವಿತ್ತು.

ಹಿಂದೆ ಧಾರಾಳವಾಗಿ ಕಾಣಿಸುತ್ತಿದ್ದದ್ದು ಈಗ ವಿರಳವಾಗಿವೆ ಎನ್ನುವುದು ಎಲ್ಲರಿಗೂ ಗೊತ್ತು. ಪ್ರಕೃತಿಯಲ್ಲಿ ದೊರಕುವ ವಸ್ತುಗಳಿಂದಲೇ ತಮಗೆ ಅಗತ್ಯವಿರುವ ಗೃಹೋಪಯೋಗಿ ಸಲಕರಣೆಗಳನ್ನು ತಯಾರಿಸುವ ಕಸುಬುದಾರರು ಆಗ ಮನೆಮನೆಯಲ್ಲಿ ಇದ್ದರು. ತೆಂಗಿನ ಮಡಲು, ಗೆರಟೆ, ಕೊತ್ತಳಿಗೆ, ಸಲಿಕೆ-ಹೀಗೆ  ಪ್ರತಿಯಂದೂ ಒಂದಲ್ಲೊಂದು ರೂಪಪಡೆದು ಮನೆಯೊಂದು ‘ಮನೆ’ಯೆನಿಸುವಲ್ಲಿ ಪಾತ್ರವಹಿಸುತ್ತಿತ್ತು.

ತೆಂಗಿನಮಡಲನ್ನು ಚಂದಕೆ ಹೆಣೆದರೆ ಅದು ಮುಳಿಹುಲ್ಲಿನ ಮನೆಗೆ ಹೊದೆಸುವುದಕ್ಕೆ, ಮನೆಯ ಅಂಗಳದಲ್ಲಿ ಹಾಕುವ ಚಪ್ಪರಕ್ಕೆ,- ಇನ್ನೂ ಏನೇನೋ ಕೃಷಿಸಂಬಂಧಿ ಕೆಲಸಗಳಿಗೆ ಒದಗುತ್ತಿತ್ತು. ತೆಂಗಿನಗೆರಟೆಯಿಂದ ಚಿಕ್ಕದೊಡ್ಡಸೌಟುಗಳೂ ಸೇರಿದಂತೆ ಏನೆಲ್ಲ ತಯಾರಾಗುತ್ತಿದ್ದವು!.

ಬಚ್ಚಲಮನೆಯಲ್ಲಿ ನೀರನ್ನುಮೊಗೆಯಲು ಉಪಯೋಗಿಸುವ ಒಂದು ಹಿಡಿಯನ್ನು ಒಳಗೊಂಡ ಒಣಕರಟ ಅಥವಾ ‘ಒರೊಂಕೊ’, ಪಾತ್ರೆತೊಳೆಯುವಲ್ಲಿ, ದುಡಿದುಬಂದು ಅಥವಾ ಹೊರಗೆಲ್ಲೋ ಹೋಗಿಬಂದು ಮನೆಯೊಳಗೆ ಹೊಗಬೇಕಾದರೆ ಮೊದಲು ಕೈಕಾಲುತೊಳೆಯುವಲ್ಲಿ ನೀರಿನ ‘ಮಂಡಗೆಯ ಜೊತೆ ನೀರುಮೊಗೆಯಲ ಜೊತೆಯಾಗುವ ಹಿಡಿಯಿಲ್ಲದ ‘ತೊಂಡು’-ಇವೆಲ್ಲ ಕೆಲವು ಉದಾಹರಣೆಗಳಷ್ಟೆ.

ತೆಂಗಿನಮಡಲಿನಿಂದ ತಯಾರಿಸಿದ ಗೊರಬೆಗಳು( ‘ಕಿಡಿಂಜಲು’)ಮಕ್ಕಳು,ಮುದುಕರು, ಗಂಡಸರು ಹೆಂಗಸೆರೆನ್ನದೆ, ಗದ್ದೆ-ತೋಟಗಳಲ್ಲಿ ದುಡಿಯುತ್ತಿದ್ದ ಶ್ರಮಜೀವಿಗಳನ್ನು ಸಹಿತ –ಎಲ್ಲರನ್ನು ಮಳೆಗಾಲದಲ್ಲಿ ಮಳೆಯಿಂದ ರಕ್ಷಿಸುತ್ತಿದ್ದವು. ನನ್ನ ದೊಡ್ಡಪ್ಪ ಗೊರಬೆಯನ್ನು ‘ಮಡೆ’ಯುತ್ತಿದ್ದ ಚಿತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಹಾಗೆ ಗೊರಬೆ ‘ಮಡೆಯಲು’ ಅಗತ್ಯವಾದ ಪರಿಕರಗಳೊಂದಿಗೆ ತೆಂಗಿನ ಒಲಿಯ ರಾಶಿಯ ಮುಂದೆ ದೊಡ್ಡಪ್ಪ ಅಂಗಳದಲ್ಲಿ ಕೂತರೆಂದರೆ ಮೆಲುಮೆಲ್ಲನೇ ಚಂದದ ಗೊರಬೆ ಸಿದ್ಧವಾಗುತ್ತಿತ್ತು. ಅದಕ್ಕೆ ಫೈನಲ್ ಟಚ್ ಕೊಟ್ಟ ಮೇಲೆ ದೊಡ್ಡಪ್ಪ ಅದನ್ನು ತಿರುಗಿಸಿ ಮರುಗಿಸಿ ನೋಡಿ ತೃಪ್ತಿಯ ನಗುವನ್ನು ಬೀರಿದರೆಂದರೆ ಮುಗಿಯಿತು.

ಶಾಲೆಗೆ ಹೋಗುತ್ತಿದ್ದ ನನಗೆ ಮತ್ತು ತಮ್ಮನಿಗೂ ಚಿಕ್ಕಚಿಕ್ಕ ಗೊರಬೆಗಳು ಸಿದ್ಧವಾಗುತ್ತಿದ್ದವು. ಸುರಿಯುತ್ತಿದ್ದ ಜಡಿಮಳೆಯಲ್ಲೂ, ಬೆನ್ನಮೇಲೆ ಗೊರಬೆಯೊಳಗೆ ಭದ್ರವಾಗಿ ಕುಳಿತ ಚೀಲ ಹಾಗೂ ಅದರೊಳಗಿನ ಪುಸ್ತಕಗಳು ಒದ್ದೆಯಾಗುವ ಫಜೀತಿ ಇರದೆ ನಾವು ಶಾಲೆ ತಲಪುತ್ತಿದ್ದೆವು. ಎಂತಹ ಗಾಳಿಮಳೆಗೂ ಸರಿ, ಕೊಡೆಯ ಹಾಗೆ ಕಿಡಿಂಜಲು ಕೈಯಿಂದ ತಪ್ಪಿಸಿಕೊಂಡು ಹಾರಿಹೋಗುವ ಅಥವಾ ಮೇಲ್ಮುಖವಾಗುವ ಆತಂಕವಿದ್ದಿರಲಿಲ್ಲ.

ಚಿತ್ರಕೃಪೆ: ಗೂಗಲ್

ಪಿರಿಪಿರಿ ಮಳೆಗೆ ಅಥವಾ ಜಡಿಮಳೆ ನಿಂತಮೇಲೆ ಈ ಕಿಡಿಂಜಲನ್ನು ಎರಡೂ ಕೈಯಲ್ಲಿ ಹಿಡಿದುಕೊಂಡು ನೀರಿನಲ್ಲಿ ‘ಚಳಂಪಳಂ’ ಮಾಡುತ್ತ ಸಾಗುವುದರಲ್ಲಿ  ತುಂಬ ಖುಷಿಯಿತ್ತು. ಆಮೇಲಾಮೇಲೆ ಶಾಲೆಯಲ್ಲಿ ಕೆಲವರ ಕೈಯಲ್ಲಿ ಕೊಡೆ ಕಾಣಿಸಲಾರಂಭಿಸಿತ್ತು. ಹಾಗೆಯೇ ಶಾಲೆಯ ಚರ್ಚಾಸಭೆಯಲ್ಲಿ ಕೊಡೆಮೇಲೋ ಗೊರಬೆಮೇಲೋ ಎಂಬ ವಿಷಯದ ಮೇಲೆ ಚರ್ಚೆನಡೆಯುತ್ತಿತ್ತು.

ಗೊರಬೆಯ ಸುಖದ ಫಲಾನುಭವಿಗಳಾದ ನಾವು ಗೊರಬೆಯ ಪಕ್ಷವನ್ನೇ  ವಹಿಸುತ್ತಿದ್ದೆವು. ಆದರೂ ಕೊಡೆಯುಳ್ಳ ಕೆಲವರ ಮೇಲೆ ಒಂದು ಸಣ್ಣ ಅಸೂಯೆ ಯಾಗಿತ್ತೂ? ಅದೇ ಮುಂದೆ ‘ಕಿಡಿಂಜಲು’ ಅಥವಾ ಗೊರಬೆಯವರ ಸಂಖ್ಯೆಯು ಕ್ಷೀಣಿಸಿದ ಅವರು ಕೀಳರಿಮೆಗೆ ತುತ್ತಾಗುತ್ತಿದ್ದರು ಎನ್ನುವುದೂ ಸತ್ಯ. ದುಡ್ಡು ಮತ್ತು ಅದು ತಂದುಕೊಡುವ ಸುಖದ ಆಕರ್ಷಣೆಯೇ ಅಂತಹದು ಎನ್ನೋಣವೇ ?

ಈ ದುಡ್ಡು ತಂದು ಕೊಡುವ ಸುಖದ ಆಕರ್ಷಣೆ ಅಥವಾ ಅದರ ಭ್ರಮೆ ನಮ್ಮನ್ನು ಈಗ ಬಹಳದೂರ ಕರೆದು ತಂದು ಬಿಟ್ಟಿದೆ. ಹಿಂತಿರುಗಿ ಹೋಗಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ. ಬಳಕೆದಾರರಾಗಿ ನಾವು ಕೊಳ್ಳುಬಾಕ ಸಂಸ್ಕೃತಿಯ ದಾಸರಾಗಿ ಬಿಟ್ಟಿವೆ . ಬಳಸಿಎಸೆಯುವ ವಸ್ತುಗಳು ಎಲ್ಲೆಂದರಲ್ಲಿ ತ್ಯಾಜ್ಯರಾಶಿಯಾಗಿ ಗಹಗಹಿಸುತ್ತಿವೆ.

ತೆಂಗಿನಗರಿಯಿಂದ ತಯಾರಾದ ಹಿಡಿಸೂಡಿ ಬಳಸಿ ಬಳಸಿ ಚಿಕ್ಕದಾದರೆ ಅಂಗಳಗುಡಿಸಲು, ತರಗಲೆ ಒಟ್ಟುಮಾಡಲು ಉಪಯೋಗವಾಗುತ್ತಿತ್ತು , ಆ ಬಳಿಕ ಅದು ಬೆಂಕಿಯಲ್ಲೊ ಮಣ್ಣಿನಲ್ಲೋ ಸಹಜವಾಗಿ ಸೇರುತ್ತಿತ್ತು. ಈಗ ನೋಡಿ ಮಾರುಕಟ್ಟೆಯಿಂದ ನಾವು ಕೊಂಡುಕೊಳ್ಳುತವೆಯಲ್ಲ – ಪ್ಲಾಸ್ಟಿಕ್ ಹಿಡಿಯ ಪೊರಕೆಯನ್ನು- ಗುಡಿಸುವಾಗ ಅದರ ಒಂದೊಂದು ಕುಚ್ಚು ಬೀಳತೊಡಗುತ್ತದೆ.

ಆ ಬಳಿಕ ಮತ್ತೇನು ಮಾಡುತ್ತೇವೆ ? ಅದರಲ್ಲೂ ಆ ಪ್ಲಾಸ್ಟಿಕ್ ಹಿಡಿಯನ್ನು? ಹೀಗೆ ಒಂದೊಂದೇ ವಸ್ತುವಿನಲ್ಲೂ – ಬಳಸಿದ ಬಳಿಕ, ಅದು ಉಪಯೋಗ ಶೂನ್ಯವಾದ ಮೇಲೆ -ಏನು- ಎಂಬ ಪ್ರಶ್ನೆ ಇದೆ. ಗುಜರಿಯವರಿಗೆ ಕೊಡಬಹುದು ನಿಜ. ಆದರೆ ಮತ್ತೆನಾಗುತ್ತದೆ ಎಂಬ ಪ್ರಶ್ನೆಯನ್ನು ಮುಂದಿಟ್ಟರೆ ನಮ್ಮ ಜನಸಂಖ್ಯೆಯ ಅಗಾಧ ಪ್ರಮಾಣವನ್ನು ಅಷ್ಟೂ ಜನರ ಬಳಕೆಯ ಈ ನಮೂನೆಯ ತ್ಯಾಜ್ಯವನ್ನೂ ನೆನೆಸಿಕೊಂಡರೆ ಭಯವಾಗುತ್ತದೆ.

‍ಲೇಖಕರು avadhi

September 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: