ಬರೆಯುವ ಕಷ್ಟ ಮತ್ತು ಬರೆಯಲಾಗದ ಸಂಕಟ

ರಾಜೀವ ನಾರಾಯಣ ನಾಯಕ

‘ನಾನೇಕೆ ಬರೆಯುತ್ತೇನೆ?’ ಎನ್ನುವ ಪ್ರಶ್ನೆಗೆ ಜಗತ್ತಿನ ಅತ್ಯುತ್ತಮ ಲೇಖಕರು ಉತ್ತರಕ್ಕಾಗಿ ಹುಡುಕಾಡಿದ್ದಾರೆ. ಬರವಣಿಗೆಯಿಂದ  ಪ್ರಾಪ್ತವಾಗುವ ಖ್ಯಾತಿ, ಹಣ, ಪ್ರತಿಷ್ಠೆ, ಆತ್ಮ ಸಂತೋಷಗಳನ್ನು ಮೀರಿದ ಸಂಗತಿಗಳ ಈ ಹುಡುಕಾಟ ಇಂದು ನಿನ್ನೆಯದಲ್ಲ. ಬರವಣಿಗೆಯ ಅದ್ಭುತ ಗುಣವೆಂದರೆ ಅದರಿಂದ ದಕ್ಕುವ ಏಕಾಂತ ಎನ್ನುವ ಅರ್ಥದ ಮಾತುಗಳನ್ನು ಪ್ರಸಿದ್ಧ ಕಾದಂಬರಿಕಾರ ಹೆಮಿಂಗ್ವೇನ ಹೇಳಿದ್ದಾನೆ.

ಬರವಣಿಯೆಂದರೆ ನಿರಂತರ ಸತ್ಯದ ಶೋಧನೆ ಎಂದು ಇನ್ನೊಬ್ಬ ಪ್ರಸಿದ್ಧ ಕಾದಂಬರಿಕಾರ ಮಿಲನ್ ಕುಂದೇರಾ ಹೇಳಿದ್ದಾನೆ. ಇಂಥ ಖ್ಯಾತನಾಮರ ಅಭಿಪ್ರಾಯಗಳು ಬರಹಗಾರರ ಸಂವೇದನೆಯ ಸೆಲೆಗಳನ್ನು ಅರಿಯಲು ನೆರವಾಗಬಹುದು. ಬರವಣಿಗೆಯನ್ನು ಸಂತೆಯೊಳಗಿದ್ದೂ ಸಂತನಾಗಿಸುವ, ಲೋಕಾಂತದಿಂದ ಏಕಾಂತಕ್ಕಿಳಿಸುವ ಏಣಿಯನ್ನಾಗಿ ಬಳಸಿಕೊಂಡವರಿರುವಂತೆಯೇ, ಏಕಾಕಿತನದಿಂದ ವಿಮುಖರಾಗಲೂ ಅದನ್ನು ನೆಚ್ಚಿಕೊಂಡವರಿದ್ದಾರೆ.

ಅದೆಷ್ಟೋ ಕವಿಗಳು ಕತೆಗಾರರು ಬರವಣಿಗೆ ತಮ್ಮನ್ನು ಬಿಡುಗಡೆಗೊಳಿಸುವ ದಾರಿ ಎಂದಿದ್ದಾರೆ. ಬರೆಯುವ ಖುಷಿ, ಸಂಕೋಚ, ಸಂಭ್ರಮ  ಅಥವಾ ಬರೆಯಲಾಗದ ಮೌನ, ನೋವು, ತಳಮಳ-ಇವೆಲ್ಲ ಬರಹಗಾರನನ್ನು ಬರವಣಿಗೆಯ ಮೋಹದಲ್ಲಿ ಬಂಧಿಸುವುದೂ ನಿಜವೇ!

ನಮ್ಮ ಮುಂಬೈನ ಲೇಖಕರಿಗೆ ಬರವಣಿಗೆ ಎನ್ನುವುದು ಅಸ್ಮಿತೆಯ ಹುಡುಕಾಟವೂ ಹೌದು. ಭಿನ್ನ ಭಾಷೆ, ಸಂಸ್ಕೃತಿಯ ನೆಲದಲ್ಲಿ ಅಗಲಿಬಂದ ನೆಲದ ಭಾವಸ್ಮೃತಿಗಳನ್ನು ಬರವಣಿಗೆಯ ರೂಪದಲ್ಲಿ  ಸೃನಶೀಲಗೊಳಿಸುವ ಪರಿಯೂ ಹೌದು.

ನಮ್ಮದಲ್ಲದ ನಾಡಿನಲ್ಲಿ ನಮ್ಮತನವನ್ನು ನಮ್ಮ ಭಾಷೆಯಲ್ಲಿ ಅದ್ಭುತವಾಗಿ ಧ್ಯಾನಿಸಿದ  ಚಿತ್ತಾಲ, ಬಲ್ಲಾಳ, ಜಯಂತ, ಮಿತ್ರಾ, ತುಳಸಿ, ನಿಂಜೂರರಂಥ ಪ್ರತಿಭಾನ್ವಿತ ಲೇಖಕರನ್ನು ಮುಂಬೈ ರೂಪಿಸಿತು ಎನ್ನುವುದೇ ಹೆಮ್ಮೆಯ ಮಾತು.

ನಂತರದ ತಲೆಮಾರಿನ ಓಂದಾಸ ಕಣ್ಣಂಗಾರ್, ಅನಿತಾ ಪೂಜಾರಿ, ಗೋಪಾಲ ತ್ರಾಸಿ, ವಿ.ಎಸ್.ಶಾನಭಾಗ, ಹೇಮಾ ಸದಾನಂದ, ಶಾರದಾ ಆಂಚನ್, ಜಿ.ಪಿ.ಕುಸುಮ, ಮಮತಾ ರಾವ್, ಸಾ. ದಯಾ ಮುಂತಾದವರ ಬರವಣಿಗೆಯ ನೆಲೆಯೂ ಅಸ್ಮಿತೆಯ ಹುಡುಕಾಟದ ಮುಂದುವರಿಕೆಯೇ!

ಪತ್ರಕರ್ತ ಲೇಖಕ ಶ್ರೀನಿವಾಸ ಜೋಕಟ್ಟೆ ಬದುಕಿಗಾಗಿ ಬರೆದ, ಬರೆದೇ ಬದುಕಿದ ನಮ್ಮ ನಡುವಿನ ಅಪರೂಪದ ಬರಹಗಾರ. ಶ್ಯಾಮಲಾ ಮಾಧವ್ ಅವರು ವಿಶ್ವ ಸಾಹಿತ್ಯವನ್ನು ಅನುವಾದಿಸುವ ಮೂಲಕ ಮನುಷ್ಯ ಸಂವೇದನೆಗಳ ಸಾಮ್ಯತೆಯನ್ನು ನಮಗೆ ಪರಿಚಯಿಸುತ್ತಿದ್ದಾರೆ.

ಗಿರಿಜಾ ಶಾಸ್ತ್ರಿ ಅವರದು ವೈಚಾರಿಕ ಪ್ರಖರತೆಯಲ್ಲಿ ಮನುಷ್ಯ ಸ್ವಭಾವಗಳನ್ನು ಉಜ್ಜಿ ನೋಡುವ ಶೈಲಿ. ಕರ್ನಾಟಕ ಮಲ್ಲ ಸಂಪಾದಕ ಚಂದ್ರಶೇಖರ್ ಪಾಲೆತ್ತಾಡಿಯವರದು ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳನ್ನು ಈ ಕ್ಷಣದ ತುರ್ತಿನಲ್ಲಿ ವಿಶ್ಲೇಷಿಸುವ ಬರವಣಿಗೆ. ಮುಂಬೈ ಯುನಿವರ್ಸಿಟಿಯ ಕನ್ನಡ ವಿಭಾಗದ ಡಾ. ಜಿ.ಎನ್. ಉಪಾಧ್ಯ, ಡಾ. ಶ್ಯಾಮಲಾ ಪ್ರಕಾಶರಂಥವರ ಬರಹಗಳು ಸದಾ ಅಕಾಡೆಮಿಕ್ ಶಿಸ್ತು ಹೊಂದಿರುತ್ತವೆ. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳೆರಡರಲ್ಲೂ ಅದ್ಭುತ ಪ್ರತಿಭೆಯನ್ನು ಹೊಂದಿರುವ ಡಾ.ಶ್ಯಾಮಲಾರವರು ನಿರಂತರ ಲೇಖನಗಳ ಮೂಲಕ ನಮ್ಮ ಅಸ್ಮಿತೆಯನ್ನು ಪಾರಂಪರಿಕ, ಸಾಂಸ್ಕೃತಿಕ ನೆಲೆಗೆ ಒಯ್ಯುವ ವಿಶಿಷ್ಟ ಪ್ರಯತ್ನ ಮಾಡುತ್ತಿದ್ದಾರೆ.

ಯಾರಾದರೂ ‘ನೀವೇಕೆ ಬರೆಯುತ್ತೀರಿ?’ ಎಂಬ ಪ್ರಶ್ನೆ ಕೇಳುವಂಥ ದೊಡ್ಡ ಲೇಖಕ ನಾನಲ್ಲವಾದರೂ, ಒಬ್ಬ ಕತೆಗಾರನಾಗಿ ‘ನಾನೇಕೆ ಬರೆಯುತ್ತೇನೆ’ ಎಂಬ ಪ್ರಶ್ನೆಯನ್ನು ನನಗೆ ನಾನೆ ಹಾಕಿಕೊಳ್ಳುವ ಸಂದರ್ಭ ಬಂದದ್ದು ಮಾತ್ರ ಸುಳ್ಳಲ್ಲ! ಆ ಪ್ರಸಂಗವನ್ನು ಆಮೇಲೆ ವಿವರಿಸುತ್ತೇನಾದರೂ ಮೊದಲು ಈ ಪ್ರಶ್ನೆಯನ್ನು ಎತ್ತಿಕೊಳ್ಳುತ್ತೇನೆ. ಹೌದಲ್ಲ! ನಾನೇಕೆ ಕತೆಗಳನ್ನು ಬರೆಯಬೇಕು? ನನ್ನ ಬರವಣಿಗೆಯ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬಲ್ಲ ನಾನು ಅದು ಖ್ಯಾತಿ, ಹಣ, ಪ್ರಶಸ್ತಿಗಳನ್ನು ತರುವ ಸಾಧ್ಯತೆಯ ಮಿತಿಯನ್ನು ಚೆನ್ನಾಗಿಯೇ ತಿಳಿದಿರುವೆ. ನಾನೇನು ಸಾಕಷ್ಟು ಓದಿಕೊಂಡ, ಸಾಹಿತ್ಯದ ಗಂಭೀರ ವಿದ್ಯಾರ್ಥಿಯೂ ಅಲ್ಲ. ಆದರೂ ಅಪರೂಪಕ್ಕಾದರೂ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವುದರ ಹಿಂದೆ ಇರುವ ಸೆಳೆತ ಪ್ರೇರಣೆ ನಶೆ ಯಾವುದು, ಹಾಗಾದರೆ?

ಹೆಚ್ಚಿನ ಲೇಖಕರು ಬರಹದ ಮೂಲ ಸೆಲೆಗಳನ್ನು ತಮ್ಮ ಬಾಲ್ಯಗಳಲ್ಲಿ ಅರಸುತ್ತಾರೆ. ನನ್ನ ಹುಡುಕಾಟವೂ ಅದಕ್ಕೆ ಹೊರತಲ್ಲ. ನಮ್ಮ ಊರಿನ ಪಕ್ಕದಲ್ಲಿದ್ದ ದಟ್ಟ ಕಾಡು, ಆಗಿನ ಘೋರ ಮಳೆಗಾಲ, ಸೊಕ್ಕಿನಿಂದ ಹರಿಯುವ ಗುಡಿಹಳ್ಳ, ವರ್ಷಕ್ಕೊಮ್ಮೆಯಾದರೂ ನೆರೆ ಉಕ್ಕಿ ಮನೆ ಬಾಗಿಲಿಗೂ ಬಂದು ಹೋಗುವ ಗಂಗಾವಳಿ- ಇವೆಲ್ಲವೂ ಅಕ್ಷರಲೋಕಕ್ಕೆ ಕರೆದೊಯ್ದಿದ್ದವು. ಊರೊಳಗಿನ ಮತ್ತು ಊರಿಗೆ ಬಂದು ಹೋಗುತ್ತಿದ್ದ ವಿಶಿಷ್ಟ ವಿಚಿತ್ರ ವಿಕ್ಷಿಪ್ತ ವ್ಯಕ್ತಿಗಳು ಕತೆಯ ಪಾತ್ರಗಳಾಗಿದ್ದರು.

ಬಾಲ್ಯದ ವಿಸ್ಮಯ ಮತ್ತು ನಿಗೂಢತೆ, ಹದಿಹರೆಯದ ಹುಮ್ಮಸ್ಸು ಮತ್ತು ಉದ್ವಿಗ್ನತೆ, ಯೌವನದ ರೋಮಾಂಚನ ಮತ್ತು ವ್ಯಗ್ರತೆ- ಇವೆಲ್ಲವೂ ಕಥಾ ಸ್ವರೂಪವನ್ನು ತಾಳಿದ್ದವು. ಹೈಸ್ಕೂಲು- ಕಾಲೇಜು ದಿನಗಳ ನವಿರು ಮತ್ತು ಉತ್ಕಟ ಭಾವನೆಗಳು, ಭವ್ಯ ಮತ್ತು ಭಗ್ನ ಕನಸುಗಳು ಎದೆಯ ಅಕ್ಷರಗಳಾಗಿ ಕತೆ ಮತ್ತು ಕಾವ್ಯಗಳನ್ನು ಕಟ್ಟಲು ಶುರುವಾಗಿದ್ದವು. ಆಗಿನ ನಮ್ಮ ಭಾಗದ ಜನಪ್ರಿಯ ದಿನಪತ್ರಿಕೆ ಸಂಯುಕ್ತ ಕರ್ನಾಟಕದಲ್ಲಿ ನನ್ನ ಮೊದಲ ಕವನ ಪ್ರಕಟವಾದಾಗಿನ ರೋಮಾಂಚನವನ್ನು ನೆನೆದರೆ ಈಗಲೂ ರೋಮಾಂಚನವಾಗುತ್ತದೆ.

ನಂತರದ ದಿನಗಳಲ್ಲಿ ಕಾವ್ಯದಿಂದ ಕತೆಗಳತ್ತ ಆಕರ್ಷಿತನಾಗಿದ್ದು, ಪ್ರಜಾವಾಣಿಯಂಥ ನಾಡಿನ ಮುಖ್ಯ ಪತ್ರಿಕೆಗಳ ದೀಪಾವಳಿ ಅಥವಾ ಯುಗಾದಿ ಕಥಾ ಸ್ಪರ್ಧೆಗಳು ಬರಹಕ್ಕೆ ಶಿಸ್ತನ್ನು ನೀಡಿ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ನೆರವಾದದ್ದು ನಿಜ..ಇಷ್ಟು ಹೇಳಿಯೂ ನಾನೇಕೆ ಬರೆಯುತ್ತೇನೆ ಎನ್ನುವ ಪ್ರಶ್ನೆಗೆ ಸಮಾಧಾನದ ಉತ್ತರ ಸಿಕ್ಕಿದಂತೆ ಅನಿಸುವುದಿಲ್ಲ!

ಬರಹ ಏಕಾಂತದ ಸೃಷ್ಟಿಕ್ರಿಯೆಯಾದರೂ ಓದುಗನ ಹೃದಯ ತಲುಪಿದಾಗಲೇ ಅದು ಸಾರ್ಥಕಗೊಳ್ಳುವುದು. ಲೇಖಕನಾದವನು ಓದುಗರ ಸಹಸ್ಪಂದನದಿಂದ ಸ್ಪೂರ್ತಿ ಪಡೆದುಕೊಳ್ಳುವಂತೆಯೇ, ತೀಕ್ಷ್ಣ ಅನಿರೀಕ್ಷಿತ ಪ್ರತಿಕ್ರಿಯೆಗಳಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಗುಣವನ್ನೂ ಕಾದುಕೊಳ್ಳಬೇಕಾಗುತ್ತದೆ.  ಹತ್ತಾರು ವರ್ಷಗಳ ಹಿಂದೆ ನಾನು ಹೊಸ ಸಂವೇದನೆಗಳಿರುವ ಎಸ್ಸೆಮ್ಮೆಸ್ ಕತೆಗಳನ್ನು ಬರೆದಿದ್ದೆ.

ಮೊಬೈಲಿನಂಥ ಆಧುನಿಕ ಪರಿಕರಗಳು ಮನುಷ್ಯ ಭಾವನೆಗಳನ್ನು ಚಲನಶೀಲಗೊಳಿಸುವ ಆ ಕತೆಗಳನ್ನು ಓದುಗರು ಇಷ್ಟಪಟ್ಟಿದ್ದರು. ಆದರೆ ಸ್ವಲ್ಪ ಉಢಾಪೆ, ಸ್ವಲ್ಪ ತಮಾಷೆ, ನಿರಾಶೆಯನ್ನೆಲ್ಲ ಒಳಗೊಂಡ ಹಗುರಭಾವದಲ್ಲಿ ಬರೆದ ಎಸ್ಸೆಮ್ಮೆಸ್ ಕತೆಯೊಂದನ್ನು ಓದಿದ ಅನಾಮಿಕ ಓದುಗರೊಬ್ಬರ ಕಾಮೆಂಟ್ ಎಸ್ಸೆಮ್ಮೆಸ್ ಕಥಾಸರಣಿಯನ್ನು ಮುಕ್ತಾಯಗೊಳಿಸಿತ್ತು! ಮಿಸ್ಟರ್ ಸ್ಟೋರಿ ರೈಟರ್, ವ್ಯಂಗ್ಯ ವಿಡಂಬನೆಯ ಈ ಎಸ್‍ಎಂಎಸ್ ಕತೆಗಳನ್ನು ದಯವಿಟ್ಟು ನಿಲ್ಲಿಸಿ.

ನೀವೇನೋ ತಮಾಷೆಯಾಗಿ ಕತೆ ಬರೆಯುತ್ತೀರಾ. ಆದರೆ ನಿಜ ಜೀವನದಲ್ಲಿ ಇಂಥ ಬೇಜವಾಬ್ದಾರಿ ಹರ್ಕತ್ತುಗಳಿಗೆ ಮುಗ್ಧ ಮನಸ್ಸುಗಳು ಬಾಡಿಹೋಗಬಲ್ಲವು. ನನ್ನ ಮಗಳು ಇಂಥ ಕುಚೋದ್ಯದ ಆಟಕ್ಕೆ ಬಲಿಪಶು ಆಗಬೇಕಾಯ್ತು, ನೆನಪಿರಲಿ ಎಂದು ಅವರು ಬರೆದ ಸಾಲುಗಳು ನನ್ನನ್ನು ಅಲುಗಾಡಿಸಿಬಿಟ್ಟಿತ್ತು. ಕತೆಯೊಂದರಲ್ಲಿ ಈ ಎಸ್ಸೆಮ್ಮೆಸ್ಸು ಹೃದಯಗಳನ್ನು ದಾಟಾಡಿಸುವ ದೋಣಿ ಇದ್ದಂತೆ” ಎಂಬ ಸಾಲು ಬರೆದಿದ್ದೆ. ಅದು ಕೋಮಲ ಹೃದಯವನ್ನು ಬಲಿಪಶು ಮಾಡುವಷ್ಟು ಕ್ರೂರವೂ ಆಯಿತೇ? ಮತ್ತೆ ಎಸ್ಸೆಮ್ಮೆಸ್ ಕತೆ ಬರೆಯಲಿಲ್ಲ!.

ಬರಹಗಾರನಾದವನು ಕೆಲವೊಮ್ಮೆ ಆ ಕ್ಷಣದ ಉತ್ಕಟ ಭಾವನೆಗಳನ್ನು ನಿಗ್ರಹಿಸಲು ಸೋತು, ಅದನ್ನು ಕಚ್ಚಾ ಸ್ವರೂಪದಲ್ಲೇ ಕಾರಿಕೊಳ್ಳುವಷ್ಟು ಅಸೂಕ್ಷ್ಮನಾಗುತ್ತಾನೆ.  ಕಾಯಿಲೆ ಬಿದ್ದ ನನ್ನ ತಾಯಿ ಜಾನಕಿ ತೀರಿಕೊಂಡ ಸಂದರ್ಭದಲ್ಲಿ “ಜಾನಕಿ ಜೀವನ ಜೈ ಜೈ ರಾಮ್” ಎಂಬ ಲೇಖನ ಬರೆದು ಪ್ರಕಟಿಸಿದ್ದೆ. ಆ ಲೇಖನವನ್ನು ಓದಿ ನಮ್ಮ ಮನೆಯವರು ನೊಂದುಕೊಳ್ಳುವಂತಾಯಿತು.

ಸ್ವಾಭಿಮಾನಿಯಾಗಿದ್ದ ತಾಯಿಯ ಅಂತಿಮ ಬದುಕಿನ ಅಸಹಾಯಕ ಅವಸ್ಥೆಗಳನ್ನು ಸಾರ್ವಜನಿಕಗೊಳಿಸುವ ಅಗತ್ಯವಿರಲಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಬರಹದಲ್ಲೂ ಬದುಕಿನಲ್ಲೂ ಮನುಷ್ಯನ ಘನತೆಯನ್ನು ಎತ್ತಿ ಹೇಳಬೇಕೆ ವಿನ: ಅವರ ದಾರುಣ ಸ್ಥಿತಿಗಳನ್ನಲ್ಲ ಎಂಬುದು ಅವರ ಅನಿಸಿಕೆಯಾಗಿತ್ತು. ಅದು ನಿಜವೂ ಹೌದು. ಆದರೆ ಕೊನೆಯ ದಿನಗಳಲ್ಲಿ ಅವಳ ಅಸಹಾಯಕ ಸ್ಥಿತಿಯಿಂದ ನೊಂದಿದ್ದ ನನ್ನೊಳಗಿನ ಲೇಖಕ ಅದನ್ನು ಕಥನವಾಗಿಸಿ ಹಗುರಾಗುವ ಅಥವಾ ಹೆಸರು ಮಾಡುವ ಸ್ವಾರ್ಥಕ್ಕಿಳಿದಿದ್ದ. ಹೆತ್ತತಾಯಿಯ ನೋವನ್ನೂ, ಸಾವನ್ನೂ ಬರವಣಿಗೆಯ ಸರಕಾಗಿಸಿ ಬರಹದ ಗೀಳು ಪ್ರದರ್ಶಿಸುವಷ್ಟು ಕಠೋರನಾಗಿದ್ದ.

ಬರಹಗಾರನ ಸಂಧಿಗ್ಧತೆಯನ್ನು ಚಿತ್ತಾಲರು ತಮ್ಮ ಕತೆಯಾದಳು ಹುಡುಗಿ ಕತೆಯಲ್ಲಿ ಮಾರ್ಮಿಕವಾಗಿ ನಿರೂಪಿಸಿದ್ದಾರೆ. ನನ್ನ ಬಗ್ಗೆ ಒಂದು ಕಥೆ ಬರಿ ಅಪ್ಪ ಎಂಬ ಬೇಡಿಕೆಯಿಟ್ಟು ಅಕಾಲಿಕವಾಗಿ ತೀರಿಕೊಳ್ಳುವ ಹತ್ತು ವರ್ಷದ ಮಗಳ ಮೇಲೆ ಕತೆ ಬರೆಯಬೇಕಾದ ಅನಿಚ್ಛುಕ ಕಾರ್ಯದಲ್ಲಿ ಸಾವು ಮತ್ತು ಬದುಕನ್ನು ಮುಖಾಮುಖಿಯಾಗಿಸುತ್ತಾರೆ. ಮಾತುಕೊಟ್ಟಂತೆ ಮಗಳ ಕುರಿತು ಕಥೆಯನ್ನೇನೋ ಬರೆದು ಮುಗಿಸುತ್ತಾರೆ. ಆದರೆ ಅದು ಮಗಳ ಕತೆಯಾಗುವುದಕ್ಕಿಂತ ಕತೆಗಾರನಾದವನ ಬರವಣಿಗೆ ಅಥವಾ ಸೃಜನಶೀಲತೆ ತಣ್ಣನೆಯ ಕ್ರೌರ್ಯದಲ್ಲಿ ಹಾಯಬೇಕಾದ ಅನಿವಾರ್ಯತೆಯ ಕಥನವಾಗುತ್ತದೆ!

ಇದಕ್ಕಿಂಥ ಘೋರ ಪ್ರಮಾದವಾದದ್ದು ಹತ್ತು ತಿಂಗಳ ಹಿಂದೆ; ನಮ್ಮ ಕಣ್ಮುಂದೆ ಕಿರಿಯ ಸಹೋದರನಂತೆ ಬೆಳೆದ ಹುಡುಗನೊಬ್ಬ ಹರೆಯದಲ್ಲೇ  ತೀರಿಕೊಂಡಾಗ. ಬೆಳ್ಳಗೆ ಬಾಳೆ ತಿಳ್ಳಿನಂತಿದ್ದ ನಗುಮುಖದ ಆ ಹುಡುಗ ಅಪಾರ ಜೀವನ ಪ್ರೀತಿಯನ್ನು ಹೊಂದಿದ್ದ. ಎಲ್ಲರನ್ನು ಅಕ್ಕರೆಯಿಂದ ಕಾಣುತ್ತಿದ್ದ. ಹಿರಿಯರನ್ನು ಗೌರವಿಸುತ್ತಿದ್ದ. ಊರಿನಲ್ಲಿ ಯಕ್ಷಗಾನವಿರಲಿ ಮದುವೆ ಮುಂಜಿ ಇರಲಿ ಓಡಾಡಿಕೊಂಡು ಒಂದು ರೀತಿಯ ಉಲ್ಲಾಸದ ವಾತಾವರಣ ನಿರ್ಮಿಸುತ್ತಿದ್ದ.

ಅಕಾಲಿಕವಾಗಿ ನಿಧನ ಹೊಂದಿದ ಇಂಥವನ ಸಾವು ಉಂಟುಮಾಡಿದ ಶೂನ್ಯವನ್ನು ನಾಲ್ಕಕ್ಷರಗಳಲ್ಲಿ ನಿವೇದಿಸಿದ ಬರಹ ಪ್ರಕಟವಾಗಿತ್ತು. ನುಡಿನಮನಗಳನ್ನು ಬರೆಯುವ ಭಾವುಕ ಸಂದರ್ಭದಲ್ಲಿ ನನ್ನಿಂದ ಪ್ರಮಾದ ಉಂಟಾಯಿತು. ಹೆತ್ತವರಿಗೂ ಕುಟುಂಬದವರಿಗೂ ನೋವು ತರುವಂಥ ತಪ್ಪು ವಿಷಯಗಳನ್ನು ಅಲ್ಲಿ ಪ್ರಸ್ತಾಪಿಸಿ ಬಿಟ್ಟಿದ್ದೆ. ಆ ಹುಡುಗನನ್ನು ನೆನೆದು ಬರೆದ ಒಳ್ಳೆಯ ಮಾತುಗಳನೆಲ್ಲಾ ಅಗಲಿದ ಹುಡುಗನಿಗೂ ಅವನ ಆಪ್ತರಿಗೂ ನೋವು ತರಿಸುವಂಥ ಒಂದು ತಪ್ಪು ನುಡಿ ನುಂಗಿಹಾಕಿತ್ತು.

ಸಾವಿನ ಮನೆಯಲ್ಲಿ ಸಾಂತ್ವನಗೊಳಿಸಬೇಕಾದ ನನ್ನ ಅಕ್ಷರಗಳು ಸೂತಕದ ಸಾಲುಗಳಾಗಿದ್ದವು. ಸೂಕ್ಷ್ಮತೆಯ ಕತೆಗಾರನೆಂಬ ಸಣ್ಣ ಅಹಂಕಾರದ ಕೊಂಬಿಟ್ಟುಕೊಂಡಿದ್ದ ನಾನು ಇಂಥ ಅಸೂಕ್ಷ್ಮತೆಯ ಬರಹವನ್ನು ಬರೆದುಬಿಟ್ಟೆನೆ! ಅರಿಯದೇ ಆದ ತಪ್ಪನ್ನು ಮರೆಯಬಹುದು. ಅರಿತು ಮಾಡಿದ ತಪ್ಪಿಗೂ ಕ್ಷಮೆ ಸಾಧ್ಯ. ಆದರೆ ಕೆಲವು ಪ್ರಮಾದಗಳು, ಅಪ್ರಜ್ಞಾಪೂರ್ವಕವಾದರೂ, ಅಕ್ಷಮ್ಯವಾಗಿಯೇ ಉಳಿಯುತ್ತವೆ.

ಯಾವ ಅಕ್ಷರಗಳಿಂದ ನೋವು ಉಂಟಾಗುವಂತೆ ಮಾಡಿದ್ದೆನೋ ಅವೇ ಅಕ್ಷರಗಳಿಂದ ಕ್ಷಮೆ ಕೋರಿ ಇನ್ನೊಂದು ಬರಹ ಮಾಡಬಹುದಿತ್ತು. ಯಾವುದೇ ಕಾರಣಕ್ಕೆ ಬರಹದಿಂದ ಮನಸ್ಸು ಘಾಸಿಗೊಂಡರೆ ಅದು ಇನ್ನೊಂದು ಬರವಣಿಗೆಯಿಂದಲೇ ಮಾಯಬೇಕು ಎನ್ನುವ ಸಿದ್ಧಾಂತವು ನನ್ನಲ್ಲಿ ಭಂಡತನವನ್ನು ಬೆಳೆಸಬಲ್ಲದು ಎನಿಸಿತು.

ಪಶ್ಚಾತ್ತಾಪದ ಅಗ್ನಿಕುಂಡದಲ್ಲಿ ಮನಸ್ಸು ಹಾಯದಿದ್ದರೆ ಯಾವ ಕ್ಷಮೆಗೂ ಅರ್ಥ ಉಳಿಯಲಾರದು. ಸೂಫಿ ತತ್ವದಂತೆ ಪ್ರೇಮದ ಸಾಕ್ಷಾತ್ಕಾರಕ್ಕೂ ವಿರಹದ ಬೇಗೆಯಲ್ಲಿ ಹಾಯುವ ಅವಸ್ಥೆ ಅನಿವಾರ್ಯವಂತೆ. ಒಂದು ವರ್ಷದ ವರೆಗೆ ಹೊಸ ಬರಹಗಳನ್ನು, ಕತೆ ಕವನಗಳನ್ನು ಬರೆಯುವುದಿಲ್ಲ ಎಂದು ಶಪಥ ಮಾಡಿದೆ. ಅಕ್ಷರಗಳ ಪ್ರಲೋಭನೆಯಿಂದ ಜಾಗ್ರತನಾಗುಳಿದೆ.

ಫೇಸ್ಬುಕ್ಕು ವಾಟ್ಸಾಪ್‍ಗಳಲ್ಲೂ ಸಾಕಷ್ಟು ದೂರವುಳಿದೆ. ಆದರೆ ಮುಂಬೈನಂಥ ಮುಂಬೈನಲ್ಲಿ ಪಂಚೇದ್ರಿಯಗಳನ್ನು ಬಹುಕಾಲ ನಿಷ್ಕ್ರಿಯಗೊಳಿಸಿಕೊಳ್ಳುವುದು ಕಷ್ಟ. ಅಲ್ಲಿ ಕ್ಷಣ ಕ್ಷಣಕ್ಕೂ ನಿಮ್ಮನ್ನು ವಿಚಲಿತಗೊಳಿಸುವ ವಿಸ್ಮಯಗೊಳಿಸುವ ಸನ್ನಿವೇಶಗಳು ಎದುರಾಗುತ್ತಿರುತ್ತವೆ.

ನಿಮ್ಮ ಸಂವೇದನೆಗಳನ್ನು ದೀರ್ಘಕಾಲದ ವರೆಗೆ ಪ್ರಯತ್ನಪೂರ್ವಕವಾಗಿ ಜಡಗೊಳಿಸಿಕೊಳ್ಳುವುದು ಸಾಧ್ಯವಿಲ್ಲ. ಬೇಡ ಬೇಡವೆಂದರೂ ಕತೆಗಾರನಾದವನ ಕರುಳಿಗೆ ತಲ್ಲಣಗಳು ಸಂಕಟಗಳು ಸುತ್ತಿಕೊಳ್ಳುತ್ತವೆ. ಕವಿ ಅಥವಾ ಕತೆಗಾರನಾದವನು ಅಂಥ ಯಾತನೆ ಸಂಕಟಗಳನ್ನು ಅಕ್ಷರಗಳ ಎಳೆಯಲ್ಲಿ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ; ಅದು ಒಂದು ವೇದನೆಯಿಂದ ಇನ್ನೊಂದು ವೇದನೆಯತ್ತ ಪಯಣ ಎನ್ನುವುದರ ಅರಿವಿದ್ದರೂ! ಅದಕ್ಕಾಗಿಯೇ ಬಹುಶ: ಖ್ಯಾತ ಲೇಖಕ ಹೆಮಿಂಗ್ವೇ ಹೇಳಿರಬೇಕು: ಬರೆಯುವುದೆಂದರೆ ಅಕ್ಷರಗಳ ಮೂಲಕ ರಕ್ತ ಹರಿಸುವುದು, ಅಷ್ಟೆ!.

ನಾವು ಚಿಕ್ಕವರಿರುವಾಗ ಹುಲಿಗೊಂದು ಹುಣ್ಣುಗಾಯ ಎಂಬ ಮಾತು ಕೇಳುತ್ತಿದ್ದೆವು. ನನಗನ್ನಿಸುವ ಪ್ರಕಾರ ಬರೆಯುವುದು ಎಂದರೆ ಹುಲಿಗಾದ ಹುಣ್ಣುಗಾಯವೇ! ಒಂದು ಕಡೆ ಆದ ಹುಣ್ಣಿಗೆ ಇನ್ನೊಂದು ಕಡೆಯ ಚರ್ಮ ಕಿತ್ತು ಅಂಟಿಸಿಕೊಳ್ಳುವ ಹುಲಿಗೂ, ಒಂದು ನೋವು ಮರೆಯಲು ಇನ್ನೊಂದು ನೋವು ಸೃಜಿಸಿಕೊಳ್ಳುವ  ಬರಹಗಾರನಿಗೂ ದೊಡ್ಡ ವ್ಯತ್ಯಾಸವೇನಿಲ್ಲ.

ಮುಂಬೈನ ಖ್ಯಾತ ರಂಗಭೂಮಿ ನಿರ್ದೇಶಕ ಡಾ. ಭರತ ಕುಮಾರ ಪೊಲಿಪುರವರು ಮೊನ್ನೆ ಸಿಕ್ಕಾಗ ತುಂಬಾ ದಿನಗಳಾಯ್ತು ನಿಮ್ಮ ಹೊಸ ಕತೆ- ಗಿತೆ ಓದದೇ, ಅವಧಿಯಲ್ಲೂ ಹೊಸ ಲೇಖನ ಕಾಣಲಿಲ್ಲ, ಕಾರಣ ಕೇಳಬಹುದಾ? ಅಂದಿದ್ದರು. ನಾನು ಮೌನವಾಗಿದ್ದೆ. ಬಹುಶ: ಒಂದಿಷ್ಟು ಭಾವುಕನಾದೆನೋ  ಏನೋ!  ಅದನ್ನು ಓದಿದವರಂತೆ ಕಾರಣ ಹೇಳಲೇಬೇಕೆಂದಿಲ್ಲ ರಾಜೀವ, ಲೇಖಕರಿಗೆ ಬರೆಯುವ ಸ್ವಾತಂತ್ರ್ಯ ಇರುವಂತೆಯೇ ಬರೆಯದಿರುವ ಸ್ವಾತಂತ್ರ್ಯವೂ ಇದೆ ಎಂದರು.

ಬರೆಯುವ ಕಷ್ಟ ಮತ್ತು ಬರೆಯಲಾಗದ ಸಂಕಟವನ್ನು ಹೀಗೆ ಅಕ್ಷರಗಳಲ್ಲಿ ನಿವೇದಿಸಿಕೊಂಡ ಹಾಗೆ, ಮಾತುಗಳಲ್ಲಿ ಹೇಳುವುದು ಸಾಧ್ಯವಿತ್ತೇ? ಗೊತ್ತಿಲ್ಲ. ಒಂದು ವರ್ಷದವರೆಗೆ  ಬರೆಯುವುದಿಲ್ಲ ಎಂದು ಶಪಥಗೈದಿದ್ದನ್ನು ನಾನು ಮರೆತಿಲ್ಲ. ಇಂಥ ಒಂದು ಅಕ್ಷರ ನಿವೇದನೆಯೇ ಈಗ ಲೇಖನದ ಸ್ವರೂಪ ಪಡೆದುಕೊಂಡದ್ದಂತೂ ಹೌದು. ಅಂತೂ ವರ್ಷಪೂರ್ತಿ ಬರೆಯಲಾರೆ ಎನ್ನುವ ಹತ್ತು ತಿಂಗಳ ಹಿಂದಿನ ನನ್ನ ಪ್ರತಿಜ್ಞೆಯೂ ಈ ಬರಹದ ಮೂಲಕ ಮುರಿದು ಬಿದ್ದಿದೆ.

ಅಯ್ಯೋ, ಬರಹಗಾರನ ಹಣೆಬರಹವೇ!

‍ಲೇಖಕರು avadhi

September 29, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: