ಹಿಟ್ಲರ್‌ನ ಕಾಲುಗುಣ ಸರಿಯಿಲ್ಲ ಕಣ್ರೀ!

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಮಧ್ಯರಾತ್ರಿ 3 ಘಂಟೆಗೆ ವಿಮಾನ. ನಡುರಾತ್ರಿ 11ಕ್ಕೆ ಎರಡು ಟ್ಯಾಕ್ಸಿ ಹೇಳಿದ್ದ ನನ್ನ ಗಂಡ. ಸೂಟ್‌ಕೇಸ್‌ಗಳು ದೊಡ್ಡವಿರುತ್ತವಾದ್ದರಿಂದ ಒಂದರಲ್ಲಿ ಎಲ್ಲವೂ ಹಿಡಿಯುವುದಿಲ್ಲವಲ್ಲ ಹಾಗಾಗಿ. ನಮ್ಮ ಲಗೇಜನ್ನೆಲ್ಲ ಟ್ಯಾಕ್ಸಿಗೆ ತುಂಬಿದರು ಅಪ್ಪ-ಮಗ.

ನಾನು ಬೆದರು ಬೊಂಬೆ, ಸುಮ್ಮನೆ ಹೋಗಿ ಕುಳಿತೆ. ಸುಸ್ತಾದ ದೇಹದಲ್ಲಿ ಸಪ್ಪೆಯಾಗಿ ಕುಳಿತಿರಬೇಕಾದರೆ ನಮ್ಮ ಚಾಲಕ ಚೇತನ್ ಗೌಡರು ‘ಸಾರ್ ಈಗೊಂದು ತಮಾಷೆ ಆಯ್ತು ಗೊತ್ತಾ’ ಎಂದು ಮಾತು ಶುರು ಮಾಡಿದರು. ಕಿವಿ ಚುರುಕಾಯಿತು!

‘ಏನು ಗೊತ್ತಾ ಸಾರ್, ನಾನು ಮಂಡ್ಯದವನು. ಬೆಂಗ್ಳೂರಲ್ಲಿ ಒಂದಿಷ್ಟು ಜನ ರೂಮ್ ಮಾಡ್ಕೊಂಡು ಟ್ಯಾಕ್ಸಿ ಓಡುಸ್ತೀವಿ’ ಎನ್ನುವುದರಲ್ಲಿ ನಾನು ‘ಮತ್ತೆ ಹೆಂಡಿರು, ಮಕ್ಕಳು?’ ಎಂದೆ. ‘ಅವರೆಲ್ಲ ಊರಲ್ಲೇ ಮೇಡಂ. ಇಲ್ಲಿ ಮೇಂಟೇನ್ ಮಾಡಕ್ಕೆ ಆಗಲ್ಲ’ ಎಂದು ಸಪ್ಪೆ ದನಿಯಲ್ಲಿ ಹೇಳಿದವನು ಎರಡೇ ಸೆಕೆಂಡಿನಲ್ಲಿ ಅದನ್ನು ಮರೆತು ‘ಇಲ್ಕೇಳಿ! ಇವತ್ತು ರಾತ್ರಿ ಟ್ರಿಪ್ ಬಂತಲ್ಲ, ನಿದ್ದೆ ಕೆಡ್ಬೇಕಾಗತ್ತೆ. ಸಲ್ಪ ಹೊತ್ತಾದ್ರೂ ಮಲಕ್ಕೊಳಣ ಅಂತ ಮಲಗಿದ್ನಾ. ನನ್ ರೂಮ್ಮೇಟು ಬಂದ. ನಾನು ಮಲಗಿದ್ದು ನೋಡಿ ಟ್ರಿಪ್ ಇದ್ಯಾ ಅಂದ. ಹೂ ಅಂದೆ. ಅವನು ನಂಗೂ ಅದೆ, ಅದಕ್ಕೇ ಮಲಕ್ಕೊಳಣ ಅಂತ ಬಂದೆ ಅಂದ. ಆಮೇಲೆ ಎಷ್ಟು ಹೊತ್ಗೆ ಹೋಗ್ಬೇಕು ಅಂದ. ನಾನು 11ಕ್ಕೆ ಅಂದೆ. ಓ ನಿಂಗೂ ಹನ್ನೊಂದೇಯಾ… ನಂದೂ ಅದೇ ಟೈಮು ಅಂದ ಅವ್ನು.

ಆಮೇಲೆ ಎಲ್ಲಿಂದ ಟ್ರಿಪ್ಪು ಅಂದ. ನಾನು ಬಸವೇಶ್ವರ ನಗರ ಅಂದೆ. ಅವ್ನು ಅಯ್ಯ ನಂದೂ ಅಲ್ಲಿಂದ್ಲೇ ಕಣಾ ಅಂದ. ಆಮೇಲೆ ಸರಿ ಹೋಗುವಾಗ ಒಂದಿಷ್ಟು ದೂರ ಒಟ್ಗೇ ಹೋದ್ರಾಯ್ತು ಅಂತ ಎಲ್ಲಿ ಮನೆ ಅಂದೆ. ಅಡ್ರೆಸ್ ಹೇಳ್ದ. ಸಾರ್, ನೋಡಿದ್ರೆ ಅದೂ ನನ್ನ ಅಡ್ರೆಸ್ಸೇ! ಅಯ್ಯೋ ಥು ಇದೇನೋ ಎಡವಟ್ಟಾಯ್ತಲ್ಲಪ್ಪ, ಮರೆತು ಎರಡು ಗಾಡಿ ಮಾಡಿಬಿಟ್ಟವರೇನೋ ಅಂತ ಬೇಜಾರಾಯ್ತು. ಟ್ರಿಪ್ ಸಿಕ್ಬುಟ್ಟೂ ಹಿಂಗೆ ಕ್ಯಾನ್ಸಲ್ ಆದ್ರೆ ಬೇಜಾರಾಗತ್ತೆ ಸಾರ್. ನಾನು ತಲೆ ಕೆಟ್ಟೋಗಿ ನೋಡಪ್ಪ ಇವತ್ತು ನಾನೇ ಹೋಗ್ತೀನಿ. ನಿಂಗೆ ಬಿಟ್ ಕೊಡಲ್ಲ ಅಂದೆ. ಅವನಿಗೂ ಇವತ್ತು ನೆಟ್ಟಗೆ ಟ್ರಿಪ್ ಸಿಕ್ಕಿರಲಿಲ್ಲವಂತೆ. ಅದಕ್ಕೇ ಇಲ್ಲ ಕಣಪ್ಪಾ ನಾನು ಹೋಗೋದೇಯಾ ಅಂದ್ಬಿಟ್ಟ. ನಂಗೆ ಸಿಟ್ಟು ಬಂತು. ಮೊದ್ಲೆಲ್ಲ ಬಿಟ್ ಕೊಟ್ಟಿದ್ನಲ್ಲ ಅದ್ನೆಲ್ಲ ಗ್ನಾಪಿಸಿ ಈಗ ನೀನು ಬಿಟ್ಕೊಡು ಈ ಸಲ ಅಂದೆ. ಅವನು ಬಿಟ್ಕೊಡ್ತಿದ್ದೆ ಕಣಾ, ಆದ್ರೆ ಇವತ್ತು ಬಿಜಿನೆಸ್ ಆಗಿಲ್ಲ ಅಂತಿಲ್ವಾ’ ಅಂದ.

ಕೊನೆಗೆ ಇಬ್ರೂ ಇದು ಬಗೆ ಹರಿಯಲ್ಲ ಅಂತ ಕಂಪನಿಗೆ ಫೋನ್ ಮಾಡಿದ್ವಿ, ಅವರೇ ತೀರ್ಮಾನ ತಗೊಳ್ಳಲಿ ಅಂತ. ನಮ್ ಗೋಳೆಲ್ಲ ಕೇಳವರ್ಗೂ ಕೇಳಿ ಆಮೇಲೆ ಎರ್ಡು ಗಾಡಿ ಹೇಳವ್ರೆ ಕಣಾ. ತೆಪ್ಗೆ ಎದ್ದೋಗಿ ಇಬ್ರೂ ಅಂದ್ರು! ನಮ್ಗದು ಹೊಳ್ದಿರ್ಲೇ ಇಲ್ಲ ಸಾರ್. ಆಮೇಲೆ ನಕ್ಕೋತಾ ಕುಂತ್ಕೊಳೋ ಹೊತ್ಗೆ ಹೊರ್ಡೋ ಟೈಮೇ ಆಯ್ತು. ನಿದ್ದೆ ಇಲ್ಲ, ಪದ್ದೆ ಇಲ್ಲ, ಎದ್ದು ಬಂದ್ವಿ…’ ಕೇಳುತ್ತಿದ್ದ ನಮಗೆ ನಗು ನಗು ಇದೊಂಥರಾ ‘ಕಾಮೆಡಿ ಆಫ್ ಎರರ್ಸ್’ ಆಯಿತಲ್ಲ ಅಂತ.

ಹಾಗೇ ಮಾತನಾಡುತ್ತಿರುವಾಗಲೇ ರಾತ್ರಿಯ ಸಮಯವಾದ್ದರಿಂದ ಹೆಚ್ಚು ಟ್ರಾಫಿಕ್ ಇರಲಿಲ್ಲವಾದ ಕಾರಣ ಬೇಗನೇ ಏರ್‌ಪೋರ್ಟ್ ತಲುಪಿಸಿದರು. ‘ಬರೋ ದಿನ ಫೋನ್ ಮಾಡಿ ಸಾರ್, ನಾನೇ ಬರ್ತೀನಿ’ ಎಂದು ಹೊರಟರು ಮಂಡ್ಯದ ಗಂಡು. ಪ್ರತಿಬಾರಿಯೂ ಹೀಗೆ ಡ್ರಾಪ್ ಮಾಡುವ ಚಾಲಕರು ಇದೇ ಮಾತನ್ನು ಹೇಳಿದ್ದಾರೆ. ಆದರೆ ಹಿಂದಿರುಗಿ ಬರುವಾಗ ಎಷ್ಟು ಸುಸ್ತಾಗಿರುತ್ತದೆಂದರೆ ಬರುವ ದಿನ ಎಂದಿಗೂ ಅವರಿಗೆ ಕಾಲ್ ಮಾಡುವುದು ನೆನಪಾಗದೇ, ಯಾವಾಗಲೂ ಏರ್‌ಪೋರ್ಟ್ ಟ್ಯಾಕ್ಸಿಯಲ್ಲೇ ಬರುವುದು!

ಎಂದಿನಂತೆ ಚೆಕ್ ಇನ್, ಎಮಿಗ್ರೇಷನ್, ಸೆಕ್ಯುರಿಟಿ ಚೆಕ್ ಎಲ್ಲ ಮುಗಿಸುವುದರಲ್ಲಿ ಸಾಕು ಸಾಕಾಗಿತ್ತು ನನಗೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತಿರುವುದು ಆಯಾಸವಾದಂತೆನಿಸಿತ್ತು. ಇನ್ನೇನು ಫ್ಲೈಟ್ ಹತ್ತಿ ಬಿದ್ದುಕೊಂಡರೆ ಸಾಕು ಅನ್ನಿಸುತ್ತಿತ್ತು. ಊಟ ಬಂದರೆ ಆ ನಡುರಾತ್ರಿಯ ದೆವ್ವದ ಊಟಕ್ಕೆ ಏಳಬೇಕಲ್ಲ ಎಂದು ಸಂಕಟವಾಗಿ, ಅಲ್ಲಿಯೇ ಒಂದು ರೆಸ್ಟೊರೆಂಟ್‌ನಲ್ಲಿ ಒಂದು ಕೊಳಗ hot and sour ಬಿಸಿ ಬಿಸಿ ಸೂಪು ಕುಡಿದೆ.

ಆ ಖಾರಕ್ಕೆ ಬೆವರು ಕಿತ್ತು ಹರಿದು ಒಂಥರಾ ಹಿತವೆನ್ನಿಸಿತು. ಜೊತೆ ಮೂಗಿನಲ್ಲಿಯೂ ಕಟ್ಟಿಕೊಂಡಿದ್ದು ಹೊರಬಂದು ಹಾಯೆನಿಸಿತು. ಒಂದು ಹತ್ತು ಟಿಷ್ಯೂಗಳನ್ನು ಸಿಂಬಳದಿಂದ ಕೃತಾರ್ಥಳಾಗಿಸಿದೆ. ನಂತರ ರೆಸ್ಟ್ ರೂಮ್ ಕೆಲಸವನ್ನೂ ಮುಗಿಸಿದೆ. ಒಟ್ಟಾರೆ ವಿಮಾನ ಏರಿದ ಕೂಡಲೇ ನಿದ್ದೆ ಹೊಡೆಯಲು ಭೂಮಿಕೆ ಸಿದ್ಧ ಮಾಡಿದೆ. ಹೀಗೆ ಒಂದೂ ಕೆಲಸ ಬಾಕಿ ಉಳಿಯದಂತೆ ಮಾಡಿ ಮುಗಿಸಿ ಗೇಟಿನ ಬಳಿ ಕಾದು ಕುಳಿತೆವು.

ಇಷ್ಟೆಲ್ಲ ಆಗುವುದರಲ್ಲಿ ಸಮಯ 1.45 ಇರಬೇಕು. 2.30ಕ್ಕೆ ಗೇಟ್ ತೆರೆಯುತ್ತಾರೆ ಎಂದು ಕಾದು ಕುಳಿತೆವು. 3 ಘಂಟೆಗೆ ವಿಮಾನ ಹೊರಡಬೇಕು. ಇನ್ನೂ ಮುಕ್ಕಾಲು ಘಂಟೆ ಅಂತ ಒದ್ದಾಡಿಕೊಳ್ಳುತ್ತ ಕುಳಿತೆ. ಹಾಗೇ ಸಮಯ ಸರಿಯಿತು. 2.30 ದಾಟಿತು. ಮೇಲೆ ಮತ್ತೂ ಹದಿನೈದು ನಿಮಿಷ ಸರಿಯಿತು. ಬೋರ್ಡಿಂಗ್ ಕರೆ ಬರಲೇ ಇಲ್ಲ! ಕಾದು ಕುಳಿತಿದ್ದ ಪ್ರಯಾಣಿಕರಲ್ಲಿ ಚಡಪಡಿಕೆ ಶುರುವಾಯಿತು.

ಒಂದೊಂದು ಕ್ಷಣವೂ ಯುಗ ಅನ್ನಿಸುವುದು ಭೇಟಿಯಾಗಬೇಕಾದ ಪ್ರೇಮಿಗಳಿಗೆ ಮಾತ್ರವಲ್ಲ, ನಡುರಾತ್ರಿಯಲ್ಲಿ ವಿಮಾನಕ್ಕೆ ಕಾಯುತ್ತಿರುವವರಿಗೆ ಕೂಡಾ! ಒಬ್ಬೊಬ್ಬರಾಗಿ ಎದ್ದು ಅತ್ತಿಂದಿತ್ತ ಏನಾಯಿತು ಎಂದು ವಿಚಾರಿಸುವಾಗಲೇ ಇದ್ದಕ್ಕಿದ್ದಂತೆ ವಿಜ್ಞಾಪನೆ ‘ವಿಮಾನದ ಬಾಲದ ಹತ್ತಿರ ಅದೇನೋ ಜಖಂ ಆಗಿ ವಿಮಾನ ಗುಜರಿ ಸೇರಿದೆ’ ಎಂದು. ಇದೊಂದು ಬಾಕಿ ಇತ್ತಪ್ಪ ಎಂದುಕೊಂಡರೂ ತೀರಾ ಕಂಗಾಲಾಗಲಿಲ್ಲ.

ಯಾಕೆಂದರೆ ನಾನು ನಮ್ಮ ದೇಶದ ಬಸ್‌ಗಳಂತೆ ಒಂದು ಬಸ್ ಬರದಿದ್ದರೆ ಅದರ ಬದಲು ಇನ್ನೊಂದು ಬಸ್ ಹಾಕುತ್ತಾರೆ ಎಂದುಕೊಂಡಿದ್ದೆ! ಹಾಗಾಗಿ ಹೊರಡುವುದು ಸ್ವಲ್ಪ ತಡವಾಗಬಹುದಷ್ಟೇ, ಇನ್ನೊಂದು ವಿಮಾನ ಬರಲು ಎಷ್ಟು ಸಮಯವಾಗುತ್ತದೋ ಅಂತ ಯೋಚಿಸುತ್ತ ಕುಳಿತೆ. ಅಷ್ಟರಲ್ಲಿ ಮತ್ತೊಂದು ವಿಜ್ಞಾಪನೆ ವಿಮಾನ ಕ್ಯಾನ್ಸಲ್ ಆಗಿದೆ ಎಂದು!!

ನಾವು ತಲೆ ಮೇಲೆ ಕೈಹೊತ್ತು ಕುಳಿತೆವು.
ಏನು ಮಾಡಬೇಕು ತಿಳಿಯುತ್ತಿಲ್ಲ
ನನಗೆ ಜಗಳವಾಡಬೇಕು ಅನ್ನಿಸುತ್ತಿದೆ ಆದರೆ, ಹೇಗೆ ಜಗಳವಾಡಲಿ..?
ಕನ್ನಡ ಮೀಡಿಯಂ ನಾನು, ಇಂಗ್ಲಿಷಿ‌ನಲ್ಲಿ ಜಗಳಕ್ಕಿಳಿದರೆ ಎರಡೇ ನಿಮಿಷದಲ್ಲಿ ನನ್ನ ಪದಸಂಪತ್ತೆಲ್ಲ ಕರಗಿ ಹೋಗುತ್ತದೆ!
ಸಾಲದ್ದಕ್ಕೆ ಬೇರೆಬೇರೆ ದೇಶದ ಅತ್ಯಂತ ಸಂಭಾವಿತ ಪ್ರಜೆಗಳೆದುರು ಹೇಗೆ ಜಗಳವಾಡುವುದು!
ಅಯ್ಯೋ ಆದರೆ ಜಗಳವಾಡದೇ ಹೇಗೆ ಸುಮ್ಮನಿರುವುದು!

ಹೀಗೆಲ್ಲ ಒದ್ದಾಡಿಕೊಳ್ಳುತ್ತಿರುವಾಗಲೇ ಮೊಬೈಲ್‌ನಲ್ಲಿ ಮೆಲುದನಿಯಲ್ಲಿ ಮಾತನಾಡುತ್ತ, ಲ್ಯಾಪ್‌ಟಾಪ್‌ನಲ್ಲಿ ಏನೋ ಕೆಲಸ ನೋಡಿಕೊಳ್ಳುತ್ತಾ, ಕ್ಯಾಪುಚಿನೋ ಕುಡಿಯುತ್ತಾ, ಸ್ಯಾಂಡ್ವಿಚ್ ತಿನ್ನುತ್ತಾ ಕುಳಿತಿದ್ದ ನಾಗರಿಕ ಜನಗಳೆಲ್ಲ ತೋಳು ತೋಳು ಮಡಚಿ ಎದ್ದೇ ಬಿಟ್ಟರು ದೊಡ್ಡ ಗಂಟಲಿನಲ್ಲಿ ಮಾತನಾಡುತ್ತಾ!

ಎಲ್ಲರೂ ತಮ್ಮ ಮುಖವಾಡ ಕಳಚಿಟ್ಟು ಜೋರಾಗಿ ಕೂಗಾಡುತ್ತಾ ಕೌಂಟರ್‌ನತ್ತ ಧಾವಿಸಿದರು!
ಎರಡು ನಿಮಿಷದಲ್ಲಿ ಸದಾ sophisticated ಆಗಿರುವ ವಿಮಾನ ನಿಲ್ದಾಣ ನಮ್ಮ ಕೆ ಆರ್ ಮಾರ್ಕೆಟ್‌ ರೂಪ ತಳೆಯಿತು!
ಯಾರು ಯಾವ ಭಾಷೆಯಲ್ಲಿ ಕಿರುಚುತ್ತಿದ್ದರು ಎಂದು ಯಾರಿಗೆ ಕೇಳಿಸಬೇಕು?
ಅದನ್ನು ನೋಡಿ ನನಗೂ ರಣೋತ್ಸಾಹ ಮೂಡಿತು.
ನಾನೂ ಉತ್ಸಾಹಿತಳಾಗಿ ಅಲ್ಲಿ ಧಾವಿಸಿದೆ ಮಗನೊಡನೆ.
ಪೆದ್ದುಕಳೆ ಹೊತ್ತ ವಿಮಾನದ ಸಿಬ್ಬಂದಿ ಒಂದು ಕಡೆಯಾದರೆ, ಏನೇನೂ ಸಬೂಬನ್ನು ಕೇಳ ಬಯಸದ ನಾವು ಇನ್ನೊಂದು ಕಡೆ.

‘ಇದು ಅನ್ಯಾಯ’
‘ಹೀಗೆ ಮಾಡಿದರೆ ಏನು ಮಾಡಬೇಕು’
‘ನಮ್ಮ ಮುಂದಿನ ಪ್ರಯಾಣ ನಾಶವಾಗುತ್ತದೆ’
‘ಇವತ್ತು ವ್ರೋಟ್‌ಜ಼್ವಾಗೆ ಹೋಗದಿದ್ದರೆ ನಾಳೆ ಹೋಗಿಯೂ ಪ್ರಯೋಜನವಿಲ್ಲ. ತಲುಪುವುದರಲ್ಲಿ ನಾಡಿದ್ದು ಆಗಿ ಬಿಡುತ್ತದೆ. ಆಮೇಲೆ ಅವತ್ತೇ ಮತ್ತೆ ಕ್ರಾಕೋವ್‌ಗೆ ಹೊರಡಬೇಕು. ಹಾಗಾಗಿ ವ್ರೋಟ್‌ಜ಼್ವಾಗೆ ಹೋಗುವುದೇ ವ್ಯರ್ಥ. ಈಗೇನು ಮಾಡಬೇಕು’
ಮೊದಲೇ ಏಳದ ದನಿ ಈ ಕಿರುಚಾಟದಿಂದ ಹೂತುಹೋಯಿತು ಎಂಬುದಷ್ಟೇ ನನ್ನ ಆ ಕ್ಷಣದ ಸಾಧನೆ.
ಕೇಳಿಸಿಕೊಂಡ ಹುಡುಗ ಎಂದಿನ ಶೈಲಿಯಲ್ಲಿ,
I do understand your problem madam. Give us some time’
‘we will do our best to resolve this madam’
ಎಂದಿನ ಮಾರ್ಕೆಟಿಂಗ್ ಶೈಲಿಯ ಸಮಜಾಯಿಷಿ.

ಅಷ್ಟರಲ್ಲಿ ಪಕ್ಕದವರು ‘ನಮ್ಮದು ನಾಳೆಯೇ ಕಾನ್ಸರ್ಟ್ ಇದೆ, ನಾನು ಹೋಗಲೇಬೇಕು. ಟಿಕೆಟ್ ಎಲ್ಲ ಮಾರಾಟವಾಗಿ ಬಿಟ್ಟಿದೆ’
ಇನ್ನೊಬ್ಬರು ‘ನನ್ನ ಆಫೀಸಿನ ಅತಿ ಮುಖ್ಯವಾದ ಮೀಟಿಂಗ್ ಇದೆ, ನಾನು ಹೋಗಲೇಬೇಕು’
ಮಗದೊಬ್ಬರು ‘ಮದುವೆಗೆಂದು ಹೊರಟಿದ್ದೆವು’
ಇನ್ನೊಬ್ಬ ತರುಣ ‘ಪುಟ್ಟ ಮಕ್ಕಳು ಎರಡೂ, ಅವರನ್ನು ಹೇಗೆ ಸಂಭಾಳಿಸಲಿ’
ಹೀಗೇ ಕಿರುಚಾಡಲು ಶುರು ಮಾಡಿದರು.

ಸಿಬ್ಬಂದಿಯ ಮತ್ತದೇ ‘I do understand your problem sir/madam. Give us some time’
`we will do our best to resolve this sir/madam’ ಉತ್ತರಗಳು…
ಜಗತ್ತಿನಲ್ಲಿ ನಮ್ಮಷ್ಟು ತೊಂದರೆಗೊಳಗಾದವರು ಬೇರೆ ಯಾರೂ ಇಲ್ಲ ಎನ್ನುವ ರೀತಿಯಲ್ಲಿ ಕಿರುಚಾಡುತ್ತಿದ್ದ ನಾನು ಬೆಪ್ಪಾದೆ.
ಎಲ್ಲರಿಗೂ ಅವರವರದ್ದೇ ಸಮಸ್ಯೆಗಳು…

ಕೊನೆಯ ಅಸ್ತ್ರವಾಗಿ ‘ಏ ಮೊದಲೇ ಹೇಳಕ್ಕೇನಾಗಿತ್ತು ನಿಮಗೆ. ಈ ಕಡೆ ಘಳಿಗೆಯಲ್ಲಿ ಈ ರೀತಿ ಮಾಡಿದಿರಲ್ಲ’ ಎಂದು ಮಹಾ ಸವಾಲೆಸೆದರೆ,
‘ನಮಗೆ ಗೊತ್ತಾಗಿದ್ದೇ ಈಗ’ ಅನ್ನುವ ಉತ್ತರ ಬಂತು!
ಇದಕ್ಕೆ ಇನ್ನೇನು ಉತ್ತರಿಸಲು ಸಾಧ್ಯ?
ಅಷ್ಟು ಹೊತ್ತಿನಲ್ಲಿ ನನ್ನ ಗಂಟಲು ಕುಸಿಯಲು ಶುರುವಾಯಿತು. ನಾನು ಜಗಳ ನಿಲ್ಲಿಸಿ ಮಂಕಾಗಿ ನಿಂತು ಬಿಟ್ಟೆ.
ಆ ಕ್ಷಣದಲ್ಲಿ ಸುಮಾರು ಪ್ರಯಾಣಿಕರಿಗೆ ಜಗಳವಾಡುವುದು ವ್ಯರ್ಥ ಎನ್ನುವ ಜ್ಞಾನೋದಯವಾಗಲು ಶುರುವಾಯಿತು.
ಹತಾಶರಾಗಿ ‘ಮುಂದ???’ ಅಂದೆವು.
ಎಂತ ಮುಂದ?
ಮುಂದಾನು ಇರಲಿಲ್ಲ, ಹಿಂದಾನು ಇರಲಿಲ್ಲ‌… ಸಾರಿ ಸಾರಿ ಹಿಂದ ಇತ್ತು! ವಾಪಸ್ ಬರಬೇಕಿತ್ತಲ್ಲ ಮನೆಗೆ!
ನಾವು ಮುಂದ?? ಅನ್ನುವ ಹತಾಶ ಸ್ಥಿತಿ ತಲುಪುವುದಕ್ಕಾಗೇ ಕಾಯುತ್ತಿದ್ದವರಂತೆ ಏರ್‌ಲೈನ್ಸ್ ಸಿಬ್ಬಂದಿ ಕಾದ ಕಬ್ಬಿಣ ಬಡೆಯುವ ಕಮ್ಮಾರರಾದರು.

‘ಈಗಾ… ಮತ್ತೇ… ಒಂದು ಕೆಲಸ ಮಾಡಿ! ಈ ಬಾಗಿಲಿನಿಂದ ಹೊರಟು ಎಡಕ್ಕೆ ಇಳಿದು ಸಾಗಿ. ಕೆಳಗೆ ಭೇಟಿಯಾಗೋಣ. ಈಗ ಜಾಣರಂತೆ ಬಾಗಿಲಿನ ಹತ್ತಿರ ನಿಂತವರಿಗೆ ನಿಮ್ಮ ಬೋರ್ಡಿಂಗ್ ಪಾಸ್ ಕೊಡಿ’ ಎಂದರು. ಬೆಳಗಿನ ಜಾವ ನಾಲ್ಕು ಘಂಟೆ. ನಿದ್ರೆಯಿಲ್ಲದೆ ಪ್ರೇತಾತ್ಮಗಳಂತಿದ್ದ ನಾವು ಏನೂ ಅರ್ಥವಾಗದೇ ಬೋರ್ಡಿಂಗ್ ಪಾಸ್ ಹಿಂತಿರುಗಿಸಿದೆವು.

ಗೇಟಿನ ಒಳಗೆ ನಮ್ಮನ್ನು ಬಿಟ್ಟವರು ‘ಅಲ್ಲಿ ಹೋಗಿ ಎಮಿಗ್ರೇಷನ್‌ನಲ್ಲಿ ರಿಪೋರ್ಟ್ ಮಾಡಿಕೊಂಡು ಅಲ್ಲಿನ formalities ಮುಗಿಸಿ ಮತ್ತೆ ನಿಮ್ಮ ಲಗೇಜ್ ತೆಗೆದುಕೊಂಡು ನಿಂತಿರಿ. ಅಷ್ಟರಲ್ಲಿ ನಾವು ಬರುತ್ತೇವೆ ಮುಂದಿನ ವ್ಯವಸ್ಥೆ ಮಾಡಲು’ ಎಂದರು.

ಏನು ವ್ಯವಸ್ಥೆ ಅಂತಲೂ ಕೇಳದೆ ತಲೆ ಅಲ್ಲಾಡಿಸಿ ಇಳಿದೆವು. ಸಿನೆಮಾಗಳಲ್ಲಿ ರೀಲ್ ಹಿಂದಕ್ಕೆ ಓಡಿಸುತ್ತಾರಲ್ಲ ಕಿಚಿಕಿಚಿ ಎನ್ನುತ್ತ… ಹಾಗೆ ನಾವು ಬೋರ್ಡಿಂಗ್ ಪಾಸ್ ವಾಪಸ್ ನೀಡಿ, ನಮಗಾಗಿ ತೆರೆದ ಮೂರು ಪಿಟಕಲಾರಿ ಎಮಿಗ್ರೇಷನ್‌ ಕೌಂಟರಿನೆದುರು ಮುನ್ನೂರ ಅರವತ್ತು ಜನ ಶಪಿಸುತ್ತ, ತೂಕಡಿಸುತ್ತ ನಿಂತೆವು.

ಆ ಕೌಂಟರಿನವರಿನವರಿಗೋ ಅದು extra duty ಅಷ್ಟೇ. ನಮಗಾದ ತೊಂದರೆಯ ಬಗ್ಗೆ ಒಂದು ಸ್ವಲ್ಪವೂ ಕರುಣೆಯಿಲ್ಲದೆ ಆ ಕ್ಷಣದಲ್ಲಿಯೂ rules, regulations ಮಾತಾಡತೊಡಗಿದರು. ಇಕ್ಕಟ್ಟಿನ ಮೂರು ಕ್ಯೂ ಹತ್ತಾರು ಕವಲುಗಳಾಗಿದ್ದನ್ನು ಗಮನಿಸಿ ಸಾಲಾಗಿ ಬರದಿದ್ದರೆ ಕೌಂಟರ್‌ ಮುಚ್ಚಿ ಎದ್ದು ಹೊರಟೋಗ್ತೀವಿ ಅನ್ನುವ ಬೆದರಿಕೆ ಹಾಕಿದರು.

ನಾವು ಹಲ್ಲುಮುಡಿ ಕಚ್ಚಿ ನಿಂತೆವು. ಥು ಕರ್ಮ ಅಂತೂ ಆ ದರಿದ್ರ ಎಮಿಗ್ರೇಷನ್ ಕ್ಯಾನ್ಸಲ್ ಮಾಡಿಸಿ, ನಂತರ ಲಗೇಜ್ ವಾಪಸ್ ಪಡೆದು, ಕೆಳಗಿನ ಹಾಲ್‌ಗೆ ಬರುವುದರಲ್ಲಿ ಎಲ್ಲರೂ ಜಮಾಯಿಸಿ ಆಗಿತ್ತು. ಇನ್ನೇನು ಅವರು ಹೇಳಿದಂತೆ ಎಲ್ಲ ಮಾಡಿದ್ದೀವಿ ಗುಡ್ ಬಾಯ್ಸ್ ಅಂಡ್ ಗುಡ್ ಗರ್ಲ್ಸ್. ಇನ್ನು ರಾಮನಗರ, ಮಂಡ್ಯ, ಮದ್ದೂರ್ ಮದ್ದೂರ್… ಅಂತ ಕೂಗುತ್ತಾ ವಿಮಾನವೊಂದು ಬಂದೇ ಬಿಡುತ್ತದೆ ಅನ್ನುವ ಆಶಾವಾದದಲ್ಲಿ ನಿಂತೆವು.

ಉದ್ದನೆಯ ಸಾಲಿನಲ್ಲಿ ನಾವು ನಿಲ್ಲುವುದರಲ್ಲಿ ಆ ಮೊದಲ ಕ್ಷಣದ ಶಾಕ್ ಸ್ವಲ್ಪ ಇಳಿದು, ಇಂಥ ಕ್ಷಣದಲ್ಲಿ ವ್ಯಗ್ರಗೊಂಡರೆ ಏನೂ ಪ್ರಯೋಜನವಿಲ್ಲ ಎನ್ನುವ ಅರಿವಿನಲ್ಲಿ ನಿಂತೆವು. ಮುಂದೆ ನಿಂತಿದ್ದ ಜರ್ಮನ್ ಗಂಡಸೊಬ್ಬರು ವಾತಾವರಣ ತಿಳಿಗೊಳಿಸುವಂತೆ ಎಲ್ಲರ ಜೊತೆ ಮಾತನಾಡಲು ಶುರು ಮಾಡಿದರು.

ನೀವೆಲ್ಲಿಗೆ, ನೀವೆಲ್ಲಿಗೆ ಎಂದು ಎಲ್ಲರನ್ನೂ ವಿಚಾರಿಸುತ್ತ ನಿಂತರು. ನಾನು ‘ನೀವೆಲ್ಲಿಗೆ’ ಎಂದೆ. ‘ನಾನು ಮ್ಯೂನಿಕ್‌ಗೆ ಹೋಗಬೇಕು. ನನ್ನ ಮನೆ ಅಲ್ಲಿಯೇ. ತಡವಾದರೂ ತಲೆ ಹೋಗುವಂಥದ್ದೇನಿಲ್ಲ’ ಎಂದರು.

ಮುಂದೆ ಕಾನ್ಸರ್ಟ್‌ಗೆ ಹೊರಟಿದ್ದ ತಂಡ ‘ಟಿಕೆಟ್ ಮಾರಿಯಾಗಿದೆ. ಈಗ ಎಲ್ಲ ರಿಫಂಡ್ ಮಾಡುವುದೊಂದೇ ದಾರಿಯೇನೋ’ ಎಂದು ಹೇಳುತ್ತಾ ನಿಂತರು.

ಪಕ್ಕದಲ್ಲಿ ನಿಂತಿದ್ದ ಹುಡುಗಿ ಮಾತ್ರ ಇನ್ನೂ ಕೆಂಡ ಕಾರುತ್ತಾ ‘ನಾನ್‌ಸೆನ್ಸ್’ ‘ಓಹ್ ಬ್ಲಡಿ ಶಿಟ್’ ಅಂತೇನೇನೋ ಬಯ್ದುಕೊಳ್ಳುತ್ತಾ ನಿಂತಿದ್ದಳು.

ಮುಂದೆ ನಿಂತಿದ್ದ ಹೆಣ್ಣುಮಗಳೊಬ್ಬಳು ‘ಏ ವಿಮಾನ ಏರೋ ಮೊದಲೇ ಸಮಸ್ಯೆ ಗೊತ್ತಾಗಿದ್ದೇ ಒಳ್ಳೇದಲ್ವಾ, ಮೇಲೆ ಹೋದಮೇಲೆ ಗೊತ್ತಾಗಿದ್ದರೆ ಏನು ಗತಿ’ ಎನ್ನುತ್ತ ಮೋಟಿವೇಷನಲ್ ಸ್ಪೀಚ್ ಕೊಡುತ್ತ, ನಗುತ್ತಾ ನಿಂತಳು.

ಒಂದು ಸಂದರ್ಭಕ್ಕೆ ಬೇರೆ-ಬೇರೆಯವರು ಬೇರೆ ಬೇರೆ ಅದೆಷ್ಟು ಬಗೆಯಲ್ಲಿ ಪ್ರತಿಕ್ರಿಯಿಸುತ್ತೇವೆ ಅಲ್ಲವೇ? ಎಂದು ನಾನು ಬೆರಗುಗೊಳ್ಳುತ್ತ ನಿಂತೆ.

| ಮುಂದಿನ ವಾರಕ್ಕೆ |

‍ಲೇಖಕರು ಬಿ ವಿ ಭಾರತಿ

September 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Mallikarjuna Hosapalya

    ಒಂದು ರೀತಿಯಲ್ಲಿ ತಮಾಶೆ ಹಾಗೂ ಕುತೂಹಲಕಾರಿಯಾಗಿದೆ. ಆದರೆ ನಾನು ಓದಿರುವ ಬಹುತೇಕ ಪ್ರವಾಸ ಕಥನಗಳ ಜಾಡೇ ಇಲ್ಲಿಯೂ ಕಂಡು ಕೊಂಚ ನಿರಾಸೆ. ಅಂದರೆ; ಹೊರಡುವ ತಯಾರಿ, ಗಡಿಬಿಡಿ, ಟ್ಯಾಕ್ಸಿ ಕರೆಸುವುದು, ವಿಮಾನ ನಿಲ್ದಾಣದ ಪಡಿಪಾಟಲು, ಊಟ, ಟಾಯ್ಲೆಟ್ಟು, ಇಮಿಗ್ರೇಷನ್ನು ಇತ್ಯಾದಿ. ಈ ವಿವರಗಳೆಲ್ಲಾ ಒಂದೆರಡು ಸಾಲು ಅಥವಾ ಪ್ಯಾರಾ ಬಂದರೆ ಸಾಕಾದೀತೇನೋ. ಯಾಕೆಂದರೆ ಈಗ ವಿದೇಶ ಪ್ರವಾಸ ಸಾಮಾನ್ಯ ಸಂಗತಿ.

    ಪ್ರತಿಕ್ರಿಯೆ
  2. ಭಾರತಿ

    ಓದಿದ್ದಕ್ಕೆ ಖುಷಿಯಾಯ್ತು ಸರ್

    ನೋಡೋಣ ಮುಂದೆ ನಿಮಗಿಷ್ಟ ಆಗುವಂಥದ್ದು ಬರಬಹುದೇನೋ

    ಪ್ರತಿಕ್ರಿಯೆ
  3. ಸುವರ್ಣ

    ಜಗಳ ಅದರಲ್ಲಿ ನಾನೂ ಪೂರ್ ಲೇಖನ ಸರಾಗವಾಗಿ ಓದಿಸಿಕೊಂಡು ಹೋಗುತ್ತಿದೆ

    ಪ್ರತಿಕ್ರಿಯೆ
  4. Bharathi b v

    ಥ್ಯಾಂಕ್ ಯೂ ಸುವರ್ಣ !
    ನಾನು ಜಗಳದಲ್ಲಿ ಪೂರ್ ಇಲ್ಲ, ಇಂಗ್ಲಿಷ್ ಜಗಳದಲ್ಲಿ ಪೂರ್ ಅಷ್ಟೇ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: