ಮಣ್ಣಪಳ್ಳದಲ್ಲೊಂದು ಮೃದು ಕನಸಿದೆ..

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಇಲ್ಲಿನ ಅಸಾಮಾನ್ಯವೆಂದೆನಿಸುವ ಚಿತ್ರಗಳು ಸಾಮಾನ್ಯರ ಹಾಡನ್ನು ಅತೀ ಸಾಮಾನ್ಯವಾಗಿಸಿದೆಯಾದರೂ, ಹೊರ ಗೊರಟು ಮತ್ತು ಒಳ ತಿರುಳಿನ ವೈರುಧ್ಯ ಈ ಊರಿನದ್ದೂ ಲಕ್ಷಣವೇ. ಎದ್ದು ನಿಂತ ಮಹಲುಗಳ ಬದಿಯಲ್ಲೇ ಜೋಪಡಿ ಸಾಲು, ತೂರಾಡುವ ಕಾರುಗಳ ಎಡೆಯಲ್ಲೇ ನಡೆದಾಡುವ ಕೈಗಾಡಿ ಹೀಗೆ. ಇಲ್ಲಿ ಬಾಲ್ಯ ಮತ್ತು ಶಿಕ್ಷಣಕ್ಕೂ ಎರಡು ದಿಕ್ಕಿನ ಚಲನೆಗಳಿವೆ. ಅಕ್ಕಪಕ್ಕದಲ್ಲೇ ಹಾದು ಹೋಗುವ ಈ ಎರಡು ಬದುಕು ಬೇರೆ ಬೇರೆಯದೇ ಅವಶ್ಯಕತೆಗಳೊಂದಿಗೆ ಸಂವಾದಿಸುತ್ತದೆ. ಅದಾಗಿಯೂ ಇವೆರೆಡೂ ದಾರಿ ಸಂಧಿಸಿದರೆ ಮಾತ್ರ ಪೂರ್ಣ.

ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು…

(ಶಂ. ಗು. ಬಿರಾದಾರ)

ಐದನೇ ತರಗತಿಯಲ್ಲಿ ಕಲಿತ ಸಾಲುಗಳನ್ನು ಪ್ರತಿ ಸಾರಿ ನೆನೆಸಿಕೊಳ್ಳುವಾಗಲೂ ಹೊಸತೊಂದು ಅನುಭವ, ಕಲ್ಪನೆ, ವಿಚಾರಗಳನ್ನು ಒಡಗೂಡಿಯೇ ಬರುವುದು. ದೀಪ-ಜ್ಯೋತಿಯರು ಶಾಲೆಗೆ ಹೊರಡುವುದನ್ನ ಪ್ರತಿ ಸಾರಿ ನೋಡುವಾಗಲೂ ಇವೇ ಸಾಲುಗಳನ್ನ ಯಾವ ತ್ರಾಸಿಲ್ಲದೇ ನಾನು ಗುನುಗುವುದು.

ಪ್ರತಿದಿನ ಬೆಳಗ್ಗೆ ನನಗೆ ಮಣ್ಣಪಳ್ಳದ ಸುತ್ತು ಹೊಡೆದು ಬರುವ ದಾರಿಯಲ್ಲೇ ಇದಿರಾಗುತ್ತಿದ್ದ ಮಕ್ಕಳಿಬ್ಬರು. ಒಳ ಮಣಿಪಾಲದ ಅತೀ ಸಾಮಾನ್ಯ ನೋಟದಂತೆ ತಮ್ಮ ಜೋಪಡಿಯ ಹೊರಗೆ ನಿದ್ದೆಗಣ್ಣಲ್ಲಿ ನಿಂತು, ತೋರು ಬೆರಳಿಗೆ ಕೋಲ್ಗೆಟ್ ಹಾಕಿಕೊಂಡು ಗೂಟಕಾಲಲ್ಲಿ ಕುಳಿತಿರುವಾಗಲೇ ನಾನು ಅವರಿಗೆ ಸಿಗುವುದು. ಆಗಲೇ ನನಗೂ ಬೆಳಕಾಗುವುದು.

ಮೊದಲಷ್ಟು ತಿಂಗಳು ಬರಿ ನಗು, ಆಮೇಲೆ ಒಂದಿಷ್ಟು ಮಾತು, ಈಗಂತೂ ನನ್ನ ಬಂದು ತಬ್ಬುವಷ್ಟು ಸಲಿಗೆಯ ಸಂಬಂಧ. ಅವರ ಅಪ್ಪ-ಅಮ್ಮ ಉತ್ತರ ಕರ್ನಾಟಕದಿಂದ ಇವರನ್ನ ಕಟ್ಟಿಕೊಂಡು ಬದುಕನ್ನರಸುತ್ತ ಇಲ್ಲಿಗೆ ಕಾಲಿಟ್ಟವರೇ. ಆದರೆ ಉಳಿದೆಲ್ಲರ ಗುಂಪಲ್ಲಿ ಸೇರದೆ, ಪಳ್ಳಕ್ಕೆ ಹೋಗುವ ದಾರಿಯಲ್ಲಿಯೇ ಒಂಟಿ ಜೋಪಡಿ ಹಾಕಿ ನೆಲೆ ನಿಂತವರು.

ತಮ್ಮ ಮನೆಯಿಂದ ಸುಮಾರು ಅರ್ಧ ಕಿಲೋಮೀಟರು, ರಸ್ತೆಯ ಬದಿಯಲ್ಲೇ ಚೀಲ ಹೆಗಲಿಗೇರಿಸಿ ಅಕ್ಕ-ತಂಗಿ ಏನೋ ಗಹನವಾದದ್ದನ್ನ ಹರಟುತ್ತ ದಾರಿ ಸಾಗಿಸುವುದು ಅಲ್ಲಿನವರೆಲ್ಲರಿಗೂ ನಿತ್ಯ ನೋಟ. ತಮ್ಮಿಂದ ಕೂಗಳತೆಯಲ್ಲೇ ತಮಗಿಂತ ಗರಿಯಾದ ಬಟ್ಟೆಯಲ್ಲೂ ಮತ್ತು ಬಣ್ಣದಲ್ಲೂ ಗೋಚರಿಸುವ, ಶಾಲೆಗೂ ಮನೆಗೂ ಕರೆದೊಯ್ಯುವವರಿರುವ ತಮ್ಮದೇ ವಯಸ್ಸಿನ ಮಕ್ಕಳು ಇವರ ಉತ್ಸಾಹಕ್ಕೆ ತಾಗುವಷ್ಟೂ ಹತ್ತಿರ ಸುಳಿದಿಲ್ಲ.

ಯಾವುದೋ ಒಂದು ಪ್ರಾಜೆಕ್ಟ್ ನ ಹೆಸರಲ್ಲಿ ಇವರ ಸರಕಾರಿ ಶಾಲೆಗೆ ಹೋಗಿ ಮುಟ್ಟಿದ್ದೆ. ಇವರದ್ದೇ ತರಗತಿಯವರನ್ನ ಪಠ್ಯೇತರ ಚಟುವಟಿಕೆಯಲ್ಲಿ ಒಂದಿಷ್ಟು ಒಳ ಮಾಡುವ ಕೆಲಸವದು. ಅಲ್ಲೇ ಈ ಜೀವಗಳು ಇನ್ನಷ್ಟು ಹತ್ತಿರವಾದದ್ದು. ಇಬ್ಬರಿಗೂ ಒಂದೇ ವರ್ಷದ ಅಂತರವಾದರೂ ದೀಪ ಅತೀ ದೊಡ್ಡವಳಂತೆ ಮನೆಯಲ್ಲೂ ಶಾಲೆಯಲ್ಲೂ ಜ್ಯೋತಿಯ ಜವಾಬ್ದಾರಿ ತನ್ನದೆಂಬಂತೆ ಆಡುವವಳು.

‘ಸಾಲು ಮೂರು ಹೆಣ್ಣುಮಕ್ಕಳು’ ಎಂಬ ಮಾತು ಅವರಪ್ಪನ ಮುಖದಲ್ಲಿ ಯಾವಾಗಲೋ ಕಂಡ ನೆನಪಿದೆಯೇ ಹೊರತು ಅವರಮ್ಮ ‘ದುಡಿಯೋದಕ್ಕೆ ಯಾರಾದರೇನು? ಅದರಲ್ಲೂ ನನ್ನ ಮಕ್ಕಳಾ..!’ ಅನ್ನುತ್ತಲೇ ತನ್ನ ದಿನಗೂಲಿಯತ್ತ ನಡೆದಿದ್ದಳು. ಬದುಕಿನ ಜೊತೆಗೆ ಮಕ್ಕಳಿಗೆ ಶಿಕ್ಷಣವೂ ಸುಲಭ ಆದೀತು ಅಂತಲೇ ಈ ಊರಿಗೆ ಬಂದೆವು ಅನ್ನೋದೂ ಅವರ ಮಾತೇ.

ಎಲ್ಲ ಊರಿನಲ್ಲೂ, ಅದೇ ಸ್ಥಿತಿಯಲ್ಲಿ ಕಾಲಾನುಕಾಲದಿಂದ ನಿಂತಿರುವ ಸರಕಾರಿ ಶಾಲೆಗಳಂಥದ್ದೇ ಇವರ ಶಾಲೆ. ನನಗೆ ಕಾಲಳತೆಯ ದೂರದ್ದು ಮತ್ತು ಅದರೊಳಗೆ ತಮ್ಮ ಸುತ್ತಲ ಹಿರಿ ಪ್ರಪಂಚವನ್ನು ಬೆರಗುಗಣ್ಣಿನಲ್ಲೇ ಕಂಡು, ತಮ್ಮ ಲೋಕದಲ್ಲೇ ಕಳೆದು ಹೋಗುವ ಇವರು. ಶಾಲೆಗೆ ಸರ್ಕಾರದ ಜೊತೆ ಜೊತೆಗೆ ಒಂದಿಷ್ಟು ಹಿರೀಕರ ಕೃಪೆ ಇದೆ ಆದರೂ ದೂರದೂರಿಂದ ಬದುಕು ಅರಸಿ ಬಂದವರ ಮಕ್ಕಳಿಗೆ ಮಾತ್ರ ಈ ಶಾಲೆ ಸೀಮಿತ ಅನ್ನುವಂತ ಸ್ಥಿತಿ ಸದ್ಯದ್ದು.

ಓದು, ಒಡನಾಡಿಗರೊಂದಿಗಿನ ಆಟ, ಮಧ್ಯಾಹ್ನದ ಬಿಸಿಯೂಟ ಇವರಿಬ್ಬರನ್ನ ಶಾಲೆಯಲ್ಲಿ ಹಿಡಿದು ಕೂರಿಸಿದ್ದಕ್ಕಿಂತ, ಮನೆಯಲ್ಲಿ ಕುಳಿತರೆ ಅಮ್ಮನ ಕೆಲಸದ ಭಾರ ಹಂಚಿಕ್ಕೊಳ್ಳಬೇಕಾದ ಭಯವೇ ರಜೆಯ ದಿನಗಳನ್ನೂ ಬಯಸದಂತಾಗಿಸಿದ್ದು. ಹತ್ತಿರದಲ್ಲೇ ಇರುವ ಸ್ನೇಹಿತರದ್ದೂ ಇದೇ ಕಥೆಯಾದ್ದರಿಂದ ಶಾಲೆಯನ್ನು ಹೊರತು ಪಡಿಸಿದ ಹೊತ್ತಲ್ಲಿ ಆಟೋಟ ಇವರ ಪಾಲಿಗಿಲ್ಲ. ಪ್ರತಿ ಸಂಜೆ ಹೊತ್ತುವ ಚಿಮಣಿ ದೀಪದಲ್ಲಿ ಕೊಟ್ಟಷ್ಟು ಬರವರ್ಜಿ ಮತ್ತು ಓದನ್ನ ಇಬ್ಬರೂ ಹೇಗೋ ಮುಗಿಸುತ್ತಾರೆ.

ಓದಲು ಕುಳಿತರೆ ಸ್ಪಷ್ಟ ಓದುಗನ್ನಡ, ಹತ್ತಿರದ ಒಡನಾಡಿಗರೊಂದಿಗೆ ತುಳುಗನ್ನಡ, ಮನೆಯ ದಾರಿ ಹಿಡಿಯುತ್ತಲೆ ಉತ್ತರದ ಕನ್ನಡವನ್ನೂ ಸರಾಗವಾಗಿ ಮಾತನಾಡುವ ಇವರುಗಳು ಈ ಸಂಸ್ಕೃತಿಗಳ ಮಿಳಿತವಾಗಿಯೇ ಬೆಳೆದವರು.

ತಮಗಿಂತ ಭಿನ್ನ ಎನ್ನುವಂತಿರುವ ಮಕ್ಕಳ ಗುಂಪಿಗೆ ತಾಗಿಯೇ ಹಾದು ಹೋಗುವಾಗ ಅವರ ಬಾಯಲ್ಲಿನ ಸರಾಗ ಆಂಗ್ಲ ಭಾಷೆ ಮತ್ತು ಅತೀ ಅಪರೂಪಕ್ಕೆ ಹಾದು ಬರುವ ತಮಗೆ ಗೊತ್ತಿರದ ವಿಚಾರಗಳ ಗೋಷ್ಠಿ ‘ಇಲ್ಲದವರ’ ನೋವಿನ ಗೆರೆಯನ್ನು ಅವರ ಕಣ್ಣಲ್ಲಿ ಮೂಡಿಸಿಯೇ ಇಲ್ಲ ಎಂಬುದನ್ನ ಹೇಗೆ ನಂಬಲು ಸಾಧ್ಯ? ಮುಗ್ಧತೆ, ಅವಶ್ಯಕತೆ ಮತ್ತು ಬಾಲ್ಯ ದೀಪ ಮತ್ತು ಜ್ಯೋತಿಯನ್ನ ಶಾಲೆಯ ಪ್ರಪಂಚದಲ್ಲಿ ಇನ್ನೂ ಇರಿಸಿವೆಯೇನೋ. ಅದು ಎಲ್ಲಿವರೆಗೆ ಹೀಗೆಯೇ ನಡೆದೀತು ಎಂಬುದರ ಬಗ್ಗೆ ಅವರಿಗೂ ಯೋಚನೆಗಳಿಲ್ಲ.‌

ಪ್ರತಿ ಬಾರಿ ಮಾತಾಡುವಾಗಲೂ ದೊಡ್ಡವರಾದ ಮೇಲೆ ನಾವು ಇದೇ ಆಗೋದು ಅಂತ ಆಸೆಗಣ್ಣಿಂದ ಮಾತು ಶುರು ಮಾಡುವ ಇವರ ಉತ್ಸಾಹ ಅವರೊಟ್ಟಿಗೂಡುತ್ತಿದ್ದ ಇಷ್ಟು ವರ್ಷ ನನ್ನ ಉತ್ಸಾಹವನ್ನೂ ಜೀವಂತವಿಟ್ಟಿದೆ. ಏನೇ ಆಡಿಸಿದರೂ, ಹಾಡಿಸಿದರೂ ಒಂದು ಹೆಜ್ಜೆ ಮುಂದೆ ಇದ್ದು ಎಲ್ಲವನ್ನು ಒಳಗೊಳ್ಳಿಸಿಕೊಳ್ಳುವ ಅವರ ಹುಮ್ಮಸ್ಸಿಗೆ ಬೇರೆ ಏನನ್ನ ಹೋಲಿಸಲಿಕ್ಕಾಗುತ್ತದೆ?

ತಮ್ಮ ಸುತ್ತಲಿನ, ಬೆಳೆದ ಊರಿಂದ ದೂರಾದ ಇಬ್ಬರು ಒಬ್ಬರನೊಬ್ಬರನ್ನು ನೆಚ್ಚಿಕೊಂಡಂತೆ ಶಾಲೆ ಇವರಿಗೆ ಮತ್ತು ಇವರು ಶಾಲೆಗೆ ಹಿತವರು. ಇಲ್ಲಿ ಯಾರಿಗೆ ಯಾರು ಅವಶ್ಯಕತೆ ಎಂಬುದು ಒಂದೇ ನಿಲುಕಿಗೆ ಅರ್ಥವಾಗದ ಒಡಪು. ಈ ಹೊತ್ತಲ್ಲಿ ಎಲ್ಲೂ ಹೊಂದದ ಜೀವಗಳು ಒಬ್ಬರಿಗೊಬ್ಬರನ್ನು ಆತುಕೊಂಡಿರುವುದು ಮಾತ್ರ ಸತ್ಯ.

ಮಣಿಪಾಲ ಒಂದೇ ನಿಲುಕಿಗೆ ತಿರುಗಾಡಿ ಬರುವಷ್ಟೇ ಸಣ್ಣ ಊರಾದರೂ ಅದರ ಸಂಕೀರ್ಣತೆಯ ಪರಿ ಮತ್ತು ಪರಿಧಿ ಸುಮಾರು ವರ್ಷಗಳು ಇಲ್ಲಿ ನೆಲೆ ನಿಂತು, ಬದುಕಿದವರ ತಿಳಿವಳಿಕೆಗೂ ನಿಲುಕಿಲ್ಲ. ಶಿಕ್ಷಣದ ಸುತ್ತ ಬೆಳೆದು ಹತ್ತಾರು ಸಂಸ್ಥೆಗಳು , ಸಾವಿರಾರು ವಿದ್ಯಾರ್ಥಿಗಳನ್ನ ಒಳಗೊಳ್ಳುತ್ತ ಬೆಳೆಯುತ್ತಿರುವ ಶಹರ.

ಪರವೂರಿಗರಿಗೆ ಶಿಕ್ಷಣದ ಮಹಾನಗರಿ, ಜ್ಞಾನ ಶಾಖೆಗಳ ಉನ್ನತ ಶ್ರೇಣಿಗೆ ಗುರುತಿಸಲ್ಪಡುವ ಊರಿನ ನಟ್ಟ ನಡುವೆ ಈ ಸಾಮಾನ್ಯ ಶಾಲೆಯೂ ಹೊಸ ಕನಸುಗಳನ್ನ ಬೆಳೆಸುತ್ತಾ ಉಳಿದಿದೆ ಎಂಬುದು ಇದೇ ಊರಿಗರಿಗೂ ಗೊತ್ತಿರಲಿಕ್ಕಿಲ್ಲ.

ನಾನು ನೆನೆಸಿಕೊಳ್ಳುವ ಬಿರಾದಾರರ ಅದೇ ಪದ್ಯದ ಮುಂದಿನ ಸಾಲುಗಳು

ನಮ್ಮ ಸುತ್ತಲು ಹೆಣೆದುಕೊಳ್ಳಲಿ
ಸ್ನೇಹ ಪಾಶದ ಬಂಧನ
ಬೆಳಕು ಬೀರಲಿ ಗಂಧ ಹರಡಲಿ
ಉರಿದು ಪ್ರೇಮದ ಚಂದನ…

September 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. SUDHA SHIVARAMA HEGDE

    ಹೌದು ಸುಶ್ಮಿತಾ. ಹಾಗೆ ಬಂದ ಅನಿತಾ ಈ ಸಲ ನಮ್ಮ ಕಾಲೇಜಿನಲ್ಲಿ ಗಳಿಸಿದ ಅಂಕ 579 . ಅದೂ PCMB_ಯಲ್ಲಿ 99%. JEE ಮೊದಲಹಂತದಲ್ಲಿ ಯಶಸ್ವಿ. ಏನೇನೂ ಯೋಚಿಸಬೇಡಿ. ಅವರ ಕನಸ್ಸು ಖಂಡಿತ ಈಡೇರುವದು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: