ಹಿಂದೊಮ್ಮೆ ನಾನು ಹೆಣ್ಣಾಗಿದ್ದೆ..

renuka ramanand
ರೇಣುಕಾ ರಮಾನಂದ್ 

ನಾನೊಂದು ಮರ
ಹಿಂದೊಮ್ಮೆ ಹೆಣ್ಣಾಗಿ ಹುಟ್ಟಿ
ಬೆಂಕಿಯಿಂದ ಬಾಣಲೆಗೂ
ಪುನಃ ಬೆಂಕಿಗೂ ಜಿಗಿವ
the treeತಲೆತಲಾಂತರದ ರೂಢಿಯನ್ನು
ಪರಿಪಾಲಿಸಿಕೊಂಡು ಬಂದವಳು
ದೇಶಾಂತರಕ್ಕೆ ಹೋದ ಮಕ್ಕಳು
ಕೊನೆಯಬಾರಿ ಕಣ್ತುಂಬ ನೋಡಲು ದಕ್ಕದ
ನಿಟ್ಟುಸಿರನ್ನು ಹಾಗೆಯೇ ಬೈತಿಟ್ಟು
ಕ್ಷಯಪೀಡಿತ ಎದೆಗೂಡಿನೊಂದಿಗೆ
ಗಂಟಲು ಕಟ್ಟಿ ಸತ್ತವಳು

ಹೆಣ್ಣೆಂದರೆ ಒಂದು ಹೆಣ್ಣು
ಧಮ೯ದ ಬಗ್ಗೆ ಸುಮ್ಮನೆ
ಯಾಕೆ ತಲೆಕೆಡಿಸಿಕೊಳ್ಳುವಿರಿ
ಒಡಕು ಹಿಮ್ಮಡಿ ಮಾಯಲು ಬಿಡದೇ
ಸದಾ ಭೀತಿಯ ಬಿಚ್ಚುಗೊಡಲಿಯ ಹಿಡಿದು
ಹೆಣ್ಣುಗಳ ದುಡಿಸಿಕೊಳ್ಳುವುದು
ಎಲ್ಲ ಧಮ೯ಗಳ ಜನ್ಮಸಿದ್ಧ ಹಕ್ಕು
ಎಂದು ಎಲ್ಲರೂ ನಂಬಿದ್ದಾರೆ

ಬುಖಾ೯ಗಳು,ಗೌನುಗಳು,ತರಹೇವಾರಿ
ಬಣ್ಣದ ಸೀರೆಗಳು ಮರೆಮಾಡುತ್ತವೆ ನಮ್ಮ
ಒಣಕೆಮ್ಮುಗಳನ್ನು,ಸಪ೯ಸುತ್ತುಗಳನ್ನು
ನೆರೆಹಾವಳಿಯಂತಹ ಮಾಸಿಕ ಸ್ರಾವಗಳನ್ನು
ಅವರದೇ ಮಕ್ಕಳಿಗೆ ತಾಯಾದ
ಜೋಲು ಬಿದ್ದ ಹೊಟ್ಟೆಗಳನ್ನು
ಮತ್ತದರ ಮೇಲಿನ ಆಕಾರಕೆಟ್ಟ ಮೊಲೆಗಳನ್ನು

ಆದರೆ ಈಗ…?
ನಾನೊಂದು ಸುಂದರ ಮರ
ಏಕಾಂತದ ಬೆತ್ತಲೆಯನ್ನು
ಲೋಕಾಂತಕ್ಕೆ ಹರಡಿ
ಬಿಡುಬೀಸಾಗಿ ಬಯಲು ಆಲಯದಲ್ಲಿ
ನಿಂತಿದ್ದೇನೆ
ಒಂದು ಹಿಡಿ ಸುಡುವ ಬೀಜವನ್ನು
ಒಡಲೊಳಗಿಟ್ಟುಕೊಂಡ ಅಗ್ನಿಕನ್ಯೆಯರು
ನನ್ನ ಬಿರುಸು ತೊಗಟೆಯ ಮರೆಗೆ
ನಾಲ್ಕು ಹನಿ ಕಣ್ಣೀರು ಸುರಿಸಲು
ಬರಲಾರಂಭಿಸಿದಂದಿನಿಂದ
ಜಾತಿಗ್ಹುಟ್ಟಿದ ಬಿಕನಾಸಿ ಭಂಡರಿಗೆ
ನೆರಳು ನೀಡುವ ಕೆಲಸ ನಿಲ್ಲಿಸಿದ್ದೇನೆ
ಅವರ ಗರಗಸಗಳು
ನನ್ನ ಸ್ಪರ್ಶಿಸುವ ಮೊದಲೇ
ಸಾವಿರ ಹೋಳಾಗಿಸುವ ಬೇತಾಳವಿದ್ಯೆ
ಕಲಿತಿದ್ದೇನೆ
ಹ್ಹ…ಹ್ಹ…ಹ್ಹ…
ಸುಟ್ಟರೂ ಹೂಳಿದರೂ
ನಾನೊಂದು ಚಂದದ ಮರ
ವಾಗುವುದ ತಪ್ಪಿಸಲಾಗಲಿಲ್ಲ
ಈ ಸಾವ ಕೆಡುವ ಗಂಡರಿಗೆ

‘ಸಸ್ಯಗಳು ಚಲಿಸುವದಿಲ್ಲ’
ಅಹೋರಾತ್ರಿ ಪಾಠ ಓದುತ್ತಿವೆ ಮಕ್ಕಳು

ಕೇಳಿಸಿಕೊಳ್ಳಿ
ಹಿಂದೊಮ್ಮೆ ನಾನು ನಿಮ್ಮೆಲ್ಲರ
ಅಜ್ಜಿಯೋ,ಮುತ್ತಜ್ಜಿಯೋ ಆಗಿದ್ದೆ
ಉಕ್ಕಲಾರದ ಬಿಕ್ಕುಗಳನ್ನು
ಕೆಂಡದೊಲೆಯಲ್ಲಿ ಹುಗಿದಿಟ್ಟು
ಕೆಮ್ಮಿ,ಕೆಮ್ಮಿ ಸತ್ತಿದ್ದೆ

ಯಾವ ಶಾಲೆಗಳಲ್ಲೂ ವಿಜ್ಞಾನ
ಜನ್ಮಾಂತರದ ಪಾಠವನ್ನು ಕಲಿಸುವುದಿಲ್ಲthe tree

ಆದರೆ ನನಗೆ ಚೆನ್ನಾಗಿ ನೆನಪಿದೆ
ನಾನು ಹಿಂದೊಮ್ಮೆ ಹೆಣ್ಣಾಗಿದ್ದೆ
ಬೆಂಕಿಯಿಂದ ಬಾಣಲೆಗೂ
ಬಾಣಲೆಯಿಂದ ಬೆಂಕಿಗೂ
ಜಿಗಿಯುತ್ತಿದ್ದೆ

ಈಗ
ನಾನೊಂದು
ಚೆಂದದ ಮರ

‍ಲೇಖಕರು admin

March 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

28 ಪ್ರತಿಕ್ರಿಯೆಗಳು

  1. ಆನಂದ್ ಋಗ್ವೇದಿ

    ಚಂದದ ಕವಿತೆ. ವಾಚ್ಯ ಅನ್ನಿಸಿದರೂ ಪರಿಣಾಮಕಾರಿ. ಒಂದು ಪ್ರಬಂಧದ ವಿಸ್ತೃತತೆ, ತಲೆತಲಾಂತರದ ಕತೆ ಒಂದೇ ಕವಿತೆಯಲ್ಲಿ!!!! ಅನನ್ಯ

    ಪ್ರತಿಕ್ರಿಯೆ
  2. Kavya Kadame Nagarakatte

    ಎಷ್ಟು ಚೆಂದದ ಕವಿತೆ ಅಕ್ಕಾ, ‘ಮರ ಮತ್ತು ಹೆಣ್ಣು’ ಪ್ರತಿಮೆ, ಕಥನ ಎಲ್ಲವೂ ಚೆಂದ ಚೆಂದ:)

    ಪ್ರತಿಕ್ರಿಯೆ
  3. padma bhat

    eshtu chandavaagi barediddeera… pratee saaalinalliyu adeshtu arthavide…hennigu marakku holike chanda chanda…

    ಪ್ರತಿಕ್ರಿಯೆ
  4. SUKANYA KALASA

    ರೇಣುಕಾ..ಸುಂದರ ಕವಿತೆ..ಎಲ್ಲಾ ಹೆಣ್ಣುಗಳ.ಮನದಾಳದ ದನಿ

    ಪ್ರತಿಕ್ರಿಯೆ
  5. ಲಲಿತಾ ಸಿದ್ಧಬಸವಯ್ಯ

    ರೇಣುಕಾ ನೀವು ಭತ್ತ ಬೆಳೆದ ಮಗಳ ಬಗ್ಗೆ ಓದಿದ ಕವನ – ಚಂದನ ಮಹಿಳಾ ಕವಿಗೋಷ್ಟಿ – ಕೇಳಿ ಬಹಳ ಖುಷಿಗೊಂಡಿದ್ದೆ. ಇಂದಿನ ಈ ಕವನ ಅಷ್ಟೇ ಖುಶಿ ತಂದಿದೆ. ಧನ್ಯವಾದ ನಿಮಗೆ.

    ಪ್ರತಿಕ್ರಿಯೆ
  6. ಕಾಜೂರು ಸತೀಶ್

    ಬಹುಕಾಲ ನನ್ನೊಳಗೆ ಉಳಿದುಬಿಡುವ ಕವಿತೆ.

    ಪ್ರತಿಕ್ರಿಯೆ
    • Kaligananath Gudadur

      ಮತ್ತೆ ಮತ್ತೆ ಓದಬೇಕೆನಿಸುವ ಕವಿತೆ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: