ಅರ್ಥವಾಗದ ಕಥೆ, ಅರ್ಥಮಾಡಿಸಲು ಸಾಧ್ಯವಾಗದ ಕಥೆ..

ಮಹಿಳೆ ಮತ್ತು ಸಂಗೀತ ಕ್ಷೇತ್ರ

CNR

ಸಿ ಎನ್ ರಾಮಚಂದ್ರನ್ 


ಇತ್ತೀಚೆಗೆ ಜಯಲಕ್ಷ್ಮಿ ಪಾಟೀಲ್ ಅವರು ‘ಅವಧಿ’ ಜಾಲತಾಣದಲ್ಲಿ ಚಿತ್ರರಂಗದ ಯಾರಾದರೂ ಅರ್ಥ ಮಾಡಿಸಿ, ಪ್ಲೀಸ್..’ ಎಂಬ ಲೇಖನವನ್ನು ಬರೆದಿದ್ದರು; ಮತ್ತು ಅದರಲ್ಲಿ ಚಿತ್ರರಂಗದಲ್ಲಿ ಮಹಿಳಾ ಗೀತರಚನಕಾರರು ಏಕಿಲ್ಲ? ಎಂಬಂತಹ ಮಾರ್ಮಿಕ ಪ್ರಶ್ನೆಯನ್ನು ಎತ್ತಿದ್ದರು.


 

music eyeಆ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಒಬ್ಬರು ಕನ್ನಡದಲ್ಲಿ ಪ್ರತಿಭಾ ನಂದಕುಮಾರ್ ಒಂದು ಚಿತ್ರಕ್ಕೆ ಗೀತೆಗಳನ್ನು ಬರೆದಿದ್ದಾರೆ, ತೆಲುಗು ಚಿತ್ರರಂಗದಲ್ಲಿ ಭಾನುಮತಿ ಅವರು ಗೀತೆಗಳನ್ನು ಅವರೇ ಬರೆದು, ಸ್ವರಸಂಯೋಜನೆ ಮಾಡಿ, ಹಾಡುತ್ತಿದ್ದರು ಎಂಬ ಮಾಹಿತಿಯನ್ನು ನೀಡಿದ್ದಾರೆ. ಆದರೆ, ಪ್ರತಿಭಾ, ಭಾನುಮತಿ ಮುಂತಾದವರು ಅಪವಾದಗಳು; ಮತ್ತು ಜಯಲಕ್ಷ್ಮಿ ಅವರು ಎತ್ತಿದ ಪ್ರಶ್ನೆ ಎಷ್ಟು ಗಂಭೀರ ಹಾಗೂ ವ್ಯಾಪಕವಾಗಿದೆ ಎಂಬುದನ್ನು ವಿವರಿಸಲು ಈ ಕಿರು ಲೇಖನದಲ್ಲಿ ಪ್ರಯತ್ನಿಸಿದ್ದೇನೆ.

ಮೊದಲನೆಯದಾಗಿ, ಕೇವಲ ಕನ್ನಡ ಚಿತ್ರರಂಗದಲ್ಲಿಯಷ್ಟೇ ಅಲ್ಲದೆ ಹಿಂದಿ ಚಿತ್ರರಂಗದಲ್ಲಿಯೂ ಇದೇ ಪರಿಸ್ಥಿತಿ ಎಂದಿನಿಂದಲೂ ಇದೆ; ಗೀತರಚನೆ ಎಂದ ಕೂಡಲೇ ಶೈಲೇಂದ್ರ, ಹಜರತ್ ಜೈಪುರಿ, ಇತ್ಯಾದಿ ಹೆಸರುಗಳು ನೆನಪಿಗೆ ಬರುತ್ತವೆಯೇ ಹೊರತು ಯಾವ ಮಹಿಳಾ ಗೀತರಚನಕಾರರ ಹೆಸರೂ ಇಲ್ಲ. ಗೀತ ರಚನೆಯಿರಲಿ, ಸಂಗೀತ ನಿರ್ದೇಶನವೂ ಪುರುಷರಿಗೆ ಮಾತ್ರ ಕಾಯ್ದಿರಿಸಲ್ಪಟ್ಟಿದೆ; ಅಕಸ್ಮಾತ್ ಯಾರಾದರೂ ಮಹಿಳೆ ಆ ಕ್ಷೇತ್ರಕ್ಕೆ ಬಂದರೆ, ಅಲ್ಲಿ ಉಳಿಯುವುದು ಕಷ್ಟ.

ಉದಾಹಾರಣೆಗಾಗಿ: 60ರ ದಶಕದಲ್ಲಿ, ಹಿಂದಿಯಲ್ಲಿ ‘ದಿಲ್ ದೇಕೆ ದೇಖೋ’ ಎಂಬ ಚಿತ್ರ ಹಿಟ್ ಚಿತ್ರವಾಗಿತ್ತು (ಅದು ಆಶಾ ಪಾರೇಖ್ ಅವರ ಮೊದಲ ಚಿತ್ರ) ; ಅದರಲ್ಲಿ ಸಂಗೀತ ನಿರ್ದೇಶನ ಮಾಡಿದ್ದವರು ಉಷಾ ಖನ್ನಾ (ನೆನಪು ಸರಿಯಿದ್ದರೆ) ಎಂಬ ಪ್ರತಿಭಾಶಾಲಿ ಮಹಿಳೆ. ಆ ಚಿತ್ರದ ಎಲ್ಲಾ ಹಾಡುಗಳೂ ತುಂಬಾ ಜನಪ್ರಿಯವಾಗಿದ್ದುವು.

ಆ ಚಿತ್ರದ ನಂತರ ಒಂದೋ ಎರಡೋ ಬೇರೆ ಹಿಂದಿ ಚಿತ್ರಗಳಿಗೆ ಉಷಾ ಖನ್ನಾ ಸಂಗೀತ ನಿರ್ದೇಶನ ಮಾಡಿದರು; ಅನಂತರ ಅವರ ಹೆಸರೇ ಚಿತ್ರರಂಗದಿಂದ ಮಾಯವಾಯಿತು. ಅವರ ನಂತರ ಬೇರೆ ಯಾವ ಮಹಿಳೆಯೂ ಹಿಂದಿಯಲ್ಲಿ ಸಂಗೀತ ನಿರ್ದೇಶನ ಮಾಡಿರುವುದು ನನಗೆ ಗೊತ್ತಿಲ್ಲ.

ಈ ಸಂಗತಿ ಇನ್ನೂ ಹೆಚ್ಚು ದುರದೃಷ್ಟಕರವಾಗುವುದು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ. ಈ ಕ್ಷೇತ್ರದಲ್ಲಿ ಅಸಾಧಾರಣ ವಾಗ್ಗೇಯಕಾರರ ಹೆಸರುಗಳಿವೆಯೇ ಹೊರತು ವಾಗ್ಗೇಯಕಾರ್ತಿಯರ ಹೆಸರುಗಳೇ ಇಲ್ಲ. ಮೈಸೂರಿನಲ್ಲಿರುವ ಪ್ರಸಿದ್ಧ ವಿದುಷಿ ಡಾ. ಸುಕನ್ಯಾ ಪ್ರಭಾಕರ್ ಈ ವಿಷಯವನ್ನು ಕುರಿತೇ (ಮಹಿಳಾ ವಾಗ್ಗೇಯಕಾರರು) ಸಂಶೋಧನೆಯನ್ನು ಮಾಡಿ, ಡಾಕ್ಟರೇಟ್ ಪದವಿ ಪಡೆದಿದ್ದಾರೆ. (ಅವರ ಸಂಶೋಧನೆಯ ಮುಖ್ಯಾಂಶಗಳು ಸಿ ಡಿ ರೂಪದಲ್ಲಿಯೂ ಬಂದಿವೆ.)

ತಮ್ಮ ಸಂಶೋಧನೆಯ ಮೂಲಕ ಅವರು ಕಂಡುಕೊಂಡ ಮಾಹಿತಿಯೆಂದರೆ, ಅನೇಕ ಮಹಿಳೆಯರೂ ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ; ಆದರೆ ಅವುಗಳನ್ನು ಯಾರೂ ಹಾಡದೆ, ಅವರು ಚರಿತ್ರೆಯಿಂದ ಮಾಯವಾಗಿದ್ದಾರೆ. ಅವರು ಉಲ್ಲೇಖಿಸುವ ಅನೇಕ ವಾಗ್ಗೇಯಕಾರ್ತಿಯರಲ್ಲಿ ಒಬ್ಬರು ಅಣ್ಣಮಾಚಾರ್ಯರ ಪತ್ನಿ (ತಾಳ್ಯಪಾಕಂ ತಿಮ್ಮಕ್ಕ); ಅವರೂ ಅಸಾಧಾರಣ ಪ್ರತಿಭಾನ್ವಿತರಾಗಿದ್ದು ನೂರಾರು ಕೀರ್ತನೆಗಳನ್ನು ರಚಿಸಿದ್ದಾರಂತೆ. ಹಾಗೆಯೇ ಸ್ವಾತಿ ತಿರುನಾಳ್ ಅವರ ತಂಗಿ ರುಕ್ಮಿಣಿಬಾಯಿ, ಬೆಂಗಳೂರು ನಾಗರತ್ನಮ್ಮ, ಇತ್ಯಾದಿ. ಇವರುಗಳ ಕೃತಿಗಳನ್ನು ಯಾರೂ ಸಂಗೀತ ಕಛೇರಿಗಳಲ್ಲಿ ಪ್ರಸ್ತುತಪಡಿಸದೆ ಅವರು ಮರೆಗೆ ಸಂದಿದ್ದಾರೆ.

voilinಇನ್ನು ಕನ್ನಡಕ್ಕೆ ಬಂದರೆ ಸುಮಾರು 23 ಮಹಿಳೆಯರು ಹರಿದಾಸಪಂಥಕ್ಕೆ ಸೇರಿರುವವರು ಇದ್ದಾರೆ; ಆದರೆ ನಮಗೆ ಗೊತ್ತಿರುವುದು ಒಬ್ಬರು ಅಥವಾ ಇಬ್ಬರು: ಅಂಬಾಬಾಯಿಯಂತಹವರು. (ಅಂಬಾಬಾಯಿಯವರ ಬಗ್ಗೆ ಒಂದು ಸಂಶೋಧನಾತ್ಮಕ ಕೃತಿಯನ್ನೇ ಡಾ. ಸುಮಿತ್ರಾಬಾಯಿ ಅವರು ಬರೆದಿದ್ದಾರೆ.) ಇಂತಹ ಹತ್ತಾರು ಖೇದಕರ ಸಂಗತಿಗಳನ್ನು ಡಾ. ಸುಕನ್ಯಾ ದಾಖಲಿಸುತ್ತಾರೆ.

ಇನ್ನೂ ಖೇದದ ವಿಷಯವೆಂದರೆ, ಇಂದಿಗೂ ಪ್ರಸಿದ್ಧ ಗಾಯಕರು ಮಹಿಳೆಯೊಬ್ಬಳು ಪಿಟೀಲು ನುಡಿಸುವ ಕಛೇರಿಯಲ್ಲಿ ಹಾಡಲು ಇಚ್ಛಿಸುವುದಿಲ್ಲವಂತೆ. (ಇಂತಹ ಅನೇಕ ಸಂಗತಿಗಳನ್ನು ಬೆಂಗಳೂರಿನಲ್ಲಿಯೇ ಇರುವ ಖ್ಯಾತ ವಿದುಷಿ ಸತ್ಯವತಿಯವರು ಒಂದು ಸಾರ್ವಜನಿಕ ಸಭೆಯಲ್ಲಿ ಹಂಚಿಕೊಂಡಿದ್ದರು.) ಇನ್ನು ಕೆಲವು ಜನಪ್ರಿಯ ಪಿಟೀಲು ವಾದಕರು ಗಾಯಕಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವುದಿಲ್ಲವಂತೆ. ಸಂಗೀತವು ಭಾಷೆ-ಜಾತಿ-ಧರ್ಮಗಳ ಭೇದವನ್ನು ಮೀರಿರುವುದು ಎಂದು ನಾವು ನಂಬುತ್ತೇವೆ. ಇದು ಬಹು ಮಟ್ಟಿಗೆ ನಿಜ. ಆದರೆ, ಇನ್ನೂ ಆ ಕ್ಷೇತ್ರದಲ್ಲಿ ಲಿಂಗಭೇದವು ಭದ್ರವಾಗಿ ನೆಲೆಯೂರಿದೆ ಎಂಬುದೂ ಅಷ್ಟೇ ನಿಜ.

ಈ ಲಿಂಗಭೇದವು ಕೇವಲ ಶಾಸ್ತ್ರೀಯ-ಜನಪ್ರಿಯ ಸಂಗೀತಕ್ಷೇತ್ರಕ್ಕೆ ಮಾತ್ರ ಸೀಮಿತ ಎಂದೇನೂ ಇಲ್ಲ. ತಮಗೆ ಅವಶ್ಯಕವಿರುವ ಎಲ್ಲಾ ಜ್ಞಾನ ಹಾಗೂ ಅಧಿಕಾರಗಳಿದ್ದರೂ ತಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಬ್ಮರೀನ್ ಒಂದಕ್ಕೆ ಇಳಿಯಲು ಎಷ್ಟು ಬಗೆಯ ಪ್ರತಿರೋಧವನ್ನು ಎದುರಿಸಬೇಕಾಯಿತು ಎಂಬುದನ್ನು ನೇಮಿಚಂದ್ರ ಅವರು ತಮ್ಮ ಒಂದು ಲೇಖನದಲ್ಲಿ ವಿವರಿಸಿದ್ದಾರೆ.

ಹಾಗೆಯೇ, ಸಾಹಿತ್ಯ ಕ್ಷೇತ್ರವನ್ನು ತೆಗೆದುಕೊಂಡರೆ ಕಳೆದ 50 ವರ್ಷಗಳಲ್ಲಿ, ಪ್ರಾಯಃ ನಾಲ್ಕೈದು ಲೇಖಕಿಯರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿರಬಹುದು. ಇದೊಂದು ಮುಗಿಯದ ಕಥೆ; ಜಯಲಕ್ಷ್ಮಿಯವರು ಹೇಳುವಂತೆ ಅರ್ಥವಾಗದ ಕಥೆ, ಅರ್ಥಮಾಡಿಸಲು ಸಾಧ್ಯವಾಗದ ಕಥೆ.

‍ಲೇಖಕರು admin

March 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಜಯಲಕ್ಷ್ಮೀ ಪಾಟೀಲ್

    ಪ್ರತಿಕ್ರಿಯಾರೂಪದ ತಮ್ಮ ಈ ಲೇಖನಕ್ಕೆ ತುಂಬಾ ಧನ್ಯವಾದಗಳು ಸರ್.
    ನಿಜ ಸರ್, ಅಲ್ಲಲ್ಲಿ ಅದೂ ಯಾರೋ ಕೆಲವರು ಮಾತ್ರ ಗಮನಿಸಿ ಹೇಳುವ ಮಹಿಳಾ ಗೀತರಚನಾಕಾರರ ಹೆಸರುಗಳು ಮೇನ್ ಸ್ಟ್ರೀಮ್‍ನಲ್ಲಿ ಬರದೆ ಕೆಲವು ಅಪವಾದಗಳಷ್ಟಾಗೇ ಉಳಿಯುತ್ತವೆ. ತುಂಬಾ ಜನ ಪ್ರತಿಭಾವಂತ ಮಹಿಳೆಯರಿದ್ದಾರೆ, ಮಡಿವಂತಿಕೆ ಮತ್ತು ತಾವೇ ಸೃಷ್ಟಿಕೊಂಡ ಮಿತ್‍ ತೊರೆದು ಮಹಿಳೆಯರಿಂದಲೂ ಬರೆಸುವವರು ಹೆಚ್ಚಾಗಬೇಕು. ಒಳ್ಳೆಯದನ್ನು ಹೆಣ್ಣು ರಚನೆ/ಗಂಡು ರಚನೆ ಎನ್ನುವ ಹಂಗಿಲ್ಲದೇ ಶ್ರೋತೃಗಳು ಸ್ವೀಕರಿಸುತ್ತಾರೆ ಅನ್ನುವ ಸತ್ಯ ಯಾವಾಗ ಮನದಟ್ಟಾಗುತ್ತೋ ಕಾದು ನೋಡಬೇಕಿದೆ.
    ಸಂಗೀತದ ಇತರ ವಿಭಾಗಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಎನ್ನುವುದು ನಿಮ್ಮಿಂದಾಗಿ ತಿಳಿಯಿತು. ಅಡ್ಡಿ ಯಾವುದು ಅನ್ನುವುದನ್ನು ಯಾರು ಹೇಳುವವರು? ಇಂಥ ಪ್ರಶ್ನೆ ಎದುರಾದಾಗಲೆಲ್ಲ ಆಯಾ ಕ್ಷೇತ್ರದ ಬಹುತೇಕರು ಜಾಣಗಿವುಡರಾಗಿಬಿಡುತ್ತಾರೆ ಅನ್ನೋದು ನೋವಿನ ಸಂಗತಿ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: