ಹಾವು ಹುತ್ತದ ರೂಪಕ: ಬಂಗಾರಪ್ಪ ಒಂದು ನೆನಪು

ಹಾವು ಹುತ್ತದ ರೂಪಕ: ಬಂಗಾರಪ್ಪ ಒಂದು ನೆನಪು

ಗೆಳೆಯ ಆಲನಹಳ್ಳಿ ಕೃಷ್ಣ ಬಂಗಾರಪ್ಪನವರ ಪರಮ ಅಭಿಮಾನಿಗಳಲ್ಲಿ ಒಬ್ಬ. ಯುವ ಲೇಖಕರನ್ನು ಇಷ್ಟಪಡುತ್ತಿದ್ದ ಬಂಗಾರಪ್ಪನವರಿಗೂ ಕೃಷ್ಣ ಇಷ್ಟ. ಕೃಷ್ಣನ ಜೊತೆ ನಾನೊಂದು ಗುಪ್ತ ಕಾರ್ಯವನ್ನು ನಿರ್ವಹಿಸಿದ್ದೆ. ಆ ರಾತ್ರಿ ನಾನು ಮತ್ತು ಆಲನಹಳ್ಳಿ ಕೃಷ್ಣ ಕಾಂಗ್ರೆಸ್ ನಾಯಕರಾಗಿದ್ದ ಬಂಗಾರಪ್ಪ ನವರನ್ನು ಮೈಸೂರಿನ ಮೂಲೆಯೊಂದರಲ್ಲಿ ಇರುವ ಹೊಟೆಲ್ ರೂಮಿನಲ್ಲಿ ಭೇಟಿಯಾಗಿದ್ದೆವು. ಅವತ್ತು ಬಂಗಾರಪ್ಪನವರು ನನ್ನ ಜೊತೆ ಕೂತು ಖುಷಿಯಿಂದ ಸ್ವಲ್ಪ ಬಿಯರ್ ಕುಡಿದರು ಎಂದರೆ ಅದೇನೂ ಬಂಗಾರಪ್ಪನವರಿಗೆ ಗೆಳೆಯ ಪಟೇಲ್ನಂತೆ ಕುಡಿಯುವ ವ್ಯಸನ ಇತ್ತು ಎಂದು ಹೇಳಿದಂತಲ್ಲ. ಅಂದು ಅವರು ವಿಶ್ವಾಸಕ್ಕಾಗಿ ನಮ್ಮ ಜೊತೆ ಕುಳಿತು ಮದ್ಯ ಸೇವಿಸಿದ್ದರು ಅಷ್ಟೇ.

ಆಗ ನಾನು ಪರಮ ಲೋಹಿಯಾವಾದಿ. ಕಾಂಗ್ರೆಸ್ಸೇತರ ಪಕ್ಷಗಳೆಲ್ಲಾ ಒಟ್ಟಾಗಿ ಇಂದಿರಾ ಕಾಂಗ್ರೆಸ್ಸನ್ನು ಸೋಲಿಸ ಬೇಕೆಂಬ ತತ್ವಕ್ಕೆ ನಿಷ್ಠನಾದವನು. ಒಡೆಯಲಾರದ ಬಂಡೆಯಂತಿದ್ದ ಕಾಂಗ್ರೆಸ್ ಹೋಳಾಗುವುದು ಸಾಧ್ಯವಾದರೆ ಮತ್ತೆ ಪ್ರಜಾತಂತ್ರದ ಪ್ರಕ್ರಿಯೆ ಎಲ್ಲ ಪಕ್ಷಗಳಲ್ಲೂ ಪ್ರಾರಂಭವಾದೀತು ಎಂಬ ನಂಬಿಕೆ ನನ್ನಂಥ ಲೋಹಿಯಾವಾದಿ- ಗಳದ್ದಾಗಿತ್ತು. ವ್ಯವಸ್ಥೆ ಕುವ್ಯವಸ್ಥೆಯಾದಾಗ ಅದು ಅವ್ಯವಸ್ಥೆಯ ಸ್ಥಿತಿಯನ್ನು ತಲುಪುವಂತೆ ಮಾಡಬೇಕು. ಈ ಅವ್ಯವಸ್ಥೆಯ ಸ್ಥಿತಿಯಿಂದ ಮತ್ತೆ ವ್ಯವಸ್ಥಿತ ಸ್ಥಿತಿಯೊಂದು ಉದ್ಭವಿಸೀತು ಎಂಬ ನಂಬಿಕೆ ನಮ್ಮದಾಗಿತ್ತು. ಇದು ಜೆ.ಎಚ್. ಪಟೇಲರಿಗೆ ಪ್ರಿಯವಾದ ವಾದವೂ ಆಗಿತ್ತು. ನಾನು ಬಂಗಾರಪ್ಪನವರನ್ನು ಭೇಟಿ ಮಾಡಿದ್ದರ ಹಿಂದೆ ಬಂಗಾರಪ್ಪ ಮತ್ತು ಜಾರ್ಜ್ ಫರ್ನಾಂಡಿಸ್ ಒಟ್ಟಾಗಿ ಕುಳಿತು ಮಾತನಾಡಬೇಕು ಎಂಬ ಆಸೆಯಿತ್ತು. ಆ ಹೊತ್ತಿಗಾಗಲೇ ಬಂಗಾರಪ್ಪನವರು ಇಂದಿರಾಗಾಂಧಿಯಿಂದ ದೂರವಾಗತೊಡಗಿದ್ದು ನನ್ನ ಆಸೆಗೆ ರೆಕ್ಕೆಗಳನ್ನೂ ಮೂಡಿಸಿತ್ತು. ನನ್ನಂತಹ ರಾಜಕೀಯದ ಹಸಿ ಹಸಿ ಉತ್ಸಾಹಿಯ ಜೊತೆ ಬಂಗಾರಪ್ಪನವರು ಬಾಯಿ ಬಿಚ್ಚಿ ಮಾತನಾಡದೇ ಇದ್ದರೂ ಜಾರ್ಜ್ ಮತ್ತು ಬಂಗಾರಪ್ಪನವರ ಭೇಟಿ ಸಾಧ್ಯವಾಗುವಂತೆ ಮಾಡಿದೆನೆಂಬುದು ನನ್ನ ಊಹೆ. ಉಳಿದದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಹಳೆಯ ಕಾಂಗ್ರೆಸ್ಸಿನವರು, ಜನಸಂಘದವರು, ಸಮಾಜವಾದಿಗಳು ಹೀಗೆ ಎಲ್ಲರೂ ಒಟ್ಟಾಗುವ ಹಾಗೆ ನಮ್ಮಲ್ಲಿ ಬೊಮ್ಮಾಯಿ, ದೇವೇಗೌಡ ಮತ್ತು ರಾಮಕೃಷ್ಣ ಹೆಗಡೆಯವರು ಶ್ರಮಿಸಿದರು. ಈ ಶ್ರಮದ ಫಲವಾಗಿ ಎಲ್ಲರೂ ಒಟ್ಟಾದರು. ಆದರೆ ಆ ಕಾಲದಲ್ಲಿ ನಿಜವಾದ ಜನಹಿತವನ್ನು ಸಾಧಿಸುತ್ತಾ ಇದ್ದದ್ದು ದೇವರಾಜ ಅರಸರ ಸಕರ್ಾರ. ಇಲ್ಲಿ ಇನ್ನೊಂದು ಪ್ಯಾರಡಾಕ್ಸ್ ಇತ್ತು. ಗೇಣಿದಾರರಿಗೆ ಭೂಮಿ ಸಿಗಬೇಕೆಂದು ಹೋರಾಡುತ್ತಿದ್ದ ನನ್ನಂಥವರು ಅರಸರ ರಾಜಕಾರಣಕ್ಕೆ ತತ್ವಶಃ ವಿರೋಧಿಗಳಾಗಿರಲಿಲ್ಲ. ಆದರೆ ಬಂಡೆಯಂಥ ಕಾಂಗ್ರೆಸ್ಸನ್ನು ಒಡೆದು ಪ್ರಜಾಸತ್ತಾತ್ಮಕತೆಯನ್ನು ತರಬೇಕೆಂಬ ನಮ್ಮ ಉತ್ಸಾಹದಿಂದಾಗಿ ನೈಜ ನೆಲೆಯಲ್ಲಿ ಜಮೀನ್ದಾರಿ ವ್ಯವಸ್ಥೆಯ ರದ್ಧತಿಗೆ ವಿರೋಧಿಗಳಾದ ರಾಜಕಾರಣಿಗಳನ್ನೆಲ್ಲಾ ಒಟ್ಟು ಮಾಡಿ ತತ್ವದ ಅನುಷ್ಠಾನಕ್ಕೆ ಹೊರಟಿದ್ದೆವು. ಕರ್ನಾಟಕದಲ್ಲಿ ಜನತಾ ಪಕ್ಷ ಗೆಲುವು ಸಾಧಿಸಿತು. ನನ್ನ ಪ್ರಕಾರ ಅದಕ್ಕೆ ಒಂದು ಮುಖ್ಯ ಕಾರಣ ಬಂಗಾರಪ್ಪನವರು ನಮ್ಮ ಜೊತೆ ಸೇರಿದ್ದು, ಅರಸರನ್ನು ಬಿಟ್ಟರೆ ಎಲ್ಲ ಹಿಂದುಳಿದ ಜಾತಿಗಳಿಗೂ ಬಂಗಾರಪ್ಪನವರೇ ನಾಯಕರು. ಅವರಲ್ಲೊಂದು ರಾಜಕೀಯ ಮೋಡಿ ಇತ್ತು. ಅವರು ಹಿಂದುಳಿದ ವರ್ಗಗಳ ಓಟುಗಳನ್ನು ತರದಿದ್ದರೆ ಕೇವಲ ಮೇಲ್ಜಾತಿಗಳಾದ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣರನ್ನು ಒಳಗೊಂಡ ಜನತಾ ಪಕ್ಷ ಗೆಲ್ಲುವುದು ಸಾಧ್ಯವಿರುತ್ತಿರಲಿಲ್ಲ.  ಇದಾದ ಮೇಲೆ ಬಂಗಾರಪ್ಪನವರಿಗೆ ತಾನು ಮುಖ್ಯಮಂತ್ರಿಯಾಗಬೇಕೆಂಬ ಆಸೆ ಸಫಲವಾಗಲಿಲ್ಲ.

ನನಗೊಂದು ಘಟನೆ ನಿಚ್ಚಳವಾಗಿ ನೆನಪಿದೆ. ಒರಿಸ್ಸಾದ ಬಿಜು ಪಟ್ನಾಯಕರ ಮಧ್ಯಸ್ತಿಕೆಯಲ್ಲಿ ಹೆಗಡೆಯವರನ್ನು ಮುಖ್ಯಮಂತ್ರಿಯಾಗಿ ಆರಿಸಲಾಯಿತು. ಬಂಗಾರಪ್ಪ ನವರು ಯಾರೂ ಮರೆಯಲಾಗದ ಒಂದು ಮಾತನ್ನು ಸತ್ಯವೆನಿಸುವಂತೆಯೇ ಹೇಳಿದರು. `ನನ್ನಂಥವರು ಕಟ್ಟಿದ ಹುತ್ತದಲ್ಲಿ ಹೆಗಡೆಯವರು ಹಾವಿನಂತೆ ಬಂದು ಸೇರಿಕೊಂಡರು.’ ಹೆಗಡೆಯರರ ಬಗ್ಗೆ ಪ್ರೀತಿಯಿದ್ದ ನನಗೆ ಆ ಕ್ಷಣದಲ್ಲಿ ಈ ಮಾತಿನಿಂದ ನೋವಾಗಿತ್ತು. ಆದರೆ ನಿಜ ಎಂದೂ ಅನ್ನಿಸಿತ್ತು. ಬಂಗಾರಪ್ಪನವರು ಹೊರಗುಳಿದರೆ ಜನತಾ ಯಶಸ್ವಿ- ಯಾಗುವುದಿಲ್ಲವೆಂದು ಭಾವಿಸಿದ್ದ ನಾನು ಮುಖ್ಯಮಂತ್ರಿ ಹೆಗಡೆಯವರನ್ನು ನೋಡಲು ನಾನು ಅವರ ಚೇಂಬರಿಗೆ ಹೋದೆ. ಅಲ್ಲಿ ಹೆಗಡೆ ಜೊತೆ ಪಟೇಲರೂ ಇದ್ದರು. ಪಟೇಲ್ ಮತ್ತು ಬಂಗಾರಪ್ಪ ಒಂದು ಪಕ್ಷವಾಗಿ ಒಟ್ಟಿಗಿದ್ದವರು. ನಾನು ಹೆಗಡೆಯವರಲ್ಲಿ ನಿವೇದಿಸಿಕೊಂಡೆ. `ಬಂಗಾರಪ್ಪನವರನ್ನು ನೀವು ಎದುರು ಹಾಕಿಕೊಳ್ಳಬಾರದು. ಒಲಿಸಿಕೊಳ್ಳಬೇಕು. ನಾನು ಅವರ ಹತ್ತಿರ ಮಾತನಾಡಲು ಹೋಗುವೆ.’ ನನ್ನ ಮಾತಿಗೆ ಹೆಗಡೆ ಒಪ್ಪಿದರು. ಆದರೆ ಪಟೇಲ್ ಹೇಳಿದ-`ಅನಂತೂ… ನೀನೇನಾದರೂ ಬಂಗಾರಪ್ಪನವರನ್ನು ಹೆಗಡೆಯ ಜೊತೆ ಇರಲು ಒಪ್ಪಿಸಿದರೆ ನಾನು ಹೆಗಡೆ ಜೊತೆ ಇರುವುದಿಲ್ಲ.’ ಪಟೇಲ್ ಎಷ್ಟಾದರೂ ನನ್ನ ಗೆಳೆಯ. ಅವನ ಮಾತನ್ನು ಗಂಭೀರವಾಗಿ ಪರಿಗಣಿಸದೆ ಗೆಳೆಯ ರಮೇಶ್ ಬಂದಗದ್ದೆ ಜೊತೆಗೆ ಬಂಗಾರಪ್ಪನವರು ಇಳಿದುಕೊಂಡಿದ್ದ ಅವರ ಮನೆಗೆ ಹೋದೆ. ಬಂಗಾರಪ್ಪ ತಮ್ಮ ಒಡನಾಡಿಗಳನ್ನು ಸೇರಿಸಿಕೊಂಡು ಏರಿದ ಧ್ವನಿಯಲ್ಲಿ ಭಾಷಣ ಮಾಡುತ್ತಿದ್ದರು. ನಾನು ಅವರ ಮಾತಿಗೆ ತಡೆಯೊಡ್ಡುವಂತೆ ಎದ್ದು ನಿಂತು ಸ್ವಲ್ಪ ಮಾತನಾಡುವುದಿದೆ ಎಂದೆ. ಬಂಗಾರಪ್ಪನವರು ನನ್ನನ್ನು ಒಳಗೆ ಕರೆದುಕೊಂಡು ಹೋದರು. ನಮ್ಮ ನಡುವಿನ ಮಾತುಕತೆ ಹೀಗಿತ್ತು.

`ಬಂಗಾರಪ್ಪನವರೇ, ನೀವು ತಂದ ಹಿಂದುಳಿದವರ ಓಟುಗಳಿಂದಾಗಿ ಜನತಾ ಗೆದ್ದಿದೆ. ಈಗ ನೀವು ಅದನ್ನು ಕೈಬಿಡಬಾರದು.’

ಬಂಗಾರಪ್ಪನವರ ಉತ್ತರ `ನಾನೇಕೆ ಅವರ ಜೊತೆ ಸೇರಲಿ. ನಾಯಕನಾಗ ಬೇಕಾದವನು ನಾನಲ್ಲವೇ?’

ಅದಕ್ಕೆ ನಾನೊಂದು ಅತಾಕರ್ಿಕವಾದ ವಾದವನ್ನು ಅವರ ಮುಂದಿಟ್ಟೆ. `ಹೌದು, ಆದರೆ ನೀವು ಚಿಕ್ಕವರು. ಹೆಗಡೆ ಹಿರಿಯರು. ವಯಸ್ಸಿನ ದೃಷ್ಟಿಯಿಂದ ಅವರ ನಾಯಕತ್ವವನ್ನು ನೀವು ಒಪ್ಪಿಕೊಳ್ಳಬೇಕು.’ ನನ್ನ ಮಾತಿನ ಒಳ ಅರ್ಥವನ್ನು ಬಂಗಾರಪ್ಪ ಗಮನಿಸಿರಬೇಕು. ಬಂಗಾರಪ್ಪ ಹೇಳಿದರು `ನಿಜ, ಗೌಡರನ್ನಾಗಲೀ ಬೊಮ್ಮಾಯಿ ಯನ್ನಾಗಲೀ ನಾನು ನಾಯಕನೆಂದು ಒಪ್ಪಿಕೊಳ್ಳಲಾರೆ. ಹೆಗಡೆ ನನಗಿಂತ ವಯಸ್ಸಿನಲ್ಲಿ ಹಿರಿಯರು. ಅವರು ತುತರ್ು ಪರಿಸ್ಥಿತಿಯಲ್ಲಿ ಜೈಲಿಗೆ ಹೋದವರು. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.’ ಇಷ್ಟನ್ನು ನಾನು ಹೆಗಡೆಗೆ ಹೇಳಬಹುದೇ ಎಂದು ಅವರನ್ನು ಕೇಳಿಕೊಂಡು ಹೊರಟ ನಾನು ಸೀದಾ ಹೆಗಡೆಯರರ ಬಳಿ ಬಂದು ಮಾತನಾಡಿದೆ. `ಬಂಗಾರಪ್ಪನವರನ್ನು ನನ್ನ ತಮ್ಮನಂತೆ ನೋಡಿಕೊಳ್ಳುತ್ತೇನೆ’ ಎಂದು ಹೆಗಡೆ ನನಗೆ ಭರವಸೆಕೊಟ್ಟರು. ಅಲ್ಲಿಯೇ ಇದ್ದ ಪಟೇಲ್ ಮುಗುಳ್ನಕ್ಕರು. ಎಷ್ಟಾದರೂ ಪಟೇಲ್ ನುರಿತ ರಾಜಕಾರಣಿಯಲ್ಲವೇ?

ಎಲ್ಲರಿಗೂ ಗೊತ್ತಿರುವಂತೆ ಇದು ಯಾವುದೂ ಸಾಧ್ಯವಾಗಲಿಲ್ಲ. ಜಾಣನೂ ಉಪಾಯಗಾರ ರಾಜಕಾರಣಿಯೂ ಆಗಿದ್ದ ರಾಮಕೃಷ್ಣ ಹೆಗಡೆಯವರು ಮಾಸ್ತಿ ವೆಂಕಟೇಶ್ ಅಯ್ಯಂಗಾರರನ್ನು ಅವರ ಹುಟ್ಟು ಹಬ್ಬದ ದಿನ ಅಭಿನಂದಿಸಲೆಂದು ಹೊರಟರು. ನಾನೂ ಅವರ ಜೊತೆ ಇದ್ದೆ. ಕಾರಿನಲ್ಲಿ ನಮ್ಮ ಜೊತೆ ರಘುಪತಿಯೂ ಇದ್ದರೆಂದು ನೆನಪು. ದಾರಿಯಲ್ಲಿ ಹೆಗಡೆ ತುಂಟತನದಿಂದ ಹೇಳಿದರು. `ನಿಮ್ಮ ಫ್ರೆಂಡ್ ಸುಮ್ಮನಾಗುವ ಹಾಗೆ ನಾನೇನು ಮಾಡಿದೆ ನೋಡಿದಿರಾ…?’ ಎದುರು ಸೀಟಿನಲ್ಲಿ ಕುಳಿತಿದ್ದ ರಘುಪತಿ `ಬ್ರಿಲಿಯಂಟಾಗಿ ಮಾಡಿದ್ರಿ ಸರ್’ ಎಂದರು.

ಹೆಗಡೆ ಮಾಡಿದ್ದಿಷ್ಟು, ಕ್ರಾಂತಿರಂಗವನ್ನು ಬಖರ್ಾಸ್ತು ಮಾಡಿ ತಮ್ಮ ಜೊತೆ ಸೇರುವುದಾದರೆ ಉಪ ಮುಖ್ಯಮಂತ್ರಿ ಮಾಡುತ್ತೇನೆಂಬ ಆಶ್ವಾಸನೆಯನ್ನು ಬಂಗಾರಪ್ಪ- ನವರಿಗೆ ಕೊಟ್ಟದ್ದು. ನನಗೆ ಥಟ್ಟನೆ ದುಃಖವಾಯಿತು. ಕೋಪವೂ ಬಂತು. ಹೆಗಡೆಗೆ ನಾನು ನೀಡಿದ ಉತ್ತರ ಬಹುತೇಕ ಹೀಗಿತ್ತು: `ಒಬ್ಬ ಬಂಗಾರಪ್ಪ ಇಡೀ ಕನರ್ಾಟಕದ ನಾಯಕನಾಗುವುದು ಸಾಧ್ಯವಾದದ್ದು ಸ್ವಾತಂತ್ರೊ ್ಯತ್ತರ ಕಾಲದಲ್ಲಿ. ಇದೊಂದು ಅಪೂರ್ವವಾದ ಭಾರತೀಯ ಇತಿಹಾಸ. ನಿರಕ್ಷರ ಲೋಕದಿಂದ ಬಂದವರು ನಾಯಕರಾಗಿ ಕೊನೆಯಲ್ಲಿ ಬಂಗಾರಪ್ಪನಂತೆ ಮೋಸಹೋದಾಗ ಅದನ್ನು ಕಂಡು ಸಂತೋಷಪಡುವುದು ಸರಿಯಲ್ಲ.’ ಹೆಗಡೆ ಒಂದು ಕ್ಷಣ ಸುಮ್ಮನಿದ್ದು ತುಂಬಾ ಆಳವಾದ ನಿಟ್ಟುಸಿರಿಟ್ಟು `ನೀನು ಹೇಳುವುದು ನಿಜ’ ಎಂದರು.

ಬಂಗಾರಪ್ಪನವರ ವ್ಯಕ್ತಿತ್ವದಲ್ಲಿ ಹಲವು ಮಗ್ಗುಲುಗಳಿದ್ದವು. ಬಂಗಾರಪ್ಪನವರ ಬಗ್ಗೆ ನನ್ನ ಬಲುಹಿಂದಿನ ಸೋಷಲಿಸ್ಟ್ ಗೆಳೆಯ ಶಂಕರನಾರಾಯಣ ಭಟ್ಟನಿಗೆ ಬಹಳ ಪ್ರೀತಿ. ಬಂಗಾರಪ್ಪ ಕಾಂಗ್ರೆಸ್ನಲ್ಲೇ ಇರಬೇಕೆಂದು ಬಯಸಿ ಅದನ್ನು ಆಗುವಂತೆ ಮಾಡಿದ್ದರಲ್ಲಿ ಶಂಕರನಾರಾಯಣನ ಪಾತ್ರವೂ ಸ್ವಲ್ಪ ಇದೆ. ಒಮ್ಮೆ ನಾನು ದೇವರಾಜ ಅರಸು ಭ್ರಷ್ಟಾಚಾರದ ಬಗ್ಗೆ ಬಂಗಾರಪ್ಪನವರನ್ನು ಕೇಳಿದ್ದೆ. ಅದಕ್ಕವರು `ಅವರು ಎಡಗೈಯಲ್ಲಿ ತಗೊಂಡಿದ್ದನ್ನು ಬಲಗೈಯಲ್ಲಿ ಕೊಟ್ಟುಬಿಡುತ್ತಿದ್ದರು’ ಎಂದಿದ್ದರು. ಪ್ರಾಯಶಃ ಬಂಗಾರಪ್ಪನವರೂ ಅರಸರಷ್ಟಲ್ಲದಿದ್ದರೂ ಕೊಂಚ ಆ ಬಗೆಯ ಮನುಷ್ಯನೇ ಇರಬೇಕು. ತನ್ನ ಜನರಿಗೆ ಅವರು ಅನುಕೂಲ ಮಾಡಿಕೊಟ್ಟರೋ ಇಲ್ಲವೋ ಆದರೆ ತನ್ನ ಹಿಂಬಾಲಕರನ್ನು ಸತತವಾಗಿ ಅವರು ಪ್ರೀತಿಯಲ್ಲಿ ಕಾಪಾಡುತ್ತಿದ್ದರು. ಅವರಿಗೆ ಸಂಗೀತದ ಮೇಲೆ ಅಗಾಧವಾದ ಆಸಕ್ತಿ ಇತ್ತು. ಭೀಮಸೇನ ಜೋಷಿಯವರ ಗಾಯನವನ್ನು ಕೇಳಲು ಅವರು ತಮ್ಮ ಎಲ್ಲಾ ಕೆಲಸಗಳ ಮಧ್ಯೆಯೂ ಬಿಡುವು ಮಾಡಿಕೊಂಡು ಪುಣೆಗೆ ಹೋಗುತ್ತಿದ್ದರು. ಕ್ರೀಡೆಯ ಕುರಿತ ಅವರ ಪ್ರೀತಿಯೂ ಅಂಥದ್ದೇ. ನನಗೆ ಆರೋಗ್ಯವಿಲ್ಲದಾಗ ಬಂದು ನೋಡಿದ ಅವರು ಒಂದು ಘಟನೆ ಹೇಳಿದರು. ಅವರ ಬಂಧುವೇ ಆಗಿದ್ದ ರಾಜ್ಕುಮಾರರನ್ನು ಅವರು `ಕನರ್ಾಟಕ ರತ್ನ’ ಮಾಡಲು ಮುಂದಾದರಂತೆ. ಆಗ ರಾಜ್ಕುಮಾರ್ `ಕುವೆಂಪುವಿಗಿಂತ ಮೊದಲು ನಾನು ಕನರ್ಾಟಕ ರತ್ನ ಆಗಲಾರೆ’ ಎಂದರಂತೆ. ಇದನ್ನು ಬಹು ಮೆಚ್ಚುಗೆಯಿಂದ ಬಂಗಾರಪ್ಪನವರು ನನಗೆ ಹೇಳಿದ್ದರು.

ಬಂಗಾರಪ್ಪ ರಾಜಕೀಯ ಬದುಕಿನಲ್ಲಿ ಯಾರ ಜೊತೆ ಇದ್ದರು ಎಂಬುದು ಮುಖ್ಯವಾಗುತ್ತಾ ಹೋಯಿತೇ ಹೊರತು ಅವರ ಜೊತೆ ಯಾರಿದ್ದರು ಎಂಬುದು ಯಾವಾಗಲೂ ಮುಖ್ಯವಾಗಲಿಲ್ಲ. ಬಂಗಾರಪ್ಪನವರ ಜಾತಿಗೇ ಸೇರಿದ್ದ ಆಳವಾದ ಪ್ರಜ್ಞೆಯಿರುವ ಕಾಗೋಡು ತಿಮ್ಮಪ್ಪನಂಥವರು ಕೂಡಾ ಅವರ ಜೊತೆ ಇರಲಿಲ್ಲ. ಮತ್ತೊಂದು ಹಿಂದುಳಿದ ಜಾತಿಯನ್ನು ಪ್ರತಿನಿಧಿಸುವ ಸಿದ್ಧರಾಮಯ್ಯ ಕೂಡಾ ಬಂಗಾರಪ್ಪ- ನವರ ಜೊತೆ ಇರಲಿಲ್ಲ. ಹಿಂದುಳಿದ ವರ್ಗದ ರಾಜಕಾರಣಿಯೊಬ್ಬ ತನ್ನ ರಾಜಕಾರಣವನ್ನು ಮತ್ಯಾರದೋ ಜೊತೆಗಿದ್ದೇ ಮಾಡಬೇಕಾಗಿರುವ ಅನಿವಾರ್ಯತೆ ಬಹುಸಂಖ್ಯಾತ ಹಿಂದುಳಿದ ಜಾತಿಗಳ ರಾಜಕಾರಣದ ದುರಂತ.

 

 

ಕೃಪೆ: ಪ್ರಜಾವಾಣಿ, 27 ಡಿಸೆಂಬರ್ 2011

 

‍ಲೇಖಕರು G

December 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: