`ಲೇಹ್ ಜಾಯೇಂಗೆ’

`ಲೇಹ್ ಜಾಯೇಂಗೆ’

ಸತ್ಯಮೂರ್ತಿ ಆನಂದೂರು ಬರೆದಿರುವ `ಲೇಹ್ ಜಾಯೇಂಗೆ’ ಪುಸ್ತಕದ ಬಿಡುಗಡೆಗೆ ನನಗೆ ಬರಲು ಸಾಧ್ಯವಾಗಿಲ್ಲ, ಕಾರಣ ನನ್ನ ಅನಾರೋಗ್ಯ.

ಆದರೆ ನಾನು ತುಂಬಾ ಮೆಚ್ಚಿದ ಪುಸ್ತಕಗಳಲ್ಲಿ ಇದೂ ಒಂದು. ಮೊದಲಿನಿಂದ ಕೊನೆಯತನಕ ಸುಸ್ತಾಗದಂತೆ ಓದಿದ್ದೇನೆ. ಪುಸ್ತಕದ ಬಗ್ಗೆ ಜೋಗಿ ಬರೆದ ಮಾತುಗಳನ್ನು ಸಂಪೂರ್ಣ ಒಪ್ಪುತ್ತೇನೆ. ತೇಜಸ್ವೀ ಬರಹದ ಹಾಸ್ಯ, ಹಗುರ, ಜೊತೆಗೆ ದಟ್ಟತೆ ಈ ಪ್ರವಾಸ ಕಥನದಲ್ಲಿದೆ.

ಅತ್ಯುತ್ತಮ ಪ್ರವಾಸ ಕಥನದ ಹಿಂದಿರುವ ಗುಣ ಲೇಖಕನ ಕುತೂಹಲದ ಶಕ್ತಿ. ಕುತೂಹಲ ತನ್ನಷ್ಟಕ್ಕೇ ಮೌಲ್ಯಯುತವಾದದ್ದೇನೂ ಅಲ್ಲ. ಯಾವ ಬಗೆಯ ಕೂತೂಹಲ ಎಂಬುದು ಮುಖ್ಯ. ಇದು informationಗಳನ್ನು ಒದಗಿಸುವ ಯುಗವೇ ಆಗಿಬಿಟ್ಟಿದೆ. ಓದುಗನ ಕುತೂಹಲವನ್ನು ತಣಿಸುವುದಕ್ಕಾಗಿಯೇ ಉದ್ದೇಶಪೂರಕ ವಾಗಿ ಹುಡುಕಿ ಹುಡುಕಿ ವಿವರಗಳನ್ನು ನೋಟ್ ಬುಕ್ನಲ್ಲಿ ಬರೆದಿಟ್ಟು, ಆಮೇಲೆ ಆಕರ್ಷಕವಾಗಿ ಬರೆದಿರುವ ಎಷ್ಟೋ ಪ್ರವಾಸಕಥನಗಳಿವೆ. ಅವುಗಳನ್ನೆಲ್ಲಾ ನಾವು ಮರೆತು ಬಿಡುತ್ತೇವೆ. ನಾನು ಕಂಡಿದ್ದನ್ನು ನಾನು ಬರೆಯಲಿದ್ದೇನೆ ಎಂಬ ಪೂರ್ವ ನಿಶ್ಚಯದಿಂದ ಅನುಭವಿಸಿದ ಪ್ರವಾಸ ಕಥನ ಇದಲ್ಲ. ಎಲ್ಲ ಅನುಭವಗಳಿಗೂ ಮೈಯೊಡ್ಡಿಕೊಂಡು ತನ್ನೊಳಗೆ ತನ್ನಿಂದ ತಾನೇ ದಾಖಲಾಗುವ ವಿವರಗಳನ್ನು ನಮಗೆ ಕಾಣುವಂತೆ ಮಾಡುವ ಈ ಬರವಣಿಗೆಗೆ ಸದ್ಯತನದ ಒಂದು ಗುಣವಿದೆ.

ಸತ್ಯಮೂರ್ತಿ ಏನನ್ನಾದರೂ ಹೇಳುವುದರಲ್ಲೇ ಒಂದು ಸೊಗಸಿದೆ. ಇಲ್ಲಿ ನೋಡಿ, ನಮಗೆಲ್ಲರಿಗೂ ಚಳಿಯ ಅನುಭವವಾಗಿರುತ್ತದೆ. ಆದರೆ ಅವರು ಕೊಡುವ ಈ ವಿವರದಲ್ಲಿ ಆಗುವ ಚಳಿ ನೀವೇ ಪಡೆವ ಚಳಿಯಾಗಿಬಿಡುತ್ತದೆ.

`ಹೊದ್ದಿದ್ದ ಎರಡು ಶಾಲುಗಳು ಕಾಲಿಗೆ ಬಂದರೆ ಎದೆಯಿಂದ ಮೇಲೆರದೇ, ಮೇಲೆಳೆದುಕೊಂಡರೆ ಕಾಲಿಗೆ ಸಿಗದೆ ಪಜೀತಿ ಮಾಡಿದ್ದವು’. ತೇಜಸ್ವಿ ನೆನಪಾಗುವುದು ಅಥವಾ ಕಡಿದಾಳ್ ಶಾಮಣ್ಣ ನೆನಪಾಗುವುದು ಈ ಬಗೆಯ ವಿವರಗಳಲ್ಲಿ.

ದಿಲ್ಲಿ ಬಿಟ್ಟು ಹರಿಯಾಣದ ದಾರಿಯಲ್ಲಿ ಬಸ್ ಸಾಗತೊಡಗಿದಾಗ ಒಂದು ಬೆಳಗಿನ ಜಾವ ಆದ ಅನುಭವ ನಮ್ಮ ತೀರ್ಥಹಳ್ಳಿ ಕಡೆಯಿಂದ ಹುಟ್ಟಿ ಬಂದ ಸತ್ಯಮೂರ್ತಿಗೆ ಆದದ್ದು ಹೀಗೆ. `ಬೆಳಗಿನ ಜಾವದ ಆ ಬೆಳಕು ಬೆಳದಿಂಗಳಂತೆ ಎಲ್ಲೆಲ್ಲೂ ಹರಡತೊಡಗಿತು. ಗಾಜಿನ ಕಿಟಕಿಯನ್ನು ಪೂತರ್ಿ ಸರಿಸಿ ಗಾಳಿಗೆ ಮುಖ ಇಟ್ಟು ಅನಂತ ದೂರದವರೆಗೆ ಕಣ್ಣು ಹಾಯಿಸತೊಡಗಿದೆ. ಬಸ್ಸಿನೊಳಗೆ ಗದ್ದೆಯ ವಾಸನೆ ತುಂಬಿ ತುಂಬಿ ಬರುತ್ತಿತ್ತು. ನಾಟಿಯಾಗಿ ಎರಡು ತಿಂಗಳಾದಾಗ ಭತ್ತದ ಸಸಿ ಹೊಡೆ ಒಡೆಯುತ್ತದೆ. ಅಂದರೆ ಸಸಿ ದೊಡ್ಡದಾಗಿ, ಪುಷ್ಠಿಯಾಗಿ ಬೆಳೆದು ಒಂದೆರಡು ಗೆಣ್ಣುಗಳು ಹೊರಬಂದು ನೆಡುವಾಗ ಇದ್ದ ನಾಲ್ಕು ಎಸಳಿನ ಸಸಿ ಹತ್ತು ಹನ್ನೆರಡು ಎಸಳಿನ ಗಟ್ಟಿ ಬುಡವಾಗಿ ಯವ್ವನ ತುಂಬಿ ಬೆಳೆದಿರುತ್ತದೆ. ಇನ್ನೇನು ಅದು ಭತ್ತದ ಹಸಿರು ತೆನೆಯೆ ಗರ್ಭ ಧರಿಸಲು ಸಿದ್ದವಾಗಿದೆ ಎಂದರ್ಥ. ಆಗ ಇಡೀ ಗದ್ದೆಯ ಕೋಗು ಕಪ್ಪು ಹಸಿರಿನಿಂದ ತುಂಬಿಕೊಳ್ಳುತ್ತದೆ. ಇಡೀ ಪರಿಸರವೆಲ್ಲಾ ಹರೆಯ ತುಂಬಿದ ಬತ್ತದ ಸಸಿಯಿಂದ ಹೊಮ್ಮುವ ಪರಿಮಳದಿಂದ ಘಂ ಎನ್ನುತ್ತಿರುತ್ತದೆ.’

ಇನ್ನೊಂದು ಮರೆಯಲಾರದ ಹಡಿಂಬಾ ಟೆಂಪಲ್ ಎಂಬ ಬೋರ್ಡನ್ನು ಪಡೆದಿದ್ದ ಮನಾಲಿಯಲ್ಲಿ ಆದ ಅನುಭವ. ಮನಾಲಿಗಿರುವ ಹೆಸರುಗಳು `ದೇವತೆಗಳ ಕಣಿವೆ’ ಮತ್ತು `ಗಂಧರ್ವರ ಸೀಮೆ’. ಆದರೆ ಸತ್ಯಮೂರ್ತಿಗೆ ಬಿಯಾಸ್ ನದಿ ಅನುಸರಿಸಿಯೇ ಮನಾಲಿ ಸೇರಿದಾಗ ಅವಳೊಬ್ಬ ಸಾಮಾನ್ಯ ಸುಂದರಿಯಂತೆ ಮಾತ್ರ ಕಂಡಿದ್ದಳು. ಅವರು ಇಳಿದುಕೊಂಡ ಹೊಟೇಲ್ನ ಕೋಣೆಯಲ್ಲಿ ಇಡೀ ಛಾವಣಿಗೇ ಕನ್ನಡಿಯನ್ನು ಹಾಕಲಾಗಿತ್ತು. ಇದೇನು ಉತ್ತರ ಭಾರತದಲ್ಲಿ ಎಲ್ಲಾ ಉಲ್ಟಾ ಆಗಿದೆ ಎಂದು ಇವರು ಮಾತನಾಡಿಕೊಳ್ಳುತ್ತಿ ದ್ದಂತೆ, ಒಬ್ಬ ಗೂರ್ಖಾ ಹುಡುಗ- ಪರಿಚಾರಕ ಇವರಿಗೆ ಹೇಳುತ್ತಾನೆ. `ಮಂಚದ ಮೇಲೆ ಮಲಗಿದವರಿಗೆ ತಾವು ಮಲಗಿದ ಆಸನದಲ್ಲಿ ವಿವಿಧ ಭಂಗಿಗಳು ತಮ್ಮ ಕಣ್ಣ ಮುಂದೆಯೇ ಗೋಚರವಾಗಲು, ಹನಿಮೂನ್ ಆಚರಿಸಲು ಬಂದ ಗಂಡು ಹೆಣ್ಣುಗಳಿಗೆ ತಮ್ಮೆಲ್ಲ ರಾಸಲೀಲೆಗಳು ಅದ್ಭುತ ವೀಡಿಯೋ ಚಿತ್ರಗಳಂತೆ ಕಾಣಲು ಈ ವ್ಯವಸ್ಥೆ ಮಾಡಲಾಗಿರುವುದು ಎಂಬುದು ಅರಿವಾಗುತ್ತದೆ.

ಈ ಪುಸ್ತಕ ಓದಿದ ಯಾರೂ ಈ ವಿವರವನ್ನು ಮರೆಯುವುದಿಲ್ಲ.

ಸತ್ಯಮೂರ್ತಿ ನಮ್ಮ ಈ ಕಾಲದ ಚಿಂತನಾ ಕ್ರಮವನ್ನೆಲ್ಲ ಮೈಗೂಡಿಸಿಕೊಂಡವರು. ಹಿಡಿಂಬಾದೇವಿಯ ಬಗ್ಗೆ ಅವರು ಹೇಳುವ ಈ ಮಾತನ್ನು ನೋಡಿ: (ಪುಟ. 62) `ಭೀಮನನ್ನು ನಾವು ಉತ್ತಮರಪಟ್ಟಿಯಲ್ಲಿ…………….. ನಾಮಾವಶೇಷವಾದವು?’

ಸತ್ಯಮೂರ್ತಿಗೆ ಕಣ್ಣೂ ಇದೆ, ಒಳಗಣ್ಣೂ ಇದೆ. ಮನಾಲಿಯ ಗಾಳಿ ಇನ್ನೂ ಬೀಸದ `ನಗ್ಗರ್’ ಎಂಬ ಪೇಟೆಯ ವರ್ಣನೆಯನ್ನು ನೋಡಿ. ಪುಟ.66 `ಒಂದು ಪಾಶ್ರ್ವದಲ್ಲಿ ………. ಇದೇ ಶೈಲಿ.’

ಪ್ರಕೃತಿಗೂ ಮನುಷ್ಯ ಸೃಷ್ಟಿಗೂ ಇರುವ ಸಂಬಂಧಗಳು ತೀರ್ಥಹಳ್ಳಿಕಡೆಯಿಂದ ಹುಟ್ಟಿಬಂದ ಸತ್ಯಮೂತರ್ಿಗೆ ಇದೆ ಎಂಬುದು ನನಗೆ ಅಭಿಮಾನದ ವಿಷಯ. ಪುಟ.69′

ಸತ್ಯಮೂರ್ತಿ ನನ್ನ ಪಾಲಿಗೆ ನಮ್ಮ ಊರಿನ ಒಬ್ಬ ಹುಡುಗ. ನನಗತ್ಯಂತ ಪ್ರಿಯರಾಗಿ ನನ್ನ ಬಾಲ್ಯಕಾಲದ ಸಖನಾಗಿದ್ದ ಪುರುಷೋತ್ತಮ ಎಂಬ ಅಪರೂಪದ ಪ್ರತಿಭೆಯ ಮತ್ತು ಜೀವನ ಸಂತೋಷದ ವ್ಯಕ್ತಿಯೊಬ್ಬನ ಹತ್ತಿರದ ಬಂಧು. ನನಗೆ ಇವರು ತುಂಬಾ ಪ್ರಿಯರಾದದ್ದು ಕಿ. ರಂ. ನಾಗರಾಜರ ಮನೆಯಲ್ಲಿ. ಬಹಳ ಹಿಂದೆ ನಾನು ಸತ್ಯಮೂತರ್ಿಯನ್ನು ಒಬ್ಬ ಒಳ್ಳೆಯ ಲೇಖಕನಾಗಬಲ್ಲನೆಂದು ಗುರುತಿಸಿದ್ದು ಒಂದು ಸಣ್ಣ ವಿವರದಲ್ಲಿ. ಲಂಕೇಶ್ ಪತ್ರಿಕೆಗೆ ಬರೆದ ಲೇಖನದಲ್ಲಿ ಸತ್ಯಮೂರ್ತಿ, ಮಲೆನಾಡಿನಲ್ಲಿ ಬೆಳೆಯತೊಡಗಿದ್ದ ಉದ್ದವಾಗಿ, ನೆಟ್ಟಗೆ ಎಲ್ಲೆಲ್ಲೂ ದಾರಿಯುದ್ದಕ್ಕೂ ಕಣ್ಣಿಗೆ ಬೀಳುವ ನೀಲಗಿರಿ ಮರದ ಬಗ್ಗೆ ಬರೆದಿದ್ದರು. ಎಷ್ಟು ಅಪಾಯಕಾರಿಯಾದದ್ದು ಸುಂದರವಾಗಿದೆ ಎಂದು ತನಗೆ ಅನ್ನಿಸಿದ್ದ ಕ್ಷಣವನ್ನು ನೆನಪುಮಾಡಿಕೊಡಿದ್ದರು. ನೋಡಿ ಇವತ್ತಿಗೂ ನಾನು ಇದನ್ನು ಮರೆತಿಲ್ಲ. ನಾನು ನಿರೀಕ್ಷಿಸಿದ್ದಂತೆ , ಆಶಿಸಿದ್ದಂತೆ ಸಾವಿರಾರು ಮರೆತು ಹೋಗುವ ಮಾತುಗಳನ್ನು ಜೀವನೋಪಾಯಕ್ಕಾಗಿ ಬರೆಯುತ್ತಿರುವ ಹೊತ್ತಿನಲ್ಲೂ ತನ್ನ ಆತ್ಮ ಶಕ್ತಿಯನ್ನು ಈತ ಉಳಿಸಿಕೊಂಡಿದ್ದಾನೆ ಎಂಬುದು ನನಗೆ ತುಂಬ ಅಭಿಮಾನದ ವಿಷಯ. ಇಂತಹ ಪುಸ್ತಕಗಳಿಗೆ ಪ್ರೆಸ್ ಕ್ಲಬ್ ಪ್ರಕಾಶನದಲ್ಲಿ ಪ್ರಕಟಣೆಗೆ ಅವಕಾಶವಿರುವುದನ್ನು ನಾನು ಅಭಿನಂಧಿಸುತ್ತೇನೆ.

ಸತ್ಯಮೂರ್ತಿ ಆನಂದೂರು ಅವರ ಕೃತಿ `ಲೇಹ್ ಜಾಯೇಂಗೆ’ಗೆ ಬರೆದ ಮುನ್ನುಡಿ – 08/12/2011

 

‍ಲೇಖಕರು G

December 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: