ಓಶೋ ಹೇಳುವ ಕಥಾಕ್ರಮ

ಓಶೋ ಹೇಳುವ ಕಥಾಕ್ರಮ

ಎಂ.ಎಸ್.ರುದ್ರೇಶ್ವರಸ್ವಾಮಿ ಈಚೆಗೆ ನನಗೆ ಪರಿಚಿತ ರಾದವರು. ಬಹು ಬೇಗ ಆತ್ಮೀಯರೂ ಆದವರು. ನನ್ನ ಹುಟ್ಟು ಹಬ್ಬದ ದಿನ ನನ್ನ ಮೇಲೊಂದು ಪದ್ಯ ಬರೆದು ಕಳಿಸಿದರು. ಹೀಗೆ ಯಾರಾದರೂ ಪದ್ಯವನ್ನು ಬರೆದರೆ ಅದನ್ನು ಓದುವುದು ಮುಜುಗರ ತರುವ ವಿಷಯ. ಪದ್ಯ ಚೆನ್ನಾಗಿಲ್ಲದಿದ್ದರೂ ಸೌಜನ್ಯಕ್ಕಾಗಿ ಚನ್ನಾಗಿದೆಯೆಂದು ಹೇಳಬೇಕಾಗುತ್ತದೆ. ಆಶ್ಚರ್ಯವೆಂದರೆ ಇದು ನನ್ನ ಬಗ್ಗೆ ಎಂಬುದನ್ನು ಮರೆಸುವಷ್ಟು ಪದ್ಯ ತನ್ನಲ್ಲಿಯೇ ಚೆನ್ನಾಗಿತ್ತು. ಆಮೇಲೆ ಈ ಪುಸ್ತಕವನ್ನು (ಓಶೋನ ನಾನು ಮೆಚ್ಚಿದ ಪುಸ್ತಕಗಳು) ತಂದು ನನಗೆ ಕೊಟ್ಟರು. ಓಶೋ ನನ್ನ ಪಾಲಿಗೆ ಒಬ್ಬ ವಿಸ್ಮಯ ವ್ಯಕ್ತಿ. ಮೊದ ಮೊದಲು ಅವನ ತೋರಿಕೆಗಳಿಂದ ವಾಗ್ಝರಿಯಿಂದ ನಾನು ಸಂಶಯಗ್ರಸ್ತನಾಗಿದ್ದೆ. ಆದರೆ ಕ್ರಮೇಣ ಇಂಥವನೊಬ್ಬ ಇಲ್ಲ ಎನ್ನಿಸುವಷ್ಟು ಅವನ ಮಾತುಗಳಿಂದ ನಾನು ಮನಸೋತೆ.

ಈ ಪುಸ್ತಕದಲ್ಲಿ ಓಶೋ ಕಥೆ ಹೇಳುವ ಕ್ರಮವೇ ಬೇರೆಯದು. ಸಾಮಾನ್ಯವಾಗಿ ಒಬ್ಬ ಸನ್ಯಾಸಿ ಕಥೆ ಹೇಳುತ್ತಾನೆ ಎಂದರೆ ಅದಕ್ಕೆ ಕಾರಣ ನಮಗೆ ನೀತಿ ಹೇಳುವುದು. ಒಬ್ಬ ಪಂಡಿತ ಕಥೆ ಹೇಳಿದರೆ ಅದಕ್ಕೆ ಕಾರಣ ನಮ್ಮ ಜ್ಞಾನವನ್ನು ಹೆಚ್ಚಿಸುವುದು. ಯಾರಾದರೂ ರಾಜನ ಮಕ್ಕಳಿಗೆ ಕಥೆ ಹೇಳಿದರೆ ಅದಕ್ಕೆ ಕಾರಣ ಅವರ ಮೂರ್ಖತನವನ್ನು ತಿದ್ದುವುದು. ಓಶೋ ಮಾತ್ರ ಹರಿವ ನೀರಿನಂತೆ ಕಥೆಗಳನ್ನು ತನ್ನ ಮೂಲಕ ಹರಿಸುತ್ತ ಹೋಗುತ್ತಾನೆ. ಕಥೆ ಹೇಳುವವನಿಗೂ ಒಂದು ದೇಶ, ಒಂದು ಜಾತಿ, ಒಂದು ಮತ ಇವುಗಳನ್ನು ಎತ್ತಿಹಿಡಿಯುವ ಅಪೇಕ್ಷೆ ಇರುತ್ತದೆ. ಅಲ್ಲದೇ ಒಂದು ಕಥೆ ಮೇಲೆ ಇನ್ನೊಂದು ಕಥೆ ಕೆಳಗೆ ಎಂಬ ಆಯ್ಕೆ ಇರುತ್ತದೆ. ಆದರೆ ಓಶೋಗೆ ಬ್ರಹ್ಮಸೂತ್ರ, ಶಂಕರಾಚಾರ್ಯ, ದಾಸ್ತೋವಸ್ಕಿ, ಟಾಲ್ ಸ್ಟಾಯ್ ಎಲ್ಲರೂ ಒಂದೇ ಖುಷಿಯ ಕಥೆಯ ವಸ್ತುಗಳು.

ಓಶೋನ ಗುರಿ ಮನುಷ್ಯನ ಆತ್ಮದ ವಿಕಾಸ. ಇದು ದೇಹದ ಮೇಲಿನ ಪ್ರೀತಿಯನ್ನು ಕಳೆದುಕೊಂಡು ಬರುವಂಥದ್ದಲ್ಲ. ಲೌಕಿಕ ಮತ್ತು ಅಲೌಕಿಕದ ನಡುವೆ ಓಶೋಗೆ ವ್ಯತ್ಯಾಸವಿಲ್ಲ. ಆದ್ದರಿಂದ ಈ ಕಥೆಗಳನ್ನು ಅವನು ಹೇಳುವ ಉದ್ದೇಶ, ಕೇಳುಗರು ಸಮಸ್ತ ಪ್ರಪಂಚವನ್ನು ತಮ್ಮ ಒಳಗೆ ಪಡೆದು ಖುಶಿಯಾಗಬೇಕೆಂಬುದು. ಆನಂದವೇ ಅವನ ಗುರಿ.

ಓಶೋ ಯಾವ ಕೃತಕತೆ ಇಲ್ಲದಂತೆ ಧಾರಾಳವಾಗಿ ಮಾತನಾಡಬಲ್ಲವನು. ನಮ್ಮ ಎಂ. ಎಸ್. ರುದ್ರೇಶ್ವರಸ್ವಾಮಿಯಲ್ಲೂ ಈ ಮಾತಿನ ಧಾರಾಳ ಮೆಚ್ಚುವಂತೆ ಇದೆ. ಕನ್ನಡದಲ್ಲಿ ಇದೊಂದು ಬಹಳ ಜನ ಮೆಚ್ಚಬಲ್ಲ ಪುಸ್ತಕವಾಗುತ್ತದೆಂದು ನನ್ನ ಬರವಸೆ.

ಎಂ.ಎಸ್. ರುದ್ರೇಶ್ವರಸ್ವಾಮಿಯವರ ಓಶೋ ಕುರಿತ ಕೃತಿಗೆ ಬರೆದ ಮುನ್ನುಡಿ, 2012.

ಪ್ರ: ಸಪ್ನಾ ಬುಕ್ ಹೌಸ್, ಬೆಂಗಳೂರು

 

‍ಲೇಖಕರು G

December 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: