ಲೋಕಾಯತವನ್ನು ಜೀವಂತವಾಗಿಟ್ಟ ರಾಮದಾಸ್

ಲೋಕಾಯತವನ್ನು ಜೀವಂತವಾಗಿಟ್ಟ ರಾಮದಾಸ್

ನಾವು ಮಾಡಿರುವ ಅಷ್ಟೂ ಸ್ಟ್ರಗಲ್ಗಳಲ್ಲಿ ಸೋತಿರುವುದೇ ಹೆಚ್ಚು. ಗೆದ್ದಿದ್ದೀವಿ ಅಂತಿದ್ದರೆ ಅದು ತೀರಾ ಕಡಿಮೆ. ಆದರೆ ಯಾವಾಗಲೂ ವಿಚಾರಕ್ಕೆ ಒಂದು ಶಕ್ತಿ ಇರುತ್ತದೆ- ಅದು ಸದ್ಯದಲ್ಲಿ ಸೋತಹಾಗೆ ಕಂಡಿರುತ್ತದೆ. ಆದರೆ ಜಗತ್ತಿನಲ್ಲಿ ಸಂಚರಿಸುತ್ತಿರುತ್ತದೆ. ಒಂದು ಹೊಸ ವಿಚಾರ ಹುಟ್ಟಿದರೆ ಅದು ಸಾಯುವುದೇ ಇಲ್ಲ.

ನಮ್ಮ ದೇಶದಲ್ಲಿ ವೈದಿಕ ಪರಂಪರೆಯಷ್ಟೇ ಪ್ರಾಚೀನ ವಾದ ಇನ್ನೊಂದು ಪರಂಪರೆಯೂ ಇದೆ. ಅದು ಲೋಕಾಯತ ಪರಂಪರೆ. ಈ ಪರಂಪರೆಯನ್ನು ನಮ್ಮ ಕಾಲದಲ್ಲಿ ಜೀವಂತವಾಗಿಟ್ಟವರು ರಾಮದಾಸ್. ಲಂಕೇಶರಿಗಿಂತ, ತೇಜಸ್ವಿಗಿಂತ ಹೆಚ್ಚಾಗಿ ನಿಜವಾದ ಲೋಕಾಯತ ಪರಂ- ಪರೆಯ ಮುಂದುವರಿಕೆಯಾಗಿ ರಾಮದಾಸ್ ಕಾಣುತ್ತಾರೆ. ಅವರು ನಿರೀಶ್ವರವಾದಿ ಅವರ ಮನೆಯ ಹೆಸರು `ಚಾರ್ವಕ’.

ರಾಮದಾಸ್ ತಮ್ಮ ಎಲ್ಲ ಪ್ರಶ್ನೆಗಳನ್ನೂ ಅಂತಃ- ಸಾಕ್ಷಿಯ ದೃಷ್ಟಿಯಿಂದ ಮಾತ್ರ ನೋಡುತ್ತಿದ್ದರು. ಸತ್ಯ ಎನ್ನುವುದಕ್ಕೆ ಹೊರಗಿನ ಪುರಾವೆಗಿಂತ ಹೆಚ್ಚಾಗಿ ಒಳಗಿನ ಅಂತಃಸಾಕ್ಷಿ ಅವರಿಗೆ ಮುಖ್ಯವಾಗಿತ್ತು. ಇದರಿಂದಾಗಿ ಅವರು ವಿಪರೀತಕ್ಕೆ, ಅತಿಗೆ ಹೋಗುತ್ತಿದ್ದರು.

ಹೀಗೆ ಯಾರಿಗೆ ಅತಿಗೆ ಹೋಗುವ ಧೈರ್ಯವಿರುತ್ತದೋ ಅಂಥವರಿಗೆ ಕೆಲವು ಸಾಕ್ಷಾತ್ಕಾರಗಳಾಗುತ್ತವೆ. ನಮ್ಮಂಥವರಿಗೆ-ಅರ್ಧಂಬರ್ಧ ಇದ್ದವರಿಗೆ ಸಾಕ್ಷಾತ್ಕಾರ ಆಗುವುದೇ ಇಲ್ಲ. ರಾಮದಾಸ್ ಅವರಿಗೆ ಆ ರೀತಿಯ ಸಾಕ್ಷಾತ್ಕಾರ ಆಗಿತ್ತು. ಅವರು ತೀರಿಕೊಳ್ಳುವುದಕ್ಕೆ ಮುಂಚೆ ನೋಡಲು ಹೋಗಿದ್ದೆ. ಸುಮಾರು ಹೊತ್ತು ಮಾತನಾಡಿದೆವು. ಅವರು ಮಾಡಿದ ತಪ್ಪುಗಳನ್ನೆಲ್ಲ ಹೇಳಿದರು. ಜಗಳಗಳನ್ನೆಲ್ಲ ನೆನಪಿಸಿಕೊಂಡರು. ಅದು ಕೇವಲ ನನ್ನ ಅವರ ಜಗಳ ಮಾತ್ರವಾಗಿರದೆ ಆ ಕಾಲಘಟ್ಟದ ಮಂಥನವಾಗಿತ್ತು. ಅವರು ಒಂದು ಮಾತು ಹೇಳಿ ನನ್ನನ್ನು ಬೆಚ್ಚಿಸಿಬಿಟ್ಟರು. `ಸರ್, ನಾವು ಜೀವನವನ್ನು ಹೇಗೆ ಪ್ರೀತಿಸುತ್ತೇವೋ ಹಾಗೇ ಸಾವು ಹತ್ತಿರವಾದಾಗ ಅದನ್ನೂ ಪ್ರೀತಿಯಿಂದ, ಸಮಾಧಾನದಿಂದ ಅರ್ಥ ಮಾಡಿಕೊಳ್ಳಬೇಕು’ ಅರ್ಥಮಾಡಿಕೊಂಡವರ ಹಾಗೆಯೇ ತಮಗೆ ಕ್ಯಾನ್ಸರ್ ಬಂದದ್ದು ಹೇಗೆ ಎಂಬುದನ್ನು ವಿಶ್ಲೇಷಣೆ ಮಾಡಿ ಮಾತನಾಡಿದರು. ಅದರ ಭಾವ ಹೇಗಿತ್ತೆಂದರೆ ಈ ಕ್ಯಾನ್ಸರ್ ಬಂದಿರೋದು ತನಗಲ್ಲ ಬೇರೆಯವನಿಗೆ ಎಂಬಂತೆ. ದೇವರನ್ನು ನಂಬಿದವರು ಮಹಾಸಂತರು. ಆದರೆ ಹೆಚ್ಚು ಆಧ್ಯಾತ್ಮಿಕವಾಗಿರುವವರು ದೇವರನ್ನು ನಂಬಿದ ಆಧ್ಯಾತ್ಮಿಕರಿಗಿಂತ ಹೆಚ್ಚು ಆಧ್ಯಾತ್ಮಿಕವಾಗಿರುವುದಕ್ಕೆ ಸಾಧ್ಯವಿದೆ. ಈ ಅಂಶವನ್ನು ನಾನು ರಾಮದಾಸರಲ್ಲಿ ಕಂಡಿದ್ದೇನೆ. ಆತ ಮಹಾನ್ ಹಠವಾದಿ, ಮಹಾ ಜಗಳಗಂಟ ಆದರೆ ಅದನ್ನೆಲ್ಲ ಮಗುವಿನ ಹಾಗೆ ಮರೆತುಬಿಡುತ್ತಿದ್ದರು. ಅವರಲ್ಲಿ ದೊಡ್ಡ ಪ್ರೀತಿಯಿತ್ತು. ಅದು ಮಡುಗಟ್ಟಿ ನಿಂತಿದ್ದು ಅವರ ತಾಯಿಯಲ್ಲಿ. ಅವರ ಮನೆಯಲ್ಲಿ ಬೆಳೆಸಿದ ಪ್ರತಿಯೊಂದು ಗಿಡವೂ ಆ ಪ್ರೀತಿಯನ್ನೇ ಸೂಸುವಂತಿದೆ.

ರಾಮದಾಸ್ ಮನಸ್ಸು ಕೆಲಸ ಮಾಡುತ್ತಿದ್ದ ಕ್ರಮ ನನಗೆ ಹಲವು ಬಾರಿ ಅದ್ಭುತ ಎನಿಸಿದೆ. ಅದಕ್ಕೊಂದು ಉದಾಹರಣೆ ಕೊಡುತ್ತೇನೆ. ಅವರು ಮಾಡಿದ ತಪ್ಪು ಎಂದು ನನಗೆ ಅನ್ನಿಸಿದ್ದು ನನ್ನ `ಅವಸ್ಥೆ’ ಕಾದಂಬರಿ ಬಂದಾಗ. ಅದರಲ್ಲಿ ನಾನು ಒಬ್ಬ ಸಮಾಜವಾದಿಯ ಬಗ್ಗೆ ಮರ್ಯಾದೆಯಿಲ್ಲದೆ ನಡೆದುಕೊಂಡುಬಿಟ್ಟೆ ಎಂದು ಎಲ್ಲಿ ಮಾತನಾಡುವುದಕ್ಕೆ ನಿಂತರೂ ಅವರು ಎದ್ದು ನಿಂತುಬಿಡುತ್ತಿದ್ದರು. `ನೀವು ಮಾತನಾಡೊ ಹಾಗಿಲ್ಲ’ ಎಂದು ಪ್ರತಿಭಟಿಸುತ್ತಿದ್ದರು. ಬಹಳ ದಿನಗಳ ನಂತರ ಸಿಕ್ಕಾಗ `ಸರ್, ಒಂದು ವಿಷಯದಲ್ಲಿ ನನ್ನ ಬಗ್ಗೆ ನನಗೇ ನಾಚಿಕೆಯಾಗುತ್ತೆ-ನಿಮ್ಮ ಪುಸ್ತಕವನ್ನು ವಿರೋಧಿಸಿದ್ದರ ಬಗ್ಗೆ’ ಎಂದರು. ಒಂದು ಮಗುವಿನ ಹಾಗೆ ಜಗಳವಾಡಿದರು; ಮಗುವಿನ ಹಾಗೇ ಆ ತಪ್ಪನ್ನು ಹೇಳಿಕೊಂಡರು. ಅದರಲ್ಲಿ ಪಾಪಭಾವನೆ ರವಷ್ಟು ಇರಲಿಲ್ಲ. ನಾನು ಹೀಗೆ ಇರಬೇಕಾದರೆ ತಪ್ಪನ್ನು ಮಾಡೋಕೂ ಸಾಧ್ಯ ಇರಬೇಕು. ಅದನ್ನು ಸರಿ ಮಾಡಿಕೊಳ್ಳುವುದಕ್ಕೆ ಸಾಧ್ಯವಿರಬೇಕು-ಇದು ಅಗಾಧವಾದ ಪ್ರೀತಿಯ ಶಕ್ತಿ.

ರಾಮದಾಸ್ ಕೆಲವರ ಜೊತೆ ಜಗಳವಾಡುತ್ತಿರಲಿಲ್ಲ. ಪ್ರತಿಭಟನೆ ಮಾಡುವಾಗಲೂ ಮರ್ಯಾದೆ ಬಿಟ್ಟು ನಡೆಸಿಕೊಳ್ಳುತ್ತಿರಲಿಲ್ಲ. ಅವರಲ್ಲಿನ ದೊಡ್ಡ ಚೈತನ್ಯ ಶಕ್ತಿ ಅದು. ಈ ಆಲೋಚನೆಗಳನ್ನೆಲ್ಲ ಅವರು ಪಡೆದುಕೊಂಡಿದ್ದು ಗಾಂಧಿ-ಲೋಹಿಯಾರಿಂದ.

ಒಮ್ಮೊಮ್ಮೆ ನಾನು `ದೇವರನ್ನು ಮತ್ತು ಅತೀತವಾದದ್ದನ್ನು ಇಷ್ಟು ನಿರಾಕರಣೆ ಮಾಡುವುದಾದರೆ ನಿಮಗೆ ನಾವು ಸಿಗೋದಿಲ್ಲ’ ಎನ್ನುತ್ತಿದ್ದೆ. ಕವಿಗಳಿಗೆ ಇರುವ ದೌರ್ಬಲ್ಯವೆಂದರೆ ತನ್ನ ಲೋಕದ ಆಚೆಗೆ ಕೈಚಾಚುವುದು. ರಾಮದಾಸ್ ಕೂಡ ಕೈ ಚಾಚಿದ್ದರೆ ಬೌದ್ಧರು ಚಾಚಿದ ಹಾಗೆ ಕಾಣುತ್ತದೆ.

ಮೊದಲೇ ಹೇಳಿದಂತೆ ವಿಚಾರ ಯಾವ ಹೊತ್ತಿಗೂ ಸಾಯುವುದಿಲ್ಲ. ಲೋಕಾಯತದವರು ಸಾವಿರದೈನೂರು ವರ್ಷಗಳ ಹಿಂದೆ ಹುಟ್ಟು ಹಾಕಿದ ಬೀಜ ಕುವೆಂಪು ನಗರದ ಚಾರ್ವಕದಲ್ಲಿ ಜೀವಂತವಾಗಿತ್ತು ಎಂದರೆ ಅದು ಅದ್ಭುತ.

ಭಾರತ ಒಂದು ದೊಡ್ಡ ನಾಗರಿಕತೆ ಎನ್ನುವುದಾದರೆ ಅಲ್ಲಿ ರಾಮದಾಸ್ರಂಥವರಿಗೂ ಅವಕಾಶವಿದೆ, ಕನರ್ಾಟಕದಲ್ಲೂ ಅವಕಾಶಗಳಿವೆ. ಅಂಥ ಅವಕಾಶಗಳೇ ಇಲ್ಲದಿರುವ ಕರ್ನಾಟಕವಾಗಿಬಿಟ್ಟರೆ ಈ ದೇಶವನ್ನು ಪ್ರೀತಿಸೋದಕ್ಕೂ ಸಾಧ್ಯವಿಲ್ಲ. ನನಗೆ ಯಾರ ಜತೆ ಸತತವಾಗಿ ಜಗಳವನ್ನು ಇಟ್ಟುಕೊಂಡು ಭಿನ್ನಾಭಿಪ್ರಾಯವನ್ನು ಇಟ್ಟುಕೊಂಡೂ ಆತನ ಹಟವಾದಿತನದ ವಿರುದ್ಧ ಹೋರಾಡುತ್ತ ಆಗಾಗ ಅವರನ್ನು ಟೀಕಿಸುತ್ತಿದ್ದರೂ ಮಾರನೆಯ ದಿನಕ್ಕೆ ರಾಮದಾಸ್ ಇಲ್ಲದಿದ್ದರೆ ಇದನ್ನು ಯಾರ ಹತ್ತಿರ ಹೇಳೋದು? ಅನ್ನಿಸಿಬಿಡುತ್ತದೆ.

ರಾಮದಾಸ್ ನಿಧನರಾದಾಗ ಆಡಿದ ಮಾತುಗಳ ವಿಸ್ತೃತ ಬರಹ: ಕೃಪೆ: ಉರಿದ ಪಂಜು, 2010. ಸಂ: ಡಿ. ಎಸ್ ನಾಗಭೂಷಣ, ಎಚ್. ಎಲ್. ಕೇಶವಮೂರ್ತಿ,

ಅಭಿರುಚಿ ಪ್ರಕಾಶನ, ಮೈಸೂರು.

 

‍ಲೇಖಕರು G

December 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: