ಲೋಹಿಯಾ ಜೊತೆ

ಲೋಹಿಯಾ ಜೊತೆ

ನಾನು ಲೋಹಿಯಾ ಅವರನ್ನು ಮೊದಲು ನೋಡಿದ್ದು ಶಿವಮೊಗ್ಗ ನಗರದ ರೈಲ್ವೆ ಸ್ಟೇಶನ್ನಲ್ಲಿ. ಬೆಂಗಳೂರಿನಿಂದ ಸಾಗರಕ್ಕೆ ಹೋಗುವ ರೈಲು ಡಬ್ಬಿಯಲ್ಲಿ ಅವರೊಬ್ಬರೇ ನಿದ್ದೆಗೆಟ್ಟು ಎದ್ದು ಕೂತಿದ್ದರು. ನಾನು ಅವರಿಗೆ ನಮ್ಮ ಮನೆಯಿಂದ ನಮ್ಮಮ್ಮ ಮಾಡಿದ ಡಿಕಾಕ್ಷನ್ ಕಾಫಿಯನ್ನು ಮತ್ತು ಪಕ್ಕದ ಹೊಟೇಲ್ನಿಂದ ಕೊಂಡಿದ್ದ ಬಿಸಿಬಿಸಿ ಇಡ್ಲಿಯನ್ನು ತೆಗೆದುಕೊಂಡು ಹೋಗಿದ್ದೆ.

ಲೋಹಿಯಾರವರು ಸತ್ಯಾಗ್ರಹಿಯಾಗಿ ಉಪವಾಸ ಇದ್ದರೆಂದು ಕಾಣುತ್ತದೆ. ನಸು ನಕ್ಕು ಬೇಡವೆಂದರು. ಈ ಘಟನೆಗೆ ಇರುವ ಹಿನ್ನೆಲೆ ಹೇಳುವೆ. ಕಾಗೋಡು ರೈತ ಸತ್ಯಾಗ್ರಹದಲ್ಲಿ ಲೋಹಿಯಾರವರು ನೇಗಿಲು ಹಿಡಿದು ಉಳಲು ಹೋಗಿ ಎಲ್ಲ ರೈತರಂತೆ ಬಂಧಿತರಾಗಿದ್ದರು. ನೆಹರೂರವರ ಅತ್ಯುತ್ತಮ ಸ್ನೇಹಿತರೊಲ್ಲೊಬ್ಬರೆಂದೇ ಖ್ಯಾತರಾಗಿದ್ದ ಲೋಹಿಯಾರವರನ್ನು ಸಕರ್ಾರ ಸಾಗರದ ಜೈಲಿಗೆ ಹಾಕಿರಲಿಲ್ಲ.

ಬೆಂಗಳೂರಿನ ಜೈಲಿನಲ್ಲಿ ಇಟ್ಟಿದ್ದರು. ನನಗೆ ನೆನಪಿಲ್ಲ- ಲೋಹಿಯಾರವರು ಇದನ್ನು ಪ್ರತಿಭಟಿಸಿದ್ದರೋ ಏನೋ…

ಮ್ಯಾಜಿಸ್ಟ್ರೇಟರ್ ಎದುರು ಒಬ್ಬ ಅಪರಾಧಿಯಾಗಿ ನಿಂತು ಲೋಹಿಯಾರವರು ಅವರ ಯಾವತ್ತಿನ ನುಡಿಗಟ್ಟಿನಲ್ಲಿ ಮ್ಯಾಜಿಸ್ಟ್ರೇಟರ್ನ್ನು `ಮ್ಯಾಜಿಸ್ಟರ್’ ಎಂದು ಕರೆದರು. ನಾವು ಭಾಷೆಯನ್ನು ಪಡೆಯುವುದೇ ಹೀಗೇ ಎಂದು ವಿವರಿಸಿದರು ಕೂಡಾ. ಕೆಲವು ದಿನಗಳಲ್ಲೇ ಲೋಹಿಯಾ ಅಮೆರಿಕಾಕ್ಕೆ ಹೋಗುವುದಿತ್ತು. ನೆಹರೂರವರು ಮಧ್ಯಪ್ರವೇಶಿಸಿ ಅವರನ್ನು ಬಿಡುಗಡೆ ಮಾಡಿದರು ಎಂಬ ಸುದ್ದಿಯೂ ಇತ್ತು. ನನಗೊಬ್ಬ ವಿಲಕ್ಷಣ ವ್ಯಕ್ತಿ ಎನಿಸುತ್ತದೆ ಈ ಲೋಹಿಯಾ.

ಲೋಹಿಯಾ ಬಗ್ಗೆ ಹೀಗೆ ಹಲವು ಕತೆಗಳಿದ್ದವು. ಅದರಲ್ಲಿ ಒಂದು ಕತೆ ಪ್ರಕಾರ ಇಂದಿರಾ ಅವರಿಗೆ ತುಂಬಾ ಇಷ್ಟವಾದವರು ಲೋಹಿಯಾ. ಜೈಲಿನಲ್ಲಿದ್ದಾಗ ನೆಹರು ಮಗಳಾದ ಇಂದಿರಾ ಒಂದು ಬುಟ್ಟಿ ಮಾವಿನ ಹಣ್ಣನ್ನು ಲೋಹಿಯಾರಿಗೆ ಕಳುಹಿಸಿದ್ದರು ಎಂದು ಎಲ್ಲಾ ಪತ್ರಿಕೆಗಳಲ್ಲೂ ಬಂದಿತ್ತು.

ಮತ್ತೆ ನಾನು ಲೋಹಿಯಾರನ್ನು ನೋಡಿದ್ದು ನನ್ನ ಯೌವನದ ದಿನಗಳಲ್ಲಿ. ಶಾಂತವೇರಿ ಗೋಪಾಲ ಗೌಡರ ಜೊತೆ. ಒಂದು ಭೇಟಿ ನನಗೆ ಯಾವತ್ತೂ ನೆನಪಿರುತ್ತದೆ. ಲೋಹಿಯಾರನ್ನು ಕೃಷ್ಣರಾಜ ಸಾಗರ ಹೊಟೇಲ್ನಲ್ಲಿ ಇಳಿಸಿದ್ದರು. ಅವರ ಜೊತೆ ಬೆಳಗಿನ ಉಪಹಾರಕ್ಕೆಂದು ಶಾಂತವೇರಿ ನನ್ನನ್ನು ಕರೆದುಕೊಂಡು ಹೋದರು.

ಲೋಹಿಯಾ ತುಂಬಾ ಸಜ್ಜನಿಕೆಯ ಮಾತುಗಾರ. ಮತ್ತು ಮಾತಾಡುವುದರಲ್ಲಿ ಖುಶಿ ಇದ್ದವರು. ಊಟದ ಹೊತ್ತಿನಲ್ಲಿ ಅವರಷ್ಟು ಉಪಚಾರ ಮಾಡುವವರನ್ನು ಕಾಣುವುದು ಅಪರೂಪ. ಮೊದಲು ನನಗೆ ಅವರು ಪಪ್ಪಾಯಿಯನ್ನು ಒತ್ತಾಯಪಡಿಸಿ ಹೊಟ್ಟೆತುಂಬಾ ತಿನ್ನಿಸಿದರು. ಸಸ್ಯಾಹಾರಿಯಾದರೂ ಲೋಹಿಯಾ ಮೊಟ್ಟೆಯೊಂದನ್ನು ಮಾತ್ರ ತಿನ್ನುತ್ತಿದ್ದರು. ನನಗೂ ಅವರಿಗೂ ಆಮ್ಲೇಟ್, ಬ್ರೆಡ್ನ್ನು ತರಿಸಿದರು. ಭಾಷೆ ಬಗ್ಗೆ ನಮ್ಮ ಮಾತು ತಿರುಗಿತು. ಲೋಹಿಯಾ ಹೇಳಿದರು-`ನೀನೊಬ್ಬ ಲೇಖಕ. ಇದನ್ನು ಬರೆದು ಪ್ರಚಾರ ಮಾಡಬೇಕು. ನಾವೆಲ್ಲಾ ಇಂಗ್ಲಿಷ್ನ್ನು ಗ್ರಹಿಕೆಯ ಭಾಷೆಯಾಗಿ ಕಲಿಯಬೇಕು. ಆದರೆ ಅಭಿವ್ಯಕ್ತಿ ಭಾಷೆಯಾಗಿ ಅಲ್ಲ. ವೇದೋಪನಿಷತ್ತುಗಳನ್ನು ಸಂಸ್ಕೃತದಿಂದ ಇಂಗ್ಲಿಷ್ಗೆ ಭಾಷಾಂತರ ಮಾಡಿದ ಮ್ಯಾಕ್ಸ್ ಮುಲ್ಲರ್ ಸಂಸ್ಕೃತದಲ್ಲಿ ಮಾತನಾಡುವ ಶಕ್ತಿ ಪಡೆದಿದ್ದನೋ ಇಲ್ಲವೋ. ಆದರೆ ಅವನ ಗ್ರಹಿಸುವ ಶಕ್ತಿಯಿಂದ ಎಂಥಾ ಕೆಲಸವನ್ನು ಅವನು ಮಾಡುವುದು ಸಾಧ್ಯವಾಯಿತು! ಹಾಗೇ ನಮಗೆ ಯುರೋಪ್ ಗ್ರಹಿಕೆಗೆ ಬೇಕು. ಅಭಿವ್ಯಕ್ತಿಗೆ ಮಾತ್ರ ನಮ್ಮ ನಮ್ಮ ಭಾಷೆಗಳೇ ಬೇಕು. ಆದರೆ ನಿನಗೊಂದು ಸಲಹೆ- ಕನ್ನಡವನ್ನು ನೀವು ಗ್ರಾಜುಯೇಶನ್ ಶಿಕ್ಷಣ ಮಟ್ಟಕ್ಕೆ ಬಳಸಿ. ಪೋಸ್ಟ್ ಗ್ರಾಜುಯೇಶನ್ ಹಂತಕ್ಕೆ ಬಂದಾಗ ಹಿಂದಿಯನ್ನು ಬಳಸಬೇಕೆಂದು ಸೂಚಿಸುತ್ತೇನೆ.’

ನನಗಾಗ ಥಟ್ಟನೆ ಹೊಳೆದಿದ್ದನ್ನು ಹೇಳಿದೆ- `ಸರ್, ಒಂದು ಭಾಷೆ ಪೋಸ್ಟ್ ಗ್ರಾಜುಯೇಶನ್ ಅಧ್ಯಯನಕ್ಕೆ ಸಲ್ಲದು ಎನ್ನಿಸಿದರೆ ಅದು ಪ್ರೆ ಮರಿ ಅಧ್ಯಯನಕ್ಕೂ ಸಲ್ಲದು ಎಂದು ತಿಳಿಯಬೇಕು.’ ನನಗಾದ ಆಶ್ಚರ್ಯವೆಂದರೆ ಇದನ್ನು ಕೇಳಿಸಿಕೊಂಡ ಲೋಹಿಯಾ ಯಾವ ಪ್ರತಿವಾದವನ್ನು ಹೂಡಲಿಲ್ಲ. ನನ್ನ ಮಾತನ್ನು ಒಪ್ಪಿಕೊಂಡು ಹೇಳಿದರು- `ನಿನ್ನ ಮಾತನ್ನು ಒಪ್ಪುವೆ. ಇಂಡಿಯಾಕ್ಕೊಂದು ಸಾಮಾನ್ಯ ಭಾಷೆ ಇರಬೇಕು. ಇಂಗ್ಲಿಷ್ ಆಗಿರಬಾರದೆಂದು ನಾನು ಇದನ್ನು ಹೇಳಿದೆ. ಭಾರತ ಬಹುಭಾಷಿಕ ದೇಶವಾಗಿದೆ. ಎಲ್ಲಾ ಭಾಷೆಗಳೂ ಇಲ್ಲಿ ರಾಷ್ಟ್ರಭಾಷೆಗಳೇ ಆಗಿವೆ. ವಿಶ್ವಸಂಸ್ಥೆಯಲ್ಲಿ ಇರುವಂತೆ ನಮ್ಮ ಎಲ್ಲಾ ಪ್ರಾಂತ್ಯಗಳಿಂದ ಬಂದ ಜನ ದೆಹಲಿಯಲ್ಲಿ ಕೂಡುವಂತಾದರೆ ಭಾಷೆಯಿಂದ ಭಾಷೆಗೆ ಅನುವಾದ ಮಾಡಲು ಹಲವರು ಇರಬೇಕು. ಆಗ ಸ್ವರಾಜ್ಯ ಎನ್ನುವುದು ಎಲ್ಲಾ ಭಾಷೆಗಳಲ್ಲಿ ನೈಜವಾಗುತ್ತದೆ.

ನಾನು ಇಂಗ್ಲೆಂಡ್ನಿಂದ ಓದಿ ಬಂದ ಮೇಲೆ ನನ್ನ ಥೀಸಿಸ್ ವಿಷಯ ಕೇಳಿದರು. ಇಷರ್ವುಡ್ ಎಂಬ ಲೇಖಕ ಕ್ರಾಂತಿಯ ವಿಚಾರಗಳಿಂದ ವಿಮುಖನಾಗಿ ರಾಮಕೃಷ್ಣರ ಭಕ್ತನಾದದ್ದನ್ನು ನಾನು ಹೇಳಿದೆ. ಈ ಘಟನೆಯನ್ನು ಅಚ್ಯುತ ಪಟವರ್ಧನರನ್ನು ಕಂಡಿದ್ದ ಲೋಹಿಯಾ ತುಂಬಾ ಕುತೂಹಲಿಯಾಗಿ ಇನ್ನೊಮ್ಮೆ ಆ ವಿವರಗಳನ್ನು ನನ್ನಿಂದ ಕೇಳಿ ತಿಳಿದರು. ಆ ದಿನವೇ ನಾನು ಅಕ್ಕಮಹಾದೇವಿಯ ಕೆಲವು ವಚನಗಳನ್ನು ಓದಿ ವಿವರಿಸಿದೆ. ನನಗಿಂತ ಮೊದಲೇ ಈ ಕೆಲಸವನ್ನು ಶಾಂತವೇರಿ ಮಾಡಿದ್ದರೆಂದು ಆಮೇಲೆ ತಿಳಿಯಿತು.

ಇನ್ನೊಂದು ಘಟನೆ ಲೋಹಿಯಾರ ಕೋಪಕ್ಕೆ ಸಂಬಂಧಿಸಿದ್ದು. ಮೈಸೂರಿನ ಮಾನಸ ಗಂಗೋತ್ರಿಯ ಪೊಲಿಟಿಕಲ್ ಸೈನ್ಸ್ ವಿಭಾಗದ ವಿದ್ಯಾಥರ್ಿಗಳನ್ನು ಉದ್ದೇಶಿಸಿ ಲೋಹಿಯಾ ಮಾತಾಡುವಂತೆ ಶಾಂತವೇರಿ ಒತ್ತಾಯ ಮಾಡಿದರು. ಶಾಂತವೇರಿ ಮೇಲೆ ಈ ಒತ್ತಾಯ ತಂದವರು ಆಗ ಅಲ್ಲಿದ್ದ ಪ್ರೊಫೆಸರ್. ದಾಕ್ಷಿಣ್ಯ ಸ್ವಭಾವದ ಲೋಹಿಯಾರಂತೂ ಒಪ್ಪಿ ಗಂಗೋತ್ರಿಗೆ ಬಂದರು. ಅಷ್ಟರಲ್ಲಾಗಲೇ ಲೋಹಿಯಾ ಇಂಗ್ಲೀಷ್ನ್ನು ಸಾರ್ವಜನಿಕ ಸಭೆಯಲ್ಲಿ ಬಳಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದರು. ಲೋಹಿಯಾ ಎಲ್ಲದರಲ್ಲೂ ಹೀಗೆ. ಹಿಂದಿಯಲ್ಲೇ ಮಾತಾಡುವುದೆಂದು ಹಟ ತೊಟ್ಟು ದಕ್ಷಿಣ ಭಾರತದವರಿಗೆ ಅಪ್ರಿಯರಾದರು. ದಕ್ಷಿಣ ಭಾರತದವರು ಪ್ರಧಾನಮಂತ್ರಿಯಾಗ ಬೇಕೆಂದು ಹೇಳಿ ಉತ್ತರದಲ್ಲಿ ಅಪ್ರಿಯರಾದರು. ಆವತ್ತು ಶಾಂತವೇರಿ ಮತ್ತು ಪ್ರೊಫೆಸರ್ ಒತ್ತಾಯಕ್ಕೆ ಕಟ್ಟುಬಿದ್ದು ಇಂಗ್ಲಿಷ್ನಲ್ಲೇ ಮಾತನಾಡಿದರು. ಅಂದಿನ ಮಾತಿನ ಸಾರಾಂಶ ಹೀಗಿತ್ತು. ಭಾರತದ ಕೊನೆಯ ದೊಡ್ಡ ಚಿಂತಕನೆಂದರೆ ಶಂಕರಾಚಾರ್ಯ. ಅವರ ನಂತರ ಉತ್ಕೃಷ್ಟ ಮಟ್ಟದ ಚಿಂತನೆ ಮಾಡಿದಂಥವರು ಭಾರತದಲ್ಲಿ ಹುಟ್ಟಲೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಜನರು ತಮ್ಮ ತಮ್ಮ ಜಾತೀಯ ಕೂಪಗಳಲ್ಲಿ ಬದುಕಿರುವುದೇ ಆಗಿದೆ. ಮತ್ತೆ ಇನ್ನೊಂದು ದೊಡ್ಡ ವರ್ಣಸಂಕರದ ಮಂಥನ ಈ ದೇಶದಲ್ಲಿ ನಡೆಯದೇ ಹೋದರೆ ಹೊಸ ಜ್ಞಾನದ ಉತ್ಪತ್ತಿ ಸಾಧ್ಯವಿಲ್ಲವೇನೋ..

ಇದನ್ನು ಹೇಳಿ ಲೋಹಿಯಾ ಕುಳಿತ ನಂತರ ಮಾನಸಗಂಗೋತ್ರಿಯ ಪ್ರೊಫೆಸರ್ ತಮ್ಮ ಜ್ಞಾನ ಪ್ರದರ್ಶನ ಮಾಡಿದರು. ನೆಹರೂಗೆ ಬಲಗೈಯಂತಿದ್ದ ಲೋಹಿಯಾ ಇಷ್ಟು ನಿರಾಶಾವಾದಿಯಾಗಿ ಯೋಚಿಸುತ್ತಿದ್ದಾರೆಂದು ಮರುಗಿ ತಮ್ಮ ಮಾತನ್ನು ಮುಗಿಸಿದರು. ಇದೆಲ್ಲವನ್ನೂ ಸುಮ್ಮನೆ ಕುಳಿತುಕೊಂಡೇ ಕೇಳಿಸಿಕೊಂಡ ಲೋಹಿಯಾ ಹೊರಗೆ ಬಂದು ನೇರವಾಗಿ ಕಾರಿನಲ್ಲಿ ಹೋಗಿ ಕುಳಿತರು. ಆಗ ಅಲ್ಲಿದ್ದವರು ನಾನು, ಶಾಂತವೇರಿ ಮತ್ತು ಕಾರ್ ಡ್ರೆ ವರ್. ಲೋಹಿಯಾ ಅದೆಷ್ಟು ತೀವ್ರವಾಗಿ ತನ್ನ ಜೊತೆಯವರ ಮೇಲೆ ಸಿಟ್ಟುಗೊಂಡಿದ್ದರು ಎಂಬುದನ್ನು ನಾನು ನೋಡಿದ್ದು ಆವತ್ತೇ. `ಈ ಶಾಂತವೇರಿ ಯುನಿವರ್ಸಿಟಿಯಲ್ಲಿ ಗ್ರಾಜುಯೇಟ್ ಆಗಲಿಲ್ಲ. ಯುನಿವರ್ಸಿಟಿಯಲ್ಲಿ ಡಿಗ್ರಿ ಮಾಡಿದ ಮಹಾಜ್ಞಾನಿಗಳ ಭ್ರಾಂತಿಯಲ್ಲಿದ್ದಾನೆ. ನನ್ನನ್ನು ಒಬ್ಬ ಮೂರ್ಖನನ್ನು ನೋಡಲು ಕರೆದುಕೊಂಡು ಹೋದ. ನನ್ನ ವ್ರತ ಮುರಿದು ದರಿದ್ರ ಇಂಗ್ಲಿಷ್ನಲ್ಲಿ ಮಾತಾಡುವಂತಾಯಿತು. ಇದರ ಬದಲು ರಸ್ತೆ ಬದಿಯಲ್ಲಿ ಜನರ ಮಧ್ಯೆ ಮಾತಾಡಬಹುದಿತ್ತು’ ಎಂದು ಹುಬ್ಬು ಗಂಟಿಕ್ಕಿ ಕೂತರು. ಶಾಂತವೇರಿಗೂ ಬೇಸರವಾಗಿತ್ತು. ಆದರೆ ಲೋಹಿಯಾ ನಿಂದನೆ ಅವರಿಗೆ ಸಹಜವಾಗಿಯೇ ನಿರಾಧಾರ ಎನಿಸಿತ್ತು. ಅವರು ಆಳವಾದ ಧ್ವನಿಯಲ್ಲಿ `ನಿಮ್ಮ ಸೇವೆ ಸಾಕು ನನಗೆ’ ಎಂದು ಸ್ವಲ್ಪಹೊತ್ತು ಸುಮ್ಮನಾಗಿಬಿಟ್ಟರು. ಲೋಹಿಯಾ ಶಾಂತವೇರಿ ಹೆಗಲ ಮೇಲೇ ಕೈಹಾಕಿ `ಎಲ್ಲವನ್ನೂ ಮರೆತು ಬಿಡೋಣ’ ಎಂದರು.

ಲೋಹಿಯಾರವರೇ ಶಾಂತವೇರಿಯಿಂದ `ಸಂಸ್ಕಾರ’ ಕಾದಂಬರಿ ಕತೆ ಕೇಳಿ ಅದನ್ನು ಪಟ್ಟಾಭಿರಾಮ ರೆಡ್ಡಿಗೆ, ಸ್ನೇಹಲತಾರಿಗೂ ಹೇಳಿ ಸಿನೆಮಾ ಮಾಡಲು ಪ್ರೇರಕ ಶಕ್ತಿಯಾದರು.

ನವ ಮಾನವ ಮಾಸಿಕ, ಅಕ್ಟೋಬರ್, 2012

ಅಕ್ಷರ ರೂಪ : ಜಿ ಪಿ ಪ್ರಭಾಕರ ತುಮರಿ, ಮಣಿಪಾಲ.

 

‍ಲೇಖಕರು G

December 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: