ಪ್ರೊ ವಿವೇಕ ರೈ ಅವರು ಡಾ ಹಾವನೂರರ ಬಗ್ಗೆ ಆಪ್ತವಾಗಿ ಬರೆದ ಟಿಪ್ಪಣಿ ಹೃದಯ ತುಂಬಿದೆ. ನಾನು ಕಂಡಂತೆ ಡಾ ಶ್ರೀನಿವಾಸ ಹಾವನೂರರು ತಮ್ಮನ್ನು ನೂರಕ್ಕೆ ನೂರು ಸಂಶೋಧನೆಗೆ ತೆತ್ತುಕೊಂಡಂತ ಹಳೆಯ ತಲೆಮಾರಿನ ವಿದ್ವತ್ ಪರಂಪರೆಗೆ ಸೇರಿದವರು. ಮಹಾ ಪಂಡಿತರಾಗಿದ್ದೂ ಅವರ ಕಾವ್ಯ ಸಂವೇದನೆ ಸೂಕ್ಷ್ಮವಾಗಿತ್ತು. ನನಗೆ ಪ್ರಶಸ್ತಿಯೊಂದು ಸಂದರ್ಭದಲ್ಲಿ ಅವರು ನನ್ನ ಕಾವ್ಯದ ಕುರಿತು ಮಾಡಿದ ಾಭಿನಂದನ ಉಪನ್ಯಾಸ ನಾನು ಮರೆಯಲಿಕ್ಕೇ ಸಾಧ್ಯವಿಲ್ಲ. ಪ್ರಶಸ್ತಿ ಬಂದದ್ದು ನನ್ನ ಯಾವುದೋ ವಿಮರ್ಶೆಯ ಪುಸ್ತಕಕ್ಕೆ. ಆದರೆ ಡಾ ಹಾವನೂರರು ಮಾತಾಡಿದ್ದು ನನ್ನ ಕಾವ್ಯದ ಬಗ್ಗೆ! ಈ ಹಿರಿಯರ ನೆನಪು ನನ್ನಲ್ಲಿ ಸದಾ ಹಸಿರಾಗಿ ಉಳಿದಿರುತ್ತದೆ.
-ಎಚ್ ಎಸ್ ವೆಂಕಟೇಶಮೂರ್ತಿ
ಹಾವನೂರರ ಬಗ್ಗೆ ಸಾಮಾನ್ಯವಾಗಿ ತಿಳಿಯದೆ ಇರಬಹುದಾದ ಇನ್ನೊಂದು ವಿಷಯ – ಅವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಾನ್ದಮೆಂತಲ್ ರಿಸರ್ಸ್ಚಿನಲ್ಲಿದ್ದಾಗ ಅವರು ನಮಗೆಲ್ಲಾ ಗ್ರಂಥಪಾಲಕರು, ಕನ್ನಡ ವಿದ್ವಾಂಸರಲ್ಲ. ಅವರ ಅಲ್ಲಿನ ಕೆಲಸದ ವ್ಯಾಪ್ತಿಯಲ್ಲಿ ಇದು ಒಳಗೊಂಡಿಲ್ಲದಿದ್ದರೂ ನಮಗೆ ಬೇಕಾದ ಕನ್ನಡ ಪುಸ್ತಕಗಳನ್ನು ತರಿಸಿಕೊಡುತ್ತಾರೆ ಎನ್ನುವುದು, ಹೇಗೋ ಬಾಯಿಂದ ಬಾಯಿಗೆ ಹರಡಿತ್ತು. ಒಂದು ಸಲ ನನಗೆ ನನ್ನ ಸ್ನೇಹಿತ ಒಬ್ಬನ ಹತ್ತಿರ ನೋಡಿದ್ದ ಕಿಟ್ಟೆಲ್ ನಿಘಂಟು ಬೇಕು ಎನ್ನಿಸಿತು. ಬೊಂಬಾಯಿನ ಅಂಗಡಿಗಳಲ್ಲಿ ಸ್ವಲ್ಪ ಹುಡುಕಿದೆ. ಸಿಕ್ಕಲಿಲ್ಲ. ಅವರನ್ನು ಹೋಗಿ ಕೇಳಿದೆ. ಸರಿ ಎಂದರು. ಒಂದೆರಡು ವಾರಗಳ ನಂತರ ಒಂದು ಚೀಟಿ ಕಳಿಸಿ ಬಂದಿದೆ ಎಂದು ತಿಳಿಸಿದರು. ಅವರಿಗೆ ಅದರ ಬೆಲೆ ಕೊಟ್ಟು ಇಟ್ಟುಕೊಂಡೆ. ಇಂದಿಗೂ ಇದು ನನಗೆ ಆಗಾಗ ಬಳಕೆಯಾಗುವ ಪುಸ್ತಕ, ನೋಡಿದಾಗೆಲ್ಲಾ ಅವರ ನೆನಪು ತರುವಂತಹದು
-ತುರಂಗ
೧೯೭೩ – ಇನ್ನೂ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದ ನಾನು, ಯಾವ ಪುಸ್ತಕೋದ್ಯಮದ ಕನಸೂ ಇಲ್ಲದೆ, ಕೇವಲ ಹೊಸ ಸಾಹಸದ ಹೊಳಹಿನೊಡನೆ ಒಂದಷ್ಟು ಪುಸ್ತಕ ಹೊತ್ತು ಮುಂಬೈ ಸೇರಿದ್ದೆ. ನನಗೆ ಅತ್ತ ಮೈಸೂರಿನಿಂದ ತಂದೆ (ಜಿಟಿನಾ), ಇತ್ತ ಮುಂಬೈಯಲ್ಲೇ ಇದ್ದ ಚಿಕ್ಕಪ್ಪ (ವಿಕೆ ಭಟ್) ಮುಂಬೈಯಲ್ಲಿ ಕನ್ನಡ ನಾಡಿ ತಜ್ಞ ಎಂದು ಹೇಳಿದ್ದು ಒಂದೇ ಹೆಸರು – ಶ್ರೀನಿವಾಸ ಹಾವನೂರ. ಅವರ ಜೀವದ ಗೆಳೆಯ ರಾಮಚಂದ್ರ ಉಚ್ಚಿಲ್, ಎ.ಎಸ್ಕೆ ರಾವ್, ಗುಡಿ, ವ್ಯಾಸರಾಯ ಬಲ್ಲಾಳ್ ಮುಂತಾದವರನ್ನೆಲ್ಲ ಪರಿಚಯಿಸಿಕೊಟ್ಟರು. ಮುಂದುವರಿದ ಮಿಂಚಿನಬಳ್ಳಿ ಅಥವಾ ದ್ವೈಪಾಯನ ಟ್ರಸ್ಟಿನ ಪ್ರಕಟಣೆಗಳನ್ನೆಲ್ಲ ಮುಕ್ತವಾಗಿ ಮಾರಲು ಕೊಟ್ಟರು………. (ಚಂಚು ಪ್ರವೇಶ) ನನ್ನ ಮೀಸೆಯ ಕುಡಿ ಕೊಟ್ಟದ್ದೇ ಸಾಕಾಯ್ತು, ಎಳೆದು ಹಾಕಿದರು. ಒಂದು ತಿಂಗಳ ‘ಸಾಹಸ’ಕ್ಕೆ ಹೋದವನಿಗೆ ವೃತ್ತಿ ಪುಸ್ತಕೋದ್ಯಮಿಯಾಗುವಲ್ಲಿ ಇವರ ಕೊಡುಗೆ ಸಣ್ಣದಲ್ಲ.
ನನ್ನ ಅಂದಾಜಿನಲ್ಲಿ ಮಂಗಳೂರು ಇವರನ್ನು ಮುಖ್ಯವಾಗಿ ಎರಡು ತಾಕತ್ತುಗಳಲ್ಲಿ ಕಂಡಿತು. ಒಂದು ಪ್ರೊ| ರೈಯವರು ಹೇಳಿದಂತೆ ವಿವಿನಿಲಯದ ಕನ್ನಡ ವಿಭಾಗ ಕಟ್ಟಿದ್ದು. ಆಗಲೂ ನನಗಿವರ ಒಡನಾಟ ಕಡಿಮೆಯಿರಲಿಲ್ಲ. ಇನ್ನೊಂದು ಇಲ್ಲಿನ ಒಪ್ಪಂದ ಮುಗಿದು ಮರಳಿದವರು (ಮುಂಬೈಗೆ) ಮತ್ತೆ ಬೆಂಗಳೂರು ಮೂಲಕ ಅವತರಿಸಿದಾಗ ವ್ಯಾಪ್ತಿ ವಿಸ್ತರಿಸಿಕೊಂಡು ಕನ್ನಡವನ್ನೇ ಕಟ್ಟಿದ್ದು! ಎಲ್ಲೆಲ್ಲಿನ ಅಧ್ಯಾಪಕರುಗಳು ನನ್ನ ಮಳಿಗೆ ಹಿಂದೆಯೇ ಇದ್ದ ಹಾವನೂರರ ಬಿಡಾರಕ್ಕೆ ಧಾವಿಸುತ್ತಿದ್ದ ಪರಿ, ಅಲ್ಲಿಂದ ಬೆಳಕಿನ ಕುಡಿ ಹಿಡಿದು ಜಿಲ್ಲೆಯ ಮೂಲೆಮೊಡಕುಗಳಲ್ಲಿ ಸಂಶೋಧನೆಯ ಬೆಳಕು ಚೆಲ್ಲಿದ್ದು ನಿಜಕ್ಕೂ ಅಸಾಮಾನ್ಯ. ಒಬ್ಬ ಎಸ್ವೀಪೀ ತ್ರಿವಿಕ್ರಮನಾಗಿ ಜಿಲ್ಲೆಯೊಳಗೆ ಕನ್ನಡಾಭಿಮಾನದ ಭೂಮಪಾದಗಳನ್ನಿಟ್ಟದ್ದು ಗೊತ್ತು. ಹಾವನೂರರ ವರಿಸೆ ವಾಮನನದು – ಅಸಂಖ್ಯ ತ್ರಿವಿಕ್ರಮತ್ವಕ್ಕೆ ಅಲ್ಲಿತ್ತು ದೃಢ ಸಂಕಲ್ಪ ಮತ್ತು ಕ್ರತುಶಕ್ತಿ.
ಅವರ ನೆಪದಲ್ಲಿ ‘ನನ್ನ’ ಮೆರೆಸುವುದು ಶ್ರದ್ಧಾಂಜಲಿಯಾಗದು ಎಂಬ ಎಚ್ಚರವೂ ಹಾವನೂರರಿಗೆ ಶ್ರದ್ಧಾಂಜಲಿ.
-ಜಿ ಎನ್ ಅಶೋಕವರ್ಧನ






0 Comments