ಹೆತ್ತಮ್ಮನಾದ ಮಗಳು-ಪೆರೋ
ಸಿದ್ದು ಯಾಪಲಪರವಿ
ಬಂಧನದ ಖೈದಿ ಅಪ್ಪನ ಹಸಿವ
ಹಿಂಗಿಸಲು ಎದೆ ಹಾಲು ಕುಡಿಸಿದ
ಜಗದ ಮಹಾ ಮಾತೆ ನೀ ಪೆರೋ
ಎದೆಯ ಸೀಳ ತೋರುತ್ತ ಗಂಡಿನ
ಅಹಮಿಕೆ ಕೆರಳಿಸಿ ಕಾಮೋತ್ತೇಜನೆಯ
ಸರಕೆಂದು ಕಳಂಕ ಹೊರಿಸುವ ಗಂಡಿಗೆ
ಸವಾಲಾದೆ ನೀ ತುಂಬಿದೆದೆಯ
ಮಾತೃ ದೇಹಿ ಪೆರೋ
ಹಾಲು ಕುಡಿದು ಹಾಲಾಹಲದ
ನಂಜ ಕಾರುವ ಗಂಡು ಸಂತತಿಯ
ಕಾಮದೋಕುಳಿಯ ಮನೋವಿಲಾಸದ
ಆಚೆಗಿನ ಅನುರೂಪದ ಅನುಬಂಧ
ವಿಕೃತ ಸುಕೃತ ಅನಧಿಕೃತಗಳ
ಗಾಳದಿ ಚಡಪಡಿಸದೆ ಹಂಗ
ಹರಿದು ನಿಸ್ಸಂಗದಿ ಅವ್ವನಾದ
ಪರಿಗೆ ಅಪ್ಪ ಬೆಪ್ಪಾಗಿ ಹೋದ
ತಪ್ಪು ಮಾಡದವರು ಯಾರು
ಇಲ್ಲ ಇಲ್ಲಿ ಕಂಗಳ ಕುಕ್ಕುವ
ಮೊಲೆಗಳ ಸೆಳೆತದಿ ಕೆರಳಿ
ವಿಕಾರವಾಗುವ ಕಂಗಳಲಿ ಈಗ
ಅವ್ವನ ಎದೆ ಹಾಲ ನಿಷ್ಕಾಮ
ಮಗಳ ಎದೆ ಹಾಲ ಕುಡಿದು
ಬದುಕಿದ ಅಪ್ಪ ಸಿಮೋನ್
ಕುಡಿಸಿದ ಮಗಳು ಪೆರೋ
ಸೃಷ್ಟಿಸಿದ ಇತಿಹಾಸ ಬರೀ
ದಂತ ಕಥೆಯಲ್ಲ ಬದುಕಿನ
ವ್ಯಥೆಯೂ ಅಲ್ಲ ಹಸಿವು
ದಾಹ ಕಾಮಗಳ ಮೀರಿದ
ಅನುಬಂಧದ ಅನುಸಂಧಾನ

ಕಾಲ ಗರ್ಭದಲಿ ಸತ್ತವರು
ಅನಂತ ಕೋಟಿ ಉಳಿದವರು
ಹತ್ತು ಹಲವು ನಿಸ್ವಾರ್ಥ
ಜೀವಗಳ ಅಜರಾಮರ ಚರಿತೆ
ಹೆಣ್ಣು ಹೆಂಡತಿಯಾಗಿ ಮಲಗಿ
ಮುಲುಗುವಾಗಲೂ ಅವ್ವನಾಗಬಲ್ಲ
ತುಡಿತ ತಾಯ್ತನದ ಕನವರಿಕೆ
ಹಾಸಿಗೆಯ ಸಲ್ಲಾಪಕೆ ಹೆದರದ
ಬೆದರದ ಮನದ ತುಂಬ ಬರೀ
ಒಂದೇ ಆಸೆ ಕೂಸ ಬಾಚಿ
ತಬ್ಬುವ ಮಹದಾಸೆಯ ಮಹದಾನಂದ
ಪೆರೋ ನೀ ಬರೆದ ಹೊಸ
ಇತಿಹಾಸದ ಸಂರಕ್ಷಣೆಗೆ ಒಲವ
ಬಣ್ಣದ ಚಿತ್ತಾರ ಇಂದಿಗೂ
ನಿತ್ಯ ನೂತನ ಅಜರಾಮರ
ಕಂಕುಳಲಿ ಕೂಸು ಮೊಲೆ
ಹಾಲ ಸವಿಯುವ ಅಪ್ಪ
ಮಕ್ಕಳೀರ್ವರ ಹಸಿವ ಹಿಂಗಿಸಿ
ಜೀವದಾನದಿ ಮರು ಜನ್ಮ
ನೀಡಿದ ಮಹಾ ತಾಯಿಗೆ
ಜಗದ ತುಂಬೆಲ್ಲ ಸಾವಿರದ
ನಮನಗಳ ಓಂಕಾರ ಝೇಂಕಾರ.
| ಬಂಧೀಖಾನೆಯಲ್ಲಿ ಹಸಿವಿನಿಂದ ನರಳುತ್ತಿದ್ದ ತಂದೆಗೆ ಎದೆ ಹಾಲು ಕುಡಿಸಿ ಬದುಕಿಸಿದ ಮಗಳ ಕಥೆ |)






0 Comments