ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಲು ಪವಿತ್ರ ಅನ್ನುವ ನೀವು..

ನಮ್ಮದೇ ಗೋವು ನಮ್ಮ ಆಹಾರ


ಬಿದಲೋಟಿ ರಂಗನಾಥ್

ಗೋವು ಬಿಟ್ಟೆವೆಂದು
ನಿಮ್ಮನೆಗಳ ಹೆಣ್ಣು ಕೊಟ್ಟು ಮದುವೆ ಮಾಡುವುದಿಲ್ಲ
ಗುಡಿ ಗೋಪುರ ದೇವರೆಂದು ಪಥ್ಯ ಮಾಡಿದರೆ
ನಮ್ಮ ಮೇಲಿನ ಕೀಳು ಭಾವನೆ ತೊಳೆದೋಗುವುದಿಲ್ಲ
ಮಡಿ ಮಾಡಿ ಗರಿ ಗರಿ ಉಡಿ ಉಟ್ಟರೆ
ನಾವು ನಿಮ್ಮವರಾಗುವುದಿಲ್ಲ

ನಮ್ಮ ತಾತರಿಂದ ಹೆಬ್ಬೆಟ್ಟೊತ್ತಿಸಿಕೊಂಡ ಆಸ್ತಿ
ಮರಳಿ ಕೊಡುವುದಿಲ್ಲ
ಗೋವು ಬಿಡಿಸಿ ನಿಮ್ಮನೆಗೆ ಕರೆದು
ಊಟ ಕೊಟ್ಟು ಸತ್ಕರಿಸುವುದೂ ಇಲ್ಲ
ಮನುಷ್ಯ ಧರ್ಮದ ಸಾರ ಸಾರುವೂದು ಇಲ್ಲ.

ವೇದ ಉಪನಿಷತ್
ಎಂದು ಬೊಬ್ಬೆ ಹೊಡೆದುಕೊಳ್ಳುವ ನೀವು
ಮನುಷ್ಯತ್ವ ಉಸಿರಾಡಿ ಬೆಳಕಾಗುವುದಿಲ್ಲ
ನಾವು ಕುಡಿಯುವ ಗಾಳಿಯನೂ ನೀವು
ಕುಡಿಯುತ್ತೀರೆಂಬ ಒಂದು ಸಣ್ಣ ಅರಿವೂ ನಿಮಗಿಲ್ಲ
ಅಂದ ಮೇಲೆ ಜಾತಿಗೆ ಬಣ್ಣ ಯಾಕಚ್ಚಿ ಅವಮಾನಿಸುತ್ತೀರಿ? ಸ್ವಾಮಿ

ನೀವು ದೇವರ ಮಕ್ಕಳಂತೂ ಅಲ್ಲವೇ ಅಲ್ಲ
ಹಾಗಿದ್ದ ಮೇಲೆ ಯಾಕೀ ತಾರತಮ್ಯ
ಗೋವಿನ ಗಂಜಳ ಬೇಕು
ದೇವರ ಸಂಪೋಷಣೆಗೆ
ಗೋವಿನ ರಕ್ತ ಹಿಂಡಿ ಹಾಲಿನ ರೂಪದಲಿ
ಕುಡಿದು ತೇಗುವ ನಿಮಗೆ
ನಾವು ಗೋವು ತಿಂದರೆ ಅನಿಷ್ಟವೇ?
ಅದಲ್ಲ, ನಿಮ್ಮ ಒಳಗುಟ್ಟು
ಮುಂದೆ ಗೋವಿಲ್ಲದಿದ್ದರೆ ನಿಮಗೆ ಹಾಲಿನ ರೂಪದ
ರಕ್ತಕ್ಕೆ ಬರ ಬಂದೀತೆಂಬ ಭಯ!

ಮೇವು ನಮ್ಮದು
ಗ್ವಾಂದಿಗೆಯೂ ನಮ್ಮದೇ
ಗೋವು ನಮ್ಮದೆ
ಹಾಲು ಪವಿತ್ರ ಅನ್ನುವ ನೀವು
ಅದರ ಮೂಳೆ ಮಾಂಸದಿಂದಲೇ
ಹಾಲೆಂಬುದು ಮರೆತಿದ್ದೀರಿ
ನೀವು ಗೋವಿನ ಹಾಲು ಮೊಸರು ತುಪ್ಪ ಬಿಟ್ಟು
ಥೂ!ಅನಿಷ್ಟ ಅಂದು ಬಿಡಿ
ಆಗ ಗೊಮಾಂಸ ನಿಷೇಧಿಸಿ
ಅದು ಬಿಟ್ಟು ನೀವು ಹಿಂಡಿ ಹಿಪ್ಪೆ ಮಾಡಿದ ಮಾಂಸಕ್ಕೆ
ಕತ್ತರಿ ಯಾಕಾಕುತ್ತೀರಿ?

ಯಾವ ಕಾನೂನೇಳಿದೆ?
ಪುರಾತನ ಕಾಲದಿಂದಲೂ ಅದು ತಿನ್ನು
ಇದು ಬಿಡು ಎಂದು
ಹೊಸ ಅವತಾರವೆತ್ತಿ
ಸುಳಿಗೆ ನೀವೆ ಸಿಕ್ಕುತ್ತೀರಿ
ನೀವೆ ತೋಡಿದ ಗುಂಡಿಗೆ
ನೀವೆ ಬೀಳುತ್ತೀರಿ ಎಚ್ಚರ!

ಗೋವಿನ ಮಾಂಸ ಹೊಲಸು ಎಂದಾದರೆ
ನೀವು ಹೊರ ಹಾಕುವ ಹೇಲು
ಭೂತಾಯಿಗೆ ಅಪವಿತ್ರವಲ್ಲವೇ?
ಅದನ್ನು ಎಲ್ಲಿ ಹಾಕಬೇಕು ಎನ್ನುವ ಕಾನೂನು ಮಾಡಿ
ಹೊಲಸಿಲ್ಲದ್ದು ಯಾವುದು ಸ್ವಾಮಿ?
ಹುಡುತ್ತ ಹೋದರೆ ಮನುಷ್ಯನೇ ಹೊಲಸು
ಆಗಂತ ಸಾಯಲಿಕ್ಕಾಗುತ್ತದೆಯೇ?

ನಮ್ಮದೇ ಆಹಾರ
ನಮ್ಮದೇ ಗೋವು
ನಮ್ಮಷ್ಟಿಕ್ಕೆ ನಮ್ಮನ್ನು ಬಿಟ್ಟು ಬಿಡಿ
ಆಹಾರಕ್ಕೆ ನಿರ್ಬಂಧವೇಕೆ?

‍ಲೇಖಕರು avadhi

28 May, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading