’ಹಾಲಕ್ಕಿ ಅಜ್ಜಿ ದೇವಿಗೆ ಮಹಿಳಾವಾದ ಗೊತ್ತಿರಲಿಲ್ಲ’ – ವೈಶಾಲಿ ಹೆಗಡೆ

ಮಹಿಳೆ, ಮುಸುರೆ, ಮಹಿಳಾವಾದ

ವೈಶಾಲಿ ಹೆಗಡೆ

ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಹಲವೆಡೆಗಳಲ್ಲಿ ಮಹಿಳಾ ಗೋಷ್ಠಿಗಳು ನಡೆದು, ಗಂಡಸರೆಲ್ಲ ಹೆತ್ತಮ್ಮನ ಹೆಸರಲ್ಲಿ ಎರಡು ಹನಿ ಉದುರಿಸಿ, ಮಗಳಿಗೊಂದು ಮುತ್ತಿಟ್ಟು, ಹೆಂಡತಿಗೊಂದು ವಿಶ್ ಮಾಡಿಬಿಡುತ್ತಾರೆ. ಮಹಿಳೆಯರೊಂದಷ್ಟು ಜನ ಗೆಳತಿಯರಿಗೆಲ್ಲ ಶುಭಾಷಯ ಹೇಳಿ. ಎಲ್ಲೆಲ್ಲೋ ಭಾಷಣ ಮಾಡಿ, ಒಂದಿಷ್ಟು ಚರ್ಚೆ ನಡೆಸಿ,, ಹೆಣ್ಣಾಗಿ ಹುಟ್ಟಿರುವುದಕ್ಕೆ ಒಂದು ದಿನವಾದರೂ ಹೆಮ್ಮೆ ಪಟ್ಟುಕೊಂಡು ಮರುದಿನದ ಯಥಾ ಪ್ರಕಾರಕ್ಕೆ ಸಿದ್ಧವಾಗುತ್ತಾರೆ. ಸರ್ಕಾರದಲ್ಲೊಂದಿಷ್ಟು ಹೊಸ ಯೋಜನೆಗಳು ಹುಟ್ಟಿಕೊಂಡು ಮರುದಿವಸ ಸಾಯುತ್ತವೆ. ಬಾವಿಕಟ್ಟೆಯ ಬದಿ ನೀರುತುಂಬುವ ಹೆಂಗಸರಿಗೆ ಇದ್ಯಾವುದರ ಅರಿವೂ ಇಲ್ಲ, ಪರಿವೆಯೂ ಇಲ್ಲ.
ನಂಗೆ ಯಾಕೋ ನಮ್ಮಲ್ಲಿ ಇದ್ದ ಒಂದೇ ದನಕ್ಕೆ ಹುಲ್ಲುಹೊರೆ ತಂದು ಕೊಡುತ್ತಿದ್ದ ಹಾಲಕ್ಕಿ ಅಜ್ಜಿ ದೇವಿ ನೆನಪಾಗುತ್ತಾಳೆ. ಅವಳಿಗೆ ಮಹಿಳಾವಾದವೂ ಗೊತ್ತಿಲ್ಲ, ಸಂಸ್ಕೃತಿ ರಕ್ಷಣೆ ಮಹಿಳೆಯ ಹೊಣೆ ಎಂಬಂತ ಅಸಂಬದ್ಧ ತರ್ಕದ ಅರಿವೂ ಇಲ್ಲ. ಆದರೆ ಅಪ್ಪಟ ಹೆಸರಿಗೆ ತಕ್ಕಂತ ದೇವಿ ಅವಳು.
ವಯಸ್ಸಾದ ದೇವಿ ಹುಲ್ಲು ಹೊರೆ ಉಸ್ಸಪ್ಪ ಎಂದು ಎಸೆಯುವಾಗ ತಂಗಿಯ ಪ್ರಶ್ನೆ ಪ್ರತೀ ಬಾರಿ ಇರುತ್ತಿತ್ತು.

“ದೇವಿ ನೀ ಯಾಕೆ ಹೊರೆ ಹೊತ್ಕಂಬತ್ತಿ ಇಷ್ಟು ವಯಸ್ಸಾಯ್ತು, ಮಕ್ಕಳನ್ನು ಕಳಿಸಬಾರ್ದೇನೆ? “
“ರಟ್ಟೆಲ್ಲಿ ಶಕ್ತಿ ಇರುತನಕ ನಾ ದುಡೀವೆ, ಇದೆಂತ ದೊಡ್ಡ ಕೆಲಸ, ಎಂತೆಂತ ಮಾಡಿ ಈ ಮಕ್ಳ ಸಾಕಲಿಲ್ಲ ನಾ?, ಒಂದು ಲೋಟ ನೀರು ತನ್ನಿ”
 
ಕಾಲ ಕೆಟ್ಟೋಯ್ತು, ಇಂದಿನ ಆಧುನಿಕ ಉಡುಗೆಯೇ ಎಲ್ಲ ಸಮಸ್ಯೆಯ ಮೂಲ, ಹೆಂಗಸರು ಲಕ್ಷಣವಾಗಿ ಸೀರೆ ಉಟ್ಟುಕೊಂಡರೆ ಕಣ್ಣು ಹಾಕುವವರೂ ಕಡಿಮೆ ಎಂದು ಭಾಷಣ ಬಿಡುವವರನ್ನೊಮ್ಮೆ ದೇವಿಯ ಹತ್ತಿರ ಮಾತನಾಡಿಸಬೇಕು.
“ಅಲ್ವೇ ದೇವಿ ನೀವೆಲ್ಲ ಸಣ್ಣ ವಯಸ್ಸಲ್ಲೂ ಹೀಗೆ ಮಣಿಸರ ಹಾಕಂಡು, ಪಲ್ಕಾ(ಕುಪ್ಪಸ) ಇಲ್ದೆ ಸೀರೆ ಉಡತಿದ್ರೆನೆ? ಯಾರೂ ತ್ರಾಸ್ ಕೊಡುದಿಲ್ಲಾಗಿದ್ರೆ? ಕೈ ಹಾಕುದಿಲ್ಲಗಿದ್ರೆ?”
ಹೌದು ನಮ್ಮಲ್ಲಿದ್ದ ಅರೆಬೆಂದ ಮಹಿಳಾವಾದ ಇಂತವೆಲ್ಲ ಪ್ರಶ್ನೆ ಕೇಳಿಸುತ್ತಿತ್ತು.
ಜೋರು ನಗುತ್ತ ಸಂಚಿಯಿಂದ ಅಡಿಕೆ ಹೋಳು ತೆಗೆದು ಬಾಯಿಗೆಸೆದುಕೊಳ್ಳುತ್ತ ಹೇಳುತ್ತಿದ್ದಳು.
“ಮಜಾ ಪ್ರಶ್ನೆ ಆಯ್ತಲ ನಿಮ್ಮದು. ನಾವು ಉಡು ಬಟ್ಟೆ ಹಿಂಗೆ ಅಲ್ವರಾ? ಹಂಗೆನರೂ ಆಗಿದ್ರೆ, ಒಕ್ಕಲ ಕೇರಿ ಏನಾಗಬೇಕಿತ್ತು ಹೇಳಿ? ಸಣ್ಣ ಕಚ್ಚೆ ಉಟ್ಕಂಡು ಗದ್ದೆಗೋ, ಕೂಲಿಗೋ ಹೋಗು ಸೋಮುಗೌಡನ್ ಕಚ್ಚೆ ನಾವೆಂತಕ್ಕೆ ಎಳಿಯೂದಿಲ್ಲ ಹೇಳಿ ಕೇಳಿ ನೋಡ್ವ? “
 
ಹೌದಲ್ವೇನೆ ದೇವಿ, ಮಾನ – ಮರ್ಯಾದೆ ಅನ್ನೋದು, ನಿನ್ನ ಕುಪ್ಪಸದಲ್ಲಾಗಲೀ, ಸೋಮುಗೌಡನ ಕೌಪೀನದಲ್ಲಾಗಲೀ ಇಲ್ಲ ಎನ್ನೋದು ಈ ಜಗತ್ತಿಗೆ ಯಾವಾಗ ಅರ್ಥವಾದೀತು?
 
ದೇವಿ ಅಂದು ಮಗಳೊಂದಿಗೆ ಬಂದಿದ್ದಳು. ಹತ್ತಿರದ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಣ/ವ್ಯಾಯಾಮ ಕಲಿಸುತ್ತಿದ್ದ ಆಕೆ ರಾಜ್ಯಮಟ್ಟದ ಕ್ಹೊಕ್ಹೋ ಚಾಂಪಿಯನ್ ಆಗಿದ್ದವಳು. “ಎಲ್ಲರಿಗೂ ಸಾಲಿಗ್ ಕಳಿಸ್ದೆ, ಆದರೆ ನನ್ನ ಮಕ್ಕಳಲ್ಲಿ ಸಮಾ ವಿದ್ಯೆ ಕಲಿತವಳು ಇದೊಂದು ಮಗಳು ನೋಡಿ” ಎನ್ನುತ್ತಾ ಗಂಡುಮಕ್ಕಳನ್ನೆಂದೂ ಮನೆಗೆ ಕರೆತಂದು ಪರಿಚಯಿಸಿರದ ದೇವಿ ಮಗಳ ಕಣ್ಣಲಿ ಮುಗಿಲ ಮುತ್ತಿಕ್ಕಿದ್ದಳು.
 
ಆಸ್ತಿ ಪಾಲೆಂದು ಕೂತ ಗಂಡುಮಕ್ಕಳ ಎಳೆತಂದು ಅಮ್ಮನ ಕೈಲಿ ಪಂಚಾಯ್ತಿ ಮಾಡಿಸಿ, ತನಗೊಂದು ಪಾಲು, ಮಗಳಿಗೊಂದು ಪಾಲು ಕೊಡಿಸಿಕೊಂಡಿದ್ದಳು. ಸೊಸೆಯರೇನೋ ಪ್ರೀತಿಯಿಂದಲೇ ನೋಡಿಕೊಂಡಿದ್ದರು. ಆಕೆ ಒಂದಷ್ಟು ದಿನ ಆ ಮಗ ಮತ್ತೊಂದಷ್ಟು ದಿನ ಈ ಮಗ ಎಂದು ಚಂದದಲ್ಲೇ ಇದ್ದಳು, ಆದರೆ ಅವಳ ಜೀವನಪ್ರೀತಿ ತನ್ನ ಪಾಲಿನದನ್ನು ಬಿಟ್ಟುಕೊಡಲಿಲ್ಲ. ಅಣಬೆ ಆರಿಸುತ್ತಿದ್ದಳು, ಹುಲ್ಲುಹೊರೆ ತರುತ್ತಿದ್ದಳು, ಕಟ್ಟೆ ಮೇಲೆ ಕೂತು ಚಂದದ ಕತೆ ಹೇಳುತ್ತಿದ್ದಳು. ನಮ್ಮ ಅಸಂಬದ್ಧ ಪ್ರಶ್ನೆಗೆ ಉರ್ತರಿಸುತ್ತಿದ್ದಳು. ನಮ್ಮ ಶಾಲೆಯ ಛದ್ಮವೇಶ ಸ್ಪರ್ಧೆಗೆ ತನ್ನ ಕೊರಳಿನ ಮಣಿಹಾರ ಬಿಚ್ಚಿಕೊಡುತಿದ್ದಳು. ಅಷ್ಟಷ್ಟು ದಿವಸಕ್ಕೆ ಮಣಿಹಾರದ ಭಂಡಾರಕ್ಕೆ ಹೊಸದನ್ನು ಸೇರಿಸಿ ಅಲಂಕರಿಸಿಕೊಂಡು ಹೆಣ್ತನವ ಆಚರಿಸುತ್ತಿದ್ದಳು.
 
ಮಹಿಳೆಯರು ಇತ್ತೀಚಿಗೆ ಏನು ಹೇಳಿದರೂ ಬರೆದರೂ ಅದಕ್ಕೊಂದು ಮಹಿಳಾವಾದವಿರಬೇಕು ಎಂದು ಅಭಿವ್ಯಕ್ತವಾದಾಗೆಲ್ಲ ನನಗೆ ದೇವಿ ನೆನಪಾಗುತ್ತಾಳೆ. ಆಕೆಯದ್ದೊಂದೇ ಇತ್ತು ವಾದ “ಜೀವನವಾದ”. ಹೆಣ್ತನವ ಸಂಭ್ರಮಿಸುವ ಅಪ್ಪಟ ಜೀವನವಾದ. ಬದುಕ ಪ್ರೀತಿಸಿದರೆ ಎಲ್ಲ ವಾದಗಳೂ ತನ್ನಂತಾನೆ ತಮ್ಮ ನೆಲೆ ಕಂಡುಕೊಳ್ಳುತ್ತವೆ.
ಯಾವ ವಾದ ಬೇಕಿಲ್ಲ ನನಗೆ. ಎಂದಿನಂತೆ ಇಂದಿಗೂ ಆಚರಿಸುವೆ ನನ್ನ ಹೆಣ್ತನವ.
 
 
 

‍ಲೇಖಕರು G

March 9, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Aarvind

    Probably one of the best I have read in the recent past. Kudos to both ಹಾಲಕ್ಕಿ ಅಜ್ಜಿ ದೇವಿ and ವೈಶಾಲಿ.

    ಪ್ರತಿಕ್ರಿಯೆ
  2. ಸುಬ್ಬಣ್ಣ ಮತ್ತೀಹಳ್ಳಿ.

    ಎಲ್ಲ ವಾದದಿಂದ ದೂರವಾಗಿ ಪ್ರಕ್ರತಿಗೆ ಹತ್ತಿರವಾಗಿ ಚಿತ್ರಿಸಿದ ಹೆಣ್ತನ ಮನಸ್ಸನ್ನು ತಟ್ಟಿದೆ ಮುಟ್ಟಿದೆ.
    ಶುಭಾಶಯಗಳು.

    ಪ್ರತಿಕ್ರಿಯೆ
  3. ವಿ.ಎನ್.ಲಕ್ಷ್ಮೀನಾರಾಯಣ

    ಮಾನ್ಯರೆ,
    ಮಹಿಳಾವಾದವೂ ಸೇರಿ ಯಾವುದೇ ವಾದ ಬೆಂದಿರಲಿ-ಅರೆಬೆಂದಿರಲಿ ಅಥವಾ ಹಸಿಯಾಗಿರಲಿ, ನಮ್ಮ ಜೈವಿಕ ಅಸ್ತಿತ್ವ, ಸಾಮಾಜಿಕ ಸಂಬಂಧ ಮತ್ತು ರಾಜಕೀಯ ದೃಷ್ಟಿಕೋನದ ಬಗೆಗೆ ಅರಿವು ಬೆಳೆಸಿಕೊಂಡು ಪ್ರಜ್ಞಾಪೂರ್ವಕವಾಗಿ ಮಂಡಿಸುವ ಒಂದು ಲೋಕದೃಷ್ಟಿ.ಆ ಬಗ್ಗೆ ಶಿಕ್ಷಿತರು ಅಥವಾ ಅಶಿಕ್ಷಿತರು ಯಾರೇ ಆದರೂ ಅರಿವು ಬೆಳೆಸಿಕೊಂಡಿರಬಹುದು,ಅಥವಾ ಅರಿವಿಲ್ಲದೆಯೂ ಅದೇ ಲೋಕದೃಷ್ಟಿಯೊಂದಿಗೆ ಬದುಕಿರಬಹುದು, ಬದುಕುತ್ತಿರಬಹುದು. ಹಾಗೆಂದ ಮಾತ್ರಕ್ಕೆ ವಾದಗಳು ಅಪ್ರಯೋಜಕವಲ್ಲ ಅಥವಾ ಅಂಥ ಅರಿವು ಅನಪೇಕ್ಷಿತವಲ್ಲ. ನಿಮ್ಮ ದೃಷ್ಟಿಗೆ ಬಿದ್ದ ಮಹಿಳಾವಾದ-ವಾದಿಗಳ ಬಗೆಗಿನ ನಿಮ್ಮ ಅಸಹನೆ-ಅಸಮ್ಮತಿಯನ್ನು ದೇವಿಯ ಮರೆಯಲ್ಲಿ ನಿಂತು ಸಾಧಾರಣೀಕರಿಸಿ ಹೇಳುವುದು ಸಮಂಜಸವಲ್ಲ.

    ಪ್ರತಿಕ್ರಿಯೆ
  4. M.A.Sriranga

    ವಿ ಎನ್ ಲಕ್ಷ್ಮೀನಾರಾಯಣ್ ಅವರಿಗೆ —ಮಹಿಳಾವಾದ ಎಂದರೇನು ಎಂದು ಅರಿಯದವರು ಆರಾಮಾವಾಗಿದ್ದಾರೆ ಹಾಗೂ ಆ ವಾದವನ್ನೇ ದಿನಾ ತಮ್ಮ ತಮ್ಮ ಉದ್ಯೋಗಮಾಡಿಕೊಂಡು ಪತ್ರಿಕೆಗಳು ಮತ್ತು ಟಿ ವಿ ಗಳಲ್ಲಿ ಸುದ್ದಿಮಾಡುತ್ತಿರುವವರು ಈ ಇಬ್ಬರಲ್ಲಿ ಒಬ್ಬರ ಬಗ್ಗೆ ಆದರ ಇನ್ನೊಬ್ಬರ ಮಾತುಗಳಿಗೆ ಕಿವಿ ಕೊಡದೇ ಇರುವುದು ತತ್ವದ ಮಟ್ಟದಲ್ಲಿ ಸರಿಯಲ್ಲ. ಅಷ್ಟು ಮಾತ್ರ ಹೇಳಬಹುದು. ಆದರೆ ಜೀವನ ಎಂದರೆ ಏನು ಎಂಬುದು ಯಾವುದೇ ವಾದಗಳ ತೆಕ್ಕೆಗೆ ಸಿಗುವಂತಹುದಲ್ಲ. ಜೀವನಕ್ಕೆ ಅಷ್ಟು ಸುಲಭದ definition ಇಲ್ಲ.

    ಪ್ರತಿಕ್ರಿಯೆ
  5. shweta

    ಹೆಣ್ತನವ ಸಂಭ್ರಮಿಸುವ ಅಪ್ಪಟ ಜೀವನವಾದ. ಬದುಕ ಪ್ರೀತಿಸಿದರೆ ಎಲ್ಲ ವಾದಗಳೂ ತನ್ನಂತಾನೆ ತಮ್ಮ ನೆಲೆ ಕಂಡುಕೊಳ್ಳುತ್ತವೆ
    Vaishalakka. ….super article
    Above lines summerises the entire article

    ಪ್ರತಿಕ್ರಿಯೆ
  6. ಶಮ, ನಂದಿಬೆಟ್ಟ

    ಯಾವ ವಾದ ಬೇಕಿಲ್ಲ ನನಗೆ. ಎಂದಿನಂತೆ ಇಂದಿಗೂ ಆಚರಿಸುವೆ ನನ್ನ ಹೆಣ್ತನವ.
    ಛಂದದ ಸಾಲುಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: