ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾರಿ ಹೋದ ಚಿಟ್ಟೆ!

ಸೌಮ್ಯಶ್ರೀ ಎ ಎಸ್

ಕೈ ಮೇಲೆ ತಾನಾಗಿ ಹಾರಿ
ಬಂದು ಕೂತ ಬಣ್ಣದ ಚಿಟ್ಟೆ
ಹಾರುವುದ ಮರೆತಂತೆ ನನ್ನ
ಎದೆಗೊರಗಿ ಅಂಟಿಕೊಂಡಿತ್ತು.
ಕದಲಿಸಿದರೂ ಮತ್ತೆ ಅಂಗೈಯೊಳಗೆ

ಅಂಗಳದ ರಂಗೋಲಿ ಮೈಮೇಲೆಲ್ಲಾ
ಬಣ್ಣ ಬಣ್ಣದ ಸೊಗಸು, ನೋಡಿದಷ್ಟು
ಹುಟ್ಟುತ್ತಿದೆ ಮತ್ತೆ ಮತ್ತೆ ಅದರೊಟ್ಟಿಗೆ
ಒಡನಾಡುವ ಮನಸು

ಒಂಟಿ ಹೆಜ್ಜೆಗೆ
ಜೊತೆಯಾದ ಸಲುಗೆಯ ಬಂಧ
ತೊರೆದು ಹೋದಿತೆಂದು ಅನುಬಂಧ
ಕಾಡಿದೆ ಮೈಮನಸಲ್ಲಿ ಅವ್ಯಕ್ತ ಭಯ
ಬಂಧನದ ಬಿಗಿತವ ತಾಳಲಾರದೆ
ಹಾರಿ ಹೋದಂತೆ ಬಿದ್ದ ಕನಸಿಗೆ
ಬೆಚ್ಚಿ ಬೆವರಿ ಚೀರಿ ನೋಡಿದರೆ ಎಲ್ಲವೂ ಇದ್ದಂತೆ

ಉಸಿರುಗಟ್ಟಿಸುವಂತೆ ಅಂಗೈಯೊಳಗೆ
ಬಂಧಿಸಿ ಮುಷ್ಠಿ ಮುಚ್ಚಿ ಒಮ್ಮೆ ಬಿಟ್ಟ ತಕ್ಷಣ
ನರಳಿ ಹೊರಳಿ ಹಾರಿ ಮರೆಯಾಗಿತ್ತು
ನೀರಲ್ಲಿ ಬಿಂಬವಾಗಿ ಕಂಡ ಚಂದಿರನೇ
ಬೇಕೆಂದು ಹಠ ಹಿಡಿದ ಮಗು
ಬೆಳದಿಂಗಳ ಬೆಳಕಲ್ಲೂ ನೀರಲ್ಲಿ ಮುಳುಗಿ
ಕೈಚಾಚಿ ಸಿಗದೆ ಉಸಿರುಗಟ್ಟಿ
ಬರಲಾರದೆ ಇರಲಾರದೆ ಒದ್ದಾಡುತಿರುಂತಾಗಿತ್ತು!

ಇಂದಿನ ಸಂತಸವ, ಹಿಂದಿನ ಮರಳದ
ಸತ್ತ ಗಳಿಗೆಗಳು ನುಂಗಿ ಹಾಕಿತ್ತು
ಮನಸಿಗೆ ನೆನಪೆಂಬ ಕಟ್ಟಿಗೆಯ
ಸುರಿದು ಬೆಂಕಿ ತಗುಲಿಸಿ ಕಣ್ಮುಚ್ಚಿ
ಗೋಡೆಗೆ ಅಂಟಿ ಕುಳಿತಂತಿತ್ತು.

ಧಗಧಗನೆ ಉರಿದು ನೀಲಿ ಜ್ವಾಲೆ
ಗಾಳಿಯಲ್ಲಿ ಮರೆಯಾಗಿತ್ತು
ಗತಿಸಿದ ಗತನೆನಪುಗಳ ಮತ್ತೆ ಮತ್ತೆ
ಗಾಳಿಯು ಕಿವಿಯಲ್ಲಿ ಪಿಸುಗುಟ್ಟಿ ಹೋಗಿತ್ತು.

‍ಲೇಖಕರು Admin

30 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading