ವಸಂತ ಬನ್ನಾಡಿ
ಹಕ್ಕಿಯೊಂದು ಚಿಂವ್ ಗುಡುತ್ತಿದ್ದರೆ
ಹಾಡಿನ ನೆಲೆ ಆಲಿಸಿ ಸಾಗುವ
ಗುರಿ ಇರದ ದಾರಿಹೋಕ ನಾನು
ಹಾಗೆ ನಡೆಯುತ್ತಲೇ ಇರುವುದನು ಬಯಸುವವನು
ಕನವರಿಸುವೆ ನಿನಗಾಗಿ
ನಿನ್ನ ಅರಸುವ ನಾನು
ಮೌನ ಬಾಯಾರಿಕೆಯಲಿ
ಮೌನ ನಿನ್ನ ಪ್ರೇಮ
ಮೌನ ನಿನ್ನ ನೋಟ
ಕರಡಿ ಮರಿಯಂತೆ ಬಿಗಿದಪ್ಪುವೆ ನೀನು
ಮೈಗೆ ಮೈ ಒತ್ತುವೆ ಅತಿಶಯ ಪ್ರೀತಿಯಲಿ
ಗದಗುಡುವ ಎದೆಯ ನಾಚಿಕೆ ಹುಡುಗಿ
ಅದು ನೀನು ಸಂಭ್ರಮವನು
ಧಾರೆ ಎರೆವ ರೀತಿ

ಪ್ರೀತಿ ಎಂಬ ಅಚ್ಚರಿಯ ಮಂತ್ರವನು
ಅದೆಲ್ಲಿ ಬಚ್ಚಿಟ್ಟುಕೊಂಡಿರುವೆಯೋ
ತೊಟ್ಟ ಆಭರಣಗಳನು
ಕಳಚಿ ಹರಹಿದಂತೆ
ಒಂದೊಂದಾಗಿ
ಬಿಚ್ಚಿಡುತ್ತಾ ಸಾಗುವವಳು
ಒಪ್ಪಿಸಿಕೊಳ್ಳುತ್ತಲೇ ಹಿಂಜರಿಕೆಯಲಿ
ಥಟ್ಟನೆ ನನ್ನಹಂಕಾರದ
ಮೇಲೇರಿ ಬರುವವಳು
ನನ್ನ ಸಮ್ಮತಿಯ ತಲೆಮೇಲೆ ಮೊಟಕುತ್ತಲೆ
ಸನ್ನಿವೇಶದ ಪೂರ್ಣ ಲಾಭ ಪಡೆವವಳು
ತುಂಟತನವನೂ ಅಮಾಯಕತೆಯನೂ
ಒಂದೇಟಿಗೆ ಮೆರೆಯುವವಳು
ಹೀಗೆ ಇಂಗುತ್ತಾ ಹೋಗುವೆ ನಾನು
ನಿನ್ನ ಮೌನ ಸ್ಪರ್ಶದ ಗಣಿಯೊಳಗೆ
ಕಡಲ ತೀರದ ಬಿರುಬಿಸಿ ಹೊಯಿಗೆಯಲಿ
ಅರಸಿ ಅರಸಿ ಇಂಗುವಂತೆ ಅಲೆಗಳು
ಬೇಸರವೇ ಕಾಣದ ಅಲೆಗಳು!
ಕಟ್ಟಿಹಾಕುವುದು
ಮಿಸುಕಾಡದಂತೆ ನಮ್ಮನು
ಮೊರೆವ ಶೃತಿಬದ್ದ ಮೌನ
ಮೊನೆಗಣ್ಣ ಸನ್ನೆಯಲಿ ಹೆಜ್ಜೆ ಹಾಕುವೆವು
ಒಲುಮೆಯೊಂದೇ ನಮ್ಮ ಗಮನ
ಥರಗುಡುತಿದ್ದರೆ ನೀನು
ತರಗಲೆ ತುಟಿಯಲಿ
ಆನಿಸಿಕೊಳ್ಳುವೆ ಎದೆ ಹರಹಿನಲಿ
ಗಾಢ ಚುಂಬನದಲಿ
ಬೆಸೆದುಕೊಳ್ಳುತ್ತಾ
ಚಲಿಸುವೆವು
ಅಖಂಡ ಶಿಖರೋನ್ಮಾದದೆಡೆಗೆ ನಾವು

ಲೋಕ ಕಾಯುವ ಪ್ರೇಮದ ಔನ್ನತ್ಯವನು
ಮಡಿಲ ಮಗುವಾಗಿಸಿ
ಪೊರೆಯ ಬಯಸುವವರು
ಇದೆ ಅಲ್ಲಿ ಬದುಕು
ಇದೆ ಅಲ್ಲಿ ಸಾವು
ಇದೆ ಅಲ್ಲಿ ಅಮೃತ
ಇದೆ ಅಲ್ಲಿ ವಿಷ
ಸಾವು ಬದುಕು ಅಮೃತ ವಿಷಗಳನು ಒಂದೇ ಗುಟುಕಿಗೆ
ಕುಡಿಯಬಯಸುವವರು
ಕಟ್ಟು ನಿಟ್ಟಿನ ಗೊಡವೆಗಳ ಕಳಚುತ್ತಾ
ಮುಂದೊತ್ತುವ ರಾಡಿ ಕೀವುಗಳ
ಬದಿಗೆ ಸರಿಸುತ್ತಾ
ಕೆಡುಕು ಕಣ್ಣುಗಳ
ನಿರ್ಲಕ್ಷಿಸಿ
ಮುಂದೆ ಸಾಗುತ್ತಾ
ಹುದುಗಿ ಹೋಗಲು ಬೆತ್ತಲೆ
ನಕ್ಷತ್ರ ರಾಶಿಯಲಿ
ಪ್ರೇಮದದುರಿನ ಉತ್ಖನನವೇ ಗುರಿಯಾಗಿ
ಒಂದಿಡೀ ಕಾಲವೇ ಹಾದುಹೋಗುತಿದೆ ನಮ್ಮೊಳಗೆ ಉತ್ಕಟ ನದಿಯಾಗಿ
ತೊಪ್ಪನೆ ತೋಯಿಸುವ ಬೇಟವಾಗಿ
ನಾವು ಓಗೊಡುವುದು
ಚಿಂವ್ ಗುಡುವ ಹಕ್ಕಿಗಳ
ಅನಾಹತನಾದಕೆ
ಮೌನ ತಾನಾದ ಲೋಕಕೆ






0 Comments