ಚಿಂತಾಮಣಿ ಕೊಡ್ಲೆಕೆರೆ
**
ನೀಲಗಗನದಲ್ಲಿ ಹಾರಿಹೋಗು ನನ್ನ ಹಕ್ಕಿಯೇ
ತೇಲಿಬಿಡುವೆನಿದೋ ಕಂದ
ತೆರೆದ ನನ್ನ ಕರಗಳಿಂದ
ಹಾಡು ಬರಲಿ ಬಾನ ಹೃದಯದಿಂದ ಹರುಷ ಉಕ್ಕಿಯೇ
ಹಾದಿಯಿರದ ಬಾನಿನಲ್ಲಿ ಹಾರುತಿರುವ ಹಕ್ಕಿಯೇ
ಹುರುಪಿನಿಂದ ಹೊಸತು ಹಾಡ ಹುಡುಕಿ ಹಾರುತಿರುವೆಯೇ?
ಹಾರು ಹಾರು ನನ್ನ ಹಕ್ಕಿ
ಕಂಗಳಲ್ಲಿ ಎರಡು ಚುಕ್ಕಿ
ತನ್ನ ಬಾನ ಹುಡುಕಿ ಅತ್ತ ಇತ್ತ ಅಲೆಯುತಿರುವುದೇ?
ಮರದ ಭುಜಗಳಲ್ಲಿ ನಿನಗೆ ತಾಣವುಂಟು ದಣಿದರೆ
ಕೆರೆಯ ನೀರು ಕುಡಿಯಬಹುದು
ಬನದ ಹಣ್ಣು ತಿನ್ನಬಹುದು
ಹಾರಬಹುದು ಮತ್ತೆ ನೀನು ಯಾರು ನಿನ್ನ ತಡೆವರೆ?
ನೀಲಗಗನದಲ್ಲಿ ಹಾರಿ ಹಾರಿ ಹೋಗು ಹಕ್ಕಿಯೇ
ಹಳೆಯ ಹಾಡು ಬಿಟ್ಟು ಸಾಗು
ಹೊಸ ಪಲ್ಲವಿ ಹುಡುಕು ಹೋಗು
ಹುಚ್ಚು ಹಕ್ಕಿ ಬಾನಿಗಿಲ್ಲ ಎಲ್ಲೆ ಅದನು ಮರೆತೆಯೇ?
ನಿನ್ನ ಹಾಡಿನಿಂದ ಉಕ್ಕುತಿರಲು ಹಿಗ್ಗು ಹೊಳೆ
ಸುರಿದು ಬಾನಿನಿಂದ ಎಂದೂ ಕಾಣದಂಥ ಮಳೆ
ಭೂಮಿಯೆಲ್ಲ ನೆನೆಯುತಿದ್ದು
ಜೀವಜಾತ ಎದ್ದುಬಿದ್ದು
ಹೊಸದು ಹಾಡಿನಿಂದ ನಕ್ಕು ನಲಿಯುತಿರಲಿ ಇಳೆ






0 Comments