ಹಾಡ್ಲಹಳ್ಳಿ ನಾಗರಾಜ್ ಅಂಕಣ – ರೂಮು ತೊರೆಯುವ ನಿರ್ಧಾರ

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗೂ ನಾನು, ಕುಂಭದ್ರೋಣ (ಕತಾಸಂಕಲನಗಳು), ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹ ಪುರಾಣ, ಕಡವೆಬೇಟೆ, ನಿಲುವಂಗಿಯ ಕನಸು ಕಾದಂಬರಿಗಳು ಪ್ರಕಟವಾಗಿವೆ.

‘ಕಾಡುಹಕ್ಕಿಯ ಹಾದಿನೋಟ’ ಎಂಬ ಆತ್ಮಕಥನ ಸ್ವರೂಪದ ಪ್ರಬಂಧ ಸಂಕಲನವಾಗಿದೆ. ಸುಮಾರು ನಾಲ್ಕು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು, ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಿದ್ದಗಂಗಾ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಮುಖೇನ ವಿದ್ಯಾದಾನಕ್ಕೆ ಕಾರಣವಾಗಿ ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದೆ.

ವಿದ್ಯೆಯಿಂದ ವಂಚಿತರಾಗಿ ಎಲ್ಲೋ ಮೂಲೆ ಗುಂಪಾಗಬೇಕಾಗಿದ್ದ ಬಡ ಗ್ರಾಮೀಣ ಮಕ್ಕಳು ಮಠದ ಮಡಿಲಿಗೆ ಬಿದ್ದ ಕಾರಣ ಸಮಾಜದ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಿದೆ. ಅಲ್ಲಿ ವಿದ್ಯೆ ಕಲಿತು ಹೋದವರು ಸಾಹಿತಿಗಳಾಗಿದ್ದಾರೆ, ಶಿಕ್ಷಣ ತಜ್ಙರಾಗಿದ್ದಾರೆ, ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳಾಗಿದ್ದಾರೆ, ನಾಟಕ, ಸಿನಿಮಾರಂಗಗಳಲ್ಲಿ ಮಿಂಚಿದ್ದಾರೆ.

ಹೀಗೆ ಮಠದ ಅನ್ನ ದಾಸೋಹ, ಅಕ್ಷರ ದಾಸೋಹಗಳು ಲಕ್ಷಾಂತರ ಬಡಮಕ್ಕಳ ಬದುಕಿನಲ್ಲಿ ‘ದಾಟು ಹಲಗೆ’ಯಾಗಿ ಪರಿಣಮಿಸಿದೆ. ಈ ಶ್ರೀ ಮಠದಲ್ಲಿ ವಿದ್ಯಾರ್ಜನೆ ಮಾಡಿ ಬದುಕು ರೂಪಿಸಿಕೊಂಡ ಹಾಡ್ಲಹಳ್ಳಿ ನಾಗರಾಜ್ ಕತೆಗಾರರಾಗಿಯೂ, ಕಾದಂಬರಿಕಾರರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಸಿದ್ದಗಂಗೆಯಲ್ಲಿನ ಅವರ ಅನುಭವ ಕಥನಗಳನ್ನು ಇಲ್ಲಿ ನಿರೂಪಿಸಿದ್ದಾರೆ.

10

ಕುಮಾರಸ್ವಾಮಿಯ ಸಹವಾಸ ನನಗೆ ತುಂಬಾ ದುಬಾರಿಯೆನಿಸತೊಡಗಿತ್ತು. ಅವನ ಹೊಸ ಹೊಸ ಪ್ರೇಮ ಪ್ರಕರಣಗಳಿಂದಾಗಿ ಮುಂದೊಂದು ದಿನ, ಅವನೊಂದಿಗೆ ನಾನೂ ದುಬಾರಿ ಬೆಲೆ ತೆರಬೇಕಾದೀತೆಂದು ಸಹ ಅನಿಸಹತ್ತಿತ್ತು.

ನಮ್ಮ ರೂಮಿನ ಎದುರಿಗೆ ರಸ್ತೆಯಾಚೆ ತಿಗಳರ ಕುಟುಂಬವೊಂದಿತ್ತು. ಮನೆಯ ಯಜಮಾನ ಹಾಸಿಗೆ ಹಿಡಿದಿದ್ದ. ಅವರ ಮಗ ರಾಮಣ್ಣ ಅಂತ. ಅವನು ಮಂಡಿಪೇಟೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ. ನನಗೆ ಪರಿಚಯವಾಗಿದ್ದ ಅವನು ನನ್ನನ್ನು ತನ್ನ ಸೈಕಲ್‌ ಕ್ಯಾರಿಯರ್‌ ಮೇಲೆ ಕೂರಿಸಿಕೊಂಡು ಮಂಡಿಪೇಟೆಯ ತುಂಬಿದ ಜನಸಂದಣಿಯ ಒಳಗೆ ಟಿನ್‌ ಟಿನ್‌ ಎಂದು ಬೆಲ್‌ ಬಾರಿಸುತ್ತಾ, ವೇಗವಾಗಿ ಸೈಕಲ್‌ ಚಲಾಯಿಸಿ ನನ್ನಲ್ಲಿ ಥ್ರಿಲ್‌ ಉಂಟು ಮಾಡುತ್ತಿದ್ದ. ಅವನ ಸೈಕಲ್‌ ರಭಸಕ್ಕೆ ಜನರೇ ಅರುಗಾಗಿ, ದೂರ ಸರಿದು ದಾರಿ ಮಾಡಿಕೊಡುತ್ತಿದ್ದುದರಿಂದ ಅವನ ಸೈಕಲ್‌ ಯಾರಿಗೂ ತಾಕದಂತೆ ರಸ್ತೆಗುಂಟ ಸಾಗುತ್ತಿದ್ದುದು ನನಗೆ ವಿಸ್ಮಯ ಉಂಟು ಮಾಡುತ್ತಿತ್ತು.

ಅವನಿಗೊಬ್ಬಳು ತಂಗಿಯಿದ್ದಳು. ಗುಂಗುರು ಕೂದಲಿನ ಸುಂದರಿ! ರತ್ನಶ್ರೀ ಎಂಬ ಹೆಸರಿನ ಆ ಹುಡುಗಿ ಬಸ್‌ಸ್ಟಾಂಡ್‌ ರಸ್ತೆಯ ಎಂಪ್ರೆಸ್‌ ಗರ್ಲ್ಸ್‌ ಹೈಸ್ಕೂಲಿನಲ್ಲಿ ಎಸ್‌ ಎಸ್‌ ಎಲ್‌ ಸಿ ಓದುತ್ತಿದ್ದಳು.

ಎದುರು ಮನೆಯೇ ಆಗಿದ್ದುದರಿಂದಲೂ, ಅವಳ ಅಣ್ಣ ನಮ್ಮೊಂದಿಗೆ ಸಲುಗೆಯಿಂದ ಇದ್ದುದರಿಂದಲೂ ಅವಳೂ ಸಹಾ ನಮಗೆ ಪರಿಚಿತಳೇ ಆಗಿದ್ದಳು.

ಅವಳೆಡೆಗೆ ಆಕರ್ಷಿತನಾಗಿದ್ದ ಕುಮಾರಸ್ವಾಮಿ ಸೈಕಲ್‌ನಲ್ಲಿ ಕಾಲೇಜಿಗೆ ಹೋಗುವಾಗ ಬರುವಾಗಲೆಲ್ಲಾ ಅವಳ ಶಾಲೆಯ ಬಳಿ ಸುಳಿದಾಡಿ ಹೆಚ್ಚಿನ ಗೆಳೆತನ ಮಾಡಿಕೊಂಡಿದ್ದ. ಅಷ್ಟಕ್ಕೇ ನಿಲ್ಲದ ಅವನು ಗುಟ್ಟಿನಲ್ಲಿ ಅವಳಿಗೆ ಕೆಲವು ಪ್ರೇಮ ಪತ್ರಗಳನ್ನು ತಲುಪಿಸುವ ಧೈರ್ಯ ಮಾಡಿದ್ದ.

ಗೂಳೂರು ಗಣಪತಿಯ ಉತ್ಸವ ಬಹಳ ಪ್ರಸಿದ್ಧ. ಶನಿವಾರ ಅವಳನ್ನು ಅಲ್ಲಿಗೆ ಬರ ಹೇಳಿಕೊಂಡು ಭೇಟಿಯಾಗಿ, ಗೆಳತಿಯೊಂದಿಗೆ ಬಂದಿದ್ದ ರತ್ನಶ್ರೀಗೆ ಐಸ್‌ಕ್ಯಾಂಡಿ ಚಾಕಲೇಟ್‌ ಎಲ್ಲಾ ಕೊಡಿಸಿ ಬಂದಿದ್ದ. ಜತೆಗೆ ಒಂದು ಬಣ್ಣದ ಕರ್ಚಿಫನ್ನು ಉಡುಗೊರೆಯಾಗಿ ಕೊಡಿಸಿದ್ದನ್ನು ನನ್ನ ಬಳಿ ಹೆಮ್ಮೆಯಿಂದ ಹೇಳಿಕೊಂಡಿದ್ದ.

ನಮ್ಮ ಕಾಲೇಜು ವಿದ್ಯಾಭ್ಯಾಸಕ್ಕೆ ಹೆಸರುವಾಸಿಯಾಗಿದ್ದರೂ, ಔಟ್‌ಕ್ಯಾಸ್ಟ್‌, ಇನ್‌ಕ್ಯಾಸ್ಟ್ ಗಳ ಗಾಳಿ ಮಠದ ಕಡೆಯಿಂದ ಬೀಸಿ ಕಾಲೇಜು ಕ್ಯಾಂಪಸ್‌ನಲ್ಲಿ ಪಸರಿಸಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

ಯಾವುದಾದರೂ ವಿಚಾರಕ್ಕೆ ಸ್ಟ್ರೈಕೋ, ಪ್ರತಿಭಟನೆಯೋ ವಿದ್ಯಾರ್ಥಿಗಳಲ್ಲಿ ,ರಾಜ್ಯ ಮಟ್ಟದಲ್ಲಿ ಹುಟ್ಟಿಕೊಂಡು ಒಗ್ಗಟ್ಟಿನಿಂದ ಮುನ್ನಡೆಸುತ್ತಿದ್ದರೆ, ಇಲ್ಲಿಗೆ ಬಂದಾಗ ಔಟ್‌ ಕ್ಯಾಸ್ಟ್‌, ಇನ್‌ಕ್ಯಾಸ್ಟ್‌ ಎಂಬ ರೂಪ ಪಡೆದು ಜಾತಿಯ ವಿರಾಟ ರೂಪ ಪ್ರಕಟವಾಗುತ್ತಿತ್ತು. ಕಾಲೇಜಿನಲ್ಲಿ ಉತ್ತಮ ಅಧ್ಯಾಪಕರೆನಿಸಿಕೊಂಡಿದ್ದ ಅರ್ಥಶಾಸ್ತ್ರದ ಸೀನಪ್ಪ ಎಂಬುವವರು ಹಾಗೂ ಇಂಗ್ಲಿಷ್‌ ಪ್ರೊಪೆಸರ್‌ ಲೋಹಿತಾಶ್ವ ಎನ್ನುವವರು ಒಂದೊಂದು ಗುಂಪಿನ ನೇತೃತ್ವ ವಹಿಸಿ ವಿರುದ್ಧ ದಿಕ್ಕಿನಲ್ಲಿ ನಿಲ್ಲುತ್ತಿದ್ದುದು ನನ್ನಲ್ಲಿ ವಿಸ್ಮಯ ಮೂಡಿಸುತ್ತಿತ್ತು.

ಅದುವರೆಗೂ ಒಟ್ಟೊಟ್ಟಿಗೆ ಟೀ ಕುಡಿದುಕೊಂಡು ಸ್ನೇಹ ಭಾವದಿಂದಿರುತ್ತಿದ್ದ ಹುಡುಗರು ವಿರುದ್ಧ ಗುಂಪುಗಳಲ್ಲಿ ಗುರುತಿಸಿಕೊಂಡು ಪರಸ್ಪರ ದ್ವೇಷಿಸುವ ಮಟ್ಟಕ್ಕೆ ಹೋಗಿಬಿಡುತ್ತಿದ್ದರು.

ನನ್ನ ಹೆಸರು ನಾಗರಾಜ ಎಂದು ಇದ್ದುದರಿಂದ ಇನ್‌ಕ್ಯಾಸ್ಟ್‌ ಗುಂಪಿನವರು ಹತ್ತಿರ ಬಿಟ್ಟುಕೊಂಡರೆ, ನನ್ನ ಪೂರ್ವಾಪರ ತಿಳಿದಿದ್ದ ಔಟ್‌ಕ್ಯಾಸ್ಟ್‌ ಗೆಳೆಯರು ನನ್ನನ್ನು ಸ್ವಂತದವನೇ ಅಂದುಕೊಂಡು, ನಾನು ಎರಡೂ ಕಡೆಗೂ ಸಲ್ಲುವವನಾಗಿ ಬಿಡುತ್ತಿದ್ದೆ.

ವಿರುದ್ಧ ಗುಂಪಿನ ಮೇಲೆ ನಡೆಸಲಾಗುವ ಕಾರ್ಯಾಚರಣೆಯ ಬಗ್ಗೆ ಎರಡು ಗುಂಪಿನವರೂ ನನ್ನೆದುರಿಗೆ ನಿರ್ಭಿಡೆಯಿಂದ ಹೇಳಿಕೊಳ್ಳುತ್ತಿದ್ದರು. ನಾನು ಸಹ ಅದು ನನಗೆ ಸಂಬಂಧಿಸಿದ್ದಲ್ಲವೆಂಬಂತೆ ಮೌನವಹಿಸಿಬಿಡುತ್ತಿದ್ದೆ.

ಒಂದು ದಿನ ಇನ್‌ಕ್ಯಾಸ್ಟ್‌ ಹುಡುಗರು, ನನ್ನ ಎದುರಿಗೆ ವಿರುದ್ಧ ಗುಂಪಿನವರ ಬಗ್ಗೆ ಮಾತಾಡಿದ್ದರು. ಆ ಗುಂಪಿನಲ್ಲಿದ್ದ ಒಬ್ಬನಿಗೆ ನಾನು ಗೌಡರ ಹುಡುಗನೆಂಬ ಬಗ್ಗೆ ಸಂಶಯ ಬಂದಿತ್ತೆಂದು ಕಾಣುತ್ತದೆ.

ನನ್ನ ಬಳಿ ಬಂದು ‘ಎಲ್ಲಲೇ ನಾಗರಾಜ, ನಿನ್ನ ಕರಡಿಗೆ ತೆಗಿ’ ಎನ್ನುತ್ತಾ ನನ್ನ ಅಂಗಿಯ ಮೇಲು ಗುಂಡಿಗೆ ಕೈ ಹಾಕಿದ. ತಪ್ಪಿತಸ್ತನ ಸ್ಥಾನದಲ್ಲಿ ನಿಂತ ನಾನು ಭಯದಿಂದ ಬೆವರತೊಡಗಿದೆ.

‘ಯಾಕೋ ಇಲ್ವೇನೋ’ ಎಂದು ಆ ಹುಡುಗ ಗದರಿಸಿದ.

ಕತ್ತು ಬಗ್ಗಿಸಿ ನಿಂತಿದ್ದ ನಾನು ‘ನಾನು ಇನ್‌ಕ್ಯಾಸ್ಟ್‌ ಎಂದು ಯಾವಾಗ ಹೇಳಿದ್ದೆ’ ಎಂದು ತೊದಲು ದನಿಯಲ್ಲಿ ಹೇಳಿದೆ.

‘ಅವನ ಏನ್‌ ಕೇಳೋದು..ತಪ್ಪು ನಮ್ಮದು’ ಎಂದುಕೊಳ್ಳುತ್ತಾ ಅವರು ಅಲ್ಲಿಂದ ಹೊರಟು ಹೋದರು.

ನಾನೂ ನನ್ನ ಸ್ನೇಹಿತರನ್ನು ಹುಡುಕುತ್ತಾ ಹೊರಟಿದ್ದೆ. ಮತ್ತೆಂದೂ ನಾನು ಗುಂಪು ಸೇರಿದ್ದ ಕಡೆ ಎಲ್ಲಿಯೂ ನಿಲ್ಲುತ್ತಿರಲಿಲ್ಲ.

ಆಗೆಲ್ಲಾ ಕನ್ನಡ ಸಿನಿಮಾಗಳನ್ನು ತೆಗೆಯಲು ಹಿಮಾಲಯಕ್ಕೆ, ವಿದೇಶಗಳಿಗೆ ಹೋಗುವ ಪರಿಪಾಟವಿರಲಿಲ್ಲ. ತುಮಕೂರಿನ ಸಮೀಪದ ದೇವರಾಯನದುರ್ಗ ಕನ್ನಡ ಸಿನಿಮಾ ತೆಗೆಯುವವರ ‘ಡಾರ್ಲಿಂಗ್‌’ ಆಗಿತ್ತು. ಮಳೆಗಾಲ ಬಿಟ್ಟು ವರ್ಷದ ಬಹುತೇಕ ದಿನ ಯಾವುದಾದರೂ ಸಿನಿಮಾ ತಂಡ ಶೂಟಿಂಗ್‌ಗಾಗಿ ತುಮಕೂರಿನಲ್ಲಿ ಬೀಡು ಬಿಟ್ಟಿರುತ್ತಿತ್ತು. ಅಂದಿನ ಪ್ರಸಿದ್ಧ ಹೋಟೆಲ್‌ ‘ದ್ವಾರಕಾ’ದಲ್ಲಿ ಸಿನಿಮಾ ನಟ ನಟಿಯರು ವಾಸ್ತವ್ಯ ಹೂಡುತ್ತಿದ್ದುದರಿಂದ, ತಮ್ಮ ಮೆಚ್ಚಿನ ನಟ ನಟಿಯರ ದರ್ಶನ ಭಾಗ್ಯ ದೊರಕಬಹುದೆಂಬ ಆಸೆಯಿಂದ ಕಾಲೇಜು ಹುಡಗರು ಹೋಟೆಲ್‌ ಮುಂದೆ ಆ ರಸ್ತೆಯಲ್ಲಿ ಠಳಾಯಿಸುತ್ತಿದ್ದುದು ಸಾಮಾನ್ಯವಾಗಿತ್ತು. ಆಗೆಲ್ಲಾ ನಮ್ಮ ಕುಮಾರ ಸ್ವಾಮಿಯಂತಹವರಿಗೆ ಪ್ರತಿ ದಿನ ಸುಗ್ಗಿ.

‘ದೇವರು ಮಕ್ಕಳು’ ಎಂಬ ಸಿನಿಮಾ ಶೂಟಿಂಗ್‌ಗೆಂದು ಒಂದು ತಂಡ ಬಂದು ದ್ವಾರಕಾ ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ಅಲ್ಲಿಂದ ದಿನವೂ ದೇವರಾಯನ ದುರ್ಗಕ್ಕೆ ಹೋಗಿ ಶೂಟಿಂಗ್‌ ಮುಗಿಸಿ ಬರುತ್ತಿತ್ತು.

ಆ ತಂಡದಲ್ಲಿ ಅಂದು ಪ್ರಸಿದ್ಧಿಯ ಉತ್ತುಂಗದಲ್ಲಿದ್ದ, ಕನ್ನಡ ಸಿನಿಮಾ ಅಭಿಮಾನಿಗಳ ಆರಾಧ್ಯ ದೈವ ರಾಜ್‌ಕುಮಾರ್‌ ಇದ್ದುದು ಒಂದು ವಿಶೇಷ. ಅವರನ್ನು ಮುಖತಃ ನೋಡುವ ಅವಕಾಶಕ್ಕಾಗಿ ಆಸೆಯಿಂದ ಹಾತೊರೆಯುತ್ತಿದ್ದ ಕಾಲೇಜು ಹುಡುಗ ಹುಡುಗಿಯರಿಗೆ ಒಂದು ಸುಸಂಧಿ .ರಾಜ್‌ಕುಮಾರ್‌ ಜೊತೆ ಜೊತೆಗೆ ಜಯಂತಿ, ತೂಗುದೀಪ ಶ್ರೀನಿವಾಸ್‌ ಮುಂತಾದ ಪ್ರಸಿದ್ಧರನ್ನು ಕಣ್ಣಾರೆ ಕಾಣುವ ಅವಕಾಶವನ್ನು ಯಾರು ಕಳೆದುಕೊಳ್ಳುತ್ತಾರೆ! ಸುತ್ತಮುತ್ತಲ ಹಳ್ಳಿಗಳಿಂದ, ತುಮಕೂರು ನಗರದಿಂದ, ಜನ ದೇವರಾಯನ ದುರ್ಗದ ಕಡೆಗೆ ಪ್ರವಾಹದೋಪಾದಿಯಲ್ಲಿ ಸಾಗಿ ಬರುತ್ತಿದ್ದರು.

ದೇವರಾಯನದುರ್ಗದ ನೆತ್ತಿಯಲ್ಲಿ ದಿನವೂ ಜನ ಜಾತ್ರೆ! ಕುಮಾರಸ್ವಾಮಿ ಅಲ್ಲಿ ಹೋಗಿ ಬರಲು ನನ್ನನ್ನು ಒಂದು ವಾರದಿಂದ ಕರೆಯುತ್ತಲೇ ಇದ್ದ. ನಾನು ಕ್ಲಾಸು ತಪ್ಪಿಸುವ ಮನಸ್ಸಾಗದೇ ಸುಮ್ಮನಾಗಿದ್ದೆ. ಕುಮಾರಸ್ವಾಮಿ ಕ್ಲಾಸಿಗೆ ಚಕ್ಕರ್‌ ಹೊಡೆದು ಆಗಲೇ ಹೋಗಿ ಬಂದಿದ್ದ. ಅಂದು ಜಯಂತಿ ಹಾಗೂ ಇತರರ ಶೂಟಿಂಗ್‌ ನಡೆಯುತ್ತಿದ್ದು, ರಾಜ್‌ಕುಮಾರ್‌ ದರ್ಶನವಾಗದೇ ನಿರಾಶನಾಗಿದ್ದ.

ಭಾನುವಾರ ಮತ್ತೆ ಹೋಗುವುದೆಂದು ಕಾರ್ಯಕ್ರಮ ನಿಗಧಿಯಾಯಿತು. ಅದುವರೆಗೆ ಪರದೆಯ ಮೇಲೆ ನೋಡಿ ಮೆಚ್ಚಿಕೊಳ್ಳುತ್ತಿದ್ದ ಆರಾಧ್ಯದೈವ ಕಣ್ಣ ಮುಂದೆಯೇ ಪ್ರತ್ಯಕ್ಷವಾಗಿರುವಾಗ ಇಂತಹ ಸುವರ್ಣಾವಕಾಶ ಕಳೆದುಕೊಂಡು ಯಾರು ಮುಠ್ಠಾಳರಾಗುತ್ತಾರೆ!

ಕುಮಾರಸ್ವಾಮಿಯೊಂದಿಗೆ ನಾನೂ ಹೊರಟೆ. ಅವನು ಕುತ್ತಿಗೆ ಮುಚ್ಚುವಂತಹಾ ಕೆಂಪು ಟೀ ಶರ್ಟ್‌ ಹಾಗೂ ಕಪ್ಪು ಟೈಟ್‌ ಪ್ಯಾಂಟ್‌ ಧರಿಸಿದ್ದ. ಥೇಟ್‌ ಜಿತೇಂದ್ರನಂತೆಯೇ!

ನಾನೂ ಪ್ರಾಕ್ಟಿಕಲ್ಸ್‌ ದಿನ ಹಾಕುವ ಅದೇ ಬಿಳಿ ಶರ್ಟು ಹಾಗೂ ಬಿಸ್ಕಟ್‌ ಕಲರ್‌ ಪ್ಯಾಂಟು ಧರಿಸಿದ್ದೆ.

ಇಬ್ಬರೂ ರಾಜ್‌ಕುಮಾರ್‌ ಸ್ಟೈಲ್‌ನಲ್ಲೇ ಸೈಕಲ್‌ ತುಳಿಯುತ್ತಾ ದೇವರಾಯನ ದುರ್ಗದ ದಾರಿಯಲ್ಲಿ ಸಂಭ್ರಮದಿಂದ ಹೊರಟೆವು.

ಜಾತ್ರೆಗೆ ಹೋಗುವ ದಾರಿಯಂತೆ ದಾರಿ ಉದ್ದಕ್ಕೂ ಜನ ಸಾಗರ. ಅಲ್ಲಲ್ಲಿ ನಮ್ಮ ಕಾಲೇಜಿನ ಹುಡುಗ ಹುಡುಗಿಯರ ಮುಖ ದರ್ಶನವಾಗುತ್ತಿತ್ತು.

ಹುಡುಗರು ಕೆಲವರು ಸೈಕಲ್‌ನಲ್ಲಿ ಸವಾರಿ ಹೊರಟಿದ್ದರೆ, ಹುಡುಗಿಯರು ಹಾಗೂ ಹೆಂಗಸರು ಸೇರಿದಂತೆ ಬಹುತೇಕರದು ಕಾಲ್ನಡಿಗೆಯ ಜಾಥಾ!

ಬದುಕಿನಲ್ಲಿ ಅಪೂರ್ವವಾದುದೇನನ್ನೊ ಕಾಣಲಿದ್ದೇವೆ ಎಂಬ ಸಂಭ್ರಮದಲ್ಲಿ ಜನ ಸಾಗರ ಸಾಗಿತ್ತು.

ಬೆಟ್ಟದ ಆ ಏರುದಾರಿಯಲ್ಲಿ ಸೈಕಲ್ ಸವಾರಿ ತ್ರಾಸದಾಯಕವಾಗಿತ್ತು. ಅಂದಿನ ಸಿನಿಮಾ ನಟರ ಸ್ಟೈಲನ್ನು ಅನುಕರಿಸಿ ಟೈಟ್‌ ಪ್ಯಾಂಟ್‌ ಧರಿಸಿದ್ದರಿಂದ ಸಂದು ಸಂದುಗಳಲ್ಲಿ ಉಜ್ಜಿ ಅದೂ ಕಿರಿ ಕಿರಿ ಮಾಡುತ್ತಿತ್ತು.

ಕೆಲವೇ ಕ್ಷಣಗಳಲ್ಲಿ ಆಗಬಹುದಾಗಿದ್ದ ರಾಜ್‌ಕುಮಾರ್‌ನಂತಹ ಆರಾಧ್ಯ ದೈವದ ದರ್ಶನದ ಮುಂದೆ,ಆ ಕಿರಿಕಿರಿಯೆಲ್ಲಾ ಯಾವ ಲೆಕ್ಕ!

ಅಂತೂ ಬೆಟ್ಟದ ತುದಿ ತಲುಪಿದೆವು. ಅಲ್ಲಿಂದ ಮುಂದೆ ಬೆಟ್ಟದ ತುದಿಗೆ ಸ್ವಲ್ಪ ದೂರ ಕಾಲ್ನಡಿಗೆ ಬೆಟ್ಟದ ತುತ್ತತುದಿಯ ಕೋಡುಗಲ್ಲಿನ ಬಳಿ ಜನ ನೆರದಿದ್ದು ಅಲ್ಲಿಂದಲೇ ಕಾಣುತ್ತಿತ್ತು. ಸೈಕಲ್‌ಗಳನ್ನೆಲ್ಲಾ ಅಲ್ಲಿಯೇ ರಸ್ತೆ ತಿರುವಿನಲ್ಲಿ ನಿಲ್ಲಿಸಿದ್ದರು. ಕೆಲ ಹುಡುಗಿಯರು ಅಲ್ಲಿಯೇ ಗುಂಪುಗೂಡಿ ನಿಂತು ಬೆಟ್ಟ ಏರಿ ಬಂದ ಆಯಾಸ ಪರಿಹರಿಸಿಕೊಳ್ಳುತ್ತಿದ್ದರು.

ಕುಮಾರಸ್ವಾಮಿ ಜಿತೇಂದ್ರನ ಸ್ಟೈಲ್‌ನಲ್ಲಿ ಹೋಗಿ ಅವರಿಂದ ಸ್ವಲ್ಪ ದೂರದಲ್ಲಿದ್ದ ಜಾಗದಲ್ಲಿ ಸಡನ್‌ ಆಗಿ ಬ್ರೇಕ್‌ ಹಾಕಿ ಬಲಗಾಲನ್ನು ಗಾಳಿಯಲ್ಲಿ ಬೀಸುವಂತೆ ಮೇಲಕ್ಕೆ ಎತ್ತಿ ಸ್ಟೈಲಾಗಿ ನೆಲಕ್ಕೆ ಊರಿದ.

ಎದುರಿನ ಹುಡುಗಿಯರ ಗುಂಪು ಅವನೆಡೆಗೆ ಮೆಚ್ಚುಗೆಯ ನೋಟ ಹರಿಸಿದರು.

ನನಗೂ ಉತ್ಸಾಹ ಬಂದಿತು. ಅವನ ಹಾಗೆಯೇ ಸ್ಟೈಲಾಗಿ ಇಳಿಯಬಹುದು ಎನಿಸಿತು. ಸ್ವಲ್ಪ ದೂರ ಸೈಕಲ್‌ ಓಡಿಸಿ ಖಾಲಿ ಇದ್ದ ಜಾಗದಲ್ಲಿ ಸಡನ್‌ ಆಗಿ ಬ್ರೇಕ್‌ ಒತ್ತಿ. ಬಲಗಾಲನ್ನು ಗಾಳಿಯಲ್ಲಿ ಮೇಲಕ್ಕೆ ಎತ್ತಿದೆ. ‘ಭಡ್‌’ ಎಂದು ಸದ್ದಾಯಿತು. ಟೈಟ್‌ ಪ್ಯಾಂಟಿನ ಹೊಲಿಗೆ ಒಂದಡಿಯಷ್ಟು ಬಿಚ್ಚಿಕೊಂಡು ಒಳಗಿನ ಕೆಂಪು ಕಾಚ ಕಾಣುತ್ತಿತ್ತು. ನನ್ನ ಮುಖ ಬಿಳಿಚಿಕೊಂಡಿತು. ನಿಧಾನಕ್ಕೆ ನೆಲಕ್ಕೆ ಕಾಲೂರಿ ಸೈಕಲ್‌ಗೆ ಒರಗಿ ನಿಂತುಕೊಂಡೆ.

ಕುಮಾರಸ್ವಾಮಿಗೆ ಸುಳಿವು ಸಿಕ್ಕಿತು. ನನ್ನ ಬಳಿಗೆ ಬಂದು ವಿಚಾರಿಸಿಕೊಂಡ.

ಎಲ್ಲರಂತೆ ಸ್ಟೈಲಾಗಿ ತಿರುಗಾಡಿಕೊಂಡು ರಾಜಕುಮಾರ್‌ ದರ್ಶನ ಭಾಗ್ಯ ಪಡೆದು ಸಂಭ್ರಮಿಸಲೆಂದು ಆಸೆಯಿಂದ ಬಂದವನು ತೊಡೆಯ ಸಂಧಿ ಕೈ ಹಾಕಿ ಹರಿದ ಪಾಂಟಿನ ಭಾಗ ಮುಚ್ಚಿಕೊಂಡು ಮೈಯನ್ನು ಮುದುಡಿಕೊಂಡು ಸಪ್ಪೆ ಮೋರೆ ಹಾಕಿ ನಿಂತಿದ್ದೆ.

‘ಇಲ್ಲೇ ನಿಂತಿರು ಬಂದೆ’ ಎನ್ನುತ್ತಾ ಹುಡುಗಿಯರ ಗುಂಪಿನ ಕಡೆಗೆ ಓಡಿದ.

ಅವನ ಪರಿಚಿತರೆಂದು ಕಾಣುತ್ತದೆ. ಲಂಗದಾವಣಿ ಧರಿಸಿದ್ದ ಇಬ್ಬರು ಗುಂಪಿನಿಂದ ಹೊರ ಬಂದು ಅವನೊಂದಿಗೆ ಮಾತನಾಡ ತೊಡಗಿದರು.

ಅವನು ನನ್ನ ಕಡೆಗೆ ಕೈ ತೋರಿಸಿ ಅವರಿಗೆ ಏನೋ ಹೇಳುತ್ತಿದ್ದ.

ಅವರು ನನ್ನ ಹರಿದ ಪ್ಯಾಂಟಿನೊಳಗಿನ ದೇಹ ಭಾಗವನ್ನು ನೋಡಿಯೇ ಬಿಟ್ಟರೇನೋ ಎಂಬಂತೆ ನಾಚಿಕೆಯಿಂದ ಆ ಭಾಗವನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದು ನಿಂತುಕೊಂಡೆ.

ಅಲ್ಲಿಂದ ಬಂದವನು ನನ್ನನ್ನು ದೂರದಲ್ಲಿದ್ದ ಪೊದೆಯ ಹಿಂದಕ್ಕೆ ಕರೆದುಕೊಂಡು ಹೋಗಿ ಪ್ಯಾಂಟ್‌ ಕಳಚಿಸಿದ.

‘ಅದಕ್ಕೇ ನಿನ್ನನ್ನ ಗೂಸ್ಲು ಎನ್ನುವುದು… ನೀನು ನನಗೇ ಬುದ್ಧಿ ಹೇಳಕೆ ಬರ್ತಿಯಾ?… ಹುಡುಗಿಯರ ಫ್ರೆಂಡ್‌ಶಿಪ್‌ ಮಾಡಬೇಕು ಅನ್ನದು ಅದಕ್ಕೆಯಾ…’ ಮಾತಾಡುತ್ತಲೇ ಎಡಗೈ ಮುಷ್ಠಿಯಲ್ಲಿದ್ದ ಮೂರು ಸೇಪ್ಟಿ ಪಿನ್‌ಗಳನ್ನು ತೆಗೆದು ಪ್ಯಾಂಟ್‌ ಹರಿದ ಜಾಗಕ್ಕೆ ಕೂಡಿಸಿ ಅಲ್ಲಲ್ಲಿಗೆ ಹಾಕುತ್ತಾ ಹೋದ.

ನಾನು ಪ್ಯಾಂಟ್‌ ಏರಿಸಿಕೊಳ್ಳುವಾಗ ‘ಯಾಕೋ ನಿನ್ನ ಅದೃಷ್ಟವೇ ಸರಿಯಿಲ್ಲ. ಪಿನ್‌ ಬಿಚ್ಗಂಡು ಎಲ್ಲಾದರೂ ಬೀಜಕ್ಕೆ ಚುಚ್ಚಿಕೊಂಡು ಬಿಟ್ಟಾತು.. ಜೋಪಾನ’ ಎಂದು ತಮಾಷೆ ಮಾಡಿದ.

ಜನಸಂದಣಿಯ ಮಧ್ಯೆ ಬೆಟ್ಟದ ತುದಿಯ ಕೋಡುಗಲ್ಲಿನ ಕಡೆಗೆ ಮುಜುಗರದಿಂದಲೇ ನಡೆದು ಹೋದೆ.

ನಾವು ನಿಂತಿದ್ದ ಕೋಡುಗಲ್ಲಿದ್ದ ಜಾಗದ ಎದುರಿಗೆ ಪ್ರಪಾತವಿತ್ತು. ಪ್ರಪಾತದ ಕಡೆಗಿದ್ದ ಒಂದು ಗಿಡದ ಕೊಂಬೆಯಲ್ಲಿ ಮಗುವಿನ ಉಡುಪು ತೊಟ್ಟ ಗೊಂಬೆಯೊಂದು ನೇತಾಡುತ್ತಿತ್ತು.

ಇನ್ನೇನು ಶೂಟಿಂಗ್‌ ಶುರುವಾಗುವ ಸೂಚನೆಯೆಂಬಂತೆ ಪೊಲೀಸರು ನೂಕಾಡುತ್ತಿದ್ದ ಜನ ಸಂದಣಿಯನ್ನು ಹಿಂದೆ ಸರಿಸತೊಡಗಿದರು.

ಗುಂಪಿನೊಳಗೆ ನುಸುಳಿ ಮುಂದೆ ಹೋಗಲು ಮುಜುಗರವಾಗಿ ನಾನು ತೊಡೆಯ ಸಂದಿ ಗಟ್ಟಿಯಾಗಿ ಕೈ ಹಾಕಿಕೊಂಡು ನಿಂತಿದ್ದೆ.

‘ಏಯ್‌ ಏನು ಹಂಗೆ ಅಲ್ಲಿಗೆ ಕೈ ಹಾಕಂಡು ದೂರ ನಿಂತಿದಿಯಾ ಮಾರಾಯ… ಈ ಜನ ಏನು ನಿನ್ನ ‘ಅದ’ ನೋಡಕೆ ಬಂದಿದಾರೆ ಅಂತ ತಿಳ್ದಿದಿಯಾ… ನೋಡು ಅವರೆಲ್ಲಾ ಹೆಂಗೆ ಬಿಟ್ಟ ಕಣ್ಣು ಬಿಟ್ಟುಕೊಂಡು ತಮ್ಮ ಆರಾಧ್ಯ ದೈವ ರಾಜಕುಮಾರ್‌ನನ್ನು ನೋಡಿ ಕಣ್ತುಂಬಿಕೊಳ್ಳಲು ಕಾತರದಿಂದ ನಿಂತಿದ್ದಾರೆ… ನೀನೂ ಬಾ ಹತ್ತಿರದಿಂದ ನೋಡೋಣ ಎಂದು ಮುಂದಕ್ಕೆ ಎಳೆದುಕೊಂಡ ಹೋದ.

ಗುಂಪಿನಲ್ಲಿ ಗುಜುಗುಜು ಶುರುವಾಯಿತು. ಅದ್ಯಾವ ಮಾಯದಲ್ಲೋ ಎರಡು ಕೋಡುಗಲ್ಲುಗಳ ಮೇಲೆ ನಾಯಕನ ಪೋಷಾಕಿನಲ್ಲೊಬ್ಬ, ಖಳನ ಪೋಷಾಕಿನಲೊಬ್ಬ ಅವತರಿಸಿದರು. ಕೋಡುಗಲ್ಲಿನಿಂದ ಕೋಡುಗಲ್ಲಿಗೆ ನೆಗೆಯುತ್ತಾ ಹೊಡೆದಾಡುತ್ತಾ ನೇತಾಡುತ್ತಿದ್ದ ಮಗುವಿನ ಬಳಿ ಸಮೀಪಿಸಿದರು. ಆ ಮಗುವನ್ನು ವಶಕ್ಕೆ ಪಡೆಯಲು ಇಬ್ಬರ ನಡುವೆ ಪೈಪೋಟಿ.

ತಮ್ಮ ಮೆಚ್ಚಿನ ನಟನನ್ನು ಹತ್ತಿರದಿಂದ ನೋಡಿ ಪಾವನರಾಗಲು ಜನ ನೂಕಾಡುತ್ತಲೇ ಮುಂದೆ ಮುಂದೆ ಬರುತ್ತಿದ್ದರು.

ಹತ್ತಿರದಿಂದ ನೋಡಿದರೆ ರಾಜ್‌ಕುಮಾರ್‌ ತರ ಪೋಷಾಕು ತೊಟ್ಟು ಅದೇ ರೀತಿಯ ಮೇಕಪನ್‌ಲ್ಲಿದ್ದವನೊಬ್ಬ, ತೂಗುದೀಪ ಪೋಷಾಕಿನಲ್ಲಿ ಇನ್ನೊಬ್ಬ.

ಪ್ರಸಿದ್ಧ ನಟರ ಬದಲಿಗೆ ಇಬ್ಬರು ಸ್ಟಂಟ್‌ ಮಾಸ್ಟರ್‌ಗಳು ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು.

ರಾಜಕುಮಾರ್‌ ಕಾರಿನಿಂದ ಇಳಿದು ಈಗ ತಾನೆ ತುಮಕೂರಿನ ದ್ವಾರಕಾ ಹೋಟೆಲ್‌ ಒಳಗೆ ಹೋದದ್ದು ನೋಡಿದೆ ಎಂದು ಆಗ ತಾನೇ ಬಂದವನೊಬ್ಬ ಹೇಳುತ್ತಿದ್ದ.

ಗುಜು ಗುಜು ಮಾತಾಡುತ್ತಾ ಜನರ ಗುಂಪು ಚದುರ ತೊಡಗಿತು.

ನಾವೂ ನಿರಾಸೆಯಿಂದ ಹಿಂದಿರುಗಿದೆವು.

ರೂಮಿನ ಬಳಿ ಬಂದಾಗ ಎದುರು ಮನೆಯ ಮುಂದೆ ರಸ್ತೆಯಲ್ಲಿ ರಾಮಣ್ಣ ಯಾರೋ ಹೊಸಬರೊಂದಿಗೆ ನಿಂತುಕೊಂಡಿದ್ದ. ಅವನು ನನ್ನೆಡೆಗೆ ಎಂದಿನಂತೆ ಸ್ನೇಹದ ನಗೆ ಬೀರಲಿಲ್ಲ.

ನಮ್ಮೆಡೆಗೆ ಬೆರಳು ಮಾಡಿ ನಿರ್ದೇಶಿಸುತ್ತಾ ಜೊತೆಯಲ್ಲಿದ್ದವರಿಗೆ ಏನೋ ಹೇಳುತ್ತಿದ್ದ.

‘ಅವನೇಯ ಫುಲ್‌ ಆರಮ್‌ ಕೆಂಪು ಟೀಶರ್ಟ್‌ ಹಾಕಿರುವವನು’ ಎನ್ನುತ್ತಿದ್ದ.

‘ಓಹ್‌, ಅವನೇನು ದೊಡ್ಡ ಜಿತೇಂದ್ರನಂತೊ!’ ಎಂದು ಮಿಕ್ಕವರು ಗೇಲಿ ಮಾಡುತ್ತಿದ್ದರು.

ರೂಮೊಳಗೆ ಬಂದ ನಾನು ಕುಮಾರ ಸ್ವಾಮಿಗೆ ‘ಯಾಕೋ ಏನೋ ಕೆಟ್ಟ ವಾಸನೆ ಹೊಡೆಯುತ್ತಿದೆ. ಎಚ್ಚರಿಕೆಯಾಗಿರಬೇಕು’ ಎಂದೆ.

ನಾನು ಆ ರೂಮು ತೊರೆಯಲು ಅಂದು ರಾತ್ರಿಯೇ ನಿರ್ಧರಿಸಿಕೊಂಡೆ

|ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: