ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಡ್ಲಹಳ್ಳಿ ನಾಗರಾಜ್ ಅಂಕಣ –ದಿಕ್ಕಿಲ್ಲದವರಿಗೆ ಸಂಗಾತಿ ಯಾರು?

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ.

ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ, ದಿನದ ದುಡಿಮೆಯ ದಣಿವು ನೀಗಿಸಿ ಮನಸು ಹಗುರಮಾಡಿಕೊಳ್ಳವ, ಸ್ವಾರಸ್ಯಕರ ಮಾತುಗಾರರು, ಸೋಮಾರಿಕಟ್ಟೆಯಲ್ಲಿ ಕುಳಿತು, ಕತೆಗಳ ಪೋಷಾಕು ತೊಡಿಸಿ ಹರಟೆಯ ರೂಪದಲ್ಲಿ ಹೇಳುವ ಪ್ರಯತ್ನವೂ ಇದಾಗಿದೆ.

ಮಲೆನಾಡಿನ ಬೈನೆ ಸೇಂದಿಯ ಅಡಸಾಲೆಗಳಲ್ಲಿ ಧಗಧಗಿಸುವ ಬೆಂಕಿಯ ಸುತ್ತ ಕುಳಿತು ಸಂಜೆಯ ಪಾನಗೋಷ್ಟಿಗಳನ್ನು ಉತ್ತೇಜನದಾಯಕವಾಗಿಸಲು ಹೇಳಿದ ʻಗುಂಡು ಪಾರ್ಟಿʼಯ ಕಥಾ ಪ್ರಸಂಗಗಳಾಗಿರಲೂಬಹುದು.

ಜನಪದ ಕತೆಗಳಂತೆ ಜನರ ಬಾಯಿಂದ ಬಾಯಿಗೆ ಹರಿದುಬಂದು ʻಕೇಳು ಕತೆʼ ಗಳಾಗಿ ಗಾಳಿಯಲ್ಲಿ ತೇಲಾಡಿ ಹೋಗುವ ಇಂತಹಾ ಪ್ರಸಂಗಗಳು ಹಲವಾರು.ಓದುಗರಿಗೆ ಹಿತವಾಗುವಂತಹಾ ಈ ಎಲ್ಲಾ ಪ್ರಸಂಗಗಳ ಹ್ಯೂಮರ್‌ ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದೆಂಬುದನ್ನು ಮನಗಂಡು ʻಹಗ್ರಾಣದ ಕತೆʼಗಳ ರೂಪ ಕೊಟ್ಟು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಅಂಕಣ – 9

ದೇವರ ಅಸ್ತಿತ್ವದ ಬಗೆಗೇ ಏನೂ ತಿಳಿಯದ ನಾನು ದೆವ್ವಗಳ ಅಸ್ತಿತ್ವ ಸಾರುವ ಕತೆಯನ್ನು ಹೇಗೆ ಹೇಳಲಿ? ಎಲ್ಲಾ  ದ್ವೇಷ, ಕ್ರೌರ್ಯಗಳ ಕತೆಯಂತೆಯೇ ಈ ದೆವ್ವಗಳ ಕತೆಯೂ….  ರೋಚಕವಾಗಿರುತ್ತದೆ ಅಂತ, ಇಲ್ಲದ ಒಂದು ಪ್ರಪಂಚಕ್ಕೆ ಕರೆದೊಯ್ದು ನಿಮ್ಮನ್ನು ಭಯಭೀತರನ್ನಾಗಿಸುವುದು ಎಷ್ಟರ ಮಟ್ಟಿಗೆ ಸರಿ…  ಹೇಳಿ?

ದೆವ್ವಗಳೆಂದರೆ ಹೇಳಿ ಕೇಳಿ ಮನುಷ್ಯರಿಗೆ ಕೇಡುಬಗೆಯುವವೆ ಅಲ್ಲವೆ!  ಆದರೂ ಮಕ್ಕಳೇ, ಆಸಕ್ತಿಯಿಂದ ಕಿವಿತೆರೆದು ಕುಳಿತಿರುವ ನಿಮ್ಮನು ನಿರಾಸೆಗೊಳಿಸುವುದು ಸರಿಯೇ?………….

ನಾವು ಬಾಲ್ಯದಲ್ಲಿದ್ದಾಗ ನಮ್ಮ ಅಜ್ಜಿ ಹೇಳಿದ್ದ, ದಿಕ್ಕಿಲ್ಲದ ಮುದುಕಿಯೊಂದು ಬಂದು ಬಾಣಂತನ  ಮಾಡಿಕೊಟ್ಟುಹೋದ ಕತೆಯನ್ನೇ ಈವತ್ತಿಗೆ ನಿಮಗೆ ಹೇಳುತ್ತೇನೆ……..ಕೇಳಿ……

ಅದೊಂದು ಅಪ್ಪಟ ಮಲೆನಾಡಿನ ಹಳ್ಳಿ. ದೂರ ದೂರ ಕಾಡೊಳಗೆ ಅಡಗಿ ಕುಳಿತ ಒಂಟಿ ಮನೆಗಳು. ವರ್ಷದಲ್ಲಿ ಐದಾರು ತಿಂಗಳು ʻಜರ್ರೋʼ ಎಂದು ಬಿಡದೆ ಸುರಿಯುವ ʻದಯ್ಯ ಮಳೆʼ. ಕಭಯಂಕರ ಬೆಟ್ಟ ಕಾಡಿನಿಂದ ಸುತ್ತುವರೆದಿದ್ದ ಆ ಊರಿನ ಜನ,ಕಾಡುಪ್ರಾಣಿಗಳು,ಜಿಗಣೆ,ಚುಮ್ಮಗಳು ಹಾಗೂ ಮಲೇರಿಯಾದಂತಹ ರೋಗ ಇವುಗಳ ನಡುವೆ ಬದುಕು ಸಾಗಿಸಬೇಕಾಗಿತ್ತು. ಅಂದಿನ ದಿನಗಳಲ್ಲಿ ಶಾಲೆಯ ವ್ಯವಸ್ಥೆಯಿರಲಿಲ್ಲ. ಹಲಕೆಲವು ಹಳ್ಳಿಗಳಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲುʻಕೂಲಿಮಠʼಸ್ಥಾಪಿಸಿ ಅದಕ್ಕೆ ಒಬ್ಬ ಅಯ್ಯನನ್ನು ನೇಮಿಸಿಕೊಳ್ಳುತ್ತಿದ್ದರು.ಆತನಿಗೆ ಊರವರೆಲ್ಲಾ ಸೇರಿ ಅವನ ಖರ್ಚಿಗಾಗುವ ಹಣ, ದವಸ ಧಾನ್ಯ ಸಂಗ್ರಹಿಸಿ ಕೊಡುತ್ತಿದ್ದರು. ಬೇಸಿಗೆಯಲ್ಲಾದರೆ  ಊರ ಗುಡಿಯ ಬಳಿಯ ಅರಳಿಮರದ ಕಟ್ಟೆಯಲ್ಲೋ, ಮಳೆಗಾಲದಲ್ಲಾದರೆ ಗೌಡರ ಮನೆಯ ಜಗುಲಿಯಲ್ಲೋ ಮಕ್ಕಳ ಅಕ್ಷರಾಭ್ಯಾಸ ನಡೆಯುತ್ತಿದ್ದುದು ವಾಡಿಕೆ.

ಆದರೆ ಆ ಹಳ್ಳಿಯಲ್ಲಿ ʻಅಯ್ಯʼ ಇಲ್ಲದ್ದರಿಂದ ಕೂಲಿ ಮಠವೂ ನಡೆಯುತ್ತಿರಲಿಲ್ಲ. ಮಕ್ಕಳು ಗೊಣ್ಣೆ ಸುರಿಸಿಕೊಂಡು. ಹಣ್ಣು ಹಂಪಲು, ಹಕ್ಕಿ ಪಕ್ಷಿಗಳ ಬೇಟೆಯಾಡುತ್ತಾ, ಗದ್ದೆಯ ಕೊಲ್ಲಿಗಳಲ್ಲಿ ಏಡಿ, ಮೀನು ಹಿಡಿಯುತ್ತಾ ಕಾಲ  ತಳ್ಳುತ್ತಿದ್ದುದು ಹಿರಿಯರಿಗೆ  ತಲೆನೋವಿನ  ವಿಷಯವಾಗಿತ್ತು.

ಹೀಗಿರುವಾಗ  ಗೌಡರ ಬೀಗರ ದೂರದೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ  ಈ ಅನಾಥ ಹುಡುಗ, ಹಬ್ಬಕೆ ಹೋಗಿದ್ದ ಗೌಡರ  ಕಣ್ಣಿಗೆ ಬಿದ್ದಿದ್ದ. ಪಕ್ಕದ ಜಿಲ್ಲೆಯಲ್ಲಿ ಕೂಲಿ ಮರಠದಲ್ಲಿ ಸಾಕಷ್ಟು ಅಕ್ಷರಾಭ್ಯಾಸ  ಮಾಡಿದ್ದ ಅವನು, ಅವನ  ತಂದೆ ತಾಯಿಗಳು  ಮಲೇರಿಯಾದಲ್ಲಿ ಸತ್ತಿದ್ದರಿಂದ ಊರು ಬಿಟ್ಟು ಬಂದು ಅಲ್ಲಿ ಕೂಲಿ  ಕೆಲಸಕ್ಕೆ  ಸೇರಿಕೋಂಡಿದ್ದ.

ಕಾಡು ಬಿದ್ದು ಹೋಗಿರುವ  ಊರ ಮಕ್ಕಳು ಹಾಗೆಯೇ ಬಿಟ್ಟರೆ ಕಾಡು ಮನುಷ್ಯರೇ ಆಗಿ  ಹೋಗುತ್ತಾರೇನೋ  ಎಂದು  ಪರಿತಪಿಸುತ್ತಿದ್ದ ಗೌಡರು, ಅವನನ್ನು ಊರಿಗೆ ಕರೆತಂದು ಮಕ್ಕಳಿಗೆ  ಅಕ್ಷರಾಭ್ಯಾಸ ಮಾಡಿಸಲು  ನೇಮಿಸಿದರು.

ಭೈರವನ  ಗುಡಿಯ  ಪಕ್ಕದ ಹಲಸಿನ  ಮರದ ಕಟ್ಟೆ  ಕೂಲಿ  ಮಠ ನಡೆಸಲು ಪ್ರಶಸ್ತ ಸ್ಥಳವಾಗಿತ್ತು. ಮಳೆಗಾಲಕ್ಕೆ  ಗೌಡರ ಮನೆಯ ಹಜಾರ ಇದ್ದೇ ಇತ್ತು.

ಮಧ್ಯಾಹ್ನದವರೆಗೆ ಊರ ಮಕ್ಕಳಿಗೆ ಅಕ್ಷರಾಭ್ಯಾಸ  ಮಾಡಿಸಿ, ಆ ಮಕ್ಕಳನ್ನು ಅವರವರ ತಂದೆ ತಾಯಿಗಳ ಬಳಿ  ಹೋಗಿ  ಕೃಷಿ ಕಾರ್ಯದಲ್ಲಿ ನೆರವಾಗುವಂತೆ  ತಾಕೀತು ಮಾಡಿ, ತಾನು ಗೌಡರ ತೋಟ ಗದ್ದೆಗಳ ಕಡೆ ಹೋಗಿ  ಅವರು  ಹೇಳಿದ ರೈತಾಪಿ ಕೆಲಸ ನಿರ್ವಹಿಸುತ್ತಿದ್ದ. ರಾತ್ರಿ ಗೌಡರ ಮನೆ ಒಪ್ಪಾರಿನಲ್ಲೇ ವಾಸ್ತವ್ಯ ಹೂಡುತ್ತಿದ್ದ.

ಅವನ ಕಾರ್ಯವೈಖರಿಯಿಂದ ಹಳ್ಳಿಯ ರೈತರು, ಅದಕ್ಕೂ ಮಿಗಿಲಾಗಿ ಗೌಡರ ಮೆಚ್ಚುಗೆಗೆ ಪಾತ್ರನಾಗಿದ್ದ.

ಹೀಗೆಯೇ ಕೆಲವಾರು ವರ್ಷ ಕಳೆದಿದ್ದವು. ಅವನ ಯೌವ್ವನದ ದಿನಗಳು ಕಳೆದುಹೋಗುತ್ತಿದ್ದುದನ್ನು ಗಮನಿಸಿದ ಗೌಡರು ಅವನಿಗೊಂದು ಮದುವೆ ಮಾಡಿ ಬದುಕು ಕಟ್ಟಿಕೊಡಲು ನಿರ್ಧರಿಸಿದರು.

ಅವನು ಮೊದಲೇ ದಿಕ್ಕಿಲ್ಲದವನು. ಅವನ ಜಾತಿಯಸ್ತರು ಯಾರು? ಅವನಿಗೆ ಹೆಣ್ಣು ಎಲ್ಲಿ ಹುಡುಕುವುದು?.. ಅದೇ ಸಮಸ್ಯೆಯಾಯಿತು.

ಪ್ರಪಂಚದಲ್ಲಿ ದಿಕ್ಕಿಲ್ಲದವರದೇ ಒಂದು ಜಾತಿಯೋ ಏನೋ! ಊರ ಬೆಟ್ಟದಾಚೆಯ ಒಂದು ಹಳ್ಳಿಯಲ್ಲಿ ಒಬ್ಬಳು ದಿಕ್ಕಿಲ್ಲದ ಹುಡುಗಿ ಕೂಲಿ ಕಾರ್ಮಿಕಳಾಗಿ ಕೃಷಿ ಕೆಲಸ ಮಾಡಿಕೊಂಡಿದ್ದಳು  ಅವಳನ್ನು ತಂಧು ಅವನಿಗೆ ಮದುವೆ ಮಾಡಿದರು.

ಈಗ ಅವನು ಸಂಸಾರಸ್ಥ. ಗೌಡರ ಒಪ್ಪಾರಿನಲ್ಲಿ ವಾಸ್ತವ್ಯ ಮುಂದುವರಿಸಲು ಸಾಧ್ಯವೇ?      

ಗೌಡರ ಮನೆಯಿಂದ ಒಂದು ಮೈಲಿ ದೂರದಲ್ಲಿ ಕಾಡಂಚಿನ ಗದ್ದೆಯ ಬಳಿ ಗೌಡರಿಗೆ ಸೇರಿದ ಒಂದು ಪಾಳು ಬಿದ್ದ ಕೊಟ್ಟಿಗೆಯಿತ್ತು. ಅದರೊಳಗಿನ ಕಾಡು ಕಂಬಗಳೆಲ್ಲ ಇನ್ನೂ ಬಂದೋಬಸ್ತ್‌ ಆಗಿದ್ದವು. ಹಳ್ಳಿಯವರೆಲ್ಲಾ ಸೇರಿ ಅದನ್ನೇ ಹೊಸದಾಗಿ ನಿರ್ಮಿಸಿದರು.

ಒಂದು ಕಡೆ ವಾಸಕ್ಕೆ, ಮಧ್ಯ ನರಕೆಯ ಗೋಡೆ.  ಮನೆಯಂದ ಹೊರಬಂದು ಪಕ್ಕದ ಬಾಗಿಲಿನಲ್ಲಿ ಹೋದರೆ, ಅಡುಗೆಯ ಕೋಣೆ ಹಾಗೂ ಮೀಯುವ ಮನೆ, ಪಕ್ಕದಲ್ಲೆ ಎಳೆದ ಚಾಟಿನಲ್ಲಿ ಸೌದೆ ಸಂಗ್ರಹಿಸಲು ಸೌದೆ ಕೊಟ್ಟಿಗೆ.

ಅಲ್ಲಿ ʻಅಯ್ಯʼ ಹಾಗೂ ಅವನ ಹೆಂಡತಿಯ ಸಂಸಾರ ಶುರುವಾಯಿತು. ಮನೆಗೆಲಸ ಮುಗಿಸಿ ಗೌಡರ ತೋಟ, ಗದ್ದೆಯ ಕೆಲಸಕ್ಕೆ ಹೋಗುತ್ತಿದ್ದ ಹೆಂಡತಿಗೆ ಹಗಲು ಕಳೆದದ್ದೇ ತಿಳಿಯುತ್ತಿರಲಿಲ್ಲ. ಸಂಜೆಯದೇ ತಾಪತ್ರಯ. ಕತ್ತಲಾಯಿತೆಂದರೆ ಕಾಡುಪ್ರಾಣಿಗಳ ಕೂಗು ಸನಿಹದಿಂದಲೇ ಕೇಳಿಬರುತ್ತಿತ್ತು. ಇನ್ನು ದಯ್ಯ ಪೀಡೆಗಳ ಭಯ ಭೇರೆ.

ಹಾಗಾಗಿ –ಕೂಲಿ ಮಠದ ಕೆಲಸ, ಗೌಡರ ಕೃಷಿ ಕೆಲಸ ಎಲ್ಲ ಮುಗಿಸಿ ಕತ್ತಲಾಗುವ ಮುಂಚೆ  ʻಮನೆʼಸೇರುವಂತೆ ಗಂಡನಿಗೆ ತಾಕೀತು ಮಾಡಿದ್ದಳು.

ಅವರ ಬದುಕು ಹಸನಾಗಿ ಸಾಗಿತ್ತು.

ʻ ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕುʼಎಂಬಂತೆ ಅವರ ದಾಂಪತ್ಯ ಜೀವನ ನಡೆದಿತ್ತು.

ಮಳೆಗಾಲ ಕಳೆದು ದೀವಳಿಗೆಯ ವೇಳೆಗೆ ಮಲೆನಾಡ ಪ್ರಕೃತಿ ಮೈದುಂಬಿ ನಿಂತಿತ್ತು. ಅವರಿಬ್ಬರ ಅನುಕೂಲ ದಾಂಪತ್ಯದ ಫಲವೆಂಬಂತೆ ಅವಳ ಗರ್ಭದಲ್ಲೊಂದು ಬೀಜ ಮೊಳಕೆಯೊಡೆದು, ಅವಳೂ ಮೈದುಂಬಿಕೊಳ್ಳತೊಡಗಿದ್ದಳು.

ಮುಂದಿನ ಮುಂಗಾರು ಮೋಡಗಳು ದಟ್ಟೈಸಿ ಬರತೊಡಗುವವರೆಗೂ ಅವರ ಬದುಕು ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆಯೇ ಸೈ!

 ಅವರ ದಾಂಪತ್ಯದ ರಮ್ಯ ಕಾಲ ಕಳೆದು ದಿಗಿಲಿನ ದಿನಗಳು ಅವರಿಗೆ ತಿಳಿಯದಂತೆಯೇ ಸಮೀಪಿಸಿದ್ದವು.ಆತಂಕದಿಂದ ಕುಳಿತು ರಾತ್ರಿಯೆಲ್ಲಾ ದಿನ ಎಣಿಸಿದರು.

ಆದ್ರಿ ಪಣಾರಾಸಿ (ಆರಿದ್ರಾ ಪುನರ್ವಸು) ಮಳೆಯ ವೇಳೆಗೆ ಹೆರಿಗೆಯ ದಿನ ಬಂದೇ ಬಿಡುತ್ತದೆ. ದಿನ ತುಂಬಿದ ಮೇಲೂ ಕೂಸು ಗರ್ಭದಲ್ಲೇ ಇರಲು ಸಾಧ್ಯವೇ?

ಮಳೆಗಾಲಕ್ಕೆಂದು ಇಬ್ಬರಿಗಾಗುವಷ್ಟು ದವಸ ಧಾನ್ಯ,.ಸೌದೆ ಎಲ್ಲವನ್ನು ಹೇಗೋ ಸಂಗ್ರಹಿಸಿ ಇಟ್ಟುಕೊಂಡಿದ್ದರು.

ಆದರೆ ಬಾಣಂತನದಂತಹ ಕಷ್ಟ ಕಾಲವನ್ನು ನಿಭಾಯಿಸುವುದು ಹೇಗೆ?

ಅದಕ್ಕೇ, ಹೆಣ್ಣಿಗೆ ತೌರುಮನೆಯೊಂದು ಇರಬೇಕು ಎನ್ನುವುದು….. ದಿಕ್ಕಿಲ್ಲದ ಅವಳಿಗೆ ಯಾವ ತೌರು ಮನೆ?….. ಗಂಡನ ಮನೆಯಲ್ಲಾದರು ಇದನ್ನೆಲ್ಲಾ ನಿಭಾಯಿಸಲು ಒಂದು ಹೆಣ್ಣು ಜೀವವಾದರೂ ಇದೆಯ? …..

ನಮಗೂ ಒಬ್ಬ ಅವ್ವನೋ, ಅತ್ತೆಯೋ ಇದ್ದರೆ ಎಷ್ಟು ಚಂದವಿತ್ತು ಎಂದು ಯೋಚಿಸಿ ಪರಿತಪಿಸುತ್ತಿದ್ದಳು. ಆ ಬಗೆಯೆ ಚರ್ಚಿಸುತ್ತ ಆತಂಕದ ರಾತ್ರಿಗಳನ್ನು ಕಳೆಯುತ್ತಿದ್ದ ಅವರು ಮುಂಗಾರಿನ ಅಡ್ಡ ಮಳೆಯ ದಿನ ಎದುರಾಗಿದ್ದು ತಿಳಿದು ಚಿಂತಾಕ್ರಾಂತರಾಗಿದ್ದರು. ಅಂದು ರಾತ್ರಿ ಮನೆಯ ಬಾಗಿಲೆಳೆದುಕೊಂಡು ಮಲಗಲು ಸಿದ್ದರಾಗುತ್ತಿದ್ದಂತೆಯೆ ಹೊರಗೆ ಯಾರೋ ಕರೆದಂತೆ ಕೇಳಿಸಿತು. ʻಇದ್ಯಾರಪ್ಪ ಇಷ್ಟು ಹೊತ್ತಿನಲ್ಲಿ ಹುಡುಕಿಕೊಂಡು ಬಂದವರುʼ ಎನ್ನುತ್ತಾ ಕೌತುಕದಿಂದ ಸಣ್ಣ ಕೈ ದೀಪ ಹಿಡಿದು ಹೊರ ಬಂದು ನೋಡುತ್ತಾರೆ. ಕತ್ತಲಲ್ಲಿ ಮುದುಕಿಯೊಬ್ಬಳು ಸಣ್ಣ ಬಟ್ಟೆ ಗಂಟು ತಬ್ಬಿ ಹಿಡಿದು ನಿಂತಿದ್ದಾಳೆ!

ʻಏನಜ್ಜಿ ಈ ಕತ್ಲೆಲಿ ಬಂದಿದಿಯಲ್ಲ, ನೀನ್ ಯಾರು? ನಿನಗೆ ಏನಾಗಬೇಕಾಗಿತ್ತುʼ ಎಂದ. ʻಏನಿಲ್ಲಪ್ಪ ಇಲ್ಲೇ ಎರಡು ಮೈಲಿ ದೂರದಲ್ಲಿ ಕಾಡಾಚೆ ನನ್ನ ಮನೆ ಐತೆ…… ನನ್ನ ಮಕ್ಳು ಯಾರು ಬದುಕಿಲ್ಲ…… ನಾನು ನನ್ನ ಯಜಮಾನ ಅಲ್ಲಿ ಬದುಕು ನಡೆಸಿದ್ವಿ. ಅವನೂ ರೋಗ ಬಂದು ಹೋಗಿ ಬುಟ್ಟ …… ಈಗ ನಾನೊಬ್ಳೇ…… ದಿಕ್ಕಿಲ್ಲದವಳು…… ಆ ಸೋರೋ ಮನೆ ಸೂರೂ ಸರಿ ಮಾಡಿಲ್ಲ…… ಮಳೆಗಾಲ ಕಳೆಯೋವರೆಗು ನಿಮ್ಮನೆಲಿ ಇರಕೆ ಜಾಗ ಮಾಡಿಕೊಡಿ ಈ ಮುದುಕಿಗೆʼ ಎಂದಳು…

 ನಮಿಬ್ಬರಿಗೇ ಬದುಕು ಸಾಗಿಸಲು ಕಷ್ಟವಾಗಿರುವಾಗ ಈ ಮುದುಕಿಯನ್ನು ಸೇರಿಸಿಕೊಂಡು ಸಾಕುವುದು ಹೇಗೆ ಎಂದು ಯೋಚಿಸಿದ ಅವನು, ʻನಾವೇ ದಿಕ್ಕಿಲ್ಲದವರು. ನಮ್ಮಲ್ಲಿರುವ ದವಸ, ಸೌದೆ ನಮಗೇ ಸಾಲದಿಲ್ಲ… ಅಂತದ್ರಲ್ಲಿ ನಿನ್ನನ್ನು ಒಬ್ಳನ್ನು ಸೇರಿಸಿಕೊಂಡು ಏನು ಮಾಡದುʼ ಎಂದ.

ಆ ಮಬ್ಬು ಗತ್ತಲೆಯಲ್ಲಿ ಅವನ ಹೆಂಡತಿಯ ಉಬ್ಬಿದ ಹೊಟ್ಟೆಯನ್ನೇ ಗಮನಿಸುತ್ತಿದ್ದ ಮುದುಕಿ ʻದಿಕ್ಕಿಲ್ಲದವರಿಗೆ ದಿಕ್ಕಿಲ್ಲದವರೇ ನೆರವಾಗಬೇಕು ಕಣಪ್ಪ. ನಿನ್ನ ಹೆಂಡ್ತಿ ಬೇರೆ ತುಂಬಿದ ಬೀಮನ್ಸೆ ಹಂಗೆ ಕಾಣ್ತಾಳೆ. ಅವಳ ನೆರವಿಗೆ ಒಂದ್‌ ಹೆಣ್‌ ಜೀವ ಇದ್ದಂಗೆ ಇರ್ತಿನಿ. ನನಗೆ ರಾತ್ರಿ ಮಲಗಕ್ಕೆ ಅವಕಾಶ ಮಾಡಿಕೊಡಿ ಸಾಕು. ದಿನಾ ಬೆಳಕರಿತ್ಲೆ ನಾನು ನನ್ನ ಮನೆಗೆ ಹೋಗಿ ಅಲ್ಲಿಂದ ಏನಾದ್ರು ಸಣ್ಣಪುಟ್ಟ ಪದಾರ್ಥ ಹಿಡ್ಕ ಬರ್ತೀನಿ… ನಿಮಗೇನು ಹೊರೆ ಆಗದಿಲ್ಲ. ಅಲ್ಲೂ ನನ್ನ ಮನೇಲಿ ಸಣ್ಣ ಪುಟ್ಟ ದವಸ ಸೌದೆ ಎಲ್ಲಾ ಹೊಂದಿಸಿ ಇಟ್ಗಂಡಿದೀನಿ ಎನ್ನುತ್ತಾ ಆ ಮುದುಕಿ ತುಂಬು ಗರ್ಭಿಣಿಯ ಮುಖವನ್ನೇ ನೋಡಿತು.

ಗರ್ಭಿಣಿ ಹೆಂಗಸಿಗೂ ಮನಸ್ಸಿನಲ್ಲಿ ಆಸೆ ಮೂಡಿತು. ಹೆರಿಗೆ ಬಾಣಂತನದಂತಹಾ ಈ ಕಷ್ಟಕಾಲದಲ್ಲಿ ದೇವರೇ ಈ ಮುದುಕಿಯನ್ನು ಕಳಿಸಿಕೊಟ್ಟಿರಬಹುದೇನೋ ಎಂದುಕೊಳ್ಳುತ್ತಾ, ʻಇರ್ಲಿ ಬಿಡಿ ದಿಕ್ಕಿಲ್ಲದವರಿಗೆ ದಿಕ್ಕಿಲ್ಲದವರೇ ಪರಸ್ಪರ ನೆರವುʼ ಎಂದು ಗಂಡನ ಮುಖ ನೋಡಿದಳು.

ಹೀಗೆ ಆಗಂತುಕ ಮುದುಕಿ ಆಮನೆಯಲ್ಲಿ ಪ್ರವೇಶ ಪಡೆದುಕೊಂಡಳು.

ಮುದುಕಿ ಹೇಳಿದಂತೆಯೇ ನಡೆದುಕೊಂಡಳು. ಅವರಿಗೆ ಅವಳೇನೂ ಹೊರೆಯಾಗಲಿಲ್ಲ. ರಾತ್ರಿ ಮೀಯುವ ಮನೆ ಒಲೆಯ ಬಳಿ ಮಲಗಿರುತ್ತಿದ್ದ ಅವಳು ಬೆಳಕು ಹರಿಯುವ ಹೊತ್ತಿಗೆ ತನ್ನ ಪಾಡಿಗೆ ತಾನು ಹೊರಹೋಗಿರುತ್ತಿದ್ದಳು.

ಕತ್ತಲಾಗುವ ವೇಳೆಗೆ ಬಂದು ಅಡುಗೆ ಮಾಡಿ ಇಡುತ್ತಿದ್ದಳು. ಅವಳು ಬಂದ ಮೇಲೆ ಆ ಮನೆಯಲ್ಲಿ ಏನಾದರು ಒಳ್ಳೆಯ ಅಡುಗೆ ಇರುತ್ತಿತ್ತು. ಒಂದು ದಿನ ಮೀನು, ಒಂದು ದಿನ ಏಡಿ, ಒಂದು ದಿನ ಬೇರಣಬೆ ಸಾರು ಹೀಗೆ ಬಾಯಿಗೆ ಹುಳ್ಳಗೆ ಏನಾದರು ವಿಶೇಷವಿರುತ್ತಿತ್ತು.

 ಹೀಗೆಯೇ ದಿನಗಳು ಸುಸೂತ್ರವಾಗಿ ಸಾಗುತ್ತಿದ್ದವು.  ಮುದುಕಿಯ ನೆರವಿನಿಂದ ಹೆರಿಗೆ, ಬಾಣಂತನಗಳು ಆ ಮಳೆಗಾಲದ ಮಧ್ಯಯೂ ಹೇಗೆ ನಡೆದುಹೋದವು ಎಂದು ಯೋಚಿಸಿದಾಗ ದಂಪತಿಗಳಿಗೆ ಖುಷಿಯಾಗುತ್ತಿತ್ತು. ಎರಡು ತಿಂಗಳು ತುಂಬಿದ ಮಗು ಆರೋಗ್ಯಪೂರ್ಣವಾಗಿದ್ದು, ಅದರ ಕಿಲ ಕಿಲ ನಗು ಮನೆಯಲ್ಲಾ ತುಂಬುತ್ತಿತ್ತು.

ಒಂದೆರೆಡು ತಿಂಗಳಿಗಾಗುವ ದವಸ, ಸೌದೆಯಲ್ಲೇ ಮುದುಕಿ ನಾಲ್ಕು ತಿಂಗಳು ಮನೆ ನಡೆಸಿತ್ತು. ಸೌದೆ ಒಟ್ಟಿಲು  ಖಾಲಿಯಾಗಿತ್ತು.

ಇಷ್ಟು ಕಾಲ ಈ ಮುದುಕಿ ಹೇಗೆ ನಿಭಾಯಿಸಿತು ಎಂಬುವುದೇ ಅವರಿಗೆ ಕೌತುಕವಾಗಿತ್ತು.

ದವಸ ಸೌದೆ ಸಾಲದೆ ಬಂದರೆ ಮುದುಕಿ ಅಷ್ಟು ದೂರದ ತನ್ನ ಮನೆಯಿಂದಲೇ ತರುತ್ತಿದೆಯೇನೋ ಎಂದುಕೊಂಡರು.            

ʻನೋಡೆ, ನಿನಗೆ ಇರೋದನ್ನೇ ಬಳಸಿ  ಮನೆ ನಡೆಸೋಕೆ ಬರೋದಿಲ್ಲ. ನೋಡು ಆ ಮುದುಕಿ ಎರಡು ತಿಂಗಳಿಗೆ ಆಗುವ ಪಧಾರ್ಥದಲ್ಲಿ ನಾಲ್ಕು ತಿಗಳು ನಡೆಸೈತೆ. ಒಟ್ಲಲ್ಲಿ ಸೌದೆ ಮುಗ್ದೈತೆ. ಪಾಪ, ಆ ಮುದುಕಿ ಏನೂ ಕಷ್ಟ ಹೇಳದಿಲ್ಲ. ಕಾಡು ದಾರಿ, ಅಷ್ಟು ದೂರದಿಂದ ತನ್ನ ಮನೆಯಿಂದ್ಲೇ ಸೌದೆ ತರುತ್ತಾ ಏನೋ …. ಪಾಪʼ ಎಂದು ಅವನು ಹೆಂಡತಿಯೆದುರಿಗೆ ಪೇಚಾಡಿದ.

ʻಬಾಣಂತಿ ಇರೊ ಮನೆ, ದವಸ ಧಾನ್ಯ, ಸೌದೆ ಇಲ್ಲದೆ ಇದ್ರೆ ಕೂಲಿ ಮಠದ ಮಕ್ಳ ಕರ್ಕಂಡು ಬಂದು ಹೊರಿಸಿಕೊಂಡು ಹೋಗು ಎಂದ್ದಿದ್ದಾರೆ ಗೌಡ್ರು. ಮಕ್ಳಿಗೆ ಹೇಳಿದೀನಿ.ಬೆಳಗ್ಗೆ ಕೋಳಿ ಕೂಗೋ  ಹೊತ್ತಿಗೇ ಹೋಗಿ ಒಂದು ಎರಡು ದಾರಿ ತರ್ತೀವಿ. ಸ್ವಲ್ಪ ಬೇಗ ಏಳ್ಸುʼ ಅಂತಾ ಅವನು ಹೆಂಡತಿಗೆ ಹೇಳಿ ಮಲಗಿದ್ದ.

ಅದೇ ಯೋಚನೆಯಲ್ಲಿ ಮಲಗಿದ್ದ ಅವನಿಗೆ ಬೇಗ ಎಚ್ಚರವಾಗಿತ್ತು. ಹೆಂಡತಿ ಹಾಗೂ ಮಗು ಇನ್ನೂ ಸುಖನಿದ್ದೆಯಲ್ಲಿದ್ದರು.

ರಾತ್ರಿ ಹಿಡಿದ ಮಳೆ  ಬಿಟ್ಟಿರಲಿಲ್ಲ. ʻಜರ್ರೋʼ ಎಂದು ಸುರಿಯುತ್ತಲೇ ಇತ್ತು. ಇನ್ನೂ ಕೋಳಿ ಕೂಗಿಲ್ಲ. ಬಹಳ ಬೇಗ ಎದ್ದುಬಿಟ್ಟಿದ್ದೇನೆ ಎನಿಸಿತು ಅವನಿಗೆ.

ಹೊರಬಂದು ಮೂತ್ರ ವಿಸರ್ಜಿಸಿ  ಸೌದೆ ಹೊರೆ ಕಟ್ಟಲು ಹೊಂದಿಸಿಟ್ಟಿದ್ದ  ಹಂಬು ಹಾಗೂ ಮುಂಡಗತ್ತಿಯನ್ನು  ತೆಗೆದುಕೊಂಡು ಮೀಯುವಮನೆಯ ಬಳಿ ಇಡಲು ಹೋದ..ಒಳಗೆ ಬೆಳಕು  ಕಾಣಿಸಿತು. ಮೀಯುವ ಮನೆಯ ಒಲೆ ಉರಿಯುತ್ತಿರುವಂತೆ ತೋರಿತು.

ʻಅರೆ ಇಷ್ಟು ಬೇಗ ಹೇಗೆ ಒಲೆ ಉರಯುತ್ತಿದೆ. ಒಟ್ಟಲಲ್ಲಿ ಸೌದೆ ಬೇರೆ ಪೂರ್ತಿ ಖಾಲಿಯಾಗಿತ್ತಲ್ಲ. ಇಷ್ಟು ಬೇಗ ಮುದುಕಿ ಹೇಗೆ ಸೌಧೆ ಹೊಂದಿಸಿತು.ʼಎಂದುಕೊಳ್ಳುತ್ತಾ ಮೀಯುವ ಮನೆಯ ಬಾಗಿಲನ್ನು ಮೆಲ್ಲಗೆ ಸರಿಸಿ ಇಣುಕಿದ.

ಅಲ್ಲಿಯ ದೃಶ್ಯ ಅವನನ್ನು ದಿಗ್ಭ್ರಾಂತನನ್ನಾಗಿಸಿತು.

ಹಂಡೆಯ ನೀರು ಕಾದು ಹಬೆಯಾಡುತ್ತಿದೆ. ಒಲೆಯಲ್ಲಿ ಬೆಂಕಿ ಧಗಧಗನೆ ಉರಿಯುತ್ತಿದೆ. ಒಲೆಗೆ ಅಭಿಮುಖವಾಗಿ ಮುದುಕಿ ತಲ್ಲೀನವಾಗಿ ಕುಳಿತಿದೆ. ಅದರ ಬೆನ್ನು ಮಾತ್ರ ಅವನಿಗೆ ಕಾಣುತ್ತಿದೆ. ಒಲೆಯ ಕಡೆಗೆ ನೀಳವಾಗಿ ಚಾಚಿಕೊಂಡ  ಕಾಲು ಒಲೆಯೊಳಗೆ ಸೌದೆಯಂತೆ ಧಗಧಗನೆ ಉರಯುತ್ತಿವೆ.

ಆ ದೃಶ್ಯವನ್ನು ಕಂಡ ಅವನು ಭಯದಿಂದ ಕಂಪಿಸತೊಡಗಿದ. ಕೈಯಲ್ಲಿದ್ದ ಕತ್ತಿ ಜಾರಿ ಠಣ್ಣನೆ ಕೆಳಗೆ ಬಿತ್ತು. ಮುದುಕಿ ಕತ್ತು ಹೊರಳಿಸಿ ಅವನೆಡೆಗೆ ನೋಡಿತು. ಅದರ ತಲೆ ಕೆದರಿತ್ತು. ಕೋರೆ ದಾಡಿಗಳಿಂದ ಅದರ ಮುಖ ವಿಕಾರವಾಗಿತ್ತು.

ಅವನು ಜೋರಾಗಿ ಕಿರಿಚುತ್ತಾ ನೆಲಕ್ಕೆ ಕುಸಿದು ಬಿದ್ದ. ಗಾಬರಿಯಿಂದ ಎದ್ದು ಓಡಿ ಬಂದ ಅವನ ಹೆಂಡತಿ ಅವನ ಮುಖಕ್ಕೆ ನೀರು ಚಿಮುಕಿಸಿ ಎಚ್ಚರಗೂಳಿಸಿದಳು. ಅವನು ಸುಧಾರಿಸಿಕೊಂಡು ಕಂಡದ್ದೆಲ್ಲವನ್ನು ಹೇಳಿದ.

ಅಂತೂ ಆ ಮಳೆಗಾಲದಲ್ಲಿ ಬಂದು ಹೆರಿಗೆ ಬಾಣಂತನ ನಡೆಸಿಕೊಟ್ಟದ್ದಕ್ಕೆ ಆ ಮುದುಕಿಯ ಉಪಕಾರವನ್ನು ಅವರು ಕೃತಜ್ಙತೆಯಿಂದ ನೆನೆಸಿಕೊಂಡರು.

ದಿಕ್ಕಿಲ್ಲದವನಿಗೆ ದೆವ್ವವೇ ಸಂಗಾತಿ ಎಂದು ಅದಕ್ಕೇ ಹೇಳುವುದು ಎಂದು ಅವರಿಬ್ಬರೂ ಮಾತಾಡಿಕೊಡರು.

ಮತ್ತೆ ಮುಂದೆಂದೂ ಆ ಮುದುಕಿ ಅಲ್ಲೆಲ್ಲಿಯೂ ಕಾಣಿಸಿಕೊಳ್ಳಲಿಲ್ಲ.

‍ಲೇಖಕರು Admin

20 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading