ಹಾಡ್ಲಹಳ್ಳಿ ನಾಗರಾಜ್ ಅಂಕಣ – ಜಗ್ಗಿಸಿ ಹೊಡೆಯೋ ಜಗತ್ತ್ ಗುರುವೇ…!

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗೂ ನಾನು, ಕುಂಭದ್ರೋಣ (ಕತಾಸಂಕಲನಗಳು), ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹ ಪುರಾಣ, ಕಡವೆಬೇಟೆ, ನಿಲುವಂಗಿಯ ಕನಸು ಕಾದಂಬರಿಗಳು ಪ್ರಕಟವಾಗಿವೆ.

‘ಕಾಡುಹಕ್ಕಿಯ ಹಾದಿನೋಟ’ ಎಂಬ ಆತ್ಮಕಥನ ಸ್ವರೂಪದ ಪ್ರಬಂಧ ಸಂಕಲನವಾಗಿದೆ. ಸುಮಾರು ನಾಲ್ಕು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು, ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಿದ್ದಗಂಗಾ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಮುಖೇನ ವಿದ್ಯಾದಾನಕ್ಕೆ ಕಾರಣವಾಗಿ ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದೆ.

ವಿದ್ಯೆಯಿಂದ ವಂಚಿತರಾಗಿ ಎಲ್ಲೋ ಮೂಲೆ ಗುಂಪಾಗಬೇಕಾಗಿದ್ದ ಬಡ ಗ್ರಾಮೀಣ ಮಕ್ಕಳು ಮಠದ ಮಡಿಲಿಗೆ ಬಿದ್ದ ಕಾರಣ ಸಮಾಜದ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಿದೆ. ಅಲ್ಲಿ ವಿದ್ಯೆ ಕಲಿತು ಹೋದವರು ಸಾಹಿತಿಗಳಾಗಿದ್ದಾರೆ, ಶಿಕ್ಷಣ ತಜ್ಙರಾಗಿದ್ದಾರೆ, ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳಾಗಿದ್ದಾರೆ, ನಾಟಕ, ಸಿನಿಮಾರಂಗಗಳಲ್ಲಿ ಮಿಂಚಿದ್ದಾರೆ.

ಹೀಗೆ ಮಠದ ಅನ್ನ ದಾಸೋಹ, ಅಕ್ಷರ ದಾಸೋಹಗಳು ಲಕ್ಷಾಂತರ ಬಡಮಕ್ಕಳ ಬದುಕಿನಲ್ಲಿ ‘ದಾಟು ಹಲಗೆ’ಯಾಗಿ ಪರಿಣಮಿಸಿದೆ. ಈ ಶ್ರೀ ಮಠದಲ್ಲಿ ವಿದ್ಯಾರ್ಜನೆ ಮಾಡಿ ಬದುಕು ರೂಪಿಸಿಕೊಂಡ ಹಾಡ್ಲಹಳ್ಳಿ ನಾಗರಾಜ್ ಕತೆಗಾರರಾಗಿಯೂ, ಕಾದಂಬರಿಕಾರರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಸಿದ್ದಗಂಗೆಯಲ್ಲಿನ ಅವರ ಅನುಭವ ಕಥನಗಳನ್ನು ಇಲ್ಲಿ ನಿರೂಪಿಸಿದ್ದಾರೆ.

3

ಬಾಲಕನಾಗಿದ್ದಾಗ ಊರಲ್ಲಿ ಕಂಡದ್ದು ಒಂದೇ ಜಾತಿ. ಪ್ರಪಂಚದಲ್ಲಿ ಇರುವುದೇ ಒಂದು ಜಾತಿ ಎಂದು ಆಗ ಅಂದುಕೊಂಡಿದ್ದೆ. ಮಾಧ್ಯಮಿಕ ಶಾಲೆಗೆ ಹೆತ್ತೂರಿಗೆ ಬಂದು ಸೇರಿದ ನಂತರ, ಗೌಡರ ಜೊತೆಗೆ ಲಿಂಗಾಯಿತರು, ಹರಿಜನರು, ದೀವರ ಮಕ್ಕಳು ಎಂಬ ಜಾತಿಯವರೂ ಸಹ ಇದ್ದಾರೆಂಬುದು ಅರಿವಿಗೆ ಬಂದಿತ್ತು.

ಇಲ್ಲಿ, ಸಿದ್ದಗಂಗೆಯಲ್ಲಿ ನೋಡಿದರೆ ‘ಮಿನಿ ಕರ್ನಾಟಕ’ವೇ ನೆರೆದಿದೆ. ದಕ್ಷಿಣ ಕನ್ನಡದಿಂದ ಹಿಡಿದು ಗೋವಾದವರೆಗೆ, ಬೆಳಗಾಂನಿಂದ ಶುರುವಾಗಿ ಪಾವಗಡದವರೆಗೆ. ವಿದ್ಯೆಯನ್ನರಿಸಿ ‘ಬುದ್ಧಿ’ಗಳ ಪಾದದ ಬಳಿ ಬಂದು ತಲುಪಿದ್ದ ಸಾವಿರಾರು ವಿದ್ಯಾರ್ಥಿಗಳಲ್ಲಿ ಎಷ್ಟೊಂದು ಭಿನ್ನತೆ. ಭಾಷೆ ಸ್ವಭಾವಗಳಲ್ಲಿ ಎಂತಹ ವೈವಿಧ್ಯತೆ. ಅವರವರು ಪ್ರತಿನಿಧಿಸುವ ಪ್ರದೇಶಗಳಿಗೆ ತಕ್ಕಂತೆ ಚಿತ್ರ ವಿಚಿತ್ರ ಹೆಸರುಗಳು. ಬ್ರಾಹ್ಮಣ, ಜೈನರಾದ್ಯಂತ ಹರಿಜನ, ಬೇಡರವರೆಗೆ ಹುಡುಗರು ಪ್ರತಿನಿಧಿಸುವ ನೂರೆಂಟು ಜಾತಿಗಳು!

ಬಡತನದ ಕಾರಣದಿಂದಾಗಿ ತಮ್ಮಲ್ಲಿ ನೆಲೆ ಕಾಣಲಾರದ ಹಳ್ಳಿಮಕ್ಕಳು ಮಠದ ಬುದ್ಧಿಗಳ ಅನ್ನದಾಸೋಹ ಹಾಗೂ ವಿದ್ಯಾದಾಸೋಹದ ಫಲ ಉಣ್ಣುತ್ತಾ ತಮ್ಮ ಭವಿಷ್ಯದ ಕನಸು ಕಾಣುತ್ತಾ ಮಠದ ಆವರಣದ ತುಂಬಾ ಹಾರಾಡುವ ಹಕ್ಕಿಗಳ ಹಿಂಡಿನಂತೆ ಕಲರವಗೈಯುತ್ತಿದ್ದುದು ಅಚ್ಚರಿ ಮೂಡಿಸುತ್ತಿತ್ತು. ಹಿಂದೂ ಧರ್ಮಕ್ಕೆ ಸೇರಿದ ಸಕಲೆಂಟು ಜಾತಿಗಳ ಹುಡುಗರೇ ಅಲ್ಲದೆ ಮುಸ್ಲಿಂ, ಕ್ರೈಸ್ತ, ಸಿಖ್‌ ಧರ್ಮದವರೂ ವಿದ್ಯೆಯನ್ನರಸಿ ಬಂದು ಎಲ್ಲರೊಡನೆ ಬೆರೆತಿರುತ್ತಿದ್ದರು.

ಜಾತಿ ಧರ್ಮ ಬೇಧವಿಲ್ಲದೆ ಎಲ್ಲಾ ವಿದ್ಯಾರ್ಥಿಗಳು ಬೆಟ್ಟದ ಬುಡದಲ್ಲಿರುವ ಸಿದ್ಧಲಿಂಗೇಶ್ವರ ದೇವರಿಗೆ ಕೈಮುಗಿದು ತೀರ್ಥ ಪ್ರಸಾದ ಸ್ವೀಕರಿಸುವ ಅವಕಾಶವಿತ್ತು. ಬೆಟ್ಟದ ಬುಡದ ಬಂಡೆಯ ಗುಹೆಯೇ ಸ್ವಾಭಾವಿಕವಾಗಿ ದೇವಸ್ಥಾನವಾಗಿದ್ದ ಅಲ್ಲಿ, ಪೂಜೆಗೆ ಪುರೋಹಿತರಿರಲಿಲ್ಲ. ಸರದಿಯಂತೆ ನೇಮಿಸಿದ ವಿದ್ಯಾರ್ಥಿಗಳೇ ಪೂಜೆ ಮಾಡಿ ತೀರ್ಥ ಪ್ರಸಾದ ಕೊಡುವ ಅಲ್ಲಿನ ವ್ಯವಸ್ಥೆ ವಿಶೇಷವಾಗಿತ್ತು.

ಹೀಗೆ ನಾಲ್ಕಾರು ಸಾವಿರ ಹುಡುಗರು ಬಂದು ಮಠಕ್ಕೆ ಸೇರಲು ಬಡತನವೊಂದೇ ಅರ್ಹತೆ. ಪ್ರತಿಯೊಬ್ಬ ಹುಡುಗನೂ ಮಠಕ್ಕೆ ಸೇರುವ ಮೊದಲು ‘ಬುದ್ಧಿ’ಯವರ ಸಂದರ್ಶನದಲ್ಲಿ ಪಾಸಾಗಿ ಬಂದಿರುತ್ತಿದ್ದ. ಸಂದರ್ಶನವೆಂದರೆ ಹುಡುಗನಿಗೆ ಇಂಗ್ಲಿಷ್‌ ಬರುತ್ತದಾ?ಚುರುಕಾಗಿದ್ದಾನ? ಓದಿನಲ್ಲಿ ಹೇಗೆ? ಎಂದು ಪರೀಕ್ಷಿಸುತ್ತಿರಲಿಲ್ಲ. ಅವನ ಪೋಷಕರಿಗೆ ಹುಡುಗನಿಗೆ ವಿದ್ಯೆ ಕೊಡಿಸಲಾರಷ್ಟು ಬಡತನವಿದೆಯೇ ಎಂದು ಪೋಷಕರ ಸಂದರ್ಶನದಲ್ಲಿ ಸ್ವಾಮಿಗಳು ತಿಳಿದುಕೊಳ್ಳುತ್ತಿದ್ದರು. ಅಂತಹವರ ಮಕ್ಕಳನ್ನು ಸೇರಿಸಿಕೊಂಡು ತಮ್ಮ ಕಣ್ಗಾವಲಲ್ಲಿ ಒಳ್ಳೆ ವಿದ್ಯೆ ದೊರಕಿಸಿಕೊಟ್ಟು ಉತ್ತಮ ನಾಗರಿಕರಾಗಿ ಬೆಳೆಸುತ್ತಿದ್ದರು. ಮಠದ ಶಾಲೆಗಳಲ್ಲಿ ವಿದ್ಯೆ ಪಡೆದವರು  ಮುಂದೆ ಮಂತ್ರಿಗಳಾಗಿ ಕೆಎಎಸ್‌, ಐಎಎಸ್‌ ಅಧಿಕಾರಿಗಳಾಗಿ, ಪ್ರೊಫೆಸರ್‌ಗಳಾಗಿ, ವಿಶ್ವವಿದ್ಯಾಲಯದ ವೈಸ್‌ ಚಾನ್ಸಲರ್‌ ಆಗಿ ದೊಡ್ಡ ದೊಡ್ಡ ಉದ್ಯಮಿಗಳಾಗಿ ಪ್ರಸಿದ್ಧಿ ಪಡೆದಿರುವ ಬಗ್ಗೆ ಮಠದ ಹಿರಿಯ ವಿದ್ಯಾರ್ಥಿಗಳು ಮಾತಾಡಿಕೊಳ್ಳುತ್ತಿದ್ದರು.

ಹಣೆಗೆ ವಿಭೂತಿ ಬಳಿದು, ಖಾವಿ ಟವೆಲ್‌ ಹೊದ್ದು ಕಂಕುಳಲ್ಲಿ ಊಟದ ತಟ್ಟೆ ಇರುಕಿಕೊಂಡು ಬುದ್ಧಿಯವರ ಎದುರಿಗೆ ಭಕ್ತಿಯಿಂದ ಸಂಜೆಯ ಪ್ರಾರ್ಥನೆಗೆ ನಿಲ್ಲುತ್ತಿದ್ದ ವಿದ್ಯಾರ್ಥಿ ಸ್ತೋಮವನ್ನು ಕಂಡಾಗ ಇವರಲ್ಲಿ ಯಾರ್ಯಾರು ಭವಿಷ್ಯದ ಬದುಕಿನಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದು ಮಿನುಗುತ್ತಾರೋ ಎಂದು ಯೋಚಿಸಿ ಅಚ್ಚರಿ ಪಡುತ್ತಿದ್ದೆ.

ವಿದ್ಯಾರ್ಥಿಗಳ ವಯೋಮಾನಕ್ಕನುಗುಣವಾಗಿ ವಾಸದ ಕಟ್ಟಡಗಳ ವ್ಯವಸ್ಥೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳೇ ಒಂದು ಕಡೆ. ಮಾಧ್ಯಮಿಕ ವಿದ್ಯಾರ್ಥಿಗಳೇ ಇನ್ನೊಂದು ಕಡೆ. ಹೈಸ್ಕೂಲ್‌ನವರು ಮತ್ತೊಂದು ಕಡೆ. ಕಾಲೇಜಿಗೆ ಹೋಗುವವರು ಮಗದೊಂದು ಕಡೆ.

ಹೈಯರ್‌ ಸೆಕೆಂಡರಿಯ ನಮಗೆ ಕಾಲೇಜು ವಿದ್ಯಾರ್ಥಿಗಳಿಗೆ ನಿಗಧಿಯಾಗಿದ್ದ ‘ಜಯನಿಲಯ’ ಎಂಬ ಕಟ್ಟಡದಲ್ಲಿ ವಾಸ್ತವ್ಯ. ಇಪ್ಪತ್ತಡಿ ಇಪ್ಪತ್ತಡಿಯ ಕೊಠಡಿಯಲ್ಲಿ ಹದಿನೈದು ಜನ ಉಳಿಯುವ ವ್ಯವಸ್ಥೆ. ಒಂದು ಚಾಪೆ ಹರಡಿ ತಲೆದೆಸೆಗೆ ಒಂದು ಟ್ರಂಕ್‌ ಇಟ್ಟುಕೊಳ್ಳುವಷ್ಟು ಜಾಗ ಮಾತ್ರ ಒಬ್ಬನಿಗೆ.

ಕುಪೋಷಣೆಯಿಂದಲೋ ಏನೋ ನನ್ನ ದೇಹ ಬೆಳವಣಿಗೆಯಿಲ್ಲದೆ ಪೀಚು ಪೀಚಾಗಿತ್ತು. ಹೈಸ್ಕೂಲ್‌ ಮುಗಿಸಿ ಕಾಲೇಜು ಹಂತಕ್ಕೆ ಬಂದಿದ್ದರೂ ಯುವಕನ ಲಕ್ಷಣ ಕಾಣುತ್ತಿರಲಿಲ್ಲ. ಜತೆಗೆ ಮಲೆನಾಡಿನಿಂದ ಬಂದಿದ್ದ ನನಗೆ ಸ್ವಭಾವತಃ ಸಂಕೋಚ. ಹಾಗಾಗಿ ನಾಡಿನ ಬೇರೆ ಬೇರೆ ಮೂಲೆಯಿಂದ ಬಂದಿದ್ದ ನಮ್ಮ ರೂಮಿನ ಹುಡುಗರು ಹೆಚ್ಚಾಗಿ ನನ್ನೊಂದಿಗೆ ಬೆರೆಯುತ್ತಿರಲಿಲ್ಲ.

ತರಗತಿಯಲ್ಲೂ ಅಷ್ಟೇ. ಪಾಠ ಮಾಡುವ ಉಪಾದ್ಯಾಯರ ಮುಖವನ್ನೇ, ಕಪ್ಪು ಹಗಲೆಯ ಮೇಲೆ ಹರಿದಾಡುವ ಅವರ ಕೈಯನ್ನೇ ,ತದೇಕ ಚಿತ್ತದಿಂದ ನೋಡುತ್ತಾ ಕುಳಿತು ಬಿಡುತ್ತಿದ್ದೆ. ಇಂಗ್ಲಿಷ್‌ನ ವೆಂಕಟಸುಬ್ಬಯ್ಯ ಹಾಗೂ ಜೀವಶಾಸ್ತ್ರದ ಮಲ್ಲಿಕಾರ್ಜುನಯ್ಯ ಅವರ ಪಾಠ ನನಗೆ ಬಹಳವಾಗಿ ಇಷ್ಟವಾಗುತ್ತಿತ್ತು.

ಎಲ್ಲಕ್ಕೂ ಮಿಗಿಲಾಗಿ ಸಂಜೆಯ ಪ್ರಾರ್ಥನೆಗೂ ಮುಂಚೆ ಬುದ್ಧಿಯವರು ಹನ್ನೊಂದನೇ ತರಗತಿಯವರಿಗೆ ವಿಶೇಷವಾಗಿ ಮಾಡುತ್ತಿದ್ದ ಇಂಗ್ಲಿಷ್‌ ಪಾಠ ವಿದ್ಯಾರ್ಥಿಗಳ ಮನದುಂಬುತ್ತಿತ್ತು. ಎಲ್ಲಾ ವಿಷಯದ ಉಪದ್ಯಾಯರೂ ಹೀಗೇ ಪಾಠ ಮಾಡಿದರೆ ಹೇಗಿರುತ್ತದೆ ಎಂಬ ಆಸೆ ಉಂಟಾಗುತ್ತಿತ್ತು.

ಪಾಠದ ವೇಳೆ ನಮ್ಮ ತರಗತಿಯ ಕೆಲ ಹುಡುಗರು ಉಪಾದ್ಯಾಯರ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುತ್ತಿದ್ದರೆ ನಾನು ಉತ್ತರ ಗೊತ್ತಿದ್ದರೂ ಸಂಕೋಚದಿಂದ ಬಾಯಿ ಬಿಗಿದು ಕುಳಿತಿರುತ್ತಿದ್ದೆ. ಹಾಗಾಗಿ ನಾನು ಕ್ಲಾಸಿನ ವಿದ್ಯಾರ್ಥಿಗಳಿಗೆ ಒಂದು ಬಗೆಯ ಅಪರಿಚಿತನಂತಾಗಿದ್ದೆ.

ಆದರೆ ಅಕ್ಟೋಬರ್‌ನಲ್ಲಿ ಅರ್ಧವಾರ್ಷಿಕ ಪರೀಕ್ಷೆಯ ಅಂಕಗಳು ಪ್ರಕಟವಾದಾಗ ಉಪಾದ್ಯಾಯರೂ ಸೇರಿದಂತೆ ಎಲ್ಲರೂ ನನ್ನಡೆಗೆ ಅಚ್ಚರಿಯಿಂದ ನೋಡುವಂತಾಗಿತ್ತು. ಗಣಿತವೊಂದನ್ನುಳಿದು ಎಲ್ಲಾ ವಿಷಯಗಳಲ್ಲೂ ಉತ್ತಮ ಅಂಕ ಪಡೆದಿದ್ದೆ. ಅದರಲ್ಲೂ ಇಂಗ್ಲಿಷಿನಲ್ಲಿ ಎಲ್ಲರನ್ನೂ ಹಿಂದೆ ಹಾಕಿದ್ದೆ.

ಈ ಮಧ್ಯೆ ಬೇರೆ ಬೇರೆ ತರಗತಿಗಳಲ್ಲಿದ್ದ ಕೆಲ ಹುಡುಗರೂ ನನಗೆ ಪರಿಚಯವಾಗತೊಡಗಿದ್ದರು. ಅದರಲ್ಲೂ “Birds of the same feather flock together” ಎಂಬ ಇಂಗ್ಲಿಷ್‌ ನಾಣ್ನುಡಿಯಂತೆ ನಮ್ಮ ಹಾಸನ ಜಿಲ್ಲೆಯ ಹಾಗೂ ಇತರ ಮಲೆನಾಡಿನ ಜಿಲ್ಲೆಯ ಹಲವು ಹುಡುಗರು ನನ್ನನ್ನು ಅವರ ಆಪ್ತ ವಲಯಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು.

ಅವರಲ್ಲಿ ಸಬ್ಬನಹಳ್ಳಿ ಬೋರೇಗೌಡ, ಚಿಕ್ಕುಂದೂರು ಜನಾರ್ಧನ, ಗೌತವಳ್ಳಿ ವೆಂಕಟರಮಣ, ಎನ್‌.ಕೆ.ರಾಮಪ್ಪ, ಶಿವರುದ್ರ ಶೆಟ್ಟಿ, ತರುವೆ ಪುಟ್ಟೇಗೌಡ, ಕುಮಾರಸ್ವಾಮಿ ಮುಂತಾದ ಕೆಲವರ ಹೆಸರುಗಳು ಈಗಲೂ ಮನಃ ಪಟಲದಲ್ಲಿ ಆಗಾಗ ಮಾಡಿ ಮರೆಯಾಗುತ್ತವೆ.

ಮಠಕ್ಕೆ ಸೇರಿದ ಆರಂಭದಲ್ಲಿ ಹೋಮ್‌ ಸಿಕ್‌ನೆಸ್‌ನಿಂದ ಬಳಲುತ್ತಿದ್ದ ನಾನು ಅಲ್ಲಿನ ವಾತಾವರಣಕ್ಕೆ ಆಹಾರ ಪದ್ದತಿಗೆ ಹೊಂದಿಕೊಳ್ಳಲಾಗದೆ ಎಲ್ಲಿಗಾದರೂ ಓಡಿ ಹೋಗೋಣವೆಂದು ತವಕಿಸುತ್ತಿದ್ದಾಗ ಮೇಲೆ ಹೇಳಿದ ಹುಡುಗರು ನನ್ನ ನೆರವಿಗೆ ಬಂದು ನಾನು ‘ಮಠದಲ್ಲಿ ನೆಲೆ ನಿಂತು ವಿದ್ಯಾಭ್ಯಾಸ ಮುಂದುವರಿಸಲು ನೆರವಾಗಿದ್ದರು’.

ಅವರ ಪೈಕಿ ಮಲೆನಾಡ ಹುಡುಗ ಶೆಟ್ಟಿಗೆ ಬಲಿಷ್ಠ ಮೈಕಟ್ಟಿತ್ತು. ವಯಸ್ಸಿನಿಂದಲೂ ಬಲಿತವನಂತೆ ತೋರುತ್ತಿದ್ದ ಅವನು ಬಹಳ ಹಾಸ್ಯ ಪ್ರವೃತ್ತಿಯವನು. ಎಸೆಸೆಲ್ಸಿ ಪಾಸಾದ ನಂತರ ಮನೆಯ ಹಣಕಾಸು ತೊಂದರೆಯಿಂದ ಮುಂದೆ ಓದಲು ಸಾದ್ಯವಾಗದೆ ಕಾಫಿ ತೋಟದ ‘ರೈಟರ್’ ಆಗಿ ಒಂದು ವರ್ಷ ದುಡಿದಿದ್ದ ಅನುಭವವಿತ್ತು. ಚಟುವಟಿಕೆಯಾಗಿದ್ದ ಹುಡುಗನ ಭವಿಷ್ಯ ಹಾಳಾಗಬಾರದೆಂದು ಯಾರೋ ಮಠದ ದಾನಿಗಳು ಅವನನ್ನು ಕರೆತಂದು ಬುದ್ಧಿಗಳ ಪಾದದ ಮೇಲೆ ಕೆಡವಿದ್ದರು.

ಕಾಫಿ ತೋಟದ ಆಳುಗಳೊಂದಿಗೆ ಒಡನಾಡಿದ್ದ ಅವನು ಅಲ್ಲಿನ ಯುವತಿಯರೊಂದಿಗೆ ರತಿ ಅನುಭವ ಪಡೆದುಕೊಂಡಿದ್ದ ಎಂದು ಗೆಳೆಯರು ಮಾತಾಡುತ್ತಿದ್ದರು. ಅವನ ಮಾತು ಹಾಗೂ ಹಾವಭಾವದಲ್ಲಿ ಅದು ಎದ್ದು ಕಾಣುತ್ತಿತ್ತು.

ನಾನು ಮೊದಲ ದಿನ, ಸಾವಿರಾರು ವಿದ್ಯಾರ್ಥಿಗಳೆದುರಿಗೆ ಮುದ್ದೆ ಕೈಯಲ್ಲಿ ಹೊಡೆತ ತಿಂದಿದ್ದರಿಂದ ಮುದ್ದೆ ಕಂಡರೇ ಭಯ ಬೀಳುವಂತಾಗುತ್ತಿತ್ತು. ಪ್ರತಿ ವಿದ್ಯಾರ್ಥಿಗೂ ಎರಡು ಮುದ್ದೆ ಕಾಳು ಸಾರು ನಂತರದಲ್ಲಿ ಒಂದು ಹಿಡಿ ಅನ್ನ ಬಡಿಸುತ್ತಿದ್ದರು.

ನಾನು ಮುದ್ದೆಯನ್ನು ನಿರಾಕರಿಸುತ್ತಿದ್ದುದರಿಂದ ಒಂದು ಹಿಡಿ ಅನ್ನದಲ್ಲೇ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತಿತ್ತು. 

ಇದನ್ನು ಕಂಡ ಶೆಟ್ಟಿ ‘ ಏಯ್‌ ಕುಳ್ಳಾ ಎಂತದ್ಲಾ ನಿಂದು… ಹಿಂಗಾಗ ಹೊತ್ತಿಗೇ ಒಳ್ಳೆ ನರಪೇತ್ಲ ಆಗಿದಿಯಾ. ನಿನ್ನ ಯಾವನು ಕಾಲೇಜು ಹುಡ್ಗ ಅಂತಾರಾ, ಥೂ ನಿನ್ನ ಹಿಂಗಾದ್ರೆ ಯಾವ ಹುಡ್ಗಿ ನಿನ್‌ ಮುಖ ನೋಡ್ತಳೋ…. ಮಠದಲ್ಲಿ ಹೊಟ್ಟೆ ತುಂಬಾ ಹಾಕ್ತಾರಲ್ಲೊ, ಈಗ್ಲಾದ್ರೂ ತಿಂದು ಚೆನ್ನಾಗಿ ಮೈ ಬೆಳಸಿಕೊಳ್ಳದ್‌ ಕಲಿ ಮಾರಾಯ.

 ಬದ್ಕಲಿ ಚೆನ್ನಾಗಿ ತಿಂದು ಚೆನ್ನಾಗಿ ಹೇಲದ್‌ ಕಲಿಬೇಕು. ನೀನ್‌ ಇಷ್ಟೇ ಇಷ್ಟು ಅನ್ನ ತಿಂದ್ಕಡು ಬೆಳಗೆ ಎದ್ದು ಮುಂದ್ಗಡೆ ಚೊಂಬ್‌ ಇಟ್ಗಂಡ್‌ ಮುಕ್ಕರಿತಾ ಕೂತ್ಗಳ್ತಿಯಾ ಅದ್ಹೆಂಗ್‌ ಆಗುತ್ತೆ’ ಎಂದು ಬಡಿಸುವವರು ಬರುವವರೆಗೂ ಸಣ್ಣ ಭಾಷಣವನ್ನೇ ಮಾಡಿ ನನ್ನ ತಟ್ಟೆಗೆ ಮುದ್ದೆ ಹಾಕಿಸಿದ್ದ. ನಾನು ಮುದ್ದೆಯನ್ನು ಕೋಳಿಯಂತೆ ಕುಕ್ಕಿ ತೆಗೆದು ಬಾಯಿಗೆ ಹಾಕಿಕೊಂಡು ಆಗಿದಿದ್ದೆ. ಅದು ಹಲ್ಲು ನಾಲಿಗೆಗೆಲ್ಲಾ ಗೋಂದಿನಂತೆ ಅಂಟಿಕೊಂಡಿತ್ತು. 

ಮುದ್ದೆಯನ್ನು ಹೇಗೆ ಮುರಿಯಬೇಕು. ಮುರಿದ ದುಂಡನೆಯ ತುಂಡನ್ನು ಸಾರಿನಲ್ಲಿ ಮುಳುಗಿಸಿ ಹೇಗೆ ಉರುಳಿಸಿಬೇಕು. ನಂತರ ಅದನ್ನು ನೇರವಾಗಿ ಗಂಟಲ ಬಲಿ ಒಯ್ದು ಹೇಗೆ ನುಂಗಬೇಕು ಎಂದು ತರಬೇತಿ ಕೊಟ್ಟ. ಆ ಮುದ್ದೆಯ ಗುಕ್ಕು ಗಂಟಲಿನ ಮುಖಾಂತರ ಗುಳುಕ್ಕನೆ ಜಠರದ ಕಡೆಗೆ ಇಳಿದು ಹೋಯಿತು.

ಮಾರನೇ ದಿನವೂ ಅವನು ನನ್ನ ಬದಿಗೇ ಕುಳಿತಿದ್ದ. ಮುದ್ದೆ ಮುರಿಯುವುದನ್ನು, ಸಾರಿನಲ್ಲಿ ಮುಳುಗಿಸುವುದನ್ನು, ಗಂಟಲಿ ಗಿಳಿಸಿ ಗುಳಕ್ಕನೆ ನುಂಗುವುದನ್ನು ಖುಷಿಯಿಂದ ನೋಡಿದ.

ನಂತರ ‘ಜಗ್ಗಿಸಿ ಹೊಡೆಯೋ ಜಗತ್ತು ಗುರುವೆ, ತಳಾ ಮುಟ್ಟಿ ಬರಲಿ ಸ್ವಾಮಿ’ ಎಂದು ತನ್ನ ಎಂದಿನ ಹಾಸ್ಯಭರಿತ ರಸ ಶೈಲಿಯಲ್ಲಿ ಹೇಳಿ ಬೆನ್ನು ತಟ್ಟಿದ.

ಪಕ್ಕದ ಗೆಳೆಯರು ಅವನ ಮಾತಿನ ಅರ್ಥ ಗ್ರಹಿಸಿ ನಕ್ಕರು.

ನಾನು ಮುದ್ದೆ ನುಂಗುತ್ತಾ ಹೋದೆ

|ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

August 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಪ್ರಸನ್ನಕುಮಾರ್

    ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಯಾವುದೇ ಸಮುದಾಯದ ವಿದ್ಯಾರ್ಥಿಗಳಿಗೆ ಅವನು ಯಾವುದೇ ಜಾತಿಗೆ ಸೇರಿದವನಾಗಿದ್ದರು ಅವನಿಗೆ ಇರಲಿಕ್ಕೆ ನೆಲೆ, ಬದುಕಲು ವಿದ್ಯೆ, ಉಸಿರಾಡಲು ಊಟ ನೀಡಿದಂತಹ ಸಮಾಜಮುಖಿ ಸ್ಥಾವರಗಳು ಸಿದ್ದಗಂಗೆ ಮಠ, ಚುಂಚನಗಿರಿ ಮಠ ಹಾಗೆಯೇ ಉತ್ತರ ಕರ್ನಾಟಕದ ಅನೇಕ ಮಠಗಳು ಸಮಾಜಕ್ಕೆ ಒಳ್ಳೆಯ ಪ್ರಜೆಗಳು, ಪ್ರಜ್ಞಾವಂತ ಸಮೂಹವನ್ನು ಕೊಟ್ಟಿದೆಯೆಂದರೆ ತಪ್ಪಾಗಲಾರದು, ಇದೆ ರೀತಿಯ ಪ್ರಜ್ಞೆಯನ್ನು ಬ್ರಾಹ್ಮಣ ಸಮಾಜದ ಮಠಗಳು ಸಹ ಅನುಸರಿಸಿದ್ದರೆ ನಮ್ಮ ಸಮಾಜದ ಬೆಳವಣಿಗೆ ಇನ್ನೂ ಆಗುತ್ತಿತ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: