ಮಾಲತಿ ಗೋರೆಬೈಲ್
ಜೀಕುವದೆಂದರೆ
ಜೋಡು ಹಗ್ಗದ ನಡುವೆ ಕುಳಿತು
ತಣ್ಣನೆ ಗಾಳಿಗೆ ಮೈಯೊಡ್ಡಿ
ಸಂಜೆ ಮಲ್ಲಿಗೆಯ ಘಮವ ಆಘ್ರಾಣಿಸುವುದಲ್ಲ,
ಕವಲೊಡೆದ ಬಂಧಗಳ ರಹದಾರಿಗಾಗಿ
ಹಾತೊರೆಯುವುದು..
ಉಯ್ಯಾಲೆಯಾಡುವುದೆಂದರೆ
ಆಧಾರ ಹಿಡಿದು ಲೋಕ ವಿಹರಿಸಿ
ನೆನಕೆಗಳ ಮರುಕಳಿಸಿ
ಭ್ರಮೆಯ ಸಾಗರದಲ್ಲಿ ಈಜುವುದಲ್ಲ,
ಕಾರ್ಯ ಕಾರಣಗಳ ಪಹರೆ ಮೀರಿ
ಕಾಲ ಹೆಜ್ಜೆಯ ಗೆಜ್ಜೆಯ ನಾದವ
ಬಿಡುವಿಲ್ಲದೇ ಹೆಣಿಕೆ ಹಾಕುವುದು…

ತೂಗುವುದೆಂದರೆ….
ಮಹಲುಗಳ ಮಹಡಿ ಹತ್ತಿ
ಇರುಳ ಪನಿಯಲ್ಲಿ
ಕೊರಡು ಚಿಗುರಿಸುವ ಜಾದುವಲ್ಲ;
ಸೋಗೆಯಂಚಿನ ಬೆರಣಿಸಾಲಿನಲ್ಲಿ
ಹೂವು ಅರಳಿಸುವದು.
ನೂಕುವುದು ಹಾಗೇ ಸುಮ್ಮನೆ…. ಅಲ್ಲ!
ಭವದ ಕತ್ತಲೆಗೆ ಬೆನ್ನೊಡ್ಡಿ
ಚೈತನ್ಯ ಪಡೆಯುವುದಲ್ಲ;
ಸುರುಳಿಯೊಳಗೆ ಬಚ್ಚಿಟ್ಟ ಎದೆಗುದಿಯ ಬಿಚ್ಚಿ
ಹಣತೆ ಹಚ್ಚುವದು..
ಇರುಳ ಪ್ರೀತಿಸುವದು……….






0 Comments