‘ಹಸಿಮಾಂಸ ಮತ್ತು ಹದ್ದುಗಳು’

ನಾಗೇಂದ್ರ ಎಂ ಎನ್

ಗೀತಾ ನಾಗಭೂಷಣ್ ಅವರ ಹಸಿಮಾಂಸ ಮತ್ತು ಹದ್ದುಗಳು ದಲಿತ ಬಂಡಾಯ ಸಾಹಿತ್ಯದ ಹಿನ್ನೆಲೆಯಲ್ಲಿ ಬಂದಿರುವ ಒಂದು ಸ್ತ್ರೀ ವಾದಿ ಕಾದಂಬರಿ. ಕಾದಂಬರಿಯಲ್ಲಿ ಕಲ್ಬುರ್ಗಿಯ ಆಡು ಭಾಷೆಯನ್ನು ಬಳಸಿರುವುದರಿಂದ ಆರಂಭದಲ್ಲಿ ಓದಲು ಕಷ್ಟವಾದರೂ ನಂತರ ಓದಿಸಿಕೊಂಡು ಹೋಗುತ್ತದೆ. ದೇವನೂರು ಮಹಾದೇವ ಅವರು ತಮ್ಮ ಕುಸುಮಬಾಲೆಯಲ್ಲಿ ನಂಜನಗೂಡು ಪ್ರಾದೇಶಿಕ ಕನ್ನಡವನ್ನು ಹೇಗೆ ಸಶಕ್ತವಾಗಿ ಬಳಸಿದ್ದಾರೋ ಹಾಗೆ ಗೀತಾ ನಾಗಭೂಷಣ್ ರವರು ಕಲ್ಬುರ್ಗಿ ಕನ್ನಡವನ್ನು ಸಶಕ್ತವಾಗಿ ಬಳಸಿದ್ದಾರೆ. ಆರಂಭದಲ್ಲಿ ಓದಲು ಕಷ್ಟವಾದರೂ ಓದುತ್ತಾ ಸರಾಗವಾಗಿ ಓದಿಸಿಕೊಳ್ಳುವುದು ಕೃತಿಯ ವೈಶಿಷ್ಟ್ಯ.

ಭೀಮಳ್ಳಿಯ ದಲಿತ ಕೇರಿಯ ಲಚ್ಚಿ ಈ ಕಾದಂಬರಿಯ ದುರಂತ ನಾಯಕಿ. ತಂದೆ ಫಕೀರಪ್ಪನಿಗೆ ತನ್ನ ಒಬ್ಬಳೇ ಮಗಳ ಮದುವೆ ಚಿಂತೆ. ಅಷ್ಟರಲ್ಲಿ ತಾಯಿ ಗುರುಲಿಂಗಿ ಕಾಯಿಲೆಯಿಂದ ಸಾಯುತ್ತಾಳೆ. ಕೆಲವೇ ದಿನಗಳಲ್ಲಿ ಫಕೀರಪ್ಪ ಲಕ್ವಾ ಒಡೆದು ನರಳಿ ನರಳಿ ಪ್ರಾಣ ಬಿಡುತ್ತಾನೆ. ತಂದೆ ತಾಯಿ ಸಾವಿನಿಂದ ಏಕಾಂಗಿಯಾದ ಲಚ್ಚಿಗೆ ಅವಳನ್ನು ಅತಿಯಾಗಿ ಪ್ರೀತಿಸುವ ಜೀವ ಕಾಸಿನಾತನೊಬ್ಬನೆ ಆಸರೆ. ಅವನ ಬಲವಂತದಿಂದ ಕೊಟ್ಟ ಕುಲಕರ್ಣಿ ತೋಟದ ಕುಂಬಳಕಾಯಿ ತೆಗೆದುಕೊಂಡು ಹೋಗುವಾಗ ಕುಲಕರ್ಣಿ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾಳೆ. ಅದಕ್ಕೆ ಬದಲಾಗಿ ರಾತ್ರಿ ತನ್ನ ಬಳಿ ಬರಲು ಹೇಳಿದಾಗ ತಿರಸ್ಕರಿಸುತ್ತಾಳೆ. ಇದರಿಂದ ರೊಚ್ಚಿಗೆದ್ದ ಕುಲಕರ್ಣಿ ಕಳ್ಳತನದ ದೂರು ನೀಡಿ ಅವಳನ್ನು ಪೊಲೀಸರಿಗೆ ಕೊಡುತ್ತಾನೆ. ಅವಳನ್ನು ಕರೆದುಕೊಂಡು ಹೋದ ಪೊಲೀಸರು ಠಾಣೆಯಲ್ಲಿ ಅವಳನ್ನು ಉರಿದು ಮುಕ್ಕುತ್ತಾರೆ. ಅಲ್ಲಿಂದ ಕೋರ್ಟಿನಲ್ಲಿ ಶಿಕ್ಷೆಯಾಗಿ ಲಚ್ಚಿ ಜೈಲು ಪಾಲಾಗುತ್ತಾಳೆ. ಜೈಲಿನಲ್ಲಿ ತನ್ನನ್ನು ನೋಡಲು ಬಂದ ಕಾಸಿಗೆ ತಾನು ನಾಯಿ ಮುಟ್ಟಿದ ಮಡಕೆ ಎಂಬ ಸತ್ಯ ಹೇಳುತ್ತಾಳೆ.

ಲಚ್ಚಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಕಾಸಿ ಸತ್ಯ ಕೇಳಿ ಅವಳಿಂದ ದೂರಾಗಿ ಬೇರೆ ಹುಡುಗಿಯನ್ನು ಮದುವೆಯಾಗುತ್ತಾನೆ. ಜೈಲುವಾಸ ಮುಗಿದ ನಂತರ ಮತ್ತೆ ಪಾಪಿ ಗಂಡಸರಿಗೆ ಆಹಾರವಾಗಬಾರದೆಂದು ಅಬಲೆಯರಿಗಾಗಿ ಇರುವ ಸ್ತ್ರೀ ಅನಿಕೇತನ ಸಂಸ್ಥೆಗೆ ಸೇರಿಕೊಳ್ಳುತ್ತಾಳೆ. ಆದರೆ ಲಚ್ಚಿಯ ಕತೆ ಬಾಣಲೆಯಿಂದ ಬೆಂಕಿಗೆ ಬಿದ್ದಹಾಗುತ್ತದೆ. ಆ ಸಂಸ್ಥೆಗೆ ಬರುತ್ತಿದ್ದ ಅಧಿಕಾರಿಗಳ ಕಾಮುಕ ಕಣ್ಣುಗಳು ಬೆಳ್ಳಗೆ ಚಂದುಳ್ಳಿ ಚೆಲುವೆಯಂತಿದ್ದ ಲಚ್ಚಿಯ ಮೇಲೆ ಬೀಳುತ್ತವೆ. ಅವಳನ್ನು ಮದುವೆಯಾಗಲು ಬಂದ ಬಸಣ್ಣಿಯದು ಅದೇ ಕಥೆ. ಅವಳ ಸೌಂದರ್ಯವನ್ನು ಅನುಭವಿಸಲು ಅವಳನ್ನು ಮದುವೆಯಾಗುತ್ತಾನೆ. ಹೆಂಡತಿ ಗರ್ಭಿಣಿಯಾದರೂ ಗೋಗರೆದರೂ ಬಿಡದೆ ಅವಳ ಮೇಲೆ ನಿರಂತರವಾಗಿ ಎರಗುತ್ತಾನೆ. ಲಚ್ಚಿಯ ಜೀವನದ ಸತ್ಯ ತಿಳಿದ ಬಸಣ್ಣಿ ಅವಳನ್ನು ಮನೆಯಿಂದ ಹೊರ ಹಾಕುತ್ತಾನೆ. ಬೇರೊಬ್ಬರನ್ನು ಮದುವೆ ಮಾಡಿಕೊಳ್ಳುತ್ತಾನೆ. ಲಚ್ಚಿಗೆ ಗಂಡು ಮಗುವಾಗುತ್ತದೆ. ಆ ಮಗುವನ್ನು ತೋರಿಸಿ ಬಸಣ್ಣಿ ನಿನ್ನದೇ ಮಗು ಎಂದು ಹೇಳಿದರು ಕೇಳದೆ ಅವಳನ್ನು ಜೋರಾಗಿ ದೂಡುತ್ತಾನೆ. ಮಗು ಸಾವನ್ನಪ್ಪುತ್ತದೆ. ಲಚ್ಚಿಯನ್ನು ಯುವಕನೊಬ್ಬ ರಕ್ಷಿಸುತ್ತಾನೆ. ಆತ್ಮಹತ್ಯೆ ಕೇಸು ದಾಖಲಾಗಿ ಜೀವಾವಧಿ ಶಿಕ್ಷೆ ಪಡೆದು ಲಚ್ಚಿ ಜೈಲು ಸೇರುತ್ತಾಳೆ.

ಇಡೀ ಕಾದಂಬರಿಯಲ್ಲಿ ಅನಕ್ಷರಸ್ಥ ಮುಗ್ಧ ದಲಿತರ ಹುಡುಗಿ ಲಚ್ಚಿಯನ್ನು ಮೇಲ್ವರ್ಗದ ಜಮೀನ್ದಾರರು, ಅಧಿಕಾರಿ ವರ್ಗದವರು, ಕಾನೂನು ಕಾಯುವ ಪೊಲೀಸರು ಹಸಿ ಮಾಂಸ ಕಂಡು ಹದ್ದಿನಂತೆ ಅವಳ ಮೇಲೆ ಎರಗುತ್ತಾರೆ. ಹೀಗೆ ಲಚ್ಚಿ ಬಾಳು ದುರಂತ ಅಂತ್ಯ ಕಾಣುತ್ತದೆ.

ಇಡೀ ಕೃತಿಯಲ್ಲಿ ಜಮೀನ್ದಾರರ ದಬ್ಬಾಳಿಕೆ, ದೌರ್ಜನ್ಯ, ಕೆಳವರ್ಗದ ಹೆಣ್ಣುಮಕ್ಕಳ ನಿರಂತರ ಶೋಷಣೆ ಹಿನ್ನೆಲೆಯಲ್ಲಿ ಕೃತಿ ರಚಿತವಾಗಿದೆ. ಮೇಲ್ವರ್ಗದವರು ಕೆಳವರ್ಗದವರನ್ನು ಹೇಗೆ ಶೋಷಿಸುತ್ತಾರೆ? ಮತ್ತು ಅವರ ಜೀವನವನ್ನು ಹೇಗೆ ನರಕ ಮಾಡುತ್ತಾರೆ? ಎಂಬುದನ್ನು ಕರುಣಾಜನಕವಾಗಿ ಚಿತ್ರಿಸಿದ್ದಾರೆ. ಅದರಲ್ಲೂ ಕೆಳವರ್ಗದ ಹೆಣ್ಣು ಮಕ್ಕಳು ಎಂದರೆ ಭೋಗದ ವಸ್ತುಗಳು ಎಂಬ ಮೇಲ್ವರ್ಗದ ಮನಸ್ಥಿತಿಯಿಂದ ಹೆಣ್ಣು ಮಕ್ಕಳು ಅನುಭವಿಸುವ ನರಕಾಯಾತನೆಯನ್ನು ಮನಮಿಡಿಯುವಂತೆ ಕಟ್ಟಿಕೊಟ್ಟಿದ್ದಾರೆ

ಇಡೀ ಕಾದಂಬರಿ ಕೇವಲ ದಬ್ಬಾಳಿಕೆ, ದೌರ್ಜನ್ಯ, ಶೋಷಣೆಗೆ ಸೀಮಿತವಾಗಿದ್ದು, ಲಚ್ಚಿ ಪಾತ್ರ ಇವನ್ನೆಲ್ಲಾ ಮೆಟ್ಟಿನಿಂತು ಗೆದ್ದುಬರುವ ಪಾತ್ರವಾಗಬೇಕಿತ್ತು. ಹೆಣ್ಣು ಅಬಲೆಯಲ್ಲ ಸಬಲೆ ಎಂಬ ಅಭಿಪ್ರಾಯ ಮೂಡಿಸುವಂತಾಗಬೇಕು. ಬಹುಶಃ ಕಾದಂಬರಿ ರಚನೆಯಾದ ಕಾಲಘಟ್ಟದ ಪ್ರಭಾವವು ಕಾರಣವಾಗಿರಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

‍ಲೇಖಕರು Admin

October 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: