ಹಸಿದು ಹಲಸು…

ಸಮತಾ ಆರ್

ಮೊನ್ನೆ ಒಂದು ಭರ್ಜರಿ ಮದುವೆಗೆ ಹೋಗಿದ್ದೆ. ಆ ವೈಭವ ಸಾರಲು ಪದಗಳು ಸಾಲವು ಬಿಡಿ.ಮದುವೆಗೆ ಬಂದಿದ್ದ ನೀರೆಯರ ಸೀರೆ, ವಡವೆಗಳ ಕಣ್ಣು ತುಂಬಾ ತುಂಬಿಕೊಂಡು, ಹೊಟ್ಟೆ ಉರಿದುಕೊಂಡು, ಮದು ಮಕ್ಕಳಿಗೆ ಹರಸಿ ಊಟಕ್ಕೆ ಹೊರಟೆವು. ಸಿರಿವಂತರ ಮನೆ ಮದುವೆಯಲ್ಲವೆ, ಊರಿನ ಎಲ್ಲಾ ತರಹದ ವ್ಯಂಜನಗಳ ಊಟಕ್ಕೆ ಮಾಡಿಸಿದ್ದರು. ಇಡ್ಲಿ, ದೋಸೆ, ರೊಟ್ಟಿ, ಮುದ್ದೆ, ಇಂತದ್ದೊಂದು ಇದೆ, ಇಂತಹದು ಇಲ್ಲ ಅನ್ನೋ ಹಾಗೇ ಇಲ್ಲ.

ಸರಿ, ಬಡಿಸುವವರು ಬಂದ ಹಾಗೆಲ್ಲ, ಡಯಾಬಿಟಿಸ್ ನ ಕಾರಣದಿಂದಾಗಿ, ಸಿಹಿಗೆಲ್ಲ ಕೈ ಅಡ್ಡ ಹಿಡಿದು ಕೆಲವೇ ಕೆಲವು ಐಟಂ ಮಾತ್ರ ಹಾಕಿಸಿ ಕೊಂಡೆ. ಆದರೆ ಬಾಳೆಯೆಲೆಯಲ್ಲಿ ಸುತ್ತಿ ಮಾಡಿದ್ದ ಸಿಹಿಯೊಂದು ಹತ್ತಿರ ಬರುತ್ತಿದ್ದಂತೆ ನನ್ನ ಕೈ ತಾನೇ ತಾನಾಗಿ ಹಿಂದೆಗೆಯಿತು. ಕಣ್ಣಗಲಿಸಿದ ನನ್ನ ಗಂಡನಿಗೆ “ಸಿಹಿಯಲ್ಲ ಕಣ್ರೀ, ಖಾರದ ಕಡುಬು,” ಎಂದು ಸುಳ್ಳು ಹೇಳಿದ್ದಾಯಿತು.ನನ್ನ ಎಣಿಕೆ ಸರಿಯಾಗಿತ್ತು, ಅದು ನನ್ನ ಪ್ರೀತಿಯ ಹಲಸಿನ ಕಡುಬು. ನಿಧ ನಿಧಾನವಾಗಿ ಸವಿದು ಸವಿದು ತಿಂದದ್ದಾಯಿತು.ನನ್ನ ಗಂಡನಿಗೂ ಗೊತ್ತಾಗಿ ನನ್ನ ಕಡೆ ಮತ್ತೆ ಕೆಂಗಣ್ಣು ಬೀರಿದರೂ ಲೆಕ್ಕಿಸದೆ ಸವಿದೆ.

ಮನೆಗೆ ಬಂದ ಮೇಲೆ ನನ್ನ ಗಂಡನ ವಾಗ್ದಾಳಿ ಶುರುವಾಯಿತು.”ಟನ್ ಗಟ್ಟಲೆ ಹಲಸು ತಿಂದು ತಿಂದೇ ನಿನಗೆ ಸಕ್ಕರೆ ಖಾಯಿಲೆ ಬಂದಿರೋದು. ಆದ್ರೂ ನೀನಿನ್ನೂ ಬುದ್ಧಿ ಕಲಿತಿಲ್ಲ. ಏನಾದರೂ ಹೆಚ್ಚು ಕಮ್ಮಿಯಾದರೆ ಏನು ಗತಿ”ಎಂದು ಗರ್ಜಿಸಿದರು. “ಅಯ್ಯೋ ಬಿಡ್ರಿ, ಮೂರು ತಿಂಗಳಲ್ಲಿ ಇದೇ ಮೊದಲ ಸಿಹಿ ನಾನು ತಿಂದದ್ದು. ನನ್ನ ಖುಷಿಗೆ ಕಲ್ಲು ಹಾಕದೇ ಹೋದರೆ ನಿನಗೆ ಸಮಾಧಾನ ವಿಲ್ಲ,” ಎಂದು ದಬಾಯಿಸಿ ಅವರ ಬಾಯಿ ಮುಚ್ಚಿಸಿಬಿಟ್ಟೆ. ಈ ಶುಗರ್ ಖಾಯಿಲೆ ಬಂದು ನನ್ನ ನಾಲಿಗೆಯನ್ನು ಸಪ್ಪೆ ಸಪ್ಪೆ ಮಾಡಿ ಬಿಟ್ಟಿದೆ. ನಾನಂತೂ ಎಲ್ಲಾ ರೀತಿಯ ಊಟೋಪಚಾರಗಳ ತ್ಯಾಗ ಮಾಡಿ ಏನೋ ಹುಲ್ಲು ಸೊಪ್ಪು, ರಾಗಿ, ಗೋಧಿ ಅಂತ ಡಯಟ್ ಮಾಡಿಕೊಂಡಿದ್ದೇನೆ. ಆದ್ರೆ ಏನು ಬಿಟ್ಟರೂ ಹಲಸು ಬಿಡಲು ಮಾತ್ರ ನನ್ನಿಂದ ಆಗದು ಅಂದ್ರೆ ಆಗದು.

ಚಿಕ್ಕಂದಿನಲ್ಲಿ ರಜಾ ದಿನಗಳಲ್ಲಿ ಅಜ್ಜಿ ಮನೆಗೆ ಹೋದಾಗ, ತೋಟದಲ್ಲಿ ಮಸ್ತಾಗಿ ಸಿಗುತ್ತಿದ್ದ ಹಣ್ಣು ತಿಂದು ತಿಂದು ಹಿಡಿದ ರುಚಿ ನರ ನಾಡಿಗಳಲ್ಲೆಲ್ಲಾ ಇಳಿದು ಬಿಟ್ಟಿದೆ. ಆಗ ಊರಿಗೆ ಹೋದಾಗ ಮಾತ್ರ ಸಿಗ್ತಾ ಇದ್ದದ್ದು ನಂತರ ಮದುವೆಯಾಗಿ ಕೊಡಗಿಗೆ ಬಂದ ಮೇಲೆ ಬಂಪರ್ ಲಾಟರಿ ಹೊಡೆದಂತೆ ವಿಪುಲವಾಗಿ ಸಿಗಲಾರಂಭಿಸಿತು. ನಂತರ ಶಿಕ್ಷಕಿಯಾಗಿ ಮೊದಲು ಕೆಲಸ ಮಾಡಲು ಶುರು ಮಾಡಿದ ಶಾಲೆ ಕೊಡಗಿನ ಒಂದು ಹಳ್ಳಿ ಮೂಲೆಯಲ್ಲಿತ್ತು. ಸುತ್ತ ಕಾಫಿ ತೋಟಗಳು, ಅವುಗಳಲ್ಲಿ ತುಂಬಿಕೊಂಡಿದ್ದ ಬೇಜಾನ್ ಹಲಸಿನ ಮರಗಳು.

ಇನ್ನೇನು ಬೇಕು ನನಗೆ! “ಸ್ವರ್ಗ ಕಣ ಎತ್ತೆತ್ತಲ್,” ಅನ್ನಿಸಿ ಬಿಟ್ಟಿತ್ತು. ಅದಲ್ಲದೆ ನನ್ನ ಸಹೋದ್ಯೋಗಿಗಳಲ್ಲಿ ಹಲವರು ಕಾಫಿ ತೋಟಗಳ ಮಾಲೀಕರು, ಹಾಗಾಗಿ ಹಲಸಿನ ಸೀಸನ್ ನಲ್ಲಿ ನಿತ್ಯವೂ ಹಲಸಿನ ಸಮಾರಾಧನೆ ಶಾಲೆಯಲ್ಲಿ. ತರುವವರಿಗೇನೋ ಅದು ಅವರ ತೋಟದಲ್ಲಿ ಮಸ್ತಾಗಿ ಸಿಕ್ಕಿ ಸಿಕ್ಕಿ, ತಿಂದು ತಿಂದು ಬಿಡಿದು ಹೋಗಿದ್ದಂತ ಒಂದು ಹಣ್ಣು. ಹಾಗಾಗಿ ತರುತ್ತಿದ್ದದ್ದರಲ್ಲಿ ಸಿಂಹ ಪಾಲು ನನ್ನ ಪಾಲಿಗೆ. ಹೊಟ್ಟೆ ತುಂಬಾ ಹಲಸು ತಿಂದು, ತೆಗೆದುಕೊಂಡು ಹೋಗಿದ್ದ ಊಟದ ಡಬ್ಬಿಯನ್ನು ಹಾಗೇ ಮನೆಗೆ ವಾಪಸ್ ತಂದು ಗಂಡನ ಕೈಲಿ ಬೈಸಿಕೊಳ್ಳುತ್ತಿದ್ದೆ.

ಆ ಸಮಯದಲ್ಲೇ ನನ್ನ ಎರಡನೇ ಮಗುವಿಗೆ ಬಸಿರಿಯಾಗಿ ತೊಗೊ ಮೂರು ಹೊತ್ತೂ ಬರೀ ಹಲಸಿನ ಬಯಕೆಯೇ. ಅದಕ್ಕೆ ತಕ್ಕ ಹಾಗೆ ಶಾಲೆಯ ಗೆಳತಿಯರು, ಏಕಚಕ್ರ ನಗರದಲ್ಲಿ ಬಕಾಸುರನಿಗೆ ಊರ ಜನರು ಪ್ರತಿದಿನ ತಪ್ಪದೇ ಬಂಡಿಗಟ್ಟಲೆ ಊಟ ಪೂರೈಸಿದಂತೆ, ನನಗೆ ಹಲಸು ತಂದು ಒಪ್ಪಿಸಿದ್ದೇ ಒಪ್ಪಿಸಿದ್ದು. “ಹಿಂಗೇ ಸಿಗೋದಾದ್ರೆ ವರ್ಷಕ್ಕೊಂದು ಹಡೆಯಲು ನಾ ಸಿದ್ಧ” ಎಂದು ಒಂದು ದಿನ ಹಲಸು ಮುಕ್ಕುತ್ತಾ ನಾ ಘೋಷಿಸಿಯೂ ಬಿಟ್ಟೆ.ಆದ್ರೆ ನಮ್ಮ ಹೆಚ್ ಎಂ, “ಹುಷಾರು, ಹಲಸಿನ ಆಸೆಗೆ ವರ್ಷಕ್ಕೊಂದು ಹಡೆದರೆ ಸರ್ಕಾರ ಉದ್ಯೋಗಿಗಳಿಗೆ ಕೊಡುವ ಸೌಲಭ್ಯಗಳಿಗೆ ಕತ್ತರಿ ಹಾಕುತ್ತೆ ಅಷ್ಟೇ,” ಎಂದು ಹೇಳಿ, ಹಲಸಿನ ಮರದ ಅಟ್ಟಕ್ಕೇರಿ ಕುಳಿತಿದ್ದ ನನ್ನನ್ನು ಭೂಮಿಗೆ ಇಳಿಸಿದರು.

ಆಗ ನನ್ನ ಹಲಸಿನ ಬಯಕೆ ಎಷ್ಟಿತ್ತೆಂದರೆ ಶಾಲೆಯ ಗೆಳತಿಯರು ಕೊಡುತ್ತಿದ್ದ ಹಣ್ಣು ಕೂಡಾ ಸಾಲದೆ, ಶಾಲೆಯಿಂದ ಮನೆಗೆ ಮರಳುವಾಗ, ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಒಂದು ತಳ್ಳುವ ಗಾಡಿಯಲ್ಲಿ ಹಲಸಿನ ಹಣ್ಣು ಬಿಡಿಸಿ ಮಾರುತ್ತಿದ್ದ ಒಬ್ಬನ ಬಳಿ ಪ್ರತಿನಿತ್ಯ ಖರೀದಿಸಲು ತೊಡಗಿದೆ. ಅವನೋ ಒಂದು ದಿನ ಬಿಡಿಸಿದಂತ ಹಣ್ಣು ಇನ್ನೊಂದು ದಿನ ಕೊಡುತ್ತಾ ಇರಲಿಲ್ಲ. ಕೊಡಗಿನ ಹಲಸಿನ ರುಚಿ ಒಂದು ಬಗೆಯದಾದರೆ, ಪಕ್ಕದ ಜಿಲ್ಲೆಗಳಾದ ಮೈಸೂರು, ಹಾಸನ ಸೀಮೆಯ ಹಣ್ಣುಗಳದ್ದು ಇನ್ನೊಂದು ರೀತಿ. “ಮೇಡಂ ನಾನು ಮೂಡ್ ಸೀಮೆಯಿಂದ ತಂದು ಮಾರೋದು, ಕೊಡಗಲ್ಲಿ ಮಳೆ ಜಾಸ್ತಿ ಹಂಗಾಗಿ ಹಣ್ಣಲ್ಲಿ ನೀರಂಶ ಹೆಚ್ಚು, ಮೂಡ್ ಸೀಮೆ ಕಡೆ ಹಂಗಲ್ಲ, ಅಲ್ಲಿ ನೀರ್ ಕಮ್ಮಿ, ಹಂಗಾಗಿ ಹಣ್ಣ್ ಭಾಳ ಚನಾಯ್ತವೆ,” ಅನ್ನುತ್ತಾ ದಿನಕ್ಕೊಂದು ಬಗೆಯ ಹಲಸು ತಂದು ಕೊಟ್ಟ ಪುಣ್ಯಾತ್ಮ ಅವನು. ಆದರೆ ಬಸ್ ನಿಲ್ದಾಣಕ್ಕೆ ನನ್ನ ಕರೆದೊಯ್ಯಲು ಬರುತ್ತಿದ್ದ ನನ್ನ ಗಂಡನಿಗೆ ಅವನನ್ನು ಕಂಡರೆ ಸ್ವಲ್ಪನೂ ಆಗ್ತಾ ಇರ್ಲಿಲ್ಲ. “ಲೆ, ಒಂಚೂರೂ ಕ್ಲೀನ್ ಇಲ್ಲ ಅವ್ನು, ಸ್ನಾನ ಮಾಡಿ ಎಷ್ಟ್ ದಿನ ಆಯ್ತೋ ಅನ್ನೋ ಹಂಗವ್ನೆ, ನೀನ್ಯಾಕೆ ಅಲ್ಲಿ ಹಣ್ಣ್ ತೊಗೊತಿಯ, ಶಾಲೆಲಿ ತಿನ್ನೋದು ಸಾಲ್ದ,” ಎಂದು ಬೈದರೂ ನಾನು ಕೇಳ್ತಾ ಇರ್ಲಿಲ್ಲ. “ಪಾಪ ಶ್ರಮಿಕ ವರ್ಗದ ಮಂದಿ ಉದ್ಯೋಗಸ್ಥರ ಹಾಗೆ ನಾಜೂಕಾಗಿ ಇರೋಕೆ ಆಗುತ್ತಾ ಹೇಳಿ. ಸೂಟು ಬೂಟು ಹಾಕ್ಕೊಂಡು ಹಲಸು ಕುಯ್ಯೋಕೆ ಹೋದ್ರೆ ಮುಗೀತು ಕಥೆ ಬಿಡಿ.” ಎಂದೆಲ್ಲ ಹೇಳಿ ನನ್ನ ಗಂಡನ ಬಾಯಿ ಮುಚ್ಚಿಸುತ್ತಿದ್ದೆ. ಅಲ್ಲ ಕಣ್ರೀ, ಕಲ್ಲಿದ್ದಲ ಗಣಿಲಿ ಸಿಗುತ್ತೆ ಅಂತ ಯಾರಾದ್ರೂ ವಜ್ರನ ಎಸಿತಾರ ಹೇಳಿ!

ಅದೊಂದು ವರ್ಷ ತಿಂದಷ್ಟು ಹಲಸು ನಾನು ಇನ್ಯಾವಾಗಲೂ ತಿಂದಿಲ್ಲ. ಅದೂ ಎಂತಹ ಬಗೆ ಬಗೆಯ ಹಣ್ಣುಗಳು ಗೊತ್ತೇ! ಒಂದು ಮರದ ಹಣ್ಣಿನ ಬಣ್ಣ, ರುಚಿ, ವಾಸನೆ ಇನ್ನೊಂದಕ್ಕಿಲ್ಲ. ಒಮ್ಮೆ ತಿಂದಂತಹ ಹಣ್ಣನ್ನು ಮತ್ತೊಮ್ಮೆ ನಾ ತಿಂದಿಲ್ಲ. ಆ ಬಣ್ಣ, ರುಚಿ, ವಾಸನೆಯಲ್ಲಿನ ಸೂಕ್ಷ್ಮವ್ಯತ್ಯಾಸಗಳನ್ನು ಕಂಡು ಹಿಡಿಯುವುದು ಸಾಮಾನ್ಯರ ಬುದ್ಧಿಗೆಟಕುವ ಸಾಮರ್ಥ್ಯ ಅಲ್ಲವೇ ಅಲ್ಲ. ಅದಕ್ಕೆ ನನ್ನಂತಹ ರಸಗ್ರಾಹಿಗಳೇ ಆಗಬೇಕು. ತೆಳು ಹಳದಿ ಬಣ್ಣದ ಸಾಮಾನ್ಯವಾಗಿ ಎಲ್ಲ ಕಡೆ ದೊರಕುವ ಹಣ್ಣಿನಿಂದ ಆರಂಭವಾಗಿ, ಕಡು ಹಳದಿ, ಕೆನೆ ಬಣ್ಣ, ತುಸು ಬಿಳಿ, ತೆಳು ಕಿತ್ತಳೆ, ಗಾಢ ಕಿತ್ತಳೆ ಬಣ್ಣದ ಚಂದ್ರ ಹಲಸಿನವರೆಗೆ, ಕೊಬ್ಬರಿಯಷ್ಟು ಗಟ್ಟಿಯಿಂದ ಹಿಡಿದು, ಹತ್ತಿಯಂತೆ ಹಿಂಜಿ ಹೋಗುವ ಮೃದುತ್ವದವರೆಗಿನ ಹಣ್ಣುಗಳ ಸವಿದಿದ್ದೇನೆ.

ಇನ್ನು ಹಲಸಿನ ದಿವ್ಯ ಸುಗಂಧದ ಬಗ್ಗೆ ಬರೆಯಲು ಪ್ರಪಂಚದ ಯಾವ ಕವಿಯ ಬಳಿಯೂ ಪದಗಳಿಲ್ಲ ಬಿಡಿ. ಅದಕ್ಕೇ ಅವರು ಸುಲಭವಾಗಿ ಎಲ್ಲೆಂದರಲ್ಲಿ ಬಿದ್ದು ವದ್ದಾಡಿಕೊಂಡು ಸಿಗುವ ಮಾವಿನ ಬಗ್ಗೆ ಬರೆದು ಬರೆದು ಬಿಸಾಡಿದ್ದಾರೆ.ಹಲಸಿನ ಪರಿಮಳವನ್ನು ವರ್ಣಿಸಿರುವ ಯಾವುದೇ ಕಾವ್ಯ,ಲೇಖನ ನನ್ನ ಕಣ್ಣಿಗಂತೂ ಬಿದ್ದಿಲ್ಲ.ಏನಾದರೂ ಎಲ್ಲಿಯಾದರೂ ಯಾರಾದರೂ ಬರೆದಿದ್ದರೆ ದಯವಿಟ್ಟು ನನಗೆ ತಿಳಿಸಿ. ಓದಿ ಪಾವನಳಾಗುವೆ.ಇಂತಹ ಬಣ್ಣಿಸಲಸದಳ ಸುವಾಸನೆಯ ಲ್ಲೂ ಹಣ್ಣಿನಿಂದ ಹಣ್ಣಿಗೆ ವ್ಯತ್ಯಾಸವಿದೆ. ಅದನ್ನು ಗುರುತಿಸಲು ಮಾತ್ರ ಮೂಗು ಕರಡಿ ಮೂಗಾಗಿರಬೇಕು ಅಷ್ಟೇ. ಒಮ್ಮೆ ನನಗೆ ತೆಳುವಾಗಿ ಅನಾನಸ್ ಪರಿಮಳ ಹೊಂದಿದ್ದ ಹಲಸು ತಿನ್ನಲು ಸಿಕ್ಕಿತ್ತು ಗೊತ್ತೇ.ಅದರ ಬೀಜ ನೆಟ್ಟು ಗಿಡ ಮಾಡೋಣ ಎಂದರೆ,ಅದ್ಯಾಕೋ ಮೊಳೆಯಲೇ ಇಲ್ಲ. ಆ ಹಣ್ಣು ನನಗೆ ಮಾರಿದ್ದ ತಳ್ಳೊ ಗಾಡಿಯವನ ಬಳಿ ಹೋಗಿ ಕೇಳಿದೆ.ಅವನು, “ಮೇಡಂ ನಾನು ಮಾರ್ಕೆಟ್ ನಿಂದ ತಂದು ಮಾರೋದು, ಒಂದಿನ ಸಿಕ್ಕೋ ಹಣ್ಣು ಮತ್ತೆ ಸಿಗಲ್ಲ, ಎಲ್ಲಿಂದ ತರ್ತಾರೋ ಯಾರಿಗೆ ಗೊತ್ತು.” ಎಂದು ನನ್ನ ಕುತೂಹಲಕ್ಕೆ ತಣ್ಣೀರೆರಚಿ ಬಿಟ್ಟ.ಮತ್ತೆ ಇನ್ನೊಮ್ಮೆ ಅಂತಹ ಹಣ್ಣು ಸಿಗಲೂ ಇಲ್ಲ. ನನ್ನ ಗಂಡನಿಗೆ ಈ ಬಗ್ಗೆ ಹೇಳಿದರೆ,” ಲೆ ಮಾರೋನು ಅದಕ್ಕೆ ಪೈನಾಪಲ್ ಫ್ಲೇವರ್ ಸೇರಿಸಿ ಮಾರಿದ್ದ ಅನ್ನಿಸುತ್ತೆ,” ಎಂದು ಮುಸಿ ಮುಸಿ ನಗುತ್ತಾರೆ.ಆದರೆ ನನ್ನ ನಾಲಿಗೆಯಂತೂ ಆ ಮಾತು ಒಪ್ಪಲು ಸಿದ್ದವಿಲ್ಲ. ಇಷ್ಟೊಂದು ಹಲಸು ಸವಿದಿರುವ ನಾಲಿಗೆಗೆ ಸ್ವಾಭಾವಿಕ ಯಾವುದು, ಕೃತಕ ಯಾವುದು ಎಂದು ಗುರುತಿಸಲು ಆಗದೇ! ನಾನಂತೂ ನನ್ನ ಆಶಾಭಾವವನ್ನ ಬಿಟ್ಟು ಕೊಡದೆ ಆ ಪೈನಾಪಲ್ ಫ್ಲೇವರ್ ನ ಹಲಸಿನ ತಳಿಯನ್ನ ಹುಡುಕುತ್ತಲೇ ಇದ್ದೇನೆ. ಖಂಡಿತಾ ಒಂದಲ್ಲ ಒಂದು ದಿನ ಸಿಕ್ಕೇ ಸಿಗುತ್ತೆ ನೋಡ್ತಾ ಇರಿ.

ಬರೀ ಹಣ್ಣು ಮಾತ್ರ ಅಲ್ಲ,ಹಲಸಿನಲ್ಲಿ ತಯಾರಾಗುವ ವಿವಿಧ ಖಾದ್ಯಗಳ ಸವಿಯಲು ನೀವು ಕೊಡಗಿಗೆ ಬರಬೇಕು.ಕಡುಬು, ಇಡ್ಲಿ, ದೋಸೆ, ಹಲ್ವಾ, ಪಾಯಸ, ರಸಾಯನ, ಹಪ್ಪಳ, ಚಿಪ್ಸು, ಗುಜ್ಜೆ ಸಾರು ಏನುಂಟು ಏನಿಲ್ಲ!ಅಲ್ಲೊಂದು ಕಡೆ ಹಲಸಿನ ಫ್ಲೇವರ್ ನ ಐಸ್ ಕ್ರೀಮ್ ಕೂಡ ಸಿಗುತ್ತೆ ಗೊತ್ತಾ! ಇಷ್ಟೆಲ್ಲಾ ರೀತಿಯಲ್ಲಿ ಉಪಯೋಗಕ್ಕೆ ಬಂದರೂ ಕೀರ್ತಿಯ ವಿಷಯದಲ್ಲಿ ಮಾತ್ರ ಪಾಪ ನಮ್ಮ ಬಡಪಾಯಿ ಹಲಸಿಗೆ ಎಷ್ಟೊಂದು ಅನ್ಯಾಯವಾಗಿದೆ ಎಂದರೆ, ಕೊಡಗು ಎಂದರೆ ಕಾಫಿ ಎಂದು ಮಾತ್ರ ಜನ ನೆನಪಿಸಿಕೊಳ್ಳುತ್ತಾರೆ. ಅಂತಹವರಿಗೆ ಒಮ್ಮೆ ನನ್ನ ಸಹೋದ್ಯೋಗಿ ಮೀನಾಕ್ಷಿ ಮೇಡಂ ಮಾಡುವ ಹಲಸಿನ ಕಡುಬು ತಿನ್ನಿಸಬೇಕು. “ಕೊಡಗು ಅಂದ್ರೆ ಹಲಸಿನ ಕಡುಬು” ಎನ್ನದಿದ್ದರೆ ಕೇಳಿ. ಆದ್ರೆ ನಾನು ಮಾತ್ರ ತಿನ್ನಿಸೋ ಕೆಲಸ ಮಾಡಲಾರೆ. ಈಗಲೇ ನನಗೆ ಸಾಕಾಗುವಷ್ಟು ಕಡುಬು ಸಿಗೋದಿಲ್ಲ, ಇನ್ನು ಹೊರಗಡೆಯವರಿಗೆ ತಿನ್ನಿಸಿ ನನ್ನ ಪಾಲಿಗೆ ಕುತ್ತು ತಂದುಕೊಳ್ಳಲೇ! ಅವರೆಲ್ಲ ಕಾಫಿ ಕುಡಿದು ಕೊಂಡೇ ಇರಲಿ ಬಿಡಿ.

ಕೊಡಗಿನಲ್ಲಿ ಇದ್ದಷ್ಟು ವರ್ಷ ಪ್ರತೀ ಸೀಸನ್ ನಲ್ಲೂ ತಪ್ಪದಂತೆ ವಿಧ ವಿಧವಾದ ಹಲಸಿನ ರುಚಿ ನೋಡಿದ್ದಾಯಿತು. ಈ ಚಾಳಿ ಮೈಸೂರಿಗೆ ಮನೆ ಕಟ್ಟಿಕೊಂಡು ನೆಲೆಸಲು ಬಂದ ಮೇಲೂ ಮುಂದುವರೆಯಿತು. ಮೈಸೂರಿನಲ್ಲಂತೂ ಸೀಸನ್ ನಲ್ಲಿ ಎಲ್ಲಿ ಬೇಕು ಅಲ್ಲಿ ರಾಶಿ ರಾಶಿ ಹಲಸು ಗುಡ್ಡೆ ಹಾಕ್ಕೊಂಡು ಮಾರ್ತ ಇರ್ತಾರೆ. ದೊಡ್ಡ ಉಂಡೆ ಹಣ್ಣು ಬೇಡ ಅನ್ನೋದಾದ್ರೆ, ಬಿಡಿಸಿ,ತೊಳೆ ಲೆಕ್ಕದಲ್ಲಿ, ಆ ಗುಡ್ಡೆ ಪಕ್ಕವೇ ತಳ್ಳುವ ಗಾಡಿಯಲ್ಲಿ ಮಾರ್ತ ಇರ್ತಾರಲ್ಲ, ಅಲ್ಲಿ ಕೊಂಡರಾಯಿತು.ಒಂದು ತೊಳೆಯ ಬೆಲೆ ಮಾತ್ರ, ನನಗೆ ನೆನಪಿದ್ದಂತೆ, ವರ್ಷಗಳ ಹಿಂದೆ ಹತ್ತು ಪೈಸೆಗೆ ಒಂದರಂತೆ ಇದ್ದದ್ದು ಏರುತ್ತಾ ಏರುತ್ತಾ ಈಗ ಹತ್ತು ರೂಪಾಯಿಗೆ ಒಂದಕ್ಕೆ ಬಂದು ನಿಂತು ಬಿಟ್ಟಿದೆ.ಬೆಲೆ ಹೆಚ್ಚಾದರೂ, ಕಮ್ಮಿಯಾದರೂ ಜನ ತಲೆ ಕೆಡಿಸಿಕೊಳ್ಳದೆ ಕೊಳ್ಳುತ್ತನೆ ಇರ್ತಾರೆ,ಬೆಳಗ್ಗೆ ಹಾಕಿದ ಹಲಸಿನ ಗುಡ್ಡೆ ಸಂಜೆ ಒಳಗೆ ಕರಗಿ ಮಟಮಾಯವಾಗಿ ಹೋಗಿರುತ್ತೆ.

ಮೈಸೂರಲ್ಲಿ ನನ್ನ ಹಲಸಿನ ಮೋಹಕ್ಕೆ ಜೊತೆಯಾಗಿ ರುವುದು ನನ್ನ ಎದುರು ಮನೆ ಗೆಳತಿ ಉಷಾ.ನಮ್ಮಿಬ್ಬರ ಹಲಸಿನ ಮೋಹ ಎಷ್ಟು ಸಮಾನ ಎಂದರೆ ,ಅಯ್ಯೋ ಯಾಕೋ ಹೇಳಕ್ಕೆ ಯಾವುದೇ ಹೋಲಿಕೇನೆ ಹೊಳಿತಿಲ್ಲ ಬಿಡಿ.ಏನೋ ಇಬ್ರುಗೂ ಇಷ್ಟ ಅಂದ ಮೇಲೆ ಇಷ್ಟ ಅಷ್ಟೇ.ಹಲಸಿನ ಸೀಜನ್ ಹೇಗಿದ್ರೂ ಬೇಸಿಗೆ ರಜೆಯಲ್ಲಿ ಬರೋದಲ್ವ ಹಾಗಾಗಿ ರಜೆಯಲ್ಲಿ ತುಡುಗು ದನಗಳ ಹಾಗೆ ಶಾಪಿಂಗ್ ಗೆ ಅಂತ ನಾವು ಸುತ್ತಲು ಹೋದಾಗಲೆಲ್ಲ ಹಲಸು ಮೇಯ್ದು ಬರೋದೇ.

ಒಮ್ಮೆ ಹಾಗೇ ಅರಸು ರೋಡ್ ನಲ್ಲಿ ಯಾವುದೋ ಸೀರೆ ಅಂಗಡಿ ಎದುರು ಬೊಂಬೆಗಳಿಗೆ ಉಡಿಸಿದ್ದ ಸೀರೆಗಳ ನೋಡುತ್ತಾ ನಿಂತಿದ್ದಾಗ ಇದ್ದಕ್ಕಿದ್ದಂತೆ ಉಷಾ ನನ್ನ ಕೈ ಹಿಡಿದು ಜಗ್ಗಿ, “ರೀ, ಒಂದ್ ನಿಮ್ಷ ಬನ್ರಿ ಇಲ್ಲಿ” ಎಂದು ಕೈ ಹಿಡಿದುಕೊಂಡು ಅರಸು ರಸ್ತೆಯ ಪಕ್ಕದ ಗಲ್ಲಿ ಗಲ್ಲಿಗಳಲ್ಲಿ ನುಗ್ಗಿಸಿಕೊಂಡು ಅಕ್ಷರಶಃ ನನ್ನನ್ನು ಎಳೆದುಕೊಂಡೆ ಹೊರಟರು.ಅಂತೂ ಕಡೆಗೆ ಮನ್ನಾರ್ಸ್ ಮಾರ್ಕೆಟ್ ಬಳಿ ಒಂದು ಮೂಲೆಯಲ್ಲಿ ಒಬ್ಬ ಚಂದ್ರ ಹಲಸು ಕುಯಿದು ಮಾರುತ್ತಿದ್ದ ಕಡೆ ಹೋಗಿ ಅವರ ಸವಾರಿ ನಿಂತಿತು.”ಇಲ್ಲಿ ಹಲಸು ಮಾರೋದು ಇದ್ದಕ್ಕಿದ್ದಂತೆ ನೆನಪಾಯ್ತು ಕಣ್ರೀ. ಅದಕ್ಕೆ ನಿಮ್ಗೆ ಸರ್ಪ್ರೈಸ್ ಕೊಡ್ಬೇಕು ಅಂತ ಎಳ್ಕೊಂಡು ಬಂದೆ” ಅಂತ ಹಲ್ಲು ಕಿರಿತ ಬೇರೆ. ಆದ್ರೆ ಎಳೆಸಿಕೊಂಡು ಬಂದ ಕೋಪವೆಲ್ಲ ಆ ಕಿತ್ತಳೆ ವರ್ಣದಲ್ಲಿ ಹೊಳೆ ಹೊಳೆದು, ಅಮಲೇರಿಸುವಂತೆ ಪರಿಮಳ ಸೂಸುತ್ತಾ ಗಾಜಿನ ಭರಣಿ ತುಂಬಾ ತುಂಬಿಕೊಂಡಿದ್ದ ತೊಳೆಗಳ ನೋಡಿ ಮಂಜಿನಂತೆ ಕರಗಿ ನೀರಾಗಿ ಹೋಯಿತು. ಆದ್ರೆ ದರ ಕೇಳಿದಾಗ ಮಾತ್ರ ಆ ಮಾರುವವ ಧಿಮಾಕಿನಿಂದ “ಚಂದ್ರ ಹಲಸು, ಇಪ್ಪತ್ ರೂಪಾಯಿಗೆ ಒಂದ್ ತೊಳೆ, ಬೇಕಾದ್ರೆ ತೊಗೊಬೋದು, ಒಂದ್ ರೂಪಾಯಿ ಕೂಡ ಕಮ್ಮಿ ಇಲ್ಲ,” ಅಂತ ಕಡ್ಡಿ ಎರಡ್ ತುಂಡ್ ಮಾಡ್ಡಂಗೆ ಹೇಳಿಬಿಟ್ಟ.

ನಾವೂ ಏನೂ ಕಮ್ಮಿ ಇಲ್ಲ, “ಅಷ್ಟೆನಾ! ಭಾಳಾ ಚೀಪು, ಡಬ್ಬದಲ್ಲಿ ಇರೋದೆಲ್ಲ ಕೊಡು.” ಅಂತ ಒಳ್ಳೆ ಮೈಸೂರು ಮಹಾರಾಜರ ಮರಿ ಮೊಮ್ಮಕ್ಕಳಂತೆ ಡೌಲಿನಿಂದ ಖರೀದಿಸಿದೆವು. ಒಟ್ಟು ಎಷ್ಟು ದುಡ್ಡು ಕೊಟ್ಟು ತೊಗೊಂಡೋ ಅದು ಮಾತ್ರ ಕೇಳ್ಬೇಡಿ. ನಿಮ್ಮ ಹೊಟ್ಟೆ ಕಿಚ್ಚಿಂದ ನಮಗೆ ಹೊಟ್ಟೆ ನೋವು ಬಂದುಗಿಂದಾತು. ಆಮೇಲೆ ತೊಗೊಂಡ ಹಲಸನ್ನು ಆಟೋ ಹತ್ತಿ ಕುಳಿತು ಮನೆಗೆ ಬರುವಷ್ಟರಲ್ಲಿ ಇಬ್ಬರೂ ತಿಂದು ತೇಗಿದ್ದಾಯಿತು. ಅದರ ಸವಿ ಎಷ್ಟು ಚೆನ್ನಾಗಿತ್ತೆಂದರೆ ಅದರ ಒಂದೆರಡು ಬೀಜ ಹುರಿಯದೆ, ಮನೆಯಲ್ಲಿ ಒಂದು ಹೂ ಗಿಡದ ಕುಂಡದಲ್ಲಿ ಬಿತ್ತಿದೆ. ಇವು ಮಾತ್ರ ಆ ಪೈನಾಪಲ್ ಫ್ಲೇವರ್ ಬೀಜಗಳ ಹಾಗೆ ಕೈ ಕೊಡದೆ, ಬಿತ್ತಿದ ಒಂದೇ ವಾರಕ್ಕೆ ಮೊಳೆತು, ಚಿಗುರಿ, ತಿಂಗಳೊಪ್ಪತ್ತಿಗೆ ಬೆಳೆದು ನಿಂತ ಗಿಡಗಳಾಗಿ ಬಿಟ್ಟವು. ನಾನಂತೂ ಹಿರಿ ಹಿರಿ ಹಿಗ್ಗಿ ಹೋಗಿ ಬೆಳೆದ ಗಿಡಗಳನ್ನು ತೋಟದಲ್ಲಿ ನೆಡಲು ನನ್ನ ತಮ್ಮನ ಬಳಿ ಕಳುಹಿಸಿದೆ. ಅವನು ಅವುಗಳನ್ನು ತನ್ನ ತೋಟದಲ್ಲಿ ಒಂದು,ತನ್ನ ಮಾವನ ತೋಟದಲ್ಲಿ ಒಂದು ಎಂದು ನೆಟ್ಟ.

ಒಂದು ವರ್ಷ ಕಳೆದ ಬಳಿಕ ತೋಟಕ್ಕೆ ಹೋದಾಗ ನೋಡಿದರೆ ಆಗಲೇ ಆ ಚಂದ್ರ ಹಲಸಿನಮರ ನನಗಿಂತಲೂ ಎತ್ತರವಾಗಿ ಬೆಳೆದು ನಿಂತಿದೆ! ನಾನಂತೂ ಹಿಗ್ಗಿ ಹೀರೇಕಾಯಿ ಯಾಗಿ ಹೋದೆ.ಆದರೆ ನನ್ನ ತಮ್ಮನ ಅತ್ತೆ ಮಾತ್ರ, “ಮಗಾ, ಹಲಸಿನ ಗಿಡ ನೆಡೋರೂ ತಾವು ನೆಟ್ಟ ಗಿಡದ ಫಲ ತಿನ್ನಂಗಿಲ್ಲ ಕಣವ್ವ, ಅದುಕ್ಕೆ ನಮ್ಕಡೆ ವಯಸ್ಸಾದ ಮುದುಕ್ರು ಕೈಲಿ ಹಲಸಿನ್ ಗಿಡ ನೆಡುಸ್ತರೆ.” ಅನ್ನೋ ಬಾಂಬ್ ಸಿಡಿಸಿ ಬಿಟ್ರು. ಆ ಆಘಾತದಿಂದ ನಾನು ಬೆರಗಾಗಿ ಹೋದೆ. ಆದರೆ ನನ್ನನ್ನು ನಾನು ಸಾವರಿಸಿಕೊಂಡು, “ಅತ್ತೆ, ಗಿಡ ನೆಟ್ಟಿರೋನು ಇವ್ನಲ್ವ, ನಾನು ತಿನ್ಬೋದು ಬುಡು,” ಎಂದು ಅತ್ತೆಯ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದೆ. ಆದ್ರೆ ನನ್ನ ತಮ್ಮ ಮಾತ್ರ ಆ ಮಾತು ಒಪ್ಪಲು ಬಿಲ್ಕುಲ್ ತಯಾರಿಲ್ಲ.”ಅದೆಂಗೇ ಆಗುತ್ತೆ, ಬೀಜ ಬಿತ್ತಿ ಗಿಡ ಮಾಡ್ದೊಳು ನೀನಲ್ವ, ನೀನು ತಿನ್ಬಾರ್ದು ಗೊತ್ತಾ, “ಅಂತ ಏನ್ ಜಗಳಕ್ಕೇ ಬಂದು ಬಿಟ್ಟ. ಈಗ ಇದೊಂದು ಬಿಡಿಸಲಾಗದ ಕಗ್ಗಂಟಿನ ತತ್ವಶಾಸ್ತ್ರದ ಪ್ರಶ್ನೆಯಾಗಿ ಬಿಟ್ಟಿತು ನಮ್ಮಿಬ್ಬರಿಗೂ. “ಅಯ್ಯೋ ಬಿಡಿ ಈ ವೈಜ್ಞಾನಿಕ ಯುಗದಲ್ಲೂ ಅಂತದ್ದೆಲ್ಲ ಯಾಕೆ ನಂಬೋದು “ಅಂದುಕೊಂಡು, ಕಷ್ಟ ಕಾಲದಲ್ಲಿ ಇಂತಹ ಗಹನ, ಸಾಂಸ್ಕೃತಿಕ, ಪಾರಂಪರಿಕ,ತಾತ್ವಿಕ ಪ್ರಶ್ನೆಗಳು ಎದುರಾದಾಗಲೆಲ್ಲ ಸಹಾಯಕ್ಕೆ ಅಂತ ಎಳೆದು ತರುವ ವೈಜ್ಞಾನಿಕ ಮನೋಭಾವ ಅನ್ನೋ ವಿಕ್ರಮರಾಜನ ಮೊರೆ ಹೋಗಿ ಆ ತೊಡಕಿನ ಬೇತಾಳ ಪ್ರಶ್ನೆಯಿಂದ ಪಾರಾಗಿದ್ದಾಯಿತು.’ಸಾವಿನಿಂದ ಯಾರೂ ತಪ್ಪಿಸಿ ಕೊಳ್ಳಲಾಗದು, ಅಂತಹದರಲ್ಲಿ ಹಲಸು ತಿಂದೇ ಸಾಯೋಣ ಬಿಡಿ’ ಅಂದುಕೊಂಡು, ಆ ಚಂದ್ರ ಹಲಸಿನ ಗಿಡದ ಜೊತೆ ಸೆಲ್ಫಿ ತೊಕ್ಕೊಂಡು “ನೀನು ಹಣ್ಣು ಬಿಟ್ಟಾಗ, ನಾನು ತಿನ್ನಲು ಬಂದೇ ಬರುವೆ,” ಎಂದು ವಾಗ್ದಾನ ಮಾಡಿ ಬಂದಿರುವೆ.

ಹಲಸಿನ ಬಗ್ಗೆ ಈ ನಂಬಿಕೆ ಮಾತ್ರವಲ್ಲದೆ, “ಹಸಿದು ಹಲಸು ಉಂಡು ಮಾವು,”ಅನ್ನೋ ಆಡುನುಡಿ ಬೇರೆ ಇದೆ.ನಮ್ಮಪ್ಪ ಮಾತ್ರ ಈ ಮಾತಿಗೆ ಬೇರೆಯದೇ ರೀತಿ ಹೇಳ್ತಾ ಇದ್ರು.ಅವರ ಪ್ರಕಾರ ಅದು “ಹಿಸಿದು ಹಲಸು,ಉಂಡೆ ಮಾವು ಅಂತ ಆಗ್ಬೇಕು” ಅನ್ನೋರು.ಆದ್ರೆ ಹಸಿದು ಹಲಸು ಅನ್ನೋದೇ ಸರಿ ಅನ್ನೋದು ನನ್ನ ಅಭಿಪ್ರಾಯ.ಯಾಕೆಂದರೆ ಹಲಸು ತಿಂದ ಮೇಲೆ ಬೇರೆ ಏನನ್ನೂ ತಿನ್ನಬಾರದು, ಹೊಟ್ಟೆ ಉಬ್ಬರಿಸಿಕೊಂಡು ಹೊಟ್ಟೆ ನೋವು ಬರುತ್ತೆ ಅಷ್ಟೇ.ಅಲ್ಲದೆ ಹಲಸು ಇರುವಾಗ ಊಟ ಗೀಟ ಯಾರಿಗೆ ಬೇಕು.

ಹಲಸಿನಲ್ಲಿ ಹಣ್ಣು ಮಾತ್ರವಲ್ಲ, ಬೀಜ ಸಿಪ್ಪೆಗಳೂ ಪ್ರಯೋಜನಕಾರಿ. ಬೀಜವನ್ನು ನೀರೊಲೆ ಕೆಂಡದಲ್ಲಿ ಸುಟ್ಟು ತಿನ್ನುತ್ತಿದ್ದಾಗಿನ ಮಜ ಈಗಿಲ್ಲ. ಆದ್ರೂ ಬಿಡದೆ ಹೆಂಚಿನ ಮೇಲೆ ಹುರಿದು, ಇಲ್ಲವೇ ಸಾರಿಗೆ ಹಾಕಿ ಬೇಯಿಸಿ ಬಳಸುವೆ. ಸಿಪ್ಪೆಯಂತೂ ದನಕರುಗಳಿಗೆ ಬಹಳ ಪ್ರಿಯ. ಎಳೆಕಾಯಿಯನ್ನ ಕೊಡಗಿನಲ್ಲಿ ಗುಜ್ಜೆ ಅಂತ ಕರೀತಾರೆ.ಅದರ ಪಲ್ಯ,ಸಾರುಗಳು ಬಹಳ ರುಚಿ ಅಂದ್ರೆ ರುಚಿ. ನಮ್ಮ ಮೂಡುಸೀಮೆ ಕಡೆ ಹಲಸಿನಕಾಯಿ, ಹುರುಳಿಕಾಳು ಹಾಕಿ ಬೇಯಿಸಿ, ಅದರ ಕಟ್ಟನ್ನು ಕಾಸಿದಸಾರು ಮಾಡಿ, ಬೆಂದ ಹಲಸಿನಕಾಯಿ ಕಾಳಿಗೆ ಹುಚ್ಚೆಳ್ಳು ಪುಡಿ ಹಾಕಿ ತಾಳದ ಅನ್ನೋ ಪಲ್ಯ ಮಾಡ್ತರೆ. ಆದ್ರೆ ಈಗಿನ ಬಿಡುವಿಲ್ಲದ ಕಾಲದಲ್ಲಿ ಹಲಸಿನಕಾಯಿ ಅಂಟು ತೆಗೆದು ಸಣ್ಣಗೆ ಹೆಚ್ಚಲು ಸಮಯವೇ ಇಲ್ಲದೇ ತಾಳದ ಎಲ್ಲಾ ಮರೆತಂತೆಯೆ ಆಗಿ ಬಿಟ್ಟಿದೆ.

ನನ್ನ ಪ್ರಕಾರವಂತೂ ಹಲಸಿನ ಮರದಂತಹ ಚೆಲುವಾದ ಮರ ಇನ್ನೊಂದಿಲ್ಲ. ಅದರ ದಟ್ಟ ಹಸಿರಿನ ಎಲೆಗಳ ಬಣ್ಣ, ತುಂಬಿಕೊಂಡಂತಹ ಮರದ ಸೊಬಗು ಎಲ್ಲೂ ಕಾಣೆ. ಮರಮುಟ್ಟುಗಳಿಗೂ ಮರ ಒದಗಿ ಬರುತ್ತದೆ.ಕೆಲವು ಪಂಗಡಗಳಲ್ಲಿ ದೇವರ ಮನೆ ಬಾಗಿಲನ್ನು ಹಲಸಿನ ಮರದಲ್ಲೇ ಮಾಡಿಸುವುದು. ಅಂದ ಮೇಲೆ ದೇವಾನು ದೇವತೆಗಳು ಕೂಡ ಹಲಸು ಪ್ರಿಯರು ಎಂದಾಯಿತು. ಬೆಳೆಯಲು ಹೆಚ್ಚು ಖರ್ಚು ಕೂಡ ಬೇಡ. ಹೊಲದ, ತೋಟದ ಅಂಚಿನಲ್ಲಿ ನೆಟ್ಟರೆ ಆಯಿತು.

ಯಾವುದೇ ರೀತಿಯ ನೀರು ನಿಡಿ, ಗೊಬ್ಬರ ಗಿಬ್ಬರ ಬೇಡದೆ ಕಾಡು ಮರದಂತೆ ಹುಲುಸಾಗಿ ಬೆಳೆದು ನಿಲ್ಲುತ್ತದೆ. ಅದರ ಸೊಪ್ಪು ಆಡು ಕುರಿಗಳಿಗೆ ಒಳ್ಳೆಯ ಮೇವು, ತರಗು ಒಳ್ಳೆ ಗೊಬ್ಬರವಾಗುತ್ತದೆ. ತೋಟ , ಹೊಲ ಮಾತ್ರವಲ್ಲದೆ ಮನೆ ಸುತ್ತ ಕೈತೋಟಕ್ಕೆ ಅಂತ ಸ್ವಲ್ಪ ಜಾಗ ಇದ್ದರೂ ಕೂಡ ಬೆಳೆದು ಕೊಳ್ಳಬಹುದು. ಯಾರೋ ಪುಣ್ಯಾತ್ಮರು ತಮ್ಮ ಟೆರೇಸ್ ಗಾರ್ಡನ್ ನಲ್ಲಿ ಒಂದು ದೊಡ್ಡ ಡ್ರಮ್ ನಲ್ಲಿ ಹಲಸಿನ ಮರ ಬೆಳೆದು, ಅದು ಬಿಟ್ಟ ಹಣ್ಣಿನ ಪಟವನ್ನು ತಮ್ಮ ಮುಖ ಹೊತ್ತಿಗೆಯ ಗೋಡೆಯ ಮೇಲೆ ಜಂಬದಿಂದ ಪ್ರದರ್ಶಿಸಿದ್ದರು. ಪಟ್ಟಣ, ನಗರಗಳಲ್ಲಿ ಈಗೀಗ ಒಂದು ಕರಿಬೇವಿನ ಗಿಡ ನೆಡಲು ಕೂಡ ಜಾಗವಿಲ್ಲದಂತೆ ಮನೆ ಕಟ್ಟಿಕೊಳ್ಳುವ ಜನ ಹಲಸು ಇನ್ನೆಲ್ಲಿ ಬೆಳೆದಾರು.

ಇಷ್ಟೆಲ್ಲಾ ಗುಣಗಳುಳ್ಳ ಹಲಸಿನ ಮರವನ್ನೂ ಕೂಡ ಕಲ್ಪವೃಕ್ಷ ಎನ್ನಬೇಕು ಎನ್ನುವುದು ನನ್ನ ವಾದ. ಆದ್ರೆ ಪಾಪ ಅದರ ಪರವಾಗಿ ಮಾತನಾಡುವವರು ಯಾರೂ ಇಲ್ಲದೆ ತನ್ನ ಪಾಡಿಗೆ ತಾನು ಪರೋಪಕಾರ ಮಾಡುತ್ತಾ ಸುಮ್ಮನಿದೆ. ಅದು ತನ್ನ ತುತ್ತೂರಿ ತಾನೇ ಆಗಲಿ, ಇನ್ನೊಬ್ಬರಿಂದ ಆಗಲಿ ಊದಿಸುವುದಿಲ್ಲ. ಮಾವಿನ ಆರ್ಭಟ ಅದಕ್ಕಿಲ್ಲ. ಮಾವು ನೋಡಿ,ಹೂವು ಮರದಲ್ಲಿ ಅರಳಲು ಶುರುವಾದಾಗ. ಪರಿಮಳದ ಜಾಹೀರಾತು ಹರಡಲು ಶುರು ಮಾಡುವುದು, ಮಿಡಿಗಾಯಿ,ಹಸಿರುಗಾಯಿ,ಹಣ್ಣು ಎಲ್ಲಾ ಆಗಿ ಮಾರುಕಟ್ಟೆ ಯಿಂದ ನಿರ್ಗಮಿಸುವವರೆಗೂ ಏಕಚಕ್ರಾಧಿಪತಿಯ ಹಾಗೆ ಎಲ್ಲಾ ಕಡೆ ಸುಗಂಧ ಚೆಲ್ಲಾಡಿಯೇ ಚೆಲ್ಲಾಡಿ ಮೆರೆಯುವುದು.

ಹಲಸು ಹಾಗಲ್ಲ. ಅದು ಹೂ ತಳೆದರೂ,ಕಾಯಿ ಕಚ್ಚಿದರೂ, ಹಣ್ಣು ಬಲಿತು ಮಾಗುವ ವರೆಗೂ ಗುಟ್ಟು ಬಿಡದು.ಮಾವು ಕೊಳ್ಳಲು ಹೋದಾಗ ಎಷ್ಟೇ ಬಣ್ಣ, ವಾಸನೆ ನೋಡಿ ಖರೀದಿಸಿದರೂ ಕೊಂಡ ಎಲ್ಲವೂ ಸಿಹಿಯಾಗಿರುವುದು ಅನ್ನೋ ಗ್ಯಾರಂಟೀ ಈಗಿನ ಪೌಡರ್ ಉದುರಿಸಿ ಹಣ್ಣು ಮಾಡುವ ಕಾಲದಲ್ಲಿ ಇಲ್ಲವೇ ಇಲ್ಲ. ಹತ್ತು ಖರೀದಿಸಿದರೆ ಎಲ್ಲೋ ನಾಲ್ಕು ಸಿಹಿ ಹಣ್ಣು ದೊರೆತಾವು.ಹಲಸು ಹಾಗಲ್ಲ, ಪೌಡರ್ ಹಾಕಿ ಹಣ್ಣು ಮಾಡೊ ಪ್ರಮೇಯ ಇನ್ನೂ ಹಲಸಿಗೆ ಬಂದಿಲ್ಲ. ಹಣ್ಣಿನ ರುಚಿ ಹಾಳಾಗುವುದು ಇಲ್ಲವೇ ಇಲ್ಲ. ಈಗಿನ ರಸಗೊಬ್ಬರ, ಕೀಟನಾಶಕಗಳ ಹಾವಳಿಯಿಂದ ತಪ್ಪಿಸಿಕೊಂಡಿರುವುಗಳು ಹಲಸು, ಹುಣಸೆ ಈ ಎರಡು ಮಾತ್ರವೆಂದು ಕಾಣುತ್ತೆ.ಆದರೆ ಕಾಲ ಕ್ರಮೇಣ ಇವುಗಳು ಕೂಡ ಮಾರುಕಟ್ಟೆಯ ಲಾಭ ಕೋರತನಕ್ಕೆ ಬಲಿಯಾಗುತ್ತಾವೇನೋ. ಈಗೀಗ ಹಲಸಿನ ಸಂಸ್ಕರಣೆ ಉದ್ಯಮದ ರೂಪ ಪಡೆದು ಕೊಳ್ಳುತ್ತಿದೆ.

ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಕೊಂಡು ತೊಳೆಗಳ ಸಂಸ್ಕರಿಸಿ ಡಬ್ಬಗಳಲ್ಲಿ ತುಂಬಿ ಮಾರುತ್ತಾರೆ. ಹಲಸಿನ ಮೌಲ್ಯವರ್ಧನೆ ಮಾಡಿ ವಿವಿಧ ಖಾದ್ಯಗಳ ತಯಾರಿಸಿ ಮಾರುವ ಉದ್ಯಮಿಗಳು ಹುಟ್ಟಿ ಕೊಳ್ಳುತ್ತಿದ್ದಾರೆ. ಏನೇ ಆದರೂ ಮನೆಗೆ ಹಲಸು ತಂದು ಒಂದೆರಡು ದಿನ ಅದರ ಪರಿಮಳ ಮನೆಯಿಡಿ ಹರಡಲು ಬಿಟ್ಟು, ನಂತರ ಮೈ ಕೈ ಅಂಟು ಮಾಡಿಕೊಂಡು ಕುಯ್ದು, ಕುಯ್ಯತ್ತ ಇರುವಾಗಲೇ ತೊಳೆಗಳ ಬಿಡಿಸಿ ತಿನ್ನುವಾಗಿನ ಸುಖ ಟಿನ್ ನಿಂದ ಹಳೆಯ ತೊಳೆಗಳ ತೆಗೆದು ತಿನ್ನುವಲ್ಲಿ ಸಿಗುವುದೇ ಎನ್ನುವುದು ನನ್ನ ಪ್ರಶ್ನೆ.

‍ಲೇಖಕರು Admin

April 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Latha

    ತುಂಬಾ ಚೆಂದದ ಲೇಖನ
    ಹಲಸಿನ ಹಣ್ಣನ್ನು ತಿಂದಂತೆ ಆಯಿತು

    ಪ್ರತಿಕ್ರಿಯೆ
  2. km vasundhara

    ಬಹಳ ಚೆನ್ನಾಗಿ ವಿಸ್ತೃತವಾಗಿ ಬರೆದಿದ್ದೀರಿ ಸಮತಾ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: