ಡಾ. ಹಳೆಮನೆ ರಾಜಶೇಖರ
ರೂಪಾಂತರ
ಮೊಲೆ ಹಾಲು ಕುಡಿದ ನಾಲಗೆ
ಮೃದತ್ವ ಕಳೆದುಕೊಂಡು ಕಠಿಣ ಕಠಾರಿಯಾಗಿ
ಮೊಲೆ ಹಾಲ ತೊಟ್ಟುಗಳ ಸೀಳಿ ರಕ್ತ ಕುಡಿಯುತಿರುವುದು
ಯೋನಿಯಿಂದ ಹೊರಬಂದ ಜೀವ
ಉದ್ದಂಡ ಮಾರ್ತಾಂಡನಾಗಿ
ನವಿಲ ಗರಿಯ ಕತ್ತರಿಸುವ ಕುವರನಾಗಿ
ಗರ್ಭಕೋಶವ ಹೊಕ್ಕು, ಜೀವಗಳ ಮುಕ್ಕುತಿಹನು
ಪಾದಳಿಗೆ ಗೆರೆ ಹಾಕಿ ನಡೆಯುವದ ಕಲಿಸಿದ ಕೈಗಳು
ತ್ರಿಶೂಲಗಳಾಗಿ ಅಂಗಾಲುಗಳ ಸೀಳಿ ರಕ್ತ ಬಸೆದು
ಬಾಂಬುಗಳ ಬೀಜ ಬಿತ್ತಿ ಗಗನಯಾಮಿಯಾಗಿ
ಅಗ್ನಿ ಮಳೆಯ ಸುರಿಯುತಿಹದು

ಅಕ್ಷರಗಳ ಕಲಿಸಿದ ಧ್ವನಿಪೆಟ್ಟಿಗೆ ಕೂಗುಮಾರಿಯಾಗಿ
ಮಾತುಗಳನು ಮೊನಚು ಮಾಡಿ ಬಾವಕೋಶಗಳ
ಲಯಗಳನು ಮಣ್ಣು ಮಾಡಿ ಸ್ಮಶಾನದ ಹಾಡು ಹಾಡುತಿದೆ
ಮೃದುವಾದ ನಾಲಗೆಯ ಮೇಲೆ
ರಕ್ತ ಮೆತ್ತಿದ ಕಠಾರಿಯ ಹಿಡಿದು
ಶಾಸನಗಳ ಬರೆಯುತಿಹರು
ಜೀವ ಉಸಿರುವ ಹೃದಯಗಳು ಗಾಯಗೊಂಡು
ಅರೆಬರೆಯ ಜೀವ ಹಿಡಿದು ನರಳುತಿವೆ
ರಕ್ತ ನಾಳದ ಕೊಳವೆಗಳು ತೂತುಬಿದ್ದು
ರಣಕಹಳೆ ಊದುತಿವೆ.
ಯಂತ್ರ ಮಾಂತ್ರಿಕರು
ಕಪ್ಪು ನಾಲಿಗೆಯ ಬಿಳಿ ತಲೆಯ
ನಭೋವೀರರು ಉಕ್ಕಿನ ರೆಕ್ಕೆಯ ಹೊತ್ತು
ಥಳ ಥಳಿಪ ಝಗಮಗಿಸುವ ಕೆಂಡಗಳ ಹಿಡಿದು
ಕೊತಕೊತನೆ ಕುದಿಸಲು ಬರುತ್ತಿದ್ದಾರೆ
ಬಹು ನಾಲಿಗೆಗಳ ಸುಟ್ಟು ಒಂದೆ ನಾಲಿಗೆಯ
ಅಚ್ಚು ಹಾಕಿಸಿ ಅಚ್ಚಿಗೆ ತಕ್ಕಂತೆ
ನಾಲಗೆಯ ಓರೆ ಕೋರೆಯ ಕತ್ತರಿಸಿ
ಸಪೂಟ ಮಾಡುವವರು
ಆಗಾಗ ಧ್ವನಿ ಮಾಡುವ ನಾಲಗೆಗಳಿಗೆ
ಅರವಳಿಕೆ ನೀಡಿ, ನೋಯದಂತೆ ಬರೆ ಹಾಕಿ
ನಕ್ಷತ್ರಾಕಾರಕ್ಕೆ ಕೊರೆದು
ಮೋಡದಲ್ಲಿ ಬಿತ್ತನೆ ಮಾಡುವವರು

ಬಂದೂಕಿನ ಭದ್ರತೆಯಲ್ಲಿ ಅರಮನೆಗಳ ಕಟ್ಟಿ
ಸಾಲು ಸಾಲು ಗಂಜಿ ಕೇಂದ್ರಗಳ ನರ‍್ಮಿಸಿ
ಅರವಟಿಗೆಗಳ ಅರಳಿಸುವವರು
ಕೂಸುಗಳ ಕೊರಳ ಕೊಯ್ದು
ಮೃದು ಪಾದಗಳ ಬೆರಳ ಕತ್ತರಿಸಿ
ಚಿತ್ತ ಚಿತ್ತಾರದ ಗೊಂಬೆಗಳ ಮಾಡಿ
ಅರಮನೆಗೆ ಅಲಂಕಾರ ಮಾಡುವವರು
ಕಿವಿ ಮೂಗು ತುಟಿಗಳ ಹೊಲೆದು
ಉಸಿರಿಗೆ ವಿಷದ ಬಟ್ಟೆಯ ತೊಡಿಸಿ
ನರನಾಡಿಗಳ ಉರಿಗೊಳಿಸಲು
ಬೆಂಕಿ ಜ್ವಾಲೆಗಳ ಬಿತ್ತಿ ಬೆಳೆವವರು
ಕೈ ಕೈ ಕೂಡದ ಹಾಗೆ
ಹೃದಯ ಹೃದಯ ಬಡಿಯದ ಹಾಗೆ
ಗೋಡೆಗಳ ಕಟ್ಟುವವರು
ಕಣ್ಣುಗಳಿಗೆ ಕಳ್ಳಿ ಹಾಲು ಬಿಟ್ಟು
ಕನ್ನಡಕ ಕೊಡಿಸುವವರು
ಮೊಲೆ ತೊಟ್ಟುಗಳ ಹಿಂಡಿ
ಹಾಲುಂಡು ತೇಗುವವರು
ಶಾಪ
ಯೋನಿ ಬಟ್ಟಲಲ್ಲಿ ಬೆಂಕಿ ಮಳೆ ಸುರಿಸಿ
ಹಸಿರು ಉದ್ಯಾನ ಮಾಡುವ ತಾಯ್ಗಂಡರ
ಮರ್ಮಾಗಂಗಳಿಗೆ ಮುಳ್ಳು ಬೆಳೆದು
ರಕ್ತ ನಾಳಗಳು ಪಾಚಿಗಟ್ಟಿ
ಅಂಗಾಗಳೆಲ್ಲ ಲಾವರಸದಲ್ಲಿ ಕುದ್ದು ಹೋಗಲಿ
ಬೇಟೆಯಾಡುವ ಶೀಳು ನಾಯಿಗಳ
ತೊಗಲು ಮೂಸಿ ನೋಡುವ
ಮೋಹದ ಮನ್ಮಥಲೀಲೆ
ಅಗ್ನಿಕುಂಡದಲಿ ಆಹತಿಯಾಗಲಿ

ಸುಖಾಣುವಿನ ನಳಿಗೆಯಲ್ಲಿ ತೂರಲೆಣಿಸುವ
ತೋರು ಬೆರಳಿನ ಮುಖೇಡಿಗಳು
ಅಮಾಯಕ ಕಂದಮ್ಮಗಳ ಕೆಚ್ಚಲಿಗೆ
ಕತ್ತಿಯಾಡಿಸುವ ಅರ್ಬುದರು
ನರಕದ ಕೆಂಡದುಂಡೆಯ ನರ್ತಕಿಯರ
ಆಲಂಗನದಲಿ ಆವಿಯಾಗಲಿ
ಕೂಟಗಳ ಹುತ್ತ ಹೂಡಿ
ಅಂಗನೆಯರ ಹರಿದು ಮುಕ್ಕುವ
ರಕ್ತ ಸಿಕ್ತ ನಾಲಗೆಗಳು
ಕಾದ ಕಬ್ಬಿಣದ ಚೂರು ತಿಂದು
ಜ್ವಾಲಮುಖಿಯ ಹಾಸು ಹೊದ್ದು ಮಲಗಲಿ






0 Comments