ಹರಿ ಪರಾಕ್ ನೋಡಿದ ‘ಚಾರ್ಲಿ’

ಚಾರ್ಲಿ ಅನ್ನೋ ನಾಯಿ ಕಥೆ ಇರೋ ಈ ಸಿನಿಮಾ ಖಂಡಿತಾ ನಿಮ್ಮ ಮನಸ್ಸನ್ನೂ ಕಟ್ಟಿಹಾಕುತ್ತೆ.

ಹರಿ ಪರಾಕ್

ಈ ವಾರ ನಾನು ನೋಡಿದ ಸಿನಿಮಾ ಚಾರ್ಲಿ. ನಾವು ತಾಯಿ ಸೆಂಟಿಮೆಂಟ್ ಇರೋ ಬೇಕಾದಷ್ಟು ಸಿನಿಮಾ ನೋಡಿದ್ದೀವಿ. ಆದ್ರೆ ಇದು ನಾಯಿ ಸೆಂಟಿಮೆಂಟ್ ಇರೋ ಸಿನಿಮಾ. ನಾಯಕ ಪ್ರಧಾನ ಜೊತೆಗೆ ನಾಯಿ ಪ್ರಧಾನ ಚಿತ್ರ ಕೂಡ ಅನ್ನಬಹುದು.

ಪ್ರಾಣಿಗಳನ್ನ ಇಟ್ಕೊಂಡು ಸಿನಿಮಾ ಮಾಡೋದು ಹೊಸದೇನಲ್ಲ. ಹಳೆಯ ಕಾಲದಿಂದಲೂ ತೇರಿ ಮೆಹರ್ಬಾನಿಯಾ, ನಿಶ್ಯಬ್ಧ, ಇತ್ತೀಚಿನ ನಾನು ಮತ್ತು ಗುಂಡ ಚಿತ್ರದವರೆಗೆ ಅನೇಕ ನಾಯಿ ಪ್ರಧಾನ ಸಿನಿಮಾಗಳನ್ನು ನೋಡಿದ್ದೀವಿ. ಆದ್ರೆ ಪ್ರಾಣಿಗಳ ಸಿನಿಮಾದಲ್ಲೂ ಮನುಷ್ಯತ್ವ ತೋರಿಸುವ ನಿರ್ದೇಶಕ ಕಿರಣ್ ರಾಜ್ ಅವರ ಪ್ರಯತ್ನಕ್ಕೆ ಈ ಚಿತ್ರದಲ್ಲಿ ಗೆಲುವು ಸಿಕ್ಕಿದೆ ಅಂತ ಖಂಡಿತ ಹೇಳಬಹುದು. ಇಲ್ಲಿ ನಾಯಿ ಜೊತೆ ಅಷ್ಟೇ ಅಲ್ಲ, ಮನುಷ್ಯರ ನಡುವೆ ಇರೋ ಸಂಬಂಧಗಳನ್ನೂ ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ ಕಿರಣ್ ರಾಜ್.

ನಾಯಿಗಳು ಮನುಷ್ಯನನ್ನು ಕಾಯ್ತವೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಇಲ್ಲಿ ನಾಯಿಯನ್ನೇ ಕಾಯುವ ನಾಯಕ ಇರೋದು ವಿಶೇಷ. ನಾಯಿಗೊಂದು ನೋವು. ಅದನ್ನು ನೋಡಿ ನಾಯಕನಿಗೂ ನೋವು. ಈ ಜಾಯಿಂಟ್ ಪೆಯ್ನ್ ತೋರಿಸೋ ಚಾರ್ಲಿ ಸಿನಿಮಾ ನಾಯಿ ಮತ್ತು ನಾಯಕನ ಜತೆಗಿನ ಜಾಯಿಂಟ್ ವೆಂಚರ್.

ಕಿರಿಕಿರಿ ಮಾಡೋ ನಾಯಿ ಮೇಲೆ ಸಿಟ್ಟು ಮಾಡಿಕೊಂಡು, ಮನೆ ಕಾಯುವ ನಾಯಿನೇ, ನಿನ್ ಮನೆಕಾಯ ಅಂತ ಬಯ್ಕೊಂಡ್ ಓಡಾಡ್ತಾ ಇದ್ದ ನಾಯಕ, ಕೊನೆಗೆ ನಾಯಿ ಹಿಂದೆನೇ ಬಾಲ ಅಲ್ಲಾಡಿಸಿಕೊಂಡು ಹೋಗೋ ಲೆವೆಲ್ಲಿಗೆ ಬರ್ತಾನೆ. ಅದು, ನಾಯಿಯ ನಿಯತ್ತು ಮನುಷ್ಯನಲ್ಲೂ ಕಾಣೋ ಹೊತ್ತು. ಅದು ಈ ಚಿತ್ರದ ತಾಕತ್ತು.

ನಾನಂದ್ರೆ ನಿಂಗೆ ಎಷ್ಟು ಇಷ್ಟ ಚಾರ್ಲಿ ಅಂತ ಕೇಳುವ ನಾಯಕ ನಾಯಿಯ ಮಡಿಲಲ್ಲಿ ಮಗುವಾಗುತ್ತಾನೆ. ಹೀಗೇ, ನಾಯಿಯ ಮಮತೆಯಲ್ಲಿ ಕಳೆದು ಹೋಗುವ ನಾಯಕನಿಗೆ, ನಾಯಿಯ ಋಣತೀರಿಸುವ ಸಮಯವೂ ಬರುತ್ತೆ.

ಚಿತ್ರದ ಕೊನೆಯಲ್ಲಿ ನಾಯಿಗಳನ್ನು ಅಡಾಪ್ಟ್ ಮಾಡಿಕೊಳ್ಳಿ ಅನ್ನೋ ಸಂದೇಶ ಇದೆ. ಆದ್ರೆ ಹಾಗಂತ ಇದು ಅಡಾಪ್ಟೆಡ್ ಸ್ಟೋರಿ ಅಲ್ಲ. ನೇರವಾದ ಅಚ್ಚಕನ್ನಡದ ಚಿತ್ರ. ನಾಯಿ ಬಾಲ ಡೊಂಕಿರಬಹುದು. ಆದರೆ ಚಿತ್ರದ ನಿರೂಪಣೆ ಮಾತ್ರ ಸ್ರೈಟ್ ಆಗಿದೆ. ಅನಗತ್ಯ ಫ್ಲ್ಯಾಷ್ ಬ್ಯಾಕ್ ಇಲ್ಲ.
ಯಾರಾದ್ರೂ ಹಾಳಾಗೋಗ್ಲಿ ನಾನ್ ನೆಟ್ಗಿದ್ರೆ ಸಾಕು ಅಂತ ಬದುಕ್ತಾ ಇರೋ ನಾಯಕನ ಲೈಫಿಗೆ ಈ ನಾಯಿ ಎಂಟ್ರಿ ಕೊಡುತ್ತೆ. ಆಮೇಲೆ ನಾಯಿ ಬಾಲದ ಥರ ಇದ್ದ ಇವನ ಲೈಫೂ ನೆಟ್ಟಗಾಗುತ್ತೆ. ಆದ್ರೆ ವಿಧಿ ಸ್ವಲ್ಪ ಕೆಟ್ಟದಾಗುತ್ತೆ. ಇದು ಸಿನಿಮಾ ಕಥೆ.

ನಾಯಿ ಬೊಗಳಿದ್ರೆ ದೇವಲೋಕ ಹಾಳಾಗಲ್ಲ, ಅಲ್ಲದೆ ಬೊಗಳೋ ನಾಯಿ ಕಚ್ಚೋದಿಲ್ಲ ಅನ್ನೋದು ನಾಯಕನ ಪಾಲಿಸಿ. ಸುತ್ತಮುತ್ತಲಿನ ಜನರ ಜೊತೆಗೆ, ನಿಮ್ ಕೈಲಿ ನಂದೊಂದ್ ಕೂದಲೂ ಕಿತ್ಕೊಳ್ಳೋಕಾಗಲ್ಲ ಅಂದ್ಕೊಂಡು ತಲೆಕೆಡಿಸಿಕೊಳ್ಳದೇ ಬದುಕ್ತಾ ಇರೋ ನಾಯಕ, ತನ್ನ ನಾಯಿಯ ಕೂದಲು ಉದುರೋದು ನೋಡಿನೇ ಎಷ್ಟು ಕಂಗಾಲಾಗುತ್ತಾನೆ ಅನ್ನೋದೇ ಈ ಚಿತ್ರ ಬ್ಯೂಟಿ.

ಕೆಲವರು ನಾಯಿನಾ ವಾಕಿಂಗ್ ಕರ್ಕೊಂಡ್ ಹೋಗ್ತಾ ಇರುವಾಗ, ಅವರು ನಾಯಿನಾ ವಾಕಿಂಗ್ ಕರ್ಕೊಂಡ್ ಹೋಗ್ತಾ ಇದ್ದಾರೋ ಅಥವಾ ನಾಯಿನೇ ಅವರನ್ನ ವಾಕಿಂಗ್ ಕರ್ಕೊಂಡ್ ಹೋಗ್ತಾ ಇದೆಯೋ ಅಂತ ಅನುಮಾನ ಬರುತ್ತೆ. ಇಲ್ಲೂ ಅಷ್ಟೇ ನಾಯಿ ಕಥೆ ಹೇಳೋಕೆ ಹೊರಟಿರೋ ನಿರ್ದೇಶಕ ಕಿರಣ್ ರಾಜ್ ಮತ್ತು ರಕ್ಷಿತ್ ಶೆಟ್ಟಿ ನಾಯಿಯ ಕಥೆಯೊಂದಿಗೆ ಪಯಣ ಆರಂಭಿಸುತ್ತಾರೆ. ಆದರೆ ಸ್ವಲ್ಪ ಹೊತ್ತಾದ ಮೇಲೆ ಚಾರ್ಲಿ ಅನ್ನೋ ನಾಯಿಯೇ ಇಡೀ ಚಿತ್ರವನ್ನು ತನ್ನ ಬಾಯಿಯಲ್ಲೇ ಕಚ್ಚಿಕೊಂಡು ಮುಂದೆ ಹೋಗುತ್ತೆ. ಆ ಲೆಕ್ಕದಲ್ಲಿ ಈ ವಾಕಿಂಗ್ ಅನುಭವ ಕಿರಣ್ ರಾಜ್ ಮತ್ತು ರಕ್ಷಿತ್ ಶೆಟ್ಟಿ ಅವರಿಗೆ ಕೇಕ್ ವಾಕ್ ಆಗಿದೆ ಅನ್ನಬಹುದು.

ಕೊನೆ ಕೊನೆಗೆ, ಬದುಕೋಕೆ ಕಷ್ಟ ಪಡೋ ನಾಯಿಪಾಡು ನೋಡಿ ನಾಯಕನ ಮನಸ್ಸಲ್ಲಿ ಮಂಜು ಮುಸುಕಿದ ವಾತಾವರಣ. ಆದರೆ, ಅದು, ನಾಯಿಗೆ ತುಂಬಾ ಇಷ್ಟವಾದ ಮಂಜು ಮುಸುಕಿದ ವಾತಾವರಣ ತೋರಿಸಬೇಕೆಂಬ ಅವನ ಆಸೆ ಈಡೇರೋ ಸಮಯ ಕೂಡ.

ಕೆಜಿಎಫ್ ನಂಥ ನಾಯಕನ ವೈಭವೀಕರಣ ಇರೋ ಅಂಡರ್ ವರ್ಲ್ಡ್ ಕಥೆಗಳ ಮುಂದೆ ಚಾರ್ಲಿ ಅನ್ನೋ ಸಿನಿಮಾನ ಅಂಡರ್ ಡಾಗ್ ಅಂತ ಕೀಳಾಗಿ ನೋಡಿದವರಿಗೆ ಚಾರ್ಲಿ ದಿಟ್ಟ ಉತ್ತರ ನೀಡಿದೆ. ಜೊತೆಗೆ, ಪೆಟ್ ಗಳ ಬಗ್ಗೆ ಇರೋ ಸಿನಿಮಾಗಳನ್ನ ಕೇವಲವನ್ನಾಗಿ ನೋಡುವ ಪ್ರೇಕ್ಷಕರ ಅನಿಸಿಕೆಗೂ ಪೆಟ್ಟು ಕೊಟ್ಟಿದೆ ಚಾರ್ಲಿ.

ಸಿನಿಮಾ ನಿಜಕ್ಕೂ ವಿಭಿನ್ನ ಅನುಭವ ಕೊಡುತ್ತೆ. ಹಾಗಂತ ಸಿನಿಮಾದಲ್ಲಿ ಕೊರತೆಗಳೇ ಇಲ್ಲ ಅಂತ ಹೇಳೋಕಾಗಲ್ಲ. ನಾಯಿಯ ಕೊನೆಗಾಲ ಬರ್ತಾ ಇದ್ದಂತೆ, ಸಿನಿಮಾ ಕೊನೆ ಕೊನೆಯಲ್ಲಿ ಸ್ವಲ್ಪ ಉದ್ದ ಅನ್ನಿಸುತ್ತೆ. ನಾಯಿಯನ್ನ ಸಾಕು ಮಗು ಅಂದುಕೊಂಡಿರುವ ನಾಯಕನ ಕಥೆಯನ್ನ, ಪ್ರೇಕ್ಷಕ ಸಾಕು ಮಗಾ ಅನ್ನೋವರೆಗೂ ಎಳೆಯಬಾರದಿತ್ತು ಅನ್ನಿಸೋದು ಸಹಜ.

ನಾಯಿ ಕಥೆ ಹೇಳೋ ದಾರಿಯಲ್ಲಿ ತಮಿಳು ನಟ ಬಾಬಿ ಸಿಂಹ ಬರ್ತಾರೆ. ಚಾರ್ಲಿ ಅನ್ನೋ ಗ್ರಾಮಸಿಂಹದ ಕಥೆಯಲ್ಲಿ ಬಾಬಿ ಸಿಂಹನ ಅಷ್ಟುದ್ದದ ಎಪಿಸೋಡ್ ಬೇಕಿರಲಿಲ್ಲ. ಡ್ಯಾನಿಷ್ ಸೇಠ್ ಸೀನನ್ನ ಕೂಡಾ ಸಣ್ಣದಾಗಿ ಆಗಿ ಹೇಳಿ ಮುಗಿಸಬಹುದಿತ್ತು. ನಾಯಿಪಾಡು ನೋಡೋಕಾಗದೆ, ಅದರ ಜೊತೆ ಸ್ನೋ ಬೀಳುವ ಜಾಗಕ್ಕೆ ಹೋಗೋ ಸಮಯದವರೆಗೆ ಸಿನಿಮಾ ಸ್ವಲ್ಪ ಸ್ಲೋ ಅನ್ನಿಸಬಹುದು. ಆದ್ರೆ ಇಲ್ಲೊಂದು ಮಾತು. ಸಿನಿಮಾ ಉದ್ದ ಆದಷ್ಟೂ ನಾಯಿ ಜಾಸ್ತಿ ಹೊತ್ತು ಬದುಕಿರುತ್ತಲ್ಲ ಅಂತ ಸಮಾಧಾನ ಮಾಡಿಕೊಳ್ಳುವ ಮಟ್ಟಕ್ಕೆ ಸಿನಿಮಾದಲ್ಲಿ ಇಲ್ವಾಲ್ವ್ ಆದವರಿಗೆ, ಆ ಮಟ್ಟಿಗೆ ನಾಯಿಗಳನ್ನು ಪ್ರೀತಿಸುವ ಎಮೋಷನಲ್ ಪ್ರೇಕ್ಷಕರಿಗೆ ಇದರಿಂದ ಅಂಥ ತೊಂದರೆ ಏನೂ ಆಗಲ್ಲ.

ಚಿತ್ರದ ಛಾಯಾಗ್ರಹಣ ನಿರ್ದೇಶಕರ ಮೂಡ್ ಅನ್ನ ಚೆನ್ನಾಗಿ ತೋರಿಸಿದೆ. ಆದರೆ ಚಿತ್ರದ ತುಂಬಾ ಇರುವ ಹಾಡುಗಳು, ಬಿಟ್ ಸಾಂಗ್ಸ್ ಸ್ವಲ್ಪ ನಿರಾಸೆ ಮೂಡಿಸುತ್ತವೆ. ಅದರಲ್ಲೂ ಚಿತ್ರದ ಹೈಲೈಟ್ ಅನ್ನಿಸಿಕೊಳ್ಳಬೇಕಾಗಿದ್ದಂಥ ಒಂದು ಮೈಂಡ್ ಬ್ಲೋಯಿಂಗ್ ಅನಿಸುವಂಥ ಹಾಡು ಮಿಸ್ ಆಗಿದೆ ಅಂದ್ರೆ ತಪ್ಪಿಲ್ಲ.

ಅಭಿನಯದ ವಿಷಯಕ್ಕೆ ಬಂದ್ರೆ ರಕ್ಷಿತ್ ಶೆಟ್ಟಿ ನಾಯಿಯ ಮಡಿಲಲ್ಲಿ ಕಳೆದುಹೋಗಿದ್ದಾರೆ. ಪ್ರೇಕ್ಷಕ ಅವರ ಅಭಿನಯ ನೋಡಿ ಕಳೆದು ಹೋಗುತ್ತಾನೆ. ಅಮ್ಮ ಹಿಟ್ಲರ್ ಅಂಕಲ್ ಅಂತ ಹೇಳಿಕೊಟ್ರೂ, ನಾಯಕನನ್ನು ಪ್ರೀತಿಸುವ ಪಕ್ಕದ ಮನೆ ಮಗುವಿನ ಥರ ಪ್ರೇಕ್ಷಕನಿಗೂ ಅವರನ್ನ ಇಷ್ಟಪಡದೇ ಇರೋಕಾಗಲ್ಲ.

ನಮ್ಮಲ್ಲಿ ಈ ಥರ ಸಿನಿಮಾಗಳು ಅಂದ್ರೆ ಲೋ ಬಜೆಟ್ ಸಿನಿಮಾಗಳು ಅಂತನೇ ಅರ್ಥ. ಆದರೆ ಈ ಚಿತ್ರದ ನಿರ್ಮಾಪಕರು ಚಿತ್ರದ ನಾಯಕನ ಥರ ನಾಯಿಗೆ ಬರೀ ಇಡ್ಲಿ, ಚಟ್ನಿ ಅಷ್ಟೇ ಹಾಕಿಲ್ಲ. ಪೆಡಿಗ್ರೀ ಥರ ಡಾಗ್ ಫುಡ್ ಹಾಕಿದ್ದಾರೆ. ಹಾಗಾಗಿ ಈ ಚಿತ್ರ ಪ್ರೇಕ್ಷರಿಗೆ ಬಜೆಟ್ ವಿಷಯದಲ್ಲೂ ರಸದೌತಣ ಆಗಿದೆ. ಚಾರ್ಲಿ ಸಿನಿಮಾ ಬೀದಿ ನಾಯಿ ಥರ ಬಡವಾಗಿದೆ ಅನ್ನಿಸದೆ, ಒಳ್ಳೆ ಬ್ರೀಡ್ ನಾಯಿ ಥರ ಶ್ರೀಮಂತವಾಗಿದೆ.

ಒಟ್ನಲ್ಲಿ, ಕಿರಣ್ ರಾಜ್ ಮತ್ತು ರಕ್ಷಿತ್ ಶೆಟ್ಟಿ ಅವರು ತೋರಿಸಿರೋ ಈ ಚಾರ್ಲಿ ಅನ್ನೋ ಡಾಗ್ ಶೋ ಖಂಡಿತಾ ಒಂದು ಒಳ್ಳೆ ಎಮೋಷಲ್ ಸಿನಿಮಾ ಆಗಿದೆ.

ಕೊನೆಗೊಂದು ಮಾತು,
ಮನುಷ್ಯ ತನ್ನ ಸೆಕ್ಯುರಿಟಿಗೋಸ್ಕರ ಮನೆ ಮುಂದೆ ನಾಯಿ ಕಟ್ಟಿ ಹಾಕ್ತಾನೆ. ಆದ್ರೆ ಚಾರ್ಲಿ ಅನ್ನೋ ನಾಯಿ ಕಥೆ ಇರೋ ಈ ಸಿನಿಮಾ ಖಂಡಿತಾ ನಿಮ್ಮ ಮನಸ್ಸನ್ನೂ ಕಟ್ಟಿಹಾಕುತ್ತೆ.

‍ಲೇಖಕರು avadhi

June 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: