‘ಹರಿವು’ Film Making: ಅಪ್ಪನ ಪೆನ್ಷನ್ ಹಣವನ್ನು ವ್ಯರ್ಥಮಾಡಿದ್ದು ಹೀಗೆ..

ಭಾಗ – 3

“ಸಿನಿಮಾ ಹುಚ್ಚಿನ ಹುಡುಗನೊಬ್ಬ ಕನಸುಗಳ ಮೂಟೆ ಹೊತ್ತು ಬೆಂಗಳೂರಿಗೆ ಬಂದವನು, ಚಿತ್ರಕಲೆ ಕಲಿತು ಅಷ್ಟಕ್ಕೇ ನಿಲ್ಲದೆ ಚಿತ್ರ ನಿರ್ಮಿಸುವ ಕನಸನ್ನು ನನಸು ಮಾಡಿದ ಕತೆಯೇ ಒಂದು ರೋಚಕ ಸಿನಿ ಪಯಣ.

ಹರಿವು ಚಿತ್ರ ಹರಿದು ಬಂದ ಕತೆಯ ಮೂರನೇ ಭಾಗ ಇಲ್ಲಿದೆ..

ಕಥೆ ಹೇಳ್ತಾರೆ ನಿರ್ದೇಶಕ ಮಂಜುನಾಥ ಸೋಮಕೇಶವ ರೆಡ್ಡಿ..ಅರ್ಥಾತ್..ಮಂಸೋರೆ..!!

ಅಕ್ಕನ ಮದುವೆಗೆ ಎಂದು ಎತ್ತಿಟ್ಟಿದ್ದ ಅಪ್ಪನ ಪೆನ್ಷನ್ ಹಣವನ್ನು ವ್ಯರ್ಥಮಾಡಿದ್ದು ಹೀಗೆ..

ಬೆಂಗಳೂರಿಗೆ ವಾಪಸ್ಸು ಬರುವವರೆಗೆ ಹಣ ಹೊಂದಿಸಬಹುದು ಎಂಬ ಭರವಸೆ ಇತ್ತು. ಆದರೆ ಅದು ಬರೀ ಭರವಸೆಯಾಗೇ ಉಳಿಯಿತು. ಎಲ್ಲೂ ಹಣ ಸಿಗಲಿಲ್ಲ. ಮುಂದೇನೂ ಮಾಡುವುದೋ ತೋಚಲಿಲ್ಲ.

ಇದರ ಮಧ್ಯೆ ಚಿತ್ರೀಕರಣದ ಅವಧಿಯಲ್ಲಿ ಉಳಿದೆಲ್ಲಾ ನಟರಿಗಿಂತ ವಿಜಯ್ ಅವರ ನಟನೆ ಮತ್ತು ಅವರ ಡೆಡಿಕೇಷನ್ ತುಂಬಾ ಪ್ರಭಾವ ಬೀರಿತ್ತು. ಚಿತ್ರೀಕರಣಕ್ಕೂ ಮೊದಲೇ ಅವರಿಗೆ ಒಂದಿಷ್ಟು ಗೌರವ ಸಂಭಾವನೆ ನೀಡುವ ಮಾತಾಗಿತ್ತು. ಈಗ ಚಿತ್ರೀಕರಣ ನಿಂತೋಗಿದೆ. ಅಕಸ್ಮಾತ್ ಮುಂದೆ ಚಿತ್ರೀಕರಣ ಶುರುವಾದಾಗ ಎಲ್ಲಿ ವಿಜಯ್ ಸಿಗುವುದಿಲ್ಲವೋ ಎಂಬ ಆತಂಕದಿಂದ ಒಂದಷ್ಟು ಹಣವನ್ನು ಹೊದಿಸಿಕೊಂಡು ವಿಜಯ್ ಅವರಿಗೆ ನೀಡಲು ಹೋದೆ. ಆದರೆ ಹಣ ಪಡೆಯಲು ನಿರಾಕರಿಸಿದ ವಿಜಯ್.. ಅದರ ಬದಲಿಗೆ, ಮುಂದೆ ಯಾವತ್ತೇ ಚಿತ್ರೀಕರಣ ಪ್ರಾರಂಭವಾದರೂ ಆ ಪಾತ್ರ ತನಗೇ ನೀಡಬೇಕು ಎಂದು ಕೇಳಿಕೊಂಡರು. ಆ ಪ್ರಯತ್ನದಲ್ಲಿ ನನಗೆ ಸಿಕ್ಕ ಸಕಾರಾತ್ಮಕ ಸ್ಪಂದನೆ ಅದೊಂದೇ.

ಆದರೆ ಅದೊಂದರಿಂದ ಹಣವನ್ನು ಹೊಂದಿಸುವುದು ಸಾಧ್ಯವಾಗುವುದಿಲ್ಲವಲ್ಲ. ಎಲ್ಲಾ ಮೂಲಗಳಿಂದಲೂ ಹಣ ಹೊಂದಿಸುವುದು ಅಸಾಧ್ಯವಾಯಿತು. ಸಹಾಯ ಮಾಡುವುದಾಗಿ ಹೇಳಿದ್ದ ಸ್ನೇಹಿತ ಪೂರ್ಣವಾಗಿ ಕೈಚೆಲ್ಲಿದ. ಇದು ನನ್ನನ್ನು ಸರಿಸುಮಾರು ಮೂರು ತಿಂಗಳ ಕಾಲ ಡಿಪ್ರೆಷನ್‍ಗೆ ತಳ್ಳಿತು.

ಡಿಪ್ರೆಷನ್‍ಗೆ ಹೋಗಲು ಎರಡು ಮುಖ್ಯ ಕಾರಣಗಳು ಒಂದು ಮೊದಲ ಸಿನೆಮಾ ಹಣವಿಲ್ಲದೇ ನಿಂತಿದ್ದು. ಮತ್ತೊಂದು ಅಕ್ಕನ ಮದುವೆಗೆ ಎಂದು ಎತ್ತಿಟ್ಟಿದ್ದ ಅಪ್ಪನ ಪೆನ್ಷನ್ ಹಣವನ್ನು ಹೀಗೆ ವ್ಯರ್ಥಮಾಡಿದ್ದು. ಈ ವಿಷಯ ಮನಸ್ಸನ್ನು ಎಷ್ಟು ಗಾಢವಾಗಿ ಆಕ್ರಮಿಸಿಕೊಂಡಿತೆಂದರೆ.. ಮುಂದೆ ಸಣ್ಣಪುಟ್ಟ ಸಿನೆಮಾ ಕೆಲಸಗಳನ್ನು ಮಾಡಲಾಗದೇ ಸಿನೆಮಾರಂಗವನ್ನೇ ಬಿಟ್ಟುಬಿಡುವ ನಿರ್ಧಾರ ಕೈಗೊಂಡು ಸೀದಾ ದಿನಪತ್ರಿಕೆಯೊಂದರಲ್ಲಿ ಸಬ್‍ಎಡಿಟರ್ ಆಗಿ ಕೆಲಸಕ್ಕೆ ಸೇರಿಕೊಂಡೆ.

ಸಿನೆಮಾದ ಎಲ್ಲ ಸಂಬಂಧಗಳನ್ನು ಕಳೆದುಕೊಂಡು, ಸಿನೆಮಾ ರಂಗದಲ್ಲಿದ್ದಾಗ ಹೊತ್ತಿನ ಪರಿವೇ ಇಲ್ಲದೇ ದಿನಗಟ್ಟಲೇ ಕೆಲಸ ಮಾಡುತ್ತಿದ್ದವನು, ಒಬ್ಬ ಸಾಮಾನ್ಯ 10 ರಿಂದ 5 ಘಂಟೆಯ ಕೆಲಸಕ್ಕೆ ನನ್ನ ನಾನು ನಿರ್ಬಂಧಿಸಿಕೊಂಡೆ. ಆದರೆ ಇದು ಬಹಳ ದಿನ ಏನೂ ನಡೆಯಲಿಲ್ಲ. ಕೇವಲ ಆರೇ ತಿಂಗಳಲ್ಲಿ ನನಗೆ ಅರ್ಥವಾಗಿದ್ದು, ನನ್ನ ಜೀವನ ನಾಲ್ಕು ಗೋಡೆಗೆ ಸೀಮಿತವಾಗಿ ಬದುಕುವುದಲ್ಲ. ನಾನು ಮುಳುಗುವುದಾದರೆ ಅದು ಸಿನೆಮಾರಂಗದಲ್ಲೇ ಎಂದು ನಿರ್ಧರಿಸಿ ನಾನು ಮಾಡುತ್ತಿದ್ದ ಕೆಲಸಕ್ಕೆ ರಾಜಿನಾಮೆ ನೀಡಿ ಮತ್ತೆ ನನ್ನ ಹಳೆಯ ವೃತ್ತಿಯಾದ ಕಲಾನಿರ್ದೇಶನಕ್ಕೆ ಇಳಿದೆ. ಒಂದೇ ವರ್ಷದಲ್ಲಿ ಕಲಾನಿರ್ದೇಶನದ ಮೂಲಕ ಹಲವು ಸಮಸ್ಯೆಗಳಿಂದ ಹೊರಬಂದು ಮೊದಲಿನಂತಾದೆ. ಇದೆಲ್ಲವುಗಳ ನಡುವೆ ಹರಿವು ಗುಪ್ತವಾಗಿ ಮನಸ್ಸಲ್ಲೇ ಹರಿಯುತ್ತಿತ್ತು.

ನಾನು ನನ್ನ ಎಲ್ಲಾ ಸಮಸ್ಯೆಗಳಿಂದ ಬಹುತೇಕ ಹೊರಬಂದಿದ್ದ ಸಮಯ ಅದು. ಅದೇ ಸಮಯಕ್ಕೆ ವಿಜಯ್ ಮತ್ತೆ ಬಂದರು.. ಹೇಗಾದರು ಮಾಡಿ ಹರಿವು ಸಿನೆಮಾ ಮಾಡೋಣ, ಆ ಶರಣಪ್ಪನ ಪಾತ್ರ ಇನ್ನಿಲ್ಲದಂತೆ ಕಾಡುತ್ತಿದೆ ಎಂದು ಹೇಳಿ ನನ್ನೊಳಗೆ ಗುಪ್ತವಾಗಿ ಹರಿಯುತ್ತಿದ್ದ ಹರಿವು ಹೊರಬರುವಂತೆ ಮಾಡಿದರು. ಕೂಡಲೇ ಈ ಹಿಂದೆ ಚಿತ್ರೀಕರಿಸಿದ್ದ ದೃಶ್ಯಗಳಲ್ಲಿ ಕೆಲವೊಂದನ್ನು ಆಯ್ದು ಟೀಸರ್ ಒಂದನ್ನು ಸಿದ್ದಪಡಿಸಿ.. ಮತ್ತೆ ನಿರ್ಮಾಪಕರನ್ನು ಹುಡುಕುವ ಕೆಲಸ ಪ್ರಾರಂಭಿಸಿದೆವು.

ನಿರ್ಮಾಪಕರನ್ನು ಹುಡುಕುವುದು ಎಷ್ಟು ದುಸ್ತರ ಎಂಬುದು ಅರಿವಾಗಿದ್ದೆ ಆಗ ನನಗೆ. ನಾನು ವಿಜಯ್ ಅವರು ಸಾಕಷ್ಟು ಅಲೆದಾಡಿದರೂ ಎಲ್ಲೂ ನಮಗೆ ಸಕಾರಾತ್ಮಕ ಭರವಸೆ ಸಿಗಲಿಲ್ಲ. ಆದರೆ ಪ್ರಯತ್ನ ಬಿಡದೇ ಹುಡುಕುತ್ತಲೇ ಇದ್ದೆವು.

ಅದೊಂದು ದಿನ ನನ್ನ ಆತ್ಮೀಯರಾದ ಗಿರೀಶ್ ವಿ ಗೌಡ ರವರು ತಮ್ಮ ಆಫೀಸಿಗೆ ನನ್ನ ಕರೆಸಿಕೊಂಡರು. ಅವರು ಚಿತ್ರಸಂತೆ ಎಂಬ ಸಿನೆಮಾ ಪತ್ರಿಕೆಯನ್ನು ನಡೆಸುತ್ತಿದ್ದರು. ಅದರ ಜೊತೆಗೆ ಅವರು ಖಾಸಗಿ ಛಾನೆಲ್ ಒಂದಕ್ಕೆ ನಡೆಸಿಕೊಡುತ್ತಿದ್ದ ಜಾಕ್‍ಪಾಟ್ ಎಂಬ ಫ್ಯಾಮಿಲಿ ಶೋಗೆ ನಾನು ಕಲಾನಿರ್ದೇಶನ ಮಾಡಿದ್ದೆ. ಹಾಗೂ ಹರಿವು ಈ ಹಿಂದೆ ಚಿತ್ರೀಕರಣ ನಡೆಸಿದ ಸಂದರ್ಭದಲ್ಲಿ ಸಹಾಯ ಕೂಡ ಮಾಡಿದ್ದರು. ಅವರಿಗೆ ಹರಿವು ಬಗ್ಗೆ ಪೂರ್ಣ ಮಾಹಿತಿಯೂ ಇತ್ತು.

ಅವರು ಆಫೀಸಿಗೆ ಕರೆಸಿಕೊಂಡ ಉದ್ದೇಶ ಅವರ ಸಿನೆಮಾ ಪತ್ರಿಕೆಯ ವತಿಯಿಂದ ಕಡಿಮೆ ವೆಚ್ಚದಲ್ಲಿ ಸಿನೆಮಾ ಒಂದನ್ನು ನಿರ್ಮಾಣ ಮಾಡುವ ಉದ್ದೇಶವಿದ್ದು, ಅವರ ನಿರ್ಮಾಣದಲ್ಲಿ ಮೊದಲ ಸಿನೆಮಾ ಮಾಡುವ ಅವಕಾಶ ನನಗೆ ಕೊಡಲು ನನ್ನ ಕರೆಸಿದ್ದರು.

ಒಂದೆರೆಡು ಘಂಟೆಗಳ ಮಾತುಕತೆಯ ನಂತರ ಸಿನೆಮಾ ಮಾಡುವ ನಿರ್ಣಯವಾಗಿ ಅದನ್ನು ಖಾತ್ರಿಪಡಿಸಲು ಕೂಡಲೇ 1001 ರೂಪಾಯಿ ಹಣವನ್ನು ನನ್ನ ಕೈಲಿರಿಸಿದರು. ಆಗ ಆದ ಹರ್ಷವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಇನ್ನು ಈ ಸಿನೆಮಾ ಆಗುವುದೇ ಇಲ್ಲವೇನೋ ಎಂಬ ಆತಂಕದಲ್ಲಿದ್ದ ನನಗೆ ಆ ಸಣ್ಣ ಮೊತ್ತವೇ ದೊಡ್ಡದಾಗಿ ಕಂಡಿತ್ತು.

ಕೂಡಲೇ ವಿಜಯ್‍ಗೆ ಈ ವಿಷಯ ತಿಳಿಸಿ.. ಮರುದಿನದಿಂದಲೇ ಎಲ್ಲಾ ಕೆಲಸಗಳಿಗೂ ಚಾಲನೆ ನೀಡಿದೆ. ಈ ಬಾರಿ ನನಗೆ ದೊಡ್ಡ ಶಕ್ತಿಯಾಗಿ ವಿಜಯ್ ಇದ್ದರು. ತಾಂತ್ರಿಕ ಕೆಲಸಗಳನ್ನು ಯೋಜಿಸುವ ಹೊಣೆ ನಾನು ತೆಗೆದುಕೊಂಡಿದ್ದರೆ. ನಟರನ್ನು ಹುಡುಕುವ ಕೆಲಸ ವಿಜಯ್ ಹೆಗಲೇರಿತು. ಅವರು ನಾಟಕಗಳನ್ನು ಮಾಡುತ್ತಿದ್ದ ಸಂಚಾರಿ ನಾಟಕ ತಂಡದಲ್ಲಿ ನಮ್ಮ ಸಿನೆಮಾಗೆ ಬೇಕಾದ ಬಹುತೇಕ ಕಲಾವಿದರು ದೊರಕಿದರು.

ಈ ಹಿಂದೆ ಚಿತ್ರೀಕರಣದಲ್ಲಿದ್ದ ನಟರಲ್ಲಿ ವಿಜಯ್‍ರವರನ್ನು ಹೊರತುಪಡಿಸಿ ಉಳಿದವರೆಲ್ಲಾ ಪೂರ್ಣವಾಗಿ ಹೊಸಬರು. ಆದರೆ ರಂಗಭೂಮಿಯಲ್ಲಿ ಅಪಾರ ಅನುಭವವುಳ್ಳವರಾಗಿದ್ದರು.

ಮುಖ್ಯವಾಗಿ ಅರವಿಂದ್ ಕುಪ್ಲೀಕರ್ ಸುರೇಶನ ಪಾತ್ರಕ್ಕೆ ಆಯ್ಕೆಯಾದರು. ಅರವಿಂದ ಸ್ಪಂದನ ರಂಗತಂಡದ ಖಾಯಂ ಸದಸ್ಯ ಹಾಗೂ ಸಿನೆಮಾ ನಿರ್ದೇಶನದಲ್ಲಿ ಪದವಿ ಪಡೆದವರು.

ಗಂಗವ್ವ ಪಾತ್ರಕ್ಕೆ ಆಯ್ಕೆಯಾದ ಶ್ವೇತಾ ಮುಂಬೈನ ಅನುಪಮ್ ಖೇರ್ ರವರ ಸಂಸ್ಥೆಯಲ್ಲಿ ತರಬೇತಿ ಪಡೆದು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಪ್ರತಿಭಾವಂತೆ. ಈ ಬಾರಿಯ ತಾಂತ್ರಿಕ ತಂಡದಲ್ಲಿ ಸೇರ್ಪಡೆಗೊಂಡ ಇಬ್ಬರು ಹೊಸ ಮುಖಗಳು ಮಹಾವೀರ್ ಸಾಬಣ್ಣವರ್ ಹಾಗೂ ಚರಣ್. ಮಹಾವೀರ್ ಪುಣೆಯ ಪ್ರತಿಷ್ಠಿತ ಎಫ್‍ಟಿಐಐ ಅಲ್ಲಿ ಶಬ್ದವಿನ್ಯಾಸದಲ್ಲಿ ಪದವಿ ಪಡೆದವರು.

ಹರಿವು ಸಿನೆಮಾವನ್ನು ಸಂಪೂರ್ಣವಾಗಿ ಸಿಂಕ್ ಸೌಂಡ್‍ಅಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದೆ. ಹಾಗಾಗಿ ಗೆಳೆಯ ಸಂದೀಪ್ ಕುಮಾರ್ ಅದಾಗಲೇ ತಮ್ಮ ಚುರುಕುಮಾರ ಸಿನೆಮಾದಲ್ಲಿ ನೈಜ ಶಬ್ದವನ್ನು ಬಳಸಿ ಚಿತ್ರೀಕರಣ ಮಾಡಿದ್ದರು. ಅದು ನಾನೂ ಮಾಡಬಹುದು ಎಂಬ ಧೈರ್ಯ ನೀಡಿತ್ತು. ಇನ್ನು ಹಿನ್ನೆಲೆ ಸಂಗೀತಕ್ಕೆ ಚರಣ್. ಚರಣ್‍ರವರು ಅದಾಗಲೇ ಎರಡು ಸಿನೆಮಾಗಳಿಗೆ ಕೆಲಸ ಮಾಡಿದ್ದರು ಒಂದೂ ಬಿಡುಗಡೆ ಆಗಿರಲಿಲ್ಲ. ಅವರ ಮೊದಲ ಭೇಟಿಯಲ್ಲಿ ಅವರಿಗೆ ಸಂಗೀತದ ಮೇಲಿರುವ ಹಿಡಿತ ಜ್ಞಾನ ನನ್ನ ಅಪಾರವಾಗಿ ಆಕರ್ಷಿಸಿತು. ನಮ್ಮ ಬಳಿ ಇರುವ ಅತ್ಯಲ್ಪ ಹಣದಲ್ಲೇ ನಮಗೆ ಹಿನ್ನೆಲೆ ಸಂಗೀತವನ್ನು ಮಾಡಿಕೊಡಲು ಚರಣ ಒಪ್ಪಿದರು. ಈ ಹಿಂದೆ ಛಾಯಾಗ್ರಾಹಕನಾಗಿದ್ದ ಆನಂದ್ ಸುಂದರೇಶ್ ಮತ್ತೆ ಕ್ಯಾಮರಾಗೆ ಹೆಗಲು ಕೊಟ್ಟ.

ಈ ಹಿಂದೆ ಸಾಕಷ್ಟು ತಯಾರಿ ಇಲ್ಲದೆ ಆಗಿದ್ದ ಕಷ್ಟಗಳ ಅರಿವು ಹಾಗೂ ಈ ಮಧ್ಯದ ಕಾಲಾವದಿಯಲ್ಲಿ ಪ್ರತಿಷ್ಟಿತ ಜಾಹಿರಾತು ನಿರ್ಮಾಣ ಸಂಸ್ಥೆಗೆ ಕಲಾ ನಿರ್ದೇಶನದ ಜೊತೆಗೆ ನಿರ್ಮಾಣ ವಿನ್ಯಾಸದಲ್ಲೂ ಕೆಲಸ ಮಾಡಿದ್ದಿದು, ಹರಿವು ಪೂರ್ವ ತಯಾರಿಗೆ ಸಾಕಷ್ಟು ಉಪಯೋಗವಾಯಿತು. ಎಲ್ಲವೂ ಮುಂಚಿತವಾಗಿಯೇ ಸಿದ್ದಪಡಿಸಿಕೊಂಡೇ. ಜೊತೆಗೆ ಚಿತ್ರೀಕರಣದ ಸ್ಥಳಗಳನ್ನು ಮುಂಚಿತವಾಗಿಯೇ ನೋಡಿ ಖಚಿತಪಡಿಸಿಕೊಂಡು ಚಿತ್ರೀಕರಣ ಹೇಗೆ ಮಾಡಬೇಕೆಂಬ ಚರ್ಚೆಗಳೂ ಆಯಿತು. ಗಂಗಾವತಿಯ ಬಳಿ ಚಿತ್ರೀಕರಣ ಸ್ಥಳಗಳನ್ನು ಆಯ್ಕೆ ಮಾಡಲು ಅನುಮತಿ ಪಡೆಯಲು ಗಿರೀಶ್‍ರ ಸ್ನೇಹಿತರಾದ ಮಂಜುನಾಥ ರವರು ಸಹಾಯ ಮಾಡಿದರು.

ಎಲ್ಲ ಸಿದ್ದತೆಗಳು ಪೂರ್ಣಗೊಂಡು ಒಂದು ಶುಭದಿನ ಚಿತ್ರೀಕರಣ ಪ್ರಾರಂಭವಾಯಿತು. ಆದರೆ ಸಮಸ್ಯೆಗಳು ಮಾತ್ರ ನನ್ನ ಬೆನ್ನು ಬಿಟ್ಟಿರಲಿಲ್ಲ. ಕಾರಣ ಮತ್ತೆ ಅದೇ `ಹಣ’ ಗಿರೀಶ್ ಗೌಡರು ತುಂಬಾ ಉತ್ಸುಕತೆಯಿಂದಲೇ ಸಿನೆಮಾ ನಿರ್ಮಾಣ ಆರಂಭ ಮಾಡಿದರೂ ಪತ್ರಿಕೆ ನಡೆಸುವ ವಿಷಯದಲ್ಲಿ ಸಮಸ್ಯೆಯಾಗಿ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಯಿತು. ಆದರೆ ಅಷ್ಟು ಸಮಸ್ಯೆಗಳ ನಡುವೆಯೂ ಚಿತ್ರೀಕರಣ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಹೇಳಿ ಅವರ ಶಕ್ತಿ ಮೀರಿ ಹಣವನ್ನು ಹೊಂದಿಸಲು ಪ್ರಯತ್ನಿಸುತ್ತಿದ್ದರು. ಈ ವಿಷಯ ಮೊದಲಿಗೆ ವಿಜಯ್‍ಗೆ ನಾನು ತಿಳಿಸಿರಲಿಲ್ಲ, ನಾಲ್ಕೈದು ದಿನ ಚಿತ್ರೀಕರಣ ನಡೆದ ನಂತರ ಅವರಿಗೆ ತಿಳಿಸಿದೆ.

ಈ ಹಿಂದೆ ಸಿನೆಮಾ ನಿಂತಿದ್ದು.. ಆನಂತರ ದಿನಗಳು ಸವೆಸಿದ್ದ ದಿನಗಳು ನೆನಪಿಗೆ ಬಂದು ಕೂಡಲೇ ತಮ್ಮ ಸ್ನೇಹಿತರನ್ನೆಲ್ಲಾ ಸಂಪರ್ಕಿಸಿದರು. ಅವರಲ್ಲಿ ಒಬ್ಬರಾದ ನವೀನ್ ಪಾಟೀಲರು ಮುಂದೆ ಬಂದು ಒಂದಷ್ಟು ಹಣವನ್ನು ನೀಡಿ ಈ ಸಿನೆಮಾದ ಸಹನಿರ್ಮಾಪಕರಾದರು. ಅವರು ಬಂದದ್ದು ಚಿತ್ರೀಕರಣ ಮುಂದುವರೆಯಲು ತುಂಬಾನೇ ಸಹಾಯವಾಯಿತು.

ಬೆಂಗಳೂರಿನ ಭಾಗದ ದೃಶ್ಯಗಳನ್ನೆಲ್ಲಾ ಅಂದುಕೊಂಡ ಸಮಯದಲ್ಲಿ ಮುಗಿಸಿ ಗಂಗಾವತಿಯೆಡೆಗೆ ಪಯಣ ಶುರುವಾಯಿತು. ಈ ಹಿಂದೆ ಮಾಡಿದ್ದ ತಪ್ಪುಗಳಿಂದ ಸಾಕಷ್ಟು ಕಲಿತಿದ್ದ ನಾನು, ಈ ಬಾರಿ ಪ್ರಯಾಣ ಆರಂಭವಾಗುವುದಕ್ಕು ಒಂದು ದಿನ ಮೊದಲೇ ಕಾರಿನಲ್ಲಿ ಕೂರುವ ಕಲಾವಿದರನ್ನೆಲ್ಲ ಕರೆಸಿ, ಆನಂದ್ ಹಾಗೂ ಮಹಾವೀರರನ್ನು ಕರೆಸಿ.. ಸಂಪೂರ್ಣವಾಗಿ ಚಿತ್ರೀಕರಿಸ ಬೇಕಾದ ದೃಶ್ಯಗಳು, ಎಷ್ಟು ದೃಶ್ಯಗಳು, ಎಷ್ಟು ಷಾಟ್ಸ್, ಕಲಾವಿದರ ಮೂಮೆಂಟ್, ಟೈಮಿಂಗ್, ಅವಧಿ ಎಲ್ಲವನ್ನು ಅವರಿಗೆ ವಿವರಿಸಿ, ಅವರ ಸಲಹೆಗಳನ್ನು ಪಡೆದು ಮೂರು ದಿನಗಳಲ್ಲಿ ಅದೆಲ್ಲವನ್ನು ಹೇಗೆ ಚಿತ್ರೀಕರಿಸಬಹುದು ಎಂದು ಒಂದು ಯೋಜನೆ ಸಿದ್ದಪಡಿಸಿದೆವು.

ಇದು ಎಷ್ಟರಮಟ್ಟಿಗೆ ಸಹಾಯವಾಯಿತೆಂದರೆ ಮೂರುದಿನಗಳ ಅವಧಿಯಲ್ಲಿ ನಾವಂದುಕೊಂಡ ಸಮಯಕ್ಕಿಂತ ಒಂದು ಗಂಟೆಗೂ ಮುಂಚಿತವಾಗಿ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿ ನಾವು ಗಂಗಾವತಿಯತ್ತ ಹೊರಟೆವು.

ಗಂಗಾವತಿಯ ಭಾಗವೂ ನಾವಂದುಕೊಂಡ ಸಮಯದಲ್ಲಿ ಒಂದು ದಿನಕ್ಕೂ ಮೊದಲೇ ಸಂಪೂರ್ಣವಾಗಿ ಚಿತ್ರೀಕರಣ ಮುಗಿಯಿತು. ಇದಕ್ಕೆ ಕಾರಣ ನಾವು ಚಿತ್ರೀಕರಣಕ್ಕೂ ಮೊದಲೇ ಅಲ್ಲಿಗೆ ಹೋಗಿ ಪ್ರತಿಯೊಂದು ಸನ್ನಿವೇಶವನ್ನು ಚರ್ಚಿಸಿ, ಪ್ರತಿಯೊಂದು ಶಾಟ್ಸ್ ಹೇಗೆ ಬರಬೇಕೆಂದು ಮೊದಲೇ ನಿರ್ಧರಿಸಿ ಅದರಂತೆ, ಮೊದಲೇ ನಿರ್ಧರಿಸುವ ಯೋಜನೆಗೆ ಬದ್ದರಾಗಿ ಚಿತ್ರೀಕರಣ ಮಾಡಿದ್ದು ನಮಗೆ ತುಂಬಾ ಸಹಾಯವಾಯಿತು.

ಇದಕ್ಕಿಂತ ಹೆಚ್ಚಾಗಿ ಇಡೀ ಸಿನೆಮಾದಲ್ಲಿ ನಟಿಸಿರುವ ಪ್ರತಿಯೊಬ್ಬರೂ ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದರಿಂದ ಪ್ರತಿಯೊಬ್ಬರು .. ತಮಗೆ ಸಿಕ್ಕ ಪಾತ್ರಗಳಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡು, ತೆರೆಯ ಮೇಲೆ ಆ ಪಾತ್ರವೇ ಆಗಿ ಹೋದರು. ಅವರೆಲ್ಲರ ಅನುಭವ ಡೆಡಿಕೇಷನ್ ಚಿತ್ರೀಕರಣ ಅಂದುಕೊಂಡ ಸಮಯಕ್ಕೆ ಮುಗಿಸಲು ಸಾಧ್ಯವಾಯಿತು.

ಗಂಗಾವತಿಯ ಚಿತ್ರೀಕರಣವೇನೋ ಅಂದುಕೊಂಡಂತೆ ನಡೆಯುತ್ತಿತ್ತು, ಆದರೆ ಹಣಕಾಸಿನ ಸಮಸ್ಯೆ ಅಲ್ಲೂ ಬಿಟ್ಟಿರಲಿಲ್ಲ. ಬೆಂಗಳೂರಿಂದ ತಂದ ಹಣ ಅದಾಗಲೇ ಮುಗಿದಿತ್ತು. ಚಿತ್ರೀಕರಣದ ನಡುವೆ ನಾವು ಯಾವ ಪರಿಸ್ಥಿತಿ ಮುಟ್ಟಿದ್ದೆವೆಂದರೆ ಒಂದು ದಿನ ನಡು ಮಧ್ಯಾಹ್ನ ಊಟಕ್ಕೆಂದು ಹೋಟೆಲಿನ ಬಳಿ ನಿಂತಾಗ ನಮ್ಮ ಕೈಲಿದ್ದಿದು 20 ಜನರಿಗೆ ಊಟಕ್ಕಾಗುವಷ್ಟು ಮಾತ್ರ. ನಮ್ಮ ತಂಡ 40 ಮಂದಿ. ಸಿನೆಮಾದ ನಿರ್ಮಾಣ ನಿರ್ವಹಣೆ ಮಾಡುತ್ತಿದ್ದ ಧನುಶ್ ಈ ವಿಷಯವನ್ನು ನನಗೆ ಮತ್ತು ವಿಜಯ್ ಅವರಿಗೆ ತಿಳಿಸಿದ.

ಕೂಡಲೇ ನಾವೊಂದು ಉಪಾಯ ಮಾಡಿ, ಚಿತ್ರೀಕರಣದ ಬಗ್ಗೆ ಸ್ವಲ್ಪ ಚರ್ಚೆ ಮಾಡುವುದಿದೆ ಎಂದು ಎಲ್ಲರನ್ನು ಗುಂಪು ಸೇರಿಸಿ ಇಬ್ಬಿಬ್ಬರಿಗೇ ಊಟ ಮಾಡಿಸತೊಡಗಿದೆವು. ಹೀಗೆ ಇಬ್ಬಿಬ್ಬರೇ ಹೋಗಿ ಬಂದಿದ್ದರಿಂದ ಕೆಲವರು ಕಡಿಮೆ ಊಟ ಮಾಡಿದ್ದರಿಂದಾಗಿ ನಮಗೆ ಇರುವ ಹಣದಲ್ಲಿ ಎಲ್ಲರೂ ಊಟ ಮಾಡುವಂತಾಯಿತು. ಕೊನೆಗೆ ಉಳಿದವರು ನಾನು ವಿಜಯ್ ಹಾಗೂ ಧನುಶ್. ನಮ್ಮ ಬಳಿ ಉಳಿದದ್ದು 20 ರೂಪಾಯಿಗಳು. ಅದರಲ್ಲಿ ಒಂದು ಪ್ಲೇಟ್ ಮೊಸರನ್ನ ತಗೊಂಡು ಮೂರು ಜನ ಹಂಚಿಕೊಂಡೆವು.

ಅವತ್ತು ಸಂಜೆ ಹೋಟೆಲಿಗೆ ಬರುವ ವೇಳೆಗೆ ಬೆಂಗಳೂರಿನಿಂದ ಹಣ ಬಂದಿದ್ದರಿಂದ ಮುಂದೆ ಊಟದ ವಿಷಯದಲ್ಲಿ ಯಾವ ಸಮಸ್ಯೆಯೂ ಇಲ್ಲದೇ ಚಿತ್ರೀಕರಣವು ಮುಗಿಯಿತು.

ಅಲ್ಲಿಂದ ವಾಪಸ್ಸು ಬೆಂಗಳೂರಿಗೆ ಬಂದು ಬ್ಯಾಲೆನ್ಸ್ ಮಾಂಟೇಜ್ ಶಾಟ್ಸ್ ತೆಗೆದು ಕುಂಬಳಕಾಯಿ ಹೊಡೆದು ಚಿತ್ರೀಕರಣವನ್ನು ಪೂರ್ತಿಗೊಳಿಸುವುದು ಎಂದು ಮೊದಲೇ ನಿರ್ಧರಿತವಾಗಿತ್ತು. ಆದರೆ ಕುಂಬಳಕಾಯಿ ಹೊಡೆಯುವ ಸಮಯಕ್ಕೆ ಸಿನೆಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಅವರ ಸಂಭಾವನೆಯನ್ನು ಕೊಡಬೇಕಿತ್ತು. ಮತ್ತದೇ ಹಣದ ಸಮಸ್ಯೆ.

ಆಗ ನಮಗೆ ದೊರಕಿದ್ದು ಮತ್ತೊಬ್ಬ ಸಹ ನಿರ್ಮಾಪಕ ವಿಜಯ್‍ರ ಆತ್ಮೀಯ ಗೆಳೆಯ ಮಹೇಶ್ ಮತ್ತು ಅವರ ತಮ್ಮ. ಸರಿಯಾಗಿ ಕುಂಬಳಕಾಯಿ ಹೊಡೆಯುವ ವೇಳೆಗೆ ಹಣ ತಂದು ಎಲ್ಲರಿಗೂ ಅವರವರ ಸಂಭಾವನೆ ನೀಡಿ, ಕೆಲಸ ಮಾಡಿದ ತೃಪ್ತಿಯ ಜೊತೆಗೆ ಸಂಭಾವನೆ ಸಿಕ್ಕ ಖುಷಿ ಎಲ್ಲರಿಗೂ ದೊರಕಿತ್ತು.

ನಾಳೆಗೆ ಮುಂದುವರಿಯುವುದು..

‍ಲೇಖಕರು Avadhi GK

February 7, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. subhash

    ದಯವಿಟ್ಟು ಒಂದನೇ ಭಾಗದ ಲಿಂಕ್ ಕೊಡಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: