“ಹರಿವು” ಹರಿಯಿತು ಹೀಗೇ…!!

ಸಿನಿಮಾ ಹುಚ್ಚಿನ ಹುಡುಗನೊಬ್ಬ ಕನಸುಗಳ ಮೂಟೆ ಹೊತ್ತು ಬೆಂಗಳೂರಿಗೆ ಬಂದವನು, ಚಿತ್ರಕಲೆ ಕಲಿತು ಅಷ್ಟಕ್ಕೇ ನಿಲ್ಲದೆ ಚಿತ್ರ ನಿರ್ಮಿಸುವ ಕನಸನ್ನು ನನಸು ಮಾಡಿದ ಕತೆಯೇ ಒಂದು ರೋಚಕ ಸಿನಿ ಪಯಣ.

ಹರಿವು ಚಿತ್ರ ಹರಿದು ಬಂದ ಕತೆಯನ್ನು ಇವತ್ತಿನಿಂದ ನಾಲ್ಕು ಕಂತುಗಳಲ್ಲಿ ಹೇಳ್ತಾರೆ..

ಮಂಜುನಾಥ ಸೋಮಕೇಶವ ರೆಡ್ಡಿ..ಅರ್ಥಾತ್..ಮಂಸೋರೆ..!!

ಸಿನೆಮಾ ಹುಚ್ಚಿನ ಚಿತ್ರಕಲೆಯ ಸ್ಟೂಡೆಂಟು..

ಸಿನೆಮಾ ಎಂಬ ಕನಸುಗಳ ಮಾರಾಟದ ಜಗತ್ತಿಗೆ ಪ್ರವೇಶಿಸಬೇಕೆಂಬುದು ಬಾಲ್ಯದ ಕನಸೇನೂ ಆಗಿರಲಿಲ್ಲ. ಎಲ್ಲರಂತೆ ನಾನೂ ಜನಪ್ರಿಯ ಸಿನೆಮಾಗಳನ್ನು ರಂಜನೆಗಾಗಿ ನೋಡುತ್ತಾ ಬೆಳೆದು ಬಂದವನು. ಅದರಲ್ಲೂ ಗಡಿನಾಡಾದ ಕೋಲಾರದ ಗಡಿ ಭಾಗದಲ್ಲಿ ಎಲ್ಲರಂತೆ ಹೆಚ್ಚಾಗಿ ತೆಲುಗು ಸಿನೆಮಾಗಳನ್ನು ನೋಡುತ್ತಾ, ಆ ಪಾತ್ರಗಳ/ ನಾಯಕರ ಅಭಿಮಾನವನ್ನು ಬೆಳೆಸಿಕೊಳ್ಳುತ್ತಲೇ ಜೀವನ ನಡೆದಿತ್ತು. ಪಿಯುಸಿಯಲ್ಲಿ ಫೇಲಾದ ನಂತರ ಆಕಸ್ಮಿಕವಾಗಿ ಚಿತ್ರಕಲೆಯ ಪಯಣ ಶುರುವಾಯಿತು.

ಚಿತ್ರಕಲೆ ಅಭ್ಯಾಸ ಮಾಡಲು ಗಡಿನಾಡಿನಿಂದ ಬೆಂಗಳೂರಿಗೆ ಬರುವಂತಾಯಿತು. ಚಿತ್ರಕಲಾ ವ್ಯಾಸಂಗದ ಅವಧಿಯಲ್ಲಿ ನನ್ನ ಹಿರಿಯ ಮಿತ್ರರು ಕೆಲವರು ಅದಾಗಲೇ ಕಿರುತೆರೆ, ಸಿನೆಮಾಗಳಲ್ಲಿ ಕಲಾ ನಿರ್ದೇಶನದಲ್ಲಿ ಕೆಲಸ ಮಾಡಿದ್ದರು. ಅವರು ಹೇಳುತ್ತಿದ್ದ ರೋಚಕ ಅನುಭವಗಳೂ ಕೂಡ ನನ್ನನ್ನು ಸಿನೆಮಾ ಜಗತ್ತಿಗೆ ಪ್ರವೇಶಿಸಲು ಪ್ರೇರೇಪಿಸಿರಲಿಲ್ಲ.

ಆದರೆ ಆರ್ಥಿಕವಾಗಿ ಸ್ವಾವಲಂಬಿಯಾಗಲು ಪ್ರಯತ್ನಿಸುತ್ತಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ಜಾಹೀರಾತೊಂದಕ್ಕೆ ಕಲಾನಿರ್ದೇಶನದಲ್ಲಿ ಸಹಾಯಕನಾಗಲು ಅವಕಾಶ ಒದಗಿ ಬಂದಿತ್ತು. ಅಲ್ಲಿಂದ ಚಿತ್ರೀಕರಣದ ನಂತು ಬೆಸೆಯಿತು. ಅದು ಪೂರ್ಣಪ್ರಮಾಣದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡಿತು. ಆದರೆ ಅದು ಕಲಾನಿರ್ದೇಶನಕ್ಕಷ್ಟೇ ಸೀಮಿತವಾಯಿತೇ ಹೊರತು ನಿರ್ದೇಶನದ ಕನಸಿಗೆ ಪ್ರೇರಣೆ ಏನೂ ನೀಡಿರಲಿಲ್ಲ. ನಾನೂ ನಿರ್ದೇಶಕನಾಗಲು ಪ್ರಯತ್ನಿಸಬಹುದು, ಸಿನೆಮಾ ಎಂಬ ಜಗತ್ತು ಬರೀ ತೆಲುಗು, ಕನ್ನಡ, ಹಿಂದೀ ತಮಿಳು ಸಿನೆಮಾ ಅಷ್ಟೇ ಅಲ್ಲ.

ಅದರ ಜಗತ್ತು ವಿಶಾಲವಾದುದು. ಅಲ್ಲಿ ಜನಪ್ರಿಯ ರಂಜನೆಯ ಮಾದರಿಯನ್ನು ಮೀರಿ ಬೆಳೆದಿರುವ ಗಂಭೀರವಾಗಿ ತೊಡಗಿಸಿಕೊಳ್ಳಲು ಬೇಕಾದ ವಿಶಾಲ ವೇದಿಕೆ ಇರುವ ಜಗತ್ತು ಎಂಬುದು ಅರಿವಿಗೆ ಬಂದಿದ್ದು, ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಚಿತ್ರಕಲಾ ಪರಿಷತ್ತಿಗೆ ಸೇರಿದಾಗ. ಚಿತ್ರಕಲಾ ಪರಿಷತ್ತಿನಲ್ಲಿ ಕಲಾ ಇತಿಹಾಸ ಭೋದನೆ ಮಾಡುತ್ತಿದ್ದ ಎಚ್. ಎ. ಅನಿಲ್ ಕುಮಾರ್‍ರವರು ಕಲಾ ಇತಿಹಾಸದ ಜೊತೆಜೊತೆಗೆ ಸಿನೆಮಾ ಜಗತ್ತನ್ನು ಪರಿಚಯಿಸಿ, ಇದೂ ಕೂಡ ದೃಶ್ಯಕಲೆಯಲ್ಲಿ ಗಂಭೀರವಾದ ಮಾಧ್ಯಮ ಎಂಬುದನ್ನು ತಿಳಿಸಿಕೊಟ್ಟರು.

ಇದರ ಜೊತೆಗೆ ಜಗತ್ತಿನ ವಿವಿದ ಭಾಷೆಗಳ ಸಿನೆಮಾಗಳನ್ನು ಕೊಟ್ಟು, ಸಿನೆಮಾ ನೋಡುವ ವಿಧಾನವನ್ನು ಕಲಿಸಿಕೊಟ್ಟರು. ಅನಿಲ್ ಸರ್ ಜೊತೆಗಿನ ಚರ್ಚೆಗಳು ಸ್ನಾತಕೋತ್ತರ ಪದವಿ ಮುಗಿಸುವುದರ ಒಳಗೆ ದೃಶ್ಯಕಲೆಯ ಜೊತೆಜೊತೆಗೆ ಸಿನೆಮಾ ಮಾಧ್ಯಮವನ್ನು ಗಂಭೀರವಾಗಿ ಪರಿಗಣಿಸಲು ಕಾರಣವಾಯಿತು. ಅಲ್ಲಿಂದ ಸಿನೆಮಾ ನಿರ್ದೇಶನ ಮಾಡುವ ಕನಸೂ ಮೊಳಕೆಯೊಡೆಯಿತು.

ನಿರ್ದೇಶನದ ಕನಸೇನೋ ಚಿಗುರತೊಡಗಿತ್ತು, ಆದರೆ ನನ್ನ ಮೊದಲ ಸಿನೆಮಾ ಯಾವುದು? ಇದು ದೊಡ್ಡ ಪ್ರಶ್ನೆಯಾಗಿ ಕನಸಿಗಿಂತ ದೊಡ್ಡ ಹೆಮ್ಮರವಾಗಿ ಬೆಳೆಯತೊಡಗಿತು. ಒಂದೆರೆಡು ಕತೆಗಳು ಸಿದ್ದವಾಯಿತು. ಅದಕ್ಕೆ ಪೂರಕವಾಗಿ ಓಡಾಟ, ಚಿತ್ರೀಕರಣ ಜಾಗಗಳ ಹುಡುಕಾಟ, ಕತೆಗೆ ಪೂರಕವಾದ ಮಾಹಿತಿ ಕ್ರೋಡೀಕರಣ ಅಂತೆಲ್ಲಾ ಒಂದೆರೆಡು ವರ್ಷ ಸಮಯವೂ ಕಳೆಯಿತೂ. ಆದರೆ ಅದಕ್ಕೆ ನಿರ್ಮಾಪಕ ಯಾರು? ಜೊತೆಗೆ ನಿರ್ಮಾಣ ವಿನ್ಯಾಸ ಹೇಗೆ ಎಂಬೆಲ್ಲಾ ಪ್ರಶ್ನೆಗಳು ಎದುರಾಗಿ ಕ್ರಮೇಣ ನಿರ್ದೇಶನದ ಕನಸನ್ನು ಬದಿಗಿರಿಸಿ, ಕಲಾ ನಿರ್ದೇಶನವನ್ನೇ ಮುಂದುವರೆಸಿದೆ.

ಇದರ ಮಧ್ಯೆ ಜಗತ್ತಿನ ಸಾರ್ವಕಾಲಿಕವಾಗಿ ಶ್ರೇಷ್ಟ ಸಿನೆಮಾಗಳಲ್ಲಿನ ರಿಯಾಲಿಸಂನ ಪ್ರಭಾವಕ್ಕೆ ಒಳಗಾಗಿದ್ದ ನಾನು ನನ್ನ ಅಪ್ಪನೊಂದಿಗೆ ಸಿನೆಮಾ ನೋಡುವಾಗ ಅವರು ಭಾರತೀಯ ಜನಪ್ರಿಯ ಸಿನೆಮಾಗಳಲ್ಲಿನ್ನ ಉತ್ಪ್ರೇಕ್ಷಿತ ಭಾವತೀವ್ರತೆಯ ಸನ್ನಿವೇಶಗಳಿಗೆ ಸ್ಪಂದಿಸಿ ಕಣ್ನೀರು ಸುರಿಸುವುದನ್ನು ಕಂಡು ರೇಗಿಸುತ್ತಿದ್ದೆ. ಆ ಕಾರಣಕ್ಕೆ ನಮ್ಮಿಬ್ಬರ ನಡುವೆ ಸಣ್ಣ ವಾಗ್ವಾದಗಳು ನಡೆದು, ಕೊನೆಗೆ ನಾನೂ ಒಂದಿನ ಸಿನೆಮಾ ಮಾಡುತ್ತೇನೆ. ಉತ್ಪ್ರೇಕ್ಷೆಯೇ ಇಲ್ಲದೇ ಪ್ರೇಕ್ಷಕನನ್ನು ಬಲವಂತವಾಗಿ ಭಾವತೀವ್ರತೆಗೆ ಒಳಗಾಗಿಸದೇ ದೃಶ್ಯಗಳನ್ನು ನೋಡುತ್ತಲೇ ರಿಯಾಲಿಸಂ ಒಳಗೇ ಪ್ರೇಕ್ಷಕನೊಳಗಿನ ಭಾವನೆಗಳಿಗೆ ಸ್ಪಂದಿಸುವ ಸಿನೆಮಾ ಮಾಡುತ್ತೇನೆ ಎಂದು ಶಪಥ ಮಾಡುತ್ತಿದ್ದೆ. ಆದರೆ ಇದು ಮಾತುಗಳಿಗೆ ಸೀಮಿತವಾಗಿತ್ತೇ ಹೊರತು ಆ ನಿಟ್ಟಿನಲ್ಲಿ ನಾನು ಯಾವ ಪ್ರಯತ್ನವೂ ಮಾಡಿರಲಿಲ್ಲ.

ಮುಂದೆ ಜೀವನದಲ್ಲಿ ಪ್ರಮುಖ ತಿರುವು ಎದುರಾಗಿದ್ದು ಅಪ್ಪ ತೀರಿಕೊಂಡಾಗ. ಅದರ ಜೊತೆಗೆ ಮನೆಯ ಜವಾಬ್ದಾರಿ. ಈ ಆಘಾತದಿಂದ ಚೇತರಿಸಿಕೊಳ್ಳಲು ಸರಿಸುಮಾರು ಆರು ತಿಂಗಳೇ ಬೇಕಾಯಿತು. ಕನಸುಗಳೆಲ್ಲ ಬದಿಗಿರಿ ಜೀವನ ನಿರ್ವಹಣೆಯನ್ನೇ ಮುಖ್ಯವಾಗಿಸಿಕೊಂಡು ಕಲಾನಿರ್ದೇಶನ ಮುಂದುವರೆಸಿದೆ. ಇನ್ನೂ ಅಪ್ಪನ ನೆನಪಲ್ಲೇ ಜೀವನ ಮುಂದೂಡುತ್ತಿದ್ದ ನನಗೆ ಫೇಸ್‍ಬುಕ್ಕಿನಲ್ಲಿ ಸ್ನೇಹಿತರೊಬ್ಬರು ಹಂಚಿಕೊಂಡಿದ್ದ ಲೇಖನವೊಂದು ಗಮನ ಸೆಳೆಯಿತು.  ಅದು ಡಾ. ಆಶಾ ಬೆನಕಪ್ಪನವರು ಪ್ರಜಾವಾಣಿಗಾಗಿ ಬರೆದ ಲೇಖನ. ಬಡವರ ಬದುಕು ತುಟ್ಟೀ, ಸಾವೂ ಇನ್ನೂ ತುಟ್ಟೀ. ಆ ಲೇಖನದಲ್ಲಿ ಆರೋಗ್ಯಕ್ಕೆ ಸಂಭಂಧಿಸಿದ ವಿಚಾರದಲ್ಲಿ ಬಡವರು ಏನೆಲ್ಲಾ ಅವಸ್ಥೆ ಪಡುತ್ತಾರೆ.

ಅವರಿಗಿರುವ ಮಾಹಿತಿಯ ಕೊರತೆ ಹಾಗೂ ಬಡತನದಿಂದಾಗಿ ಹೇಗೆಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಲೇಖನ. ಇದರಲ್ಲಿ ಒಬ್ಬ ತಂದೆ ತನಗಿರುವ ಒಬ್ಬನೇ ಮಗನನ್ನು ಉಳಿಸಿಕೊಳ್ಳಲು ಇರೋ ಒಂದೆಕೆರೆ ಜಮೀನನ್ನು ಮಾರಿ ಬೆಂಗಳೂರಿಗೆ ಬಂದಿರುತ್ತಾನೆ. ಆದರೆ ಬೆಂಗಳೂರಿಗೆ ಬರುವ ಹೊತ್ತಿಗೆ ಸಮಯ ಮೀರಿರುತ್ತದೆ. ಮಗ ಹೆಚ್ಚು ದಿನ ಉಳಿಯುವುದಿಲ್ಲ ಎಂಬ ವಿಷಯವನ್ನು ವೈದ್ಯರು ತಿಳಿಸುತ್ತಾರೆ. ಆದರೆ ಮಗನ ಹೊರತಾಗಿ ಆ ತಂದೆಗೆ ಯಾರೂ ಇರುವುದಿಲ್ಲ. ಹೆಂಡತಿಯೂ ಅದಾಗಲೇ ತೀರಿಕೊಂಡಿರುತ್ತಾಳೆ.

ಹಾಗಾಗಿ ಊರಿಗೆ ಹೋಗುವ ಬದಲು ಮಗ ಬದುಕಿರುವಷ್ಟು ದಿನ ಆಸ್ಪತ್ರೆಯಲ್ಲೇ ಇರಲಿ ಎಂದು ನಿರ್ಧರಿಸಿ ವಾಣಿವಿಲಾಸ ಆಸ್ಪತ್ರೆಯಲ್ಲಿ ದಾಖಲಿಸಿ ಮಗನೊಂದಿಗೆ ಉಳಿದುಕೊಳ್ತಾನೆ. ತಾನು ತಂದಿದ್ದ ಹಣದಲ್ಲಿ ಒಂದು ರೂಪಾಯಿಯೂ ತನಗೋಸ್ಕರ ಖರ್ಚುಮಾಡದೇ ಊರಿಂದ ತಂದಿದ್ದ ರಾಗಿಯಲ್ಲಿ ಸ್ವತಃ ಗಂಜಿ ಮಾಡ್ಕೊಂಡು ಬದುಕುತ್ತಾ. ತನ್ನ ಬಳಿ ಇರುವ ಅಷ್ಟೂ ಹಣವನ್ನು ಮಗನ ಚಿಕಿತ್ಸೆಗೆ ವಿನಿಯೋಗಿಸುತ್ತಾನೆ. ಸ್ವಲ್ಪ ದಿನದ ನಂತರ ಮಗ ತೀರಿ ಕೊಳ್ತಾನೆ. ಆಗ ಅಪ್ಪನ ಬಳಿ ಮಗನನ್ನು ಊರಿಗೆ ತೆಗೆದುಕೊಂಡು ಹೋಗುವಷ್ಟು ಹಣವಿರುವುದಿಲ್ಲ.

ಆದರೆ ಮಗನನ್ನು ತನ್ನೂರಿನ ಮಣ್ಣಲ್ಲೇ ಮಣ್ಣು ಮಾಡಬೇಕೆಂಬ ನಿರ್ಧಾರ ಮಾಡಿದ್ದ ತಂದೆ ಒಂದು ಕಬ್ಬಿಣದ ಪೆಟ್ಟಿಗೆಯನ್ನು ತಂದು ಅದರಲ್ಲಿ ಮಗನನ್ನು ಮಲಗಿಸಿಕೊಂಡು ಊರಿಗೆ ಹೋಗುತ್ತಾನೆ. ಇದು ಒಟ್ಟಾರೆ ಅಂಕಣ. ಅಪ್ಪನ ಸಾವಿನ ನೆನಪಲ್ಲೇ ಇದ್ದ ನನಗೆ ಇದರಲ್ಲಿ ಹಲವು ವಿಷಯಗಳು ನನ್ನ ಜೀವನದ ಅನುಭವಗಳೊಂದಿಗೆ ತಳುಕು ಹಾಕಿಕೊಂಡಿತ್ತು. ಒಂದು ಮಗನಿಗೋಸ್ಕರ ಅಪ್ಪ ಆಸ್ಪತ್ರೆಯಲ್ಲಿ ರಾತ್ರಿ ಹಗಲು ಕಳೆದಿದ್ದು. ಇಲ್ಲಿ ನಾನು ನನ್ನ ತಂದೆಯ ಸಲುವಾಗಿ ಸಾಕಷ್ಟು ದಿನಗಳನ್ನು ಆಸ್ಪತ್ರೆಗಳಲ್ಲಿ ಕಳೆದಿದ್ದೆ.

ಹಗಲು ಜನಗಳಿಂದ ತುಂಬಿ ಹೋಗುತ್ತಿದ್ದ ಆಸ್ಪತ್ರೆಗಳು ರಾತ್ರಿಯಾದರೆ ನೀರವ ಮೌನ. ಕಳೆಗುಂದಿರುವ ಮುಖಗಳು, ನೋವಿನಿಂದ ನರಳುವ ರೋಗಿಗಳು, ಸಾವುಗಳು, ತೀವ್ರ ನಿಘಾ ಘಟಕಕ್ಕೆ ಹೊತ್ತಲ್ಲದ ಹೊತ್ತಿನಲ್ಲಿ ಬರುವ ಭಾದಿತರು, ಅವರೊಂದಿಗೆ ಬರುವ ಸಂಭಂದಿಕರ ಮುಖದಲ್ಲಿನ ಆತಂಕ, ಇಂತದ್ದನ್ನೆಲ್ಲಾ ರಾತ್ರಿ ಇಡೀ ಎದ್ದು ನೋಡುತ್ತಿದ್ದ ನನಗೆ ಇದರಲ್ಲಿ ಅಪ್ಪ ಮಗನಿಗಾಗಿ ಇಡೀ ರಾತ್ರಿ ಅವನ ಹಾಸಿಗೆ ಪಕ್ಕ ಕುಳಿತಿರಬಹುದಾದ ಸಮಯ ಬಹುಮುಖ್ಯವಾಗಿ ಕಾಡುತ್ತಿದ್ದುದು. ಎರಡನೆಯದು ತನ್ನ ಮುಂದಿನ ಭವಿಷ್ಯ ಎಂದು ಭಾವಿಸಿದ್ದ ಮಗ ಇನ್ನು ಉಳಿಯುವುದಿಲ್ಲ ಎಂದು ತಿಳಿದೂ ಕೂಡ ಅಪ್ಪ ಮಗನೊಂದಿಗೆ ಆ `ಉಳಿದಿರುವ’ ದಿನಗಳನ್ನು ಕಳೆಯುವುದು. ಇದು ಅಷ್ಟು ದೀರ್ಘವಾಗಿ ಅಲ್ಲದಿದ್ದರೂ ನನ್ನ ತಂದೆ ಉಳಿಯುವುದಿಲ್ಲ ಎಂದು ಮೂರು ದಿನಗಳ ಮೊದಲೇ ವೈದ್ಯರು ತಿಳಿಸಿದ್ದರು. ಆಗ ನನಗೆ ನನ್ನ ತಂದೆ ಇನ್ನು ಕೆಲವೇ ದಿನ `ಉಳಿಯುತ್ತಾರೆ’ ಎಂಬ ವಿಚಾರ ತಿಳಿದಂದಿನಿಂದ ನಾನು ಕಳೆದ ಪ್ರತೀ ಸೆಕೆಂಡೂ ಎದುರಿಗೆ ಬಂದಿತ್ತು.

ಇನ್ನು ಮೂರನೆಯ ವಿಷಯ ಭವಿಷ್ಯವು ಅಂತ್ಯವಾದ ನಂತರ ಆ ದೇಹದೊಂದಿಗೆ ಆ ತಂದೆಯ ಪಯಣ. ನನಗೆ ನನ್ನ ಎಲ್ಲಾ ಸಂದರ್ಭದಲ್ಲೂ ಧೈರ್ಯ ತುಂಬಿ ಸ್ಪೂರ್ತಿಯಾಗಿದ್ದ, ನನ್ನೊಳಗಿನ ನಾನೇ ಆಗಿದ್ದ ಅಪ್ಪ ಇನ್ನು ನನ್ನೊಂದಿಗೆ ಇರುವುದಿಲ್ಲ ಎಂಬ ಅರಿವಿನ ನೋವಿನಲ್ಲೇ ಅವರ ಕೊನೆಯ ಉಸಿರಿನ ಜೊತೆಗೆ ಬೆಂಗಳೂರಿನಿಂದ ಊರಿಗೆ ಸಾಗಿದ ಆ ಕರಾಳ ರಾತ್ರಿ. ಈ ಮೂರು ವಿಷಯಗಳು ಆ ಅಂಕಣದಲ್ಲಿನ ತಂದೆ ಮಗನ ಘಟನೆಯೊಂದಿಗೆ ನನ್ನ ಬೆಸೆದುಬಿಟ್ಟಿತು.

(ನಾಳೆಗೆ ಮುಂದುವರಿಯುವುದು..)

 

 

‍ಲೇಖಕರು Avadhi GK

February 5, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: