ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹರಸುವವರ ಪರಿಚಯ ಹೇಳುತ್ತ ಪರಸ್ಪರರ ಹುಡುಕಿಕೊಳ್ಳುವಂತೆ…’ – ಪ್ರಜ್ಞಾ ಮತ್ತೀಹಳ್ಳಿ

ವೈಶಾಖ

ಪ್ರಜ್ಞಾ ಮತ್ತಿಹಳ್ಳಿ


ಹೆಸರು ಗೊತ್ತಿಲ್ಲದ ನಿಲ್ದಾಣದಲ್ಲಿ ನಿಂತ ಬಸ್ಸಿನಿಂದ
ಇಳಿದವರು ಗೋಲಿ ಸೋಡಾ ಕುಡಿದು ಪೇರಿಸಿಟ್ಟ
ಬ್ರೆಡ್ಡಿನ ಪುಡಿಕೆ ಹಿಂದೆ ಮುಖ ಕಾಣದವವನಿಗೆ
ದುಡ್ಡು ಕೊಡುವಾಗ ಹೊಳೆ ಮುಳುಗಿದ ಕಲ್ಲು
ನೀರಾರಿದ್ದಕ್ಕೆ ಹೊರ ಚಾಚಿಕೊಂಡು ಹೊಳೆಯುತ್ತದೆ
 
ಕವರು ಕೊಟ್ಟು ಫೋಟೊಗೆ ನಿಲ್ಲುವವರ ದೃಷ್ಟಿ
ಊಟದ ಸರತಿಯ ಉದ್ದ ಅಳೆಯುತ್ತ
ಮೇಕಪ್ಪಲ್ಲಿ ಗುರುತು ಕಳಕೊಂಡ ವಧು-ವರರು
ಹರಸುವವರ ಪರಿಚಯ ಹೇಳುತ್ತ ಪರಸ್ಪರರ
ಹುಡುಕಿಕೊಳ್ಳುವಂತೆ ಚಡಪಡಿಕೆ ಕುದಿಯುತ್ತದೆ
 
ಮರದಡಿಯ ಕರಡ ಗರಿಗರಿ ನಿಮಿರಿ
ಚಕ್ಕನೆ ಹತ್ತುರಿಯುವ ಕಾಳ್ಗಿಚ್ಚು
ಸಣ್ಣಗೆ ಸೋಕಿದರೂ ಉಸಿರ ಬಿಸಿ
ಅರಳು ಮಲ್ಲಿಗೆ ಚಪ್ಪರವಾಗುವ ಕೊರಳು
 
ಎದೆಯ ಒಣಹುಲ್ಲ ನಡುವೆ ಒತ್ತೆಹಾಕಿ
ಮರೆತ ಮಾವು ಕಳಿತು ರಸ ತುಂಬಿದಂತೆ
ಘಮ್ಮೆಂದಿದೆ ಜೀವ ಸಿಹಿಗಾಳಿಯಾಗಿ

‍ಲೇಖಕರು avadhi

15 June, 2013

1 Comment

  1. hema

    ಸುಂದರ ಪದ್ಯ. ಕಡೆಯ ಸಾಲುಗಳು ಚೆನ್ನಾಗಿವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading