ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಮ್ಮಿಂಗ್ ಬರ್ಡ್‌ನ ಸ್ವಗತ..

humming birdವಿಶ್ವದ ಅತ್ಯಂತ ಸಣ್ಣ ಹಕ್ಕಿ ಹಮ್ಮಿಂಗ್ ಬರ್ಡ್‌ ಎನ್ನುತ್ತಾರೆ. ಕವಿ ಚನ್ನಪ್ಪ ಅಂಗಡಿಗೆ ಈ ಹಾಕಿ ಇನ್ನಿಲ್ಲದಂತೆ ಕಾದಿದೆ ಅದಕ್ಕೆ ಕಾರಣವೂ ಇದೆ ಏಕೆಂದರೆ ಈ ಹಕ್ಕಿಯ ನೆಲೆ ತಾಣ ಕ್ಯೂಬಾ. ನಮ್ಮ ಕೆರಳದಂತೆಯೇ ಕಂಡು ಬರುವ ಈ ಪುಟ್ಟ ದೇಶ ಅಂತಹ ದೈತ್ಯ ಅಮೆರಿಕಾದ ವಿರುದ್ಧ ಸೆಡ್ಡು ಹೊಡೆದ ರೀತಿ ಅವರನ್ನು ಆಕರ್ಷಿಸಿದೆ. ಇಲ್ಲಿದೆ ಹಮ್ಮಿಂಗ್ ಬರ್ಡ್‌ನಂತ ಕ್ಯೂಬಾ ಸೆಡ್ಡು ಹೊಡೆದ ಸಾಲು..

humming bird

ಹಮ್ಮಿಂಗ್ ಬರ್ಡ್‌ನ ಸ್ವಗತ 

channappa angadi

ಚನ್ನಪ್ಪ ಅಂಗಡಿ

ಸಣ್ಣದದೇನಿದ್ದರೂ ಚೆಂದವೆಂಬುಪಾಧಿಯಿದೆ
ಬಣ್ಣವದದೇನಿದ್ದರೂ ಸೃಷ್ಟಿಯಲದಕೊಂದು ನಿಯತಿಯಿದೆ
ನಾನೂ ಹಾರುತ್ತೇನೆ ಎಲ್ಲ ಹಕ್ಕಿಗಳಂತೆ
ರೆಕ್ಕೆಗಳಿವೆ ಹಾರುವ ನಿಯಮದಂತೆ
ತಾಯ್ನೆಲ ಕಾಯ್ವ ಯೋಧನ ಸಮವಸ್ತ್ರದಂತೆ.

ಜೇನು ಹೀರುತ್ತೇನೆ ಶಲಾಕಾಗ್ರದ ತಳದಿಂದ
ಮಧುವ ಮುಕ್ಕಳಿಸುಗುಳುವ ಮಹಾಂತನಂತೆ
ಹಾಡಿ ಹೊಗಳುತ್ತಾರೆ ಕವಿಗಣಂಗಳು
ಹೊಟ್ಟೆ ತುಂಬದಿದ್ಯಾವುದೂ ಹಸಿವಿಗಾಗಿ ಹಸಿದವಗೆ.

humming bird
ಸೆಡ್ಡು ಹೊಡೆಯುತ್ತೇನೆ ಪುಟಿದೆದ್ದು
ಹಾರುವ ಹದ್ದು ಗಿಡುಗಗಳ ಸದ್ದಿಗೆ
ನೆಲದ ನೆತ್ತಿಯ ಮೇಲೆ ರೆಕ್ಕೆಗಳನಗಲಿಸಿ
ಮಸಿಗತ್ತಲೆ ಹರಡುವ ಮದೋನ್ಮತ್ತನಿಗೆ
ಝಳಪಿಸುವ ಕಿರಣದಿಂದೆದೆಗಿರಿಯುವಾಗ
ಕೊಂಕಿಸುವ ಕೊರಳಿಗೆ ಜಿಗುಪ್ಸೆಯೇ ಬೇಟೆ !

ಸಂದಿಗೊಂದಿ ಬಿರುಕಿನಲಿ ಸ್ಥಿರ-ಚರಾಸ್ತಿ, ಗಂಟು
ಹೂವಿನೊಡಲೊಳಗೆ ಬಂಡಾಯದ ಬಂಡಿನಂಟು
’ಅದಕು ಇದಕು ಎದಕೂ’ ತಬ್ಬಿರುವ ನಂಟು
ಮುದ್ದಿಗೂ ಸದ್ದಿಗೂ ಬಿದ್ದಿದ್ದೆ ಜಿದ್ದು
ನನ್ನಾನಂದದ ಮುಂದೆ ನಿನ್ನಧಿಕಾರದ ದರ್ಪ
ನಿನ್ನ ಸುತ್ತಿ ಹತ್ತಿಕ್ಕಿರುವ ಏಳು ಹೆಡೆ ಸರ್ಪ.

humming bird

ಕಾರುವ ಬೆಂಕಿಗೆ ಬೆಳದಿಂಗಳುಡುಗೆ ತೊಡಿಸಿ
ಎರಗಿದ ಮೈಯ ಎಡಬಲಕೆ ಕಚಗುಳಿಯಿಟ್ಟು
ಕಕ್ಕುವ ವಿಷದಲಿ ಗಂಧ ತೇಯ್ದು ಲೇಪಿಸಿ
ಕುಕ್ಕುವ ಕೊಕ್ಕಿಗೆ ಕಣ್ಣಪಾಪೆಯನು ಮುಂದಿಟ್ಟು
ನೆಗೆಯುತ್ತೇನೆ ಕ್ಷಣದಲಿನ್ನೂರು ಸಲ ರೆಕ್ಕೆ ಬಡಿದು
ಒಲವಿನೆಡೆಗೆ ಝೇಂಕಾರ ; ಬಲವ ಹೇರಲು ಬಂದರದೇ
ಹೂಂಕಾರ, ಉದಾಸೀನಕೆ ವಾಸಿಯಾಗದೆ ರೋಗ : ಅಹಂಕಾರ.

ರೆಕ್ಕೆಯಗಲಕಿದೆ ಅಲ್ಲಮನ ಬಯಲ ವ್ಯಾಪ್ತಿ
ಬಣ್ಣ-ಗಾತ್ರ ಮೀರಿ ದಶದಿಕ್ಕಿಗೆ ಬೆಳೆವ ಪ್ರಾಪ್ತಿ
ಹುರಿದು ಮುಕ್ಕಿದರು ದಕ್ಕದು ರಕ್ಕಸನ ಹೊಟ್ಟೆಗೆ
ನನ್ನ ಗಮ್ಯಸ್ಥಾನವೋ, ಇನ್ನಿಲ್ಲದ ಶೂನ್ಯಸಂಪಾದನೆ.

humming bird

ಕಬ್ಬಿನ ಗದ್ದೆ ಆಡಿ ಬೆಳೆಯುವ ತೊಟ್ಟಿಲು
ಪ್ರತಿ ಗೂಡು, ಸಕ್ಕರೆ ತುಂಬಿದ ಬಟ್ಟಲು
ದೇವದೂತನೊಲುಮೆ-ದ್ವಿಗುಣಗೊಂಡ ಸಂಕುಲ
ಅಗಣಿತ ಬೇರು ಬಿಳಲುಗಳಿಗಿರುವುದೊಂದೇ ನೆಲ
ಹಸಿವು ಬಾಯಾರಿಕೆ ನೀಗಲು ರಟ್ಟೆಯೇ ಬಲ

ಸಮರಗಳದೆಷ್ಟು ನಡೆದವೊ ಭೂಗೋಳದ ಹೋಳಿಗೆ
ಉಸಿರುಗಟ್ಟುವ ಅಹಿತಕೆ ಕೊಸಿರೇಳುವ ಕ್ರಾಂತಿ
ಸಣ್ಣದೆಂಬ ಬಣ್ಣನೆಗೆ ಉಬ್ಬಿ ಹೋಗದ ಭ್ರಾಂತಿ
ತಲೆಯೆತ್ತಿದ ಭುಜದ ಮೇಲೆ ಬದ್ಧತೆಯ ಸಿದ್ಧಾಂತ
ಚಿಗುರೊಡೆದು ಬೆಳೆದ ಚೆಂಗುಡಿ : ಚೆಗೆವಾರ

ನೇರ ದೃಷ್ಟಿಯೊಂದಿಗೆ ನೀಳ ಚುಂಚಿನ ಸಹವಿಕಾಸ
ಕೋವಿ ಕಾವ್ಯದೆದೆಗೆ ದಂಗೆಯೇಳುವ ಮಂದಹಾಸ !

‍ಲೇಖಕರು admin

21 March, 2016

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading