ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹದಗೊಂಡ ಕತ್ತಿಯನು ಒತ್ತು ನನ್ನ ಎದೆಯೊಳಗೆ..’

ಮೂಲ : ಪಾಬ್ಲೋ ನೆರೂದಾ

ಕನ್ನಡಕ್ಕೆ:ವಿಠ್ಠಲ ದಳವಾಯಿ

ಬಂಡೆಗಳ ಬುಡದಲ್ಲಿ ಬಡವನಾದವನೆ

ಭೂತದ ನೆನಪಲ್ಲಿ ಭೂಗತನಾದವನೆ
ದನಿಯಡಗಿದವನೆ, ಕಣ್ಮುಚ್ಚಿದವನೆ
ದು:ಖವೂರಿದ ನೆಲದಲಿ ಮುಖ ಮುಳುಗಿಸಿದವನೆ
ಕೈಗೂಡಿಸು ನನ್ನೊಡನೆ ಒಡಹುಟ್ಟಿದವನೆ
 
ನೋಡಿಲ್ಲಿ ಕೇಳಿಲ್ಲಿ ಈ ಭೂತಳದ ರಹವಾಸಿ
ಕಾರ್ಮಿಕ, ನೇಕಾರ, ಮಾತಿರದ ಕುರುಬನೇ
ಕ್ರೂರಮೃಗಗಳ ಪಳಗಿಸುವವನೆ
ವಧಾಸ್ಥಾನದಲಿ ನಿಂತಂತಿರುವ ಗಾರೆ ಕೆಲಸದವನೆ
ನಿನ್ನ ಕಂಬನಿಯಿಂದಲೇ ಬೆಳೆದ ತೋಟದ ಮಾಲಿಯೇ
ಮುರಿದ ಬೆರಳಿನ ಪತ್ತಾರನೇ
ನಡುಗುತ ಬಿತ್ತುತಿರುವ ರೈತನೇ
ಕಲಸಿದ ಮಣ್ಣಿನಲ್ಲೇ ಕಾಣೆಯಾದ ಕುಂಬಾರನೇ
ನಿನ್ನ ಹೂತ ಯಾತನೆಗಳನ್ನೆಲ್ಲ ನನ್ನೊಳಗೂ ತುಂಬು ಬಾ
ಕಣ್ಣೊಳಗೆ ಜೀವ ಹಿಡಿದ ಕಂಬಾರನೆ
 
ತೋರಿಸು ನನಗೆ
ರಕ್ತದ ಕಾಲುವೆಯಂತಿರುವ ನೇಗಿಲ ಸಾಲುಗಳನು
ಎಡವಿ ಬಿದ್ದ ಕಲ್ಲನು
ನಿನ್ನ ಮೈ ಹಲಗೆ ಮೇಲೆ ಆಡಿದ ಬಡಿಗೆಯನು
ಮತ್ತೆ ಹೀಗೆ ಕೂಗು,
‘ವಿಫಲ ಭೂಮಿಯ ಫಲಾನುಭವಿ ನಾನು
ಹೊಳಪಿರದ ಹೊನ್ನಿನ ದಮನಿತನು’
 
ಈ ಹಳೆ ಬೆಣಚು ಕಲ್ಲಿನಿಂದಲೇ ಕಿಡಿ ಮೂಡಲಿ ಇಂದು
ಹಳೆದೀಪಗಳು ಹೊತ್ತಿ ರಕ್ತಮೆತ್ತಿದ ಲಾಠಿಗಳ ತೋರಲಿ
ತೋರಲಿ ಅನಾದಿ ಗಾಯಕ್ಕಂಟಿದ ಚಾಟಿಗಳನು
ಕೆಂಬಣ್ಣದಲಿ ತೋಯ್ದ ಕೊಡಲಿಗಳನು
 
ನಿನ್ನ ಸತ್ತ ಬಾಯಿಗೆ ದನಿಯಾಗುವೆನು ನಾನು
ಲೋಕವೇ ಹೇಗೆ ಒಂದುಗೂಡುವುದು ಕಾಣು
 
ಮೌನ ಧರಿಸಿದ ತುಟಿಗಳೆ
ಈ ದೀರ್ಘರಾತ್ರಿಯಲಿ ನಿಮ್ಮಾಳದ ಮಾತುಗಳೆಲ್ಲ
ನನ್ನೊಳಗೆ ಹನಿಯಬೇಕು
ಎಂದೆಂದಿಗೂ ನಿಮ್ಮೊಂದಿಗೆ ಒಂದಾಗಬೇಕು
 
ಹರಿದು ಹೋಗಲಿ ದು:ಖದ ನದಿ
ಉರಿದು ಹೋಗಲಿ ಯಾತನೆಯ ಕಡಲು
ಬರಿದಾಗಲಿ ಹೇಳಿ ಎಲ್ಲವನೂ
ಹಂತಹಂತವಾಗಿ, ನಿಧನಿಧಾನ
ಸಂತೆಯಲಿ ಎನೂ ಉಳಿಯದ ಹಾಗೆ
 
ಈ ದಿನ
ಹುದುಗಿಸಿಟ್ಟ ಕತ್ತಿಗಳೆಲ್ಲ ಹದಗೊಳ್ಳಲಿ
ಒತ್ತು ನನ್ನ ಎದೆಯ ಮೇಲೆ, ತಲೆಯ ಮೇಲೆ
ಮುತ್ತಲಿ ಸೂರ್ಯಜ್ವಾಲೆಯ ಪ್ರವಾಹದ ಹಾಗೆ
ಜಾಗ್ವಾರುಗಳ ಜಂಗುಳಿಯ ಹಾಗೆ
ಬಿಡು ನನಗೆ ಅಳಲು ಗಂಟೆ, ದಿನ
ವರ್ಷಗಳವರೆಗೆ, ಅನಾದಿ ಕಾಲದವರೆಗೆ
 
ಶಾಂತಿಯ ಕೊಡು ನನಗೆ ಆರದಿರಲಿ ನಿರೀಕ್ಷೆ
ಕೊಡು ನನಗೆ ಸಂಘರ್ಷ ಸಂಕಟ ಜ್ವಾಲಾಮುಖಿ
 
ಕಾಂತದಂತೆ ಕೂಡಿಕೊಳ್ಳಲಿ ನಮ್ಮೀ ದೇಹ
ಗಟ್ಟಿಘೋಷವಾಗಿ ಹೊರಹೊಮ್ಮು
ನನ್ನ ಧಮನಿ ಧಮನಿಯಲ್ಲಿ
ನನ್ನ ಮಾತಿನಲ್ಲಿ, ನನ್ನ ರಕ್ತದಲ್ಲಿ
 

 

‍ಲೇಖಕರು avadhi

14 March, 2013

13 Comments

  1. jagadishkoppa

    ಪ್ರಿಯ ದಳವಾಯಿ, ಬಹಳ ದಿನಗಳ ನಂತರ ನಾನು ಓದಿದ ಉತ್ತಮ ಕವಿತೆ. ಅನುವಾದ ಆಪ್ತವಾಗಿದೆ. ಇಂತಹ ಕವಿತೆಗಳು ಘಾಸಿಗೊಂಡ ಎದೆಗೆ ಮುಲಾಮಿನಂತೆ ಪರಿಣಮಿಸುತ್ತವೆ.

  2. Ramesh Aroli

    Wonderful poem, very good translation. Thanks a lot Vithal.

  3. -ರವಿ ಮೂರ್ನಾಡು

    ಒಂದು ಕ್ರಾಂತಿಕಾರಿ ಕವಿತೆ ಓದಿದ ಸಂತಸವಿದೆ ನನಗೆ. ಆಶಯದ ಭಾವ ಅತ್ಯುತ್ತಮವಾಗಿ ಅನುವಾದಗೊಂಡಿದೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  4. Vithal Dalawai

    Priyare, Harasida ellarigu dhanyawadagalu. Krantiya nittinalle nammella maatu, kriyegalu saagabekagide indu.

  5. D.Ravivarma

    ನೆರೂದರ ಕಾವ್ಯದ ಗತ್ತೇ ಬೇರೆ…ಅದು ಹೃದಯದಾಳಕ್ಕೆ ಇಳಿದು..ನಮ್ಮ ಮನಸನ್ನು ತುಂಬಿಕೊಳ್ಳುತ್ತದೆ ….ನಮ್ಮ ಅಂತರಾಳವನ್ನೇ ಕದಲಿಸುತ್ತದೆ ..ನಿಮ್ಮ ಅನುವಾದ ಆಪ್ತವಾಗಿದೆ..ನೆರುದರ ಕಾವ್ಯದ ಖ ದರನ್ನು,ಕೆಚ್ಚನ್ನು.ಕಾವ್ಯದ ಜೀವಂತಿಕೆಯನ್ನು ನಾನು ಸವಿದದ್ದು ,ಅನುಭವಿಸಿದ್ದು ,ಮತ್ತೆ ಮತ್ತೆ ಕಾಡುವಂತೆ ಮಾಡಿದ್ದು ,ಲಂಕೇಶ್ ಮತ್ತು ತೇಜಸ್ವಿನಿ ನಿರಂಜನರ ಅನುವಾದ .. ನಾನು ಕಾಲೇಜಿನಲ್ಲಿದ್ದಾಗ ತೆಜಸ್ವಿನಿ ಅವರ ಈ ಅನುವಾದವನ್ನು ಗೋಡೆಗಳ ಮೇಲೆ .ಕಾಲೇಜ್ ಕಾಂಪೌಂಡ್ ಗಳ ಮೇಲೆ ಬರೆದಿದ್ದೆ …..
    ನಾನೇಕೆ ಮಾತನಾಡುವುದಿಲ್ಲ ,
    ಬಯಕೆಗಳ ಬಗ್ಗೆ ,ಬಳ್ಳಿಗಳ ಬಗ್ಗೆ
    ನನ್ನ ನಾಡಿನ ಮಹಾ ಅಗ್ನಿಪರ್ವತಗಳ ಬಗ್ಗೆ,
    ಎಂದು ನೀವು ಕೇಳುತ್ತೀರಿ …
    ನೋಡಿ -ಬೀದಿಯ ಮೇಲೆ ರಕ್ತ ವಿದೆ ,
    ರಕ್ತವಿದೆ -ಬೀದಿಯ ಮೇಲೆ ….
    ಬಹು ಕಾಲದ ನಂತರ ಒಂದು ಗಂಡು ಕವಿತೆ ಓದಿದೆ ..ನಿಮಗೂ ,ಅವಧಿಗೂ ಅಭಿನಂದನೆಗಳು…
    ಡಿ.ರವಿವರ್ಮ ..ಹೊಸಪೇಟೆ ,

    • D.Ravivarma

      ಕಾಂತದಂತೆ ಕೂಡಿಕೊಳ್ಳಲಿ ನಮ್ಮೀ ದೇಹ
      ಗಟ್ಟಿಘೋಷವಾಗಿ ಹೊರಹೊಮ್ಮು
      ನನ್ನ ಧಮನಿ ಧಮನಿಯಲ್ಲಿ
      ನನ್ನ ಮಾತಿನಲ್ಲಿ, ನನ್ನ ರಕ್ತದಲ್ಲಿ….ii salugalu matte matte kaduvantive…

  6. Kajooru sathish

    Olleya anuvaada.

  7. basavaraj sirwar

    dalavaayiyavare avana nantarada ella kaalada saahityavannu prabhaavisidavanu neruda.nimma anuvaada aaptavaagige. abhinandanegalu. innu uttama rachaney suchane idu ansutte. kaayuttene.- basavaraj sirwar

  8. basavaraj sirwar

    neruda avana nantarada ella kaalada saahityavannu prabhaavisidavnu. anuvaad aaptavaagide. abhinandanegalu.innu uttama rchane haagu anuvaada barali endu aashisuve- basavaraj. sirwar

  9. Vithal Dalawai

    Thank you satish, Basavaraj, Ravivarma

  10. Bhavani Shankar

    ತುಂಬಾ ಚೆನ್ನಾಗಿ ಅರ್ಥಪೂರ್ಣವಾಗಿದೆ… ಶುಭಾಶಯಗಳು

  11. JANGAMA

    bhaava shabdavaadaga ardha saayutthade! priya vittala, utthama prayathna. aalakkilidu anubhavisi baredare matthastu meragu. munduvaresi…

  12. praveenkumar daivajnacharya

    adbhuta anuvaada sir.. nijakku sogasaagide..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading