ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಣ್ಣು ಹೋಯ್ತು.. ಚಾಕ್ಲೇಟ್ ಬಂತು..

vinod patil

ವಿನೋದ ಪಾಟೀಲ

ನಮ್ಮೂರು ಮಲೆನಾಡಿನ ಅಂಚು ಬಯಲುಸೀಮೆಯ ಆರಂಭದಲ್ಲಿ ಬರುವ ಒಂದು ಹಳ್ಳಿ. ಬಹುತೇಕರ ಉದ್ಯೋಗ ಒಕ್ಕಲುತನ. ಮಳೆಯ ಪ್ರಮಾಣ ಕಡಿಮೆಯೂ ಅಲ್ಲ ಇತ್ತ ಹೆಚ್ಚು ಅಲ್ಲಾ. ಆದ್ದರಿಂದ ಮಲೆನಾಡಿನ ಊರಿನ ಖಾನಾಪೂರ ತಾಲೂಕಿನ ಅನೇಕ ಗ್ರಾಮಗಳ ಅಜ್ಜಿಯರು ಹಳ್ಳಿಗಳಿಗೆ ವಿವಿಧ ಕಾಡಿನ ಹಣ್ಣುಗಳನ್ನು ಮಾರಾಟ ಮಾಡಲಿಕ್ಕೆ ಬರುತ್ತಿದ್ದರು.

ಹೀಗೆ ನಮ್ಮೂರು ಚಿಕ್ಕಬಾಗೇವಾಡಿಗೆ ಅಜ್ಜಿಯರಾದ ಬಸವ್ವ ಹಾಗೂ ನೀಲವ್ವ ಹಣ್ಣುಗಳಾದ ನೇರಳೆ ಹಣ್ಣು, ಸುಣ್ಣದ ಹಣ್ಣು, ಗೊಡಂಬಿ ಹಣ್ಣು ಗೊಂಯಕಾರ ಹಣ್ಣು , ಮಾವಿನ ಹಣ್ಣು, ಕವಳಿ ಹಣ್ಣು, ಹೀಗೆ ಹಲವು ಬಗೆಯ ಕಾಡಿನ ಹಣ್ಣುಗಳನ್ನು ಸಂಜೆ ಹೊತ್ತು ಕೊಯ್ದು ಬುಟ್ಟಿಯಲ್ಲಿ ಶೇಖರಿಸಿ ಮುಂಜಾನೆ ನಾವಲಗಟ್ಟಿ ಬಸ್ಸಿಗೆ ರೊಟ್ಟಿ ಬುತ್ತಿಯ ಜೊತೆ ಬಂದು ಮಾರಾಟ ಮಾಡುತ್ತಿದ್ದರು.

neraleರಜೆಯಲ್ಲಿ ಪ್ರಮುಖ ಓಣಿಗಳಾದ ಹೊಂಗಲದಾರ ಓಣಿಯ ಗೌಡರ ವಿಶಾಲವಾದ ಕಟ್ಟೆಯ ಮೇಲೆ ಕುಳಿತರೆ, ಉಪ್ಪಾರ ಓಣಿಯಲ್ಲಿ ಉಪ್ಪಾರ ಮನೆಯ ಜಗಲಿಯಲ್ಲಿ, ಕುರಬರ ಓಣಿಯಲ್ಲಿ ಹೀಗೆ ಹತ್ತು ಹಲವು ಕಡೆ ನಿಲ್ದಾಣ ಮಾಡಿಕೊಂಡಿದ್ದರು.

ಅವರ ಹಿಂದೆ ಚಿಕ್ಕಮಕ್ಕಳ ಹಿಂಡೆ ನೆರೆಯುತ್ತಿತ್ತು. ಇನ್ನು ಕೆಲವು ಸಂದರ್ಭಗಳಲ್ಲಿ ಕುಳಿತುಕೊಳ್ಳುವ ಕಟ್ಟೆ ಮನೆಯವರು ಇವರು ಕುಳಿತ ಜಾಗದಲ್ಲಿ ಮಕ್ಕಳ ತಿಂದು ಎಸೆದ ಬೀಜಗಳಿಂದ ನೊಣಗಳ ಕಾಟಗಳ ಸಲುವಾಗಿ ಬೈಸಿಕೊಂಡಿದ್ದು ಇದೆ.

ಆಗ ಬಸಮ್ಮ ‘ಊರಿಂದ ಊರಿಗೆ ಹೊಟ್ಟಿ ತಂಬಿಸಿಕೊಳ್ಳಾಕ ಬಂದೆ ಅವ್ವಾ ಹಂಗೆಲ್ಲಾ ಬೈಯಬೇಡ’ ಅಂತಾ ಮಾರನೆಯ ದಿನ ಕಟ್ಟೆಯನ್ನು ಬದಲಾಯಿಸುತ್ತಿದ್ದರು. ಇನ್ನು ಮದ್ನಾಹದ ಊಟದ ಸಮಯದಲ್ಲಿ ಕಟ್ಟೆಯ ಮೇಲೆಯೆ ಅಲ್ಲಿಯ ಮನೆಯವರು ನೀರು ಕೊಡುತ್ತಿದ್ದರು. ಮತ್ತೂ ಕೆಲವರು ಮನೆಯ ಪಲ್ಯಗಳನ್ನು ಕೊಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಬಸವ್ವಾ ಉಪ್ಪಿನಕಾಯಿ ಹಾಕಲಿಕ್ಕೆ ಮಾವಿನ ಕಾಯಿ ನೀಡುತ್ತಿದ್ದಳು.

ಇನ್ನು ಹಳ್ಳಿಗಳಲ್ಲಿ ಸಾಮಾನ್ಯವಾಗಿ ರೊಕ್ಕದ ವ್ಯವಹಾರ ನಡೆಯುತ್ತಿರಲಿಲ್ಲ ಬದಲಾಗಿ ಚಿಣ್ಣರು ಉಡೆದಾಗ ಜೋಳ, ಶೇಂಗಾ ತಂದು ಕೊಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಎಣಿಸಿ ಹಣ್ಣುಗಳನ್ನು ನೀಡುತ್ತಿದ್ದರು.  ಬಂದ ಗಿರಾಕಿಗಳು ಇನ್ನೊಂದೆರಡ ಕೋಡಬೆ ಅಂದಾಗ ಮತ್ತೆ ಎರಡು ಹಣ್ಣುಗಳು ಸಿಗುತ್ತಿದ್ದವು.

Ice-Candy-sellerಇನ್ನು ಶಾಲೆಗಳು ನಡೆಯುತ್ತಿದ್ದ ಸಮಯದಲ್ಲಿ ಶಾಲೆಯ ಗೇಟ್ ಹತ್ತಿರ ಬಂದು ಕುಳಿತುಕೊಳ್ಳುತ್ತಿದ್ದರು. ಆ ಸಮಯದಲ್ಲಿ ಮನೆಯಲ್ಲಿ ಪುಡಿಗಾಸು ಕೊಡುತ್ತಿದ್ದ ಕೆಲವು ಹುಡುಗರು ಮಿಕ್ಕಿದ ಹುಡುಗರ ಬಾಯಲ್ಲಿ ನೀರು ತರಿಸುತ್ತಿದ್ದರು. ಇನ್ನು ಕೆಲವು ಸಲ ಶಾಲಾ ಆವರಣಕ್ಕೆ ಬರದಂತೆ ಮಾಸ್ತರ ನಿರ್ಬಂದ ಹೇರುತ್ತಿದ್ದಾಗ ಸ್ವಲ್ಪ ಅಂತರದಲ್ಲಿ ಕುಳಿತುಕೊಳ್ಳುತ್ತಿದ್ದರು.

ಹೀಗೆ ಆತ್ಮೀಯರಾಗಿದ್ದ ಅಜ್ಜಿಯರು ಇಂದು ಬರುವುದಿಲ್ಲ. ಅವರ ಸುಳಿವು ಇಲ್ಲ. ಇನ್ನು ಹಳ್ಳಿಯ ಚಿತ್ರಣವು ಬದಲಾವಣೆಯಾಗಿದೆ ಇಂದು ಎಲ್ಲ ಅಂಗಡಿಗಳಲ್ಲಿ ಕುರುಕುಲ ತಿಂಡಿಗಳು ಮತ್ತು ಊದ್ದನೆಯ ಚಾಕಲೇಟ್ ಬಂದಿವೆ. ಅಂಗಡಿಯಾತನ ಫ್ರಿಡ್ಜ್ ನಲ್ಲಿ ಹಲವು ಬಗೆಯ ಐಸ್ ಕ್ರೀಮ್ ಗಳ ಸೆಳೆತ ಉಂಟಾಗಿದೆ. ಅದು ಕೆಲವರಲ್ಲಿ ತಮ್ಮ ಮಕ್ಕಳು ಚಾಕಲೇಟ್ ತಿನ್ನುವುದು ಪ್ರತಿಷ್ಟಿತ ವಿಷಯವಾಗಿದೆ.

ಜಾಗತೀಕರಣ ನಂದನವನದಂತಿರುವ ಹಳ್ಳಿಗಳನ್ನು ಈ ರೀತಿ ನುಂಗಿವೆ. ಹಿಂದೆ ಬೇಸಿಗೆಯಲ್ಲಿ ಸೈಕಲ್ ಮೇಲೆ ದೊಡ್ಡ ಬರ್ಪ್ ತಂದು ಅದರಿಂದ ತರೆದು ಬಣ್ಣ ಹಾಕಿ ರೂಪಾಯಿಗೆ ನಾಲ್ಕು ಐಸ್ ಕ್ರೀಮ್. ಇಂದಿನ ಶೆಟ್ಟಿ ಅಂಗಡಿ ವಿದೇಶಿ ಬಟರ್ ಐಸ್ ಕ್ರೀಮ್ ಹತ್ತಾರು ವರ್ಷಗಳಿಂದ ಹಳ್ಳಿ ಬಂಧುವಾಗಿದ್ದ ಬಾಗೇವಾಡಿ ಬರ್ಪ್ ತುರಚಿ ಕೊಡುವ ಬಡೇಸಾಬನ ಕಸಬನ್ನು ನುಂಗಿದೆ.

‍ಲೇಖಕರು admin

31 July, 2016

2 Comments

  1. Vithal Dalawai

    good write up. Barita iri…….

  2. MAHADEV

    ಪ್ರಾಥಮಿಕ ಶಾಲೆ ಹಾಗೂ ಬಾಲ್ಯದ ನೆನಪು ಮಾಡಿದ್ದಿರಿ ನನಗೆ ತುಂಬಾ ಖುಷಿಯಾಯಿತು. ವಿನೋದ್ ಸರ್ ನಿಮಗೆ ಧನ್ಯವಾದ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading