ವೈಶಾಲಿ ಹೆಗಡೆ
ಇತ್ತೀಚೆಗೆ ಭಾರತದ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಹಚ್ಚೆ ಹುಚ್ಚನ್ನು ನೋಡಿದಾಗ ಇಷ್ಟು ದಿನ ಯುವಜನತೆಗೆ ಕಂಡಿರದ ಈ “ಕೂಲ್” ಅಂಶ ಈಗ ಹೇಗೆ ಕಂಡಿತು? ಹಚ್ಚೆ ಹಾಗೆ ನೋಡಿದರೆ ಭಾರತದ ಮೂಲನಿವಾಸಿಗಳಾದಿಯಾಗಿ ಶತಮಾನಗಳಿಂದ ಜನ ಅಲ್ಲಲ್ಲಿ ಚುಚ್ಚಿಸಿಕೊಂಡು ಬಂದಿದ್ದಾರೆ. ಆದರೆ ಇಷ್ಟು ದಿನ, ದಿನವೂ ಕಾಣುವ ಹಾಲು ಮಾರುವ ಗುತ್ತೆಮ್ಮನ ಕಣ್ಣ ಮೂಲೆಯಲಿದ್ದ, ಅನುಕರಿಸಬೇಕೆನಿಸದ ಈ ಹಚ್ಚೆ, ಯುವಜನತೆಗೆ ಬ್ರಿಟ್ನಿ ಸ್ಪೀಯರ್ಸ್ ಸೊಂಟದ ಮೇಲೆ, ಡೇವಿಡ್ ಬೆಕ್ಹಾಂ ರಟ್ಟೆ ಮೇಲೆ ಕಂಡ ಕೂಡಲೇ ಆಧುನಿಕ ಸಮಾಜದ ಪ್ರತೀಕವೆನಿಸಿಬಿಟ್ಟಿತು? ಕಾಡುವ ಪ್ರಶ್ನೆಯೆಂದರೆ, ಸೆಲೆಬ್ರಿಟಿಗಳಾಗಿಬಿಟ್ಟರೆ ಸಾಸ್ಕೃತಿಕ ಪ್ರತಿನಿಧಿಗಳಾಗಿಬಿಡುವರೆ?
ನಮ್ಮಲ್ಲಿ ಒರಿಸ್ಸಾದ ಮೂಲನಿವಾಸಿಗಳಾದ ಖೊಂಡ ಜನಾಂಗದವರು ಅತಿ ಎನಿಸುವಷ್ಟು ಮೈ ಮುಖದ ಮೇಲೆಲ್ಲಾ ಹಚ್ಚೆ ಚುಚ್ಚಿಸಿಕೊಳ್ಳುತ್ತಾರೆ. ಹಚ್ಚೆ ಅವರಲ್ಲಿ ವಿವಿಧ ಸ್ತರಗಳನ್ನು, ಅಧಿಕಾರಗಳನ್ನೂ ಪ್ರತಿನಿಧಿಸುತ್ತದೆ. ಗೌಳಿಗರು, ಗೊಂಡರು ಮತ್ತಿತರ ಆದಿವಾಸಿಗಳಲ್ಲಿ ಈ ಹಚ್ಚೆ ಸಾಂಪ್ರದಾಯಿಕವಾಗಿ ಬಂದಿದೆ. ಜಪಾನ್ ಚೀನಾದ ಮೂಲನಿವಾಸಿಗಳಲ್ಲಿ, ಆಸ್ಟ್ರೇಲಿಯಾದ ಮೂಲನಿವಾಸಿಗಳಲ್ಲಿ ಕೂಡ ಹಚ್ಚೆಯ ಪರಿಪಾಠವಿದೆ. ಆದರೆ ಪೊಲೀನೆಶಿಯ ದೇಶಗಳಲ್ಲಿ/ದ್ವೀಪಗಳಲ್ಲಿ ಕಂಡು ಬರುವಷ್ಟು ಹಚ್ಚೆ ಬೇರೆಲ್ಲೂ ಇಲ್ಲ. ಸಮೋಅ ದ್ವೀಪವೆಂಬ ಅತಿಚಿಕ್ಕ ದೇಶದ ಮೂಲನಿವಾಸಿಗಳಲ್ಲಿ ನಿರ್ದಿಷ್ಟ ಪ್ರಕಾರದ ಚಿತ್ತಾರದ ಹಚ್ಚೆಯ ಬಳಕೆಯಿದೆ. ಸೊಂಟದಿಂದ ಮಂಡಿಯವರೆಗೆ ಕಾಲ್ತುಂಬ, ಎದೆಯ ತುಂಬ, ರಟ್ಟೆಯ ತುಂಬೆಲ್ಲ ಕೆತ್ತಿಸಿಕೊಳ್ಳುತ್ತಾರೆ. ಸಮೋಅ ಬುಡಕಟ್ಟಿನ ಮುಖಂಡನನ್ನು ಅವನ ಹಚ್ಚೆಯ ಚಿತ್ತಾರ ಹಾಗೂ ವಿಸ್ತಾರದ ಮೇಲಿಂದಲೇ ಗುರುತಿಸಲಾಗುತ್ತಿತ್ತು. ಆನೆಯ ದಂತ, ಆಮೆಯ ಚಿಪ್ಪು, ಕಟ್ಟಿಗೆ, ಪ್ರಾಣಿಯ ಕೊಂಬು, ಎಲುಬುಗಳನ್ನು ಬಳಸಿ ಹಚ್ಚೆ ಕೆತ್ತುತ್ತಿದ್ದರು. ಟ್ಯಾಟೂ ಎಂಬ ಇಂಗ್ಲಿಷಿನ ಶಬ್ದ ಕೂಡ ಸಮೋಅ ಭಾಷೆಯ “ಟಟಾಉ” ಶಬ್ದದಿಂದ ಬಂದಿದ್ದು. ಪಾಶ್ಚಾತ್ಯರ ಮೂಲ ಹಚ್ಚೆ ವಿನ್ಯಾಸ ಕೂಡ ಸಮೋಅ ವಿನ್ಯಾಸದಿಂದಲೇ ಬಂದಿದ್ದು.
ಆದರೆ ಈಗಿನ ಹಚ್ಚೆ ಹುಚ್ಚು ಪಾಶ್ಚಾತ್ಯರಲ್ಲಿ ಆರಂಭವಾಗಿದ್ದು ಸುಮಾರು ಅರವತ್ತರ ದಶಕದಲ್ಲಿ. ಹಚ್ಚೆ ಆಗ ಸಮಾಜ ವಿದ್ರೋಹಿಗಳ ಗುರುತಿನ, ಅಭಿವ್ಯಕ್ತಿಯ ಸಂಕೇತವಾಗಿ ಹೊಮ್ಮಿಕೊಂಡಿತು. ಅಪರಾಧ ಪ್ರವೃತ್ತಿಯವರು ತಮ್ಮ ಆ ಮನೋಭಾವದ ಬಗೆಗೆ ಹೆಮ್ಮೆ ಹಾಗೂ ಅದನ್ನೊಂದು ಸಾಮರ್ಥ್ಯವೆಂದುಕೊಂಡವರು ಹಚ್ಚೆ ಹಾಕಿಸಿಕೊಂಡು ಪ್ರದರ್ಶಿಸಿದರು. ಮಾದಕ ವ್ಯಸನಿಗಳು, ಹಿಪ್ಪಿ ಸಂಸ್ಕೃತಿಯ ಮೂಲ ವಾಹಕರು, ಕಳ್ಳಕಾಕರು, ಭೂಗತ ಜಗತ್ತಿನ ಗ್ಯಾಂಗ್ ಲಾರ್ಡ್ ಗಳು ಹಚ್ಚೆಯ ಮೂಲಕ ತಮ್ಮನ್ನು ಒಂದು ವಿಶೇಷ ಪಡೆ ಎಂದು ಗುರುತಿಸಿಕೊಳ್ಳತೊಡಗಿದರು. ಜೈಲಿನಲ್ಲಿ ಹಚ್ಚೆ ಇಲ್ಲದಿದ್ದರೆ, ಆತನನ್ನು ಇತರರು ಹುರಿದು ಮುಕ್ಕುತ್ತಿದ್ದರು. ಜೈಲಿನಲ್ಲಿ ಈ ಹಚ್ಚೆ ಹಾಕಿಸಿಕೊಂಡವರ ನಡುವೆ ಒಂದು ಅಲಿಖಿತ ವರ್ಗ ವ್ಯವಸ್ಥೆ ರೂಢಿಯಲ್ಲಿತ್ತು. ಆತನ ಕ್ರೌರ್ಯ, ಅಪರಾಧದ ಮಟ್ಟವನ್ನು ಹಚ್ಚೆಯ ಸಂಖ್ಯೆ, ಪ್ರಮಾಣದ ಮೇಲೆ ಇತರರು ಅಳೆಯುತ್ತಿದ್ದರು. ರೌಡಿ ನಾವಿಕರು, ರಹಸ್ಯ ಕಾರ್ಯಾಚರಣೆಗೆ ಸೇರಿದವರು ಒಂದು ನಿರ್ದಿಷ್ಟ ಚಿಹ್ನೆಯನ್ನು ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಮೈತುಂಬ ಹಚ್ಚೆ ಹಾಕಿಸಿಕೊಂಡವರನ್ನು ನಾಗರಿಕ ಸಮಾಜ, ವಿಕ್ಷಿಪ್ತ ಮನಸ್ಸಿನ ಪ್ರತೀಕ ಎಂಬಂತೆಯೇ ನಡೆಸಿಕೊಂಡಿತು. ಅದು ಬೆಳೆಯುತ್ತ ಸಾಮಜವಿಮುಖಿ ಯುವಜನತೆ ಹಚ್ಚೆಯೊಂದಿಗೆ ಗುರುತಿಸಿಕೊಳ್ಳುವುದು ರೂಢಿಗತವಾಯಿತು.
ಆದರೆ ಕೇವಲ ಮಜಕ್ಕೆಂದು ಹಚ್ಚೆ ಹಾಕಿಸಿಕೊಂಡ ಯುವಕರಲ್ಲಿ ಬಹಳಷ್ಟು ಜನ ಯಾವುದೊ ಒಂದು ಅಮಲಿನಲ್ಲಿ, ಉದ್ವೇಗದಲ್ಲಿ, ಕ್ಷಣಿಕ ಹುಮ್ಮಸ್ಸಿನಲ್ಲಿ ಹಚ್ಚೆ ಹಾಕಿಸಿಕೊಂಡವರೇ ಹೆಚ್ಚು. ಇಂತವರೆಲ್ಲ ಒಂದೋ ಸಣ್ಣ ಪುಟ್ಟ ಹಚ್ಚೆಗೆ ನಿಲ್ಲಿಸಿ ಮರಳುತ್ತಾರೆ ಇಲ್ಲವೇ ಮುಂದೆ ಮಕ್ಕಳು ಮರಿ ಎಂದು ತಾವು ತಮ್ಮ ಕುಡಿಗಳಿಗೆ ಸಾಂಸ್ಕೃತಿಕ ರಾಯಭಾರಿಗಳಾಗುವ ಸಂದರ್ಭ ಬಂದಾಗ ಅಪಾಯಕಾರಿ ಸಂಕೇತಗಳಿರುವ ಹಚ್ಚೆಗಳನ್ನು ಲೇಸರ್ ಚಿಕಿತ್ಸೆಯ ಮೂಲಕ ತೆಗೆಸಿಬಿಡುತ್ತಾರೆ. ಇಂದು ಅಮೆರಿಕೆಯ ೩೬% ಕಾಲೇಜು ಮಕ್ಕಳು ಒಂದಾದರೂ ಹಚ್ಚೆ ಹಾಕಿಸಿಕೊಂಡವರಿದ್ದಾರೆ ಎಂದು ಅಧ್ಯಯನವೊಂದು ಹೇಳುತ್ತದೆ. ಇದು, ಇಷ್ಟು ವರ್ಷಗಳಲ್ಲಿ, ಸುಶಿಕ್ಷಿತ ಸಮಾಜ ಹಚ್ಚೆ ಹಾಕಿಸಿಕೊಂಡ ಪ್ರಮಾಣ ಅತೀ ಹೆಚ್ಚು. ಅಂದರೆ ಹಚ್ಚೆ ಮೊದಲಿನಂತೆ “ನಿಷೇಧಿತ” ಅಭಿವ್ಯಕ್ತಿಯಾಗಿ ಉಳಿದಿಲ್ಲ. ಅದನ್ನೊಂದು ಕಲೆಯ ಅಭಿವ್ಯಕ್ತಿ, ಭಾವನೆಗಳನ್ನು ಬಿಂಬಿಸುವ ಮಾಧ್ಯಮ, ತಮ್ಮ ವ್ಯಕ್ತಿತ್ವದ ಸಂಕೇತ, ಫ್ಯಾಶನ್ ಎಂಬಂತೆ ಹಾಕಿಸಿಕೊಳ್ಳುವವರೂ ಇದ್ದಾರೆ. ಆದರೆ ಮುಂಚೆ ಒಟ್ಟೂ ಜನಸಂಖ್ಯೆಯ ೨೪% ಪ್ರತಿಶತ ಹಚ್ಚೆಯವರು ಇದ್ದರೆ ಈಗ ಕೇವಲ ೧೪% ಪ್ರತಿಶತ ಮಾತ್ರ ಹಚ್ಚೆ ಹಾಕಿಸಿಕೊಂಡವರು ಸಿಗುತ್ತಾರೆ. ಅಂದರೆ ಹಚ್ಚೆಯ ಬಗೆಗಿನ ಮೋಹ ಕೂಡ ಗಣನೀಯವಾಗಿ ಇಳಿದಿದೆ ಇಲ್ಲವೇ ಲೇಸರ್ ರಿಮೂವಲ್ ವಹಿವಾಟು ಜೋರಾಗಿದೆ. ಹಚ್ಚೆ ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳುತ್ತಿದ್ದಂತೆ ಹಚ್ಚೆಯ ಉಚ್ಛ್ರಾಯ ಸ್ಥಿತಿಯ ಕೊನೆ ಅಮೆರಿಕೆಯಲ್ಲಿ ಸನ್ನಿಹಿತವಾಗುತ್ತಿದೆ ಅನ್ನುತ್ತಿದ್ದಾರೆ ಹಚ್ಚೆ ಪರಿಣತರು. ಯಾಕೆಂದರೆ ಈ ಹಚ್ಚೆ ಆರಂಭವಾಗಿದ್ದು ಒಂದು ವಿದ್ರೋಹದ ಮನೋಭಾವದಲ್ಲಿ, ಅಪರಾಧ ಜಗತ್ತಿನಲ್ಲಿ. ನಿಮ್ಮ ಹಂಗು ನನಗೇಕೆ ಎಂದು ಬಾಯಿಬಿಟ್ಟು ಹೇಳಲಾಗದ ಸಂಕಟದವರು ಹಚ್ಚೆ ಹಾಕಿಸಿಕೊಂಡು ತೋರಿಸಿದರು. ನನ್ನ ತಂಟೆಗೆ ಬರಬೇಡಿ ಎಂದು ಹಚ್ಚೆ ಹಾಕಿಸ್ಕೊಂಡು ಬೆದರಿಸಿದರು. ತಮ್ಮನ್ನೊಂದು ವಿಶೇಷ ಗುಂಪಿನೊಂದಿಗೆ ಗುರುತಿಸಿಕೊಳ್ಳುವ ತುಡಿತದ ಮೂಲದಲ್ಲಿ ಈ ಹಚ್ಚೆ ಪಸರಿಸಿತ್ತು. ಇಂದು ಆ ಒಂದು ತಡೆಗೋಡೆ ಇಲ್ಲವೆಂದಾದಲ್ಲಿ ಆ ವಿದ್ರೋಹ ಕೂಡ ಉಳಿಯುವುದಿಲ್ಲ. ಒಂದು “ಟ್ರೆಂಡ್” ಅದು ಮುಖ್ಯವಾಹಿನಿಯಲ್ಲಿ ಒಪ್ಪಿತವಾದಾಗ “ಟ್ರೆಂಡ್” ಆಗಿ ಉಳಿಯುವುದಿಲ್ಲ. ಯುವಜನತೆ ಸದಾ ತನ್ನನ್ನೊಂದು ವಿಶೇಷಣದೊಂದಿಗೆ ಗುರುತಿಸಿಕೊಳ್ಳಬಯಸುತ್ತದೆ.
ಯಾವಾಗ ಅಪ್ಪ ಅಮ್ಮಂದಿರು ಚಿಕ್ಕ ಹಚ್ಚೆಯ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳುವುದಿಲ್ಲವೋ, ಅದನ್ನು ಹಾಕಿಸಿಕೊಳ್ಳಬೇಕೆಂದು ಕೂಡ ಆ ಮನಸ್ಸಿಗನಿಸುವುದಿಲ್ಲ. ಅದು ಇನ್ಯಾವುದೋ ವಿಕ್ಷಿಪ್ತತೆಯನ್ನು ಕಂಡುಕೊಳ್ಳುತ್ತದೆ. ಮುಂಚಿನಂತೆ ಇಲ್ಲಿನ ಸಮಾಜದಲ್ಲಿ ಅಲ್ಲೊಂದು ಇಲ್ಲೊಂದು ಹಚ್ಚೆ ಟಾಟೂ ಆಗಿ ಉಳಿದಿಲ್ಲವಾದರೂ, ಬಹಳಷ್ಟು ಕಂಪನಿಗಳು ಎದ್ದು ಕಾಣುವಂಥಹ ಹಚ್ಚೆ ಇದ್ದವರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಲು ಇಂದಿಗೂ ಮನಸ್ಸು ಮಾಡುವುದಿಲ್ಲ. ಇಂದು ಹಚ್ಚೆಯಿರುವ ವೈದ್ಯರು, ವಕೀಲರು, ಇಂಜಿನಿಯರುಗಳು ಸಿಗುತ್ತಾರಾದರೂ ಅವರ್ಯಾರೂ ಹಚ್ಚೆ ಕಾಣುವಂತೆ ಬಟ್ಟೆ ಧರಿಸುವಂತಿಲ್ಲ. ವೃತ್ತಿಯ ಸಮಯದಲ್ಲಿ ಹಚ್ಚೆಯನ್ನು ಪ್ರದರ್ಶಿಸಬಾರದೆಂಬ ನಿಯಮಗಳು ಬಹಳಷ್ಟು ಕಡೆ ಇವೆ. ಇವಕ್ಕೆ ಮುಖ್ಯ ಕಾರಣ ಹಚ್ಚೆ, ಅದರ ಬಣ್ಣ, ವಿನ್ಯಾಸ ಹಾಗೂ ಆಧುನಿಕ ಜಗತ್ತಿನಲ್ಲಿನ ಅದಕ್ಕಿರುವ ಕುಖ್ಯಾತ ಜನ್ಮರಹಸ್ಯ, ನೋಡುಗನ ಮನಸ್ಸಿನಲ್ಲಿ ಅಪನಂಬಿಕೆಯನ್ನು ಮೂಡಿಸಬಹುದು. ಇದು ಪೂರ್ವಾಗ್ರಹ ಎಂದುಕೊಂಡರೂ ಮಾನವನ ಸಹಜ ಪ್ರತಿಕ್ರಿಯೆ ಅದು. ವ್ಯಕ್ತಿಯೊಬ್ಬ ಹಾಕಿಕೊಂಡ ಬಟ್ಟೆಬರೆಯಿಂದ ಆತನ ವ್ಯಕ್ತಿತ್ವ ಅಳೆಯಲಾಗದಿದ್ದರೂ ಅದು ಒಬ್ಬ ವ್ಯಕ್ತಿಯನ್ನು ನೋಡಿದಾಗ ಒಂದು ನಿರ್ದಿಷ್ಟ “ಫಸ್ಟ್ ಇಮ್ಪ್ರೇಶನ್” ಮೂಡಿಸುವುದಿಲ್ಲವೇ, ಹಚ್ಚೆಯೂ ಹಾಗೆಯೇ, ಅಲ್ಲಗಳೆಯುವಂತಿಲ್ಲ.
ಎಲ್ಲ ಹಾಗೆಯೇ, ನಾನು ಗಮನಿಸಿದಮಟ್ಟಿಗೆ, ಇಲ್ಲಿ ಮುಗಿಯುತ್ತಿದ್ದಂತೆ ಅಲ್ಲಿ ಹುಟ್ಟಿಕೊಳ್ಳುತ್ತದೆ. ಅಲ್ಲಿ ಮುಗಿದಿದ್ದು ಯಾಕೆ ಎಂದು ಮುಗಿಬೀಳುವ ಮುನ್ನ ಜನ ಯೋಚಿಸುವುದೇ ಇಲ್ಲ. ಸುಮ್ಮನೆ ಪಾಶ್ಚಾತ್ಯ ಸಂಸ್ಕೃತಿಯನ್ನು ಬಯ್ದುಬಿಡುತ್ತಾರೆ. ಇಲ್ಲಿನ ಸಂಸ್ಕೃತಿಯ ವೈಪರೀತ್ಯದ ಆವೇಶದ ತುಣುಕುಗಳನ್ನು ಸಂಪೂರ್ಣ ಸಮಾಜದ ಸಾಮಾನ್ಯ ನಡವಳಿಕೆ ಎಂದು ಗೊಂದಲಕ್ಕೆ ಬೀಳುತ್ತಾರೆ. ಆದರೆ ಇಲ್ಲಿನ ಸಮಾಜದ ಒಳಸೂಕ್ಷ್ಮಗಳು ಭಾರತದಲ್ಲಿ ಟೀವಿ ಪರದೆಯ ಮೇಲೆ ಕುಣಿಯುವ ಪಾಪ್ ತಾರೆಯರ ನಡುವಿನ ಮೇಲೆ ಬರೆದುಕೊಂಡಿರುವುದಿಲ್ಲ. ಅಲ್ಲಿ ಕೂತು ನೋಡಿದವರು ಇವರೆಲ್ಲ ಇಲ್ಲಿನ ಇಡೀ ದೇಶದ ಸಾಂಸ್ಕೃತಿಕ ಪ್ರತಿನಿಧಿಗಳೆನೋ ಎಂಬಂತೆ ಅನುಕರಿಸತೊಡಗುತ್ತಾರೆ. ಹಣ ಬೌದ್ಧಿಕ ಸ್ತರವನ್ನು ಹೆಚ್ಚಿಸುವುದಿಲ್ಲ. ಸೆಲೆಬ್ರಿಟಿಗಳಾಗುವುದರಿಂದ ಸಂಸ್ಕೃತಿ ಹುಟ್ಟುವುದಿಲ್ಲ. ಅದೊಂದು ಸೂಕ್ಷ್ಮ ಎಳೆ. ಬಲು ನಾಜೂಕಿನ ಅವಲೋಕನ. ಅಂಧಾನುಕರಣೆಯಲ್ಲಿ ಇವೆಲ್ಲ ಕಾಣಿಸುವುದಿಲ್ಲ.
ಪುಟ್ಟದೊಂದು ಪಾತರಗಿತ್ತಿ ಕುತ್ತಿಗೆಯ ಮೇಲೆ ಕಚಗುಳಿಯಿತ್ತರೆ ಚೆನ್ನಿತ್ತು ಅನಿಸಬಹುದು. ಪ್ರೇಮದ ಮುದ್ರೆಯನ್ನೊಂದು ಕೆತ್ತಿಬಿಡುವೆ ಎಂದು ಆರ್ತ ಹೃದಯವೊಂದು ಹಿಗ್ಗಬಹುದು. ಚರ್ಮದ ಮೇಲೊಂದು ಅಚ್ಚಳಿಯದ ಚಿತ್ತಾರ ಮೂಡಿಸುವ ಮುನ್ನ ಚೆನ್ನಾಗಿ ಯೋಚಿಸಿ. ಭಾರತದಲ್ಲಿ ಹೆಚ್ಚುತ್ತಿರುವ ಹಚ್ಚೆಯ ಹುಚ್ಚಿಗೆ ಇನ್ನೊಂದು ಬಲು ಮುಖ್ಯ ಆಯಾಮವಿದೆ. ಅಲ್ಲಿನ ವ್ಯಾಪಾರಗಳಲ್ಲಿ ನಿರ್ದಿಷ್ಟ ನಿಬಂಧನೆಗಳಿಲ್ಲ. ಉಪಯೋಗಿಸುವ ಬಣ್ಣ, ಸೂಜಿ, ತಂತ್ರಗಾರಿಕೆ, ಮಾಹಿತಿ, ಹಚ್ಚೆ ಹಾಕುವವನ ಜ್ಞಾನ ಎಲ್ಲ ಎಲ್ಲೂ ತಪಾಸಣೆಗೊಳಪಡುವುದಿಲ್ಲ. ಸರಿಯಾಗಿ ಬಳಸದಿದ್ದರೆ ಇವು ಹೆಪಟೈಟಿಸ್ ಹರಡಬಲ್ಲವು, ಮಾರಕ ರಾಸಾಯನಿಕಗಳು ಚರ್ಮಕ್ಕೆ ಹಾನಿ ತರಬಲ್ಲವು. ಚರ್ಮದ ನಿರ್ದಿಷ್ಟ ಒಳಪದರಗಳಿಗಿಂತ ಆಳವಾಗಿ ಬಣ್ಣ ಇಳಿಸಿಬಿಟ್ಟರೆ, ವಿಷಕಾರಿಯಾಗಬಲ್ಲವು. ಮುಂದೊಂದು ದಿನ ಹಾಕಿಸ್ಕೊಂಡ ಹಚ್ಚೆ ಅಸಹ್ಯವೆನಿಸಿದರೆ, ಲೇಸರ್ ನಿಂದ ಕೂಡ ಆಗ ತೆಗೆಯಲು ಸಾಧ್ಯವಿಲ್ಲ. ಹಚ್ಚೆ ವ್ಯಕ್ತಿತ್ವದ ಸಹಜ ಅಭಿವ್ಯಕ್ತಿಯೇ ಇರಬಹುದು, ಕಿವಿಚುಚ್ಚಿಸಿಕೊಂಡಂತೆ ಇದೂ “ನಾರ್ಮ್” ಆಗಬಹುದು. ಸದ್ಯಕ್ಕಂತೂ ಮದರಂಗಿಯ ರಂಗೇ ಸಾಕು. ಬೇಕೆಂದಾಗ ಬಳಿದುಕೊಂಡು ಅಂದದ ರೇಖೆಗಳಲ್ಲಿ ಬಳ್ಳಿ ಮೂಡಿಸಿಕೊಂಡು ಒಂದು ವಾರಕ್ಕೆಲ್ಲ ಮತ್ತೆ ನನ್ನ ಅಂಗೈ ನೋಡಿಕೊಂಡು ನಗಬಹುದು. ಈ ದೇಹವೇ ಶಾಶ್ವತವಲ್ಲ, ಅದರ ಮೇಲೊಂದು ಶಾಸನವ ಶಾಶ್ವತವಾಗಿಸಲು ಸಾಧ್ಯವೇ?









Nice…