– ಮಾರುತಿ ದಾಸಣ್ಣವರ
ಕೌಶಾಂಬಿ (ಉ ಪ್ರ )
ಯಾರೋ ಬಂದು ಕದವ ತಟ್ಟಿ
ನನ್ನ ಎದುರು ನಿಂದರು
ನಿಮ್ಮ ಮೊಗದ ನಗೆಯ ಹೂವ
ಗುಟ್ಟ ಹೇಳಿರೆಂದರು.
ಬದುಕು ಕೊಟ್ಟ ಕಲ್ಲು ಮುಳ್ಳು
ಒಟ್ಟಿ ಮನೆಯ ಕಟ್ಟಿದೆ
ನಗುವುದೆನಗೆ ಒಗ್ಗಿ ಹೋಯ್ತು
ಅಳುವ ಮೆಟ್ಟಿದೆ.

ಒಲುಮೆಯನ್ನೆ ಹಂಚುತಿಹಿರಿ
ದ್ವೇಷವಿಲ್ಲವೇ
ಹಂಚಿ ಹಂಚಿ ಪ್ರೀತಿ ಸರಕು
ತೀರಲಿಲ್ಲವೇ
ಹಗೆಯ ಸಂತೆಯಲ್ಲಿ ಹುಡುಕಿ
ಒಲುಮೆ ತಂದೆನು
ಹಂಚಿದಷ್ಟು ಬೆಳೆಯುತಿಹುದು
ಪ್ರೀತಿ ಅಳಿಯದು
ನಿಮ್ಮ ಎದೆಯ ಹೊಲದ ತುಂಬ
ಸಂಯಮದ ಪಚ್ಚೆ ತೆನೆ
ಹೇಗೆ ಹೇಳಿ ಎಂದು ನನ್ನ
ಕಾಡಿ ಬೇಡಿ ನಿಂದರು.
ಚಿಂತೆ ಭ್ರಾಂತಿ ತಲ್ಲಣಗಳ
ಹೂತು ಕೊಳೆಸಿ ಮಣ್ಣಲಿ
ತಾಳ್ಮೆ ಬೆಳೆಸಿ ಬದುಕ ಪಡೆದೆ
ತಾಳಿ ನೋಡಿ ಎಂದೆನು.
ಶಾಂತಿಯನ್ನೇ ಹೊದ್ದಿರುವಿರಿ
ಕೋಪ ಬರುವುದಿಲ್ಲವೇ
ತಪವ ಮಾಡಿ ಬಂದಿರೇನು
ಹೇಳಿ ಹೇಗೆ ಎಂದರು.
ದ್ವೇಷದಗ್ನಿಯಲ್ಲಿ ಚಿಟಿಕೆ
ಶಾಂತಿ ಧೂಪ ಹಾಕಿದೆ
ಇದಕೂ ಒಂದು ತಪವು ಬೇಕೆ
ಎಂದು ಮನದಿ ನಕ್ಕೆನು.






nice..very nice..
aparuupakke sundara vaada padya ohidha madhura anunbhava..su.ram.ekkundi avara nenapu taruva padya..really hrudya!..vasudeva nadig
abba tumba dodda dodda matu barediddeeri thanks