ಅಕ್ಕನ ಬಳೆಗಳೆದುರು…
-ಮಂಜುನಾಥ್ ಲತಾ
ಯಾರಿಗೂ ತಾಕಲಾರದ ಕವಿಯಾದ ನಾನು
ಸೋರುಗಿವಿ ಕಾಯಿಲೆಯಿಂದ ಸೊರಗಿರುವೆ.
ನನ್ನ ಕವಿತೆಯ ಸಾಲುಗಳು
ಪಾಯಖಾನೆಯೊಳಗಿನ ಬೆಣ್ಣೆಗುಳ್ಳೆಗಳಂತೆ ಚರಂಡಿಯೊಳಗೆ ಜಾರುತ್ತಿರುವುದನ್ನು
ಮಂಜುಗಣ್ಣುಗಳಿಂದ ಧ್ಯಾನಿಸುತ್ತಿರುವೆ.
ನನ್ನೀ ಅರೆ ಅರಿವನ್ನು ನನ್ನಕ್ಕ ಆಗಾಗ್ಗೆ ಎಚ್ಚರಿಸುತ್ತಾಳೆ;
ಮೂಗಿಗೂ ಕೊಳಕು ಅಕ್ಷರ ಸೋಂಕು ತಗುಲೀತೆಂಬಂತೆ ತಿವಿಯುತ್ತಾಳೆ.
ನಾಸಿಕಾಗ್ರದಿಂದ ಇದ ಗ್ರಹಿಸಲಾರದ ನಾನು
ನಾತಪ್ರೀತಿಗೆ ಬಿದ್ದು ಒರಲುತ್ತೇನೆ:
‘ನನ್ನಕ್ಕನಿಗೆ ಕಾವ್ಯದ ಬುದ್ಧಿ ಬರಲಿ’
ಅವಳಿಗೆ ನನ್ನ ಪ್ರಾರ್ಥನೆ ಕೇಳಿಸುವುದಿಲ್ಲ…
ಅವಳು ತನ್ನೊಳಗಿನ ಗೂಡನ್ನಷ್ಟೇ ಹಚ್ಚಿಕೊಂಡ ಹುಚ್ಚಿ.
ಅವಳ ಬದುಕು ಹಳೆಯ ಕಸಬರಿಕೆ
ಊರವರ ಹೇಲು ಬಳಿವ ಉಸಾಬರಿ ಅದಕೆ.
ಅಕ್ಕನದ್ದೊಂದು ಹೊಸ ಆಸೆ:
ಮತ್ತೆ ಬಳೆ ತೊಟ್ಟುಕೊಳ್ಳಬೇಕು.
ಬಳೆ ತಂದಳು ಮತ್ತೆ ನನ್ನಿದಿರು
ಅಲ್ಲಾಡಿಸಿದಳು ಕಿವಿ ಎದುರು
ನೊಂದು ಹಂಗಿಸಿದಳು: ‘ಕಿವಿ ಕೇಳಿಸದ ನೀನ್ಯಾವ ಕವಿ!’
ಅಕ್ಕನೆದುರು ನಾನೀಗ
ಕವಿಗಿವುಡ
ರೆಕ್ಕೆ ಸಾಲುಗಳ ಕತ್ತರಿಸಿಕೊಂಡ ಗರುಡ.
ನಾನೀಗ ನನ್ನಕ್ಷರಗಳ
ಹುಲುಹುಳುಗಳ ನಡುವೆ
ಅಕ್ಕನ ಬಳೆಗಳ ಹೊಳಪು ಕಾಣಲಾರದ
ಹಗಲುಗುರುಡ!






0 Comments