ಹಂಪೀಲೊಂದು ಮದುವೆ..

ಹಂಪಿ- ಮುಗಿಯದ ನೋಟ

(ಅರ್ಧ ದಿವಸದ ಹಂಪಿ ಹಾಗೂ ಮುಖಪರಿಚಯದ ಮದುವೆ)

ರಂಗಸ್ವಾಮಿ ಮಾರ್ಲಬಂಡಿ

ಚಿತ್ರಗಳು: ಶಿವಶಂಕರ ಬಣಗಾರ್

ವಿರೂಪಾಕ್ಷ ದೇವಾಲಯ, ಕಲ್ಲಿನ ರಥ , ಒಂದು ಕಂಬದಲ್ಲಿ ಹದಿನಾರು ಕಂಬ, ರಾಣಿ ಅರಮನೆ, ಮಹಾನವಮಿ ದಿಬ್ಬ ಆನೆಸಾಲು ಒಂಟೆಸಾಲು, ಸಾಸಿವೆ ಕಾಳು ಗಣಪ, ತುಂಗಭದ್ರಾ ನದಿ ದಂತಹ  ಸ್ಥಳಗಳು ಕೂಡ ಇಲ್ಲಿ ಅನೇಕ ಸಿಗುತ್ತವೆ.

ಬಳ್ಳಾರಿಯವನಾದ ನನಗೆ ಹಂಪಿ ಒಂದು ಸಮೀಪ ಕ್ಷೇತ್ರವಾದರೂ ಅದನ್ನು ಇನ್ನೂ ಪೂರ್ಣವಾಗಿ ನೋಡಿಲ್ಲ, ಅದರಲ್ಲಿ ಇರುವಂತಹ ಸ್ಮಾರಕಗಳು ಸಂಖ್ಯೆ  ಕೂಡ ಲೆಕ್ಕವಿಲ್ಲ ! ನಾನು ಹತ್ತನೇ ತರಗತಿಯಲ್ಲಿ ಹಂಪಿ ಪ್ರವಾಸಕ್ಕೆ ಹೋಗುವ ಮುನ್ನ ನನ್ನ ದೊಡ್ಡಪ್ಪನವರ ಶ್ರೀ ಈಶ್ವರಪ್ಪನವರು ಒಂದು ಮಾತು ಹೇಳಿದ್ದರು “ಹಂಪಿಯಲ್ಲಿನ ಪ್ರತಿ ಸ್ಮಾರಕಕ್ಕೆ ಒಂದೊಂದು ಕಡಲೆ ಬೀಜ ಹಾಕುತ್ತಾ ಹೋದರೆ ಒಂದು ಚೀಲದಲ್ಲಿನ ಕಡಲೆ ಬೀಜ ಆಗಿ ಹೋಗಿ ಇನ್ನೂ ಸ್ಮಾರಕಗಳು ಅಥವಾ ದೇವಸ್ಥಾನಗಳು ಉಳಿಯುತ್ತಾವೆ” ಎಂದು. ಅದಕ್ಕೇನೋ ಇಲ್ಲಿ ವಿದೇಶಿಯರು ವಾರಕ್ಕೂ ಅಧಿಕ ವಸತಿ ಸಹಿತ ಪ್ರವಾಸ ಮಾಡುತ್ತಾರೆ ಭಾರತೀಯರಾದ ನಮಗೆ ಕೇವಲ ಅರ್ಧ ದಿವಸದ ಹಂಪಿ ಪ್ರವಾಸದ ಪ್ರವಾಸ ಕಥನವಿದು.

ಗೆಳತಿಯೊಬ್ಬಳ ಮದುವೆಗೆ ನನ್ನದೆ ಸ್ವಂತ ಕಾರನ್ನು ಕಚೇರಿಯಲ್ಲಿ ನಾನು ಅಣ್ಣ ಎಂದು ಕರೆಯುವ ವ್ಯಕ್ತಿ  ಮರಿಯಪ್ಪ ಹಾಗೂ ಗೆಳೆಯ ಸಿದ್ದುರವನ್ನು ಕರೆದುಕೊಂಡು  ಹೋಗುತ್ತಿದ್ದಾಗ ಅಣ್ಣ ಮರಿಯಪ್ಪ ಅವರಿಗೆ ಗೆಳತಿ ರಜಿಯಾ ಫೋನ್ ಕರೆ ನಮ್ಮನ್ನು ಮದುವೆಗೆ ತೆರಳಿಸಲು ಒಂದು ತಾಸು ತಡ ಮಾಡಿಸಿತು, ಆದರೂ ನಾವು ನಮ್ಮ ಕಾರ್ಯಕ್ಷೇತ್ರ ಸಿಂಧನೂರಿನಿಂದ ಮದುವೆ ಜಾಗವಾದ  ಗಂಗಾವತಿ ತಾಲ್ಲೂಕಿನ ಗ್ರಾಮಕ್ಕೆ ತೆರಳಲು ಒಂದು ತಾಸು ಸಮಯ ತೆಗೆದುಕೊಂಡು ಅಲ್ಲಿ ಸೇರಿದೆವು. ಈಗಾಗಲೇ ಅಲ್ಲಿಗೆ ಸೇರಿದ್ದ ನಮ್ಮ ಇತರೆ ಕಚೇರಿಯ ಸಹಚರರು ವಧುವರರನ್ನು ಆಶೀರ್ವದಿಸಲು ಪಾಳಿ ಹಚ್ಚಿದ್ದರು, ನಾನು ಹೋಗಿರುವುದು ಹುಡುಗಿಯ ಕಡೆ, ನನಗೆ ಗಂಡು ಪರಿಚಯವೇ ಇಲ್ಲ, ಹುಡುಗಿ ಕೂಡ ಅಷ್ಟು ಪೂರ್ಣವಾಗಿ ಪರಿಚಯವಿಲ್ಲದ ನನಗೆ ಅಲ್ಲಿನ ಜನಸ್ತೋಮ ನೋಡಿ ವೇದಿಕೆ ಏರದಂತೆ ಮುಯ್ಯಿ (ಹಯಾರು) ಮಾಡಿಸಿ ಊಟ ಮಾಡೋಣ ಎಂಬ ಉಚಿತ ಸಲಹೆಯನ್ನ ಅಣ್ಣನಾದ ಮರಿಯಪ್ಪ  ರದ್ದು ಮಾಡಿ  ಒತ್ತಾಯ ಮಾಡಿ ನನ್ನನ್ನು ಸೇರಿಸಿ ಆ ಸಾಲಿಗೆ ಕಾಯಲು ನಿಂತ.

ಅಲ್ಲಿಯವರೆಗೆ ನನ್ನ ಕಣ್ ಹುಡುಕಿದ ಹೃದಯವೊಂದು ತನ್ನ ಕಣ್ಣಿಂದ ನನ್ನ ದೇಹವನ್ನು ಹಿಂದೆ ತಿರುಗಿ ನೋಡುತ್ತಾ ಮುಂದೆ ಹೋಗುತ್ತಿದ್ದನ್ನು ಕಂಡು ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಮನಸ್ಸಿನಲ್ಲಿ ಅಂದುಕೊಂಡು ಮುಂದೆ ಹೋಗಿ ಕಾಟಾಚಾರಕ್ಕೆ ಎಂಬಂತೆ ಫೋಟೊಗೆ ಪೋಸ್ ಕೊಟ್ಟು ನಾನು ಪಕ್ಕದಲ್ಲಿದ್ದ ಎಲ್ಲರನ್ನು ಬಿಟ್ಟು ಮುಂದೆ ಇದ್ದ ಆಸನಗಳಲೊಂದರಲ್ಲಿ ಕೂತೆ, ಅವಳು ಮತ್ತೊಮ್ಮೆ ವೇದಿಕೆ ಏರಿದಾಗ ಸ್ಪಷ್ಟವಾಗಿ ಅವಳ ಉಡುಗೆಯನ್ನು ಗಮನಿಸಿ ಪಕ್ಕದಲ್ಲಿ ಇದ್ದ ಗೆಳೆಯ ಸಿದ್ದುಗೆ ಏನ್ರೀ ಸಿದ್ದು “ನಿಮ್ಮ ತಂಗಿ ಮಲಗಿತ್ತಿಕ್ಕಿಂತ ಭಾರಿ ರೆಡಿಯಾಗಿದಾಳೆ” ಎಂದಾಗ ಅವನು ತನಗೇನೂ ಹೇಳಬೇಕೆಂದು ಗೊತ್ತಾಗದ ಗೊಂದಲದಲ್ಲಿ ಹಲ್ಲು ಕಾಣುವ ರೀತಿ ನಕ್ಕು ಎತ್ತಿನ ಗೋಣು ತರ ಮೇಲೆ ಕಲೆಗೆ ಅಲ್ಲಾಡಿಸಿದ.

ಕಡೆಗೂ ಅಲ್ಲಿಂದ ಬಿಟ್ಟು ಊಟದ ಕೋಣೆಗೆ ಹೋಗಿ ಊಟ ಮಾಡಬೇಕಾದಾಗ ಮತ್ತೊಮ್ಮೆ ಮಿಂಚಿನಂತೆ ಅವಳು ತಿರುಗಾಡುತ್ತಿದ್ದರೆ ಊಟದ ಮೇಲಿದ್ದ ಗಮನ  ಅವಳ ಕಡೆ ಹಾರಿ ಊಟದ ಅರ್ಧಕ್ಕೆ, ಕೈಗೆ ಮತ್ತು ಹೊಟ್ಟೆಗೆ ನೀರು ಹಾಕ್ಕೊಂಡು ಎಲ್ಲರನ್ನು ಬಿಟ್ಟು ಕಾರಿನಲ್ಲಿ ಒಂಟಿಯಾಗಿ ಕುಂತೆ. ಅಣ್ಣ ಪಕ್ಕದಲ್ಲೇ ಇದ್ದ ಹಂಪಿಗೆ ಹೋಗಲು ಪೂರ್ವ ಪೀಠಿಕೆ ಹಾಕಿ ಕಚೇರಿ ತಂಗಿಯರಾದ ಜ್ಯೋತಿ ಮುತ್ತಮ್ಮ ಅಕ್ಕಮ್ಮ ಈ ಮೂವರನ್ನು ನಾವು ಈಗಾಗಲೇ ಇದ್ದ ನಾಲ್ವರು ಸೇರಿ ಒಟ್ಟು ಏಳು ಜನ ನಾಲ್ವರು ಕೊಡುವ ಆಳ್ಟೊ ಕಾರಲ್ಲಿ ಪ್ರಯಾಣ ಬೆಳೆಸಲು ಶುರು ಮಾಡಿದಾಗ ಅವಳು ಅಷ್ಥರೊಳಗೆ ಬಟ್ಟೆ ಬದಲಾಯಿಸಿ ಹೆಗಲಿಗೆ ಬ್ಯಾಗೊಂದು ತಗಲಾಕೊಂಡು ನನ್ನ ಕಾರಿನ ಮುಂದೆ ತನ್ನ ಗೆಳತಿ ಜತೆಗೆ ಸುದ್ದಿ ಹೇಳುತ್ತಾ ನಿಂತು ವಾರೆ ನೋಟ ಬೀರುತ್ತಾ ನಿಂತಾಗ ಅವಳು ನನ್ನ ಮುಂದೆ ಪೋಸ್ ಕೊಡೊಕೆ ಬಂದಳೇನೋ ಎಂಬ ಅನುಮಾನದಲ್ಲಿ ಕಾರನ್ನು ಸ್ಟಾರ್ಟ್ ಮಾಡಿ ಎಲ್ಲರ ಜೊತೆ ಮಾತಿನಲ್ಲಿ ತೊಡಗಿ ಮುಂದೆ ಬಂದು ಕಾರನ್ನು ನಿಲ್ಲಿಸಿದಾಗ ಕಮಲಾಪುರ ಪೆಟ್ರೋಲ್ ಪಂಪ್ ಬಂದಿತ್ತು.

“ಹಂಪಿ ಎಂಬುದು ಕೊಂಪೆ ಆಗಿದೆ ಕೋಡಿ” ರಂಗಾ ಎಂದು ಮರಿಯಪ್ಪ ತನ್ನ ವಿಜಾಪುರ ಶೈಲಿಯಲ್ಲಿ ಮಾತು ಶುರು ಮಾಡಿದಾಗ , ಇಷ್ಟೊತ್ತು ಯಾಕೆ ಮಾತಾಡಲಿಲ್ಲ ಅನ್ಕೊಂಡಿದ್ದೆ, ನೀವು ವಿಜಯಪುರದವರು ಹಂಪಿಯನ್ನು ಯಾಕೆ ಬೇರೆಯಾಗಿ ನೋಡ್ತೀರಾ ಆಗಿದ್ದು ಆಗಿದೆ ಇತಿಹಾಸ ಬದಲಾವಣೆ ಮಾಡಲು ಸಾಧ್ಯನಾ? ಸಾಧ್ಯ ಇಲ್ಲ ಬಿಡು ಆದರೂ ಈ ಹಂಪಿ ನಮ್ ಕಡೆ ಇದ್ದಿದ್ದರೆ ಗೊತ್ತು ಮಾಡ್ತಿದ್ವಿ . ಗೊತ್ತಲ,  ನಮ್ಮ ಗೋಲ್ ಗುಂಬಜ್ ಹೆಂಗೈತೆ ಅಂತ. ತನ್ನ ಪ್ರಾದೇಶಿಕ ಸೊಗಡಿನ ಗರ್ವನ್ನು  ತೋರಿಸಿದಾಗ ಅಸಹಾಯಕತೆ ನಡುವೆ ಸಾಕೂ ಇಳಿಯಪ್ಪ ಎಂದು ಕಾರನ್ನು ಪಕ್ಕದಲ್ಲಿ ನಿಲ್ಲಿಸಿ ಲಾಕ್ ಮಾಡಿ, ಹಂಪಿಯ ಕಡಿಮೆ ರೇಟಿನ ಮಜ್ಜಿಗೆ (ಏಕೆಂದರೆ ವಿದೇಶಿಯರಿಗೆ ಬೆಲೆ ಜಾಸ್ತಿ) ಸೇವಿಸಿದೇವು.

ಮುತ್ತಮ್ಮನನ್ನು ಮುಂದೆ ಬಿಟ್ಟು ಎಲ್ಲರೂ ಅವಳನ್ನು ಕುರಿಗಳ ಮಂದೆ ತರ ಹಿಂಬಾಲಿಸಿ ವಿರೂಪಾಕ್ಷ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಹಿಂಭಾಗದಲ್ಲಿದ್ದ ಗೋಪುರದ ನೆರಳು ದರ್ಶನವನ್ನು ಮಾಡಿ ಅದರ ಪ್ರಾಮುಖ್ಯತೆಯನ್ನು ಇನ್ನೊಬ್ಬರ ಮಾರ್ಗದರ್ಶಕರಿಂದ ಕಳ್ಳತನ ಮಾಹಿತಿ ಪಡೆದು ತಂಗಿ ಅಕ್ಕಮ್ಮ ಬಂದು ನಮಗೆ ಹೇಳುತ್ತಾ ಸಾಗಿದಾಗ ಪಕ್ಕದಲ್ಲಿದ್ದ ತುಂಗಭದ್ರಾ ನದಿಯನ್ನು ತೋರಿಸಿ ಅದೇ ಆ ಕಡೆ ಇರುವುದೇ ವಿರುಪಾಪುರಗಡ್ಡೆ, ಅಲ್ಲಿಗೆ ಬಹಳಷ್ಟು ವಿದೇಶಿಯರು ಇರ್ತಾರೆ ನೋಡಿ ಎಂದು ನನ್ನ ಅಲ್ಪ ಹಂಪಿ ಜ್ಞಾನವನ್ನು ಅವರಿಗೆ ಪರಿಚಯ ಮಾಡಿದೆ.

ಪಕ್ಕದಲ್ಲಿ ಇದ್ದ ಪುಷ್ಕರಣಿ ತೋರಿಸುತ್ತಾ ಇದೇನು ಎಂದು ಮುಸ್ಲಿಂ ಗೆಳತಿ ರಜಿಯಾ ಕೇಳಿದಾಗ ಅದಕ್ಕೆ ಉತ್ತರವಾಗಿ ಸಿದ್ದು ಇದು ಪುಷ್ಕರಣಿ,  ಸ್ನಾನ ಮಾಡಲು ಉಪಯೋಗಿಸುತ್ತಿದ್ದರು ಅಲ್ಲಲ್ಲಿ ಬಂಡೆಗಳಲ್ಲಿ ಕಾಣುವ ಸಣ್ಣ ತೂತುಗಳು ಇದೆಲ್ಲ ಅವುಗಳನ್ನು ಹಲ್ಲು ತಿಕ್ಕಲು ಬಳಸುವ ಇದ್ದಿಲುಗಳನ್ನು ಇಡಲು ಉಪಯೋಗಿಸುತ್ತಿದ್ದರು ಎಂದು ಅವನು ಕಲ್ಲಿಗೆ ಇದ್ದ ಸಹಜ ರಂಧ್ರಗಳನ್ನು ತನಗೆ ಅನುಕೂಲವಾಗುವಂತೆ ಅರ್ಥೈಸಿಕೊಂಡು ಹೇಳಿದಾಗ, ನಮ್ಮ ಗುಂಪು ನಗುವಿನ ಅಲೆಯಲ್ಲಿ ತೇಲುತ್ತಾ ಗುಡಿಯ ಹೊರಭಾಗಕ್ಕೆ ಬಂತು, ಪಕ್ಕದಲ್ಲಿ ಇದ್ದ ಪುಸ್ತಕ ಪ್ರಕಾಶನದ ಕಡೆ ಕೈ ತೋರಿಸಿ “ಮರೆತು ಹೋದ ಸಾಮ್ರಾಜ್ಯ” ಪುಸ್ತಕ ಕನ್ನಡದಲ್ಲಿದೆ ಯಾರಾದರೂ ಇಚ್ಛೆ ಇದ್ದರೆ ತಗಳ್ಳಿ ಎಂದು ಪುಸ್ತಕದ ಆಸಕ್ತಿ ಪ್ರದರ್ಶನ ಮಾಡಿ ಫೋಟೋಗಳಿಗೆ ಪೋಸ್ ಕೊಡಲು ಶುರು ಮಾಡಿದೆ. ನಮ್ಮ ಫೋಟೋ ಅಭಿಯಾನ ಪ್ರವಾಸ ಮುಗಿಯೊವರೆಗೂ ಮುಗಿಯಲಿಲ್ಲ.

ಅಲ್ಲಿಂದ ನಮ್ಮಗಳ ವಾಹನ ರಾಣಿ ವಾಸಗೃಹಕ್ಕೆ ತೆರಳಿತು, ದಾರಿಯಲ್ಲಿ ಬಂದ ಆನೆಸಾಲು ಒಂಟೆಸಾಲು ಸಾಸಿವೆ ಕಾಳು ಗಣಪ, ಇವುಗಳನ್ನು ಕಾರಿನಲ್ಲಿಯೇ ತೋರಿಸಿ ರಾಣಿವಾಸದ ಮುಂದೆ ಬಂದೆವು. ಅಲ್ಲಿ ನಮ್ಮ ಗುಂಪು ಎರಡು ಭಾಗಗಳಾಗಿ ವಿಭಾಗ ಹೊಂದಿ ನಾವು ಮೂವರು ಗಂಡಸರು ಒಂದು ಕಡೆ ಹೋಗಿ ಅಲ್ಲಿರುವ ವಿದೇಶಿಯರ ಜೊತೆ ಒಂದು ಚಿತ್ರವನ್ನು ನಾನು ಮತ್ತು ಗೆಳೆಯ ಸಿದ್ದು ತೆಗೆದುಕೊಳ್ಳುತ್ತಿದ್ದಾಗ ನಮ್ಮ ತಂಗಿಯ ಬಳಗ ಬಂದು ಮತ್ತೆ ನಮ್ಮನ್ನು ಸೇರಿತು, ಇಷ್ಟು ವರಗ ರಾಣಿ ಸ್ನಾನ ಮಾಡುತ್ತಿದ್ಳು? ಎಂದು ಅಣ್ಣನ ಪೆದ್ದದ ಪ್ರಶ್ನೆಗೆ ಇದು ರಾಣಿವಾಸಣ ಇಲ್ಲಿ ಸೇವಕಿಯರು ಮಾತ್ರ ಇರುತ್ತಾರೆ ಅದಕ್ಕ ಎಲ್ಲಿ ಸ್ನಾನ ಮಾಡಿದರೂ ನಡೆಯುತ್ತೆ ಎಂದೆ.

ಹೊಸದಾದ ಕಟ್ಟಡಗಳ ತರ ಯಾವುದೋ ವಸ್ತುವಿನಿಂದ ಮಹಾನವಮಿ ದಿಬ್ಬದ ದ್ವಾರ ಅಲಂಕಾರಗೊಳ್ಳುತ್ತಿದ್ದು ಮಹಾನವಮಿ ದಿಬ್ಬದ ಮೇಲೆ ಏರಿ ನಾವು ಇತಿಹಾಸ ತಜ್ಞರ ಥರ ಒಬ್ಬೊಬ್ಬರು ಒಂದೊಂದು ಊಹೆಯನ್ನು ಪ್ರದರ್ಶಿಸಿದೆವು, ಮಹಾನವಮಿಗೆ ರಾಜ ಬಂದು ದರ್ಶನ ಕೊಡುತ್ತಿದ್ದ,ಅಂತೆ ಅಳಿಯ ರಾಮರಾಯ ಆಗಿನ ಅರಸನನ್ನು ಕೇವಲ ನವಮಿ ರಾಜನನ್ನಾಗಿ ಮಾಡಿ, ದರ್ಶನಕ್ಕೆ ಮಾತ್ರ ಮೀಸಲಿರಿಸಿದ್ದನ್ನು ರಕ್ಕಸ ತಂಗಡಿ ನಾಟಕದಲ್ಲಿ ಬಂದ ಸನ್ನಿವೇಶವನ್ನು ನೆನಪು ಮಾಡಿಕೊಂಡು ಹೇಳಿದಾಗ  ಎಲ್ಲರೂ ತಲೆ ತೂಗಿ ಫೋಟೊಗಳಿಗೆ ಮತ್ತೊಮ್ಮೆ ಪೋಸ್ ಕೊಟ್ಟು, ಅದರಲ್ಲಿ ಸಿದ್ದು ಕೊಟ್ಟ ರಾಜನ ತರ ಪೋಸಿಗೆ ಎಲ್ಲರೂ ” ಹೋ” ಗಳ ಸುರಿಮಳೆ ಹಾಕಿದೆವು.

ನನಗೆ ಮಸ್ಕಿಗೆ ಹೋಗಲು ಹೊತ್ತು ಆಗ್ತದಣ್ಣ ಎಂದು ಮರಿಯಪ್ಪಗೆ ರಜಿಯಾ ಅಂದಾಗ ಆತು, ಆತು, ಹೇ ರಂಗಾ ಜಲ್ದಿ ಆ ಕಲ್ಲಿನ ತೇರಿಗೆ ಹೊಡಿ ಗಾಡಿನ ಟೈಮ್ ಕೂಡ ಹೈದಾಗಾಕ ಬಂತು ಎಂಬ ಮಾತಿನೊಂದಿಗೆ ಕಲ್ಲಿನ ರಥದ ದ್ವಾರಕ್ಕೆ ಬಂದು ಪ್ರವೇಶ ಚೀಟಿ ಪಡೆದು ಎಲ್ಲರೂ ಆತುರದಿಂದಲೇ ಒಳಹೊಕ್ಕೆವು

ಆಗ ಅಲ್ಲಿಯವರೆಗೆ ಪರಿಚಯ ಮಾಡಿಕೊಳ್ಳದ ಮಾರ್ಗದರ್ಶಕರು ಅಲ್ಲಿ ಒಬ್ಬ ಬಂದು ಕೇವಲ ನೂರು ರೂಪಾಯಿ ಕೊಡಿ ಸಾರ್ ಸಾಕು ಎಂದಾಗ ಸಿದ್ದುವಿನ ವಿರೋಧದ ನಡುವೆಯೂ ದುಡ್ಡು ತೆಗೆದು ಅವನ ಕೈಯಲ್ಲಿಟ್ಟೆ. ನೂರು ರೂಪಾಯಿ ತೆಗೆದುಕೊಂಡವನೆ ಅವನು ಪಕ್ಕದಲ್ಲಿರುವ ವ್ಯಕ್ತಿಗಳ ಅಭಿಪ್ರಾಯವನ್ನು ಕೇಳದೆ ತನ್ನ ಅಭಿಪ್ರಾಯ ಹೇಳಲು ಶುರು ಮಾಡಿದ ಆ ಕಾಲದಲ್ಲಿ ಹಂಪಿಯ ಕಲ್ಲಿನ ರಥ  ಎಳೆಯುತ್ತಿದ್ದರು ಎಂಬ ನಮ್ಮ ತಾತನ ನುಡಿಯನ್ನು ಸುಳ್ಳು ಮಾಡಿ ಇದರ ಗಾಲಿಗಳನ್ನು ಮಾತ್ರ ತಿರುಗಿಸುತ್ತಿದ್ದರು ಹಾಗೂ ಕಲ್ಲಿನ ರಥದಲ್ಲಿ ಅನೇಕ ಮೂರ್ತಿಗಳಿಗೆ ಜಖಂಗೊಂಡಿರುವುದು ಆಗಿನ ಯುದ್ಧದಲ್ಲಿ ಆದ ಪ್ರತಿಫಲನ  ಎಂದು ತಿಳಿ ಹೇಳಿದರು. ಅಲ್ಲಿಂದ ಒಂದು ಕಂಬದಲ್ಲಿನ ಹದಿನಾರು ಕಂಬ ಮಂಟಪಕ್ಕೆ ಹೋಗಿ ಸಂಗೀತ ಕಚೇರಿಗಳ ಮಹತ್ವ ತಿಳಿಹೇಳಿದರು ಜೊತೆಗೆ ಅದೆ ಮಂಟಪದ ಕೆಳಗಿದ್ದ ವಿವಿಧ ಸಣ್ಣ ಕುದುರೆಗಳ ಚಿತ್ರಗಳು, ಮನುಷ್ಯ ಚಿತ್ರಗಳನ್ನು ತಿಳಿಸಿ ಹೇಳುತ್ತಾ ಇವೆಲ್ಲವೂ ಆ ಕಾಲದಲ್ಲಿ ಪರ್ಷಿಯಾದೊಂದಿಗಿನ ವ್ಯಾಪಾರದ ಸಂಕೇತವೂ ಆಗಿದ್ದವು ಎಂದು ಜೊತೆಗೆ ಈ ಆವರಣದ ಮೂರು ದಿಕ್ಕುಗಳಿಗೆ ವಿಷ್ಣುವಿನ ದೇವಸ್ಥಾನಗಳು ಇವೆ ಎಂದು ಹೇಳುತ್ತಾ ನಮ್ಮನ್ನು ಆವರಣದ ಹೊರಗಡೆ ಕರೆತಂದು ಅಲ್ಲಿ ನಿಂತ ಕಂಭದ ಸಾಲುಗಳನ್ನು ತೋರಿಸುತ್ತಾ  ಇಲ್ಲೆಲ್ಲ ವ್ಯಾಪಾರ ಸಂತೆ ನಡೆತಿತ್ತು ಎಂದು, ಅದಕ್ಕಾಗಿಯೇ ಕಮಾನುಗಳು ನಿರ್ಮಾಣವಾಗಿವೆ ಎಂದು ಹೇಳಿ ನಾನು ಬರ್ತೀನಿ ಸಾರ್ ಎಂದು ಅವನಿಗೆ ಕೊಟ್ಟ ನೂರು ರೂಪಕ್ಕೆ ನ್ಯಾಯ ಒದಗಿಸಿ ಅಲ್ಲಿಂದ ಜಾಗ ಖಾಲಿ ಮಾಡಿದ.

ಅವನಿಗೆ ಏನಾದರೂ ಪ್ರಶ್ನೆಗಳು ಕೇಳಬೇಕೆಂಬ ಗೊಂದಲದಲ್ಲಿಯೇ ಅವನು ಹೋಗುತ್ತಿರುವುದನ್ನು ನಾವು ಮೂಕ ಪ್ರೇಕ್ಷಕರಾಗಿ ಸಾಕ್ಷಿಯಾಗಿ ಕಡೆಗೂ ಸೋತು ಸೂರ್ಯ ಹುಟ್ಟುವ ದಿಕ್ಕಿಗೆ ಮುಖಮಾಡಿ ಅಲ್ಲಿ ಬರುವ ವಿದ್ಯುತ್ ಚಾಲಿತ ಯಂತ್ರಗಳ ಬರುವಿಕೆಗಾಗಿ ಕಾಯುತ್ತಾ ನಿಂತೆವು, ಅವುಗಳ ಬರುವಿಕೆ ತಡವಾಗುತ್ತಿದ್ದಂತೆಯೇ ಪಕ್ಕದಲ್ಲಿರುವ ರಿಯಾನವರ ಗುನುಗುವಿಕೆ ಹೆಚ್ಚಾಗಲು ಶುರು ಮಾಡಿದಾಗ , ಹೋಗೊಣ್ ಹೋಗೊಣ್ ಅಂತ ಅಣ್ಣ ಸಮಾಧಾನದ ನುಡಿಗಳ ಮಧ್ಯದಲ್ಲಿ ಮುತ್ತಮ್ಮ ಮೊನ್ನೆ ಹಂಪಿಯಲ್ಲಿ ಕಲ್ಲುಗಳನ್ನು ಒದ್ದು ಕೇಸ್ ಆಗಿದ್ದು ಇಲ್ಲೇ ಏನು ? ಎಂಬ ಪ್ರಶ್ನೆಗೆ ಗಮನ ಹರಿಸಿ ಉತ್ತರ ಗೊತ್ತಿಲ್ಲದ ಮೂರ್ಖರಾಗಿ ನಿಂತೆವು. ಅದಕ್ಕೆ ಅವಳು ನನಗೆ ಸಮಾಧಾನ ಆಗ್ತಿಲ್ಲ ಯಾರಾದ್ರೂ ಹ್ಞೂ ಅನ್ರಿ ಇಲ್ಲ ಹು, ಹು, ಅನ್ರಿ  ಎಂಬ ಮಾತಿಗೆ ಸಿದ್ದು ನಾವೇನನಬೇಕು ನೀನೆ ಅನ್ಕ ಎಂಬ ಅವನ ಉತ್ತರಕ್ಕ  ಹೂ ಎಂದು  ಅವಳು ತನ್ನಷ್ಟಕ್ಕೆ ತಾನೇ ತನ್ನ ಆತ್ಮವನ್ನು ಸಮಾಧಾನಪಡಿಸಿಕೊಂಡು ಧ್ವನಿಯಲ್ಲಿ ಖುಷಿಯಾಗಿದ್ದು ನಾನು ಗುರುತಿಸಿದೆ.

ವಿದ್ಯುತ್ ಚಾಲಿತ ಯಂತ್ರದಲ್ಲಿ ಎಲ್ಲರೂ ಕುಂತು ನಾವುಗಳು ಮತ್ತೊಮ್ಮೆ ಸೆಲ್ಫಿಗೆ ಪೋಸ್ ಕೊಟ್ಟು,  ಅಲ್ಲೇ ಇದ್ದ ಕಲ್ಲಂಗಡಿ ಹಣ್ಣನ್ನು ತಿಂದು ಕಾರ್ ಏರಿ ಕಂಪ್ಲಿ ದಾರಿ ಹಿಡಿದು, ಕಂಪ್ಲಿ ದಾಟಿ ಸಿರುಗುಪ್ಪ ದಾರಿಗೆ ಬಂದು ಮಧ್ಯದ ಸಿರುಗುಪ್ಪ ತಾಲೂಕಿನ ನಡವಿ ಗ್ರಾಮದಲ್ಲಿ ಮುತ್ತಮ್ಮ ಕಾಯಿಸಿ ಕೊಟ್ಟ ಚಹಾ ಕುಡಿದು ಅವಳನ್ನು ಅಲ್ಲೇ ಬಿಟ್ಟು ಸಿಂಧೂನೂರುಗೆ ಮರಳಿ ಬರುವಷ್ಟರಲ್ಲಿ ಸಮಯ ರಾತ್ರಿ ಒಂಬತ್ತು ಗಂಟೆ ಆಗಿತ್ತು ..

‍ಲೇಖಕರು avadhi

April 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. K T Mariswamy Mariswamy

    ಹಂಪೀಲೊಂದು ಮದುವೆ ಪ್ರವಾಸ ಕಥನ ಓದುಗರನ್ನು ಆಸಕ್ತಿಕರವಾದ ಕುತೂಹಲ ದೊಂದಿಗೆ ಓದಿಸಿಕೊಂಡು ಹೋಗುತ್ತದೆ. ಲೇಖಕರ ವಿವರಣೆ ಈಗಾಗಲೇ ಹಂಪಿ ನೋಡಿದವರಿಗೆ ತಾವು ಹಂಪಿಯ ಸ್ಮಾರಕಗಳ ಮಧ್ಯದಲ್ಲಿ ವಿಹರಿಸುತ್ತಿದ್ದೇವೇನೋ ಎಂಬ ಭಾಸ ಮೂಡಿಸುತ್ತದೆ. ಗೆಳೆಯರ ಬಳಗದಲ್ಲಿ ಸಿಡಿದ ಹಾಸ್ಯ ಚಟಾಕಿ ಗಳು, ಚೆಲುವೆಯ ಕಣ್ಣೋಟ ಮಾತ್ರ ದಿಂದ ಲೇಖಕರ ಮನಸ್ಸನ್ನು ಚಂಚಲಗೊಳಿಸಿ ಅರೆ ಹೊಟ್ಟೆಯೊಂದಿಗೆ ಮರಳಿದ್ದು ನಗೆ ತರಿಸುತ್ತದೆ.

    ಉದಯೋನ್ಮುಖ ಲೇಖಕರೂ, ಸಹೋದರನೂ ಆದ ಶ್ರೀ ರಂಗಸ್ವಾಮಿ ಮಾರ್ಲಬಂಡಿ ಇವರಿಂದ ಇಂತಹ ಅದೆಷ್ಟೋ ಲೇಖನಗಳು ಮೂಡಿ ಬಂದು ಓದುಗರಿಗೆ ರಸದೌತಣ ನೀಡಲೆಂದು ಬಯಸುತ್ತೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: