ಮೇಘನಾ ಸುಧೀಂದ್ರ ಅಂಕಣ: ದೊಡ್ಡ ಟಿಶ್ಯೂ ರೋಲನ್ನ ಮುಖದ ಮೇಲೆ ಎಸೆದಳು

“ಥೂ ಚುರೋಸ್ ಸಾಸೆಲ್ಲಾ ಚೆಲ್ಲೋಯ್ತು, ನನ್ನ ಹೊಸ ಬಟ್ಟೆ ಗಬ್ಬೆದ್ದುಹೋಯಿತು. ಇಲ್ಲ್ಯಾರೂ ರಿಪ್ಲೇಸ್ಮೆಂಟ್ ಮಾಡೀರಿಲ್ವಲ್ಲಾ ಕರ್ಮ ನಂದು” ಎಂದು ಬೈದುಕೊಂಡೇ ಇದ್ದಳು ಹುಡುಗಿ. “ಇಲ್ಲಿ ನೋಡು, ನಮ್ಮ ದಿನ ಪತ್ರಿಕೆಯಲ್ಲಿ ಒಂದು ಒಳ್ಳೆ ಸುದ್ದಿ ಬಂದಿದೆ” ಎಂದು ಕೈಗೆ ಕೊಟ್ಟಳು ಎಲೆನಾ. “ಓಹ್ ಇದನ್ನ ಚುರೋಸ್ ಸಾಸ್ ಒರೆಸಲು ಕೊಟ್ಟಿರಬೇಕು ” ಎಂದುಕೊಂಡು ಚೆನ್ನಾಗಿ ಅದನ್ನ ಇಟ್ಟುಕೊಂಡು ಒರೆಸಿಕೊಂಡಳು. ಎಲೆನಾಗೆ ಎಲ್ಲಿಲ್ಲದ ಕೋಪ ಬಂತು. ಒಂದು ದೊಡ್ಡ ಟಿಶ್ಯೂ ರೋಲನ್ನ ತಂದು ಅವಳ ಮುಖದ ಮೇಲೆ ಎಸೆದು ಅದರಲ್ಲಿ ಒರೆಸಿಕೋ ಎಂದು ಕೊಟ್ಟು, ಬೈದುಕೊಂಡು ಎದ್ದು ಹೋದಳು.

ಮತ್ತೇನು ಮಾಡುವುದು ಎಂದು ಮೈಯೆಲ್ಲಾ ಒರೆಸಿಕೊಂಡು ಆಚೆ ಬಂದಾಗ, ಎಲೆನಾ ಇನ್ನೊಂದು ನ್ಯೂಸ್ ಚಾನೆಲ್ಲಿನ ನ್ಯೂಸನ್ನ ತೋರಿಸುತ್ತಿದ್ದಳು. ಅದರಲ್ಲಿ ಇನ್ನು ಮುಂದಿನ ಬೆಳವಣಿಗೆಯನ್ನ ತೋರಿಸುತ್ತಿದ್ದಳು. “ಅಕ್ಟೋಬರ್ ೧ ೨೦೧೭ರಂದು ಕತಲೂನ್ಯಾದ ಸ್ವಾತಂತ್ರ್ಯಕ್ಕೆ ನಾವು ಮತದಾನ ಮಾಡುತ್ತಿದ್ದೇವೆ ” ಎಂದು ಖುಷಿಯಿಂದ ಹೇಳುತ್ತಿದ್ದಳು. “ಇಲ್ಲಿ ನಾವು ಮೆಜಾರಿಟಿ ಎಂದು ಗೊತ್ತಾದರೆ ನಮಗೆ ಸ್ವಾತಂತ್ರ್ಯ ಬರುತ್ತದೆ. ಇದು ನನ್ನ ಜೀವಮಾನದಲ್ಲಿ ನಡೆಯುವ ಖುಷಿಯಾದ ವಿಚಾರ” ಎಂದು ಕುಣಿಯುತ್ತಿದ್ದಳು. ಒಂದು ೧೦ ನಿಮಿಷದ ಮುಂಚೆ ಹೀಗೆ ಟಿಶ್ಯೂ ಬಿಸಾಕಿದವಳು ಈಗ ಕುಣಿಯುತ್ತಿದ್ದಾಳಲ್ಲ ಯಾಕೆ ಹೀಗೆ ಎಂದು ಅಂದುಕೊಳ್ಳುತ್ತಿದ್ದಳು.

ಅಷ್ಟರಲ್ಲಿ ಸರಿಯಾಗಿ ಒಂದಷ್ಟು ಟೀವಿ ಚಾನಲ್ಲುಗಳ ಓ ಬಿ ವ್ಯಾನ್ ಎಲೆನಾ ಮನೆ ಮುಂದೆ ಬಂದು ನಿಂತುಕೊಂಡಿತು. ಇನ್ನು ಮತ್ತೆ ನಾ ಟೀವಿಯಲ್ಲಿ ಕಾಣಿಸಿಕೊಂಡರೆ ನನ್ನ ಕಥೆ ಗೋವಿಂದ ಎಂದು ಹುಡುಗಿ ತಕ್ಷಣ ಹಿತ್ತಲಿನ ಒಂದು ರೂಮಿನಲ್ಲಿ ಬಚ್ಚಿಟ್ಟುಕೊಂಡಳು. ಅಲ್ಲಿ ದೊಡ್ಡ ಘನವಾದ ಚರ್ಚೆ ನಡೆಯುತ್ತಿತ್ತು. ಅವಳ ನಡುಮನೆಯನ್ನೇ ಸ್ಟುಡಿಯೋ ಮಾಡಿಬಿಟ್ಟರು. ಥೇಟ್ ನಮ್ಮಗಳ ಹಾಗೆಯೇ, “ಇದರ ಬಗ್ಗೆ ನಿಮಗೇನನ್ನಿಸುತ್ತದೆ” ಎಂಬ ಪ್ರಶ್ನೆ.  ಅವರೂ ಸಾಕಷ್ಟು ಏನು ಹೇಳಬೇಕೋ ಆ ಉತ್ತರವನ್ನ ಕೊಡುತ್ತಿದ್ದರು. “ಸ್ವಾತಂತ್ರ್ಯ ಸಿಕ್ಕ ಮೇಲೆ ಏನು ಮಾಡುತ್ತೀರಾ” ಅದು ಇದು ಎಲ್ಲವನ್ನೂ ಕೇಳುತ್ತಿದ್ದರು.

ಇಲ್ಲಿ ಏನಾಗುತ್ತದೆ ಅಥವಾ ಆಗತ್ತೆ ಅನ್ನುವ ಸಂಯಮಕ್ಕಿಂತ ಯಾರು ಮೊದಲು ಬ್ರೇಕಿಂಗ್ ನ್ಯೂಸ್ ಕೊಡುತ್ತಾರೆ ಎಂದು ಹಪಹಪಿಸುತ್ತಿದ್ದರು. ಎಲೆನಾ ಈ ಟೀವಿಯವದ ಕಣ್ಮಣಿಯಾಗಿದ್ದಳು. ಅಷ್ಟು ಚಿಕ್ಕ ಹುಡುಗಿ ಹೀಗೆಲ್ಲಾ ಮಾತಾಡೋವಾಗ ಅವಳನ್ನ ಮುಂದಿನ ಪ್ರಧಾನಿಯನ್ನಾಗಿಯೋ ಇಲ್ಲ ಹೊಸ ನಾಯಕಿಯನ್ನಾಗಿಯೋ ಮಾಡಬೇಕೆಂಬ ಹುನ್ನಾರ ಎಲ್ಲರಲ್ಲಿ ಇತ್ತು.

ಅವರವರ ಹುಚ್ಚುತನಕ್ಕೆ ಕುಣಿಸುವ ವಸ್ತುವನ್ನಾಗಿ ಅವಳನ್ನ ನೋಡುವ ತಯಾರಿಯಲ್ಲಿ ಎಲ್ಲರೂ ಇದ್ದರು ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಇಲ್ಲಿ ನಿಜವಾದ ವಿಷಯಕ್ಕಿಂತ ಸೆನ್ಸೇಷನಿಲಸಮ್ ಕೆಲಸ ಮಾಡುತ್ತಿತ್ತು. ಈ ಮತದಾನ ಪ್ರಕ್ರಿಯೆಗಿಂತ ಎಲೆನಾಳನ್ನ ಸ್ಪಾನಿಷ್ ದ್ವೇಷಿಯನ್ನಾಗಿ ಬಿಂಬಿಸಲಾಗಿತ್ತು. “ನಾದಾ ಎಸ್ಪಾನಿಯೋಲ್” ಎಂದು   ಗಾಜಿನ ಸದ್ದು ಅಳವಡಿಸಿ ಅವಳ ಮುಖವನ್ನ ತೋರಿಸಿ ಹೇಳಿದ್ದನ್ನೇ ಹೇಳುತ್ತಿದ್ದರು ಟೀವಿಯಲ್ಲಿ.

ಈ ರೆಫೆರೆಂಡಮ್ಮನ್ನು ಕತಲೂನ್ಯಾದ  ಸಂಸತ್ ೨೦೧೫ರಲ್ಲಿ ಪಾಸ್ ಮಾಡಿದ್ದರೂ ಒಂದೂವರೆ ವರ್ಷದಲ್ಲಿ ನಡೆದ ಹಿಂಸಾಚಾರದಲ್ಲಿ ಇದನ್ನ ತಡೆಹಿಡಿಯಲಾಗಿತ್ತು. ಆಗ ಹುಡುಗಿ ಮೆಲ್ಲಗೆ ಎಲೆನಾಳನ್ನ ಕೇಳಿದ್ದಳು, “ಅಲ್ಲಾ ಹೀಗೆ ಕಂಡ ಕಂಡವರೆಲ್ಲಾ ನಾನು ಈ ದೇಶದಲ್ಲಿ ಇರೋದಿಲ್ಲ ಎಂದು ಮತದಾನ ಪ್ರಕ್ರಿಯೆ ಶುರುಮಾಡಿಕೊಂಡರೆ ದೇಶ ಒಡೆದು ಛಿದ್ರ ಛಿದ್ರ ಆಗೋದಿಲ್ವಾ, ಇದರಲ್ಲಿ ತಾರ್ಕಿಕವಾಗಿ ಏನೂ ನಡೆಯುತ್ತಿಲ್ಲ, ನನ್ನ ಪ್ರಕಾರ ಇದೊಂಥರಾ ಸಮೂಹ ಸನ್ನಿಗೆ ಒಳಗಾಗುವ ಪ್ರಕ್ರಿಯೆ ಇದೆ, ಬಿಸಿರಕ್ತದ ವಯಸ್ಸಿನಲ್ಲಿ ನಮ್ಮ ಅಪ್ಪ ಅಮ್ಮ, ಆಳುವ ನಾಯಕರು ಯಾರೂ ನಮಗೆ ಇಷ್ಟವಾಗೋದಿಲ್ಲ, ಹಾಗಂತ ರೆಫರೆಂಡಮ್ ಹೊರಡಿಸೋದಕ್ಕೆ ಆಗುತ್ತದಾ, it becomes a banana republic”  ಎಂದು ಹುಡುಗಿ ಒಮ್ಮೆ ವಾದ ಮಾಡಿದ್ದಳು.

ಇದೆಲ್ಲವನ್ನು ಕ್ಯಾರೆ ಎನ್ನದ ಎಲೆನಾ ಟೀವಿಯಲ್ಲಿ ಬಹಳ ಧೈರ್ಯವಾಗಿ ಮುಂದಿನ ಚುನಾವಣೆಯ ಪ್ರಕ್ರಿಯೆಯ ಬಗ್ಗೆ ಮಾತಾಡೋಕೆ ಶುರು ಮಾಡಿದಳು. ಅಂದರೆ ಮತದಾನಕ್ಕೆ ಬಾಲೆಟ್ ಬಾಕ್ಸ್ ಬೇಕಾಗಿತ್ತು, ಅದನ್ನ ಸ್ಪೇನಿನ ಸರ್ಕಾರ ಕೊಡಬೇಕಿತ್ತು. ಅಂದರೆ ನಮ್ಮ ಹಾಗೆ ಚುನಾವಣೆ ಕಮೀಷನ್ ಕೇಂದ್ರ ಸರ್ಕಾರದ ಹೊಣೆ. ಎಷ್ಟೇ ಮುಂದುವರಿದ ದೇಶವಾದರೂ ಇವರ್ಯಾರೂ ಮತಯಂತ್ರವನ್ನ ಬಳಸುತ್ತಿರಲ್ಲಿಲ್ಲ. ಬಾಲಿಶ ಕಾರಣಗಳೂ ಇದ್ದವು. ಮೆಷೀನು ಸರಿಯಾಗಿ ಕೆಲಸ ಮಾಡದಿದ್ದರೆ ಎಂಬುದೊಂದು ಇದರಲ್ಲಿ ಒಂದು. ವರ್ಷಕ್ಕೆ ಒಂದು ಅಥವಾ ಎರಡು ನೊಬೆಲ್ ಪ್ರಶಸ್ತಿ ತೆಗೆದುಕೊಳ್ಳುವ ಯುರೋಪಿನ ರಾಷ್ಟ್ರಗಳಿಗೆ ಒಂದು ಮತಯಂತ್ರವನ್ನು ತಪ್ಪಿಲ್ಲದೆ ರಚನೆ ಮಾಡಲು ಅಸಾಧ್ಯ ಎಂಬುದು ಹುಡುಗಿಗೆ ವಿಚಿತ್ರ ನಗೆ ತರಿಸಿತ್ತು. ಆಮೇಲೆ ಗೊತ್ತಾದ್ದದ್ದು ಈ ಬ್ಯಾಲೆಟ್ ಬ್ಯಾಕ್ಸ್, ಮತದಾನದ ಪೇಪರ್ ಎಲ್ಲವನ್ನು ತಯಾರು ಮಾಡುವ ದೊಡ್ಡ ದೊಡ್ಡ ಫ್ಯಾಕ್ಟರಿಗಳು ರಾಜಕಾರಣಿಗಳ ಹಿಡಿತದಲ್ಲೇ ಇತ್ತು. ಅವೆಲ್ಲವೂ ತೆರಿಗೆ ರಹಿತ ವ್ಯವಹಾರವಾಗಿತ್ತು. ಅಂದರೆ ಇದು ದೇಶಕ್ಕೆ ಮಾಡುವ ಸೇವೆ ಎಂದು ಪರಿಗಣಿಸಿ ಅವುಗಳಿಗೆ ರಿಯಾಯಿತಿ ಕೊಡಲಾಯಿತು. ಆದರೆ ಇಲ್ಲೆ ಸೇವೆ ಎನ್ನುವ ಹೆಸರಲ್ಲಿ ದಕ್ಷಿಣ ಅಮೇರಿಕಾದ ಅಮೇಝಾನ್ ಕಾಡಿನಲ್ಲಿ ಈಗ ಮರ ಕಡಿಯಬೇಕೆಂದರೆ ಲಕ್ಷಾಂತರ ರುಪಾಯಿ ಲೈಸೆನ್ಸ್ ಹಣವನ್ನೇ ಕಟ್ಟಬೇಕೆಂದು ಸುಳ್ಳು ಹೇಳಿ ಸೇವೆಯನ್ನು ಬಿಸಿನೆಸ್ ಮಾಡಿಕೊಂಡಿದ್ದರು. ಇದನ್ನ ಎಲ್ಲಾ ಸರ್ಕಾರಗಳು ಕಣ್ಣುಮುಚ್ಚಿಕೊಂಡು ನಂಬಿದ್ದರು.

ಹಿಗೆ ಬಾಲೆಟ್ ಬಾಕ್ಸ್ ಮತ್ತು ಪೇಪರನ್ನ ತಯಾರಿಸುವ ಕಾರ್ಖಾನೆಯನ್ನ ಮೊದಲು ನಾವು ಶುರು ಮಾಡುಕೊಳ್ಳುತ್ತೇವೆ. ನಾವು ಅಮೆಝಾನ್ ಕಾಡಿನ ಮರಗಳನ್ನೇ ಕಡಿಯುತ್ತೀವಿ ಎಂದೆಲ್ಲಾ ಟೀವಿಯಲ್ಲಿ ತೋರಿಸುತ್ತಿದ್ದನ್ನ ನೋಡಿ ಹುಡುಗಿ, “ಇವರ ಸ್ವಾತಂತ್ರ್ಯಕ್ಕೆ ಮರಗಳ ಮಾರಣ ಹೋಮ ಬೇರೆ ಕೇಡು” ಎಂದು ಅಂದುಕೊಂಡೇ ಇದ್ದಳು. “ಮೆಷೀನ್ ರಿಗ್ ಮಾಡುತ್ತಾರೆ ಎಂಬ ಅಪಾಯವಿದ್ದರೆ ಬ್ಯಾಲೆಟ್ ಬಾಕ್ಸಿಗೆ ಬೆಂಕಿ ಹಾಕಬಹುದು, ಎಲ್ಲಾ ಅದನ್ನ ಎತ್ತಾಕಿಕೊಂಡು ಹೋಗಬಹುದು” ಎಂದು ಎಲೆನಾ ಹತ್ತಿರ ಒಮ್ಮೆ ಎಷ್ಟು ವಾದ ಮಾಡಿದ್ದರೂ ಅದಕ್ಕೇನು ಅವಳು ಸೊಪ್ಪು ಹಾಕಿರಲ್ಲಿಲ್ಲ.

ಸರಿ ಇದೊಂದು ದೊಡ್ಡ ವಿವಾದವೇ ಆಗಿ ಹೋಗುವ ಲಕ್ಷಣದಲ್ಲಿತ್ತು. ಸ್ಪೇನಿನ ಮಿನಿಸ್ಟರ್ ಒಬ್ಬರು ಒಂದು ಪ್ರಾಂತ್ಯದ ಅಸಂವಿಧಾನಿಕ ಚುನಾವಣೆಗೆ ಇಡೀ ದೇಶದ ತೆರಿಗೆ ಹಣವನ್ನು  ಪೋಲು ಮಾಡುವುದು ತಪ್ಪು  ಎಂಬ ಹೇಳಿಕೆಯನ್ನು ಕೊಟ್ಟು ಇನ್ನೂ ದೊಡ್ಡ ವಿವಾದ ಶುರುಮಾಡಲಾಯಿತು. ಅಂದರೆ ಬೇರೆ ಪ್ರಾಂತ್ಯದ ಜನರು ಕುಪಿತಕಗೊಂಡು, ಅವರನ್ನ ಒಕ್ಕಲೆಬ್ಬಿಸಿ ಇಡೀ ಗಲಾಟೆ ಮಾಡಿಸುವ ಪ್ರಯತ್ನದಲ್ಲಿದ್ದರು. ಇಲ್ಲಿ ಕತಲೂನ್ಯಾದ ಫಂಡ್ಸ್ ಸಹ ತೆಗೆದುಕೊಳ್ಳಲು ಬಿಡುತ್ತಿರಲ್ಲಿಲ್ಲ. ಚುನಾವಣೆ ಅನ್ನೋದು ಯಾರದ್ದೋ ಸ್ವಂತ ದುಡ್ಡಿನಲ್ಲಿ ನಡೆಯುವಂಥದ್ದೂ ಅಲ್ಲ. ಪಕ್ಷಪಾತಿ ಧೋರಣೆ ಇಲ್ಲಿ ಸಲ್ಲುವಂಥದಾಗಿರಲ್ಲಿಲ್ಲ.

ಊರಿನ ದೊಡ್ಡ ಶ್ರೀಮಂತ ಈ ಫ್ಯಾಕ್ಟರಿ ನಡೆಸುವ ಹುನ್ನಾರದಲ್ಲಿದ್ದ. ಅಂದರೆ ಚುನಾವಣೆ ಮುಗಿದ ಮೇಲೆ ಅವನಿಗೆ ಈ ಹೊಸ ದೇಶದ ಮೇಲೆ ಜಾಸ್ತಿ ಹಕ್ಕು ಅಥವಾ ಅಧಿಕಾರ ಇರುತ್ತದೆ. ಇಲ್ಲಾ ಅವನ ಕೈಗೊಂಬೆಯಾಗಿ ಸರ್ಕಾರ ಇರುತ್ತದೆ. ಹೀಗೆ ಏನೋನೋ ಮಸಲತ್ತುಗಳು ಇಲ್ಲಿ ನಡೆಯುತ್ತಿದೆ ಎಂದು ಹುಡುಗಿಗೆ ಅನ್ನಿಸುತ್ತಲೇ ಇತ್ತು. ನಂತರ ಮತದಾನದ ಪೇಪರ್ ಸಹ ಸ್ಪೇನಿನ ಮಿಲ್ಲುಗಳಿಂದಲೇ ಬರಬೇಕಾದ್ದದ್ದು. ಅದೂ ಸಹ ಕೇಂದ್ರ ಸರ್ಕಾರದ ಹೊಣೆ. ಬ್ಯಾಲೆಟ್ ಬಾಕ್ಸಿಗೆ ಕಾರ್ಖಾನೆ ತೆರೆಯುವವರು ಪೇಪರಿಗೆ ತೆರೆಯುವುದಿಲ್ಲವೇ ಅದರ ನೀಲ ನಕ್ಷೆಯೂ ಸಿದ್ಧವಾಯಿತು. ಇನ್ನು ಉಳಿದಿರುವುದು ಮತದಾರರ ಪಟ್ಟಿ.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟಾಟಿಸಿಟಿಕ್ಸ್ ಎನ್ನುವ ಸ್ವತಂತ್ರ್ಯ ಕಂಪೆನಿ ಕೇಂದ್ರ ಸರ್ಕಾರದ ಅಡಳಿತದಲ್ಲಿ ಇರುವುದರಿಂದ ಮತ್ತು ಯಾವುದೇ ಚುನಾವಣೆ ನಡೆಯುವಾಗ ಸ್ಪೇನಿನ ಕಾಂಗ್ರೆಸ್ ಅಪ್ರೂವ್ ಮಾಡದಿರುವ ಚುನಾವಣೆಗೆ ಮತದಾರರ ಪಟ್ಟಿಯನ್ನ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಹಾಗಿದ್ದರೂ ಹೋದ ಚುನಾವಣೆಯ ಪಟ್ಟಿಯನ್ನೂ ಹೇಗೋ ಸಂಪಾದಿಸಿಕೊಂಡು ನಂತರ ಬೇರೆ ದೇಶದಲ್ಲಿರುವ ಕತಲೂನ್ಯಾದ ನಾಗರೀಕರನ್ನೂ ಸೇರಿಸುವ ಉದ್ದೇಶ ಈ ಜನಕ್ಕೆ ಇತ್ತು. ಇಷ್ಟೇಲ್ಲಾ ಸ್ಪೇನಿನ ಸಂವಿಧಾನದ ವಿರುದ್ಧ ನಡೆಸುವ ಉದ್ದೇಶದಲ್ಲಿ ಇದ್ದರು ಈ ದೇಶದ ಜನ…

ಆಮೇಲೆ….

‍ಲೇಖಕರು avadhi

April 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: