ಸ್ವಾವಲಂಬನೆಯ ಬದುಕೇನೋ ಸಿಕ್ಕಿತ್ತು. ಆದರೆ ಪರಾವಲಂಬನೆ ತಪ್ಪಿರಲಿಲ್ಲ.

ಶೋಭಾ ಹಿರೇಕೈ ಕಂಡ್ರಾಜಿ

**

ಮಲೆನಾಡಿನ ಕಟ್ಟ ಕಡೆಯ ಕಿರಿ ಮಗಳಂತಿರುವ, ಹತ್ತನ್ನೆರಡು ಮನೆಗಳಿರುವ, ಊರೆಂದರೆ ಊರಲ್ಲದ, ಕಾಡೆಂದರೆ ಬರೀ ಕಾಡು ಅಲ್ಲದ, ಕಾಡ ಅಂಚಿನ, ಗುಡ್ಡದ ಬುಡದ, ನದಿಯ ದಡದ ಪುಟ್ಟ ಊರಿನ ಮಲೆನಾಡಿನ ಮಗಳಾದ ನನ್ನನ್ನು ಈ ಬದುಕು ಕರ್ನಾಟಕದ ಗಡಿ, ಬೆಳಗಾವಿಯ ಪಶ್ಚಿಮದ ತುತ್ತತುದಿಯೂರು , ಸಹ್ಯಾದ್ರಿ ಸೆರಗು ಹೊದ್ದ ಮರಾಠಿ ಊರಿಗೆ ಕರೆದುಕೊಂಡು ಹೋಗಿ ನಿಲ್ಲಿಸಿತ್ತು.

ಪುಷ್ಯ ಮಳೆಯ ಅಬ್ಬರದಲ್ಲಿ ಊರಿಗೇ ಊರೇ ಮಂಜನ್ನೇ ಹೊದ್ದುಕೊಂಡು ಮಲಗಿದ್ದಂತೆ.. ಸೂರ್ಯನಿಗೋ ರಜೆ ಘೋಷಿಸಿದ್ದಂತೆ ಕಾಣುವ ಅದೊಂದು ಕಣಿವೆಯೂರಿಗೆ ನಾನು ಕನಸಲ್ಲಿ ಬಂದು ನಿಂತಿದ್ದೆನೆನೋ ಅಥವಾ ಎಲ್ಲೋ ಅಪ್ಪಿ ತಪ್ಪಿ ಬಂದು ಬಿಟ್ಟೆನಾ ಇಲ್ಲಿಗೆ ಅಂದು ಕೊಂಡರೂ …ಬಲಗೈಲಿ ಭದ್ರವಾಗಿ ಹಿಡಿದಿದ್ದ ಸರಕಾರಿ ನೌಕರಿಯ ಆದೇಶ ಪ್ರತಿಯಲ್ಲಿದ್ದ ವಿಳಾಸ ಅಪ್ಪಿತಪ್ಪಿ ಕೂಡಾ ತಪ್ಪಾಗಿರಲಿಲ್ಲ! ನಾನು ಸರಿ
ವಿಳಾಸದಲ್ಲೇ ನಿಂತಿದ್ದೆ.

ಅಕ್ಕೋರಾಗಬೇಕು, ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಅಂದುಕೊಂಡ ನನಗೆ ( ಬಹುಷಃ ಆಗ ಬಹಳ ಬೇಗ ನೌಕರಿ ಸಿಗುತ್ತೆ ಎಂಬ ಆಸೆಗೆ) ಸರಕಾರಿ ನೌಕರಿ ಕೂಡಾ ಬಹು ಬೇಗನೇ ಸಿಕ್ಕಿ ನನ್ನ ಸ್ವಾವಲಂಬನೆಯ ಬದುಕು ಪ್ರಾರಂಭವಾಗಿ, ದುಡಿಮೆಯ ಹಣ ತಿಂಗಳು ತಿಂಗಳು ಎಣಿಸುವಾಗ ಒಂದು ದಿವ್ಯ ಧನ್ಯತೆಯ ಕ್ಷಣ . ಮೊದಲ ಸಂಬಳದಲ್ಲಿ ಮನೆಗೊಂದಿಷ್ಟು ಬಟ್ಟೆ , ಹರಕೆಯ ಹಣಕಾಯಿ ಮುಗಿಸಿ ಯಾವಾಗ ರಜೆ ಬರುತ್ತದೋ ಅಪ್ಪನಿಗೆ ಉಳಿದ ಸಂಬಳ ಕೊಟ್ಟು ಬರುವೆನೋ, ಅವನ ಕಷ್ಟಕ್ಕೆ ನೆರವಾಗುವೆನೋ ಎಂದು ಹಂಬಲಿಸಿದ ನೌಕರಿ ಸಿಕ್ಕ ದಿನಗಳೊಂದಿಗೆ ಮರಾಠಿ ಊರಲ್ಲಿ ಮಲೆನಾಡಿನ ಮಗಳ ಪಯಣ ನೆನೆದರೆ ಹೃದಯ ಈಗಲೂ ಹೆಮ್ಮೆಯಿಂದ ಉಬ್ಬುತ್ತದೆ.

ಎಷ್ಟೊಂದು ವೈವಿಧ್ಯಮಯ ಅನುಭವಗಳನ್ನು ನನ್ನ ಬದುಕು ನನಗೆ ಕೊಟ್ಟಿತಲ್ಲ ಎನ್ನಿಸುತ್ತದೆ. ಕಳೆದ ಕಷ್ಟಗಳೂ .. ಇಷ್ಟವಾಗತೊಡಗುತ್ತವೆ. ಕಷ್ಡ ಇಷ್ಟಗಳ ನಡುವೆ ನನ್ನ ಸ್ವಾವಲಂಬನೆಯ ಬದುಕೇನೋ ಶುರುವಾಯಿತು. ಆದರೆ ಅಲ್ಲಿ ನನ್ನ ಕೆಲವು ವಯಕ್ತಿಕ ಕೆಲಸಗಳಿಗೆ ನಾನು ಪರಾವಲಂಬಿಯೇ ಆಗಬೇಕಿತ್ತು. ಬೆಳಿಗ್ಗೆ ಶೌಚ ಕಾರ್ಯಗಳಿಗೆ, ಸಂಜೆ ಬಟ್ಟೆ ಒಗೆಯಲು, ಮತ್ತೆ ರಾತ್ರಿ ಕತ್ತಲ ಕಳೆಯಲು ನನಗೆ ಜೊತೆಗಾರ್ತಿಯರು ಬೇಕೇ ಬೇಕಿತ್ತು.

ಬೆಳಗಿನ ನಿತ್ಯ ಕರ್ಮ ಗಳನ್ನು ಮುಗಿಸಲು ಊರ ಹೊರಗಡೆ ಹೋಗಬೇಕಾಗಿತ್ತು ಮತ್ತು ಅದೊಂದು ಮಹಾ ಸಂಕಟದ ಸಮಯವೆನಿಸುತಿತ್ತು. ಒಬ್ಬಳೇ ಹೋಗುವ ದಾರಿಯಲ್ಲದ ಕಾರಣ ಜೊತೆಗೆ ಯಾರಾದರೂ ಬೇಕಾಗಿತ್ತು. ಮುಜುಗರ, ಅವಮಾನ, ನಾಚಿಕೆ ಎಲ್ಲಾ ಅನುಭವಿಸುವ ಆ ಹೊತ್ತನ್ನು ಹೇಗೋ ಕಳೆದು ಬಿಡಬೇಕು ಎಂದುಕೊಂಡು ಇನ್ನೂ ಬೆಳಕು ಹರಿಯದ ವೇಳೆಯಲ್ಲೇ ಎದ್ದು, ಅಂಟಿಕೊಂಡೇ ಇದ್ದ ಪಕ್ಕದ ಮನೆಯ ದೀದಿಯ ಜೊತೆಗೂಡಿ ಊರ ಹೊರಗೆ ಹೋಗುವಾಗ ಅಂಗಾತ ಮಲಗಿದಂತಿರುವ ಬಟಾ ಬಯಲನ್ನು ದಾಟಬೇಕಿತ್ತು.

ಬೆಳಕು ಕಣ್ಣು ಬಿಡದೆ ಸದಾ ಇಬ್ಬನಿಯನ್ನು ತಬ್ಬಿಕೊಂಡೇ ಇರುವ ಆ ಬಯಲಲ್ಲಿ ಹೆಜ್ಜೆ ಇಡುವಾಗ ಅಕ್ಕ ಪಕ್ಕ ಇದ್ದವರ ಮುಖವೂ ಕಾಣಿಸುತ್ತಿರಲಿಲ್ಲ.. ಸಣ್ಣ ಸದ್ದಿಗೂ ಹೆದರುತ್ತ ಜೀವ ಕೈಯಲ್ಲಿಟ್ಟುಕೊಂಡೇ ದೇಹಬಾಧೆಯ ಶೌಚ ಕಾರ್ಯ ಮುಗಿಸಿ ಬರಬೇಕು. ಹಾವು ಚೇಳುಗಳ ಭಯಕ್ಕೆ ಒಂದೊಂದು ಹೆಜ್ಜೆ ಎತ್ತಿಡುವಾಗಲೂ ಎದೆಯ ಬಡಿತ ಏರುಪೇರಾಗಿ… ಮತ್ತೆ ತಹಬದಿಗೆ ತಂದುಕೊಂಡು ಮನೆಗೆ ಬಂದೆನೋ… ಬಚ್ಚಲ ಚಂಬನ್ನು ನೇರ ಒಳಗೆ ಒಯ್ಯುವ ಹಾಗಿಲ್ಲ. ಹಿತ್ತಲಕಡೆ ಬಾಗಿಲ ತೆಗೆಯಲು ಮತ್ತೊಬ್ಬರ ಕಾಯಬೇಕು. ಅಬ್ಬಾ! ಆ ಬದುಕೇ…! ಈಗ ನೆನೆಯುವುದು ಕೂಡಾ ಜೀವಕ್ಕೆ ತ್ರಾಸೆನಿಸುವಾಗ ಹೇಗೆ ಕಳೆದಿರಬೇಕು ಊಹಿಸಿ. ಬದುಕೇ ಹಾಗೇ ಅಲ್ಲವಾ.. ಬೇರೆಯವರ ಕಷ್ಟಗಳನ್ನು ಊಹಿಸಬಹುದಷ್ಟೆ…

ಅದೇ ರೀತಿ ಬಟ್ಟೆ ತೊಳೆಯುವ ಕಲ್ಲೋ ಅದು ಕೂಡಾ ಊರಾ ಹೆಬ್ಬಾಗಿಲಾಚೆಗೆ ಇರುವುದು. ಅದಕ್ಕೆ ಕೂಡಾ ಹಿಂಬಾಲಕರು ಬೇಕೇ ಬೇಕು. ಅರೆಯದೂರಲ್ಲಿ ಒಂಟಿ ಹೆಣ್ಮಗಳು ಹೇಗೆ ಓಡಾಡಿಯೇನು ಒಬ್ಬಳೇ? ಗೆಳತಿಯರ ಸಂಗಡ ಸಂಜೆ ಹೊತ್ತಲ್ಲಿ ಎರಡು ದಿನಕ್ಕೊಮ್ಮೆ ಹೋಗುವುದು ನಿರ್ಧಾರವಾದರೂ ಅಲ್ಲಿ ಹೋದೊಡನೆ ಬಟ್ಟೆ ಸೆಳೆವ ಕಲ್ಲು ಸಿಗದು. ಕಲ್ಲಿಗಾಗಿ ಕಾಯಬೇಕು. ಚಳಿ ಥಂಡಿ ಎನ್ನದೆ ಒಮ್ಮೊಮ್ಮೆ ಕತ್ತಲಾದರೂ ಬಟ್ಟೆ ತೊಳೆದುಕೊಂಡೆ ಬರಬೇಕು‌. ಇದೆಲ್ಲವಕ್ಕೂಕರೆದೊಡನೆ ಅಥವಾ ಕರೆಗಾಗಿಯೇ ಕಾಯುತಿದ್ದ ಕೆಲವು ಅಕ್ಕ ತಂಗಿಯರು ಅಲ್ಲಿ ಸಿಕ್ಕಿದ್ದರು ಎಂಬುದೇ ಆಗಿನ ಮಟ್ಟಿಗಿನ ನನ್ನ ಬಹುದೊಡ್ಡ ಭಾಗ್ಯವಾಗಿತ್ತು. ಬೆಳಗು ಮತ್ತೆ ಸಂಜೆಯ ಕಥೆಯೇನೋ ಹೀಗೆ ಸಾಗುತಿತ್ತು. ಆದರೆ ರಾತ್ರಿ ಕತ್ತಲಿನ ವ್ಯಥೆ?

ಚಿಕ್ಕಂದಿನಿಂದಲೂ ಕತ್ತಲೆಂದರೆ ಭಯಂಕರ ಭಯ ನನಗೆ. ಕತ್ತಲೆಯೆಂದರೆ ಹೆದರುವ ನನಗೆ ರಾತ್ರಿ ಮಲಗುವ ಹೊತ್ತಲ್ಲಿ ನನ್ ಒಟ್ಟಿಗೆ ಯಾರಾದರೂ ಇರಲೇ ಬೇಕಿತ್ತು. ನನ್ನ ಭಯದ ಬಗ್ಗೆ ಗೊತ್ತಿದ್ದ ಅಪ್ಪ ತಿಂಗಳಕಾಲ ನನ್ನೊಂದಿಗಿದ್ದು, ಒಬ್ಬಳು ಹುಡುಗಿಯನ್ನು ನೇಮಿಸಿ.. ರಾತ್ರಿ ಊಟಕ್ಕೂ ನನ್ನ ಜೊತೆಗಿರಲು ಒಪ್ಪಿಸಿ ಹೋಗಿದ್ದರು. ಇದು ಕೆಲವು ತಿಂಗಳುವರೆಗೆ ನಡೆಯಿತು. ಹೆದರದೆ ರಾತ್ರಿ ಕಳೆದೆ. ಆದರೆ ಮೊದಲಿದ್ದ ಕೋಲಿ ಬಿಡುವ ಸಂದರ್ಭದಲ್ಲಿ, ನನ್ನ ಜೊತೆಗಾತಿ ಸ್ನೇಹಿತೆಯ ಮನೆಯೂ ದೂರವಾದ ಕಾರಣ ಆಕೆ ಬರಲು ಮೀನಮೇಷ ಎಣಿಸಿದಳು.

ನನಗೂ ನಾನು ಹೋಗುತ್ತಿರುವ ಮನೆಯಲ್ಲಿ ಒಬ್ಬರು ಮಾತಾರಿ (ಅಜ್ಜಿ) ಇದ್ದರಲ್ಲ ಎಂಬ ಧೈರ್ಯ ಕ್ಕೆ ಹೊಸ ಮನೆಗೆ ಬಂದೇ ಬಿಟ್ಟಿದ್ದೆ. ಆದರೆ ಅಜ್ಜಿಯೋ ಈಗಲೋ ಆಗಲೋ ಎನ್ನುವಂತಿದ್ದರು. ವಯೋಸಹಜ ದಮ್ಮಿನ ಕಾಯಿಲೆ ಬೇರೆ. ಅಜ್ಜಿಯ ಮಣ್ಣಿನ ನೆಲದ ಜಗುಲಿಯ ದಾಟಿ ಅದರಾಚೆ ಇರುವ ಸಿಮೆಂಟು ನೆಲದ ಒಂದು ಕೋಣೆಯೇ ನನ್ನ ಬಾಡಿಗೆಯ ಮನೆ! ನಾನೋ ಒಂದು ಬಾಗಿಲ ದಾಟಿ ಈಚೆ ಬಂದು ರಾತ್ರಿ ಅಜ್ಜಿಯ ಬಳಿ ಮಲಗಬಹುದೆಂದು ಇಲ್ಲಿಗೆ ಬಂದ ಧೈರ್ಯ ಈಗೇಕೋ ಇಲ್ಲವಾಯಿತು. ಒಂದು ದಿನ ಒಬ್ಬಳೇ ರೂಮಿನಲ್ಲಿದ್ದು ಬಿಡೋಣವೆಂದು ನಿರ್ಧರಿಸಿದೆ. ಬಾಯಿ ನಿದ್ದೆ ಮಾಡೋಣ ಬನ್ನಿ ಎಂದ ಅಜ್ಜಿಯ ದನಿಯನ್ನು ನಿರ್ಲಕ್ಷಿಸಿ ಹಾರಿಕೆಯ ಉತ್ತರ ನೀಡಿ ಅಜ್ಜಿ ಇಲ್ಲಿಯೇ ಮಲಗ್ತೇನೆ ಎಂದಿದ್ದೆ. ಆದರೆ ಅಂದೋ ಹೆಗ್ಗಣ , ಇಲಿ ಬೆಕ್ಕುಗಳ ಸದ್ದೊಳಗೆ ಸತ್ತುಹೋದ ನನ್ನ ಅಜ್ಜ ಅಜ್ಜಿಯರೆಲ್ಲಾ ಬಂದಂತಾಗಿ… ಬೆಳಗಿನವರೆಗೂ ಬೆವರುತ್ತ ಕಳೆದು ಅಂದೇ ಒಬ್ಬಳೇ ಮಲಗುವ ನಿರ್ಧಾರಕ್ಕೆ ಎಳ್ಳು ನೀರು ಬಿಟ್ಟಿದ್ದೆ.

ಮರುದಿನದಿಂದ ಮತ್ತೆ ಮಾತಾರಿಯ ಜಗುಲಿಯೇ ನನ್ನ ಬೆಡ್ ರೂಮಾಯಿತು. ಅಜ್ಜಿಯಿಂದ ಮಾರುದೂರ ನನ್ನ ಹಾಸಿಗೆ ಇದ್ದರೂ…ನನಗೊಂದೇ ಚಿಂತೆ. ಹೇಳಿಕೇಳಿ ವಯಸ್ಸಾದ ಅಜ್ಜಿ ರಾತ್ರಿ ವೇಳೆಯಲ್ಲಿ ಏನಾರು ಹೆಚ್ಚುಕಮ್ಮಿ ಆಗಿ ಅಜ್ಜಿ ಹೋಗಿಬಿಟ್ಟರೆ!. ಮೊದಲೇ ಸಾವಿಗೆ, ದೆವ್ವ ಭೂತಗಳ ಕಲ್ಪನೆಗೆ ತೀರಾ ಹೆದರುತಿದ್ದ ನಾನು ಒಂದಿಷ್ಟು ದಿನ ಜೀವಂತ ಅಜ್ಜಿಯ ಸಾವನ್ನು ಕಲ್ಪಿಸಿ ಕಲ್ಪಿಸಿ… ಸೊಕಾಸುಮ್ಮನೆ ನಿದ್ದೆಗೆಡುತಿದ್ದೆ.

ಈ ನಡುವೆ ಒಂದು ಚಳಿಯ ರಾತ್ರಿ ಅಜ್ಜಿ ಒಣ ಕಟ್ಟಿಗೆಯನ್ನೆಲ್ಲಾ ಒಟ್ಟುಗೂಡಿಸಿ ಜಗುಲಿಯ ಮೂಲೆಯಲ್ಲಿ ಹೊಡೆಸಲಿನ ರೀತಿಯಲ್ಲಿ ಬೆಂಕಿಯೊಲೆ ಮಾಡಿಕೊಂಡು “ಬಾಯಿ ಚಳಿ ಆದರೆ ಕಾಯಿಸಿಕೊಳ್ಳಿ ಬನ್ನಿ” ಎಂದು ಕರೆದಾಗ ವಿಪರೀತ ಚಳಿಯ ಆ ರಾತ್ರಿ ಗೆ ಕೈಕಾಲು ಬೆಚ್ಚಗೆ ಮಾಡಿಕೊಂಡು ನಿದ್ದೆ ಮಾಡುವುದು ಹಿತವೆಂದು ಅನ್ನಿಸಿತ್ತು. ಆದರೆ ಯಾವಾಗ ಅಜ್ಜಿಯ ಕೆಮ್ಮಿನ ಕಫದ ಉಗುಳು ನಡು ರಾತ್ರಿಯಲ್ಲಿ ಅಜ್ಜಿಯ ಅಗ್ಗಿಷ್ಟಿಕೆಯೊಳಗೆ ಸೇರಿ ಅದರ ಘಾಟು ನಾನು ಹೊದ್ದ ಚಾದರ ಸರಿಸಿ ನನ್ನ ನಾಸಿಕದೊಳಗೂ ನುಸುಳಿ ನನ್ನ ಎಚ್ಚರಗೊಳಿಸಲು ಶುರು ಮಾಡಿತೋ… ನಡು ರಾತ್ರಿ ಹೊಟ್ಟೆ ತೊಳೆಸಿ ವಾಂತಿಯಾಗುವಂತಾಗುತಿತ್ತು. ವಾಂತಿ ಬಂದಿತೆನ್ನಿ, ಆ ಅಪರಾತ್ರಿ ಒಬ್ಬಳೇ ಹೊರಗೆ ಹೇಗೇ ಹೋಗಲಿ? ಹೇಗೋ ಒಂದು ವಾರ ಈ ಬೆಂಕಿಯ ಸಹವಾಸ ಸಹಿಸಿ ಇನ್ನು ಸಾಧ್ಯವೇ ಇಲ್ಲ ಅಂದಾಗ ಅಜ್ಜಿಯ ಜಗುಲಿಯಿಂದ ನನ್ನ ಹಾಸಿಗೆ ಮತ್ತೆ ನನ್ನ ಕೋಣೆಯನ್ನೇ ಸೇರಿತು. ಮತ್ತೆ ಮೊದಲು ನನ್ನ ಕಾವಲಿಗೆ ಬರುತಿದ್ದ ಆ ಊರಿನ ದೀದಿಗೆ ನನ್ನಿಂದ ಕರೆ ಹೋಯಿತು. ದೀದಿ ಹೆದರಬೇಡಿ ನಾನು ಬರುತ್ತೇನೆ ಎನ್ನುತ್ತಾ ಅಲ್ಲೊಂದು ಜೀವದ ಸೋದರಿ ನನ್ನ ಕಾವಲಿಗೆ ನಿಂತಿತು…

‘ಬಾಯಿ ಮಲಾ ಜೋಪ್ ಆಲೆ.ಮಿ ಜೋಪತೋ……( ಬಾಯಿ ನಂಗೆ ನಿದ್ದೆ ಬಂತು, ನಾನು ಮಲಗುವೆ ) ಎನ್ನುವ ಅಜ್ಜಿಯ ದನಿ ಅಂದಿನಿಂದ ನಿಂತಿತಾದರೂ. ಆ ಕರೆ ಮತ್ತವರ ಅಕ್ಕರೆ ಎದೆಯಲ್ಲಿ ಸದಾ ಉಳಿಯಿತು.

‍ಲೇಖಕರು avadhi

January 20, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: