ಗೀತಾ ಜಿ ಹೆಗಡೆ, ಕಲ್ಮನೆ
ಕಾಡುವ ಕವಿತೆ ಹೇಳಿತು
ನೀ ಲಗೂನೆ ಬರಿ ಬರಿ
ಬೇಗ್ ಬೇಗಾ.
ಅದಕೆ ನಾನಂದೆ
ಸ್ವಲ್ಪ ತಡಕಳೆ
ನೀ ಕಾಡಿದಷ್ಟೂ ನಾ ಕಾಯುವೆ
ನೀನು ಮತ್ತೂ ಮತ್ತೂ ಬಂದು ಕಾಡಬೇಕು
ಅಂತಹ ಕವಿತೆನೇ
ನಾನಿನ್ನು ಬರೆಯೋದು.
ಅದಕ್ಕವಳಂದಳು
ಬರೀ ಕಾಡೋದೇ ಆಯ್ತು ನನ್ನ ಗತಿ
ಕಾಳಾಕೋದಿಲ್ವಾ?
ಅಯ್ಯೋ ಶಿವನೆ!
ನಾ ಬೆರಗಾಗಿ ಅಂದೆ
ನಿನಗೇನು ಬಂತು ದೊಡ್ಡ ರೋಗಾ?
ಅದಿನ್ನೆಲ್ಲೆಲ್ಲಿ ಅಲೆದು ಕಲಿತೆ
ಇಂತಹ ಬೇಡೊ ಖಯಾಲಿ?
ಅದಕ್ಕವಳಂದಳು
ಹೂಂ, ಮತ್ತೆ ಮತ್ತೆ….
ಇತ್ತೀಚೆಗೆ ಹೇಗೆಂದರೆ ಹಾಗೆ ಬರೆದು
ಬಿಕರಿಯಾಗುತ್ತಿದ್ದೇವೆ ನಾವುಗಳು
ಸ್ವಲ್ಪ ನಮ್ಮ ಲೆವೆಲ್ ಕಾದುಕೊಳ್ಳೋದು ಬೇಡ್ವಾ?

ನನಗೋ ತಲೆಗೆ ಮೊಟಕಿದಂತಾಯ್ತು ;
“ಹೀಗೆ ಝಂಡಾ ಊರಿದರೆ ಕವಿತೆಗಳು
ಒಂದಿಷ್ಟು ಹಿತ ಮಿತವಾಗಿರುತ್ತವೆ” ಅಂದೆನಿಸಿ
ಅವಳ ಕರಾರಿಗೆ
ಕಮಕ್ ಕಿಮಕ್ ಎನ್ನದೇ ನಾನೂ ಒಪ್ಪಿಕೊಂಡೆ
ಅವಳ ಪರವಾಗಿ
ಅವಳಿಟ್ಟ ಹಾಜರಾತಿ ಪುಸ್ತಕದಲ್ಲಿ
ಷರಾನೂ ಬರೆದೆ.
ಅವಳ ಮಾತಲ್ಲೂ
ಅದೇನೋ ಹುರುಳಿದೆ
“ಸುಲಭವಾಗಿ ಎಟುಕುವ ದ್ರಾಕ್ಷಿ ಹುಳಿ”
ಇದು ಸತ್ಯವಾದ ಮಾತು
ಅಂತೆಯೇ ಹುಳಿತಾಗಿರಬಾರದು
ಹಳಸಲಾಗಬಾರದು
ಪಕ್ಕಕ್ಕಿಡಬಾರದು
ತಿಂದ ನಾಲಿಗೆಗೆ ರುಚಿ ಹತ್ತಬೇಕು
ವಾವ್! ಎಂಬ ಉದ್ಘಾರ
ತಿಂದವರ ಬಾಯಲ್ಲಿ ಬರಬೇಕು
ಆಹಾ! ನೋಡಿ
ಕವಿತೆಗದೆಷ್ಟು ಬಯಕೆ!
ಅಂದಹಾಗೆ ಈ ಸೊಲ್ಲು ನುಡಿ ಮನತಾಕಿ
ಈಗ ನೋಡಿ ಸುಮ್ ಸುಮ್ಮನೆ
ಕಾಡುವುದಿಲ್ಲ ಕವಿತೆಗಳು
ಕಾಳಾಕಲು ಹಿಂದೇಟಂತೂ
ಅಲ್ಲವೇ ಅಲ್ಲ;
ಭಾವಗಳು ಬಡಿದಾಡಿ ಕೆಣಕಿ ಕಿವುಚಿ
ಅವುಡುಗಚ್ಚಿ ಇನ್ನೇನು
ನೆತ್ತರು ಸುರಿಯಬೇಕು
ಮೈ ಮನಕೆಲ್ಲ ಕಲೆ ಅಂಟಬೇಕು
ಪದಗಳು ಉಘೇ ಉಘೇ ಎಂದು
ಹೊಯ್ಕಳ್ಬೇಕು
ಇಂತಹ ಅಂತಿಮ ಹಂತದಲ್ಲಿ
ಬರೆಯುತ್ತೇನೆ ಗಮನವಿಟ್ಟು
ಕವಿತೆ ಜೋತು ಬಿದ್ದು
ಯಾವಾಗಲಾದರೊಮ್ಮೆ ಕಾಡಿದಾಗ
ನನ್ನ ಕಾಡಿದ ಕವಿತೆ
ಓದುಗರನ್ನೂ ಕಾಡಲಿ
ಎಂಬ ನನ್ನೊಳಗಿನ ಛಲಕ್ಕೆ ಬದ್ಧಳಾಗಿ
ಮತ್ತೆ….
ಷರತ್ತು ಪೂರೈಸಿಯೇ ಮುಂದಡಿಯಿಡುತ್ತೇನೆ
ಆದರೆ ಎಷ್ಟು, ಏನು, ಎತ್ತ, ಹೇಗೆ ಎಂದು
ಕೇಳಲೇ ಬೇಡಿ
ಅದು ನಮ್ಮಿಬ್ಬರೊಳಗಿನ ಒಪ್ಪಂದ.






ಸೊಗಸಾಗಿದೆ
“ಕವಿತೆ ಜೋತು ಬಿದ್ದು” ಬದಲಿಗೆ ” ಕವಿಗೆ ಜೋತು ಬಿದ್ದು” ಎಂದಿದ್ದರೆ ಇನ್ನೂ ಧ್ವನಿ ಪೂರ್ಣ ಆಗುತಿತ್ತು. ಕವಿತೆ ತಿದ್ದಬಾರದು. ಕ್ಷಮೆ ಇರಲಿ.
ಮೆಚ್ಚುಗೆಗೆ ಧನ್ಯವಾದಗಳು.
ಕವಿತೆನೇ ಕವಿಗೆ ದುಂಬಾಲು ಬೀಳಬೇಕು. ಇಲ್ಲಿ ಕವಿ ತಟಸ್ಥ. ಇನ್ನೂ ಇನ್ನೂ ಕಾಡಲೆಂದು ಕವಿ ಕಾದರೇನೇ ಆ ಕ್ಷಣದಲ್ಲಿ ಪದಗಳ ನುಗ್ಗುವಿಕೆ ಜಾಸ್ತಿ. ಹೆಚ್ಚು ಹೆಚ್ಚು ಸ್ಪುಟವಾಗಿ ಬರೆಯಬಹುದು. ಒಂದೇ ನೆಗೆತಕ್ಕೆ ಪೂರ್ಣಗೊಳಿಸಲು ಸಾಧ್ಯ. ಆಡಿಟಿಂಗ್ ಕೂಡಾ ಬೇಡ. ಇದು ನನ್ನ ಅನುಭವ ಅನಿಸಿಕೆ.
ತಮ್ಮ ಅಭಿಪ್ರಾಯ ಕೂಡಾ ಗೌರವಿಸುತ್ತೇನೆ. ಕಾರಣ ಒಂದೊಂದು ಕವಿಯ ಅನುಭವದಲ್ಲೂ ವ್ಯತ್ಯಾಸವಿರುತ್ತದೆ.
ತಮ್ಮ ಅಭಿಪ್ರಾಯ ಅನಿಸಿಕೆಗೆ ಧನ್ಯವಾದಗಳು.