ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವರ್ಗಾರೋಹಣದ ಬಾಗಿಲು ತೆರೆದಿದೆ..

ಶೋಭಾ ಹಿರೇಕೈ ಕಂಡ್ರಾಜಿ

**

ಮಳೆಯಿಲ್ಲದ ಮಳೆಗಾಲದ

ಸುಡು ಬಿಸಿಲ, ನಡು ಹಗಲಲ್ಲಿ

ತಿಳಿ ನೀಲಿಯ

ಅಚ್ಚ ಬಿಳಿ ಮೊಗದ

ಮುಗಿಲಿನೊಂದಿಗೆ

ಮಾತಿಗಿಳಿದಿದ್ದೇನೆ.

ಮುಗಿಲೋ..

ಸುಳ್ಳು ಸುಳ್ಳೇ

ಭ್ರಮೆ ಹುಟ್ಟಿಸುತ್ತದೆ

ತಾನೇ ನೀಲಿ ಕಡಲು ಎಂಬಂತೆ

ಕಡಲಿನಾಳಕ್ಕೂ ಕರೆದೊಯ್ದಂತೆ

ಸಾಗರ, ಸರೋವರ,

ಕೊಳ ನದಿಗಳೆಲ್ಲ

ತನ್ನ ಅಂಗಳದಲ್ಲೇ

ಹರಿಯುತ್ತಿದ್ದಂತೆ

ಮತ್ತೂ..ನೋಡಿದಷ್ಟು, ಓಡಿದಷ್ಟೂ..

ನನ್ನ ಹಿಂದೆ ಹಿಂದೆಯೇ

ಬೆನ್ನತ್ತಿ ಬಂದಂತೆ

ಮೋಡಿ ಮಾಡುತ್ತದೆ.

ಅಷ್ಟೇ ಅಲ್ಲ,

ಸ್ವರ್ಗಾರೋಹಣದ ಬಾಗಿಲು

ತೆರೆದಿದೆ ಎಂಬಂತೆ

ಖರೆ ಖರೆ ನನ್ನ

ಖಗೋಳ ಲೋಕಕ್ಕೂ

ಕರೆದೊಯ್ದಂತೆ

ವ್ಯೋಮದಲ್ಲೆದ್ದ ಹೋಮಕುಂಡದ

ಹೊಗೆಯಂತೆ

ಧೂಪದ ಮಂಗಳಾರತಿಯ

ಹೊತ್ತೋ ಎಂದು

ಓಡುತ್ತವೆ ಮೋಡಗಳು

ಹಿಮ ಪರ್ವತಗಳನ್ನೇ ಹೊತ್ತಂತೆ.

ನೋಡ ನೋಡುತ್ತ

ನನ್ನ ಕೈಯ್ಯ ಕಿರುಬೆರಳಿಗೂ

ನಿಲುಕಿಯೇ ಬಿಟ್ಟಿತು ಎನ್ನುವಷ್ಟರಲ್ಲೇ

ನನ್ನೂರ ಗುತ್ತಿ ಗುಡ್ಡದ

ನೆತ್ತಿಗೇ ಮುತ್ತಿಟ್ಟಂತೆ

ನಂಬಿಸಿಯೇ ಬಿಡುತ್ತದೆ ನನ್ನ

ನಾನೋ…

ಮುಗಿಲಿನೀ

ಕಣ್ಕಟ್ಟಿಗೆ ಮರುಳಾಗಿ,

“ಬಡಿವಾರ ಸಾಕು, ಈ ಸಲವಾದರೂ

ಹದ ಮಳೆ ಯ ಸುರಿಸಲೇ ಬೇಕು”

ಎಂದು ಹಠ ಹಿಡಿದಿದ್ದೇನೆ.

‍ಲೇಖಕರು Admin MM

10 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading