ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಮ್ಯ ದಯಾನಂದ ಹೊಸ ಕವಿತೆ- ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ!!..

ಸೌಮ್ಯ ದಯಾನಂದ

ನಂಗೆ ಅಮ್ಮ ಅಂದ್ರೆ
ಇಷ್ಟ
ಅನ್ನುತ್ತಿದ್ದವಳು
ಯಾಕಮ್ಮ ಅಪ್ಪಂಗೆ
ಬೈತೀಯಾ..?!
ಅಂದಳಲ್ಲಾ..
ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ!!

ಬಟ್ಟೆ ಆರಿಸುವಾಗ
ಅಮ್ಮ ಸುಮ್ನಿರು
ನಿಂಗೆ ಗೊತ್ತಾಗಲ್ಲ
ಅಂದಳಲ್ಲಾ..
ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ…!!

ಯಾಕಮ್ಮಾ ಇಷ್ಟ್
ಕಷ್ಟ ಪಡ್ತೀಯಾ..
ಬಿಡು ನಾನ್ ಮಾಡ್ತೀನಿ
ಅಂದಳಲ್ಲಾ..
ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ…!

ಸಾಲ ಕೊಡಬಯಸಿದ
ಬ್ಯಾಂಕ್ ನವರ
ಕರೆಯನ್ನು ಉತ್ತರಿಸುತ್ತಿದ್ದಾಗ
ಯಾರದು?
ಕೊಡಿಲ್ಲಿ ನಾನ್ ಮಾತಾಡ್ತೀನಿ
ಅಂದಳಲ್ಲಾ..
ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ..!!

ಈ ಡ್ರೆಸ್ಸಿಗೆ
ಈ ಪರ್ಸ್ ತೊಗೋ
ತುಟಿಗೆ ಈಗ
ಈ ಬಣ್ಣ ಬೇಡ
ಅಂದಳಲ್ಲಾ..
ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ..!!

ವಾಯ್ಸ್ ಟೈಪಿಂಗ್
ಹೇಳಿಕೊಟ್ಟು
ಅಕ್ಷರಗಳನ್ನು
ಹುಡುಕುತ್ತಾ ಕೂರಬೇಡ
ಅಂದಳಲ್ಲಾ..
ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ..!!

ರೆಸ್ಟೋರೆಂಟ್ ನಲ್ಲಿ
ಮಟರ್ ಪನ್ನೀರ್ ಗೆ
ಏನೇನ್ ಹಾಕಿದಾರೋ
ಎನ್ನುತ್ತಿದ್ದಂತೆಯೇ
ಯೂಟ್ಯೂಬ್ ನಲ್ಲಿ
ಪಾಕವಿಧಾನವನ್ನೇ
ಕಣ್ಣೆದುರು
ಹಿಡಿದುಬಿಟ್ಟಳಲ್ಲಾ..
ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ..!!

ಎದುರಾದ ಲೆಕ್ಚರರ್
ಪರಿಚಯಿಸಿ
ಹಿಂದೆ ಅವರ
ನಿಕ್ ನೇಮ್
ಕಿವಿಯಲ್ಲಿ ಉಸುರಿ
ನಕ್ಕಳಲ್ಲಾ..
ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ..!!

ಗೆಳತಿಯು
ಬಾಯ್ ಫ್ರೆಂಡ್
ಜೊತೆಗೆ ಹರಟುತ್ತಿದ್ದಾಗ
ನೋಡಿಯೂ ನೋಡದಂತೆ
ನಡೆದುಬಿಟ್ಟಳಲ್ಲಾ..
ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ..!!

ಅಮ್ಮಾ ನಾನೆಲ್ಲ
ಓದ್ಕೋತೀನಿ
ನೀನೇನ್ ಚಿಂತೆ
ಮಾಡ್ಬೇಡ
ಅಂದಳಲ್ಲಾ..
ಮಗಳು ಬೆಳೆದದ್ದೇ ಗೊತ್ತಾಗಲಿಲ್ಲ..!!

‍ಲೇಖಕರು Admin

13 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading