ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಮ್ಯಶ್ರೀ ಎ‌ ಎಸ್ ಕವಿತೆ- ಪಾರಿಜಾತ!..

ಸೌಮ್ಯಶ್ರೀ ಎ‌ ಎಸ್

ಮತ್ತೆ ಮತ್ತೆ ಕೊಟ್ಟಿದ್ದು, ಪಡೆದಿದ್ದು
ಕಳೆದದ್ದೆಲ್ಲಾವನ್ನು ಕೂಡಿ
ಕಳೆದು ಗುಣಿಸುವ ಲೆಕ್ಕಚಾರವೇಕೆ ಮನಸಿಗೆ?
ಅಳಿಸಿ ನಡೆದವರ ಒಡನಾಟದಲ್ಲಿ ಮುಳುಗಿ
ತುಂಬಿಕೊಂಡ ನೆನಪಿನ ಜೋಳಿಗೆ ಹೆಗಲಿಗೇರಿಸಿ
ಬದುಕಿನ ಗಾಲಿ ಉರುಳಿಸಿದರೆ
ಗಾಲಿ ಕಳಚಿ ಅಳಿದು
ಅಳಿಸಿ ಸರಿದವರ ಹೆಜ್ಜೆಯನ್ನೇ
ಅರಸಿ ಹೋಗುವುದಾಗ!

ಅಗ್ಗಷ್ಟಿಕೆಯಲ್ಲಿ ಎಲ್ಲವನ್ನು
ಸುರಿದು ಅದು ಧಗಧಗ ಉರಿದ
ಮೇಲೆ ಉಳಿಯುವುದು ಅದರ ಶೇಷವಷ್ಟೇ!
ಗಾಳಿಯಲ್ಲಿ ಗುರುತಿಲ್ಲದಂತೆ ನೆನಪಿನ
ಕೊಂಡಿಯ ಕಳಚಿಕೊಂಡು ಅದು
ಗಮ್ಯವನ್ನೇ ಸೇರುತ್ತದೆ.

ನೆರಳಂತೆ ನಿನ್ನತ್ತಲೇ ಸುಳಿವ
ನಿನ್ನೆಗಳ ಸುಳಿಯಿಂದ ಸರಿದು
ಬೀಸುವ ತಂಗಾಳಿಯಲ್ಲಿ ಮೈಯೊಡ್ಡಿ
ಮನದಲ್ಲಿ ಊಳಿಡುವ ನೆನಪುಗಳ
ನಿಡಿದಾಗಿ ಉಸಿರುಬಿಡು
ಮೈಮನಸು ಹಗುರಾಗುವಾದಾಗ!

ಎದೆಯ ತುಂಬೆಲ್ಲಾ ಕಪ್ಪು ಚುಕ್ಕೆಗಳು
ಚಂದಿರನು ಹೊರೆತಿಲ್ಲ ಇದಕ್ಕೆ
ಅವನೆದೆಯ‌ ಆಳದಲ್ಲೂ ಯಾರ
ಅರಿವಿಗೂ ಬಾರದ ಬೇಸರದ ಛಾಯೆ
ನೋವನೆಲ್ಲಾವನ್ನು ಅಡಗಿಸಿಕೊಂಡು ಬೆಳದಿಂಗಳ
ನಗುವನಷ್ಟೇ ಬೀರುತಿಹನು

ನಿನ್ನ ಮನದ ಇರುಳ
ಗೋಡೆಯನ್ನೊಮ್ಮೆ ದಾಟಿ ಬಾ
ನಿನಗಾಗಿ ಬೆಳದಿಂಗಳು ಕನವರಿಸಿ
ಕಾದಿದೆ ಅದನ್ನೊಮ್ಮೆ ಪ್ರೀತಿಯಲ್ಲಿ
ಅಪ್ಪಿ ಒಪ್ಪಿ ಬಿಡು
ಭವಿಷ್ಯದ ಬದುಕೆಲ್ಲಾ ರಂಗಿನ ರಂಗೋಲಿ

ಒಂಟಿತನದ ಕರಿನೆರಳಿನ
ಸಾಂಗತ್ಯವ ಸರಿಸಿ
ನಿನ್ನ ಮನದಲ್ಲಿ ಕಲೆಯಂತೆ
ಕಳೆಯಾಗಿ ಹೂಳಿರುವ
ನೆನಪುಗಳ ಸ್ಮಶಾನವನ್ನು ಗುಡಿಸಿ
ಒಲವಿನ ಬೀಜ ಬಿತ್ತಿ ಹಸಿರಾಗಿ ಬೆಳೆದು
ಹೂವಾಗಿ ಅರಳಿ ನಗಲು
ಪಾರಿಜಾತ ಪುಷ್ಪವೊಂದು ನಿನಗಾಗಿ ಕಾದಿದೆ
ಒಮ್ಮೆ ನಿನ್ನ ಮನದ ಕದವನ್ನೊಮ್ಮೆ ತೆರೆದು ನೋಡು!

‍ಲೇಖಕರು Admin

12 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading