ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಜನ್ಯ ನಾಯಕ ಕವಿತೆ- ಮರೆಯಾಗ ಬಯಸುತಿದೆ…

ಸೌಜನ್ಯ ನಾಯಕ

ನಿನ್ನ ನೂರಾರು ಪಿಸುಮಾತುಗಳು
ನನ್ನ ಕಿವಿಯ ಸೋಕಿ
ಮನಸು ಕಚಗುಳಿ ಇಡುವಂತೆ ಮಾಡಿದ್ದು
ಇದೇ ಗುಡ್ಡದ ಮಡಿಲಲ್ಲಿ…
ತಪ್ಪಲಿನ ನೂರಾರು ಮನೆಗಳ
ನೋಡಿ
ನಮದೊಂದು ಮನೆಯ ಕನಸ
ಹುಟ್ಟು ಹಾಕಿಕೊಂಡಿದ್ದು ಕೂಡ ಇಲ್ಲಿಯೇ…
ಅದೆಷ್ಟು ವರ್ಷಗಳನ್ನು
ಜೊತೆಯಲ್ಲಿಯೇ ಕಳೆದಿಲ್ಲ ಹೇಳು
ಇದೇ ಗುಡ್ಡದ ಮೇಲೆ ಕೂತು..
ಅದೆಷ್ಟೋ ಬೇಕು ಬೇಡಗಳ ನಡುವೆ
ಮನಸು ಬೇಯುತಿರುವಾಗ
ಕೊಂಚ ನೆಮ್ಮದಿಯ ಹುಡುಕಿ
ನಾವೂ ಓಡಿ ಬರುತಿದ್ದದ್ದು
ಕೂಡ ಇಲ್ಲಿಗೆಯೆ…

ಎಲ್ಲವೂ ಸರಿ ಹೋಯಿತೆಂದು
ನಿನ್ನ ಬಾಚಿ ತಬ್ಬಿ ಖುಷಿಪಡುತಿದ್ದವಳಿಗೆ
ಮಗದೊಂದು ಖುಷಿಯಲ್ಲಿ ತಬ್ಬಲು
ನೀ ಕೂತು ಎದ್ದು ಹೋದ
ಈ ಗುಡ್ಡದ ನೆಲವೊಂದೆ
ನಿಲುಕಬಹುದೆಂಬುದು
ತಿಳಿದಿರಲಿಲ್ಲ ನೋಡು…
ಎಲ್ಲವೂ ಗತಿಸಿ ಅದೆಷ್ಟೋ
ವರ್ಷಗಳೇ ಸರಿದು ಹೋದವು…
ಗುಡ್ಡದ ತಪ್ಪಲಿನ ಮನೆಗಳು
ಕೂಡ ನಿನ್ನಂತೆಯೆ
ಸದ್ದಿಲ್ಲದೆ ಮರೆಯಾದವು…
ಸದಾ ತಾಯಿಯ ಮಡಿಲಂತೆ
ಸಂತೈಸುತಿದ್ದ
ಈ ಗುಡ್ಡವು ಇಂದು ಇನ್ನಾರದೋ
ಹಣದ ದಾಹಕ್ಕೆ ಸಿಲುಕಿ ಮರೆಯಾಗುತಿದೆ…
ಇದೆಲ್ಲದರ ನಡುವೆ
ಎಲ್ಲವನ್ನು ಕಂಡು ಕಾಣದಂತೆ
ಮೂಕಳಾಗಿ ಮರೆಯಲ್ಲಿ
ನಿಂತಿರುವವಳು ನಾನು…
ಮರಗುತಿದ್ದೇನೆ ಒಳಗೊಳಗೆ
ಮರೆಯಾಗುತಿರುವ
ನೆನಪಿನ ಕುರುಹುಗಳ ನೋಡಿ…
ಓಡುತಿದ್ದೇನೆ ಮನವ ಸಂತೈಸಿಕೊಳ್ಳಲು…
ಹುಡುಕುತಿದ್ದೇನೆ ಮತ್ತದೆ ನೆಮ್ಮದಿಯ …
ಆದರೆ ಅದೇಕೋ
ನೆಮ್ಮದಿಯು ಕೂಡ
ನಿಮ್ಮನ್ನು ಅನುಸರಿಸಿಯೇ
ಮರೆಯಾದಂತಿದೆ…
ಮರೆಯಾದವುಗಳ ಜೊತೆ
ಸಿಗಲಾರದ ನೆಮ್ಮದಿಯೂ ಸೇರಿ
ಮನ ಪದೇ ಪದೇ ನಲುಗುತಿದೆ…
ನಗುತಿದೆ… ಅರಸುತಿದೆ… ಅಳುತಲಿದೆ…
ವಾಸ್ತವವ ಮರೆತು
ಹಳೆಯದರೊಡನೆಯೆ
ತಾನು ಮರೆಯಾಗ ಬಯಸುತಿದೆ…

‍ಲೇಖಕರು Admin

26 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading