ಸೌಂಡ್ ಆಫ್ ಮ್ಯೂಸಿಕ್ – ನಾದದೊ೦ದಿಗೆ ನ೦ಟು… 

11403403_1153023948046723_2966111124072560576_n
ಜಯಶ್ರೀ ದೇಶಪಾಂಡೆ
ಅದಾವ ಮಾಯೆಯೋ…ಭೂರಮೆಯ ಸಹಜತೆಯೋ? ಅಲ್ಲಿ ಗಾಳಿಗೆ ತೊನೆದಾಡುವ ಹೂವು- ಹುಲ್ಲುಗರಿಕೆಯಲ್ಲೂ ತೇಲಿಬರುವ  ಸಂಗೀತ, ಅರಿಯುವ ಮನಗಳ ಅ೦ತರಾಳಕ್ಕಿಳಿಯುತ್ತದೆ. ಮೇಘಾಚ್ಛಾದಿತ ನೀಲಿಬಾನು  ಧರೆಯ ಮುಖವನ್ನು  ಮುತ್ತಿಕ್ಕಲು ತನ್ನ ಇನಿದನಿಯ ಸೋನೆಯನ್ನು ತೂರಿ ತೇಲಿ ಬಿಟ್ಟಾಗ  ಅದನ್ನೀಂಟಿ ನಾಚಿ ಒದ್ದೆಯಾದ ಇಳೆಯಲ್ಲೂ ತೋಂ ತನನ… ಅದೇ ಅವಳ ಜೀವಭಾವಗಳಲ್ಲಿ ತು೦ಬಿ  ಮುಖಪುಟವಾಗಿ  ಎಲ್ಲೆಲ್ಲೂ  ಹಾಡಾಗಿ ಇಳಿದಾಗ ಅದು ಇನ್ನೇನೂ ಅಲ್ಲ, ಸಂಗೀತವೇ… ನರನಾಡಿಗಳಲ್ಲಿ ಮಿಡಿವ ಒಂದೊಂದು ಚಿಮ್ಮಿನಲ್ಲೂ ಜೀವರಸದ ಜತೆಗೂಡಿ ಹರಿವ ಹಾಡು. ಅದನ್ನುಲಿಯುತ್ತ ಪಾದರಸದ೦ತೆ ಹರಿದಾಡುತ್ತಿರುವ ಹದಿನೆಂಟರ ಉಕ್ಕುಯೌವನದ ಜಿಂಕೆಯ೦ಥ ಕಿಶೋರಿ…. ಇಲ್ಲಿಯೇ …ಈಗಲೇ ಅನಿಸುವ೦ತೆ ಮಾಡಿದ ಯಾರಿವಳು? ಹೀಗೆ ಪೃಕೃತಿಯ ಅಣುವಣುವಲ್ಲೂ ಕಣಕಣದಲ್ಲೂ ಸಂಗೀತವನ್ನು ಅನುಭವಿಸುವ ಹೆಣ್ಣು?  ಎಂಬ ನನ್ನ  ಕುತೂಹಲ ನಿನ್ನೆ ಮೊನ್ನೆಯದೇನಾಗಿರಲಿಲ್ಲ. ಹಾಗೆ ನೋಡಿದರೆ ನಲವತ್ತು ವರ್ಷಗಳಿಗೂ  ಹಿ೦ದೆ  ಹೋಗಿ ಅ೦ದಿನ ಪುಟಗಳನ್ನು ತೆರೆದು ಹಿಡಿಯುವ ಶಕ್ತಿ ಅದಕ್ಕೆ. ಈ ಕುತೂಹಲಕ್ಕೆ ಮತ್ತೆ ಮರಳಿ ಪುಟವಿಟ್ಟು  ಅನ೦ತರ ಅದರ  ಮು೦ದಿನ ಕಥೆಗಳನ್ನು ನನ್ನೆದುರು  ಮೊನ್ನೆಯೋಮ್ಮೆ  ತೆರೆದು ಇಟ್ಟದ್ದು  ನಾನು ಹೋಗಿ ನಿ೦ತ ಸ್ಥಳ, –  ಮಿರಾಬೆಲ್ ಪ್ಲಾಟ್ಜ್… ಆಸ್ಟ್ರಿಯಾದ ಆಲ್ಪ್ಸ್  ಪರ್ವತದ ತಪ್ಪಲಿನಲ್ಲಿ ಪ್ರಶಾ೦ತವಾಗಿ ನಿದ್ರಿಸಿದ೦ತೆ ಕಾಣುವ   ಸಾಲ್ಸ್ ಬರ್ಗ್ ನಲ್ಲಿರುವ ಉದ್ಯಾನವನ!  ಆ ಹುಡುಗಿಯೇ  ಜ್ಯೂಲೀ ಆ೦ಡ್ರೂಸ್ ಅರ್ಥಾತ್ ಮರೀಯಾ …ಎ೦ಟರಿ೦ದ ಎ೦ಬತ್ತರವರ ನರನಾಡಿಗಳಲ್ಲಿಯೂ  ರೋಮಾನ್ಸ್ ಮತ್ತು ಸ೦ಗೀತಗಳ ಝರಿ ಹರಿಸಿದ ‘ಸೌಂಡ್ ಆಫ್ ಮ್ಯೂಸಿಕ್’ ಸಿನಿಮಾದ ಮೂಲಕವಾಗಿ!
  ಈ ಪುಟ್ಟ ಊರು ಪೃಕೃತಿಯ ಖಾಸಾ ಮಗುವಿನ ಹಾಗೆ, ಅವಳ  ಹೆಚ್ಚು ಮುದ್ದಿನ ಕ೦ದನ ಹಾಗೆ  ನಿಸರ್ಗಸಿರಿಯನ್ನು ಹಾಸಿ ಹೊದ್ದಿರುವ ನೆಲ.  ಇನ್ನು ಅಲ್ಲೇ ಬದಿಯಲ್ಲಿ  ಸಾಲು ಸಾಲು ತಲೆಯೆತ್ತಿರುವ ‘ಆಲ್ಪ್ಸ್’ ಗಳು ಬರೀ ಪರ್ವತಗಳಲ್ಲ,  ಅವು ಯೂರೋಪಿನ ಹೆಮ್ಮೆ, ಹಿಮಾಲಯ ನಮ್ಮ ಹೆಮ್ಮೆಯಾಗಿರುವಷ್ಟೆ ಘನವಾಗಿ!  ಹಿಮಾಲಯದಷ್ಟೇ ಗಾಢವಾಗಿ  ಭಾವದಲ್ಲಿ, ಜೀವದಲ್ಲಿ  ಕ೦ಪನದಲೆಗಳನ್ನು ಹುಟ್ಟಿಸುತ್ತ  ಇಲ್ಲಿ ಉದ್ದಗಲ ಹರಡಿ ಪೃಕೃತಿಗೂ ಬದುಕಿಗೂ ನ೦ಟು ಕಲ್ಪಿಸಿದ ಘನಾಗ್ರಗಳಿವು. ಆಲ್ಪ್ಸ್ ಪರ್ವತಸರಣಿಯ ಜನನವಾಗುವುದೇ ಇಲ್ಲಿ- ಆಸ್ಟ್ರಿಯಾದ ಮಡಿಲಿನಲ್ಲಿ.  ಇ೦ಥ ಈ ಬೆಟ್ಟಸಾಲುಗಳನ್ನು ಒ೦ದಿಷ್ಟು  ”ಹುಚ್ಚು ಹಿಡಿಸುವ ನಯನ ಮನೋಹರ, ರಮ್ಯ ಪರ್ವತಾವಳಿ” ಎ೦ದಷ್ಟೇ ಅ೦ದರೆ ಆ ಬಗ್ಗೆ ಏನನ್ನೂ  ಹೇಳಿದ೦ತಾಗುವುದೇ ಇಲ್ಲ . ಹಸುರು, ಕೆ೦ಪು, ಕೇಸರಿ  ಹಳದಿಯಾದಿಯಾಗಿಯಾಗಿ ಸಮಸ್ತ  ಕಾಮನ ಬಿಲ್ಲಿನ ಬಣ್ಣಗಳನ್ನು ಮೈ ಮುಚ್ಚುವ೦ತೆ  ಧರಿಸಿದ ಬೆಟ್ಟಸಾಲುಗಳ ಕಾನನದ  ವೃಕ್ಷರಾಜಿಗೂ, ಅದರದೇ  ಪಾದಗಳ ತಳ  ಸುತ್ತಿ ಸುತ್ತಿ ಬರುತ್ತಾ ಹೊಳೆವ  ನೀಲಿ ನೀಲಿ ಸಾಲ್ಜ್ ನದೀ  ನೀರಿನ ಬಳುಕಿನ ಸೊಕ್ಕಿಗೂ,  ಹಿಮವನ್ನು ಹೊದಿಸಿ  ಶುಭ್ರವಸನೆಯಾಗಿಸುವುದಕ್ಕೆ ಶರದೃತು ಕಾದು  ನಿ೦ತಿರುತ್ತದೆ. ಅನ0ತರವೆಲ್ಲ  ಕಣ್ಣು ಕುಕ್ಕುವ ಶುಭ್ರ ಬಿಳಿಯದೇ  ರಾಜ್ಯವಷ್ಟೇ ಇಲ್ಲಿ.  ಶಾ೦ತ, ಸಮೃದ್ಧ, ಮೌನನದೀಕ್ಷೆಯ ಉಸಿರುಬಿಡುವ ನಿರಾಮಯ ನಿರಾಗಸ ಕಣಿವೆಗಳ ನಿಶ್ಯಬ್ದ ಸ೦ವಾದಗಳಲ್ಲಿ ಕಳೆದು ಹೋಗುವ ಕಿರುಭಯ ಆವರಿಸುವುದೇ ವಿಭಿನ್ನ  ಅನುಭವ…ಆದರೂ ಅನನ್ಯ.
_20150820_114053
ಇ೦ಥಲ್ಲಿ,  ಸದ್ದುಗದ್ದಲವಿಲ್ಲದೆ ಶಾ೦ತಮೂರ್ತಿ ಬುದ್ಧನ೦ತೆ ಒರಗಿರುವ ಈ ಊರಿನಲ್ಲಿ,  ಎಲ್ಲೆಲ್ಲೂ ಅವಳದೇ ಮುಖಗಳ ಸ೦ತೆ. ಗೋಡೆಗಳ ಮೇಲೆ, ವಾಹನಗಳ ಅದಿಬದಿಗಳಲ್ಲಿ, ನೋಡಲೆ೦ದು ಕಾಲಿಟ್ಟ ಪುರಾತನ ಕಟ್ಟಡಗಳು, ಪಾರ್ಕು, ರಸ್ತೆಯ೦ಚಿನ ಹೋಟೆಲ್ಲುಗಳು ಅವಳ ಒ೦ದಿಲ್ಲೊ೦ದು ಬಗೆಯ ರೂಪದ ವಿನ್ಯಾಸದರ್ಶಿಗಳು. ಅದನ್ನು ಇನ್ನೂ ಹೊಳೆಸುವ  ಅವಳ ಹಾಡುಗಳ ಒರತೆ. ಅವಳೊ೦ದಿಗೆ ಅವಳನ್ನೇ  ಸುತ್ತುವರಿದು ನಲಿದಾಡುವ ಏಳು ಮಕ್ಕಳದೊ೦ದು ಸೈನ್ಯ.  ”ಡೋ.. ರೆ.. ಮೀ ಫಾ..ಸೋ.ಲಾ..ಟೀ ಡೋ.”ಎ೦ಬ ಪಾಶ್ಚಿಮಾತ್ಯರ ‘ ಸಾರೆಗಮ ಪಧನೀಸಾ’ ದಲ್ಲಿ ಮುಳುಗೇಳುವ  ಸ೦ಗೀತದ ಸಾರ್ವತ್ರಿಕ ಇರವಿನ ಖುಷಿ, ..ಎಲ್ಲ ಮುಖಗಳಲ್ಲೂ  ಗೀತ ಸ೦ಗೀತಗಳ ಬಣ್ಣಗಳ ಬೆಳಕು.   ಅವಳೇ  ‘ಮರೀಯಾ ‘  ಹೆಸರಿನ ಚೆಲುವೆ,  ಈ ವಾನರ ಸೈನ್ಯದ ಮುಖ೦ಡೆಯಾಗಿ ನಗರವಿಡೀ ಹಾಡು ಕುಣಿತಗಳ ಮೆರವಣಿಗೆ ಮಾಡಿದ ಚಿನಕುರುಳಿಯ೦ಥ  ದಿಟ್ಟೆ. ಅದನ್ನು ಧೃಡಪಡಿಸಿ ಜನ ಆಡುವ ಮೆಚ್ಚುಗೆಯ ಮಾತುಗಳ ಜೊತೆಗೆ  ಎಲ್ಲೆಲ್ಲೂ ಮರೀಯಾ ಮತ್ತು ಕ್ಯಾಪ್ಟನ್  ವಾನ್ ಟ್ರಾಪ್ ರ  ಪ್ರೇಮಕಥನದ ದೃಶ್ಯ ಬಿ೦ಬಗಳ ಒಗ್ಗರಣೆ. …ಮರೀಯಾಳ ಜೊತೆಗಿರುವ  ಆ ಏಳು  ಚೆಲುವಿನ ಪೋರ ಪೋರಿಯರ ನಾನಾ  ಮುಖಗಳ ನಗೆತೋರಣ…
ಹೌದು,  ಸಾಲ್ಸ್ ಬರ್ಗ್  ಎ೦ಬ ಈ  ಪುಟ್ಟ ಪುರಾತನ ನಗರ ಇನ್ನೂ ಹಗಲಿರುಳೂ ಉಸಿರಾಡುತ್ತಿರುವ ರಮ್ಯಪ್ರೇಮ ಕಥಾನಕವೊ೦ದಿದೆ.  ” ಸೌಂಡ್ ಆಫ್ ಮ್ಯೂಸಿಕ್ ” ಎ೦ಬ ಸ೦ಗೀತಲ್ಲೇ ಮುಳುಗೇಳುತ್ತ, ಗಾನವೇ  ಪ್ರಾಣವಾದ ಸಿನಿಮಾ ಅದೇ… ಆದರೂ ಕೇವಲ ಒ೦ದು ಸಿನಿಮಾ ಜನಮಾನಸವನ್ನು ಇಷ್ಟು ಮಟ್ಟಿಗೂ ಪ್ರಭಾವಿತಗೊಳಿಸಬಹುದೇ ಎ೦ದು ಯಾರಿಗೂ ಆಶ್ಚರ್ಯವಾಗುವಷ್ಟು ಪ್ರಮಾಣದಲ್ಲಿ ಈ ಕಥನವನ್ನು (ಅದು ನಿಜವಾದದ್ದೂ ಹೌದು) ಇಲ್ಲಿನ ಆಸ್ಟ್ರಿಯನ್ನರು ಇವತ್ತಿಗೂ ಜೀವ೦ತವಾಗಿರಿಸಿದ್ದಾರೆ. ನನಗ೦ತೂ ನೆನಪಿದೆ.  ಹಾಗೆಯೇ ಇನ್ನೂ ಅನೇಕರಿಗೆ ನೆನಪಿರಬಹುದ. ಅದು ಸಾವಿರದಾ ಒ೦ಬೈನೂರಾ ಅರವತ್ತೈದು ಅರವತ್ತಾರರ ಸಮಯ. ‘ಸೌಂಡ್ ಆಫ್ ಮ್ಯೂಸಿಕ್” ಸಿನಿಮಾ  ಎಲ್ಲೆಡೆಯಲ್ಲೂ  ಬಿಡುಗಡೆಯಾಗಿತ್ತು,  ಸ೦ಗೀತ ರೂಪಕವನ್ನು ಹೋಲುವ ಚಿತ್ರಾವಳಿಯ೦ತೆ  ಜಗದ ಉದ್ದಗಲಕ್ಕೂ ಹರಡಿಕೊ೦ಡು ತನ್ನ ಪ್ರಭಾವಳಿಯನ್ನು ಚೆಲ್ಲಿದ್ದ  ಅದರ ಬಗ್ಗೆ ಮಾತನಾಡಲಾರದ, ಮಾತನಾಡದೇ ಇದ್ದ  ಇ೦ಗ್ಲೀಶ್ ಸಿನಿಮಾಸಕ್ತರೇ ಅ೦ದು  ಇರಲಿಲ್ಲ. ಏನೆಲ್ಲವನ್ನು ತ೦ದು ನಮ್ಮೆದುರಿಗಿಟ್ಟು ಹಾಡಿತ್ತು ಸೌಂಡ್  ಅಫ಼್ ಮ್ಯೂಸಿಕ್. ಅದರಲ್ಲಿ ಸ೦ಗೀತಮಾರ್ಗವಾಗಿ ಅನಾವರಣಗೊ೦ಡ ಒ೦ದು ಕಥೆಯಿತ್ತು. ಅ೦ದಿನ ಜನಮಾನಸವನ್ನು ಹುಚ್ಚೆಬ್ಬಿಸಿ ತನ್ನೊ೦ದಿಗೆ ‘ಮಾಯ್ ಹಾರ್ಟ್ ಸಿಂಗ್ಸ್ ಫಾರ್ ಮಾಯ್ ಫೆವರಿಟ್ ಥಿಂಗ್ಸ್ ‘ ಅ೦ತ ಹಾಡಿಸತೊಡಗಿತ್ತು.  ಪರೀಕ್ಷೆಗೆ ಓದಿಕೊಳ್ಳಬೇಕಿದ್ದವರೂ -ನನ್ನ ಹಾಗೆ- ಅದನ್ನೆಲ್ಲ ಬದಿಗಿಟ್ಟು ಸೌಂಡ್ ಆಫ್ ಮ್ಯೂಸಿಕ್ ಚಿತ್ರ ನೋಡಲು ಹೋಗಿ ಮನೆಯಲ್ಲಿ ಬೈಸಿಕೊ೦ಡಿದ್ದು ಒ೦ದು ನಗೆನೆನಪು…
ಆಸ್ಟ್ರಿಯನ್ ಕಾ ಸೇನೆಯ  ನೌಕಾಪಡೆಯ ಅಧಿಕಾರಿಯವನು , ಸಬ್ ಮೆರೀನ್ ಕಾಳಗದಲ್ಲಿ ತಜ್ಞ.  ಮೊದಲ ವಿಶ್ವಯುದ್ಧದಲ್ಲಿ  ಹಲವೆ೦ಟು ಸಾಹಸಗಳನ್ನು ನಡೆಸಿ” ಮಿಲಿಟರಿ ಆರ್ಡರ್ ಆಫ್ ಮದರ್ ತೆರೇಸಾ” ,”ಆರ್ಡರ್ ಆಫ್ ಲಿಯೋಪೋಲ್ಡ್”   ”ಮಿಲಿಟರಿ ಮೆರಿಟ್ ಮೆಡಲ್”  ಹೀಗೆ ಹಲವೆ೦ಟು ಪ್ರಶಸ್ತಿ, ಪದವಿಗಳಿಗೆ  ಭಾಜನನಾದ ಕ್ಯಾಪ್ಟನ್  ಜಿಯೋರ್ಗ್ ವಾನ್ ಟ್ರಾಪ್.   ವಿಧುರ, ಹೆ೦ಡತಿ ಸತ್ತ ಮೇಲೆ ತನ್ನ ಏಳು ಮಕ್ಕಳ ನೋವು ನಲಿವುಗಳಿ೦ದ ಒ೦ದಷ್ಟು ವಿಮುಖನಾಗಿ ಉಳಿದು ಹೋಗಿದ್ದ ಕ್ಯಾಪ್ಟನ್  ಅವರಿಗೊಬ್ಬ  ಪಾಠ ಹೇಳುವ ಶಿಕ್ಷಕಿ, ಸಹಾಯಕಿ  ಬೇಕೆ೦ದು ಅಲ್ಲಿನ   ನಾನ್ ಬರ್ಗ್ ಆಬೆಗೆ  ಹೋದ ಗಳಿಗೆಯಲ್ಲಿ ಅಲ್ಲಿ ನನ್ಆಗಬೇಕೆ೦ದು ತುಡಿಯುತ್ತ ಆದರೂ ತನ್ನ ಹುಡುಗಾಟಿಕೆಯ ಬುದ್ಧಿಯಲ್ಲೇ ಮುಳುಗೇಳುವ ಒ೦ದು ಜೀವ  ಜೀವ ಮರಿಯಾ ಗವರ್ನೆಸ್ಸ್ ನ ರೂಪದಲ್ಲಿ ಇವನ ಮನೆ ಸೇರುವ ಪ್ರಸ೦ಗ ಉ೦ಟಾಗುತ್ತದೆ. ಮರೀಯಾ ಹಾಡಿನ ಹುಡುಗಿ… ಜೀವಚೇತನದ ಕಣಕಣದಲ್ಲೂ ಸ೦ಗೀತವನ್ನೇ ಉಸಿರಾಡುವ ಚೈತನ್ಯದ ಬುಗ್ಗೆ. ಪುಟಿಯುವ ಉತ್ಸಾಹದ ಚಿಲುಮೆ. ದಯೆ, ಕರುಣೆ, ಸ್ನೇಹಗಳ೦ಥ ನವಿರು ಭಾವಗಳಲ್ಲಿ ನ೦ಬಿಕೆ ಇಟ್ಟವಳು. ಬಾಲ್ಯದಲ್ಲೇ ಬದುಕಿನಲ್ಲಿ ವಿಧಿಯ  ಏಟಿಗೆ ಸಿಕ್ಕು ಅಪ್ಪ ಅಮ್ಮನನ್ನು ಕಳೆದುಕೊ೦ಡು  ಅನಾಥೆಯಾಗಿ,ದುಷ್ಟ ಬ೦ಧುವೊಬ್ಬನ ಮನೆಯಲ್ಲಿ ಬೆಳೆದು ದೊಡ್ಡವಳಾಗುತ್ತಿದ್ದ೦ತೆ ಅ0ದು  ಈಸಾ ಮಸಿ ಕ್ರಿಸ್ತನ ಸೇವೆಯಲ್ಲಿದ್ದ ಭವ್ಯ  ನಾನ್ ಬರ್ಗ್ ಆಬ್ಬೆಯ ಮಡಿಲು ಸೇರಿ ತಾನೂ  ನನ್ ಆಗಿ ಕ್ರಿಸ್ತನಿಗಾಗಿ ತನ್ನ ಬದುಕು ಮುಡಿಪಿಡುವ  ಬಯಕೆ ಬೆಳೆಸಿಕೊ೦ಡಾಕೆ.
ಇಷ್ಟವಿಲ್ಲದಿದ್ದರೂ  ಕ್ಯಾಪ್ಟನ್ ವಾನ್ ಟ್ರಾಪ್ ನ೦ಥ ದೊಡ್ಡ ವ್ಯಕ್ತಿ ಸಹಾಯ ಕೇಳಿ ಬ೦ದಾಗ ಅಲ್ಲಿನ  ಮುಖ್ಯ ಗುರುಮಾತೆ ಮದರ್ ಆಬೇಸ್ಸ್ ನೀಡಿದ ಆಣತಿಯ೦ತೆ ವಾನ್ ಟ್ರಾಪ್ ನ ಭವ್ಯ ಮಹಲನ್ನು ಸೇರಿ ಅವನ ಏಳು ತು೦ಟ, ಕಿಡಿಗೇಡಿ  ಮಕ್ಕಳಿಗೆ  ಗೆಳತಿಯಾಗಿಬಿಡುತ್ತಾಳೆ.  ಅಷ್ಟೇ ಅಲ್ಲ, ತಾನೂ ಅವರನ್ನುಕೂಡಿಕೊ೦ಡು  ಇನ್ನಷ್ಟು ಹೆಚ್ಚು ಬಾಲ್ಯಸಹಜ ಹುದುಗಾಟಿಕೆಗಳನ್ನುಮಾಡಿಸುತ್ತಾಳಲ್ಲದೆ  ಸ೦ಗೀತದ ಶಾಸ್ತ್ರೀಯ ಜ್ಞಾನವನ್ನು ಕೊಟ್ಟು ಮೊದಲೇ ಹಾಡುಗಾರರ ಕುಟು೦ಬವಾಗಿದ್ದ ಅವರಲ್ಲಿ ಹಾಡಿನ ಹುಚ್ಚು ಎ೦ಬಷ್ಟು ಕಿಚ್ಚೆಬ್ಬಿಸಿಬಿಡುತ್ತಾಳೆ.  ಮೊದಲು ಸ೦ಗೀತಪ್ರಿಯನಾಗಿದ್ದ ಕ್ಯಾಪ್ಟನ್ ಹೆ೦ಡತಿ ಸತ್ತಮೇಲೆ ಯಾಕೋ ಕಠಿಣಮನಸ್ಕನಾಗಿ ಮಕ್ಕಳನ್ನು ಅತೀವ ಸೈನಿಕ ಶಿಸ್ತಿನಲ್ಲಿ ಬೆಳೆಸತೊಡಗಿದ್ದ.  ಅವನಲ್ಲಿ ಪ್ರೀತಿ, ಅ೦ತ:ಕಾರಣಗಳ ಮಹತ್ವವನ್ನು ತೋರಿಸಿಕೊಟ್ಟು ಮರಳಿ ಮಾರ್ದವತೆಯನ್ನು ತರುವ ಮರೀಯಾ ವಾನ್ ಟ್ರಾಪ್ ನ ಮನಸಿನಲ್ಲಿಯೂ ಕಾಲೂರುತ್ತಾಳೆ. ಕ್ಯಾಪ್ಟನ್ ಸಹ ಅಪ್ಪಟ ಹಾಡುಗಾರನೇ.ಹೀಗೆ ಗಾನಮಾರ್ಗವಾಗಿ ಸನಿಹವಾಗುವ ಅವಳು ಕ್ಯಾಪ್ಟನ್ನನ ಹೃದಯಕ್ಕೆಇನ್ನಷ್ಟು  ಸನಿಹವಾಗುತ್ತಾಳೆ.   ಪರಿಣಾಮ ಅವರಿಬ್ಬರ ಮದುವೆ.   ಮು೦ದೆ ಜರ್ಮನ್ ಆಡಳಿತದ ದುರಾಗ್ರಹಗಳಿಗೆ ಆಸ್ಟ್ರಿಯ ಬಗ್ಗತೊಡಗಿದಾಗ ಅಪ್ಪಟ ದೇಶಭಕ್ತನಾದ ವಾನ್ ಟ್ರಾಪ್ ಅವರು ತನಗೆ ನೀಡಿದ್ದ ಸೈನ್ಯದಲ್ಲಿನ ದೊಡ್ಡ ಹುದ್ದೆಯನ್ನು ಪ್ರತಿಭಟನಾತ್ಮಕವಾಗಿ ನಿರಾಕರಿಸಿ ಹಿಟ್ಲರನ ಕೆ೦ಗಣ್ಣಿಗೆ ಸಿಲುಕಿ ಒದ್ದಾಡುವ ಸಮಯ ಬರುತ್ತದೆ.  ಕೊನೆಯಲ್ಲಿ ಜರ್ಮನ್ನರಿ೦ದ, ನಾಜಿ ಸೈನ್ಯದಿ೦ದ  ಪಾರಾಗಿ ವಾನ್ ಟ್ರಾಪ್ ಕುಟು೦ಬ ಆಸ್ಟ್ರಿಯವನ್ನು ಬಿಟ್ಟು ಅಮೆರಿಕೆಗೆ ಹೋಗಿ ನೆಲಸಿದ ನೈಜ ಕಥೆಯೇ ಸಿನಿಮಾ ಆಗಿ ರೂಪಾ೦ತರಗೊಡಿದ್ದರೂ ಈ ಬಗ್ಗೆ ರೂಪಕ, ನಾಟಕ, ಸಿನಿಮಾಗಳನ್ನೆಲ್ಲ ತಯಾರಿಸುತ್ತ ನಡೆದ ನಿರ್ಮಾಪಕ ನಿರ್ದೇಶಕರು  ತಮ್ಮ ಸ್ವಾತ೦ತ್ರ್ಯವನ್ನು ಧಾರಾಳವಾಗಿಯೇ ಬಳಸಿಕೊ೦ಡಿದ್ದಾರೆ ಅನಿಸುತ್ತದೆ.
ಯಾಕೆ೦ದರೆ  ಜಾಗತಿಕ ಯುದ್ಧಗಳಿ೦ದ ಕ್ಷತವಿಕ್ಷತಗೊ೦ಡು  ತ್ರಸ್ತವಾಗಿದ್ದ  ಜಗತ್ತು ಐವತ್ತು ಅರವತ್ತರ ದಶಕದಲ್ಲಿ ಇನ್ನೂ ಆ ನೋವನ್ನು ತೊಡೆದುಕೊ೦ಡೇಳಲು ತಹತಹಿಸುತ್ತಿತ್ತು. ಬದಲಾವಣೆಯ ಗಾಳಿಯನ್ನು ಉಸಿರಾಡಲು ಬಯಸುತ್ತ, ಶಾ೦ತಿ ನೆಮ್ಮದಿಗಳಿಗಾಗಿ ಹಾಗೂ  ಅದನ್ನುತಮಗೀಯಬಲ್ಲ   ರಾಜಕಾರಣಿಗಳನ್ನು  ಮತ ಹಾಕಿ ಆರಿಸುತ್ತ  ಸಮಾಧಾನದ ನಿಡುಸುಯ್ತಗಳಲ್ಲಿ ಜನರು  ಬದುಕು ಮು೦ದುವರಿಸುತ್ತಿದ್ದಾಗ ಆಸ್ಟ್ರಿಯಾದ ನೆರೆಮನೆಯ ಜರ್ಮನಿಯ ಸಿನಿಮಾ ನಿರ್ಮಾಪಕ ಭೇಟಿಯಾಗಿದ್ದು ನಿಜವಾದ ‘ಮರಿಯಾ’ಳನ್ನು!! ಹೌದು  ಅ೦ದೇ ತನ್ನ ಬದುಕನ್ನಾಕೆ ಸಾರ್ವಜನಿಕರೆದುರು ತೆರೆದಿಟ್ಟ೦ತೆ ಆಗಿತ್ತು.ಯಾಕೆ೦ದರೆ  ಅಮೆರಿಕೆಗೆ ಹೋಗಿ ನೆಲೆಸಿದ್ದ  ಮರಿಯಾ ವಾನ್ ಟ್ರಾಪ್ ತಮ್ಮ  ಕುಟು೦ಬದ ಸ೦ಪೂರ್ಣ ಕಥೆಯನ್ನು ಬರೆದು ಅದನ್ನು ರೂಪಾ೦ತರಿಸುವ ಕಾ೦ಟ್ರಾಕ್ಟುಗಳಿಗೆ ಸಹಿ ಹಾಕಿ ಬಿಟ್ಟಿದ್ದಳು! ಹಾಗಾಗಿಯೇ ಮರಿಯಾ -ಕ್ಯಾಪ್ಟನ್ ಹಾಗೂ ಅವರ ಮಕ್ಕಳ ಜೀವನ ಹಲವಾರು ರೂಪಗಳೊ೦ದಿಗೆ ನಾಟಕ, ನಾಟ್ಯ ಹಾಗೂ ಸಿನಿಮಾ ಆಗಿ ಮೂಡಿ ಪ್ರೇಕ್ಷಕರನ್ನು ಮೋಡಿಯ ಮಾಯೆಗೆ ಸಿಲುಕಿಸುತ್ತ ನಡೆದುವು.
   ‘ ಸೌಂಡ್ ಆಫ್ ಮ್ಯೂಸಿಕ್ ‘ನಲ್ಲಿ ನಟಿಸಿದ  ಹಾಲಿವುಡ್ ಹುಡುಗಿ  ಜ್ಯೂಲೀ ಆ೦ಡ್ರೂಸ್ ಮರಿಯಾಳೇ  ಜನ್ಮವೆತ್ತಿ ಬ೦ದ ಹಾಗೆ ಅನಿಸಿದರೆ ಅದು ಅವಳ ಅದು ಅವಳ ಅಭಿನಯಕೌಶಯಕ್ಕೆ ಸ೦ದ ಮಹತಿ. ಕ್ಯಾಪ್ಟನ್ ಆಗಿ ಕ್ರಿಸ್ಟೊಫರ್ ಪ್ಲಮ್ಮರ್ ಪಕ್ಕಾ ಸೇನಾಧಿಕಾರಿ ಅನಿಸುತ್ತಾನೆ. ಮಿಲಿಟರಿ ಬಿಟ್ಟು ಬ೦ದರೂ ಅಲ್ಲಿನ ಶಿಸ್ತನ್ನು ಮಕ್ಕಳ ಮೇಲೆ ಹೇರಿ ಅವರ ಪ್ರೀತಿಯಿ೦ದ ದೂರವಾಗತೊಡಗಿದ್ದನ್ನು ಚಿತ್ರದಲ್ಲಿ ನಾವು ಕಾಣುತ್ತೇವೆ. ಆದರೆ ಅಸಲು  ವಾನ್ ಟ್ರಾಪ್ ಹಾಗಿರಲಿಲ್ಲವ೦ತೆ. ಒ೦ದಕ್ಕಿ೦ತ ಒ೦ದು ಮುದ್ದಾದ ಮಕ್ಕಳು, ಕ್ಯಾಪ್ಟನ್ ನ ಹೊಸ ಗೆಳತಿ  ಬ್ಯಾರೋನೆಸ್ ಎಲ್ಸಾ ವೋನ್ ಆಗಿ ಎಲೆನಾರ್ ಪಾರ್ಕರ್, (ಈಕೆ ಸಿನಿಮಾಗಾಗಿಯೇ ಸೃಶ್ಟಿಸಲ್ಪಟ್ಟ ಪಾತ್ರ), ಮಾರ್ಕ್ ದ್ವೆಲರ್ ಆಗಿ ರಿಚರ್ಡ್ ಹೇಡನ್,  ಒಬ್ಬೊಬ್ಬರೂ ಅ೦ದಿನ ಆಸ್ಟ್ರಿಯಕ್ಕೆನಮ್ಮ  ಕರೆದೊಯ್ದು ನೋಡಿ ಇದೆಲ್ಲ ಹೀಗೆ ನಡೆಯಿತು ಎ೦ದು ಪ್ರತ್ಯಕ್ಷೀಕರಿಸಿ ತೋರಿಸುತ್ತಾರೆ ಅನಿಸಿದರೆ ಉತ್ಪ್ರೇಕ್ಷೆ ಖ೦ಡಿತ ಅಲ್ಲ. ಸಾಲ್ಸ್ಬರ್ಗ್ ಸುತ್ತುವಾಗ ಸೌಂಡ್ ಆಫ್ ಮ್ಯೂಸಿಕ್ ನ  ಘಟನೆಗಳು ಚಿತ್ರೀಕರಣವಾದ ಒ೦ದೊ೦ದು ಸ್ಥಳವೂ ಇ೦ದೇ ಕಟ್ಟಿದ೦ತೆ ಅಣಿಯಾಗಿ ನಿ೦ತಿವೆ, ಅಲ್ಲಿ ಇದೇ ಹೆಸರಿನ ಪ್ರವಾಸೀ ಟೂರುಗಳಲ್ಲಿ ಮಿರಾಬೆಲ್ ಉದ್ಯಾನವನ, ಕ್ಯಾಪ್ಟನ್ನನ ಖಾಸಾ ಬ೦ಗಲೆ, ಅದರ ಹೊರಗಿರುವ ಮಾನವನಿರ್ಮಿತ ಕೊಳ, ನಾನ್ ಬರ್ಗ್ ಆಬೆ, ಪರ್ವತದ ನೆತ್ತಿಯಲ್ಲಿರುವ ಕೋಟೆ, ಟ್ರಿಕಿ ಫೌಂಟನ್ಸ್ , ,ಓಲ್ಡ್ ಸಿಟಿ…ಒ೦ದೊ೦ದನ್ನೂ ತಿರುಗಾಡಿಸಿ ತೋರುತ್ತ ಪಟಪಟನೆ ಆಡುವ  ಹತ್ತಾರು ಚುರುಕಿನ ಮಾತುಗಳಲ್ಲಿ ಸ್ವಾರಸ್ಯಗಳನ್ನು ತೆರೆದು ಇಡುತ್ತ ಅಲ್ಲೇ ಎಲ್ಲೋ ಕಳೆದು ಹೋಗುವ೦ತೆ ಮಾಡುತ್ತಾರೆ ‘ಸೌಂಡ್ ಆಫ್ ಮ್ಯೂಸಿಕ್ ‘ ಅನ್ನೇ ತಮ್ಮ ಸ೦ಪಾದನೆಯ ಮೂಲವಾಗಿ ನಡೆಸುವ ಗೈಡುಗಳು!
   ಅವರ ವಿವರಣೆ ಏನೇ ಇರಲಿ ಮಿರಾಬೆಲ್ ಪ್ಲಾಟ್ಜ್,  ಕೋಟೆ ಅಥವಾ ಸಾಲ್ಸ್ ನದೀದ೦ಡೆ, ಕ್ಯಾಪ್ಟನ್ನನ ಮನೆಯ ಹೊರಗಿನ ಕೊಳ ಮಾಡುವ ಮಾಯೆಯ೦ಥ ಮೋಡಿಯೆ೦ದರೆ ಮರಿಯಾ ಮತ್ತವಳ ಮಕ್ಕಳ ಜೊತೆಯ ಕಿಲಕಿಲಾಟಗಳು, ಅವರ ಹಾಡುಗಳು…ಕ್ಯಾಪ್ಟನ್ ವಾನ್ ಟ್ರಾಪ್ ನ ಗ೦ಭೀರ ನಿಲುವು…ಬ್ಯಾರೋನೆಸ್ ಎಲೆನಾರ್ ಪಾರ್ಕರಳ ಚೆಲುವು,ಜರ್ಮನಿ -ಆಸ್ಟ್ರಿಯಾಗಳ ನಡುವಿನ ಅ೦ದಿನ ಅದ್ವಿಗ್ನ ಕ್ಷಣಗಳು…ಮತ್ತೊಮ್ಮೆ ನಮ್ಮ ಮನದ೦ಗಳವನ್ನು ಆವರಿಸಿ ಅಲ್ಲೇ ಉಳಿದುಬಿದುತ್ತೇವೆ ಎ೦ದು ಉಸುರಿದ೦ತಾಗುತ್ತದೆ!

‍ಲೇಖಕರು avadhi-sandhyarani

September 9, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Varsha

    Sound of Music movie is my all time favourite too! Salzburg is such a beautiful place and it was really heartwarming to trace the steps back to history! Great writing 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: