ಎಲ್ಲಿ ಹೋದಿರಿ ತೇಜಸ್ವಿ…? – ಜಿ ಎನ್ ಮೋಹನ್ ಕೇಳ್ತಾರೆ

ಜಿ ಎನ್ ಮೋಹನ್

ಪತ್ರಿಕೆ ಎನ್ನುವುದು ಪೆಪ್ಸಿ ಕೋಲಾ ಅಲ್ಲ’ ಎಂದೆ. ಅದುವರೆಗೂ ಪಕ್ಕದಲ್ಲಿದ್ದ ಕಥೆಗಾರ ಜಿ ಎಸ್ ಸದಾಶಿವ ಅವರೊಂದಿಗೆ ಶತಮಾನದ ಗುಟ್ಟನ್ನು ಹಂಚಿಕೊಳ್ಳುವವರಂತೆ ಮಾತನಾಡುತ್ತಾ ಕುಳಿತಿದ್ದ ತೇಜಸ್ವಿ ತಕ್ಷಣ ನನ್ನತ್ತ ತಿರುಗಿದರು ನಾನು ಮಾತು ಮುಂದುವರಿಸಿದೆ. ‘ಪತ್ರಿಕೆ ಎನ್ನುವುದು ಸಮಾಜದ ಸೇತುವೆ. ಅಭಿವೃದ್ಧಿಯತ್ತ ಹೆಜ್ಜೆ ಹಾಕಲು ಇರುವ ಊರುಗೋಲು. ಅದು ಕೋಲಾದಂತೆ, ಚಿಪ್ಸ್ ನಂತೆ, ಟೂಥ್ ಪೇಸ್ಟ್ ನಂತೆ ಬಳಸಿ ಎಸೆಯುವ ವಸ್ತುವಲ್ಲ’. ಅದು ಸಂದೇಶ ಮಾಧ್ಯಮ ಪ್ರಶಸ್ತಿ ವಿತರಣಾ ಸಮಾರಂಭ. ಸಂದೇಶ ಮಾಧ್ಯಮ ಪ್ರತಿಷ್ಠಾನ ಪ್ರತೀ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಸಮಾರಂಭ. ಆ ವರ್ಷ ತೇಜಸ್ವಿ, ಜಿ ಎಸ್ ಸದಾಶಿವ ಇದ್ದರು. ಪತ್ರಿಕೋದ್ಯಮದಲ್ಲಿದ್ದ ಎಳೆಯರನ್ನು ಗುರುತಿಸಿದ ಪಟ್ಟಿಯಲ್ಲಿ ನಾನಿದ್ದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಲು ನಮ್ಮ ಮುಂದೆ ಇದ್ದದ್ದು ಎರಡು ನಿಮಿಷಗಳು ಮಾತ್ರ. ಅಷ್ಟರಲ್ಲಿ ನಾನು ಮಾತನಾಡಿದ್ದು ಇಷ್ಟು. ಸಮಾರಂಭ ಮುಗಿದು ಗ್ರೂಪ್ ಫೋಟೋಗೆ ಪೋಸ್ ನೀಡಿ ಇನ್ನೂ ಕೆಳಗಿಳಿದಿರಲಿಲ್ಲ. ತೇಜಸ್ವಿ ನನ್ನತ್ತ ಬಂದರು ಕೈ ಹಿಡಿದು ಅದುಮಿದರು ಅವರ ಕಣ್ಣುಗಳಲ್ಲಿ ಪ್ರೀತಿಯ ಒರತೆ. ‘ಹೌದು ಮಾಧ್ಯಮ ಖಂಡಿತಾ ಬಳಸಿ ಬಿಸಾಡುವ ವಸ್ತುವಲ್ಲ’ ಎಂದರು. ಅವರ ಕೈನ ಆ ಬಿಸುಪು ಈಗಲೂ ನನ್ನೊಳಗೆ ಹಾಗೇ ಉಳಿದಿದೆ.
ನಾನು ತೇಜಸ್ವಿ ಲೋಕದಲ್ಲಿ ಸೇರಿಹೋದೆ ಎಂದರೆ ಯಾರಾದರೂ ನಕ್ಕಾರು. ಯಾಕೆಂದರೆ ತೇಜಸ್ವಿ ಎಂಬ ಜಗತ್ತಿನಲ್ಲಿ ಸೇರಿ ಹೋಗದಿದ್ದವರಾರು? ತೇಜಸ್ವಿಯತ್ತ ಹೇಗೆ ಜನ ಮುಗಿಬಿದ್ದು ಬಂದರೋ ಅದೇ ರೀತಿ ತೇಜಸ್ವಿ ಸಹಾ ಮುಗಿಬಿದ್ದು ತಮ್ಮ ಲೋಕವನ್ನು ಜನರ ಎದೆ ಹೊಲದೊಳಗೆ ನಡೆಸಿಕೊಂಡುಬಂದುಬಿಟ್ಟರು. ತೇಜಸ್ವಿ ಗೊತ್ತಿರುವ ಪ್ರತಿಯೊಬ್ಬರಿಗೂ ರಾಜೇಶ್ವರಿ ಗೊತ್ತು. ಸುಸ್ಮಿತಾ, ಈಶಾನ್ಯೆ ಗೊತ್ತು. ತೇಜಸ್ವಿ ಕುಟುಂಬ ಮಾತ್ರವಲ್ಲ ಅವರ ಗೆಳೆಯರ ಗುಂಪೂ ಗೊತ್ತು. ಅವರ ಜೊತೆ ಗಾಳ ಹಿಡಿದು ನಡೆದವರು ಗೊತ್ತು, ಅವರ ಸ್ಕೂಟರ್ ರಿಪೇರಿ ಮಾಡಿದವರು ಗೊತ್ತು. ಅವರಿಗೆ ನ್ಯೂಸ್ ಪೇಪರ್ ಕೊಡುತ್ತಿದ್ದವರು ಗೊತ್ತು ಅವರೆಲ್ಲಾ ಗೊತ್ತಿಲ್ಲದೆಯೂ ಇರಬಹುದೇನೋ? ಆದರೆ ಆ ಕುಬಿ, ಆ ಇಯಾಲ, ಕರ್ವಾಲೋ, ಮಂದಣ್ಣ, ಎಂಗ್ಟ, ಕೃಷ್ಣೇಗೌಡ, ಆ ಗಯ್ಯಾಳಿಯರು, ಬಿರಿಯಾನಿ ಕರಿಯಪ್ಪ ಎಲ್ಲರೂ ಗೊತ್ತು. ನನಗೆ ಈಗಲೂ ವಿಸ್ಮಯ ತೇಜಸ್ವಿ ಆ ಮ್ಯಾಜಿಕ್ ಸಾಧಿಸಿದ್ದು ಹೇಗೆ?

‘ತೇಜಸ್ವಿ ಇನ್ನಿಲ್ಲ’ ಎಂಬ ಸುದ್ದಿ ಬಂದಾಗ ಸೂರ್ಯ ಇನ್ನೂ ಬಾಡಿರಲಿಲ್ಲ. ಆದರೂ ಒಂದು ಕಾರ್ಮೋಡ ಧುತ್ತನೆ ಎಲ್ಲಿಂದಲೋ ಎದ್ದು ತೇಜಸ್ಸನ್ನು ನುಂಗಿ ಹಾಕಿದ ಅನುಭವ. ಎದೆ ಭಾರವಾಗಿ ಹೋಗಿತ್ತು. ನಾನು ಆಗ ಈಟಿವಿ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದೆ. ಎದೆಯೊಳಗೆ ಅಳಲು ಇದ್ದರೂ ದಿಢೀರನೆ ರಂಗಕ್ಕೆ ಧುಮುಕಲೇಬೇಕಾದ ಅನಿವಾರ್ಯತೆ. ತೇಜಸ್ವಿ ಇಲ್ಲ ಎನ್ನುವ ಸುದ್ದಿ ಗೊತ್ತಾಗುತ್ತಾ ಹೋದಂತೆ ಒಬ್ಬೊಬ್ಬರೇ ನಾನಿದ್ದ ಕಡೆಗೆ ನಡೆದು ಬಂದರು. ಕೆಲ ಕ್ಷಣಗಳಲ್ಲಿ ನೋಡುತ್ತೇನೆ ಅಲ್ಲಿದ್ದವರು ಸಂಪಾದಕೀಯ ವಿಭಾಗದವರು ಮಾತ್ರವಲ್ಲ, ಐ ಟಿ ತಂಡದವರು, ಕ್ಯಾಮೆರಾಮನ್ ಗಳು, ಸಂಕಲನಕಾರರು ಕೊನೆಗೆ ನಮ್ಮ ರಿಸೆಪ್ಶನಿಸ್ಟ್.. ಎಲ್ಲರೂ ಸೇರುತ್ತಲೇ ಇದ್ದರು ಹೌದಲ್ಲಾ ಈ ಎಲ್ಲರೊಳಗೂ ತೇಜಸ್ವಿ ಹರಡಿ ಹೋಗಿದ್ದು ಹೇಗೆ?
ಆ ಒಂದು ಕಾಲದಲ್ಲಿ ನಮ್ಮ ಮನೆಯ ಕಪಾಟಿನ ತುಂಬಾ ಕುವೆಂಪು. ನನ್ನ ಅಣ್ಣ ಗಂಟೆಗಟ್ಟಲೆ ನಡೆದು ಬಸ್ ಚಾರ್ಜ್ ಉಳಿಸಿ ದೊಡ್ಡ ಕ್ಯೂ ನಲ್ಲಿ ನಿಂತು ಕೊಂಡು ತಂದಿದ್ದ ‘ಶ್ರೀ ರಾಮಾಯಣ ದರ್ಶನಂ’ನಿಂದ ಹಿಡಿದು ಒಂದು ಮಹಾ ಕಾವ್ದಂತೆಯೇ ಮತ್ತೆ ಮತ್ತೆ ನಾವು ಓದುತ್ತಿದ್ದ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ.. ಹೀಗೆ. ಒಂದಷ್ಟು ವರ್ಷ ಸರಿದುಹೋಯ್ತು ನೋಡಿದರೆ ನಮಗೆ ಅರಿವಿಲ್ಲದಂತೆ ತೇಜಸ್ವಿ ಅಪ್ಪನ ಪಕ್ಕ ಜಾಗ ಮಾಡಿ ಕುಳಿತುಬಿತ್ತಿದ್ದರು. ತೇಜಸ್ವಿ ನನ್ನೊಳಗೆ ಪ್ರವೇಶಿಸಿದ್ದು ಹೀಗೆ..
ತೇಜಸ್ವಿಯವರನ್ನು ನಾನು ಮೊದಲು ಕಂಡಿದ್ದು ಬಿ ಎ ವಿವೇಕ ರೈ ಅವರ ಮೂಲಕ. ಮಂಗಳ ಗಂಗೋತ್ರಿಯ ಅಂಗಳದಲ್ಲಿ. ಅವರು ಹಮ್ಮಿಕೊಂಡಿದ್ದ ವಿಚಾರ ಸಂಕಿರಣಕ್ಕೆ ತೇಜಸ್ವಿ ತೆರೆ ಎಳೆಯಬೇಕಿತ್ತು. ಆಗ ತಾನೇ ಪದವಿ ಮುಗಿಸಿದ್ದ ನಾವು ತೇಜಸ್ವಿಯವರನ್ನು ನೋಡಿಯೇಬಿಡೋಣ ಎಂದು ರಾತ್ರೋರಾತ್ರಿ ಮಂಗಳೂರಿನ ಬಸ್ ಹತ್ತಿಬಿಟ್ಟಿದ್ದೆವು. ಸಂಕಿರಣ ಮುಗಿಯುತ್ತಾ ಬಂದರೂ ತೇಜಸ್ವಿ ಸುಳಿವಿಲ್ಲ. ಕೈ ಕೊಟ್ಟರು ಎಂದುಕೊಂಡು ಕಟ್ಟಡದ ಹೊರಗೆ ಬಂದರೆ ಆ ಕಲ್ಲು ನೆಲದ ಮೇಲೆ ತೇಜಸ್ವಿ ಆರಾಮವಾಗಿ ಹರಟೆ ಹೊಡೆಯುತ್ತಿದ್ದಾರೆ ಸುತ್ತ ಒಂದು ದೊಡ್ಡ ಹಿಂಡು. ಮಾತು ಮಾತಿಗೂ ಕುಲು ಕುಲು ನಗುತ್ತಾ ಪಕ್ಕದಲ್ಲಿದ್ದವರಿಗೂ ಆ ಸಾಂಕ್ರಾಮಿಕ ರೋಗವನ್ನು ಹಂಚುತ್ತಾ ತೇಜಸ್ವಿ ಕುಳಿತಿದ್ದರು.
ಒಮ್ಮೆ ಹೀಗೇ ಹುಕಿ ಬಂದು ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ‘ಧೋ’ ಎಂದು ಸುರಿಯುವ ಮಳೆಯಲ್ಲಿ ಪಶ್ಚಿಮ ಘಟ್ಟಗಳನ್ನು ಮಣಿಸಿಯೇಬಿಡಬೇಕು ಎಂದು ನಮ್ಮ ತಂಡ ಹೊರಟಿತ್ತು. ಕಡಿದಾದ ತಿರುವುಗಳ, ಮೈ ಜುಂ ಎನಿಸುವ ಚಾರ್ಮಾಡಿ ಘಟ್ಟವನ್ನು ಹಿಂದಿಕ್ಕಿ ಅಬ್ಬ ಎಂದು ಉಸಿರೆಳೆದುಕೊಳ್ಳುತ್ತಾ ಪಕ್ಕಕ್ಕೆ ತಿರುಗಿದರೆ ಅರೆ! ತೇಜಸ್ವಿ. ಮನೆಮಂದಿಯನ್ನೆಲ್ಲ ಒಟ್ಟು ಮಾಡಿಕೊಂಡು ನಮ್ಮಂತೆಯೇ ಅವರೂ ಅದೇ ಘಟ್ಟಕ್ಕೆ ಬಂದು ನಿಂತಿದ್ದಾರೆ. ಕಾಲ ಕೆಳಗೆ ಅಗಾಧವಾಗಿ ಮೈ ಚೆಲ್ಲಿಕೊಂಡಿದ್ದ ಕಾಡನ್ನು ನೋಡುತ್ತಾ.. ತೇಜಸ್ವಿಯವರೊಡನೆ ಮೀನು ಹಿಡಿದು, ಹಂದಿ ಶಿಕಾರಿ ಮಾಡಿ, ಅವರೊಡನೆ ಕ್ಯಾಮೆರಾ ಏರಿಸಿಕೊಂಡು ಹಕ್ಕಿಗಳ ಕ್ಲಿಕ್ಕಿಸಿ, ಬ್ರಶ್ ಹಿಡಿದು ಬಣ್ಣ ಹರಡಿ, ಓಲೆ ಮೇಲೆ ಅಣ್ಣ ಬೇಯಿಸಿ, ಕಂಪ್ಯೂಟರ್ ಮುಂದೆ ಕೂತು ನಾಳೆಗೆ ಒಂದು ತತ್ರಾಂಶ ರೂಪಿಸಲು ಯತ್ನಿಸಿ..ಹೀಗೆ ತೇಜಸ್ವಿ ಮಾಡುತ್ತಿದ್ದ ಯಾವ ಕೆಲಸದಲ್ಲೂ ತಾವು ಹೊರಗೆ ನಿಂತವರಲ್ಲ ಎಂದು ತೇಜಸ್ವಿಯ ಪ್ರತೀ ಓದುಗರಿಗೆ ಅನಿಸುತ್ತಿತ್ತು. ತೇಜಸ್ವಿ ಇಲ್ಲವಾಗಿ ಹೋದಾಗ ಹರಿದಾಡಿದ ರಾಶಿ ರಾಶಿ ಮೆಸೇಜ್ ಗಳು, ಈ ಮೇಲ್ ಗಳು ನನ್ನನ್ನು ಇನ್ನೂ ವಿಸ್ಮಯಕ್ಕೆ ತಳ್ಳಿದೆ. ಹಾಗಾಗಿಯೇ ತೇಜಸ್ವಿ ಇಲ್ಲವಾದ ಆ ದಿನ ಇಡೀ ನಮ್ಮ ಬುಲೆಟಿನ್ ಅನ್ನು ತೇಜಸ್ವಿಗೆ ಮೀಸಲಿಟ್ಟುಬಿಟ್ಟೆ. ತಕ್ಷಣ ಫೋನ್ ಬಂತು ‘ಯಾಕೆ ಇವತ್ತು ಜಗತ್ತಿನಲ್ಲಿ ಇನ್ನೇನೂ ಘಟಿಸಲೇ ಇಲ್ಲವಾ’ ಅಂತ. ನಾನು ಒಂದು ಕ್ಷಣ ಮೌನವಾಗಿದ್ದು ಹೇಳಿದೆ ‘ಇಲ್ಲ ಕನ್ನಡದ ಲೋಕದ ಮಟ್ಟಿಗಂತೂ ಇವತ್ತು ಇನ್ನೇನೂ ಕಾಣಲು ಸಾಧ್ಯವಿಲ್ಲ’.
ತೇಜಸ್ವಿ ನನ್ನೊಳಗೆ ಒಂದು ಅಗಾಧ ನಿಟ್ಟುಸಿರನ್ನು ಬಿಟ್ಟು ಹೋದರು ಈಗಲೂ ಅಷ್ಟೇ ಈಟಿವಿಯ ಬುಲೆಟಿನ್ ಗಳನ್ನ ತಿರುವಿ ಹಾಕುತ್ತಾ ಕುಳಿತರೆ ಕಣ್ಣು ಮಂಜಾಗುತ್ತದೆ ನಮ್ಮ ಮನೆಯ ನೆಂಟನೊಬ್ಬ ಎದ್ದು ಹೋಗಿಬಿಟ್ಟರೇನೋ ಎಂಬಂತೆ. ಇದೇ ನನಗೆ ತೇಜಸ್ವಿಯವರ ಬೆನ್ನು ಬೀಳಲು ಒತ್ತಾಸೆಯಾಯಿತೇನೋ. ಆ ವೇಳೆಗೆ ಪಿ ಮಹಮದ್ ತೇಜಸ್ವಿಯವರ ಕ್ಯಾರಿಕೇಚರ್ ಒಂದನ್ನು ಬರೆದಿದ್ದರು ಬಹುಷಃ ತೇಜಸ್ವಿಯವರ ಎಲ್ಲಾ ‘ಹುಚ್ಚಾಟ’ವನ್ನೂ ಕಟ್ಟಿಕೊಡುವ ಚಿತ್ರ ಅದು.

ಅದನ್ನಿಟ್ಟುಕೊಂಡು ತೇಜಸ್ವಿ ಗ್ರೀಟಿಂಗ್ ಕಾರ್ಡ್, ತೇಜಸ್ವಿ ಚಹಾ ಕಪ್, ಓದುವ ಕೋಣೆಗೆಂದೇ ಟೈಲ್ ಗಳನ್ನೂ ರೂಪಿಸಿದೆವು. ಅದನ್ನು ಬಿಡುಗಡೆ ಮಾಡಲು ಬಂದಿದ್ದ ಜಯಂತ್ ಕಾಯ್ಕಿಣಿ ತೇಜಸ್ವಿ ಏನಾದರೂ ಇದನ್ನು ನೋಡಿದ್ದರೆ ನನಗೆ ಎಂತಾ ಸ್ಥಿತಿ ತಂದ್ಯಲ್ಲಪ್ಪಾ ಎಂದು ಗಹಗಹಿಸಿ ನಗುತ್ತಿದ್ದರು ಎಂದರು.
ತೇಜಸ್ವಿ ಗುಂಗು ನನ್ನನ್ನು ಖಂಡಿತಾ ಬಿಟ್ಟಿಲ್ಲ. ಹಾಗಾಗಿಯೇ ಆ ನಂತರವೂ ಸಮಯ ಚಾನಲ್ ಗಾಗಿ ‘ಹಾಯ್ ತೇಜಸ್ವಿ’ ರೂಪಿಸಿದ್ದಾಯ್ತು. ತೇಜಸ್ವಿಯವರ ಜೊತೆ ಒಡನಾಡಿದವರ ಕಣ್ಣುಗಳ ಮೂಲಕ ತೇಜಸ್ವಿಯವರನ್ನು ಕಟ್ಟಿಕೊಡುವ ಪ್ರಯತ್ನ ಅದು. ತೇಜಸ್ವಿ ಇನ್ ಲವ್, ಸ್ಕೂಟರ್ ಮೆಕ್ಯಾನಿಕ್ ತೇಜಸ್ವಿ, ಹಂಟಿಂಗ್ ವಿಥ್ ತೇಜಸ್ವಿ, ಇದು ತೇಜಸ್ವಿ ಮದುವೆ, ಫಿಶಿಂಗ್ ವಿಥ್ ತೇಜಸ್ವಿ ಹೀಗೆ ತೇಜಸ್ವಿಯ ಮಾಯಾ ಲೋಕವನ್ನು ಬಿಚ್ಚಿಡುತ್ತಾ ಸಾಗಿದೆವು.
ಇಷ್ಟಾದರೂ ತೇಜಸ್ವಿ ನನ್ನೊಳಗೆ ಭೋರ್ಗರೆಯುತ್ತಲೇ ಇದ್ದಾರೆ. ತೇಜಸ್ವಿ ಇಲ್ಲ ಎನ್ನುವ ಸುದ್ದಿಯನ್ನು ನಾವು ಬಿತ್ತರಿಸುತ್ತಿದ್ದಂತೆ ಸವಿತಾ ನಾಗಭೂಷಣ ‘ ಎಲ್ಲೋ ಅಲ್ಲೇ ಇರುವಂತಿದೆ ಕಾಡಿನೊಳಗೆ ಜೀವ/ ಗಿಳಿ ಗೊರವಂಕ ಮರಕುತಿಟಿಗ ಒಯ್ದು ನೀಡಿರೇ ಕಂಬನಿ ಹೂವ’ ಎನ್ನುವ ಮೆಸೇಜ್ ಕಳಿಸಿದರು. ಮೊನ್ನೆ ಪ್ರಯೋಗ ರಂಗ, ಭಾರತ ಯಾತ್ರಾ ಕೇಂದ್ರದ ಕೆ ವಿ ನಾಗರಾಜ ಮೂರ್ತಿ ಫೋನ್ ಮಾಡಿ ತೇಜಸ್ವಿ ನೆನಪಿನ ಉತ್ಸವ ಮಾಡ್ತಾ ಇದ್ದೀವಿ ಕಣೋ ಅಂದ. ಇದೆಲ್ಲಾ ನೆನಪಾಯ್ತು.
 
 

‍ಲೇಖಕರು avadhi

September 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

24 ಪ್ರತಿಕ್ರಿಯೆಗಳು

  1. D.Ravivarma

    ತೇಜಸ್ವಿ ಗುಂಗು ನನ್ನನ್ನು ಖಂಡಿತಾ ಬಿಟ್ಟಿಲ್ಲ. ಹಾಗಾಗಿಯೇ ಆ ನಂತರವೂ ಸಮಯ ಚಾನಲ್ ಗಾಗಿ ‘ಹಾಯ್ ತೇಜಸ್ವಿ’ ರೂಪಿಸಿದ್ದಾಯ್ತು. ತೇಜಸ್ವಿಯವರ ಜೊತೆ ಒಡನಾಡಿದವರ ಕಣ್ಣುಗಳ ಮೂಲಕ ತೇಜಸ್ವಿಯವರನ್ನು ಕಟ್ಟಿಕೊಡುವ ಪ್ರಯತ್ನ ಅದು. ತೇಜಸ್ವಿ ಇನ್ ಲವ್, ಸ್ಕೂಟರ್ ಮೆಕ್ಯಾನಿಕ್ ತೇಜಸ್ವಿ, ಹಂಟಿಂಗ್ ವಿಥ್ ತೇಜಸ್ವಿ, ಇದು ತೇಜಸ್ವಿ ಮದುವೆ, ಫಿಶಿಂಗ್ ವಿಥ್ ತೇಜಸ್ವಿ ಹೀಗೆ ತೇಜಸ್ವಿಯ ಮಾಯಾ ಲೋಕವನ್ನು ಬಿಚ್ಚಿಡುತ್ತಾ ಸಾಗಿದೆವು.
    ಇಷ್ಟಾದರೂ ತೇಜಸ್ವಿ ನನ್ನೊಳಗೆ ಭೋರ್ಗರೆಯುತ್ತಲೇ ಇದ್ದಾರೆ. ತೇಜಸ್ವಿ ಇಲ್ಲ ಎನ್ನುವ ಸುದ್ದಿಯನ್ನು ನಾವು ಬಿತ್ತರಿಸುತ್ತಿದ್ದಂತೆ ಸವಿತಾ ನಾಗಭೂಷಣ ‘ ಎಲ್ಲೋ ಅಲ್ಲೇ ಇರುವಂತಿದೆ ಕಾಡಿನೊಳಗೆ ಜೀವ/ ಗಿಳಿ ಗೊರವಂಕ ಮರಕುತಿಟಿಗ ಒಯ್ದು ನೀಡಿರೇ ಕಂಬನಿ ಹೂವ’ ಎನ್ನುವ ಮೆಸೇಜ್ ಕಳಿಸಿದರು…heart touching sir…kannada odugarannu tejasvi kaadiddastu mattobbarilla…odgara manadalli nirantaravaagi uliyuva kaaduva avara baduku,chintane havyasa,baraha,badukina priiti,ivu chirastaayi nilluttave nimma baraha nanage hosa thrill kottitu…

    ಪ್ರತಿಕ್ರಿಯೆ
  2. shivu K

    ಸರ್,
    ನಿನ್ನೆ ಬೆಳಿಗ್ಗೆ ಪೇಪರಿನಲ್ಲಿ ಓದಿದ್ದೆ. ತುಂಬಾ ಇಷ್ಟವಾಯ್ತು.

    ಪ್ರತಿಕ್ರಿಯೆ
  3. ಸತ್ಯನಾರಾಯಣ

    ಮೋಹನ್ ತುಂಬಾ ಚೆನ್ನಾಗಿ ಬರೆದಿದ್ದೀರಾ.
    ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲವೆಂಬ ನೋವನ್ನು ಮರೆಯಸಿದ್ದೀರಿ. ತೇಜಸ್ವಿ ನನ್ನ ಬದುಕನ್ನು ಎಷ್ಟರ ಮಟ್ಟಿಗೆ ಆವರಿಸಿಕೊಂಡುಬಿಟ್ಟಿದ್ದಾರೆ ಎಂದರೆ, ತೇಜಸ್ವಿ ನೆನಪಾಗದ ಒಂದು ದಿವಾದರೂ ನನ್ನ ಬದುಕಿನಲ್ಲಿ ಇಲ್ಲ. ಇರುವುದು ಬೇಡ!

    ಪ್ರತಿಕ್ರಿಯೆ
  4. Ghanashyam

    Dear Mohan sir,
    Hats off to you for your passion towards Tejaswi.
    Like you, we are also obsessed with his books and his life.
    Thanks for sharing these memories.
    Ghanashyam
    Bahrain

    ಪ್ರತಿಕ್ರಿಯೆ
  5. manjunatha B.R.

    ಸರ್,
    ನಾನು ವಿಜಯ ಕರ್ನಾಟಕದಲ್ಲಿ ನಿಮ್ಮ ಅಂಕಣವನ್ನು ತಪ್ಪದೇ ಓದುತ್ತೇನೆ. ತೇಜಸ್ವಿಯವರ ಕುರಿತ ನೆನ್ನೆಯ ಲೇಖನ ತುಂಬಾ ಇಷ್ಟ ಆಯ್ತು. ಪ್ರಥಮ ಪಿಯುಸಿಯಲ್ಲಿ ನನಗೆ ‘ಕರ್ವಾಲೋ’ ಪಠ್ಯವಾಗಿತ್ತು. ಅದನ್ನು ಓದಿದಾಗ ಅದೊಂದು ಕಾಲ್ಪನಿಕ ಕಥೆ ಇರಬಹುದೆನಿಸಿತ್ತು.
    ಅನೇಕ ಸ್ನೇಹಿತರಿಗೆ ಅವಧಿ ಬ್ಲಾಗ್ ನೋಡಲು, ಓದಲು ಹೇಳುತ್ತಿರುತ್ತೇನೆ. ಅತ್ಯಂತ ಉತ್ತಮ ಲೇಖನಗಳ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರಗಳನ್ನು ನೀಡುವ, ಈ ಇ-ಮ್ಯಾಗಝಿನ್ ನನಗೆ ತುಂಬಾ ಪ್ರಿಯ.

    ಪ್ರತಿಕ್ರಿಯೆ
  6. ಹರಿ

    ಇವೆಲ್ಲದರ ಅರಿವಿದ್ದೇ ಕುವೆಂಪುರವರು ಹೆಸರಿಟ್ಟಿರಬೇಕು….”ಪೂರ್ಣ ಚಂದ್ರ ತೇಜಸ್ವಿ” ಎಂದು.
    ಹೇಗೆ ನಟಸಾರ್ವಭೌಮ ಡಾ!! ರಾಜ್‍ಕುಮಾರ್ ಕನ್ನಡ ಚಿತ್ರಲೋಕದಲ್ಲಿ “ಸೂರ್ಯ”ನಂತೆ ಬೆಳಗುತ್ತಿದ್ದರೂ ಶಂಕರ್‍ ನಾಗ್ “ಚಂದ್ರ”ನಂತೆ ನಮ್ಮೆಲ್ಲರನ್ನೂ ಆವರಿಸಿಕೊಂಡಿದ್ದಾರೋ…
    ಹಾಗೆ ಕನ್ನಡ ಸಾರಸ್ವತ ಲೋಕಕ್ಕೆ ಕುವೆಂಪುರವರು “ಸೂರ್ಯೋದಯ”ವಾದರೆ ತೇಜಸ್ವಿಯವರು “ಪೂರ್ಣಚಂದ್ರ”ರಾಗಿ ಅಜರಾಮರವಾಗಿರುವರು.

    ಪ್ರತಿಕ್ರಿಯೆ
  7. Prabhakar Nimbargi

    I used to adore Tejasvi through his works. I am thrilled to see his personality revealed, piece by piece, by near-ones like you. If he were to be alive today, I am sure he would have commented, “Oh! you are doing my post-mortem.”

    ಪ್ರತಿಕ್ರಿಯೆ
  8. Anonymous

    ನಾನು ತೇಜಸ್ವಿ ಲೋಕದಲ್ಲಿ ಸೇರಿಹೋದೆ ಎಂದರೆ ಯಾರಾದರೂ ನಕ್ಕಾರು. ಯಾಕೆಂದರೆ ತೇಜಸ್ವಿ ಎಂಬ ಜಗತ್ತಿನಲ್ಲಿ ಸೇರಿ ಹೋಗದಿದ್ದವರಾರು?……
    ಹೌದು ಹೌದು ನಾನು G N. Mohan Sir ಲೋಕದಲ್ಲಿ ಸೇರಿ ಹೋದ ಹಾಗೆ….

    ಪ್ರತಿಕ್ರಿಯೆ
  9. Anonymous

    ಎಸ್ ತೇಜಸ್ವಿಯವರ ಬದುಕು ಎಷ್ಟು ಬೇಗ ಮುಗಿತಲ್ಲಾ..? ಮತ್ತೆ ಇಂತಹ ಚಿಂತಕರು ಬರುವರೇ..? ಇದು ನನ್ನ ಕಾಡುವ ಪ್ರಶ್ನೆ, ಸರ್
    ತೇಜಸ್ವಿಯವರು ಎಷ್ಟು ಸರಳ ಜೀವಿ ಅಲ್ವಾ ಅಂತಾ.. ಮತ್ತೆ ಮತ್ತೆ ನನ್ನ ಕಾಡ್ತಾ ಇರುತ್ತೆ, ನನಗ ಚನ್ನಾಗಿ ನೆನಪಿದೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಮತ್ತು ಆದಿಮ (ಕೋಲಾರ)ದಲ್ಲಿ ನೋಡಿದ ಕವಾ೵ಲೋ ನಾಟಕದಲ್ಲಿ ತೇಜಸ್ವಿಯವರು ಆಗಾಗ ಎಲ್ಲರಿಗೂ ಪರಿಸರದ ಬಗ್ಗೆ ಬೋದನೆ ಮಾಡುವದನ್ನು ಕಂಡು ನಾನು ಪರಿಸರದಲ್ಲೆ ತೇಲಿದ್ದೆ ಮತ್ತೆ ಆ ದಿನಗಳು ನೆನಪಾದವು ಸರ್,

    ಪ್ರತಿಕ್ರಿಯೆ
  10. SVKASHYAP

    ತೇಜಸ್ವಿ ನಿಜಕ್ಕೂ ಒಂದು ಅದ್ಭುತ ಪ್ರಪಂಚ … ಅದಕ್ಕೆ ಜಿ.ಎನ್. ಸರ್ ಬಾಗಿಲು. … ಚಂದದ ಬರಹ .

    ಪ್ರತಿಕ್ರಿಯೆ
  11. lakshmikanth itnal

    ಕರ್ವಾಲೋ ಮತ್ತು ಅಣ್ಣನ ನೆನಪು, ಮತ್ತೆ ಲಂಕೇಶ ಪತ್ರಿಕೆಗಳಿಂದ ನನಗೆ ಪರಿಚಿತ ತೇಜಸ್ವಿಯವರಿಗೆ ನನ್ನ ನಮನಗಳು. ಅವರದು ಹೃದಯದ ಭಾಷೆ. ವಂದನೆಗಳು ಸರ್

    ಪ್ರತಿಕ್ರಿಯೆ
  12. ಸುಧಾ ಚಿದಾನಂದಗೌಡ

    ಮೂಡಿಗೆರೆಯ ಮಾಂತ್ರಿಕ ಹರಿದಾಡಿವರು ನೆನಪುಗಳೊಳಗೆ
    ವಿದಾಯವಲ್ಲ, ಕಂಬನಿಯೊಂದಿಗೆ ಮತ್ತೆ ಸಿಗುವ ಗಳಿಗೆ
    ಮತ್ತಮತ್ತೆ ಸಿಗುವ ಖಗಮೃಗಪಿಕಶುಕಗಳ ಸಂದೇಶದಲಿ
    ಎಲೆಹೂವುಓತಿಕ್ಯಾತಗಳ ನೆನಪುಗಳಿಗೆ
    ಕನ್ನಡಿಯ ಹೊಳಪು—
    ಎಲ್ಲೋ ಹೋದರು ತೇಜಸ್ವಿ…
    ತಿರುಗಿಬಂದು ನಮ್ಮ ನಡುವೆಯೇ ಹೀಗೆ..
    ಹೀಗೆಯೇ ಕೂರಲು..!

    ಪ್ರತಿಕ್ರಿಯೆ
  13. ಆರತಿ ಘಟಿಕಾರ್

    ಎಸ್ತು ಚೆಂದದ ಆಪ್ತ ಬರಹ ಸರ್ . ತೇಜಸ್ವಿ ಅವರೇ ಸ್ವತಃ ಬಂದು ನಿಮ್ಮ ಬರಹದಲ್ಲಿ ತಮ್ಮ ಮಾಂತ್ರಿಕ ಛಾಪು ಮೂಡಿಸಿದ್ದಾರೆ . ಅವರ ವ್ಯ್ಕಕ್ತಿತ್ವ , ಅವರ ನಿಲವು , ಬದುಕು …ನಿಜಕ್ಕೂ ಎದೆಯಲ್ಲಿ ಕಾಪಿಟ್ಟುಕೊಳ್ಳುವ ನೆನಪುಗಳು , ಸದಾ ಭೋರ್ಗರೆಯುತ್ತಲೆ ಇರುವ ಜಲಧಾರೆ . ನನ್ನ ನಮನ ಗಳು ಅಂತ ಮಹಾನ ಚೇತನಕ್ಕೆ .

    ಪ್ರತಿಕ್ರಿಯೆ
  14. D.Ravivarma

    ಇಷ್ಟಾದರೂ ತೇಜಸ್ವಿ ನನ್ನೊಳಗೆ ಭೋರ್ಗರೆಯುತ್ತಲೇ ಇದ್ದಾರೆ. ತೇಜಸ್ವಿ ಇಲ್ಲ ಎನ್ನುವ ಸುದ್ದಿಯನ್ನು ನಾವು ಬಿತ್ತರಿಸುತ್ತಿದ್ದಂತೆ ಸವಿತಾ ನಾಗಭೂಷಣ ‘ ಎಲ್ಲೋ ಅಲ್ಲೇ ಇರುವಂತಿದೆ ಕಾಡಿನೊಳಗೆ ಜೀವ/ ಗಿಳಿ ಗೊರವಂಕ ಮರಕುತಿಟಿಗ ಒಯ್ದು ನೀಡಿರೇ ಕಂಬನಿ ಹೂವ’ ಎನ್ನುವ ಮೆಸೇಜ್ ಕಳಿಸಿದರು. ಮೊನ್ನೆ ಪ್ರಯೋಗ ರಂಗ, ಭಾರತ ಯಾತ್ರಾ ಕೇಂದ್ರದ ಕೆ ವಿ ನಾಗರಾಜ ಮೂರ್ತಿ ಫೋನ್ ಮಾಡಿ ತೇಜಸ್ವಿ ನೆನಪಿನ ಉತ್ಸವ ಮಾಡ್ತಾ ಇದ್ದೀವಿ ಕಣೋ ಅಂದ. ಇದೆಲ್ಲಾ ನೆನಪಾಯ್ತು.
    tejaswi bagge nimma olamanassina tudita tumbaa istavaaytu..tejaswi nantara avara bagge banda ella chintane,novuodalaada baraha ondistu sangrahisidde m,p,prakash sir omme sikkaga adellavannu prakatisalu kelidde…nimmolagina aa tudita aa samvedane,barahada bichhu manassu nanage tumbaa istavaagtide…tejaswi ii naadu kanda obba daitya pratibhe…matte matte tejaswi kaadutiddare.kaaduttale irittare…

    ಪ್ರತಿಕ್ರಿಯೆ
  15. Anonymous

    “ಮಾತು ಮಾತಿಗೂ ಕುಲು ಕುಲು ನಗುತ್ತಾ ಪಕ್ಕದಲ್ಲಿದ್ದವರಿಗೂ ಆ ಸಾಂಕ್ರಾಮಿಕ ರೋಗವನ್ನು ಹಂಚುತ್ತಾ ತೇಜಸ್ವಿ ಕುಳಿತಿದ್ದರು.”
    ಇಂಥ ತೇಜಸ್ವಿ ಎಂಬ ಜಗತ್ತಿನಲ್ಲಿ ಸೇರಿ ಹೋಗದಿದ್ದವರಾರು ?
    Wah…

    ಪ್ರತಿಕ್ರಿಯೆ
  16. ಚಂದ್ರಪ್ರಭಾ ಬಿ.

    ತೇಜಸ್ವಿಯವರೇ ಎದ್ದು ನಡೆದು ಬಂದಂತೆ, ಮತ್ತೊಮ್ಮೆ ಒಟ್ಟಿಗೆ ಮಾತಾಡಿದಂತೆ ಭಾಸವಾಯ್ತು. ತುಂಬಾ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: