ತೇಜಸ್ವಿ ಇವತ್ತಿಗೂ ಯಾಕೆ ಮತ್ತೆ ಮತ್ತೆ ನೆನಪಾಗುತ್ತಾರೆ ಅಂದರೆ,,,

ತೇಜಸ್ವಿ ಮಾತುಗಳು

ಅಪಾರ

ಕೆಲ ಕಾಲದ ಹಿಂದೆ ಚಿತ್ರಕಲಾ ಪರಿಷತ್‌ನಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಫೋಟೊ ಎಕ್ಸಿಬಿಷನ್‌ ನಡೆದಿತ್ತು. ”ಹಾರಾಡುವ ಹಾಡುಗಳು” ಎಂಬುದು ಅದರ ಶೀರ್ಷಿಕೆ. ಜತೆಯಲ್ಲೇ ತೇಜಸ್ವಿಯವರೊಂದಿಗೆ ಒಂದು ಅಪೂರ್ವ ಸಂವಾದ ಕಾರ್ಯಕ್ರಮವೂ ನಡೆಯಿತು. ಜಯಂತ ಕಾಯ್ಕಿಣಿ ಅದನ್ನು ನಡೆಸಿಕೊಟ್ಟರು. ನಮ್ಮ ಕಾಲದ ಅನೇಕ ಪ್ರಶ್ನೆಗಳನ್ನು, ‘ಧರ್ಮಸೂಕ್ಷ್ಮ’ಗಳನ್ನು ತೇಜಸ್ವಿ ಅಂದು ತಮ್ಮ ಎಂದಿನ ಉಡಾಫೆಯ ಸರಳ ಶೈಲಿಯಲ್ಲಿ ಬಿಡಿಸಿ ಹೇಳಿದರು. ಅಂದು ತೇಜಸ್ವಿ ಆಡಿದ ಮಾತುಗಳನ್ನು ಇಲ್ಲಿ ಯಥಾವತ್ತಾಗಿ (ಹೆಚ್ಚು ಕಡಿಮೆ) ಕೊಟ್ಟಿರುವೆ. ಅವರ ಎಲ್ಲಾ ತಮಾಷೆಗಳೊಂದಿಗೆ. ಈ ಅಮೂಲ್ಯ ಕ್ಷಣಗಳನ್ನು ವಿಡಿಯೋ ಕ್ಯಾಮೆರಾದಲ್ಲಿ ಸೆರೆಹಿಡಿದ ಗೆಳೆಯ ಡಿ ಜಿ ಮಲ್ಲಿಕಾರ್ಜುನ್ಗೆ ಧನ್ಯವಾದಗಳು. ಆ ವಿಡಿಯೋದಿಂದಾಗಿಯೇ ಇದು ಸಾಧ್ಯವಾಗಿದೆ.
p.-tejaswi

ಚಿತ್ರಕೃಪೆ : ಪ್ರಕಾಶ್ ಶೆಟ್ಟಿ

ಪಕ್ಷಿಗಳೊಂದಿಗಿನ ನಂಟು
ಪ್ರಶ್ನೆ: ಪಕ್ಷಿ ಛಾಯಾಗ್ರಹಣ ಅಂತಂದ್ರೆ ಸಂಪೂರ್ಣವಾಗಿ ಪರಿಸರದಲ್ಲಿ ಕಳೆದುಹೋಗ್‌ಬೇಕು, ಕೈಲಿರೋ ಕೆಮೆರಾನೂ ಮರೆತುಹೋಗಬೇಕು ಅಂತ ನೀವೊಂದ್ಸಲ ಹೇಳಿದ್ರಿ. ಪಕ್ಷಿಗಳ ಜತೆಗಿನ ನಿಮ್ಮ ನಂಟು- ದಯವಿಟ್ಟು ಅದರ ಬಗ್ಗೆ ಸ್ಪಲ್ಪ ಹೇಳಿ?
ತೇಜಸ್ವಿ: ನೀವು ಪರಿಸರದಲ್ಲಿ ಲೀನ ಆಗೋದನ್ನ ಕಲಿತ್ರೆ ಅಂಥ ಛಾಯಾಚಿತ್ರಗಳನ್ನು ತೆಗೀಬಹುದು ಅಂತ ಹಿಂದೆ ಒಮ್ಮೆ ಹೇಳಿದ್ದೆ. ಆದರೆ ಈಗ ಮತ್ತೆ ನನ್ನ ನಿಲುವು ಬದಲಾಯಿಸ್ಕೊಂಡಿದೀನಿ. ಯಾಕೆ ಅಂದ್ರೆ ಲೀನವಾದ್ರೂ ಬರೋದಿಲ್ಲ ಕಣ್ರೀ…ಯು ನೀಡ್‌ ಸೂಪರ್ ಹ್ಯೂಮನ್‌ ಪೇಷನ್ಸ್. ಬೆಳಗ್ಗಿಂದ ಸಾಯಂಕಾಲದವರೆಗೆ ಕಷ್ಟಪಟ್ಟು, ಏನೂ ಸಾಧನೆ ಮಾಡದೆ ಮತ್ತೆ ಅದೇ ನೆಮ್ಮದಿಯಲ್ಲಿ ಮನೆಗೆ ಬಂದು ನಿದ್ದೆ ಮಾಡೋದಿಕ್ಕೆ ತಯಾರಿದ್ರೆ ಮಾತ್ರ ಆಗುತ್ತೆ…..ಪಕ್ಷಿಗಳ ಬಗ್ಗೆ ದ್ವೇಷ ಬರೋದಿಕ್ಕೆ ಶುರುವಾಗತ್ತೆ ಕಣ್ರೀ….ಅಷ್ಟು ತಲೆನೋವಿನ ಕೆಲಸ. ಹಿಂಗ್‌ ಹೋಗಿ ಛಕ್ಕಂತ ಹಕ್ಕಿ ಫೋಟೊ ತಕ್ಕೊಂಡು ಬಂದ್‌ಬಿಡಬಹುದು ಅಂತ ತಿಳ್ಕೊಂಡಿದ್ರೆ ತಪ್ಪು.
ನಮ್ಮಲ್ಲಿ ಏನಾಗುತ್ತೆ ಅಂದ್ರೆ ಒಂದು ಕಲಾಕೃತಿ ನಿರ್ಮಾಣ ಮಾಡೋದಿಕ್ಕೆ ಪ್ರತಿಭೆ, ಸ್ಫೂರ್ತಿ ಇವೆಲ್ಲಾ ಬೇಕಾಗತ್ತೆ ಅಂತ ತಿಳ್ಕೊಂಡಿದೀವಿ. ಈ ರೀತಿ ಸ್ಫೂರ್ತಿ, ಪ್ರತಿಭೆ ಇವುಗಳ ಮೇಲೆ ನಾವು ಅನಗತ್ಯವಾದ ಮತ್ತು ವಿಪರೀತವಾದ ತೂಕ ಹೇರ್ತಾ ಇದೀವಿ ಅಂತ ಅನಿಸುತ್ತೆ. ಯಾಕೆ ಅಂದ್ರೆ ನಾನು ತಿಳ್ದಂಗೆ ಪ್ರತಿಭೆ ಬೇಕು, ಸ್ಫೂರ್ತಿ ಬೇಕು ಎಲ್ಲಾ ಸರಿ, ಆದ್ರೆ ಇವೆಲ್ಲಾ ಒಂದು ಪಾಯಿಂಟ್‌ ಫೈವ್‌ ಪರಸೆಂಟ್‌ ಸೈತ ಇರೋದಿಲ್ಲ. ಒಂದು ಕಲಾಕೃತಿ ಹಿಂದೆ ಅತ್ಯಂತ ಕಷ್ಟಪಟ್ಟು ತಾಳ್ಮೆಯಿಂದ ಮಾಡಿರೋ ಕೆಲಸ 99.5 ಪರಸೆಂಟ್ ಇರುತ್ತೆ. ಇನ್ನೊಂದು ಪಾಯಿಂಟ್‌ಫೈವ್‌ ಪರಸೆಂಟ್‌ ಅವನಿಗೆ ಸ್ಫೂರ್ತಿನೊ ಅಥವಾ ಇನ್ನೊಂದೋ ಸಹಾಯ ಮಾಡಿರುತ್ತಷ್ಟೇ ಹೊರತು…
ಒಬ್ಬ ಮೇದರವನು ಹೇಗೆ ಕಷ್ಟಪಟ್ಟು ಬುಟ್ಟಿ ಹೆಣಿತಾನೊ, ಅಷ್ಟೇ ಕಷ್ಟಪಟ್ಟು ಕತೆ, ಕಾದಂಬರಿ, ಕವನ ಮತ್ತು ಹಕ್ಕಿಗಳ ಛಾಯಾಚಿತ್ರ ಎಲ್ಲವೂ. ಇವೆಲ್ಲಾ ಕಷ್ಟಪಟ್ಟು ಬಂದಿರತಕ್ಕಂಥವೇ ಹೊರತು, ಸ್ವಯಂಸ್ಫೂರ್ತಿಯಿಂದ ಇದ್ದಕ್ಕಿದ್ದಂತೆ ಒಂದಿವಸ ನಾವು ಸಾಧನೆ ಮಾಡಿಬಿಟ್ವು ಅಂತ ಹೇಳದು ಸುಳ್ಳು ಅಂತ ಅನಿಸುತ್ತದೆ ನಂಗೆ. ಯಾಕೆಂದ್ರೆ ನಾನಿಲ್ಲಿವರೆಗೂ ಬರೆದಿರೋ ಕಲಾಕೃತಿಗಳು, ಕ್ರಿಯೇಟಿವ್ ಆರ್ಟ್‌ ಎಲ್ಲಾ ಬಹುಶಃ ಆ ಮಾದರಿದೇನೆ. ಕಷ್ಟಪಟ್ಟು ಕೆಲಸ ಮಾಡಬೇಕು, ಚೆನ್ನಾಗಿಲ್ಲದಿದ್ರೆ ತೆಗೆದು ಕಸದ ಬುಟ್ಟಿಗೆ ಹಾಕಬೇಕು. ಶ್ರೇಷ್ಟ ಕಲಾಕೃತಿಗಳನ್ನ ನೋಡ್ದಾಗ ಯಾವ ಕಾರಣಕ್ಕಾಗಿ ಇವು ಶ್ರೇಷ್ಟ ಅಂತ ನನಗನ್ನಿಸುತ್ತಿದೆ ಅಂತ ಅನ್ನೋದ್ನ ಅರ್ಥಮಾಡಿಕೋಬೇಕು. ನಮ್ಮದನ್ನ ಅಷ್ಟು ಶ್ರೇಷ್ಟ ಮಾಡೋದು ಹೇಗೆ ಅಂತ ಕಷ್ಟಪಟ್ಟು ಯೋಚ್ನೆ ಮಾಡ್ಬೇಕು. ಮೂರು ನಾಲ್ಕು ಐದು ಮಾಡಲ್‌ ಮಾಡಿ ತುಂಬಾ ಕ್ರಿಟಿಕಲ್‌ ಆಗಿ ನೋಡಬೇಕು. ಕಸದ ಬುಟ್ಟಿ ರೆಡಿ ಇಟ್ಕಂಡು ಕುಂದು ಕೊರತೆ ಇದೆ ಅನ್ಸಿದ್ರೆ ಬಿಸಾಕಬೇಕು.
ಹೊಗಳುಭಟರನ್ನು ಕರ್ಕೊಂಡ್ಹೋಗಿ ಹೆಂಗಿದಿಯೋ ಅಂತ ಕೇಳೋದ್ರಿಂದ ಪ್ರಯೋಜನವಿಲ್ಲ. ಗ್ಲೋಬಲ್‌ ಸ್ಟಾಂಡರ್ಡ್‌ಗೆ ಕಂಪೇರ್ ಮಾಡಿ ನಮ್ಮದು ಸೆಕೆಂಡ್‌ ರೇಟ್‌ ಆದ್ರು ಪರ್ವಾಗಿಲ್ಲ. ಇಲ್ಲಿ ನಮ್ಮ ಚೇಲಾಗಳನ್ನು ಕರ್ಕೊಂಡ್ಹೋಗಿ ಫಸ್ಟ್‌ರೇಟ್ ಆಗೋದ್ರಿಂದ ಪ್ರಯೋಜನ ಇಲ್ಲ. ಪ್ರಯೋಜನ ಇಲ್ಲ ಅಂದ್ರೆ, ನೀವು ಜೀವಮಾನದಲ್ಲಿ ಒಂದು ಅದ್ಭುತ ಕಲಾಕೃತಿ ಎದುರು ನಿಂತಾಗ ಹೊಗಳಿದೋರ್ನೆಲ್ಲ ಹಿಡ್ಕಂಡು ಒದೀಬೇಕು ಅನ್ನಿಸುತ್ತೆ. ಎಂಥ ಕೆಲಸ ಮಾಡಿ ದಾರಿತಪ್ಪಿಸಿಬಿಟ್ರು ನೋಡು ಅಂತ. ಬಯ್ಯೋಕ್ಕಿಂತ ಸುಲಭವಾಗಿ ಹೊಗಳಿ ಒಬ್ಬನ್ನ ಹಾಳುಮಾಡಾಕಿ ಬಿಡಬಹುದು. ಯು ಹ್ಯಾವ್‌ ಟು ಬಿ ಎಕ್ಸ್‌ಟ್ರೀಮ್‌ಲಿ ಕ್ರಿಟಿಕಲ್‌.
ಸ್ಫೂರ್ತಿ, ಏಕಾಗ್ರತೆ, ತನ್ಮಯತೆ ಇವೆಲ್ಲಾ ಅಗತ್ಯ ಇದೆ. ಅವುಗಳಿಂದ ಪ್ರಯೋಜನಾನೇ ಇಲ್ಲ, ಇದು ಕತ್ತೆ ಕೆಲಸಾನೇ ಹೆಚ್ಚು ಅಂತ ಹೇಳ್ತಾ ಇರೋದಲ್ಲ. ಆದ್ರೆ ಅವುಗಳಿಗೆ ಅನಗತ್ಯ ಪ್ರಾಧಾನ್ಯತೆ ಕೊಟ್ರೆ… ನಮ್ಮ ಯಂಗ್‌ಸ್ಟರ್ ಗಳೆಲ್ಲಾ ಮೈಗಳ್ಳರು, ಎಲ್ಲೋ ಒಂದ್‌ ಒಳದಾರಿ ಇದೆ, ಅದ್ಭುತಗಳನ್ನ ಸಾಧಿಸೋಕೆ ಅಂತ ಕೆಲಸ ಮಾಡದನ್ನ ನಿಲ್ಲಿಸಿಬಿಟ್ಟು ಕಾಲ್ದಾರಿ ಹುಡುಕ್ತಾ ಓಡಾಡ್ತಾರೆ. ಅದ್ರಿಂದ ನಾನು ಈ ವಿಷಯ ಹೇಳ್ತಾ ಇರೋದು.
‘ಧರ್ಮ’ಸೂಕ್ಷ್ಮಗಳು
ಪ್ರಶ್ನೆ: ಪ್ರತಿಯೊಬ್ಬರೂ ತಮ್ಮತಮ್ಮ ಜಾತಿ, ತಮ್ಮ ತಮ್ಮ ಧರ್ಮವೇ ವೈಜ್ಞಾನಿಕವಾಗಿದೆ ಎಂದು ಹೇಳುವ ಹೊಸ ರೋಗ ಶುರುವಾಗಿದೆಯಲ್ಲ? ಅದಕ್ಕೆ ಮದ್ದೇನಾದರೂ ಇದೆಯೆ?
ಮದ್ದು ಗಿದ್ದು ಏನೂ ಇಲ್ಲ. ವಾಸ್ತವವಾಗಿ ಜಾಗತಿಕವಾಗಿ ಎಲ್ಲಾ ಧರ್ಮಗಳಿಗೂ ಬಹಳ ದೊಡ್ಡ ಚಾಲೆಂಜಾಗಿರೋದು ಮಾಡ್ರನ್‌ ಸಿವಿಲೈಜೇಷನ್. ದೆ ಆರ್ ಬಿಟ್ಟರ್ ಲಿ ಫೇಸಿಂಗ್‌ ದ ಚಾಲೆಂಜ್‌. ಯಾಕೆ ಅಂದ್ರೆ ಧರ್ಮಗಳಲ್ಲಿ ಎರಡು ಅಂಶಗಳಿರೋದನ್ನ ನೋಡ್ತಿವಿ ನಾವು. ಒಂದು ಅದರ ಆಧ್ಯಾತ್ಮಿಕ ಅಂಶ. ಇನ್ನೊಂದು ಅದರ ಆಚಾರದ ಅಂಶ. ಆಚಾರ ಅಂದ್ರೆ ಜನಿವಾರ ಕಟ್ಕೋಬೇಕು, ಗಂಡ ಸತ್ತೋಳ ತಲೆ ಬೋಳಿಸ್ ಬೇಕು, ಬುರ್ಖಾ ಹಾಕ್ಕೊಂಡ್‌ ಓಡಾಡ್ ಬೇಕು, ದನದ ಮಾಂಸ ತಿನ್ನಬಾರದು, ಅಲ್ಲಾಹು ಅಕ್ಬರ್ ಅಂತ ಆರು ಸಲ ಕೂಗ್ಬೇಕು- ಇವೆಲ್ಲಾ ಆಚಾರದ ಅಂಶಗಳು. ಆಚಾರದ ಅಂಶಗಳು ಯಾಕೆ ಬರ್ತವೆ ಅಂದ್ರೆ ಒಂದು ಕಾಲದಲ್ಲಿ ಧರ್ಮಗಳು ಆಯಾ ಕಾಲದ ರಾಜಕೀಯದ ಧರ್ಮವೂ ಆಗಿರುತ್ತಿತ್ತು. ಅವರಿಗೆ ಒಂದು ಸಾಮಾಜಿಕ ನೀತಿ ಸಂಹಿತೆ ಕೊಡೊ ಜವಾಬ್ದಾರಿನೂ -ನಮ್ಮ ಸಿವಿಲ್‌ ಕೋಡ್‌ ಕ್ರಿಮಿನಲ್‌ ಕೋಡ್‌ ಇದೆಯಲ್ಲಾ ಈ ರೆಸ್ಪಾನ್ಸಿಬಿಲಿಟಿನೂ- ಧರ್ಮಕ್ಕೆ ಬೀಳೋದು. ಆದ್ದರಿಂದಲೇ ಈ ಆಚಾರ ವಿಭಾಗ ಎಲ್ಲಾ ಧರ್ಮಗಳಲ್ಲೂ ಇದಾವೆ. ಯಾವ ಮಟ್ಟಿಗೆ ಇದಾವೆ ಅಂದ್ರೆ ಅದೇ ಧರ್ಮ ಇನ್ಯಾವುದೂ ಅಲ್ಲ ಅನ್ನೋ ಲೆವಲ್‌ಗೋಗಿದಾವೆ ಅವು. ಎಲ್ಲೆಲ್ಲೂ ಮಠಗಳು, ಮುಲ್ಲಾಗಳು, ಬುರ್ಖಾ ಹಾಕ್ಕೊಂಡ್ ಓಡಾಡ್ದಿರೋ ಹೆಂಗಸಿನ ಮುಖಕ್ಕೆ ಆಸಿಡ್ ಹಾಕಿ ಅಂತ ಹೇಳೋದು, ಕುಂಕುಮ ಹಾಕ್ಕಂಡ್‌ ಓಡಾಡ್ದಿರೋ ಹೆಂಗಸಿಗೆ ತೊಂದ್ರೆ ಕೊಡಿ ಅಂತ ಹೇಳೋದು. ಆದರೆ ಧರ್ಮದ ಆಧ್ಯಾತ್ಮಿಕ ಅಂಶಕ್ಕೂ ಆಚಾರದ ಅಂಶಕ್ಕೂ ಯಾವುದೇ ಸಂಬಂಧವಿಲ್ಲ ಅನ್ನೋದ್ನ ಆಧುನಿಕ ನಾಗರಿಕತೆ ನಿಧಾನವಾಗಿ ನಮಗೆ ತೋರಿಸಿಕೊಡ್ತಾ ಇದೆ. ನಾವು ಹಿಂದುತ್ವ, ರಾಮಜನ್ಮಭೂಮಿ ಎಲ್ಲಾದ್ರಲ್ಲೂ ಬಹಳ ಶ್ರದ್ದೆಯಿಂದ ನಟಿಸಿದರೂನೂ ಬಹಳ ಆಳದಲ್ಲಿ ಬೇರೆ ಬೇರೆ ತೀವ್ರತೆಯಲ್ಲಿ ನಮ್ಮೆಲ್ಲರಿಗೂನೂ ಆ ರೀತಿಯ ಧರ್ಮನಿಷ್ಠೆ ಕಡಿಮೆಯಾಗ್ತಾ ಇದೆ. ಇಟ್‌ ಈಸ್‌ ಎ ಫ್ಯಾಕ್ಟ್‌. ಎಷ್ಟೇ ಇವರು ಕರೇ ಪಂಚೆ ಉಟ್ಕೊಳ್ಳಲಿ, ಕೆಂಪು ಪಂಚೆ ಉಟ್ಕೊಳ್ಳಲಿ ಏನೇ ಮಾಡ್ಕೊಂಡು ಯಾವ್ಯಾವ ಅಯ್ಯಪ್ಪ ಅಥವಾ ತಿರುಪತಿ ಎಲ್ಲೆಲ್ಲಿಗೆ ಹೋಗಿ ತಿಪ್ಪರಲಾಗ ಹೊಡದು ಏನೇ ಮಾಡಿದ್ರೂ ಆಧುನಿಕ ನಾಗರಿಕತೆ ನಮ್ಮ ಧರ್ಮಶ್ರದ್ಧೆಯನ್ನ ಕಡಿಮೆ ಮಾಡ್ತಾ ಇದೆ.
ಬಿಕಾಸ್ ಇಟೀಸ್‌ ಆಫರಿಂಗ್‌ ಆಲ್ಟರ್ನೇಟಿವ್ಸ್. ಈ ಆಚಾರದ ಅಂಶಗಳಿಗೆ ಬದಲಾಗಿ ಕಾನ್ಸಿಟಿಟ್ಯೂಷನ್ನು, ಫಂಡಮೆಂಟಲ್‌ ರೈಟ್ಸ್ ಇವೆಲ್ಲಾ ಬರ್ತಾ ಇವೆ. ದೆ ಆರ್ ಪ್ಲೇಯಿಂಗ್ ಮೇಜರ್ ರೋಲ್‌ ದ್ಯಾನ್‌ ದ ಕೋಡ್‌ ಆಫ್ ಕಂಡಕ್ಟ್ ಪ್ರಿಸ್ಕ್ರೈಬ್ಡ್‌ ಬೈ ದೀಸ್ ರಿಲಿಜನ್ಸ್. ಏನಾಗುತ್ತೀಗ…. ನಮ್ಮ ಮಠಗಳು ಮುಲ್ಲಾಗಳು ಇವರಿಗೆಲ್ಲಾ ಎಲ್ಲಿವರೆಗೆ ಆಚಾರನಿಷ್ಠೆ ಇಟ್ಕೊಂಡಿರ್ತೀರೋ ಅಲ್ಲಿವರೆಗೇ ಊಟ. ನಂದೇನಿದ್ದರೂ ದೇವರ ಹತ್ರ ಡೈರೆಕ್ಟ್‌ ಸಂಬಂಧ ಕಣಯ್ಯಾ, ನಿಂಗೂ ನಂಗೂ ಸಂಬಂಧ ಇಲ್ಲ ಅಂತ ಅಂದು ಬಿಟ್ರೆ, ಇವರಿಗೆ ಊಟ ನಿಂತೋಗ್ತದೆ. ಇದು ಹಿಂದೂ ಧರ್ಮ ಮಾತ್ರ ಫೇಸ್‌ ಮಾಡ್ತಾ ಇರೋ ತೊಂದರೆಯಲ್ಲ, ಥ್ರೋ ಔಟ್ ದ ವರ್ಲ್ಡ್. ಯಾಕೆ ಅಂತ ಹೇಳಿದ್ರೆ ಕಾನ್ಸಿಟಿಟ್ಯೂಷನ್ನನ್ನ ನಮಗೆ ಬದಲಿಯಾಗಿ ಕೊಟ್ಟು ಆಚಾರ ಸಂಹಿತೆ ಬಗ್ಗೆ ನಮಗಿರೋ ಶ್ರದ್ದೆನಾ ಹಾಳು ಮಾಡದರ ಜತೆಗೇನೆ ಆಧುನಿಕ ನಾಗರಿಕತೆಯ ಹೊಸ ಹೊಸ ಆವಿಷ್ಕಾರಗಳಿದಾವ್‌ ನೋಡಿ – ಪ್ರೆಷರ್ ಕುಕರ್, ಲೂನಾ ಮೊಪೆಡ್‌, ಅವು ಇವು. ನ ಸ್ತ್ರೀ ಸ್ವಾತಂತ್ರ್ಯ ನರ್ಹತಿ ಅಂತ ಮನು ಹೇಳಿದ್ರೆ, ಅವಳ ಕೈಗೊಂದು ಪ್ರೆಷರ್ ಕುಕರ್, ಲೂನಾ ಕೊಟ್ರೆ ಪ್ರೆಷರ್ ಕುಕರಲ್ಲಿ ಐದು ನಿಮಿಷಕ್ಕೆ ಅನ್ನ ಮಾಡಿಟ್ಟು ಲೂನಾ ಸ್ಟಾರ್ಟ್‌ ಮಾಡ್ಕೊಂಡು ಹೋದಳು ಮನೆ ಬಿಟ್ಟು. ಸೀ… ತಮಾಷೆಯಾಗಿ ನಾನು ಹೇಳ್ತಾ ಇದ್ರೂನೂ ಈ ಆಧುನಿಕ ಆವಿಷ್ಕಾರಗಳು ಬಲವಾಗಿ ತೊಂದ್ರೆ ಕೊಡ್ತಾ ಇದಾವೆ- ಧರ್ಮಶ್ರದ್ಧೆಗೆ, ಆಚಾರಶ್ರದ್ಧೆಗೆ. ಪೂಜೆ ಮಾಡ್ಬೇಡಿ ಅಂತಾಗಲಿ, ಮನುಷ್ಯನಿಗೆ ಆತ್ಮ ಇದೆಯೋ ಇಲ್ವೋ ಅಂತಾನೇ ಆಗಲಿ, ದೇವರಿದಾನೊ ಇಲ್ವೋ ಅಂತಾನೆ ಆಗಲಿ, ಈ ಕ್ವೆಷ್ಟ್‌ ಫಾರ್ ಟ್ರೂಥ್‌ಗೂ ಇದಕ್ಕೂ ಏನೂ ಸಂಬಂಧಾ ಇಲ್ಲ. ಪಂಚಾಂಗದಲ್ಲಿ ಬರಕೊಂಡು ದಿವಸಾ ಬೆಳಗಾಗೆದ್ದು ಇಂಥಿಂಥದೆಲ್ಲಾ ಮಾಡು ಅಂತ ಹೇಳಿದಾರಲ್ಲ, ಅದರ ಬಗ್ಗೆ ನಮಗೆಲ್ಲಾ ಆಸ್ಥೆ, ಶ್ರದ್ಧೆ ಕಡಿಮೆಯಾಗ್ತಿವೆ.
ಸೊ ವೆನ್ ದೆ ಹ್ಯಾವ್ ನಥಿಂಗ್‌ ಟು ಆಫರ್, ಕಳ್ಳ ಜಗದ್ಗುರುಗಳಿಗೆ ಮುಲ್ಲಾಗಳಿಗೆ ನಮ್ಮನ್ನ ಇನ್‌ಸ್ಪೈರ್ ಮಾಡಲಿಕ್ ಸಾಧ್ಯನಾ ಯಾವಾತ್ತಾದ್ರೂ? ಏನ್ ಮಾಡ್ಬೇಕಾಗುತ್ತವರು? ದೆ ಹ್ಯಾವ್ ನೋ ಅದರ್ ಆಲ್ಟರ್ನೇಟಿವ್ ಬಟ್ ಟು ಇನ್ವೋಕ್ ಫಂಡಮೇಂಟಲಿಸಂ ಇನ್ ಯುವರ್ ಹಾರ್ಟ್. ಹೇಟ್‌ ದ ಅದರ್ ರಿಲಿಜನ್. ಬೇರೆ ಧರ್ಮವನ್ನು ದ್ವೇಷಿಸು ಮತ್ತು ನಿನ್ನಲ್ಲಿ ಮೂಲಭೂತವಾದವನ್ನ ಎಬ್ಬಿಸು. ಹಿಂದುತ್ವವಾದಿಗಳು, ಜಿಹಾದಿಗಳು ಒಂದೇ ರಾಕ್ಷಸರ ವಿವಿಧ ಮುಖಗಳಿವರೆಲ್ಲಾ. ಅವರನ್ನ ಹಾಳು ಮಾಡೋಕೆ ಇವರ ಸಹಾಯ ತಗತೀವಿ ಅಂದ್ರೆ ದ ಅಲ್ಟಿಮೇಟ್ ವಿಕ್ಟಿಮ್ ಈಸ್ ಡೆಮಾಕ್ರಸಿ, ಫ್ರೀಡಂ ಆಫ್ ಸ್ಪೀಚ್, ಈಕ್ವಾಲಿಟಿ ಆಫ್ ವಿಮೆನ್. ಈಗಲೇ ದನೀನ ಮಾಂಸ ತಿನ್ನೋರ್ ನಾಲಿಗೆ ಕಡಿತಿವಿ ಅಂತ ಹೇಳಿದಾರೆ. ಇವರು ಅಧಿಕಾರಕ್ಕೆ ಬಂದ್ರೆ ಏನಾಗಬಹುದು ಅನ್ನೋದ್ನ ನೀವೇ ಯೋಚ್ನೆ ಮಾಡಿ. ಇನ್ನಾ ಮಿಕ್ಕಿದ್ದು – ಸತಿಪದ್ಧತಿನೂ ಜಾರಿಗೆ ತಗಂಬನ್ನಿ, ಅಸ್ಪೃಶ್ಯತೆನೂ ಜಾರಿಗೆ ತಗಂಬನ್ನಿ, ಚಾತುರ್ವರ್ಣವನ್ನೂ ಜಾರಿಗೆ ತಗಂಬನ್ನಿ ಅಂತ ಹೇಳದಿಲ್ಲಾ ಅಂತ ಏನಾರಾ ಗ್ಯಾರಂಟಿ ಇದೆಯಾ? ದಿಸ್ ಈಸ್ ವೆರಿ ಬ್ಯಾಡ್. ನೀವು ಒಂದು ಫಂಡಮೆಂಟಲಿಸಂನ ಇನ್ನೊಂದು ಫಂಡಮೆಂಟಲಿಸಮ್‌ನಿಂದ ಡೆಸ್ಟ್ರಾಯ್ ಮಾಡ್ತಿವಿ ಅಂತ ಹೊರಟ್ರೆ ನೀವು ಡೆಸ್ಟ್ರಾಯ್ ಆಗ್ತೀರ, ನಿಮ್ಮ ಫ್ರೀಡಂ ಆಫ್ ಸ್ಪೀಚು, ಡೆಮಾಕ್ರಸಿ ಡೆಸ್ಟ್ರಾಯ್‌ ಆಗುತ್ತೆ. ತಾಲಿಬಾನಿಗಳು ಹೋಗಬಹುದು. ಇಂಡಿಯನ್‌ ತಾಲಿಬಾನ್‌ಗಳ ಕೈಗೆ ಸಿಗಾಕ್ಕೋತೀರ.
ಪ್ರಶ್ನೆ: ಬಾಬಾಬುಡನ್‌ ಗಿರಿಯನ್ನ ಮತ್ತೊಂದು ಅಯೋಧ್ಯೆ ಮಾಡ್ತಿವಿ, ಕರ್ನಾಟಕನಾ ಗುಜರಾಥ್ ಮಾಡ್ತಿವಿ ಅಂತ ನಮ್ಮ ರಾಜಕಾರಣಿಗಳು ಬಹಿರಂಗವಾಗಿ ಹೇಳಿಕೆ ಕೊಡ್ತಾ ಇದಾರೆ. ಸರಿಯಾದ ಕೆಲಸ, ಎಜುಕೇಷನ್ ಇಲ್ಲದ ನಮ್ಮ ಯುವಜನಾಂಗ ಇಂಥ ಒಂದು ಅಫೀಮಿಗಾಗಿ ಕಾಯ್ತಾ ಇರ್ತಾರೆ. ಅವರನ್ನ ಇಂಥಾ ಅಪಾಯಕಾರಿ ಸೆಳೆತಗಳಿಂದ ಯಾವ ರೀತಿ ಪಾರು ಮಾಡಬಹುದು?
ಸದ್ಯಕ್ಕೆ ಪರಿಹಾರ ಇಲ್ಲ. ದೂರಗಾಮಿ ಪರಿಣಾಮಗಳಿರೊ ಪ್ರೋಗ್ರಾಮ್ಸ್ ಹಾಕಬಹುದು. ಆದರೆ ಸದ್ಯಕ್ಕೆ ಈ ಮೂಲಭೂತವಾದಿಗಳು, ದುರಾತ್ಮರನ್ನ ನಾಶ ಮಾಡೋದು ಬಹಳ ಕಷ್ಟ ಇದೆ. ಯಾಕೆ ಅಂತ ಹೇಳಿದ್ರೆ ನೀವು ಯಾವ ಧರ್ಮಚಿಂತನೆಯಿಂದ ಅವರ ಮನಸನ್ನ ಬದಲಾಯಿಸಬೇಕು ಅಂತ ಮಾಡ್ಕೊಂಡಿದೀರೊ, ಅದೇ ಧರ್ಮದಿಂದಾನೇ ಅವರು ಆ ಕೆಲಸ ಮಾಡ್ತಾ ಇದಾರೆ. ಇದು ಸರಿ ಅಲ್ರಯ್ಯಾ, ಧರ್ಮ ಹಿಂಗ್ ಹೇಳದಿಲ್ಲ ಅಂತ ಹೇಳಿದ್ರೆ ಏನೂ ಪ್ರಯೋಜನ ಆಗದಿಲ್ಲ. ಬೆನ್ನಿಗೆ ಬಾಂಬು ಕಟ್ಕೊಂಡು ಓಡಾಡ್ತಾ ಇರೋ ಮುಠ್ಠಾಳರಿಗೆ ಹ್ಯಾಗ್ ಬುದ್ಧೀ ಹೇಳೋಕೆ ಸಾಧ್ಯ ಆಗುತ್ತೆ ಅನ್ನೋದನ್ನ ಯೋಚ್ನೆ ಮಾಡಿ. 100 ರೂಪಾಯಿಗೊ ಇನ್ನೂರು ರೂಪಾಯಿಗೋ ಕೆಲಸ ಮಾಡೋಕೋಗೋನಿಗೆ ಬೇಡಾ ಕಣಯ್ಯ 300 ರೂಪಾಯಿ ಕೊಡ್ತೀನಿ ಅಂತ ಹೇಳಬಹುದು. ಸ್ವರ್ಗದಲ್ಲಿ 14 ಜನರೇಷನ್ನಿಗೂ ಸದ್ಗತಿ ಸಿಗುತ್ತಂತೆ, ಅದ್ಕೇ ಬಾಂಬಿಡೋಕ್ ಹೋಗ್ತಿದೀನಿ ಅಂತ ಹೇಳೋನಿಗೆ ಹ್ಯಾಗ್ ಬುದ್ಧಿ ಹೇಳ್ತೀರಾ ಹೇಳಿ. ಸದ್ಯಕ್ಕೆ ಅಂಥವರಿಗೆ ರಿಪೇರಿ ಮಾಡೋಕೆ ಇಟೀಸ್ ದ ಬಿಸಿನೆಸ್ ಆಫ್ ದ ಲಾ ಅಂಡ್ ಆರ್ಡರ್. ಅವರಿಗೆ ಧನಸಹಾಯ ಮಾಡ್ತಾ ಇರೋರು, ಜನಸಹಾಯ ಮಾಡ್ತಾ ಇರೋರನ್ನ ಪತ್ತೆ ಮಾಡಿ ಕಾನೂನಿನ ಪ್ರಕಾರ ಕ್ರಮ ತಗೊಳಬಹುದೇ ಹೊರತು ಅವರ ಮನಪರಿವರ್ತನೆ ಮಾಡೋದಿಕ್ಕೆ ಆಗದಿಲ್ಲ, ಯಾಕೆಂದ್ರೆ ಪರಿವರ್ತನೆ ನಮಗೆ ಮಾಡ್ಬೇಕು ಅಂತ ಉಪಾಯ ಮಾಡ್ಕೊಂಡು ಇದೆಲ್ಲಾ ಮಾಡ್ತಾ ಇದಾರೆ ಅವರು.

‍ಲೇಖಕರು G

September 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sathyakama Sharma K

    ಅವರು ಬದುಕಿದ್ದರೆ ಪ್ರಾಧಾನ್ಯತೆ ಅಲ್ಲ ಪ್ರಾಧಾನ್ಯ ಸರಿ ಅಂದು ಅವರೊಂದಿಗೆ ಜಗಳಾದುತ್ತಿದ್ದೆ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: