ಜಯಂತ ಕಾಯ್ಕಿಣಿ ಕಂಡಂತೆ ತೇಜಸ್ವಿ

(ಇಲ್ಲಿಯವರೆಗೆ)

ಅಲ್ಲಿಗೆ ಹತ್ತಿರತ್ತಿರ ಒಂದು ವರ್ಷ ಕಾಲ ಸಾಕ್ಷ್ಯಚಿತ್ರ ರೂಪಿಸುವ ನೆಪದಲ್ಲಿ ‘ತೇಜಸ್ವಿಯನ್ನು ಕಟ್ಟಿಕೊಡಬಲ್ಲರು’ ಎನ್ನಿಸಿದ ಅವರ ಆಪ್ತವಲಯದ ಒಡನಾಡಿಗಳನ್ನು ಟ್ರಾನ್ಸ್ ಗೆ ಸಿಕ್ಕವರಂತೆ ಹುಡುಕಿ ಹುಡುಕಿ ಮಾತನಾಡಿಸಿ ಸಿಕ್ಕಿದಷ್ಟು, ದಕ್ಕುವಷ್ಟು ತೇಜಸ್ವಿಯ ವ್ಯಕ್ತಿತ್ವವನ್ನ ಅರ್ಥಮಾಡಿಕೊಳ್ಳುವ ನಮ್ಮ ಪ್ರಯತ್ನ ಮುಗಿದಂತಾಗಿತ್ತು, ಒಬ್ಬರನ್ನು ಬಿಟ್ಟು! ಕವಿ, ಕತೆಗಾರ, ಸದ್ಯದ ಮೋಸ್ಟ್ ಫೇಮಸ್ ಚಿತ್ರಗೀತೆಗಳ ಸರದಾರ, ಸೂಕ್ಷ್ಮ ಮನಸ್ಸಿನ ಸಹೃದಯಿಯಾದ ತೇಜಸ್ವಿಯವರ ಆ ಒಡನಾಡಿಯನ್ನು ಮಾತನಾಡಿಸಿಬಿಟ್ಟರೆ ತೇಜಸ್ವಿ ಕುರಿತ ಸಾಕ್ಷ್ಯಚಿತ್ರದ ಚಿತ್ರೀಕರಣ ಸಂಪೂರ್ಣಗೊಳ್ಳುತ್ತಿತ್ತು.ಹಾಗಾಗಿ ಆ ತೇಜಸ್ವಿ ಒಡನಾಡಿಯನ್ನು ಸಂಪರ್ಕಿಸಿ ಸಾಕ್ಷ್ಯಚಿತ್ರಕ್ಕಾಗಿ ಮಾತನಾಡುವಂತೆ ಸುಮಾರು ಒಂದು ತಿಂಗಳ ಹಿಂದಿನಿಂದಲೂ ಕೇಳಿಕೊಳ್ಳುತ್ತಿದ್ದೆ.
ಮೊದಲನೇ ಮಾತುಕತೆಯಲ್ಲೇಅವರು ತೇಜಸ್ವಿ ಕುರಿತ ನೆನಪುಗಳನ್ನು ಹಂಚಿಕೊಳ್ಳಲು ತುಂಬಾ ಸಂತೋಷದಿಂದಲೇ ಒಪ್ಪಿಕೊಂಡರಾದರೂ ಅವರ ಬಿಡುವಿಲ್ಲದ ಕೆಲಸಗಳು ನಮ್ಮ ಚಿತ್ರೀಕರಣಕ್ಕೆ ಅಡ್ಡಿಯಾಗುತ್ತಿದ್ದವು.ಜೊತೆಗೆ ಅದೇ ಸಮಯಕ್ಕೆ ಅವರ ತಾಯಿ ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದಿದ್ದರಿಂದ ಅವರು ಬೆಂಗಳೂರನ್ನೇ ಬಿಟ್ಟು ಕೆಲವು ಸಮಯ ಅವರ ಸ್ವಂತ ಊರಾದ ಗೋಕರ್ಣಕ್ಕೆ ಹೋಗಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ಅವರ ಭೇಟಿ ಸುಮಾರು ಒಂದು ತಿಂಗಳಿನಿಂದ ಸಾಧ್ಯವಾಗಿರಲಿಲ್ಲ. ಆದರೆ ಒಂದು ದಿನ ‘ಮತ್ತೊಮ್ಮೆ ಪ್ರಯತ್ನಿಸೋಣ’ ಎಂದುಕೊಂಡು ಅವರಿಗೆ ಫೋನ್ ಮಾಡಿದಾಗ ಅವರು, ’ನಾಡಿದ್ದು ಹತ್ತನೇ ತಾರೀಖು ಬೆಂಗಳೂರಿಗೆ ಬರ್ತೀದ್ದೀನಿ. ಎರಡು ದಿನ ಇರ್ತೀನಿ. ಆ ಸಮಯದಲ್ಲಿ ಆಗುತ್ತಾ ನೋಡಿ..’ ಎಂದು ಹೇಳಿ ನಮ್ಮ ಸಂತೋಷ ಹೆಚ್ಚಿಸಿದ್ದರು. ’ಆಗೋದಿಲ್ಲ’ ಅಂತ ನಾವು ಹೇಳುವುದಕ್ಕೆ ಸಾಧ್ಯವೇ ಇರಲಿಲ್ಲ. ಏಕೆಂದರೆ ಅವರ ಮಾತುಗಳು ನಮ್ಮ ಸಾಕ್ಷ್ಯಚಿತ್ರಕ್ಕೆ ತುಂಬಾ ಮುಖ್ಯವಾಗಿದ್ದವು.ಹಾಗಾಗಿ ಅವರು ಬೆಂಗಳೂರಿಗೆ ಬಂದ ಮೊದಲ ದಿನವೇ ಅವರನ್ನು ಸಂಪರ್ಕಿಸಿ ಅವರ ಸಮಯ ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾಗಿಬಿಟ್ಟಿದ್ದೆವು.
ಅದರಂತೆ ಹತ್ತನೇ ತಾರೀಖು ಸಂಜೆ ನಾಲ್ಕು ಗಂಟೆಗೆ ಕುಮಾರಸ್ವಾಮಿ ಲೇಔಟ್ ನಲ್ಲಿ ಅವರ ಫ್ಲಾಟ್ ಇರುವ ಅಪಾರ್ಟ್ಮೆಂಟ್ ಬೇಸ್ ಮೆಂಟಿನಲ್ಲಿ ನಾನು ನಮ್ಮ ತಂಡ ಕಾಯುತ್ತಿದ್ದೆವು.ಹೇಳಿದ ಹಾಗೆ ಸಾಯಂಕಾಲ ನಾಲ್ಕು ಗಂಟೆಗೆ ತಮ್ಮ ಎಂದಿನ ಲವಲವಿಕೆಯಿಂದ ಅವರು ನಾವು ಕಾಯುತ್ತಿದ್ದ ಜಾಗಕ್ಕೆ ಬಂದರು.ಅವರೇ ಸಾಹಿತಿ, ಸಹೃದಯಿ ಜಯಂತ್ ಕಾಯ್ಕಿಣಿರವರು. ಅವರು ಬಂದವರೇ ನಮ್ಮೊಂದಿಗೆಲ್ಲಾ ನಗುಮುಖದೊಂದಿಗೆ ಮಾತನಾಡುತ್ತಾ ನಮ್ಮ ಸಾಕ್ಷ್ಯಚಿತ್ರದ ಉದ್ದೇಶ, ಆಶಯ ಎಲ್ಲವನ್ನೂ ಕೇಳಿತಿಳಿದುಕೊಂಡು ನಿಧಾನವಾಗಿ ತಮ್ಮ ನೆನಪಿನ ಸುರುಳಿಯನ್ನು ಬಿಚ್ಚತೊಡಗಿದರು,
“ತೇಜಸ್ವಿ ಎಫೆಕ್ಟು…!”
“ತೇಜಸ್ವಿ ಅಂದ ತಕ್ಷಣ ಸಾಮಾನ್ಯವಾಗಿ ವಿಜ್ಞಾನದಲ್ಲಿ ರಾಮನ್ ಎಫೆಕ್ಟ್ ಅಂತಾರೆ, ಸೊ ಹಾಗೆ ಕನ್ನಡದ ಮನಸ್ಸುಗಳ ವಿಚಾರದಲ್ಲಿ ಹೇಳೋದಾದ್ರೆ ತೇಜಸ್ವಿ ಎಫೆಕ್ಟ್ ಅಂತಾನೆ ಒಂದಿದೆ ಅಂತ ಹೇಳಬಹುದು.ತೇಜಸ್ವಿ ಎಫೆಕ್ಟ್ ಅದು.ತೇಜಸ್ವಿ ಅಂದ ತಕ್ಷಣಾನೇ ಅವರನ್ನ ಓದಿಕೊಂಡವರಲ್ಲಿ ಏನೋ ಒಂತರ ಮನಸ್ಸಿಗೆ ವಿಶೇಷವಾದ ಅನುಭವ ಬರುತ್ತೆ, ಒಂದು ಚೈತನ್ಯ ಬರುತ್ತೆ, ಒಂದು ಸ್ಪೂರ್ತಿ ಬರುತ್ತೆ.ಸೊ ಅದು ಏನಪ್ಪ ಅಂದ್ರೆ ಅವರದ್ದೇ ಮಾತುಗಳಲ್ಲಿ ಹೇಳೋದಾದ್ರೆ ’ವಿಸ್ಮಯ ಲೋಕ, ವಿಸ್ಮಯ ಜಗತ್ತು…’ ಅಂತ ಅವರನ್ನಅವರದ್ದೇ ಶಬ್ದಗಳಲ್ಲಿ ಕಟ್ಟಿಹಾಕಬಹುದು ನಾವು.ಆದರೆ ಹಾಗೆ ಮಾಡುವ ಅವಶ್ಯಕತೆ ಇಲ್ಲ. ನಮಗೆ ಅದು ಅರ್ಥ ಮಾಡಿಕೊಳ್ಳೋದು ಮುಖ್ಯ. ಅದೊಂದು ರೀತಿಯ enigma ಅದು, ಭಾವೋತ್ತೇಜಕವಾದ, ಭಾವೋದ್ದೀಪಿಕವಾದ ಒಂದು ವಿಸ್ಮಯ ಅದು.ಮತ್ತು ನಾನು ಅವರ ಅಸಂಖ್ಯಾತ ಅಭಿಮಾನಿಗಳಲ್ಲಿ ಒಬ್ಬ, ಅಂದ್ರೆ ಅವರನ್ನ ಓದಿಕೊಂಡು ಬೆಳೆದವನು.ನನ್ನ ಸಂವೇದನೆಯ ಮಹಾಪೋಷಕರಲ್ಲಿ ಒಬ್ಬರು ಅವರು. ನನ್ನ ಸಂವೇದನೆಯನ್ನ ಅನೇಕ ಜನ ಪೋಷಿಸಿದ್ದಾರೆ, ಅವರು ಏ.ಕೆ ರಾಮಾನುಜಮ್ ಇರಬಹುದು, ಗಂಗಾಧರ ಚಿತ್ತಾಲರಿರಬಹುದು, ಯಶವಂತ ಚಿತ್ತಾಲರಿರಬಹುದು, ಶಾಂತಿನಾಥ ದೇಸಾಯಿ ಇರಬಹುದು, ಲಂಕೇಶ್ ಇರಬಹುದು…ಈ ಥರದ ಒಂದು ಸಾಲಿನಲ್ಲಿ ತೇಜಸ್ವಿ ಒಂದು ದೊಡ್ಡ ಪ್ರಭಾವ. ಹೀಗಾಗಿ ಅವರನ್ನ ಓದಿಕೊಂಡು ಬೆಳೆದ ನನ್ನಂತವರಿಗೆ ಅವರ ಬಗ್ಗೆ ಮಾತಾಡಿ ಅಂದ್ರೆ ಬಹಳ ಕಷ್ಟ ಆಗಿಬಿಡುತ್ತೆ.
ಯಾಕಂದ್ರೆ ನನ್ನ ಸಂವೇದನೆಯ ಒಂದು ಭಾಗ ಆಗಿಹೋಗಿರುವವರು ಅವರು.ಅವರ ಜೊತೆ ನನ್ನ ಮೊದಲನೇ ಒಡನಾಟ ಅದು ವೈಯುಕ್ತಿಕ ಒಡನಾಟ ಅಲ್ಲ ಸಂವೇದನೆಯ ಒಡನಾಟ. ತುಷಾರ ಅನ್ನೊ ಪತ್ರಿಕೆನಲ್ಲಿ ೧೯೭೦ರ ದಶಕದಲ್ಲಿ ಅದು ಮಣಿಪಾಲದಿಂದ ಬರ್ತಾ ಇತ್ತು ಆ ಪತ್ರಿಕೆ.ಆ ಪತ್ರಿಕೆಯ ವಿಶೇಷತೆ ಏನು ಅಂದ್ರೆ ಮಣಿಪಾಲ್ ಪವರ್ ಪ್ರೆಸ್ಸು ತುಂಬಾ ಓಳ್ಳೆಯ ಪ್ರಿಂಟ್ ಮಾಡ್ತಿದ್ರು ಆಗ.ಆ ಪತ್ರಿಕೆನಲ್ಲಿ ನಮ್ಮ ಕಣ್ಣು ಸೆಳೆದಿದ್ದು ಚಿತ್ರಲೇಖನಗಳು. ಒಂದು ಹಕ್ಕಿಯ ಬಗ್ಗೆ, ಅಥವ ಯಾವುದೊ ಒಂದು ಪತಂಗ ತನ್ನ ಕೋಶದಿಂದ ಹೊರಗೆ ಬರುವಂತದ್ದಾಗಿರಬಹುದು, ಅಥವ ಯಾವುದೋ ಒಂದು ವೀವರ್ ಬರ್ಡು ಹುಲ್ಲನ್ನ ತಂದು ತನ್ನ ಮನೆ ಕಟ್ಟಿಕೊಳ್ಳುವಂತದ್ದಾಗಿರಬಹುದು, ಹೀಗೆ ಒಂದು ಹಕ್ಕಿಯ ಚಿತ್ರ ಅದರ ಜೊತೆಗೆ ಒಂದು ಸುಂದರವಾದ ಅಡಿಟಿಪ್ಪಣಿ. ಆ ಅಡಿಟಿಪ್ಪಣಿ ಎಷ್ಟು ಇಂಟರೆಸ್ಟಿಂಗ್ ಆಗಿರ್ತಿತ್ತು ಅಂದ್ರೆ ಅದೇ ಒಂದು ಕಾವ್ಯದ ಹಾಗಿರ್ತಿತ್ತು. ಉದಾಹರಣೆಗೆ ’ಒಂದು ಪತಂಗ ತನ್ನ ಹಸಿರು ಸ್ವೆಟರನ್ನು ಹಾಕಿಕೊಂಡಿತು, ಕಿರೀಟ ಕಳೆದುಕೊಂಡ ಮಹಾರಾಜನಂತೆ…!’ ಹೀಗೆ ಬರೀತಾ ಇದ್ರು ತುಂಬಾ ಕಾವ್ಯಮಯವಾಗಿ. ಕಾವ್ಯ ಅಂದ್ರೆ ಹುಸಿಕಾವ್ಯ, ಹುಸಿರಮ್ಯತೆ ಬಗ್ಗೆ ಹೇಳ್ತಾ ಇಲ್ಲ ನಾನು.ಅದು ಕಣ್ಣಿಗೆ ಕಾಣ್ತಾಇರುವ ಒಂದು ಸಂಗತಿಯನ್ನ ನಮಗೆ ತೋರಿಸುವಾಗ ಕಣ್ಣಿಗೆ ಕಾಣದ ಏಷ್ಟೋ ಸಂಗತಿಯನ್ನ ಅದಕ್ಕೆ ಜೋಡಿಸೋದು.ಅಂದರೆ ವ್ಯಕ್ತದ ಜೊತೆಗೆ ಅವ್ಯಕ್ತವನ್ನ ಜೋಡಿಸೋದು.ಹಾಗಾದಾಗಲೇ ತಾನೇ ಅದು ಶ್ರೇಷ್ಠ ಕಾವ್ಯ ಅಂತ ಅನ್ನಿಸಿಕೊಳ್ಳೋದು?ತೇಜಸ್ವಿಯವರದ್ದು ಆ ರೀತಿಯ ಫೋಟೋಗ್ರಫಿಕ್ ಆದ ಸಂವೇದನೆಯ ಜೊತೆಗೆ ಪೊಯಟಿಕ್ ಆದ ಸಂವೇದನೆ ಕೂಡ. ಹೀಗಾಗಿ ಅದು ನಮಗೆ ವಿಶೇಷ ಅನ್ನಿಸ್ತು.

ಅದಾದ ನಂತರ ಅವರು ’ಕ್ರಾಂತಿಯ ಅಂತರಂಗ’ ಅಂತ ಒಂದು ಚಿತ್ರಲೇಖನವನ್ನ ಅವರು ತುಷಾರದಲ್ಲಿ ಬರೆದ್ರು.ಬಹುಶಃ ನನಗನ್ನಿಸುವ ಮಟ್ಟಿಗೆ ನನ್ನ ವಾರಿಗೆಯ ಯುವಕರ ಕಣ್ಣುಗಳನ್ನೆಲ್ಲ ಸರ್ಫ್ ಎಕ್ಸೆಲ್ ಹಾಕಿ ಫಳ ಫಳ ಅಂತ ಉಜ್ಜಿ ತೊಳೆದಂತಾಯಿತು.ಉತ್ತರ ಕರ್ನಾಟಕದ, ರಣರಣ ಬಿಸಿಲಿನ, ಬೆಣಚುಕಲ್ಲುಗಳ ಭೂಮಿಯ, ಊರಿನ, ಬದುಕಿನ ಚಿತ್ರಣ ಆಗಿತ್ತು ಅದು.’ಕ್ರಾಂತಿಯ ಅಂತರಂಗ’ ಅಂತ ಹೇಳಿ ಅವರು ಅವನ್ನೆಲ್ಲಾ ತುಷಾರದಲ್ಲಿ ಪ್ರಕಟಿಸಿದ್ರು. ಯಾಕೆ ಈ ಮಾತು ಹೇಳಿದೆ ಅಂದ್ರೆ ಸಾಮಾನ್ಯವಾಗಿ ಸಾಹಿತ್ಯ ಅಂದ್ರೆ ಸಾಹಿತ್ಯದಿಂದಲೇ ಪ್ರೇರಿತವಾದ, ಸಾಹಿತ್ಯದಿಂದಲೇ ಸ್ಪೂರ್ತವಾದಂತಹ, ಕೇವಲ ಪುಸ್ತಕಗಳನ್ನ ಮಾತ್ರ ಓದಿಕೊಂಡತಹ, ಮತ್ತು ಸಾಹಿತ್ಯಕ್ಕೆ ಇಂತಿತಾವೆ ಬೇಕು ಅಂತ ಹೇಳಿ ಬದುಕಿನಲ್ಲಿ ಅವವೇ ಸರಕುಗಳನ್ನು ಹುಡುಕುವಂತಹ Stereotypic ಅನ್ನಿಸುವ ಒಂದು ಸಾಹಿತ್ಯಲೋಕ ನಮ್ಮೆದುರಿಗಿರುತ್ತೆ. ಆದರೆ ನನ್ನ ಪ್ರಕಾರ ಸಾಹಿತ್ಯ ಬೆಳೆಯೋದು ಅಸಾಹಿತ್ಯಿಕವಾದ ಲೋಕದಿಂದ. ಯಾವುದನ್ನ ಅಕಾಡೆಮಿಕ್ ಅಂತ ಕರಿತೀವೊ ಅಂತಹ ಲೋಕದಿಂದ. ಉದಾಹರಣೆಗೆ ಯಶವಂತ ಚಿತ್ತಾಲರು ಬಾಂಬೆಯ ಬದುಕು, ಬಾಂಬೆಯ ಕಾರ್ಪೋರೇಟ್ ಬದುಕಿನ ಕ್ರೌರ್ಯಗಳನ್ನ ಅನಾವರಣ ಮಾಡಿದ್ರು. ಅದು ಸಾಹಿತ್ಯದಲ್ಲಿ ಅದುವರೆಗೂ ಬಂದಿರಲಿಲ್ಲ. ನಮ್ಮ ಅನುಭವಕ್ಕೆ ಬಂದಿತ್ತು, ಆದರೆ ಸಾಹಿತ್ಯಕ್ಕೆ ಬಂದಿರಲಿಲ್ಲ. ಅದೇ ರೀತಿ ತೇಜಸ್ವಿ ಮನುಷ್ಯನ ಅತ್ಯಂತ ನಿಗೂಢ ಚಹರೆಗಳ ಬಗ್ಗೆ ಅದೂ ಕೂಡ ಪ್ರಕೃತಿಯ ನಂಟಿನ ಮೂಲಕ ಅದನ್ನ ಅರಿಯುವ ಪ್ರಯತ್ನವನ್ನ ಅವರ ನಿಗೂಢ ಮನುಷ್ಯರು ಮತ್ತು ಕರ್ವಾಲೋದ ಮೂಲಕ ಮಾಡಿದ್ರು.
ಅಂದ್ರೆ ಯಾವುದನ್ನ ಸಾಹಿತ್ಯದಲ್ಲಿ ಇದನ್ನೆಲ್ಲಾ ಹೇಳೋಕಾಗಲಪ್ಪ ಅಂತೀವಲ್ಲ ಅಂತಹ ಒಂದು ಮನುಷ್ಯನ ಚಹರೆಗಳನ್ನ, ಅವನ ಸಂವೇದನೆಗಳಿಗೆ ನಿಲುಕಬಲ್ಲಂತಹ ಭಾಷೆನಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ರು. ಹೀಗಾಗಿ ಕರ್ವಾಲೋ ಯಾವುದೋ ಓತಿಕ್ಯಾತನ ಬೆನ್ನಟ್ಟಿ ಹೋದ ಕತೆ ಅಲ್ಲ .ಅದು ಒಂದು ನಿಗೂಢದ ಹಿಂದೆ ಹೋದಂತದ್ದು.ಇನ್ನೊಂದು ಮುಖ್ಯವಾದ ಅಂಶ ಅಂದ್ರೆ ತುಂಬಾ ಸ್ಪಿರುಚುಯಲ್ ವ್ಯಕ್ತಿ ತೇಜಸ್ವಿ.ಕುವೆಂಪು ಅವರ ಒಳಗಡೆ ಒಂದು ಅಧ್ಯಾತ್ಮ ಏನಿದೆಯಲ್ಲ ಅದು ಇವರೊಳಗಡೆ ಬೇರೆ ರೀತಿನಲ್ಲೇ ಇದೆ. ಇವರು ಒಂದು ನೇಚರ್ರು ಮತ್ತು ಇನ್ನೊಂದು ನೇಚರ್ರು! ನೇಚರ್ ಅನ್ನುವ ಶಬ್ದ ನೋಡಿ, ನೇಚರ್ ಅಂದ್ರೇನೆ ಒಂದು ಪ್ರಕೃತಿ.ನೇಚರ್ ಅಂದ್ರೆ ಮನುಷ್ಯನ ಸ್ವಭಾವ ಕೂಡ. ಅವನ ನೇಚರ್ ಚೆನ್ನಾಗಿಲ್ಲಪ್ಪ ಅಂತೀವಿ ನಾವು.ಹಾಗೆ ಪ್ರಕಿತಿಯ ನೇಚರ್ ಜೊತೆಗೆ ಮನುಷ್ಯನ ನೇಚರನ್ನೂ ಇಟ್ಟುನೋಡುವ, ಅವೆರಡರ ಜೊತೆ ಸಂವಹಿಸುವ ಒಂದು ಹುಡುಕಾಟ ತೇಜಸ್ವಿಯವರಲ್ಲಿತ್ತು.ಮತ್ತು ನ್ನ ತುಂಬಾ ತೀವ್ರವಾದ ಒಂದು ಸ್ಪೇಸಿನಲ್ಲಿ ಅವರು ಅದನ್ನ ಮಾಡಿದ್ರು. ಹೀಗಾಗಿ ತೇಜಸ್ವಿಯವರ ಸಾಹಿತ್ಯವನ್ನ analiseಮಾಡೋದಕ್ಕೆ
ಸಾಹಿತ್ಯದ ಸರಕಿನಲ್ಲಿ ಹತ್ಯಾರುಗಳೇ ಇಲ್ಲ. ನಿಜವಾದ ಸಾಹಿತ್ಯದ ಹಿರಿಮೆನೇ ಅದು ’ಯಾರ ಜಪ್ತಿಗೂ ಸಿಗದಂತದ್ದು’.ಹೀಗಾಗಿ ಅವರು ನನ್ನನ್ನ, ನಮ್ಮನ್ನ, ನಮ್ಮಂತಹ ಎಷ್ಟೋ ಮನಸ್ಸುಗಳನ್ನ ಉದ್ದೀಪಿಸಿದವರು. ಮತ್ತು ಅವರ ಸೆನ್ಸ್ ಆಫ್ ಹ್ಯೂಮರ್ ಇದೆಯಲ್ಲ, ವಿನೋದ ಪ್ರಜ್ಞೆ ಅವರ ಯಾವುದೇ ಕತೆಗಳಲ್ಲಿರಬಹುದು ಅದು ಅದನ್ನ ಹ್ಯೂಮನ್ ಅಬ್ಸರ್ಡಿಟಿ ಅಂತ ಕರೀತಾರೆ, ಅಂತಹ ಒಂದು ಹ್ಯೂಮನ್ ಅಬ್ಸರ್ಡಿಟಿ, ಒಂದು ವಕ್ರ ವಿನೋದ ಆರೀತಿಯ ಒಬ್ಬ ವಕ್ರ ವಿನೋದದ ಚಕ್ರವರ್ತಿ ಅಂತ ಕರೀಬಹುದು ನಮ್ಮ ತೇಜಸ್ವಿಯವರನ್ನ. ಆ ವಕ್ರ ವಿನೋದ ಚಕ್ರವರ್ತಿಯಿಂದ ತುಂಬಾ ಕಲಿಬೇಕಿದೆ ನಾವು. ಯಾಕಂದ್ರೆ ಹಿ ಲಿಬರೇಟೆಡ್ ಅಸ್. ’ಸಾಹಿತ್ಯ ಅಂದ್ರೆ ಅದೇನೊ ಒಂದು ಫಾರ್ಮ್ಯಾಟ್ ಇಟ್ಕೊಂಡು ಬರೆದಿದ್ದಲ್ಲಪ್ಪ. ಸಾಹಿತ್ಯ ಅಂದ್ರೆ ಹೀಗೂ ಇರುತ್ತೆ ನೋಡಿ’ ಅಂತ ಅವರು ನಮಗೆ ಹಲವು ಹೊಸ ಹಾದಿಗಳನ್ನ ತೆರೆದು ತೋರಿಸಿದ್ರು” ಜಯಂತ ಕಾಯ್ಕಿಣಿರವರ ಮಾತುಗಳು ಮಲೆನಾಡಿನ ಭರ್ಜರಿ ಮಳೆಯಂತೆ ಮುಂದುವರೆಯುತ್ತಿದ್ದವು. ಮುಂದೆ
ಅವರ ಮಾತುಗಳು ತೇಜಸ್ವಿಯವರ ವ್ಯಕ್ತಿ ವಿಶಿಷ್ಟತೆಯ ಬಗ್ಗೆ ಮುಂದುವರೆದವು,
“ನಾನು ಮಾತಾಡ್ದೇ ಇರೋದೇ ನನ್ನ ಮಾತು…!”
“ಅವರು ಒಂದು ರೀತಿ ಮೌನದ ತವರುಮನೆ ಇದ್ದ ಹಾಗಿದ್ದರು.ಮೌನದ ಒಂದು ದೊಡ್ಡ ತವರುಮನೆ. ಕಡುಮೌನಕ್ಕೆ ಎಲ್ಲಿಯಾದರೂ ನೆಲೆಸೋದಕ್ಕೆ ಅವಕಾಶ ಕೊಟ್ರೆ ಅದು ತೇಜಸ್ವಿಯವ್ರನ್ನ ಆರಿಸಿಕೊಳ್ಳುತ್ತೆ ಅನ್ನೋದು ನನ್ನ ಅಭಿಪ್ರಾಯ. ಯಾಕಂದ್ರೆ ಅದಕ್ಕಾಗಿಯೇ ನೋಡಿ ಅವರು ಆಯ್ದುಕೊಂಡಂತಹ ಅವರ ಹವ್ಯಾಸಗಳು ಅದು ಪೋಟೋಗ್ರಪಿ ಇರಬಹುದು, ಮೀನು ಹಿಡಿಯೋದಿರಬಹುದು ಅದರ ಅವಿಭಾಜ್ಯ ಅಂಗಾನೇ ಮೌನ. ಮೀನು ಹಿಡಿಯುವವನಿಗೆ ಇರಬೇಕಾದ ಮೊದಲ ಕ್ವಾಲಿಫಿಕೇಷನ್ನೇ ಅವನು ಮಾತಾಡಬಾರದು. ವೈಲ್ಡ್ ಪೋಟೋಗ್ರಫಿಗೆ ಬೇಕಾದ ಮೊದಲ ರಿಕ್ವಯರ್ಮೆಂಟೇ ಅವನು ಮಾತಾಡ್ಬಾರದು. ಸೊ ಮಾತೇ ಜ್ಯೋತಿರ್ಲಿಂಗವಾದ ಒಬ್ಬ ಸಾಹಿತಿ ಮಾತೇ ತ್ಯಾಜ್ಯವಾದ ಇಂತಹ ಹವ್ಯಾಸಗಳನ್ನಿಟ್ಟುಕೊಂಡಾಗ ಯಾವ ರೀತಿಯ ತುಂಬಾ ಇಂಟೆನ್ಸಿವ್ ಆದ ಸಾಹಿತ್ಯ ಅಲ್ಲಿ ಸೃಷ್ಟಿ ಆಗಬಹುದು ಅಂತ ಯೋಚಿಸಿ. ಅಲ್ವ? ಸೊ ಬಹಳ ತೀವ್ರವಾಗಿ ಬದುಕನ್ನ ಬದುಕಿದವರು ಅವರು. ತುಂಬಾ ಚೆನ್ನಾಗಿ ನೆನಪಿದೆ ನನಗೆ.ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಒಂದು ಸಂವಾದ ಆಯ್ತು.ಆಗ ಅಲ್ಲಿ ಸೇರಿದ್ದ ಅನೇಕರು ’ಈಗ ನಮ್ಮ ಸುತ್ತಲೂ ತುಂಬಾ ಏನೇನೊ ಆಗ್ತಾ ಇದೆ, ಒಂದು ಕಾಲದಲ್ಲಿ ನೀವೆಲ್ಲರೂ ನಮಗೆ ಕ್ರಾಂತಿಯ ಪಾಠ ಹೇಳಿಕೊಟ್ಟವರು.ಆದರೆ ಈಗ ನೋಡಿದ್ರೆ ಆ ಲಂಕೇಶ್ ಸಿನಿಮಾ ಮಾಡ್ಕೊಂಡ್ ಹೋದ್ರು, ನೀವು ನೋಡಿದ್ರೆ ಕಾಗೆ ಗೂಬೆ ಪೋಟೋ ತೆಕ್ಕೊಂಡ್ ಓಡಾಡ್ತಿದ್ದೀರಿ.ಹೀಗಾದ್ರೆ ನಮ್ಮನ್ನ ಮುನ್ನಡೆಸುವವರು ಯಾರು? ಈಗ ನಮ್ಗೆ ವಕ್ತಾರರೇ ಇಲ್ಲದ ಹಾಗಾಗಿದೆ’ ಅಂತ ದೂರುಗಳು, ಆರೋಪಗಳು ಕೇಳಿ ಬಂದಾಗ ಅವರು ಅದಕ್ಕೇನೂ ಉತ್ತರಾನೇ ಕೊಡ್ಲಿಲ್ಲ.

ಆಮೇಲೆ ನಾನು ಇದೇ ಪ್ರಶ್ನೆ ಮತ್ತೆ ಕೇಳ್ದಾಗ ’ಮಾರಾಯ ನಾನು ಮಾತಾಡ್ದೇ ಇರೋದೇ ನನ್ನ ಮಾತು ಅಂತ ಅವರಿಗೆ ಗೊತ್ತಾಗೊಲ್ಲ ಕಣಯ್ಯ. ಏನ್ ಮಾಡ್ಲಿ ನಾನು?’ ಅಂತ ಕೇಳಿದ್ರು. ಹಾಗಾಗಿ ನಾವು ಎಷ್ಟು ಹೊರಗೆ ಮಾತಾಡ್ತೀವೊ ಅಷ್ಟೇ ಒಳಗಡೆ ಸೈಲೆನ್ಸ್ ಬೇಕು ಅಂತ. ಸೊ ಸೈಲೆನ್ಸ್ ವಾಸ್ ಹಿಸ್ ವೇ ಆಫ್ ಎಕ್ಸ್ಪ್ರೆಷನ್!. ಆಮೇಲೆ ತುಂಬಾ ಜನ ನನ್ನ ಹತ್ರ ಮಾತಾಡೋವಾಗ ಹೇಳ್ತಿರೋದು ನಾನು ಕೇಳ್ತಿರ್ತೇನೆ ’ಏನ್ ಸಾರ್ ಅವರು ಮೀನು ಹಿಡೀತಿದ್ರು, ಪೋಟೋಗ್ರಫಿನೂ ಮಾಡ್ತಿದ್ರು, ಕತೆನೂ ಬರೀತಾ ಇದ್ರು…’ ಅಂತ. ನಾನು ಕೇಳೋದು ’ಸೋ ವಾಟ್? ಅದರಲ್ಲೇನಪ್ಪ?’ ಅಂತ. ಮನುಷ್ಯರಾದ ನಾವೆಲ್ಲಾ ಪ್ರಾಕೃತಿಕವಾಗಿ ಏನೇನೂ ಮಾಡಬೇಕಿತ್ತೊ ಅದನ್ನ ನಾವು ಮಾಡ್ತಿಲ್ಲ ಅವರು ಮಾಡ್ತಿದಾರೆ.ಸುಮ್ನೆ ನಮಗೆ ವಿವರ ಗೊತ್ತು ಅಂತ ಮಾತಾಡೋದಲ್ಲ.
“ಡಾರ್ಕ್ ರೂಂನಲ್ಲಿ ಯಾವತ್ತಾದ್ರೂ ಕೆಲಸ ಮಾಡಿದ್ದಿಯೇನೊ?”
ಹಿಂದೆ ಒಂದ್ಸಲ ಜಾಗೃತ ಸಮ್ಮೇಳನ ಅಂತ ಒಂದು ಆಗಿತ್ತು.ಆಗ ಅವರನ್ನ ಮೊದಲ್ನೇ ಬಾರಿಗೆ ನೋಡಿದ್ದು ನಾನು.ಆಗ ಅವರಿಗೆ ನನ್ನದೊಂದು ಪುಸ್ತಕ ಕೊಟ್ಟಿದ್ದೆ.ಅವರು ಅದನ್ನ ಓದಿ ’ಅದು ಹಾಗಿದೆ, ಹೀಗಿದೆ’ ಅಂತ ಹೇಳಿ ಒಂದು ಕಾಗದ ಬರೆದಿದ್ರು.ಜೊತೆಗೆ ಆಗ ಸಿಕ್ಕಾಗ ಅವರಿಗೆ ನನ್ನ ಕಾಲಿನ ಹಿಮ್ಮಡಿಯ ನೋವಿನ ಬಗ್ಗೆ ಹೇಳಿದ್ದೆ.ಹೇಳಿ ಅದನ್ನ ನಾನೇ ಮರೆತುಹೋಗಿದ್ದೆ.ಆದರೆ ಅವರು ಅದನ್ನ ನೆನಪಿಟ್ಕೊಂಡು ’ನಿಮಗೆ ಕಾಲಿನ ಹಿಮ್ಮಡಿಯ ನೋವು ಅಂತ ಹೇಳಿದ ನೆನಪು.ಇಲ್ಲಿ ಯಾವುದೋ ಒಂದು ಎಲೆ ಸಿಗುತ್ತೆ.ಅದನ್ನ ಹಚ್ಚಿದ್ರೆ ಕಾಲು ನೋವು ಹೋಗುತ್ತೆ ಅಂತ ಹೇಳ್ತಾರೆ.ನಾನು ಅದನ್ನ ಹುಡುಕ್ತೀನಿ.ಸಿಕ್ರೆ ನಿಮಗೆ ಕಳಿಸಿಕೊಡ್ತೀನಿ’ ಅಂತ ಬರೆದಿದ್ರು. ಸೊ ಅದನ್ನೇ ನಾನು ಹೇಳಿದ್ದು ’ನೇಚರ್ ಅಂಡ್ ನೇಚರ್’ ಅಂತ. ಅದಾದ ನಂತರ ನನ್ನ ಅವರ ಒಡನಾಟ ಮುಂದುವರೆದಿದ್ದು ಇಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಬಿ.ಎಲ್ ಶಂಕರ್ ಅವರೆಲ್ಲಾ ಸೇರಿ ಒಂದು ಸಂವಾದ ಏರ್ಪಡಿಸಿದ್ರು. ಅಲ್ಲಿಗೆ ಸಾವಿರಾರು ಅವರ ಅಭಿಮಾನುಗಳು ಬಂದಿದ್ರು.ಆಗ ಅಭಿಮಾನಿಗಳ ಪ್ರಶ್ನೆ ಇರ್ತಾವಲ್ಲ ಆ ಪ್ರಶ್ನೆಗಳನ್ನ ತೇಜಸ್ವಿಯವ್ರಿಗೆ ಓದಿ ಹೇಳುವ, ಚೀಟಿಗಳನ್ನ ಅವರಿಗೆ ತಲುಪಿಸುವ ಸೂತ್ರಧಾರನ ಥರ ಇದ್ದೆ ನಾನಲ್ಲಿ. ಅವತ್ತು ಅಲ್ಲಿ ಅವರು ಸೌಂದರ್ಯಶಾಸ್ತ್ರದ ಬಗ್ಗೆ, ಸಾಹಿತ್ಯ, ಮುಂತಾದ ತುಂಬಾ ಬೇರೆ ಬೇರೆ ವಿಷಯಗಳ ಬಗ್ಗೆ ತುಂಬಾ ಚೆನ್ನಾಗಿ ಮಾತಾಡಿದ್ರು. ಆಮೇಲ್ ನಾನು ಅವ್ರಿಗೆ ಸ್ವಲ್ಪ ತಮಾಷೆ ಮಾಡಿದ್ದೆ.ಅವರು ನನಗೆ ಮಾತಾಡ್ತಾ ಮಾತಾಡ್ತಾ ’ಡಾರ್ಕ್ ರೂಂನಲ್ಲಿ ಯಾವತ್ತಾದ್ರೂ ಕೆಲಸ ಮಾಡಿದ್ದಿಯೇನೊ?’ ಅಂತ ಕೇಳಿದ್ರು. ನಾನು ’…ಫೋಟೋಗ್ರಫಿ ಮಾಡಿಲ್ಲ ಸಾರ್…!!!’ ಅಂದೆ. ಅದಕ್ಕೆ ಜನ ನಕ್ಕುಬಿಟ್ರು.ಆಗ ಅವರಿಗೆ ತುಂಬಾ ಮುಜುಗರ ಆಗೋಯ್ತು.
ಹಾಗೆ ನಾನು ಅಲ್ಲೇ ಅವರಿಗೆ ಒಂದು ರಿಕ್ವೆಸ್ಟ್ ಮಾಡಿದೆ.ಈಟಿವಿಗೆ ಕುವೆಂಪುರವರ ಬಗ್ಗೆ ಒಂದು ಕಾರ್ಯಕ್ರಮ ಮಾಡ್ಬೇಕು ಅಂತಿದ್ದೀನಿ.ಚಾನೆಲ್ ನವರು ಕೇಳ್ಕೊಂಡಿದಾರೆ. ಸುಮ್ನೆ ಕೂತ್ಕೊಂಡು ಯಾರಿಗೂ ಅರ್ಥ ಆಗದೇ ಇರೊ ಹಾಗೆ ಕತೆ ಹೊಡೆಯೋದಕ್ಕಿಂತ ಈ ರೀತಿ ಈ ರೀತಿ ಮಾಡ್ಬೇಕು ಅಂತಿದ್ದೀನಿ..’ ಅಂತ ವಿವರನೆಲ್ಲಾ ಕೊಟ್ಟೆ. ಅವರು ’ಮಾಡು ಚೆನ್ನಾಗಿದೆ’ ಅಂದ್ರು.ಆಮೇಲೆ ಅವರು ಟಿವಿ ನೋಡಿದವರೇ ಅಲ್ಲ. ಈ ಕಾರ್ಯಕ್ರಮ ನೋಡೋಕೋಸ್ಕರ ಟಿವಿ ತಂದಿಟ್ಕೊಂಡು, ಯಾರ್ಯಾರತ್ರಾನೊ ಜಗಳ ಮಾಡಿ ಕೇಬಲ್ ಕನೆಕ್ಷನ್ ತಗೊಂಡು ನೋಡಿದ್ರು.ಒಂದು ಸಲ ಬೈದಿದ್ರು, ’ಏನ್ ಫಜೀತಿ ಮಾಡಿಟ್ಟಿದ್ದೀಯ ಮಾರಾಯ?ಇಲ್ಲಿ ಎಲ್ಲಿ ಹೋದ್ರು ಎಲ್ಲರೂ ಕೇಳ್ತಾರೆ ಕುವೆಂಪುರವರ ಕಾರ್ಯಕ್ರಮ ನೋಡಿದ್ರ?ನೋಡಿದ್ರ?ಅಂತ. ಅವರಿಗೋಸ್ಕರನಾದ್ರೂ ನೋಡ್ಲೇಬೇಕಾಗಿದೆ.ಎಂಥ ತರಲೆ ಮಾಡಿಟ್ಟಿದ್ದೀಯ?’ ಅಂತ ರೇಗಿದ್ರು.ಆಮೇಲೆ ಪ್ರತಿವಾರ ಅವರು ಆ ಕಾರ್ಯಕ್ರಮ ನೋಡಿ ಫೋನ್ ಮಾಡಿ ಅವರ ಪ್ರತಿಕ್ರಿಯೆ ತಿಳಿಸ್ತಾ ಇದ್ರು.ಆಮೇಲೆ ನಾನು ಭಾವನ ಅನ್ನೊ ಪತ್ರಿಕೆನ ನಾನು ಎಡಿಟ್ ಮಾಡ್ತಾ ಇದ್ದೆ ವಿಜಯಕರ್ನಾಟಕ ಗ್ರೂಪಿಂದು.ಅದನ್ನ ಅವರು ತುಂಬಾ ಇಷ್ಟಪಟ್ಟು ನೋಡ್ತಾ ಇದ್ರು ಅಂತ ಯಾರದ್ದೋ ಮೂಲಕ ನನಗೆ ಗೊತ್ತಾಯ್ತು.ಆಮೇಲೆ ಒಂದು ಸಲ ಟೆಲಿವಿಷನ್ ಇಂಟರ್ವ್ಯೂಗೆ ಅವರನ್ನ ಕರೆದಿದ್ದೆ ಅವ್ರನ್ನ. ಅವರು ಪ್ರಾರಂಭದಲ್ಲಿ ಬರೋಕೇ ರೆಡಿ ಇರಲಿಲ್ಲ. ನಂತರ ಒಪ್ಪಿಕೊಂಡು ಬಂದ್ರು.ಬಂದ ತಕ್ಷಣ ಅವರು ಹೇಳಿದ್ದು ’ನೋಡು ಅಲ್ಲಿ ಏನಾದ್ರೂ ನೀನು ನನಗೆ ಲಿಪ್ ಸ್ಟಿಕ್ ಗಿಪ್ ಸ್ಟಿಕ್ಹಚ್ಚಿದ್ರೆ ನಿನ್ನ ಕಾಲು ಮುರಿದು ಬಿಡ್ತೀನಿ ನೋಡ್ತಾ ಇರು…!’ ಅಂತ. ನಾನು ಕಂಗಾಲಾಗ್ಬಿಟ್ಟೆ.ನಂತರ ಹೋಗಿ ನಮ್ಮ ತಂದದವರಿಗೆ ಅವರಿಗೆ ಮೇಕಪ್ ಮಾಡ್ಬೇಡಿ ಅಂತ ಹೇಳಿದೆ.ಹಾಗೆ ತುಂಬಾ ನರ್ವಸ್ ಆಗೇ ಅವತ್ತು ಅವರ ಸಂದರ್ಶನ ಮುಗಿಸ್ದೆ.
ಆ ಕಾರ್ಯಕ್ರಮದ concluding ಎಪಿಸೋಡ್ಸ್ ಕುಪ್ಪಳ್ಳಿನಲ್ಲಿ ಮಾಡಿದ್ದು.ಅದು ಮಾತ್ರ ನನ್ನ ಪಾಲಿಗೆ ಅವಿಸ್ಮರಣೀಯವಾದ ಅನುಭವ.ಯಾಕಂದ್ರೆ ಅವರು ಅಲ್ಲಿ ತುಂಬಾ ವಿಷಯಗಳ ಬಗ್ಗೆ ಮಾತಾಡಿದ್ರು.ಚಿತ್ರೀಕರಣ ಮಾಡಿದ್ದು ಕುವೆಂಪು ಬಗ್ಗೆ ಆದ್ರೂ ಇಡೀ ದಿವಸ ಅವರು ಬೇರೆ ಬೇರೆ ವಿಷಯಗಳ ಬಗ್ಗೆ ಮಾತಾಡ್ತಾ ಇದ್ರು.ಕವಿಶೈಲದ ಬಗ್ಗೆ, ಅಲ್ಲಿ ಬಂಡೆ ಮೇಲೆ ಹೆಸರು ಕೆತ್ತಿದ್ದರ ಬಗ್ಗೆ ತುಂಬಾ ತಮಾಷೆಯಾಗಿ ಮಾತಾಡ್ತಾ ಇದ್ರು, ’ಏನಯ್ಯ ಇವರಿಗೆಲ್ಲಾ ತಮ್ಮ ತಮ್ಮ ಹೆಸರು ಕೆತ್ತಬೇಕು ಅಂತ ಎಷ್ಟು ಆಸೆ ಬಂದಿದೆ ನೋಡು.ಓಹೊಹೊ ಏನ್ ಮಹಾ ಸಾಧನೆ ಮಾಡಿದಾರೆಅಂತ ಬಂಡೆ ಮೇಲೆ ಹೆಸರು ಕೆತ್ತಿಕೊಳ್ಳೋದು..!’ ಅಂತ ಅಲ್ಲಿ ಹೆಸರು ಕೆತ್ತಿದ್ದವರನ್ನೆಲ್ಲಾ ಲೇವಡಿ ಮಾಡಿದ್ರು.ಮತ್ತಲ್ಲಿ ಕಡಿದಾಳು ಶಾಮಣ್ಣ ಮತ್ತವರ ಸ್ನೇಹವನ್ನೂ ನಾನು ನೋಡಿದೆ.ಅವತ್ತು ಶಾಮಣ್ಣನವರಿಗೆ ಹುಶಾರಿರಲಿಲ್ಲ. ತುಂಬಾ ಉಬ್ಬಸದ ಸಮಸ್ಯೆ ಇತ್ತು ಅವರಿಗೆ.ಆದ್ರೂ ಇವರು ಬಂದಿದಾರೆ ಅಂತ ಹೇಳಿ ಶಾಮಣ್ನನವರು ಬಂದು ನಮ್ಮ ಜೊತೆಗಿದ್ರು. ಆ ಬಿಸಿಲಲ್ಲಿ ನಮ್ಮ ಜೊತೆಗೆ ಓಡಾಡಿ, ತೀರ್ಥಹಳ್ಳಿಯ ರಾಮತೀರ್ಥದ ಕಲ್ಲುಸಾರೆಯ ಮೇಲೆಲ್ಲಾ ಓಡಾಡಿ, ಹಾಡಿ ಬೇರೆ! ತೇಜಸ್ವಿ ನನ್ನ ಹತ್ರ, ’ಅವರು ತುಂಬಾ ಚೆನ್ನಾಗಿ ಹಾಡ್ತಾರೆ.ಹಾಡಿಸು, ಹಾಡಿಸು!’ ಅಂತ ಹೇಳಿ ನನಗೆ ಕುಮ್ಮಕ್ಕು ಕೊಟ್ಟು ಹಾಡ್ಸಿದ್ರು.
ಶಾಮಣ್ಣನವರು ಆಗ ಭೀಮ್ ಫಲ್ಲಾಸ್ ರಾಗ ಅಂತ ಹೇಳಿ ಹಾಡಿದ್ರು. ಆಮೇಲೆ ಅದು ಭೀಮ್ ಫಲ್ಲಾಸ್ ರಾಗ ಅಲ್ಲ ಅಂತ ಮನೆಗೆ ಹೋದ್ಮೇಲೆ ಗೊತ್ತಾಗ್ಬಿಟ್ಟಿದೆ! ತಲೆ ತಿಂದುಬಿಟ್ರು ಫೋನ್ ಮಾಡಿ ’ಏಯ್ ಮಾರಾಯ ಅದು ಭೀಮ್ ಫಲ್ಲಾಸ್ ರಾಗ ಅಲ್ಲ ಯಾವ್ದೊ ಬೇರೆದು…’ ಅಂತ. ನಾನು ’ಸರ್ ಅದನ್ನ ಎಡಿಟ್ ಮಾಡ್ಬಹುದು’ ಅಂತ ಹೇಳಿದ್ರು ಅವರು ಕೇಳದೇ ’ಇಲ್ಲ ಇಲ್ಲ ಇಲ್ಲ. ಬೇಕಾದ್ರೆ ಮತ್ತೊಂದ್ಸಲ ಮಾತಾಡ್ತೀನಿ’!’ ಅಂದ್ರು. ಹಾಗೆ ಹಿ ವಾಸ್ ಸೊ ಕನ್ಸರ್ನ್ಡ್.ಸೊ ತೇಜಸ್ವಿಯವರಿಗೋಸ್ಕರ ಅವರು ಅವತ್ತು ಅಲ್ಲಿಗೆ ಬಂದು ನಮ್ಮ ಜೊತೆ ಇದ್ರು.ಆಮೇಲೆ ಹಾಗೆ ನಮ್ಮ ಜೊತೆ ಬಿಸಿಲಿನಲ್ಲಿ ಅಲೆದಿದ್ದಕ್ಕೆ ಅವರಿಗೆ ಅನಾರೋಗ್ಯ ಉಲ್ಬಣ ಕೂಡ ಆಯ್ತು.ಸುಮಾರು ಎರಡು ವಾರ ಅವರು ಒದ್ದಾಡಿದ್ರು ಅನಾರೋಗ್ಯದ ಕಾರಣಕ್ಕಾಗಿ.ದಟ್ ವಾಸ್ ದಿ ಇಂಟೆನ್ಸಿವ್ ಟೈಮ್ ನಾನು ಅವರ ಜೊತೆ ಕಳೆದಿದ್ದು. ತೇಜಸ್ವಿ ಅಲ್ಲೇ ನೆಲದ ಮೇಲೆ ಸಿಕ್ಕಸಿಕ್ಕ ಮೂಲೆನಲ್ಲಿ ಮಲ್ಕೊಂಡ್ ಬಿಡ್ತಿದ್ರು. ಅವ್ರಿಗೆ ಮೇಕಪ್ ಮಾಡದೇ ಇದ್ರೂ ನನಗೆ ಮೇಕಪ್ ಮಾಡ್ತಾರಲ್ಲ ನಿರೂಪಕ ಅಂತ. ಅಲ್ಲಿ ಮೂಲೆನಲ್ಲಿ ನಿಂತು ನೋಡಿ ಹಿಂಗೇ ನಗ್ತಿದ್ರು, “ಏನ್ ಫಜೀತಿನಪ್ಪ ಇದು ನಿಂದು..!’ ಅಂತ. ಅವರ ಆ ನೋಟ ತುಂಬಾ ಮುದ್ದುಮುದ್ದಾಗಿ ಕಾಣ್ಸಿತ್ತು ಅವತ್ತು ಆ ನೀಲಿ ಚಕ್ಸ್ ಷರ್ಟು, ಜೀನ್ಸ್ ಪ್ಯಾಂಟು ಕೆಳಗೆ ಸ್ವಲ್ಪ ಮಡಚಿದ್ದು.
ನನ್ನ ಸೋದರ ಮಾವ ಒಬ್ರಿದ್ರು ವೆಂಟೇಕರ್ ಮಾಷ್ಟ್ರು ಅಂತ. ಅವರು ನಮಗೆ ಮೇಷ್ಟ್ರಾಗಿದ್ರು.ಅವರು ನನ್ನನ್ನ ರೂಪಿಸಿದವರಲ್ಲಿ ಒಬ್ಬರು.ಅವರು ಪಠ್ಯೇತರವಾದ ಅನೇಕ ವಿಷಯಗಳನ್ನ ನಮಗೆ ಹೇಳಿಕೊಡ್ತಿದ್ರು.ಹ್ಯಾಂಡ್ ರೈಟಿಂಗ್ ಬಗ್ಗೆ, ಪಕ್ಷಿಗಳು, ಕೀಟಗಳು ಅಂತೆಲ್ಲ. ಒಂದ್ಸಾರ್ತಿ ಒಂದು ಟ್ರಕ್ಕು ಬಾವಿಗೆ ಬಿದ್ದುಬಿಟ್ಟಿತ್ತು.ಅವರು ನಮ್ಮನ್ನೆಲ್ಲಾ ಅಲ್ಲಿಗೆ ಕರ್ಕೊಂಡು ಹೋಗಿ ಅದನ್ನ ತೋರಿಸಿ ಅದರ ಬಗ್ಗೆ ಒಂದು ಪ್ರಬಂಧ ಬರೆಯೋದಕ್ಕೆ ಹೇಳಿದ್ರು.‘ಟ್ರಕ್ಕು ಹೇಗೆ ಬಾವಿಗೆ ಬಿದ್ದಿರಬಹುದು, ಡ್ರೈವರ್ ಹ್ಯಾಗೆ ಬಿದ್ದ, ಯಾವ ಕಡೆಯಿಂದ ಎದ್ದು ಬಂದ’ ಅದರ ಬಗ್ಗೆ ಎಲ್ಲ ಸೇರಿಸಿ ಬರೆಯೋದಿಕ್ಕೆ ಹೇಳಿದ್ರು. ಈ ರೀತಿ ಪಠ್ಯದಲ್ಲಿ ಸಿಗದೇ ಇರೋವಂತ, ಪಠ್ಯದ ಆಚೆ ಇರೋವಂತಹ ವಿಷಯಗಳ ಬಗ್ಗೆ ನಮ್ಮ ಕಣ್ಣು, ಕಿವಿ, ಮನಸ್ಸುಗಳನ್ನ ತೆರೆದಿದ್ದು ನಮ್ಮ ಸೋದರ ಮಾವ. ಆ ರೀತಿ ತೇಜಸ್ವಿ ನನಗೆ ನನ್ನ ಆ ಸೋದರ ಮಾವನ extension ಥರ ಕಾಣ್ತಾರೆ ಯಾವಾಗ್ಲು…”
 

‍ಲೇಖಕರು G

September 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. lakshmikanth itnal

    ಎಷ್ಟು ಅದ್ಭತವಾಗಿ ಜಯಂತರು ತೇಜಸ್ವಿಯವರನ್ನು ಕಟ್ಟಿಕೊಟ್ಟಿದ್ದಾರೆ. ನಿಜಕ್ಕೂ ತೇಜಸ್ವಿಯವರ ಜೊತೆಗೇನೆ ಕುಳಿತು, ಜಯಂತರೊಂದಿಗೆ ಸಂಭಾಷಿಸಿದಂತಾಯಿತು. ಏನ್ ಚಂದ ಬರೆದಿದ್ದೀರಿ ಪರಮೇಶ್ವರ. ಹುಬಹು ಜಯಂತರು ಮಾತಾನಾಡಿದಂತೆ, ಅವರೊಂದಿಗೆ ಸಂವೇದನಾತ್ಮಕವಾಗಿ ಸಂವಹಿಸಿದಂತಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: