ಹೀಗೊಬ್ಬಳು ವಾಟ್ಸಪ್ ಗೆಳತಿ

DSC04156

ಅಮರ್‌ದೀಪ್

“ಯಾರಿದು”?
ನನ್ನ ಹೆಸ್ರು “ ……………….” ಅಂತ ನೆನಪಿರಬೇಕಲ್ಲ? ನಿಮ್ ಜೊತೆ ಓದ್ದೋನು!
ಓಹ್!  ಫೈನ್, ನೆನಪಿದೆ, ಹೆಂಗದಿಯೋ? ಇಪ್ಪಾತ್ತಾಯ್ತ ವರ್ಷ? ನಾವ್ ಕಾಲೇಜ್ ಬಿಟ್ಟು.
ಚೆನ್ನಾಗಿದೀನಿ ಮೇಡಂ, ಇಪ್ಪತ್ತು ಮುಗೀತು.
ಅದೇನದು? ಮೇಡಂ, ಗೀಡಂ ಅಂತೆಲ್ಲಾ?
ಏನ್ ಮಾಡೋದ್ರೀ, ನೌಕರಿ ಜೀವನಕ್ಕೆ ಬಂದ್ಮೇಲೆ ಮಹಿಳಾ ನೌಕರರಿಗೆ ಅಂದು ಅಭ್ಯಾಸವಾಗಿದೆ.
ಸರಿ, ಇನ್ನೇನು ಸಮಾಚಾರ , ಏನ್ ಮಾಡ್ಕೊಂಡಿದಿರಿ, ಮದ್ವೆ, ಮಕ್ಳು ಎಷ್ಟು? ಹೆಂಡತಿ ವರ್ಕಿಂಗಾ? ಹೌಸ್ ವೈಫಾ?
“ಸರ್ಕಾರಿ ನೌಕರಿ, ಹದಿನೆಂಟು ವರ್ಷಾಯ್ತು.  ಹೆಂಡ್ತಿ ಒಬ್ಳೇ. ಗೃಹಿಣಿ, ಇಬ್ರು ಮಕ್ಳು, ಎಲ್ಡೂ ಗಂಡು.”
“ನಾನೀಗ, “……………….” ದಲ್ಲಿದೀನಿ.  ಮನೆಯವರದು ಬಿಸಿನೆಸ್. ಒಬ್ಬಳೇ ಮಗ್ಳು. ಈ ಸಾರಿ ಟೆನ್ತು. ನಮ್ದು ಜಾಯಿಂಟ್ ಫ್ಯಾಮಿಲಿ. ಅದ್ಸರಿ, ಏನ್ರೀ ನೀವು ಇಷ್ಟ್ ಬದಲಿಯಾಗಿದೀರಿ. ಕಾಲೇಜಲ್ಲಿ ಹಂಗಿರ್ಲಿಲ್ಲಪ್ಪ.  ಭಾಳ ಖುಷಿಯಾಯ್ತು ನೋಡಿ. ಮತ್ಯಾರದ್ರೂ ಸಿಕ್ಕಿದ್ರಾ?.   “………..:”    ಸಿಕ್ಕದ್ದಾ ರೀ, ಚೂರೂ ಬದಲಾಗಿಲ್ಲ. ಈಗ್ಲೂ ಹೋಗೇ ಬಾರೇ ಅಂತಾನೆ.  ಕೇಳಿದ್ರೆ, “ಸರೀನಮ್ಮಾ, ನಿಂಗೆ ಮದ್ವಿ ಆಗಿದೆ, ಮಕ್ಳಾಗಿದಾವಂತ, ನಾನ್ ತೀರ ನಾಟಕೀಯವಾಗಿ ಕರೀಲಿಕ್ಕಾಗುತ್ತಾ?” ಅಂತಾನೆ.   ಅವ್ನು ಹೇಳೋದೂ ಸರೀನೇ. ಅದ್ಸರಿ, ನನ್ ನಂಬರ್ ಯಾರ್ ಕೊಟ್ರು ನಿಂಗೆ?”
images
“………..”  ಅವನಿಂದ ಇಸ್ಕೊಂಡೆ.  ಕಾಲೇಜಲ್ಲಂತೂ ಹುಡುಗೀರತ್ರಾ ಮಾತಾಡಿದ್ದೇ ಕಡಿಮೆ.  ಮದುವ್ಯಾತು, ಮಕ್ಳಾದ್ವು, ಅಟ್ಲೀಸ್ಟ್ ಈಗ್ಲಾದ್ರೂ ಚೂರು ಭಿಡೆಯಿಂದ ಕ್ಷೇಮ ಸಮಾಚಾರ ಮಾತಾಡೋಣಾಂತ ಒಂದ್ ಮೇಸೇಜ್ ಹಾಕ್ದೆ. ಅಷ್ಟೇ.  ಡಿ.ಪಿ. ನೋಡ್ದೆ, ನಿಮ್ ಮಗಳು ಮುದ್ದಾಗಿದಾಳೆ ಬಿಡಿ.
“ಅವಳು ಬಿಡ್ರಿ, “ದೊಡ್ಡೋಳಾದಾಗಿನಿಂದಾನೇ” ಇಂಡಿಪೆಂಡೆಂಟ್, ಅವರಪ್ಪ, ಅವಳಂದ್ರೆ ಚೂರೂ ಕಡ್ಮೆ ಮಾಡಲ್ಲ.  ಎಲ್ಲಾ ಅವಳದೇ ಮಾತು ನಡೆಯೋದು.  You see me of no existence.   ನಿಮಿಗ್ಗೊತ್ತಲ್ಲ? ನಾನೂ ಹೈಸ್ಕೂಲಲ್ಲಿ, ಕಾಲೇಜಲ್ಲಿ, ಎಷ್ಟೊಂದ್ ಕಷ್ಟಪಟ್ಟು ಹೈಯೆಸ್ಟ್ ಸ್ಕೋರ್ ಮಾಡ್ದೆ. ಮುಂದೇನೇನೋ ಮಾಡ್ಬೇಕಂದುಕೊಂಡೆ.  ಆದ್ರೇ, ಆಗ್ಲೂ ಮನೇಲಿ ಅಪ್ಪ,ಅಮ್ಮ ಹೆಂಗೇಳ್ತಾರೋ ಹಂಗ್ ಕೇಳ್ಕಂಡು ಬಿದ್ದಿರೋದೇ ಆಗಿತ್ತು.  ಮದ್ವೆ ಅಂದ್ರು, ಅದೂ ಆಯ್ತು – ಅವರಿಷ್ಟದಂತೆ.  ನಾನೂ ಒಳ್ಳೇ ಮನ್ತನ ಸೇರಿದ ಖುಷಿಯಿದೆ.  ಮನೇಯಲ್ಲಿ ನನ್ನತ್ತೆ, ಮಾವ, ನಾದಿನಿ, ಮೈದುನ, ಎಲ್ರೂ ಡಬಲ್ ಡಿಗ್ರಿ ಹೋಲ್ಡರ್ಸ್.  ಮೊದಲಿಂದ್ಲೂ ವ್ಯವಹಾರ ಮಾಡ್ಕೊಂಡಿದ್ದನ್ನು ಯಜಮಾನ್ರು ಮುಂದುವರೆಸಿಕೊಂಡು ಬರ್ತಾ ಇದಾರೆ. ಆದರೂ ನನ್ ಮಗಳ ಮುಂದೆ ನನಗೆ ಸ್ವಾತಂತ್ರ್ಯ ಇಲ್ಲ.”
“ಆಗ ನಿಮಗಿದ್ದ ಸವಲತ್ತುಗಳು, ಅವಕಾಶಗಳು, ಮತ್ತು ಮನೆಯಲ್ಲಿದ್ದ ಸಂಪ್ರದಾಯಸ್ಥ ಕುಟುಂಬದಲ್ಲಿನ ಸ್ವಾಂತಂತ್ರ್ಯ ಅಷ್ಟಕ್ಕಷ್ಟೇ. ಈಗಿರೋ ನಿಮ್ಮ ಕುಟುಂಬದಲ್ಲಿ ಇರುವ ನಿಮ್ಮ ಮಗಳ ಸ್ವಾತಂತ್ರ್ಯ ಅದಕ್ಕಿಂತ ತುಸು ಹೆಚ್ಚಾಗಿರಬಹುದು. ಹೆಣ್ಣು ಹೆಂಗಸಾದಾಗಿನ ಜವಾಬ್ದಾರಿಯು ಹುಡುಗಿ ಹೆಣ್ಣಾಗುವ ಸಹಜ ನಡವಳಿಕೆಗಿಂತ ಹೆಚ್ಚೇ ಆಗಿರುತ್ತೇ.  ನಿಮ್ಮ ಜವಾಬ್ದಾರಿಯಿದ್ದಿದ್ದರಿಂದಲೇ ಅಲ್ವಾ? ನಿಮ್ಮ ಮಗಳು ಈಗಿನ ಜಮಾನಾದ ಅತಿರೇಕದ ದಿನಗಳಲ್ಲೂ ಸ್ವಾತಂತ್ರ್ಯ ಅನುಭವಿಸಿಯೂ ಅವಳ ಇತಿಮಿತಿಯಲ್ಲಿರುವುದು?. ಹಾಗಾದರೆ, ನಿಮ್ಮ “me of no existence” ಎನ್ನುವ ಮಾತಿಗೆ  ಏನಂತೀರಿ?…… “
“ಅದು ಬಿಡಿ, ಯಾವಾಗಿಂದ ಫೋಟೋಗ್ರಫಿ ಕಲಿತಿರಿ, ಬರೆಯೋಕೆ ಶುರು ಮಾಡಿದ್ರೀ ನೀವು? ನಂಗೂ ಏನಾದ್ರೂ ಬರೀಬೇಕು ಅನ್ಸುತ್ತೆ.  ಒಂದ್ Outlet ಬೇಕು. ಏನ್ಮಾಡ್ಲೀ, ಮಗಳ ಓದು, ಟ್ಯೂಷನ್ನು, ಹಿಂದೂಸ್ತಾನಿ ಸಂಗೀತ, ಗಂಡನ ವ್ಯವಹಾರದ ಲೆಕ್ಕ ಪತ್ರ, ಮನೆಗೆ ಬಂದ ಅತಿಥಿಗಳು, ಮನೆಯ ಸದಸ್ಯರ ದೇಖರಿಕೆ, ಅಪರೂಪಕ್ಕೆ ಸಿಗುವ ಮದುವೆ, ಸಮಾರಂಭಗಳು, ಆಗಾಗ  ಮಾತಾಡುವ ಗೆಳತಿಯರು ಇದರ ಮಧ್ಯೆ ಆಗ್ತಾನೇ ಇಲ್ಲ.  ನೋಡಿ, ನಾನು ಎಫ್.ಬಿ.ಯಲ್ಲಿಲ್ಲ, ಹಂಗಾಗಿ ನೀನ್ ತೆಗ್ದಿರೋ ಫೋಟೋಗಳನ್ನು ನಂಗೆ ಕಳಿಸ್ತಾ ಇರೀಪಾ, I enjoy. “
“ಒಂದ್ನಿಮಿಷ ಲೈನಲ್ಲಿರಿ, ಒಂದ್ ಫೋಟೋ ಕಳಿಸ್ತೀನಿ ನೋಡಿ…….. ಈ ಹುಡುಗಿ ದಾವಣಗೆರೆ ದುಗ್ಗಮ್ಮನ ಜಾತ್ರೆಯಲ್ಲಿ ಇಪ್ಪತ್ಮೂರು ವರ್ಷದ ಕೆಳಗೆ ಕಳ್ದೋಗಿತ್ತು. ಅಪ್ಪಿತಪ್ಪಿ ನಿಮಗೇನಾದ್ರೂ… ಸಿಕ್ಕಿದ್ರೆ ಚೂರು ಮಾಹಿತಿ ಕೊಡ್ರಿ… ಛಾಯಾಚಿತ್ರಗಳನ್ನು ಉಚಿತ ವೀಕ್ಷಣೆಗೆ ದೇಣಿಗೆ ನೀಡಲಾಗುವುದು……”
ಅರೇ,  ಇವಳು  ‘………………….’ ಅಲ್ವಾ?”
ಹೌದ್ರಿ, ಅವಳೇ ‘ ಕಟೀಲು ಪರಮೇಶ್ವರಿ ’ ……
“ಹುಡುಗರಿಗೇ ಜಾಸ್ತಿ ನೆನಪಿನ ಶಕ್ತಿ ನೋಡಿ.  ನಮಗ್ಯಾವೂ ನೆನಪಿಲ್ಲ.  ಇಷ್ಟು ವರ್ಷದ ಹಳೇ ಫೋಟೋ ಹೆಂಗ್ ಸಿಕ್ತು?…”
ನಮ್ಮೌವ್ವ, ನಿಮಗೆ ನಿಮ್ ತಂದೆ ತಾಯಿ ಇದ್ದುದರಲ್ಲೇ ಅಚ್ಚುಕಟ್ಟಾಗಿ ದುಡ್ಡು ದುಗ್ಗಾಣಿ, ಬರೋದಿಕ್ಕೆ ಸೈಕಲ್ಲು, ಗಾಡಿ ಲೇಟಾದ್ರೆ ಒಬ್ಬರು ಬಾಡಿಗಾರ್ಡ್, ಎಲ್ಲಾ ಜೋಡಿಸಿ ಕಾಲೇಜಿಗೆ ಕಳಿಸಿರ್ತಾರೆ. ಆದ್ರೂ ಅವರಿಗೆ ಟೆನ್ಷನ್ನು- ಮಗಳಿನ್ನು ಮನೆಗೆ ಬರ್ಲಿಲ್ಲಾ!  ಅಂತ. ನಿಮಗೂ ಅಷ್ಟೇ ಲೇಟಾದ್ರೆ ಎಲ್ಲಿ ಬೈಗುಳ ತಿನ್ನಬೇಕೋ ಅಂತ.  ಆದ್ರೆ, ನಮಗೆ ಹಂಗಿದ್ದಿಲ್ಲ, ತಿಂಗಳಿಗೆ ಹಾಸ್ಟಲ್ ಫೀಸು, ವರ್ಷಕ್ಕೊಮ್ಮೆ ಕಾಲೇಜ್ ಫೀಸು, ಓಡಾಡೋಕೆ ಬಸ್ ಚಾರ್ಜು, ತಿರುಗಾಡೋಕೆ ದೇಣಿಗೆ ಜೋಡು ಬೂಟು, ಒಂದು ಜೊತೆ ಪಾರಾಗಾನ್ ಚಪ್ಪಲಿ, ಒಂದೆರಡು ಸಿನಿಮಾ ಇವಕ್ಕೆಲ್ಲಾ ಏನೂ ಕಮ್ಮಿ ಇದ್ದಿಲ್ಲ.  ಅದಿಕ್ಕೇ ಚೂರು ಓದೋದು ಬಿಟ್ರೆ ಬೇರೆ ಟೆನ್ಷನ್ನೇ ಇರ್ತಿದ್ದಿಲ್ಲ.  ಬರೀ ಹುಡುಗೀರಲ್ಲ, ಹಾಸ್ಟಲ್ ಅಡುಗೆ ಭಟ್ಟ ಸೀನಪ್ಪ, ಆತನ ಅಳಿಯ ರವಿ, ಸರ್ವರ್ ರಾಜು, ಜಾಡಮಾಲಿ ಬೋರಲಿಂಗಪ್ಪ, ವಾಚಮೆನ್ ಶಿವಣ್ಣ,  ಮಿಸ್ಟರ್ ಬೀನ್ ಥರವಿದ್ದ ವಾರ್ಡನ್. ಹಿಂಡು ಗೆಳಯರು, ಅನಾಹುತ ಹರಕತ್ತುಗಳು, ರೂಮು ನಂಬರ್ 17, 27, 49. ಎಲ್ಲಾ ನೆನಪಲ್ಲಿವೆ, ಅದೇಗೆ ಬಂತೋ ಅಥವಾ ನಾನೇ ಇಸ್ಕೊಂಡಿದ್ದೆನೋ ಗೊತ್ತಿಲ್ಲ, ಕಟೀಲು ಪರಮೇಶ್ವರಿ ಪಟಾನ……..”
“ಸರಿ ಬಿಡಿ, ನಿಮ್ ಫ್ಯಾಮಿಲಿ ಫೋಟೋ ಕಳಿಸ್ರೀ ನೋಡೋಣ…….”
ನಾನಿನ್ನು ಮದ್ವೇನೇ ಆಗಿಲ್ಲಾಂತ ಡೌಟಾ?  ಅಥವಾ ಇವನಿಗೆಂಥ ಹೆಣ್ತಿ ಸಿಕ್ಕಿರಬೌದು ಅಂತ ಕುತೂಹಲಾನಾ?. ಬ್ಯಾಡ ಬಿಡಿ, ಉತ್ತರ ಹೇಳೋದೇನು ಬೇಕಿಲ್ಲ.  ಕಳಿಸ್ತೀನಿ. ಅದ್ಸರಿ, ನನ್ನೆಸ್ರು “…….” ಅಂತ ನಿಮ್ ಜೊತೆ ಓದ್ದೋನು ಅಂದೆ.  Within no time  ಓಹ್!  ನೆನಪಿದೆ ಅಂದ್ರಿ?  ನಿಮ್ ನೆನಪಿನ್ ಶಕ್ತಿ ಕಡ್ಮೆ ಅಂತ ನಂಗನ್ನಸ್ತಾ ಇಲ್ಲ…… ಮತ್ತೆ ಸಿಗೋಣ…… bye”
—– ಇಂತಿ ಗುಡ್ಡಪ್ಪ

‍ಲೇಖಕರು avadhi-sandhyarani

September 9, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. S R Budihal

    ಸರ್ – ನೆನಪುಗಳ ಮಾತು ಮಧುರ ಹಾಗೆಯೇ
    ಶಾಲಾ-ಕಾಲೇಜುಗಳ ನೆನಪುಗಳು ಅತಿ ಮಧುರ
    ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ –

    ಪ್ರತಿಕ್ರಿಯೆ
  2. Mallikarjun M. Kotabal

    ಉತ್ತಮವಾಗಿದೆ ಬರಹ. ಇದೇನು ಕಾಲ್ಪನಿಕ ಬರಹವೋ ಅಥವಾ ವಾಸ್ತವ ಻ಅನುಭವ ನೆನಪೋ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: